Friday, November 22, 2024
Homeಯಕ್ಷಗಾನಕೇದಗಡಿ ಶ್ರೀ ಗುಡ್ಡಪ್ಪ ಗೌಡ - ಪರಂಪರೆಯ ಶಿಸ್ತಿನ ಕಲಾವಿದ

ಕೇದಗಡಿ ಶ್ರೀ ಗುಡ್ಡಪ್ಪ ಗೌಡ – ಪರಂಪರೆಯ ಶಿಸ್ತಿನ ಕಲಾವಿದ

ಶ್ರೀ ಕೇದಗಡಿ ಗುಡ್ಡಪ್ಪ ಗೌಡರು ಪರಂಪರೆಯ ಶಿಸ್ತಿನ ಕಲಾವಿದರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದವರು. ಸಂಪ್ರದಾಯ ಬದ್ಧ ನಾಟ್ಯ, ಪಾತ್ರೋಚಿತವಾದ, ಹಿತಮಿತವಾದ ಸಂಭಾಷಣೆ, ಗತ್ತುಗಾರಿಕೆಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಪ್ರತಿಭಾವಂತ ಕಲಾವಿದರಿವರು. ವೀರರಸದ ಪದ್ಯಗಳಿಗೆ ಕುಣಿಯುತ್ತಾ ಎರಡೂ ಕಾಲುಗಳನ್ನು ಎತ್ತಿ ಹಾರುವ ಕ್ರಮವನ್ನು ಕೊನೆಯ ವರೆಗೂ ಉಳಿಸಿಕೊಂಡು ಬಂದಿದ್ದರು.

ಸಂಪ್ರದಾಯವನ್ನು ಯಾವತ್ತೂ ಮುರಿದು ಮೆರೆದವರಲ್ಲ. ಆದುದರಿಂದ ಕಲಿಕಾಸಕ್ತರಿಗೆ ಇವರೊಬ್ಬ ಆದರ್ಶ, ಅನುಸರಣೀಯ ಕಲಾಕಾರರಾಗಿದ್ದರು. ತುಸು ಗಿಡ್ಡ ಆಳಂಗ ಎಂಬುದನ್ನು ಹೊರತುಪಡಿಸಿದರೆ ಕೊರತೆಯಿಲ್ಲದ ಪರಿಪೂರ್ಣ ವೇಷಗಾರಿಕೆ ಇವರದು. ಪಾತ್ರ ನಿರ್ವಹಣೆಯ ಯಾವ ವಿಭಾಗಗಳಲ್ಲೂ ಅತಿರೇಕತೆ ಕಾಣದು. ಜತೆಗೆ ಕಡಿಮೆಯೂ ಆಗದೆ ಕೊರತೆಯಾಗದಂತೆ ಪಾತ್ರವನ್ನು ಚಿತ್ರಿಸುವ ಕಲೆಯೂ ಕರಗತವಾಗಿತ್ತು. 

ಗಡಿನಾಡ ಕಾಸರಗೋಡು ಅನೇಕ ಹೆಸರಾಂತ ಕಲಾವಿದರನ್ನು ಯಕ್ಷಗಾನ ಕಲಾಮಾತೆಯ ಮಡಿಲಿಗಿಕ್ಕಿದ ಮಣ್ಣು. ಅಂತಹಾ ಗಡಿನಾಡ ಶ್ರೇಷ್ಠ ಕಲಾವಿದರಲ್ಲಿ ಕೇದಗಡಿ ಶ್ರೀ ಗುಡ್ಡಪ್ಪ ಗೌಡರೂ ಒಬ್ಬರು. ಪುಂಡುವೇಷಧಾರಿಯಾಗಿ ಕಲಾಬದುಕನ್ನು ಆರಂಭಿಸಿ, ಪೀಠಿಕೆ ವೇಷಧಾರಿಯಾಗಿ ಬೆಳೆದು, ಎದುರು ವೇಷಧಾರಿಯಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದರು. ತೆಂಕುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಕೇದಗಡಿ ಶ್ರೀ ಗುಡ್ಡಪ್ಪ ಗೌಡರು ಜನಿಸಿದ್ದು ಕಾಸರಗೋಡು ಪ್ರದೇಶದ ದೇಲಂಪಾಡಿ ಗ್ರಾಮದ ಬನಾರಿ ಸಮೀಪದ ಕೇದಗಡಿ ಮನೆಯಲ್ಲಿ. ಶ್ರೀ ಸುಬ್ರಾಯ ಗೌಡ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು.

ಓದಿದ್ದು ಐದನೇ ತರಗತಿಯ ವರೆಗೆ. ಹೆಚ್ಚಿನ ಕಲಿಕೆಗೆ ಅವಕಾಶವೂ ಇರಲಿಲ್ಲ. ಬಡತನವೂ ಜತೆಗಿತ್ತು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಇದೇ ಸಮಯಕ್ಕೆ ಯಕ್ಷ ಗುರುಕುಲದ ರೂವಾರಿ ಮಾಸ್ತರ್ ವಿಷ್ಣು ಭಟ್ಟರು ಕೀರಿಕ್ಕಾಡಿನಿಂದ ಬಂದು ಬನಾರಿಯಲ್ಲಿ ನೆಲೆಸಿದ್ದರು. ಮಾತ್ರವಲ್ಲ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಂಘವನ್ನೂ ಆರಂಭಿಸಿ ಯಕ್ಷಗಾನ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕಲಿಕಾಸಕ್ತರಿಗೆ ತರಬೇತಿಯನ್ನು ನೀಡಿ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇದು ಗುಡ್ಡಪ್ಪ ಗೌಡರ ಯಕ್ಷಗಾನಾಸಕ್ತಿ ಎಂಬ ಚಿಗುರಿಗೆ ನೀರು ಸಾರಗಳು ಸಿಕ್ಕಿ ಬೆಳೆಯಲು ಸಹಕಾರಿಯಾಗಿತ್ತು. 

ಹಗಲು ತಂದೆ ತಾಯಿಯರ ಜತೆ ಮನೆಯ ಕೆಲಸಗಳಲ್ಲಿ ತೊಡಗಿ ಸಂಜೆಯಾಗುತ್ತಲೇ ನಾಟಕ ಶಾಲೆಗೆ ತೆರಳುತ್ತಿದ್ದರು. ಕೀರಿಕ್ಕಾಡು ಮಾಸ್ತರರಿಂದ ಯಕ್ಷಗಾನ ಪಾಠ. ಕಲಿಕಾಸಕ್ತರಾಗಿ ಬಂದವರನ್ನು ತನ್ನ ಮನೆಯ ಮಕ್ಕಳಂತೆಯೇ ನೋಡುತ್ತಿದ್ದವರು ಕೀರಿಕ್ಕಾಡು ಮಾಸ್ತರರು. ಬಾಲಕ ಗುಡ್ಡಪ್ಪ ಗೌಡರು ತೀವ್ರ ಅನಾರೋಗ್ಯಪೀಡಿತರಾದಾಗ ಔಷಧೋಪಚಾರಗಳನ್ನು ಮಾಡಿ ಚೇತರಿಸುವಂತೆ ಮಾಡಿದ್ದರು. (ಪ್ರಕೃತಿ ಚಿಕಿತ್ಸೆ ಮತ್ತು ಹಳ್ಳಿಮದ್ದು) ಒಂದರ್ಥದಲ್ಲಿ ಪುನರ್ಜನ್ಮ. ಗುಡ್ಡಪ್ಪ ಗೌಡರು ಮತ್ತೆ ಹುಟ್ಟಿಬಂದರೆಂದೂ ಹೇಳಬಹುದು. ಇದು ಕಲಾಮಾತೆಯ ಅನುಗ್ರಹವೂ ಹೌದು. ಶ್ರೇಷ್ಠ ಕಲಾವಿದನೊಬ್ಬ ಮುಂದೆ ತನ್ನ ಸೇವೆಯನ್ನು ಮಾಡಲಿದ್ದಾನೆ ಎಂಬುದನ್ನು ಆಕೆ ತಿಳಿದಿದ್ದಳು. ಹಾಗಾಗಿ ಗುಡ್ಡಪ್ಪ ಗೌಡರನ್ನು ಬದುಕಿಸಿದ್ದಳು.

ಕೀರಿಕ್ಕಾಡು ಮಾಸ್ತರರ ವ್ಯವಸ್ಥೆಯಲ್ಲಿ ಖ್ಯಾತ ಕಲಾವಿದ ಕಡಾರು ನಾರಾಯಣ ಭಟ್ಟರಿಂದ ನಾಟ್ಯಾಭ್ಯಾಸ. ಇವರು ಅತಿಕಾಯ ಮೊದಲಾದ ವೇಷಗಳಲ್ಲಿ ಖ್ಯಾತರು. ಅತಿಕಾಯ ನಾರಾಯಣ ಭಟ್ಟರೆಂದೇ ಪ್ರಸಿದ್ಧರು. ಶ್ರೀ ಗುಡ್ಡಪ್ಪ ಗೌಡರು ಬನಾರಿ ಯಕ್ಷಗಾನ ಕಲಾ ಸಂಘದ ಪ್ರದರ್ಶನದಲ್ಲಿ ಮೊತ್ತಮೊದಲು ಅಭಿಮನ್ಯುವಾಗಿ ರಂಗ ಪ್ರವೇಶಿಸಿದ್ದರು. ಬಳಿಕ ಬನಾರಿ ಸಂಘದ ಮತ್ತು ಇತರ ಪ್ರದರ್ಶನಗಳಲ್ಲಿ ಗುರುಗಳೊಂದಿಗೆ ಸದಾ ಭಾಗವಹಿಸಿ ಅನುಭವಗಳನ್ನು ಗಳಿಸಿಕೊಂಡರು. ಮೂರು ವರ್ಷಗಳ ಕಾಲ ಯಕ್ಷಗಾನ ಅರ್ಥಗಾರಿಕೆಯನ್ನು ಅಭ್ಯಸಿಸಿದರು. ಆಗಲೇ ಬೆಳೆಯುತ್ತಿರುವ ಪ್ರತಿಭೆಯನ್ನು ಕಲಾಭಿಮಾನಿಗಳೆಲ್ಲರೂ ಗುರುತಿಸಿದ್ದರು. 


ಕೇದಗಡಿ ಶ್ರೀ ಗುಡ್ಡಪ್ಪ ಗೌಡರು ತನ್ನ ಹದಿನೇಳನೆಯ ವಯಸ್ಸಿನಲ್ಲಿ ಕದ್ರಿ ಮೇಳಕ್ಕೆ ಸೇರಿದ್ದರು. ಕೊಡಿಯಾಲಗುತ್ತು ಶ್ರೀ ಶಂಭು ಹೆಗ್ಡೆಯವರ ಸಂಚಾಲಕತ್ವ. ಅಣ್ಣಿ ಭಾಗವತರು, ಅಡೂರು ಶಿವ ಮದ್ದಳೆಗಾರರು, ಮಧೂರು ನಾರಾಯಣ ಹಾಸ್ಯಗಾರ, ಕುಂಬಳೆ ತಿಮ್ಮಪ್ಪ, ಕದ್ರಿ ವಿಷ್ಣು, ಕಾಸರಗೋಡು ದೂಮಣ್ಣ, ಕುಂಞಿಕಣ್ಣ ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟವು ದೊರಕಿತ್ತು. ಕದ್ರಿ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಮುಲ್ಕಿ ಮತ್ತು ಕೂಡ್ಲು ಮೇಳಗಳಲ್ಲಿ ತಲಾ ಮೂರು ತಿರುಗಾಟ. ಮುಚ್ಚೂರು ಮೇಳದಲ್ಲಿ ಒಂದು ತಿರುಗಾಟ. ಬಳಿಕ ನಿರಂತರ ನಲುವತ್ತು ವರ್ಷಗಳ ತಿರುಗಾಟ ಕಟೀಲು ಮೇಳದಲ್ಲಿ. ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ವಿಟ್ಲ ರಾಮಯ್ಯ ರೈ, ಪಡ್ರೆ ಚಂದು ಇವರ ವೇಷಗಳಿಂದ ಪ್ರಭಾವಿತರಾಗಿದ್ದ ಇವರು ಹಂತ ಹಂತವಾಗಿ ಬೆಳೆದು ಎದುರು ವೇಷಧಾರಿಯಾಗಿ ಕಾಣಿಸಿಕೊಂಡವರು.

ಸ್ತ್ರೀ ವೇಷಗಳನ್ನು ನಿರ್ವಹಿಸಿದ್ದೂ ಇದೆ. ನಾಟಕೀಯ ವೇಷಗಳಲ್ಲಿ ಕಾಣಿಸಿಕೊಂಡರೂ ಇವರಿಗೆ ಒಲವಿದ್ದುದು ಕಿರೀಟ ವೇಷಗಳಲ್ಲಿ ಮಾತ್ರ. ಸದಾ ಅಧ್ಯಯನಶೀಲರಾಗಿದ್ದ ಇವರು ಪುರಾಣ ಪುಸ್ತಕಗಳನ್ನೂ ದಿನಪತ್ರಿಕೆಗಳನ್ನೂ ದಿನ ಬಿಡದೆ ಓದುತ್ತಿದ್ದವರು. ಸಾಕಷ್ಟು ಸಿದ್ಧತೆಯೊಂದಿಗೆ ರಂಗವೇರಿ ಅಭಿನಯಿಸುತ್ತಿದ್ದರು. ಬದುಕಿನಲ್ಲಿ ಶಿಸ್ತು, ಆಹಾರ ವಿಹಾರಗಳಲ್ಲಿ ಎಚ್ಚರದ ವ್ಯವಹಾರಗಳಿದ್ದರೆ ಮಾತ್ರ ಆರೋಗ್ಯದಿಂದಿದ್ದು ಯಕ್ಷಗಾನ ಕ್ಷೇತ್ರದಲ್ಲಿ ಸಂತೋಷದಿಂದ ದೀರ್ಘಕಾಲ ತೊಡಗಿಸಿಕೊಳ್ಳಬಹುದು ಎಂಬ ಸೂಚನೆಯನ್ನು ಕಿರಿಯರಿಗೆ ಮೇಳದಲ್ಲಿ ಸದಾ ನೀಡುತ್ತಿದ್ದರು. ತಾನು ಅಂತೆಯೇ ಬಾಳಿ ಬದುಕಿದ್ದರು. ಕರ್ಣ, ಅತಿಕಾಯ, ರಕ್ತಬೀಜ, ದಕ್ಷ, ತಾಮ್ರಧ್ವಜ, ಕಂಸ, ವೀರಮಣಿ, ಹಿರಣ್ಯಕಶ್ಯಪ, ಅರುಣಾಸುರ, ಕೌರವ, ಋತುಪರ್ಣ ಮೊದಲಾದ ಪಾತ್ರಗಳು ಇವರಿಗೆ ಹೆಸರನ್ನು ತಂದುಕೊಟ್ಟವು. 

ಸರಳ, ನಿಗರ್ವಿ, ನಿರಾಡಂಬರ ವ್ಯಕ್ತಿತ್ವದ ಶ್ರೀ ಗುಡ್ಡಪ್ಪ ಗೌಡರು ಸರ್ವರ ಪ್ರಶಂಸೆಗೆ ಪಾತ್ರರಾದವರು. ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಸುವ ಗುಣಗಳಿಂದ ಶ್ರೀಯುತರು ಎಲ್ಲರಿಗೂ ಬೇಕಾದವರಾಗಿಯೇ ಬದುಕನ್ನು ನಡೆಸಿದ್ದರು. ಸುಮಾರು 52 ವರ್ಷಗಳ ಕಲಾಬದುಕು. ಕಟೀಲು ಮೇಳದಲ್ಲಿ ಸುಮಾರು ನಾಲ್ಕು ದಶಕಗಳ ವ್ಯವಸಾಯವನ್ನು ಮಾಡಿ 1998ರಲ್ಲಿ ವೃತ್ತಿ ಜೀವನದಿಂದ ನಿವೃತ್ತರಾಗಿದ್ದರು.

ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದ ಶ್ರೀ ಗುಡ್ಡಪ್ಪ ಗೌಡರು ಕಟೀಲು ಮೇಳದ ಬಯಲಾಟಗಳಲ್ಲಿ ಪ್ರಸಿದ್ದರಾಗಿದ್ದರು. ದಿ| ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಶ್ರೀ ಕೇದಗಡಿ  ಗುಡ್ಡಪ್ಪ ಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ. ಇವರಿಗೆ ನಾಲ್ಕು ಮಂದಿ ಮಕ್ಕಳು. (ಮೂರು ಗಂಡು ಮಕ್ಕಳು ಮತ್ತು ಒಬ್ಬಳು ಪುತ್ರಿ)


ಲೇಖ : ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments