ಯಕ್ಷಗಾನವು ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ‘ಗಂಡುಕಲೆ’ ಎಂದೇ ಪ್ರಸಿದ್ಧವಾಗಿದೆ. ಕಾಸರಗೋಡು, ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಯಕ್ಷಗಾನದಿಂದ ದೂರವಾಗಿ ಬದುಕಲು ಸಾಧ್ಯವಿಲ್ಲ. ಈ ಅನುಪಮವಾದ ಕಲೆಯ ಹೊರತಾದ ಬದುಕನ್ನು ಈ ಪ್ರದೇಶದ ಜನರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜೀವನವು ಯಕ್ಷಗಾನ ಕಲೆಯೊಂದಿಗೆ ಜತೆಯಾಗಿ ಮುನ್ನಡೆಯುತ್ತದೆ.
ಎಲ್ಲಾ ಮನೆಗಳಲ್ಲೂ ಕಲಾವಿದರೋ, ಕಲಾಭಿಮಾನಿಗಳೋ ಇದ್ದೇ ಇರುತ್ತಾರೆ. ಇದು ನಮ್ಮ ಊರಿನ ಕಲೆ. ನಾವು ಈ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಇದ್ದೇವೆ ಎಂದು ಹೆಮ್ಮೆಯಿಂದ, ಸಂತಸದಿಂದ ಹೇಳಿಕೊಳ್ಳುತ್ತಾರೆ. ಯಕ್ಷಗಾನ ಕಲಾವಿದನಾಗಬೇಕೆಂದು ಆಸೆ ಇರುವವರಿಗೆ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಗೆ ಅವಕಾಶಗಳಿವೆ. ಜೇನು, ಮೊಸರು, ಬೆಲ್ಲ, ಸಕ್ಕರೆ, ದ್ರಾಕ್ಷಿ ಮೊದಲಾದ ವಸ್ತುಗಳೆಲ್ಲಾ ಸವಿಯಾಗಿಯೇ ಇರುತ್ತದೆ. ಎಲ್ಲರೂ ಎಲ್ಲವನ್ನೂ ಇಷ್ಟ ಪಡಲಾರರು. ಯಾರ ಮನಸ್ಸಿಗೆ ಯಾವುದು ಮೆಚ್ಚುಗೆಯೋ ಅದೇ ಅವನಿಗೆ ಸವಿಯಾಗಿರುತ್ತದೆ.
ರಂಗವೇರುವ ಅಭ್ಯಾಸಿಗಳಿಗೆ ಭಾಗವತನಾಗಬೇಕು, ಮದ್ದಳೆಗಾರನಾಗಬೇಕು, ಪುಂಡುವೇಷಧಾರಿಯಾಗಬೇಕು, ಸ್ತ್ರೀ ಪಾತ್ರಧಾರಿಯಾಗಬೇಕು ಹೀಗೆಂಬ ಗುರಿಯಿರುತ್ತದೆ. ಬೇಕಾದಂತೆ ಆಯ್ಕೆ ಮಾಡಿಕೊಂಡು ಮುಂದುವರಿಯುತ್ತಾರೆ. ಹೀಗೆ ತೊಡಗಿಸಿಕೊಂಡು ಅನುಭವಗಳಿಂದ ಪಕ್ವರಾದ ಹಿರಿಯ ಕಲಾವಿದರಲ್ಲಿ ಒಬ್ಬರು ಶ್ರೀ ಮೋಹನ ಶೆಟ್ಟಿ ಬಾಯಾರು. ಇವರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ.
ಶ್ರೀ ಮೋಹನ ಶೆಟ್ಟಿ ಬಾಯಾರು ಅವರು ತೆಂಕುತಿಟ್ಟಿನ ಖ್ಯಾತ ಸ್ತ್ರೀ ಪಾತ್ರಧಾರಿಯಾಗಿ ಮೆರೆದ ಪೈವಳಿಕೆ ಶ್ರೀ ಐತಪ್ಪ ಶೆಟ್ಟರ ಪುತ್ರ. ಪೈವಳಿಕೆ ಶ್ರೀ ಐತಪ್ಪ ಶೆಟ್ಟಿ ಮತ್ತು ಶ್ರೀಮತಿ ಕಲ್ಯಾಣಿ ಶೆಡ್ತಿ ದಂಪತಿಗಳ ಮಗನಾಗಿ 1963 ಜನವರಿ 20ರಂದು ಬಾಯಾರು ಸಮೀಪದ ಕುಳ್ಯಾರು ಎಂಬಲ್ಲಿ ಜನನ. ಐತಪ್ಪ ಶೆಟ್ಟಿ ಮತ್ತು ಕಲ್ಯಾಣಿ ದಂಪತಿಗಳಿಗೆ ಹತ್ತು ಮಂದಿ ಮಕ್ಕಳು (ಆರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು) ಗಂಡು ಮಕ್ಕಳಲ್ಲಿ ಮೋಹನ ಶೆಟ್ಟರು ನಾಲ್ಕನೆಯವರು.
ಓದಿದ್ದು 5ನೇ ತರಗತಿ ವರೆಗೆ. ಮನೆ ಸಮೀಪದ ಬಾಯಾರು ಹೆದ್ದಾರಿ ಶಾಲೆಯಲ್ಲಿ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯು ಇವರನ್ನು ಆಕರ್ಷಿಸಿತ್ತು. ಅಣ್ಣ ಶ್ರೀ ರಘುನಾಥ ಶೆಟ್ಟಿ ಬಾಯಾರು ಇವರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ತನ್ನ ಹನ್ನೆರಡನೆಯ ವರ್ಷದಲ್ಲಿ ಕುಶಲವ ಪ್ರಸಂಗದಲ್ಲಿ ಕುಶನಾಗಿ ರಂಗಪ್ರವೇಶ. ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ನಿರ್ದೇಶನ, ಭಾಗವತಿಕೆಯ ಮಕ್ಕಳ ಪ್ರದರ್ಶನದಲ್ಲಿ ಮೊದಲ ವೇಷ.
ಓದು ಮುಂದುವರಿಸಲಾಗದೆ ಕೆಲ ಸಮಯ ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಯಕ್ಷಗಾನವನ್ನೂ ವೃತ್ತಿಯಾಗಿ ಸ್ವೀಕರಿಸಿದ್ದರು. ಬಾಯಾರು ಶ್ರೀ ಮೋಹನ ಶೆಟ್ಟರು ಮೊದಲ ತಿರುಗಾಟ ಆರಂಭಿಸಿದ್ದು ಕಲ್ಲಾಡಿ ಶ್ರೀ ವಿಠಲ ಶೆಟ್ಟಿ ಅವರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. 1978-79ರಲ್ಲಿ ಪೂರ್ವರಂಗದಲ್ಲಿ ಬಾಲಗೋಪಾಲನಾಗಿ. ಪೂರ್ವರಂಗದ ಬಳಿಕ ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ನಿರ್ವಹಿಸುತ್ತಾ ಸಾಗಿದ್ದರು.
ಕರ್ನಾಟಕ ಮೇಳವು ಹೆಸರಾಂತ ಕಲಾವಿದರ ಗಡಣವಾಗಿತ್ತು. ಪ್ರದರ್ಶನಗಳನ್ನು ನೋಡುತ್ತಾ ಸತತವಾಗಿ ಅಭ್ಯಾಸ ಮಾಡುತ್ತಾ ಬೆಳೆದರು. ಪುಂಡು ವೇಷಧಾರಿಯಾಗಿ ಭಡ್ತಿಯೂ ದೊರಕಿತ್ತು. ಕರ್ನಾಟಕ ಮೇಳದಲ್ಲಿ ಹದಿನೈದು ವರ್ಷಗಳ ಕಲಾಸೇವೆ. ಬಳಿಕ ಮೇಳದ ತಿರುಗಾಟವನ್ನು ನಿಲ್ಲಿಸಿ ಮುಂಬೈಗೆ ತೆರಳಿದ್ದರು. ಮಹಾನಗರ ಮುಂಬೈಯಲ್ಲಿ ಆರು ವರ್ಷಗಳ ಕಾಲ ಉದ್ಯೋಗ ಮಾಡಿ ಊರಿಗೆ ಮರಳಿದ್ದರು.

ಮತ್ತೆ ಯಕ್ಷಗಾನ ಕ್ಷೇತ್ರಕ್ಕೆ. ಬಳಿಕ ಹನ್ನೊಂದು ವರ್ಷಗಳ ಕಾಲ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ವ್ಯವಸಾಯ. ಪುಂಡು ವೇಷ ಮತ್ತು ಕಿರೀಟ ವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀಕೃಷ್ಣ, ಭಾರ್ಗವ, ಲಕ್ಷ್ಮಣ, ಬಬ್ರುವಾಹನ,ಅಯ್ಯಪ್ಪ, ಅಭಿಮನ್ಯು, ಚಂಡಮುಂಡರು, ಅಶ್ವತ್ಥಾಮ,ಷಣ್ಮುಖ ಮೊದಲಾದ ಪಾತ್ರಗಳು ಇವರಿಗೆ ಒಳ್ಳೆಯ ಹೆಸರನ್ನು ನೀಡಿದುವು. ಜತೆಗೆ ಕಿರೀಟ ವೇಷಗಳ ನಿರ್ವಹಣೆಯನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಶ್ರೀ ಮೋಹನ ಶೆಟ್ಟರು ಕಳೆದ ಒಂಭತ್ತು ವರ್ಷಗಳಿಂದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪೀಠಿಕೆ ವೇಷಧಾರಿಯಾಗಿ ಕಟೀಲು ಮೇಳ ಸೇರಿದ ಇವರು ಈಗ ಎದುರು ವೇಷಗಳನ್ನೂ ಮಾಡುತ್ತಿದ್ದಾರೆ. ಇವರು ಯಕ್ಷಗಾನ ವೇಷಭೂಷಣ ತಯಾರಿಕಾ ಕಲೆಯನ್ನೂ ಬಲ್ಲವರು.
ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಲಹೆಯಂತೆ ಅಣ್ಣ ಶ್ರೀ ಬಾಯಾರು ರಘುನಾಥ ಶೆಟ್ಟರೊಂದಿಗೆ ಕಟೀಲು ಮೇಳದ ವೇಷಭೂಷಣ ತಯಾರಿಕೆಯಡಿ ಕಳೆದ ಹದಿಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಲಾಬದುಕಿನುದ್ದಕ್ಕೂ ಸಹಕರಿಸಿದ ಸಹಕಲಾವಿದರ, ಕಲ್ಲಾಡಿ ಮನೆಯ ಗೌರವಾನ್ವಿತ ಯಜಮಾನರುಗಳ, ಕಟೀಲು ಶ್ರೀ ಆಸ್ರಣ್ಣ ಬಂಧುಗಳ, ಪ್ರೀತಿಸುವ ಕಲಾಭಿಮಾನಿಗಳ ಸಹಕಾರವನ್ನು ಶ್ರೀ ಮೋಹನ ಶೆಟ್ಟಿ ಸದಾ ನೆನಪಿಸುತ್ತಾರೆ.
ಬಾಯಾರು ಮೋಹನ ಶೆಟ್ಟರ ಪತ್ನಿ ಶ್ರೀಮತಿ ಶೋಭಾ. ೨೦೦೦ನೇ ಇಸವಿಯಲ್ಲಿ ವಿವಾಹ. ಶ್ರೀ ಬಾಯಾರು ಮೋಹನ ಶೆಟ್ಟಿ, ಶೋಭಾ ದಂಪತಿಗಳಿಗೆ ಮೂವರು ಪುತ್ರಿಯರು. ಹಿರಿಯ ಪುತ್ರಿ ಕು| ರಕ್ಷಿತಾ. ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿ. ದ್ವಿತೀಯ ಪುತ್ರಿ ಕು| ನಿಶ್ಮಿತಾ. ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿ. ತೃತೀಯ ಪುತ್ರಿ ಕು| ಲಿಖಿತಾ. ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ. ಬಾಯಾರು ಶ್ರೀ ಮೋಹನ ಶೆಟ್ಟರು ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸಮಾನವಾಗಿ ರಂಜಿಸಿದ ಹಿರಿಯ ಕಲಾವಿದರು. ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಿ ರಕ್ಷಿಸಲಿ ಎಂಬ ಹಾರೈಕೆಗಳು.

- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES