ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಮತ್ತು ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಬಲ್ಲರು. ಕಲಾ ಕ್ಷೇತ್ರದಲ್ಲಿ ಬೈಪಾಡಿತ್ತಾಯ ದಂಪತಿಗಳೆಂದೇ ಇವರು ಕರೆಸಿಕೊಂಡವರು. ಕಲಾವಿದರಾಗಿ, ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ದಂಪತಿಗಳಾಗಿ ಯಕ್ಷಗಾನ ಕಲೆಗೆ ಇವರ ಕೊಡುಗೆಗಳು ಅನುಪಮವಾದುದು.
ತಾವು ಅಭ್ಯಸಿಸಿದ ಕಲಾವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟು ಅನೇಕ ಶಿಷ್ಯರನ್ನು ಸಿದ್ಧಗೊಳಿಸಿ ಕಲಾ ಮಾತೆಯ ಮಡಿಲಿಗಿಕ್ಕಿದ ಕೀರ್ತಿ ಇವರಿಗಿದೆ. ಬೈಪಾಡಿತ್ತಾಯ ದಂಪತಿಗಳ ಅನೇಕ ಶಿಷ್ಯರು ಇಂದು ವೃತ್ತಿ ಕಲಾವಿದರಾಗಿ ತೆಂಕುತಿಟ್ಟಿನ ಮೇಳಗಳಲ್ಲಿ ರಂಜಿಸುತ್ತಿರುವುದು ಅತ್ಯಂತ ಸಂತೋಷವನ್ನು ನೀಡುವ ವಿಚಾರ.
ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಕಳೆದ ಆರು ದಶಕಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಾಡಿತ್ತಾಯರು ಕಳೆದ ಐದು ದಶಕಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಬೈಪಾಡಿತ್ತಾಯ ದಂಪತಿಗಳು ಕಳೆದ ಐದು ದಶಕಗಳಿಂದ ಜತೆ ಜತೆಯಾಗಿ ಕಲಾಸೇವೆಯನ್ನು ಮಾಡುತ್ತಾ ಮುನ್ನಡೆದವರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಗೆ ಈಗ ನಡೆಯುತ್ತಿರುವುದು 76ನೆಯ ವಯಸ್ಸು. (13. 11. 1946) ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಿಗೆ 75ನೆಯ ವಯಸ್ಸು. (23. 05. 1947) ಇವರೊಳಗೆ ವಯಸ್ಸಿನ ಅಂತರ ಕೇವಲ ಆರು ತಿಂಗಳು.

ಬೈಪಾಡಿತ್ತಾಯ ಗುರು ದಂಪತಿಗಳು ಬದುಕಿನ ಎಪ್ಪತ್ತೈದು ವಸಂತಗಳನ್ನು ಕಂಡವರು. ನೋವು ನಲಿವುಗಳನ್ನೂ ಉಂಡವರು. ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಡೆದವರು. ಕರ್ತವ್ಯವನ್ನು ಮಾಡುವಾಗ ನೋವು ಗಣನೆಗೆ ಬಾರದು. ನಲಿವನ್ನು ಸಂಭ್ರಮಿಸಲು ಸಮಯವೆಲ್ಲಿ? ಯಕ್ಷಗಾನ ಕಲಾಸೇವೆಯು ತಮ್ಮ ಉಸಿರೆಂದೇ ಭಾವಿಸಿ ಬದುಕಿದವರು. ದಂಪತಿಗಳು ಜತೆಯಾಗಿಯೇ ಮೇಳಗಳಲ್ಲಿ ಕಲಾಸೇವೆಯನ್ನು ಮಾಡಿದವರು.

ಮೇಳದ ವ್ಯವಸಾಯವನ್ನು ನಿಲ್ಲಿಸಿದ ನಂತರ ಹಿಮ್ಮೇಳ ಗುರುಗಳಾಗಿ ಕಲಿಕಾಸಕ್ತರಿಗೆ ತರಬೇತಿ ನೀಡುತ್ತಾ ಬಂದಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ( ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಹನ್ನೆರಡು ವರ್ಷ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಹತ್ತು ವರ್ಷ) ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ವತಿಯಿಂದ ನಡೆಯುತ್ತಿದ್ದ ತರಬೇತಿ ಕೇಂದ್ರದಲ್ಲೂ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಮಂಗಳೂರು ಪರಿಸರದ ಅನೇಕ ಕಡೆ ತರಬೇತಿ ನೀಡಿದ್ದರು.
ಬೈಪಾಡಿತ್ತಾಯ ಗುರು ದಂಪತಿಗಳು ಬದುಕಿನ ಎಪ್ಪತ್ತೈದು ವಸಂತಗಳನ್ನು ಕಂಡ ಈ ಸಂದರ್ಭದಲ್ಲಿ ಶ್ರೀ ಹರಿಲೀಲಾ – 75 ಎಂಬ ಕಾರ್ಯಕ್ರಮದಡಿ ನಡೆಸಿ ಸಂಭ್ರಮಿಸಿ ಗೌರವಿಸಬೇಕೆಂದು ಅವರ ಶಿಷ್ಯಂದಿರೆಲ್ಲರೂ ನಿರ್ಧರಿಸಿರುವುದು ಅಭಿನಂದನೀಯವಾದುದು. ಗುರುದಂಪತಿಗಳನ್ನು ನಮಿಸಿ ಗೌರವಿಸುವ ಈ ಸತ್ಕಾರ್ಯವು ಕಲಾಮಾತೆಯ ಅನುಗ್ರಹದಿಂದ ಯಶಸ್ವಿಯಾಗಿ ಸುಂದರವಾಗಿ ನಡೆಯಲಿ. ಎಲ್ಲೆಡೆಯಿಂದ ಎಲ್ಲಾ ರೀತಿಯ ಸಹಕಾರಗಳು ಗುರು ದಂಪತಿಗಳ ಶಿಷ್ಯಂದಿರಿಗೆ ದೊರಕಲಿ. ಬೈಪಾಡಿತ್ತಾಯ ದಂಪತಿಗಳಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯುವಂತಾಗಲಿ.
ವೃತ್ತಿ ಕಲಾವಿದರುಗಳಾದ ಶ್ರೀ ಕಡಬ ರಾಮಚಂದ್ರ ರೈ, ಅಡೂರು ಲಕ್ಷ್ಮೀನಾರಾಯಣ ರಾವ್, ಅಡೂರು ಹರೀಶ್ ರಾವ್, ಶಂಕರ ಭಟ್ ಕಲ್ಮಡ್ಕ, ಆನಂದ ಗುಡಿಗಾರ್ ಕೆರ್ವಾಶೆ, ಕಿನಿಲಕೋಡಿ ಗಿರೀಶ ಭಟ್, ಕೊಂಕಣಾಜೆ ಚಂದ್ರಶೇಖರ ಭಟ್, ಬೊಳಿಂಜಡ್ಕ ಗುರುಪ್ರಸಾದ್, ಗಿರೀಶ್ ರೈ ಕಕ್ಕೆಪದವು ಮತ್ತು ಸೋಮಶೇಖರ ಭಟ್ ಕಾಶಿಪಟ್ನ, ರಾಜೇಶ್ ಆಚಾರ್ಯ ಇವರು ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಶಿಷ್ಯಂದಿರು. ಕರುಣಾಕರ ಶೆಟ್ಟಿಗಾರ್ ಕಾಶಿಪಟ್ನ, ಶ್ರೀನಿವಾಸ ಬಳ್ಳಮಂಜ, ಮತ್ತು ಶ್ರೀಮತಿ ಶಾಲಿನಿ ಹೆಬ್ಬಾರ್ ಅವರು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ ಶಿಷ್ಯಂದಿರು. ಅಲ್ಲದೆ ಇನ್ನೂ ಅನೇಕ ಉದಯೋನ್ಮುಖರು ಬೈಪಾಡಿತ್ತಾಯ ದಂಪತಿಗಳ ಶಿಷ್ಯರಾಗಿ ಕಲಾಸೇವೆ ಮಾಡುತ್ತಿದ್ದಾರೆ. ದಿ| ಕಡಬ ನಾರಾಯಣ ಆಚಾರ್ಯರೂ ಬೈಪಾಡಿತ್ತಾಯರ ಶಿಷ್ಯರು.
ಶ್ರೀ ಹರಿಲೀಲಾ-75 ಎಂಬ ಈ ಸತ್ಕಾರ್ಯವು ನವೆಂಬರ್ 7ರಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯಲಿರುವುದು. ಶ್ರೀ ನಟರಾಜನ ಸನ್ನಿಧಿಯಲ್ಲಿ. ಹರನು ನಟರಾಜನೆಂದೇ ಖ್ಯಾತನು. ಯಕ್ಷಗಾನ ಕಲೆಗೆ ಸದಾ ಪ್ರೋತ್ಸಾಹ, ನೆರವನ್ನು ನೀಡುವ ಶ್ರೀ ಕ್ಷೇತ್ರದ ಆಡಳಿತವನ್ನು ಕಲಾಭಿಮಾನಿಗಳೆಲ್ಲರೂ ಪ್ರಶಂಸಿಸಲೇ ಬೇಕು. ಕಲಾಸೇವೆಯು ನಿರಂತರವಾಗಿ ನಡೆಯುವ ಪುಣ್ಯಕ್ಷೇತ್ರವಿದು.

ಬೆಳಗ್ಗೆ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವು ಆರಂಭವಾಗುತ್ತದೆ. ಬಳಿಕ ಕಿರಿಯ ಶಿಷ್ಯರಿಂದ ಸಭಾಲಕ್ಷಣ, ಪೂರ್ವರಂಗ ಪ್ರದರ್ಶನವಿದೆ. ತದನಂತರ ಸಂಪೂರ್ಣ ಮಹಿಳಾ ಹಿಮ್ಮೇಳದ ಯಕ್ಷ ನಾದೋತ್ಸವ, ವೃತ್ತಿಪರ ಶಿಷ್ಯರಿಂದ ಯಕ್ಷ ನಾದೋತ್ಸವ, ಶಿಷ್ಯರಿಂದ ಯಕ್ಷಗಾನ ಪ್ರದರ್ಶನ ನಡೆಯಲಿರುವುದು. ಅಪರಾಹ್ನ ಶ್ರೀ ಹರಿಲೀಲಾ ಯಕ್ಷಾಭಿನಂದನಂ- ಶಿಷ್ಯಾಭಿವಂದನಂ ಕಾರ್ಯಕ್ರಮ ನಡೆಯುತ್ತದೆ.
ಶ್ರೀ ಹರಿಲೀಲಾ-75 ಯಕ್ಷಗಾನ ಕಲಾಯಾನ ಹಾಗೂ ಯಕ್ಷಗಾನ ಲೀಲಾವಳಿ ಎಂಬ ಅಭಿನಂದನಾ ಗ್ರಂಥ ಪ್ರಕಟವಾಗಲಿದೆ. ಶ್ರೀ ಹರಿಲೀಲಾ ಯಕ್ಷಗಾನ ಪ್ರಶಸ್ತಿ – 2021ನ್ನು ಹಿರಿಯ ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರಿಗೆ ನೀಡಿ ಗೌರವಿಸುವ ಕಾರ್ಯಕ್ರಮವು ನಡೆಯಲಿದೆ. ಅಲ್ಲದೆ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ಸಾಧಕ ಹಿಮ್ಮೇಳ ಕಲಾವಿದರಿಗೆ ಡಿ.ಜಿ ಯಕ್ಷ ಫೌಂಡೇಶನ್ ವತಿಯಿಂದ ಪ್ರದಾನ ಮಾಡಲಾಗುವುದೆಂಬ ನಿರ್ಣಯವಾಗಿರುವುದು ಸಂತಸದ ವಿಚಾರ. ಈ ಸತ್ಕಾರ್ಯಕ್ಕೆ ಕಲಾಭಿಮಾನಿಗಳೆಲ್ಲರ ವತಿಯಿಂದ ಶುಭಾಶಯಗಳು.

- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES