ಯಕ್ಷಗಾನ ಕಲೆಯ ಆಸಕ್ತಿಯ ವೀಕ್ಷಣೆಗೆ, ಹವ್ಯಾಸವಾಗಿರಿಸಿ ಕಲಿತುಕುಣಿಯುವುದಕ್ಕೆ ಅಥವಾ ಅದನ್ನೇ ಬದುಕಿನ ದಾರಿಯಾಗಿಸಿಕೊಳ್ಳುವವರಿಗೆ ಕಲಾಕದಂಬ ಆರ್ಟ್ ಸೆಂಟರ್ ಒಂದು ಉತ್ತಮ ತಾಣವೆನಿಸಿದೆ. ಡಾ| ರಾಧಾಕೃಷ್ಣ ಉರಾಳ ಕೆ. ಅವರ ಕಲ್ಪನೆ ಪರಿಶ್ರಮದ ಫಲವಾಗಿ 2009ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಈ ಕಲಾಸಂಸ್ಥೆ ಯಕ್ಷಗಾನ, ನಾಟಕ, ನೃತ್ಯ, ವಾದ್ಯ ಸಂಗೀತ, ಜಾನಪದ, ಸಿನೆಮಾ ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪು ಬೀರಿದೆ. ಭಾರತೀಯ ರಂಗ ಕಲೆಗಳ ಪ್ರದರ್ಶನ, ಪರಿಚಯ, ತರಭೇತಿ, ಪರಿಣತಿ, ಶಾಲಾ ಮಕ್ಕಳಿಗೆ ಕಲಾ ಶಿಕ್ಷಣದ ಆಶಯಗಳನ್ನಿರಿಸಿಕೊಂಡು ಸಾಧನೆಯ ಹಾದಿಯಲಿ ಮುನ್ನಡೆದಿದೆ.
ಯಕ್ಷಗಾನ ಭಾಗವತಿಕೆಯ ಸ್ಥಾನಕ್ಕೆ ತಾರಾ ಮೆರುಗು ತಂದು ಕೊಟ್ಟ ‘ಕಾಳಿಂಗ ನಾವಡ’ ಯಕ್ಷಗಾನ ಪ್ರಪಂಚ ಮರೆಯದ ಹೆಸರು. ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಮೂವತ್ತೆರಡನೇ ವಯಸ್ಸಿಗೇ ಪ್ರಶಂಸೆಯ ಗಿರಿಯೇರಿ, ಮೆರೆದು ಮರೆಯಾದವರು. ಕುಳಿತು ಕಲಿಸಿ ಶಿಷ್ಯರನ್ನು ಸಿದ್ಧಮಾಡದಿದ್ದರೂ ಇಂದಿಗೂ ತಮ್ಮ ಗಾನ ಮೋಡಿಯಿಂದ ಲಕ್ಷಾಂತರ ಪ್ರೇಕ್ಷಕರನ್ನು, ನೂರಾರು ಮಂದಿ ಗಾನಾಸಕ್ತರನ್ನು ಭಾಗವತಿಕೆಗೆ ಪ್ರೇರೇಪಿಸುತ್ತಿರುವ ಶಕ್ತಿ. ತಂದೆ ರಾಮಚಂದ್ರ ನಾವಡ, ತಮ್ಮ ವಿಶ್ವನಾಥ ನಾವಡ ಕೂಡಾ ಭಾಗವತಿಕೆಗೆ ಹೆಸರಾಗಿದ್ದು, ಗುಂಡ್ಮಿ ಎಂದರೆ ನಾವಡರ ಮನೆ ಎಂಬ ನೆನಪು ಯಕ್ಷ ಕಲಾಸಕ್ತರ ಮನ ಮನದಲ್ಲಿ ಈಗಲೂ ಮರೆಯಲಾಗದ ನಾದಲಹರಿಯ ತರಂಗವನ್ನಿರಿಸಿದೆ.
ಈ ಯಕ್ಷಲೋಕದ ಗಾನ ದೇವತೆಯ ನೆನಪಿನಲ್ಲಿ ನಮ್ಮ ಕಲಾಕದಂಬ ಆರ್ಟ್ ಸೆಂಟರ್‌ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿರುತ್ತದೆ. ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ ಜಯಂತ್‌ಕುಮಾರ್, ಮಂದಾರ್ತಿರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನುಖ್ಯಾತ ಮದ್ದಳೆವಾದಕರಾಗಿ ಗುರ್ತಿಸಿಕೊಂಡ ಶಂಕರ ಭಾಗವತ ಅವರಿಗೆ, ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಕಲಾಸಂಘದ ಸಭಾ ಭವನದಲ್ಲಿ 31.10.2021 ರ ಸಂಜೆ 4 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದು.
ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಗೀತ ವಿದ್ಯಾನಿಧಿ ಶ್ರೀ ಡಾ.ವಿದ್ಯಾಭೂಷಣರು, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಯಕ್ಷಗಾನ ಸಂಶೋಧಕರು ಹಾಗೂ ಲೇಖಕರಾದ ಶ್ರೀ ಡಾ.ಆನಂದರಾಮ ಉಪಾಧ್ಯರು, ಯಕ್ಷಗಾನ ಪೋಷಕರಾದ ಶ್ರೀ ಎ ಪದ್ಮನಾಭ ಕಾರಂತರು, ಯುವ ವಿಪ್ರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿಅಡಿಗರು, ಕಾಳಿಂಗ ನಾವಡರ ಸಹೋದರಿ ಶ್ರೀಮತಿ ಸುಶೀಲ ಉರಾಳರು, ಕರಬ ಪ್ರತಿಷ್ಠಾನದ ಶ್ರೀ ದೇವರಾಜ ಕರಬರು, ಕಲಾಕದಂಬ ಆರ್ಟ್ ಸೆಂಟರ್ ನ ಅಧ್ಯಕ್ಷರಾದ ಅಂಬರೀಶ್ ಭಟ್ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರು ಉಪಸ್ಥಿತರಿರಲಿದ್ದಾರೆ.
ಪ್ರಖ್ಯಾತ ತಬಲಾ ವಾದಕರಾದ ಶ್ರೀ ಗುರುಮೂರ್ತಿ ವೈದ್ಯ ಹಾಗೂ ಶಂಕರ ಭಾಗವತರಿಂದ ವಾದನ ವೈವಿಧ್ಯ ಎನ್ನುವ ವಿನೂತನ ಕಾರ್ಯಕ್ರಮ ಅಲ್ಲದೇ ಕಲಾಕದಂಬ ಆರ್ಟ್ ಸೆಂಟರ್ ನ ಕಲಾವಿದರು ಅಭಿನಯಿಸುವ ಕವಿ ಡಾ.ಅಂಬೇಮೂಲೆ ಗೋವಿಂದ ಭಟ್ ರಚಿತ ಶ್ರೀ ಕೃಷ್ಣ ತುಲಾಭಾರ ಎಂಬ ಯಕ್ಷಗಾನ ಪ್ರದರ್ಶನ ಕೂಡ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9448510582, 9886066732
ಕಾಳಿಂಗ ನಾವಡ ಪ್ರಶಸ್ತಿ ಭಾಜನ ಮದ್ದಲೆ ಮಾಂತ್ರಿಕ : ಶಂಕರ ಭಾಗವತ
ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರ ಹಾಡಿಗೆ ಮೆರುಗು ತುಂಬುವುದು ಚೆಂಡೆ ಹಾಗೂ ಮದ್ದಲೆ. ಇವೆಲ್ಲದರ ಸಮ್ಮಿಲನದಿಂದ ಒಂದು ಸುಂದರ ಯಕ್ಷ ಲೋಕವೇ ಸೃಷ್ಟಿಯಾಗುತ್ತದೆ. ಮದ್ದಲೆಯ ವಾದಕರಲ್ಲಿ ಕೆಲವೇ ಕೆಲವು ಮಂದಿ ಜನಪ್ರಿಯರಾಗಿದ್ದಾರೆ. ಅವರಲ್ಲಿ ಶಂಕರ ಭಾಗವತ ಯಲ್ಲಾಪುರ ಕೂಡ ಒಬ್ಬರು.
ಹಳೆಯ ತಲೆಮಾರಿನ ಭಾಗವತರೂ ಅಲ್ಲದೇ ಈಗಿನ ಯುವ ಭಾಗವತರಿಗೂ ತಮ್ಮ ಮದ್ದಲೆಯ ನುಡಿಸಿ ಎಲ್ಲಾ ಕಾಲಘಟ್ಟಕ್ಕೂ ಸೈ ಎನಿಸಿಕೊಂಡು ಇಂದಿಗೂ ತಮ್ಮಕಲೆಯನ್ನು ಪ್ರದರ್ಶಿಸುತ್ತಾ ಎಲ್ಲರ ಮನ ಗೆಲ್ಲುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಆನಗೋಡಿನ ಶಿಸ್ತಮುಡಿಯ ಶ್ರೀ ರಾಮಚಂದ್ರ ಭಾಗವತ ಹಾಗೂ ಶ್ರೀಮತಿ ಕಮಲಾ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರುತಮ್ಮ 15 ನೆಯ ವಯಸ್ಸಿನಲ್ಲಿಯೇ ಮದ್ದಲೆಯ ಮೋಡಿಗೆ ಆಕರ್ಷಿತರಾಗಿ ಮದ್ದಲೆ ವಾದಕ ಪ್ರವೀಣ ದುರ್ಗಪ್ಪ ಗುಡಿಗಾರ್ ಹಾಗೂ ಶ್ರೀ ತಿಮ್ಮಪ್ಪ ನಾಯಕರಲ್ಲಿ ಮದ್ದಲೆಯ ಮಟ್ಟುಗಳನ್ನು ಕಲಿತು ಯಕ್ಷರಂಗಕ್ಕೆ ಕಾಲಿಟ್ಟರು. ಕೆರೆಮನೆ, ಅಮೃತೇಶ್ವರಿ, ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ತಮ್ಮ ಮದ್ದಲೆಯ ಮೋಡಿಯನ್ನು ಹರಿಸಿದ್ದಾರೆ. ಕೀರ್ತಿ ಶೇಷರಾದ ಕಡತೋಕ ಮಂಜುನಾಥ ಭಾಗವತ, ನಾರಾಯಣಉಪ್ಪೂರ್, ನೆಬ್ಬೂರು ನಾರಾಯಣ ಭಾಗವತರು, ಸುಬ್ರಹ್ಮಣ್ಯ ಧಾರೇಶ್ವರ ಹೀಗೆ ಹಲವಾರು ಭಾಗವತರುಗಳಿಗೆ ಮದ್ದಲೆ ವಾದಕರಾಗಿ ಜನಪ್ರಿಯರಾದರು.
ಯಕ್ಷಗಾನ ಗಾನ ಕೋಗಿಲೆ ದಿವಂಗತ ಕಾಳಿಂಗ ನಾವಡರ ಯಕ್ಷಗಾಯನದ ಜೊತೆಯಲ್ಲಿನ ಇವರ ಮದ್ದಲೆಯ ನಾದದ ಮೋಡಿ ಸಾಕಷ್ಟು ಹೆಸರು ಹಾಗೂ ಜನಪ್ರಿಯತೆಯನ್ನು ಇವರಿಗೆ ತಂದು ಕೊಟ್ಟಿತು. ಇಂದಿಗೂ ಹಲವಾರು ಧ್ವನಿ ಸುರುಳಿಗಳಲ್ಲಿ ಇವರಿಬ್ಬರ ನಾದ ವೈಭವವನ್ನು ನಾವು ಕೇಳಬಹುದು. ಶಿವರಾಮ ಹೆಗಡೆ, ದೇವರು ಹೆಗಡೆ, ಪಿ.ವಿ.ಹಾಸ್ಯಗಾರ್, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಹೀಗೆ ಯಕ್ಷರಂಗದ ಮೇರು ಕಲಾವಿದರುಗಳಿಗೆ ತಮ್ಮ ಮದ್ದಲೆಯ ನುಡಿಸಿ ಅವರ ಹೆಜ್ಜೆಗಳಿಗೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿದ್ದಾರೆ. ಮದ್ದಲೆಯ ವಾದನದಲ್ಲಿ ಸುಮಾರು 40 ವರ್ಷಗಳ ತಿರುಗಾಟದ ಅನುಭವದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಲ್ಲದೇ ಯಕ್ಷಗಾನದ ಚೌಕಟ್ಟಿನಲ್ಲಿ ಮದ್ದಲೆಯ ನುಡಿಸುವ ಹೊಸ ಹೊಸ ಪ್ರಾಕಾರಗಳನ್ನು ರಂಗದ ಮೇಲೆ ಪ್ರದರ್ಶಿಸಿ ಅಪಾರ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಮುಂಬೈ,ಕೇರಳ,ಹೈದ್ರಾಬಾದ್,ಮದ್ರಾಸ್ ಹೀಗೆ ನಾಡಿನಾಚೆಗೂ ತಮ್ಮ ಕಲೆಯ ಕಂಪನ್ನು ಪಸರಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ. ಆಕಾಶವಾಣಿ ಧಾರವಾಡ, ಕುಮಟ, ಮುಂಬೈ, ಬೆಂಗಳೂರು, ಸಿರ್ಸಿ, ಉಡುಪಿ ಹೀಗೆ ನಾಡಿನ ಉದ್ದಗಲದಲ್ಲೂ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪ್ರಾಪ್ತರಾಗಿದ್ದಾರೆ.
ಸಿರಸಿಯಲ್ಲಿ ತಮ್ಮದೇ ಆದ ನಾದ ಶಂಕರ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಮದ್ದಲೆಯ ವಾದನದ ತರಭೇತಿಯನ್ನು ನೀಡುತ್ತಿದ್ದಾರೆ. ಇಲ್ಲಿ ಕಲಿತ ಹಲವಾರು ಶಿಷ್ಯರು ಯಕ್ಷಗಾನ ಮೇಳಗಳಲ್ಲಿ ಮದ್ದಲೆ ವಾದನದಲ್ಲಿ ಹೆಸರು ಮಾಡುತ್ತಿರುವುದು ಶಂಕರ ಭಾಗವತರ ಪ್ರತಿಭೆಗೆ ಸಾಕ್ಷಿ. ಸುದೀರ್ಘವಾಗಿ ಒಂದು ಕಲೆಯಲ್ಲಿ ತೊಡಗಿಸಿ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಶಂಕರ ಭಾಗವತರುಇದಕ್ಕೆ ಅಪವಾದ ಎಂಬಂತೆ ಇನ್ನೂ ಕೂಡ ತಮ್ಮ ಕಲೆಯ ಹೊಳಪನ್ನು ಮಾಸದಂತೆ ಕಾಪಾಡಿಕೊಂಡು ಬಂದಿರುವುದು ಆ ಭಗವಂತನೇ ಅವರಿಗೆ ಕೊಟ್ಟ ದಿವ್ಯವಾದ ಶಕ್ತಿ. ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಯಕ್ಷಗಾನದ ಉಳಿವು ಹಾಗೂ ಬೆಳವಣಿಗೆಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಯಕ್ಷಲೋಕದ ದ್ರುವತಾರೆಯಾಗಿ ಮಿನುಗುತ್ತಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions