Friday, September 20, 2024
Homeಯಕ್ಷಗಾನಅಮೃತ ಮಹೋತ್ಸವ ಸಂಭ್ರಮದಲ್ಲಿ ಯಕ್ಷನಾರಿ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು

ಅಮೃತ ಮಹೋತ್ಸವ ಸಂಭ್ರಮದಲ್ಲಿ ಯಕ್ಷನಾರಿ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು

ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಾಡಿತ್ತಾಯರು ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನದಲ್ಲಿ ಮೆರೆದ ನಾರಿ. ವಿವಾಹದ ನಂತರ ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದ ಹಾಡುಗಾರಿಕೆಯನ್ನು ಕಲಿತು ರಂಗವೇರಿ ಭಾಗವತರಾಗಿ ರಂಜಿಸಿದವರು. ಗುರುವಾಗಿ ಕಲಿಕಾಸಕ್ತರಿಗೆ ತರಬೇತಿಯನ್ನು ನೀಡಿದವರು. ಪತಿಯ ಜತೆಯಾಗಿಯೇ ಇದ್ದು ಯಕ್ಷಗಾನ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿದವರು.

ಸ್ತ್ರೀಯರಿಗೆ ಯಕ್ಷಗಾನವು ನಿಷೇಧವಿದ್ದ ದಿನಗಳಲ್ಲೇ ಕಲಾಸೇವೆಯನ್ನು ಮಾಡಿ, ಅದನ್ನೇ ಉಸಿರಾಗಿಸಿಕೊಂಡು ಬದುಕಿದವರು.  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಗಂಡುಕಲೆಯಾದ ಯಕ್ಷಗಾನದತ್ತ ಸ್ತ್ರೀಯರು ಒಲವನ್ನು ತೋರಿಸುವುದಕ್ಕೆ ಪ್ರೇರಕ ಶಕ್ತಿಯಾಗಿ ಒದಗಿದವರು ಎಂದು ಹೇಳಿದರೆ ತಪ್ಪಾಗಲಾರದು. ಯಕ್ಷಗಾನ ಹಾಡುಗಾರಿಕೆಯಲ್ಲಿ ರಂಜಿಸುವುದರ ಜತೆಗೆ ಕಲಿಕಾಸಕ್ತರಿಗೆ ತರಬೇತಿಯನ್ನೂ ನೀಡಿ ಕಲಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಲಾಭಿಮಾನಿಗಳಿಗೆ ಇವರು ಪ್ರೀತಿಯ ಲೀಲಕ್ಕ. ಶಿಷ್ಯಂದಿರಿಗೆ ವಾತ್ಸಲ್ಯಮಯಿಯಾದ ‘ಅಮ್ಮ’. ಶಿಷ್ಯರಿಗೆ ವಿದ್ಯೆಯೆಂಬ ಅಮೃತವನ್ನು ಉಣಿಸಿದ ಇವರಿಗೆ ಈಗ ಎಪ್ಪತ್ತೈದನೆಯ ವಯಸ್ಸು. ಅಮೃತ ಮಹೋತ್ಸವದ ಸಂಭ್ರಮ. 

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಜನಿಸಿದ್ದು ಕಾಸರಗೋಡು ತಾಲೂಕಿನ ಆದೂರು ಗ್ರಾಮದ ಕಡುಮನಡ್ಕದ ಕಡುಮನೆ ಹೆಬ್ಬಾರರ ಮನೆತನದಲ್ಲಿ. 1947 ಮೇ 23ರಂದು ಶ್ರೀ ಪುಂಡರೀಕಾಕ್ಷ ಹೆಬ್ಬಾರ್ ಮತ್ತು ಶ್ರೀಮತಿ ಮಹಾಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿ ಜನನ. (ಮಧೂರು ಪಡುಕಕ್ಕೆಪ್ಪಾಡಿ ಅಜ್ಜನ ಮನೆಯಲ್ಲಿ ಜನನ) ತನ್ನ 5ನೆಯ ವಯಸ್ಸಿನಲ್ಲಿ ತಂದೆಯವರನ್ನು ಕಳೆದುಕೊಂಡ ಲೀಲಾವತಿ ಅವರು ತನ್ನ ಅಣ್ಣ ವಿಷ್ಣು ಹೆಬ್ಬಾರರ ಜತೆ ಸೋದರಮಾವ ಪಡುಕಕ್ಕೆಪ್ಪಾಡಿ ಶ್ರೀ ರಾಮಕೃಷ್ಣ ಕೇಕುಣ್ಣಾಯರ ಮನೆಯಲ್ಲಿ ಬೆಳೆದವರು. ಶ್ರೀ ಪುಂಡರೀಕಾಕ್ಷ ಹೆಬ್ಬಾರರು ಕಳ್ಯಾರು ದೇವಳದ ಅರ್ಚಕರಾಗಿದ್ದವರು.

ಲೀಲಾವತಿ ಅವರು ಶಾಲೆಗೆ ಹೋದವರಲ್ಲ. ತಂದೆಯಿಂದ ಮತ್ತು ಅಜ್ಜನ ಮನೆಯ ಹತ್ತಿರದ ಹೆಮ್ಮಕ್ಕಳಿಂದ ಅಕ್ಷರ ಕಲಿತಿದ್ದರು. ಅವರಿಂದ ಹಿಂದಿ ಭಾಷೆಯನ್ನೂ ಕಲಿತು ಹಿಂದಿ ವಿಶಾರದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಎಳವೆಯಲ್ಲಿ ಶಾಸ್ತ್ರೀಯ ಸಂಗೀತದ ಒಲವು ಮೂಡಿತ್ತು. ಮಧೂರು ಪದ್ಮನಾಭ ಸರಳಾಯರಿಂದ ಸಂಗೀತ ಕಲಿಕೆ. ಪದ್ಮನಾಭ ಸರಳಾಯರ ಅಣ್ಣ ರಂಗಯ್ಯ ಸರಳಾಯರಿಂದ ಪುತ್ರಿಯರಾದ ಕಾಮಾಕ್ಷಿ, ಸುಶೀಲ ಮತ್ತು ಶೈಲಜ ಎಂಬವರು ಸಂಗೀತ ಕಲಿಯುವಾಗ ಇವರ ಸಹಪಾಠಿಗಳಾಗಿದ್ದರು. ಇವರುಗಳು ಸಂಗೀತ ಕ್ಷೇತ್ರದಲ್ಲಿ ಮಧೂರು ಸಹೋದರಿಯರೆಂದೇ ಖ್ಯಾತರು.

ಏಳು ವರ್ಷಗಳ ಕಾಲ ಸಂಗೀತ ಅಭ್ಯಸಿಸಿ ಹಾಡಲು ಆರಂಭಿಸಿದರು. ಯಕ್ಷಗಾನಾಸಕ್ತಿಯೂ ಇತ್ತು. ಪ್ರತಿ ಮೇಳದ ಪ್ರದರ್ಶನಗಳು ಮಧೂರು ಕ್ಷೇತ್ರದಲ್ಲಿ ನಡೆಯುತ್ತಿದ್ದಾಗ ನೋಡಲು ಅವಕಾಶವಾಗಿತ್ತು. ಪರಿಸರದಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳಲ್ಲಿ ಮಧೂರು ಸಹೋದರಿಯರ ಜತೆ ಹಾಡಲು ಆರಂಭಿಸಿದ್ದರು. 1970ರಲ್ಲಿ ಗುರುಹಿರಿಯರ ನಿರ್ಣಯದಂತೆ ಶ್ರೀ ಹರಿನಾರಾಯಣ ಬೈಪಡಿತ್ತಾಯರ ಜತೆ ವಿವಾಹ. ಆಗ ಅವರು ಕೂಡ್ಲು ಮೇಳದ ಕಲಾವಿದರಾಗಿದ್ದರು. ಕೂಡ್ಲು ಮೇಳದ ಕಲಾವಿದ ಮಧೂರು ಶ್ರೀ ಗಣಪತಿ ರಾಯರ ಸೂಚನೆಯಂತೆ, ಗುರುಹಿರಿಯರ ನಿರ್ಣಯದಂತೆ ಇವರ ವಿವಾಹವು ನಡೆದಿತ್ತು. ಕಡಬ ಬೈಪಾಡಿತ್ತಾಯರ ಬೀಡುಮನೆಗೆ ಸೊಸೆಯಾಗಿ ಬಂದವರು  ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಾಡಿತ್ತಾಯರು. ಆದರೆ ಹಾಡುವ ಅವಕಾಶದಿಂದ ವಂಚಿತರಾಗಿದ್ದರು. ಸಂಗೀತ ಕಲಿತಿದ್ದರೂ ಹಾಡುವ ಅವಕಾಶವಿರಲಿಲ್ಲ.

ಪರಿಸರದಲ್ಲಿ ಸಂಗೀತ ಕಚೇರಿಗಳು ನಡೆಯುತ್ತಿರಲಿಲ್ಲ. ಹಾಗೆಂದು ಸುಮ್ಮನೆ ಕುಳಿತವರಲ್ಲ. ತೋಟ ಗದ್ದೆಗಳಲ್ಲಿ ಪತಿಯ ಜತೆ ದುಡಿದ ಶ್ರಮಜೀವಿ ಇವರು. ಏತ ನೀರಾವರಿಯ ದುಡಿಮೆಯನ್ನೂ ಮಾಡಿದ್ದರು. ಪತ್ನಿಯು ಶ್ರಮಪಟ್ಟು ಕಲಿತ ಸಂಗೀತ ವಿದ್ಯೆಗೆ ಅವಕಾಶವಿಲ್ಲದೆ ಹೋಯಿತು ಎಂಬ ಕೊರಗು ಶ್ರೀ ಹರಿನಾರಾಯಣ ಬೈಪಾಡಿತ್ತಾಯರನ್ನು ಕಾಡುತ್ತಿತ್ತು. ಕಡಬ ಬೈಪಾಡಿತ್ತಾಯರ ಮನೆಯವರು ಕಲಾಸಕ್ತರು. ವಾರಕ್ಕೊಂದು ತಾಳಮದ್ದಳೆ ಕೂಟ ಅಲ್ಲಲ್ಲಿ ನಡೆಯುತ್ತಿತ್ತು. ಅದು ಬೆಳಗಿನ ವರೆಗಿನ ತಾಳಮದ್ದಳೆ. ಹರಿನಾರಾಯಣ ಬೈಪಾಡಿತ್ತಾಯರಿಗೆ ಮದ್ದಳೆ ಬಾರಿಸುವ ಆಸಕ್ತಿ. ಆದರೆ ಆಗ ಭಾಗವತರ ಸಂಖ್ಯೆ ಕಡಿಮೆ. ಸಂಗೀತ ಕಲಿತ ಲೀಲಾವತಿ ಬೈಪಾಡಿತ್ತಾಯರಿಗೆ ಯಕ್ಷಗಾನ ಭಾಗವತಿಕೆ ಪಾಠ ಮಾಡಲು ತೊಡಗಿಯೇ ಬಿಟ್ಟಿದ್ದರು. ಒಂದೇ ವರ್ಷದಲ್ಲಿ ಲೀಲಾವತಿ ಬೈಪಾಡಿತ್ತಾಯರು ಪ್ರದರ್ಶನಕ್ಕೆ ಹಾಡುವಷ್ಟು ಸಿದ್ಧರಾಗಿದ್ದರು.

ಮಧೂರಿನಲ್ಲಿ ಸಂಗೀತ ಕಲಿತುದು ಅನುಕೂಲವೇ ಆಗಿತ್ತು. ನಾರಿಯೊಬ್ಬಳು ಯಕ್ಷಗಾನದಲ್ಲಿ ಹಾಡುತ್ತಿದ್ದಾಳೆ ಎಂಬ ಪ್ರಚಾರವೂ ಸಿಕ್ಕಿತ್ತು. ಅಲ್ಲಲ್ಲಿ ನಡೆಯುತ್ತಿದ್ದ ತಾಳಮದ್ದಳೆ, ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲಿ ಪತಿಯ ಜತೆ ಸಾಗಿ ಯಕ್ಷಗಾನ ಭಾಗವತಿಕೆ ಮಾಡಲಾರಂಭಿಸಿದರು. ಪಂಜ, ಚಾರ್ವಾಕ, ನಿಂತಿಕಲ್ಲು, ಸುಬ್ರಹ್ಮಣ್ಯ ಮೊದಲಾದೆಡೆ ಆಟ, ತಾಳಮದ್ದಳೆಗಳಲ್ಲಿ ಭಾಗವತರಾಗಿ ಕಾಣಿಸಿಕೊಂಡರು. ಇವರ ಭಾಗವತಿಕೆಯನ್ನು ಮೂಡಂಬೈಲು ಶ್ರೀ ಗೋಪಾಲಕೃಷ್ಣ ಶಾಸ್ತ್ರಿಗಳು ಮೆಚ್ಚಿ ಪ್ರಶಂಸಿಸಿದ್ದರು. ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಪತಿಯ ಜತೆ ಅತಿಥಿ ಕಲಾವಿದೆಯಾಗಿ ಭಾಗವತಿಕೆ. ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ಅತಿಥಿ ಭಾಗವತರಾಗಿ ಕಲಾಸೇವೆ.

ಬಳಿಕ ಅರುವ ನಾರಾಯಣ ಶೆಟ್ಟರು ಆರಂಭಿಸಿದ ಸೋಮನಾಥೇಶ್ವರೀ ಯಕ್ಷಗಾನ ಮಂಡಳಿ ಅರುವ, ಅಳದಂಗಡಿ ಮೇಳದಲ್ಲಿ ಪತಿಯ ಜತೆ ಕಲಾಸೇವೆ. ಆಗ ಸರಪಾಡಿ ಶಂಕರನಾರಾಯಣ ಕಾರಂತ, ಕುಬಣೂರು ಶ್ರೀಧರ ರಾಯರ ಜತೆ  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಭಾಗವತರಾಗಿ ವ್ಯವಸಾಯ ಮಾಡಿದವರು. ಮದ್ದಳೆಗಾರರಾಗಿ ಹರಿನಾರಾಯಣ ಬೈಪಾಡಿತ್ತಾಯರು, ಲಕ್ಷ್ಮೀಶ ಅಮ್ಮಣ್ಣಾಯರು, ಪೆರುವಾಯಿ ಕೃಷ್ಣ ಭಟ್ಟರೂ ಜತೆಗಿದ್ದರು. ಹತ್ತು ವರ್ಷಗಳ ಕಾಲ ವ್ಯವಸಾಯ ಮಾಡಿ ತಿರುಗಾಟ ನಿಲ್ಲಿಸಿದ್ದರು. ಎರಡು ವರ್ಷಗಳ ಬಳಿಕ ಕೆ.ಎಚ್ ದಾಸಪ್ಪ ರೈಗಳ ಕುಂಬಳೆ ಮೇಳಕ್ಕೆ. ಸದ್ರಿ ಮೇಳದಲ್ಲಿ 2 ವರ್ಷ. ಬಳಿಕ ಅಡ್ಯಾರು ಶಂಕರ ಆಳ್ವರ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ಕಲಾಸೇವೆ ಮಾಡಿದ್ದರು. ಈ ಸಂದರ್ಭಗಳಲ್ಲಿ ಪತಿ ಹರಿನಾರಾಯಣ ಬೈಪಾಡಿತ್ತಾಯರೂ ಮದ್ದಳೆಗಾರರಾಗಿ ಜತೆಗಿದ್ದು ಪ್ರೋತ್ಸಾಹಿಸಿದ್ದರು.

ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುಗಳಾಗಿ ನೇಮಕಗೊಂಡಾಗ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಅವಕಾಶ ಲೀಲಾವತಿ ಬೈಪಾಡಿತ್ತಾಯರಿಗೂ ದೊರಕಿತ್ತು. ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಈ ಅವಕಾಶವನ್ನು ಬೈಪಾಡಿತ್ತಾಯ ದಂಪತಿಗಳಿಗೆ ನೀಡಿ ಪ್ರೋತ್ಸಾಹಿಸಿದ್ದರು. ಲೀಲಾವತಿ ಬೈಪಡಿತ್ತಾಯರು ಹತ್ತು ವರ್ಷಗಳ ಕಾಲ ಧರ್ಮಸ್ಥಳ ಕಲಿಕಾ ಕೇಂದ್ರದ ಗುರುವಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಭಾಗವತಿಕೆಯ ಪಾಠ ಮಾಡಿದ್ದರು. ಶ್ರೀ ತಿಮ್ಮಪ್ಪ ಗುಜರನ್ ಅವರ ಸೂಚನೆಯಂತೆ ಬೈಪಾಡಿತ್ತಾಯ ದಂಪತಿಗಳು ಕೊಳಂಬೆ ಗ್ರಾಮದ ತಲಕಳ ಎಂಬಲ್ಲಿ ಸ್ಥಳ ಖರೀದಿಸಿ ಪ್ರಸ್ತುತ ಅನೇಕ ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಕಟೀಲು, ಗಂಜಿಮಠ, ಆಲಂಕಾರು ಮೊದಲಾದೆಡೆ ಹಿಮ್ಮೇಳ ತರಗತಿಗಳನ್ನು ನಡೆಸಿರುತ್ತಾರೆ. ಈಗ ತಮ್ಮ ಕೊಳಂಬೆ ತಲಕಳ ಮನೆಯಲ್ಲೂ ಕಲಾಸಕ್ತರಿಗೆ ಹೇಳಿಕೊಡುತ್ತಿದ್ದಾರೆ. 

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ‘ಯಕ್ಷಗಾನ ಅಕಾಡೆಮಿ ಬೆಂಗಳೂರು’ ಈ ಘನ ಸಂಸ್ಥೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ಪತಿಯ ನೆರಳಾಗಿದ್ದುಕೊಂಡೇ ಯಕ್ಷಗಾನ ಕಲಾಸೇವೆ, ಮನೆವಾರ್ತೆಯನ್ನು ಜತೆಯಾಗಿ ನಡೆಸುತ್ತಾ ಯಶಸ್ವಿಯಾದ ರೀತಿಗೆ ಯಾರಾದರೂ ಅಚ್ಚರಿಪಡಲೇಬೇಕು. ಇದೊಂದು ಮಹಾನ್ ಸಾಧನೆಯೇ ಹೌದು. ಅವರ ಈ ಅಪೂರ್ವ ಸಾಧನೆಗೆ ಸಂದ ಪ್ರಶಸ್ತಿಗಳು ಹಲವು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದಿಂದ ಕೊಡಮಾಡುವ ಪ್ರಶಸ್ತಿ, ಕರ್ನಾಟಕ ಸರಕಾರದ ಹಿರಿಯ ನಾಗರಿಕರ ದಿನಾಚರಣೆಯ ದಿನ ಕೊಡಮಾಡುವ ಸಾಧಕ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮಂಗಳೂರು ವಿ.ವಿ ಯ ಯಕ್ಷಮಂಗಳ ಪ್ರಶಸ್ತಿ, ಕಡತೋಕಾ ಕೃತಿ-ಸ್ಮೃತಿ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ದಿವಾಣ ಭೀಮ ಭಟ್ ಪ್ರಶಸ್ತಿ, ವನಜ ರಂಗಮನೆ ಸುಳ್ಯ ಪ್ರಶಸ್ತಿ. ಅಲ್ಲದೆ ಇನ್ನೂ ಅನೇಕ ಸಂಸ್ಥೆಗಳಿಂದ, ಗಣ್ಯರಿಂದ  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಸನ್ಮಾನಗಳನ್ನು ಪಡೆದಿರುತ್ತಾರೆ.

ಬೈಪಾಡಿತ್ತಾಯ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಗುರುಪ್ರಸಾದ್ ಸ್ನಾತಕೋತ್ತರ ಪದವೀಧರ. ಬೆಂಗಳೂರಿನಲ್ಲಿ ಬಾಸುಮತಿ ರೈಸ್ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಶ್ರೀಮತಿ ವಾಣಿ ಗುರುಪ್ರಸಾದ್. ವಾಣಿ, ಗುರುಪ್ರಸಾದ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಸ್ವಾತಿ ಪದವೀಧರೆ. ಉದ್ಯೋಗಸ್ಥೆ. ಶಾಸ್ತ್ರೀಯ ಸಂಗೀತ, ವೀಣೆ ಕಲಿತಿದ್ದಾರೆ. ಅಜ್ಜಿ ಲೀಲಾವತಿ ಬೈಪಾಡಿತ್ತಾಯರಿಂದ ಯಕ್ಷಗಾನ ಭಾಗವತಿಕೆ ಕಲಿತು ಪ್ರದರ್ಶನಗಳಲ್ಲಿ ಹಾಡುತ್ತಿದ್ದಾರೆ. ಪುತ್ರ ಶ್ರೇಯಸ್ ಪ್ರಥಮ ಪಿಯುಸಿ ವಿದ್ಯಾರ್ಥಿ. ಶಾಸ್ತ್ರೀಯ ಸಂಗೀತ ಮತ್ತು ಕೊಳಲು ವಾದನ ಕಲಿತಿದ್ದಾರೆ.

ಬೈಪಾಡಿತ್ತಾಯ ದಂಪತಿಗಳ ದ್ವಿತೀಯ ಪುತ್ರ ಅರಿ ಅವಿನಾಶ್ ಬೈಪಾಡಿತ್ತಾಯ ಪದವೀಧರರು. ಬೆಂಗಳೂರಿನಲ್ಲಿ ಪತ್ರಕರ್ತರು. ಕಳೆದ ಎರಡು ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯ ಪತ್ರಕರ್ತರು. ವಿಜಯ ಕರ್ನಾಟಕ ಪತ್ರಿಕೆಯ ಪತ್ರಕರ್ತರಾಗಿ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು. ಚಿಕ್ಕವನಾಗಿರುವಾಗಲೇ ಮದ್ದಳೆವಾದನ ಅಭ್ಯಾಸ ಮಾಡಿದ್ದರು. ಊರ ಪರವೂರ ಪ್ರದರ್ಶನಗಳಲ್ಲಿ ಅವಕಾಶ ಸಿಕ್ಕಾಗ ಕಲಾಸೇವೆ ಮಾಡುತ್ತಾರೆ. ಅವರು ಬರಹಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ಇವರಿ ಪತ್ನಿ ಶ್ರೀಮತಿ ವಾಣಿ ಕಲಾಸಕ್ತೆ. ಬೆಂಗಳೂರಿನಲ್ಲಿ ಫ್ಯಾಷನ್ ಡಿಸೈನ್ ಉದ್ಯೋಗ ಮಾಡುತ್ತಿದ್ದಾರೆ. ವಾಣಿ, ಅವಿನಾಶ್ ಬೈಪಾಡಿತ್ತಾಯ ದಂಪತಿಗಳಿಗೆ ಓರ್ವ ಪುತ್ರ. ಶ್ರೀ ಅಭಿಷೇಕ್ ಬೈಪಾಡಿತ್ತಾಯ. ದ್ವಿತೀಯ ಪದವಿ ಓದುತ್ತಿದ್ದಾರೆ. ಅಜ್ಜ, ಅಜ್ಜಿಯರಿಂದ ಯಕ್ಷಗಾನ ಹಿಮ್ಮೇಳ ಕಲಿತು ಕಲಾಸೇವೆ ಮಾಡುತ್ತಿದ್ದಾರೆ.

ಬದುಕಿನ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರಿಗೆ ಶುಭಾಶಯಗಳು. ಬೈಪಾಡಿತ್ತಾಯ ದಂಪತಿಗಳಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಅವರಿಗೆ ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಈ ಸಂದರ್ಭದಲ್ಲಿ ಶ್ರೀ ಹರಿಲೀಲಾ – ೭೫ ಕಾರ್ಯಕ್ರಮದಡಿ ಗುರುದಂಪತಿಗಳನ್ನು ಅವರ ಶಿಷ್ಯಂದಿರೆಲ್ಲಾ ಸೇರಿ ಗೌರವಿಸುತ್ತಿರುವುದು ಸಂತೋಷದ ವಿಚಾರ. ಕಲಾಮಾತೆಯ ಅನುಗ್ರಹದಿಂದ ಈ ಸತ್ಕಾರ್ಯವು ಯಶಸ್ವಿಯಾಗಿ ನಡೆಯಲಿ. ಕಲಾಭಿಮಾನಿಗಳೆಲ್ಲರ ವತಿಯಿಂದ ಶುಭಾಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments