ಯಕ್ಷಲೋಕದ ತಾರೆ ಮಿನುಗಿ ಮರೆಯಾಯ್ತೇನು
ಸುತ್ತ ಪಸರಿಸಿದ ಬೆಳಕೆಲ್ಲ ತಿಮಿರವಾಗಿ
ದಶಕಗಳ ಕಾಲದಲಿ ಯಕ್ಷಲೋಕದಿ ಮೆರೆದ
ಅಗ್ರಗಣಿ ಪದ್ಯಾಣ ಗಣಪಣ್ಣ ಕಾಣದಾಗಿ.
ಭೌತಿಕದ ಈ ದೇಹ ತೊರೆದು ಸಾಗಿದರೇನು
ಶಾಶ್ವತದ ಸ್ಥಾನ ಜನರಮಾನಸದಲ್ಲಿ
ಅಪ್ರತಿಮ ಭಾಗವತರೆಂದು ಕೊಂಡಾಡುತಲಿ
ಗುಣಗಾನ ಗೈಯುತಿರೆ ಲೋಗರಿಲ್ಲಿ.
ಸಾಧನೆಯ ಮಾಡಿಹರು ಸನ್ಮಾನ ಪಡೆದಿಹರು
ಒಂದಲ್ಲ ಎರಡಲ್ಲ ಹಲವಾರು ಜಾಗದಲಿ
ಜನರೊಡನೆ ಒಡನಾಡಿ ಲಘುಹಾಸ್ಯದ ಮಾತು
ಮರೆಯಲಾರದ ಸತ್ಯ ಜೀವಂತವಾಗಿ.
ಖಾಲಿ ಮಾಡಿದಿರಲ್ಲ ನೀವಿದ್ದ ಜಾಗವನು
ಸರಿಸಾಟಿ ನಿಮಗ್ಯಾರು ನೀವೇ ಸಾಟಿ
ಸದ್ಗತಿಯು ನಿಮಗಿರಲಿ ದುಃಖ ಭರಿಸುವ ಶಕ್ತಿ
ಬಂಧುಗಳಿಗೆ ಮಿತ್ರರಿಗೆಲ್ಲ ಪ್ರಾಪ್ತವಾಗಿ.
ನಮನವಿದು ಅಗಲಿರುವ ನಿಮ್ಮ ದಿವ್ಯಾತ್ಮಕ್ಕೆ
ಸೇರಿದಿರಿ ಶಿವಪಾದ ಜಗವ ತೊರೆದಿಲ್ಲಿ
ನಮನವಿದೊ ಮತ್ತೊಮ್ಮೆ ನಿಮ್ಮ ವ್ಯಕ್ತಿತ್ವಕ್ಕೆ
ಬರೆದಿಹೆನು ಸಾಲುಗಳ ಅಕ್ಷರದ ರೂಪದಲ್ಲಿ.
ಕವಿ: ಗೋಪಾಲಕೃಷ್ಣ ಭಟ್, ಮನವಳಿಕೆ.12.10.2021
(ನಮ್ಮನ್ನಗಲಿದ ಯಕ್ಷಲೋಕದ ಧ್ರುವತಾರೆ ಪದ್ಯಾಣ ಗಣಪತಿ ಭಟ್ಟರಿಗೆ ನುಡಿನಮನ).
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions