ಕಡಬ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಿಮ್ಮೇಳದ ಗುರುಗಳಲ್ಲೊಬ್ಬರು. ಮಾಂಬಾಡಿ ನಾರಾಯಣ ಭಾಗವತ, ಸುಬ್ರಹ್ಮಣ್ಯ ಭಟ್, ನೆಡ್ಲೆ ನರಸಿಂಹ ಭಟ್, ಗೋಪಾಲಕೃಷ್ಣ ಕುರುಪ್, ದಿವಾಣ ಭೀಮ ಭಟ್ ಮೊದಲಾದವರಂತೆ ಅನೇಕ ಶಿಷ್ಯಂದಿರಿಗೆ ಹಿಮ್ಮೇಳ ತರಬೇತಿಯನ್ನು ನೀಡಿ ಕಲಾವಿದರನ್ನಾಗಿ ರೂಪಿಸಿದ ಸಾಧಕರು.
ಪ್ರಸ್ತುತ ಉದಯೋನ್ಮುಖರೂ ಕಲಿಕಾಸಕ್ತರಿಗೆ ತರಬೇತಿಯನ್ನು ನೀಡುತ್ತಿರುವುದು ಯಕ್ಷಗಾನ ಕಲೆಗೆ ಅನುಕೂಲವೇ ಆಗಿದೆ. ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಕಳೆದ ಆರು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರು. ಕಲಾವಿದರಾಗಿ, ಹಿಮ್ಮೇಳ ಗುರುಗಳಾಗಿ ಮೇರು ಕಲೆ ಯಕ್ಷಗಾನಕ್ಕೆ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಇವರಿಂದ ಕಲಿತ ಅನೇಕ ಕಲಾವಿದರು ಇಂದು ಮೇಳಗಳಲ್ಲಿ ಭಾಗವತರಾಗಿ, ಮದ್ದಳೆಗಾರರಾಗಿ ಕಲಾಸೇವೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ.
ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಈ ಲೋಕದ ಬೆಳಕನ್ನು ಕಂಡದ್ದು 1946ನೇ ಇಸವಿ ನವೆಂಬರ್ 13ರಂದು. ಕಡಬ ಗ್ರಾಮದ ಬೈಪಾಡಿತ್ತಾಯ ಮನೆತನದಲ್ಲಿ ಶ್ರೀ ರಾಮಕೃಷ್ಣ ಬೈಪಾಡಿತ್ತಾಯ ಶ್ರೀಮತಿ ಪದ್ಮಾವತಿ ಅಮ್ಮ ದಂಪತಿಗಳ ಪುತ್ರನಾಗಿ ಕೆಂಚಭಟ್ಟರ ಮನೆಯಲ್ಲಿ ಜನನ. ಶ್ರೀ ರಾಮಕೃಷ್ಣ ಬೈಪಾಡಿತ್ತಾಯ ವೃತ್ತಿಯಲ್ಲಿ ಅರ್ಚಕರು. ಕಡಬ ಶ್ರೀ ಮಹಾಗಣಪತಿ ದೇವಳ ಮತ್ತು ಶ್ರೀ ದುರ್ಗಾಂಬಾ ದೇವಳದ ಪೂಜಾ ಕೈಂಕರ್ಯವನ್ನು ಮೊದಲಿನಿಂದಲೂ ಬೈಪಾಡಿತ್ತಾಯ ಮನೆಯವರೇ ನಡೆಸುತ್ತಿದ್ದರು. ರಾಮಕೃಷ್ಣ ಬೈಪಾಡಿತ್ತಾಯರು ಕಲಾಪ್ರೇಮಿಯಾಗಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿದ್ದರು.
ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಚಿಕ್ಕಪ್ಪ ಶ್ರೀ ವಾಸುದೇವ ಬೈಪಾಡಿತ್ತಾಯರು ಅಪಾರ ಪುರಾಣಜ್ಞಾನವನ್ನು ಹೊಂದಿ ಆ ಕಾಲದ ಒಳ್ಳೆಯ ಅರ್ಥಧಾರಿಯಾಗಿದ್ದರು. ಹರಿನಾರಾಯಣ ಬೈಪಾಡಿತ್ತಾಯರ ಸಣ್ಣಜ್ಜ ಶ್ರೀ ವಿಷ್ಣು ಬೈಪಾಡಿತ್ತಾಯರು ಕಲಾವಿದರಾಗಿ ಯಕ್ಷಗಾನ ನಾಟಕ ಮಂಡಳಿಯಲ್ಲಿ ಸಕ್ರಿಯರಾಗಿದ್ದರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಓದಿದ್ದು ಆರನೇ ತರಗತಿ ವರೆಗೆ. 5ನೇ ತರಗತಿ ವರೆಗೆ ಎಡಮಂಗಲ ಶಾಲೆಯಲ್ಲಿ. ಬಳಿಕ ಕಡಬ ಶಾಲೆಯಲ್ಲಿ. ಬಂಧುಗಳಾದ ಶ್ರೀ ಎನ್. ಆರ್.ಚಂದ್ರ ಅವರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗಿದ್ದರು. ಶ್ರೀ ಎನ್. ಆರ್.ಚಂದ್ರ ಅವರು ತಾಳಮದ್ದಳೆ ಅರ್ಥಧಾರಿಯಾಗಿದ್ದರು.
ಶ್ರೀ ಕೆ.ವಿ ಗಣಪಯ್ಯ, ಶ್ರೀ ಎನ್. ಆರ್.ಚಂದ್ರ, ಶ್ರೀ ರಾಮಣ್ಣ ರೈ, ಎ. ಆರ್.ಚಂದ್ರ ಇವರುಗಳು ಒಡನಾಡಿಗಳಾಗಿ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಜತೆ ಹರಿನಾರಾಯಣ ಬೈಪಾಡಿತ್ತಾಯರೂ ಕೂಟಗಳಿಗೆ ಹೋಗುತ್ತಾ ಯಕ್ಷಗಾನಾಸಕ್ತಿ ಬೆಳೆಸಿಕೊಂಡಿದ್ದರು. ಶ್ರೀ ರಾಮ ಅಮ್ಮಣ್ಣಾಯರು (ದಿನೇಶ ಅಮ್ಮಣ್ಣಾಯರ ಚಿಕ್ಕಪ್ಪ) ಪುರುಷಯ್ಯ ಆಚಾರ್ಯ ಮತ್ತು ಶ್ರೀ ಮಂದಾರ ಶೆಟ್ಟರ ಭಾಗವತಿಕೆಗೆ ಬೆಳಗಿನ ವರೆಗೂ ಶ್ರುತಿ ಬಾರಿಸುತ್ತಿದ್ದರಂತೆ. ಹೀಗೆ ಯಕ್ಷಗಾನದ ಆಸಕ್ತಿ ಬೆಳೆಯಿತು. ಶಾಲೆ ಬಿಟ್ಟ ನಂತರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಶ್ರೀ ವಿಶ್ವಜ್ಞ ತೀರ್ಥರು ಮತ್ತು ಶ್ರೀ ಶ್ರೀ ವಿದ್ಯಾಸಿಂಧು ತೀರ್ಥರ ಸಹಾಯಕರಾಗಿ ನಾಲ್ಕು ವರ್ಷ ಕಾಲ ಕೆಲಸ ಮಾಡಿದ್ದರು. ಜತೆಗೆ ಶ್ರೀ ಮಠದ ವಿದ್ಯಾರ್ಥಿಯಾಗಿ ಮಂತ್ರವನ್ನೂ ಕಲಿತಿದ್ದರು. ಜತೆಗೆ ಯಕ್ಷಗಾನ ಪ್ರದರ್ಶನಗಳನ್ನೂ ನೋಡುತ್ತಿದ್ದರು. ಕಲಾವಿದನಾಗಬೇಕೆಂಬ ಆಸೆಯೂ ಮೂಡಿತ್ತು.
ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಗೆ ಹಿಮ್ಮೇಳ ಕಲಿಯುವ ಆಸೆ ಉಂಟಾಗಿತ್ತು. ಶ್ರೀ ಪುರುಷಯ್ಯ ಆಚಾರ್ಯ ಅವರಿಂದ ಮದ್ದಳೆವಾದನದ ಕಲಿಕೆಗೆ ತೊಡಗಿದರು. ಇವರ ತಮ್ಮ ಶ್ರೀ ಅನಂತ ಬೈಪಾಡಿತ್ತಾಯರು ಭಾಗವತಿಕೆ ಕಲಿಯಲಾರಂಭಿಸಿದರು. ಜತೆಯಲ್ಲಿ ಕಲಿತ ಕಾರಣ ಉಭಯರಿಗೂ ಭಾಗವತಿಕೆ ಮತ್ತು ಚೆಂಡೆ ಮದ್ದಳೆವಾದನದ ವಿದ್ಯೆ ಅರಿಯಲು ಅನುಕೂಲವಾಗಿತ್ತು. ಊರಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಮದ್ದಳೆ ಬಾರಿಸಲು ಅವಕಾಶವೂ ಸಿಗುತ್ತಿತ್ತು. ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಶ್ರೀ ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಭಾಗವಹಿಸುವ ಅವಕಾಶವೂ ಸಿಕ್ಕಿತ್ತು. ಆಗ ಅದು ಟೆಂಟಿನ ಮೇಳವಾಗಿತ್ತು. ಚೆಂಡೆ ಮದ್ದಳೆ ಬಾರಿಸುವ ಅವಕಾಶ ನೀಡಿ ಶ್ರೀ ಶೀನಪ್ಪ ಭಂಡಾರಿಗಳು ಪ್ರೋತ್ಸಾಹ ನೀಡಿದ್ದರು. ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಅನಿವಾರ್ಯಕ್ಕೆ, ಅಪರೂಪಕ್ಕೆ ಪ್ರದರ್ಶನಗಳಲ್ಲಿ ಕಲಾಸೇವೆ ಮಾಡುತ್ತಿದ್ದರು.
ಬಳಿಕ ಕಲ್ಲಾಡಿ ಕೊರಗ ಶೆಟ್ರ ಸಂಚಾಲಕತ್ವದ ಇರಾ ಸೋಮನಾಥೇಶ್ವರ ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. (ಕುಂಡಾವು ಮೇಳ). ಬಲಿಪ ನಾರಾಯಣ ಭಾಗವತ, ಕಾಸರಗೋಡು ವೆಂಕಟ್ರಮಣ, ಪಟ್ಲ ,ಮಹಾಬಲ ಶೆಟ್ಟಿ, ಕೆ.ಗೋವಿಂದ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕುಡಾನ ಗೋಪಾಲಕೃಷ್ಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಅರುವ ಕೊರಗಪ್ಪ ಶೆಟ್ಟಿ, ಅರಾಟೆ ಮಂಜುನಾಥ ಮೊದಲಾದವರ ಒಡನಾಟ ಕಲಿಕೆಗೆ ಅವಕಾಶ ಒದಗಿಸಿತ್ತು. ಕುಂಡಾವು ಮೇಳದಲ್ಲಿ ಪೂರ್ವರಂಗದ ನೃತ್ಯ ಪ್ರದರ್ಶನದಲ್ಲಿಯೂ ಮದ್ದಳೆ ಬಾರಿಸಲು ಅವಕಾಶವಾಗಿತ್ತು. ಅದೇ ವರ್ಷ ಕುಂಡಾವು ಮೇಳ ತಿರುಗಾಟ ನಿಲ್ಲಿಸಿದ ಕಾರಣ ಬೈಪಾಡಿತ್ತಾಯರಿಗೆ ಬೇರೆ ಮೇಳಕ್ಕೆ ಹೋಗಬೇಕಾದ ಅನಿವಾರ್ಯತೆ ಬಂದಿತ್ತು. ಧರ್ಮಸ್ಥಳ ಮೇಳಕ್ಕೆ ಸೇರುವ ಅವಕಾಶವೂ ಸಿಕ್ಕಿತ್ತು. ಇವರ ವಾದನವನ್ನು ಪರೀಕ್ಷಿಸಲೆಂದೇ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾಗಿದ್ದ ಶ್ರೀ ರತ್ನವರ್ಮ ಹೆಗ್ಗಡೆಯವರು ತಾಳಮದ್ದಳೆ ಏರ್ಪಡಿಸಿದ್ದರು. ಪರೀಕ್ಷೆಯಲ್ಲಿ ಬೈಪಾಡಿತ್ತಾಯರು ಉತ್ತೀರ್ಣರಾಗಿದ್ದರು.
ಒಂದು ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ. ಕಡತೋಕಾ, ನೆಡ್ಲೆ, ಪುತ್ತೂರು ನಾರಾಯಣ ಹೆಗ್ಡೆ, ಕುಂಬಳೆ ಸುಂದರ ರಾವ್, ವಿಟ್ಲ ಗೋಪಾಲಕೃಷ್ಣ ಜೋಯಿಸ, ಕೆ.ಗೋವಿಂದ ಭಟ್, ಪಾತಾಳ ವೆಂಕಟ್ರಮಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ವಂಡ್ಸೆ ನಾರಾಯಣ, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ ಮೊದಲಾದ ಕಲಾವಿದರ ಒಡನಾಟ ದೊರಕಿತ್ತು. ಮುಂದಿನ ಎರಡು ವರ್ಷಗಳ ಕಾಲ ಶ್ರೀ ಶಂಕರನಾರ್ಣಪ್ಪಯ್ಯ ಅವರ ಕೋರಿಕೆಯಂತೆ ಕೂಡ್ಲು ಮೇಳದಲ್ಲಿ ತಿರುಗಾಟ. ದೊಂಡೋಲೆ ತಾಳಮದ್ದಳೆಯಲ್ಲಿ ಬೈಪಾಡಿತ್ತಾಯರ ಮದ್ದಳೆವಾದನವನ್ನು ಕೇಳಿದ ಶಂಕರನಾರ್ಣಪ್ಪಯ್ಯನವರು ಕೂಡ್ಲು ಮೇಳಕ್ಕೆ ಆಹ್ವಾನ ನೀಡಿದ್ದರು. ಇದಕ್ಕೆ ಶೇಣಿ ಶ್ರೀ ಗೋಪಾಲಕೃಷ್ಣ ಭಟ್ಟರ ಸಹಮತವೂ ಇತ್ತು. ಕೂಡ್ಲು ಮೇಳದಲ್ಲಿ ಅಗರಿ, ಬಲಿಪ, ದಿವಾಣ, ಶೇಣಿ, ವಿಟ್ಲ ಜೋಶಿ, ಕೊಕ್ಕಡ ಈಶ್ವರ ಭಟ್, ಕುಡಾಣ ಮೊದಲಾದವರು ಸಹಕಲಾವಿದರಾಗಿ ಒದಗಿದ್ದರು.
ಕೂಡ್ಲು ಮೇಳದ 2ನೆಯ ವರ್ಷದ ತಿರುಗಾಟದಲ್ಲಿರುವಾಗ ಲೀಲಾವತಿ ಅವರ ಜತೆ ವಿವಾಹ. ಮತ್ತೆ ಒಂದು ವರ್ಷ ಮರಳಿ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಧರ್ಮಸ್ಥಳ ಮೇಳದ ತಿರುಗಾಟದ ಸಂದರ್ಭ ನೆಡ್ಲೆ ನರಸಿಂಹ ಭಟ್ಟರಿಂದ ಕಲಿಕೆಗೆ ಅವಕಾಶವಾಗಿತ್ತು. ಹಗಲು ವಿಶ್ರಾಂತಿಯ ಸಮಯ ನೆಡ್ಲೆಯವರು ಹೇಳಿಕೊಡುತ್ತಿದ್ದರಂತೆ. ಮತ್ತೆ ತಿರುಗಾಟ ನಿಲ್ಲಿಸಿದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಎಂಟು ವರ್ಷಗಳ ಕಾಲ ಸಂಸಾರದ ಹೊಣೆಯನ್ನು ಹೊತ್ತಿದ್ದರು. ಪೂರ್ಣ ಪ್ರಮಾಣದ ತಿರುಗಾಟ ನಿಲ್ಲಿಸಿದರೂ ಧರ್ಮಸ್ಥಳ ಮತ್ತು ಕರ್ನಾಟಕ ಮೇಳದ ಪ್ರದರ್ಶನಗಳಲ್ಲಿ ಅನಿವಾರ್ಯಕ್ಕೆ ಕಲಾಸೇವೆ ಮಾಡುತ್ತಿದ್ದರು. ಈ ಸಂದರ್ಭಗಳಲ್ಲಿ ಶ್ರೀ ದಾಮೋದರ ಮಂಡೆಚ್ಚರು ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಒಡನಾಟವೂ ದೊರಕಿತ್ತು.
ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಮಳೆಗಾಲದಲ್ಲಿ ಶ್ರೀ ಚವಾಣರ ಟೂರಿನ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದರು. ಮನೆಯಲ್ಲಿ ತಮ್ಮ ಶ್ರೀಮತಿ, ಲೀಲಾವತಿ ಬೈಪಾಡಿತ್ತಾಯರಿಗೆ ಯಕ್ಷಗಾನ ಹಾಡುಗಾರಿಕೆಯನ್ನು ಕಲಿಸಿದರು. ಆ ಕಾಲದಲ್ಲಿ ಪತ್ನಿಯನ್ನು ಹಾಡುಗಾರಿಕೆಗೆ ಸಿದ್ಧಗೊಳಿಸಿ ಯಕ್ಷಗಾನ ರಂಗಕ್ಕೇರಿಸಿ ಮೆರೆಸಿದ ಸಾಧನೆ ಶ್ರೀ ಹರಿನಾರಾಯಣ ಬೈಪಾಡಿತ್ತಾಯರದ್ದು. ಪತ್ನಿ ಲೀಲಾವತಿ ಬೈಪಾಡಿತ್ತಾಯರು ಭಾಗವತರಾಗಿ ಮತ್ತು ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಮದ್ದಳೆಗಾರರಾಗಿ ಜತೆಯಾಗಿಯೇ ಆದಿ ಸುಬ್ರಹ್ಮಣ್ಯ, ಪುತ್ತೂರು, ಅಳದಂಗಡಿ, ಕುಂಬಳೆ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ಕಲಾಸೇವೆ ಮಾಡಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ನೀಡಿದ್ದರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಹನ್ನೆರಡು ವರ್ಷಗಳ ಕಾಲ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಹತ್ತು ವರ್ಷಗಳ ಕಾಲ ಪತ್ನಿ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರೂ ಇವರ ಜತೆಗೆ ಕಲಿಕಾ ಕೇಂದ್ರದಲ್ಲಿ ಕಲಿಕಾಸಕ್ತರಿಗೆ ತರಬೇತಿ ನೀಡಿದ್ದರು.
ತೆಂಕುತಿಟ್ಟಿನ ಖ್ಯಾತ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯರ ತಾಯಿ ಹರಿನಾರಾಯಣ ಬೈಪಡಿತ್ತಾಯರ ಸೋದರತ್ತೆ. ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ದಿನೇಶ ಅಮ್ಮಣ್ಣಾಯರ ದೊಡ್ಡಪ್ಪನ ಮಗ. ಹೀಗೆ ಅಮ್ಮಣ್ಣಾಯದ್ವಯರು ಬೈಪಾಡಿತ್ತಾಯರ ಬಂಧುಗಳೇ ಆಗಿದ್ದಾರೆ. ಹರಿನಾರಾಯಣ ಬೈಪಾಡಿತ್ತಾಯರ ತಮ್ಮಂದಿರೆಲ್ಲರೂ ಖ್ಯಾತ ಕಲಾವಿದರೇ ಆಗಿದ್ದಾರೆ.
ಕಡಬ ಮೋಹನ ಬೈಪಡಿತ್ತಾಯರು ಕಲಾವಿದರಾಗಿಯೂ ಯಕ್ಷಗಾನ ಹಿಮ್ಮೇಳ ಗುರುಗಳಾಗಿಯೂ ಪ್ರಸಿದ್ಧರು. ಮೋಹನ ಬೈಪಾಡಿತ್ತಾಯರು ಅಣ್ಣ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದಲೇ ತರಬೇತಿ ಪಡೆದವರು. ಕಿರಿಯ ತಮ್ಮ ಕೇಶವ ಬೈಪಾಡಿತ್ತಾಯರು ಹಿಮ್ಮೇಳ ಮುಮ್ಮೇಳ ಕಲಾವಿದರಾಗಿ ವ್ಯವಸಾಯ ಮಾಡಿದವರು. ಲಲಿತ ಕಲಾ ಕೇಂದ್ರದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯ ಕಲಿತು ತಿರುಗಾಟ ನಡೆಸಿದ್ದರು. ಕೇಶವ ಬೈಪಡಿತ್ತಾಯರು ಅಣ್ಣ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದ ಮದ್ದಳೆ ವಾದನವನ್ನು ಕಲಿತು ಮೇಳದ ತಿರುಗಾಟವನ್ನು ನಡೆಸಿದವರು.
ಕುಡುಪು ಮತ್ತು ಕಟೀಲಿನ ಸಮೀಪದ ಎಕ್ಕಾರು ಮತ್ತು ಅಳದಂಗಡಿಯಲ್ಲಿ ವಾಸ್ತವ್ಯವಿದ್ದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಪ್ರಸ್ತುತ ಕೊಳಂಬೆ ಗ್ರಾಮದ ತಲಕಳದಲ್ಲಿ ವಾಸವಾಗಿದ್ದಾರೆ. ಕಟೀಲು, ಗಂಜಿಮಠ, ಆಲಂಗಾರು, ಕಾರ್ಕಳ ಮೊದಲಾದೆಡೆ ಕಲಿಕಾಸಕ್ತರಿಗೆ ತರಬೇತಿ ನೀಡಿ ಅಪಾರ ಶಿಷ್ಯಂದಿರನ್ನು ಹೊಂದಿರುವ ಬೈಪಾಡಿತ್ತಾಯರು ಪ್ರಸ್ತುತ ಕಲಿಕಾಸಕ್ತರಿಗೆ ಮನೆಯಲ್ಲಿಯೇ ಹೇಳಿಕೊಡುತ್ತಿದ್ದಾರೆ. ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ನೆಡ್ಲೆ ನರಸಿಂಹ ಭಟ್ ಸಂಸ್ಮರಣಾ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಪಡ್ರೆ ಚಂದು ಸ್ಮಾರಕ ಪ್ರಶಸ್ತಿ, ಪುತ್ತೂರು ಹೆಗ್ಡೆ ಪ್ರಶಸ್ತಿ, ಕೆರೆಮನೆ ನಾಟ್ಯೋತ್ಸವ, ಕಡಬ ಸಂಸ್ಮರಣಾ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನೂ ಪಡೆದಿರುತ್ತಾರೆ. ಅಲ್ಲದೆ ಅನೇಕ ಸಂಸ್ಥೆಗಳು ಮತ್ತು ಗಣ್ಯರಿಂದ ಗೌರವ ಸನ್ಮಾನಗಳನ್ನು ಪಡೆದಿರುತ್ತಾರೆ.
ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ದಂಪತಿಗಳು ಸಾಂಸಾರಿಕವಾಗಿಯೂ ತೃಪ್ತರು. ಇವರಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಗುರುಪ್ರಸಾದ್. ಸ್ನಾತಕೋತ್ತರ ಪದವೀಧರ. ಬೆಂಗಳೂರಿನಲ್ಲಿ ಬಾಸುಮತಿ ರೈಸ್ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್. ಇವರ ಪತ್ನಿ ಶ್ರೀಮತಿ ವಾಣಿ ಗುರುಪ್ರಸಾದ್. ಗೃಹಣಿ. ಕಲಾಸಕ್ತೆ. ವಾಣಿ, ಗುರುಪ್ರಸಾದ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಸ್ವಾತಿ ಪದವೀಧರೆ. ಉದ್ಯೋಗಸ್ಥೆ. ಅಜ್ಜಿ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಿಂದ ಭಾಗವತಿಕೆಯನ್ನು ಅಭ್ಯಸಿಸಿ ರಂಗಪ್ರವೇಶ ಮಾಡಿರುತ್ತಾಳೆ. ಪ್ರದರ್ಶನಗಳಲ್ಲಿ ಹಾಡುತ್ತಿದ್ದಾಳೆ. ಶಾಸ್ತ್ರೀಯ ಸಂಗೀತ ಮತ್ತು ವೀಣೆಯನ್ನು ಅಭ್ಯಸಿಸಿರುತ್ತಾಳೆ. ಪುತ್ರ ಶ್ರೇಯಸ್ ಪ್ರಥಮ ಪಿಯುಸಿ ವಿದ್ಯಾರ್ಥಿ. ಶಾಸ್ತ್ರೀಯ ಸಂಗೀತ ಮತ್ತು ಕೊಳಲು ಅಭ್ಯಸಿಸಿದ್ದಾನೆ.
ಬೈಪಾಡಿತ್ತಾಯ ದಂಪತಿಗಳ ದ್ವಿತೀಯ ಪುತ್ರ ಶ್ರೀ ಅವಿನಾಶ್ ಬೈಪಾಡಿತ್ತಾಯ. ಬಿ.ಎಸ್ ಸಿ ಪದವೀಧರರು. ಬೆಂಗಳೂರಿನಲ್ಲಿ ಪತ್ರಕರ್ತರು. ಕಳೆದ ಎರಡು ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯ ಉದ್ಯೋಗಿ. ಹದಿನಾಲ್ಕು ವರ್ಷ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಚಿಕ್ಕವನಿರುವಾಗಲೇ ಮದ್ದಳೆ ಕಲಿತಿದ್ದರು. ಅವಕಾಶ ಸಿಕ್ಕಾಗ ಪ್ರದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ಮತ್ತು ಊರಿನ ಯಕ್ಷಗಾನ ಸಂಬಂಧೀ ಕಾರ್ಯಕ್ರಮಗಳಲ್ಲಿ ಸಕ್ರಿಯರು. ಇವರು ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಪತ್ನಿ ಶ್ರೀಮತಿ ವಾಣಿ ಅವಿನಾಶ್. ಕಲಾಸಕ್ತೆ. ಇವರು ಫ್ಯಾಶನ್ ಡಿಸೈನ್ ಉದ್ಯೋಗ ಮಾಡುತ್ತಾರೆ. ವಾಣಿ, ಅವಿನಾಶ್ ಬೈಪಾಡಿತ್ತಾಯ ದಂಪತಿಗಳ ಪುತ್ರ ಅಭಿಷೇಕ್ ಬೈಪಾಡಿತ್ತಾಯ ದ್ವಿತೀಯ ಪದವಿ ವಿದ್ಯಾರ್ಥಿ. ಅಜ್ಜ, ಅಜ್ಜಿಯರಿಂದ ಯಕ್ಷಗಾನ ಹಿಮ್ಮೇಳ ಕಲಿತು ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾನೆ.
ಶ್ರೀ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ದಂಪತಿಗಳು ಸೊಸೆಯಂದಿರ ಬಗೆಗೆ ಮೆಚ್ಚುಗೆಯ ನುಡಿಗಳನ್ನು ಆಡುತ್ತಾರೆ. ಕಲಾಸೇವೆಯನ್ನು ಎಷ್ಟು ಹೊತ್ತಿಗೆ ಮುಗಿಸಿ ಮನೆಗೆ ಬಂದರೂ ಬಳಿ ಬಂದು ಮಧುರ ಮಾತುಗಳಿಂದ ನುಡಿಸಿ ಶ್ರಮವನ್ನು ತಣಿಸುವ ಸೊಸೆಯಂದಿರ ಬಗೆಗೆ ಬೈಪಾಡಿತ್ತಾಯ ದಂಪತಿಗಳು ಮೆಚ್ಚುಗೆಯನ್ನು ಸೂಚಿಸುತ್ತಾರೆ. ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ದಂಪತಿಗಳಿಗೆ ಹಾಗೂ ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನು ಅನುಗ್ರಹಿಸಲಿ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ