ತೆಂಕುತಿಟ್ಟು ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ ವಿಶೇಷ ಸ್ಥಾನ, ಗೌರವಗಳ ಜತೆ ಪ್ರದರ್ಶಿಸುವಲ್ಲಿ ತನ್ನದೇ ಆದ ರೀತಿ, ನಿಯಮಗಳೂ ಇವೆ. ಇದು ವೇಗದ ಯುಗ. ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ ಬಣ್ಣದ ವೇಷಗಳಿಗೆ ಅವಕಾಶ, ಪ್ರೋತ್ಸಾಹಗಳು ಸರಿಯಾಗಿ ದೊರಕುತ್ತಿಲ್ಲ ಎಂಬ ಮಾತು ಕೇಳಿ ಬಂದರೆ ಅದು ತಪ್ಪಾಗದು.
ಹಾಗಾಬಾರದು. ಯಕ್ಷಗಾನದಲ್ಲಿ ಬಣ್ಣ ಎಂಬ ವಿಭಾಗವು ಬಲಿಷ್ಠವಾಗಿಯೇ ಇರಬೇಕು. ಅದು ಸೊರಗಲೇ ಬಾರದು. ಸೊರಗಿದರೆ ಯಕ್ಷಗಾನದ ಸೌಂದರ್ಯವೂ ನಷ್ಟವಾಗುವುದೆಂದು ನಮಗೆಲ್ಲರಿಗೂ ತಿಳಿದಿದೆ. ಖಂಡಿತವಾಗಿಯೂ ಬಣ್ಣದ ವೇಷಗಳಿಗೆ ಬೇಕಾದಷ್ಟು ಸಮಯ ಅವಕಾಶಗಳು ಮುಂದಿನ ದಿನಗಳಲ್ಲಿ ಸಿಗಲಿ. ಯಕ್ಷಗಾನದಲ್ಲಿ ಆ ವಿಭಾಗವು ವಿಜೃಂಭಿಸಲಿ ಎಂದು ಹಾರೈಸೋಣ.
ಇಂದು ತೆಂಕುತಿಟ್ಟು ಯಕ್ಷಗಾನದಲ್ಲಿ ಅನೇಕ ಕಲಾವಿದರು ಬಣ್ಣದ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜ ಬದುಕಿನಲ್ಲಿ ಸಾತ್ವಿಕರಾದರೂ ರಂಗದಲ್ಲಿ ಅಸುರರಾಗಿ ಅಬ್ಬರಿಸುತ್ತಿದ್ದಾರೆ. ಇದುವೇ ಪರಕಾಯ ಪ್ರವೇಶ. ಪಾತ್ರಗಳನ್ನು ಕಟ್ಟಿಕೊಡುವ ರೀತಿ. ಪಾತ್ರಗಳ ಸ್ವಭಾವಗಳನ್ನು ಅರಿತು ಅಭಿನಯಿಸುವ ಕಲೆಯು. ಹಿರಿಯ ಕಲಾವಿದರ ಜತೆಗೆ ಉದಯೋನ್ಮುಖ ಬಣ್ಣದ ವೇಷಧಾರಿಗಳೂ ಬೆಳೆದು ಅನುಭವಗಳನ್ನು ಗಳಿಸಿಕೊಳ್ಳುತ್ತಿದ್ದಾರೆ.
ಶ್ರೀ ಶಶಿಧರ ಶೆಟ್ಟಿ ಪಂಜ, ಕೊಯಿಕುಡೆ ಅವರು ಕಟೀಲು ಮೇಳದ ಅನುಭವಿ ಬಣ್ಣದ ವೇಷಧಾರಿ. ಕಳೆದ ಮೂವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ಶಶಿಧರ ಶೆಟ್ಟಿ ಅವರು ಮಂಗಳೂರು ತಾಲೂಕಿನ ಪಂಜ ಕೊಯಿಕುಡೆ ಗ್ರಾಮದ ಮೂಡುಮನೆಯಲ್ಲಿ ಶ್ರೀ ನಾರಾಯಣ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ಶೆಟ್ಟಿ ದಂಪತಿಗಳ ಪುತ್ರನಾಗಿ 1968 ನವೆಂಬರ್ 22ರಂದು ಜನಿಸಿದರು. ಶ್ರೀ ನಾರಾಯಣ ಶೆಟ್ಟರು ಕೃಷಿಕರು. ಯಕ್ಷಗಾನ ಕಲಾಸಕ್ತರೂ ಆಗಿದ್ದರು.
ಶಶಿಧರ ಶೆಟ್ಟಿ ಅವರಿಗೆ ಬಾಲ್ಯದಲ್ಲಿ ಯಕ್ಷಗಾನಾಸಕ್ತಿ ಇತ್ತು. ಊರಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ಶಾಲಾ ಕಲಿಕೆ 6ನೇ ತರಗತಿ ವರೆಗೆ. ಪಕ್ಷಿಕೆರೆ ಶಾಲೆಯ ವಿದ್ಯಾರ್ಥಿಯಾಗಿ ಓದಿದ್ದರು. ಹೆಚ್ಚಿನ ಕಲಿಕೆಗೆ ಅವಕಾಶವಿರಲಿಲ್ಲ. ಉದ್ಯೋಗವನ್ನರಸಿ ಮುಂಬೈ ಮಹಾನಗರಿಗೆ ತೆರಳಿದರು. ಮುಂಬೈಯಲ್ಲಿ ಇರುವಾಗಲೂ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಹತ್ತು ವರ್ಷಗಳ ಕಾಲ ಮುಂಬೈ ನಗರಿಯಲ್ಲಿದ್ದು ಊರಿಗೆ ಮರಳಿದ್ದರು.
ಕಲಾವಿದನಾಗಬೇಕೆಂಬ ಆಸೆಗೆ ಆಸರೆಯಾದುದು ಶ್ರೀ ಬಪ್ಪನಾಡು ಮೇಳ. ಶ್ರೀ ಶಶಿಧರ ಶೆಟ್ಟಿ ಅವರು ಮೊದಲು ತಿರುಗಾಟ ನಡೆಸಿದ್ದು ಅಡ್ಯಾರು ಶ್ರೀ ಶಂಕರ ಆಳ್ವರ ನೇತೃತ್ವದ ಬಪ್ಪನಾಡು ಮೇಳದಲ್ಲಿ. ಹೆಜ್ಜೆಗಾರಿಕೆಯನ್ನು ಕಲಿಯುತ್ತಾ ವೇಷ ಮಾಡಲು ತೊಡಗಿದರು. ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತೊಡಗಿಸಿಕೊಂಡು ಬಳಿಕ ಕಟೀಲು ಮೇಳಕ್ಕೆ ಸೇರಿದ್ದರು. ಕಟೀಲು 1ನೇ ಮೇಳದಲ್ಲಿ ಒಂದು ತಿರುಗಾಟದ ನಂತರ ನಾಟ್ಯ ಕಲಿಕೆಗಾಗಿ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ತೆಂಕುತಿಟ್ಟಿನ ಪ್ರಖ್ಯಾತ ಸ್ತ್ರೀ ಪಾತ್ರಧಾರಿ ಕೋಳ್ಯೂರು ಶ್ರೀ ರಾಮಚಂದ್ರ ರಾವ್ ಅವರಿಂದ ತರಬೇತಿಯನ್ನು ಹೊಂದಿದರು.
ಬಳಿಕ ಕಟೀಲು 3ನೇ ಮೇಳದಲ್ಲಿ ವ್ಯವಸಾಯ ಆರಂಭಿಸಿದ್ದರು. ಪೂರ್ವರಂಗದಲ್ಲಿ ಪೀಠಿಕಾ ಸ್ತ್ರೀ ವೇಷದಿಂದ ತೊಡಗಿ ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಮಾಡುತ್ತಾ ಸಾಗಿದರು. ಒಂಭತ್ತು ವರ್ಷಗಳ ತಿರುಗಾಟದಲ್ಲಿ ಸ್ತ್ರೀ ವೇಷ, ಪುಂಡುವೇಷ, ಕಿರೀಟ ವೇಷಗಳನ್ನು ನಿರ್ವಹಿಸಿದರು. ಬಳಿಕ ಬಲಿಪ ಶ್ರೀ ನಾರಾಯಣ ಭಾಗವತರ ಸೂಚನೆ, ಪ್ರೋತ್ಸಾಹದಂತೆ ಬಣ್ಣದ ವೇಷಗಳತ್ತ ಗಮನ ಹರಿಸಿದರು.
ಅನಿವಾರ್ಯ ಸಂದರ್ಭಗಳಲ್ಲಿ ಬಣ್ಣದ ವೇಷಗಳನ್ನು ನಿರ್ವಹಿಸಿದರೂ ಅದು ಖಾಯಂ ಆಗಿತ್ತು. ಶಶಿಧರ ಶೆಟ್ಟರು ಬಣ್ಣದ ವೇಷಧಾರಿಯಾಗಿ ಬೆಳೆಯಲು, ಕಾಣಿಸಿಕೊಳ್ಳಲು ಅದು ವೇದಿಕೆಯಾಗಿತ್ತು. ಕಳೆದ ಇಪ್ಪತ್ತೊಂದು ವರ್ಷಗಳಿಂದ ಕಟೀಲು 2ನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿರುತ್ತಾರೆ. ಇವರು ಪ್ರಸಂಗಗಳ ನಡೆಯನ್ನು ಚೆನ್ನಾಗಿ ಬಲ್ಲವರು. ಸುಲಭವಾಗಿ ಪಾತ್ರವನ್ನು ನಿರ್ವಹಿಸಲು ಇದರಿಂದ ಅನುಕೂಲವಾಗಿತ್ತು.
ಬಲಿಪರು, ಪೆರುವಾಯಿ ನಾರಾಯಣ ಭಟ್, ರೆಂಜಾಳ ರಾಮಕೃಷ್ಣ ರಾವ್, ಪೆರುವಾಯಿ ನಾರಾಯಣ ಶೆಟ್ಟಿ, ಅಜೆಕಾರು ರಾಜೀವ ಶೆಟ್ಟಿ, ಬಾಯಾರು ರಮೇಶ ಭಟ್, ದಿನೇಶ ಶೆಟ್ಟಿ ಕಾವಳಕಟ್ಟೆ, ಬಣ್ಣದ ಸುಬ್ರಾಯ, ನಾರಾಯಣ ಕುಲಾಲ್ ಮೊದಲಾದ ಅನುಭವಿಗಳ ಒಡನಾಟವು ಕಲಿಕೆಗೆ ಸಹಕಾರಿಯಾಗಿತ್ತು. ಇವರು ವೇಷಭೂಷಣ ತಯಾರಿಕೆಯಲ್ಲೂ ಅನುಭವವನ್ನು ಹೊಂದಿದ್ದಾರೆ. ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಆಶ್ರಯದಲ್ಲಿ ಕಳೆದ 5 ವರ್ಷಗಳಿಂದ ಯಕ್ಷಗಾನ ರಂಗಪ್ರಸಾಧನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಲಾವಿದನಾಗಿ ತಿರುಗಾಟ ನಡೆಸಲು ಪ್ರೋತ್ಸಾಹಿಸಿದ ಕಲ್ಲಾಡಿ ಮನೆಯ ಯಜಮಾನರುಗಳನ್ನು, ಕಟೀಲು ಶ್ರೀ ಆಸ್ರಣ್ಣ ಬಂಧುಗಳನ್ನು ಗೌರವಿಸುವ ಶ್ರೀ ಶಶಿಧರ ಶೆಟ್ಟರು, ಸಹಕರಿಸಿದ ಸಹಕಲಾವಿದರು ಮತ್ತು ಕಲಾಭಿಮಾನಿಗಳನ್ನು ಸದಾ ನೆನಪಿಸುತ್ತಾರೆ. ಕಟೀಲು ಮೇಳದ ಬಣ್ಣದ ವೇಷಧಾರಿ ಶ್ರೀ ಶಶಿಧರ ಶೆಟ್ಟರ ಪತ್ನಿ ಶ್ರೀಮತಿ ಸುನೀತಾ ಶೆಟ್ಟಿ. ಪ್ರಸ್ತುತ ಶ್ರೀ ಶಶಿಧರ ಶೆಟ್ಟಿ ದಂಪತಿಗಳು ಸಚ್ಚರಿಪೇಟೆ ಸಮೀಪದ ಬೋಳದಗುತ್ತು ಎಂಬಲ್ಲಿ ವಾಸಿಸುತ್ತಿದ್ದಾರೆ. ಇವರ ಕಲಾಸೇವೆಯು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಶ್ರೀ ಶಶಿಧರ ಶೆಟ್ಟಿ ಅವರ ಮೇಲಿರಲಿ ಎಂಬುದೇ ನಮ್ಮ ಆಶಯ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions