ಶ್ರೀ ಪಡ್ರೆ ಕುಮಾರ ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ತೆಂಕುತಿಟ್ಟಿನ, ಕಟೀಲು ಮೇಳದ ಹಿರಿಯ ವೇಷಧಾರಿ. ಇವರೊಬ್ಬ ಸವ್ಯಸಾಚಿ ಕಲಾವಿದ. ಯಾವ ವೇಷವನ್ನೂ ಮಾಡಬಲ್ಲರು. ಇವರು ಶ್ರೀ ಪಡ್ರೆ ಚಂದು ಅವರ ಪುತ್ರ. ಶ್ರೀ ಪಡ್ರೆ ಚಂದು ಅವರನ್ನು ಕಲಾಭಿಮಾನಿಗಳೆಲ್ಲರೂ ಬಲ್ಲರು.
ಶ್ರೀ ಪಡ್ರೆ ಚಂದು ಅವರ ಪುತ್ರ ಶ್ರೀ ಪಡ್ರೆ ಕುಮಾರ ಅವರು ಕಳೆದ 57 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸರಳ, ಸಜ್ಜನ, ವಿನಯವಂತ ಹಿರಿಯ ಕಲಾವಿದ. ಪಡ್ರೆ ಕುಮಾರ ಅವರು ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಕೊಡುಂಗಾಯಿ ಸಮೀಪದ ನಡ್ಯಾಳ ಎಂಬಲ್ಲಿ ಶ್ರೀ ಪಡ್ರೆ ಚಂದು ಮತ್ತು ಭಾಗೀರಥಿ ದಂಪತಿಗಳ ಹಿರಿಯ ಮಗನಾಗಿ 1947ನೇ ಇಸವಿಯಂದು ಜನಿಸಿದರು.
ಪಡ್ರೆ ಕುಮಾರ ಅವರು ಓದಿದ್ದು 5ನೇ ತರಗತಿ ವರೆಗೆ. ಕೊಡುಂಗಾಯಿ ಶಾಲೆಯಲ್ಲಿ. ತೀರ್ಥರೂಪರು ಕಲಾವಿದರಾಗಿದ್ದ ಕಾರಣ ಸಹಜವಾಗಿ ಯಕ್ಷಗಾನಾಸಕ್ತಿ ಇತ್ತು. ಆಟಗಳನ್ನು ನೋಡುತ್ತಿದ್ದರು. ಹಗಲು ಗೆಳೆಯರ ಜತೆ ಅಣಕು ಪ್ರದರ್ಶನಗಳೂ ನಡೆಯುತ್ತಿತ್ತು. ಅಡಿಕೆ ಮರದ ಹಾಳೆಗಳನ್ನು ಕತ್ತರಿಸಿ ಕತ್ತಿ ಮತ್ತು ಕಿರೀಟಗಳನ್ನು ಸಿದ್ಧಪಡಿಸಿ ಕುಣಿಯುತ್ತಿದ್ದರು. ಗುಡ್ಡ, ಗದ್ದೆ, ಮನೆಯಂಗಳಗಳೇ ವೇದಿಕೆಯಾಗುತ್ತಿತ್ತು.
ಪಡ್ರೆ ಚಂದು ಅವರು ಆಗ ಕುಂಡಾವು ಮೇಳದಲ್ಲಿದ್ದರು. ಮನೆಯಲ್ಲಿಯೇ ಇತರ ಕಲಾವಿದರಿಗೆ ಚಂದು ಅವರು ನಾಟ್ಯ ಕಲಿಸುತ್ತಿದ್ದಾಗ ಕುಮಾರ ಅವರು ನೋಡುತ್ತಿದ್ದರು. ನೋಡುತ್ತಾ ಅದನ್ನೇ ಮೆಲುಕು ಹಾಕುತ್ತಾ ಅಭ್ಯಸಿಸುತ್ತಿದ್ದರು. ತನ್ನ ತಂದೆಯ ಜತೆ ಕುಂಡಾವು ಮೇಳಕ್ಕೆ ಬಾಲಗೋಪಾಲನಾಗಿ ರಂಗಪ್ರವೇಶ. ಸ್ತ್ರೀ ವೇಷ ಮಾಡಲು ಇವರಿಗೆ ಆಸಕ್ತಿ ಇರಲಿಲ್ಲವಂತೆ. ಭಾಗವತರು ಸ್ತ್ರೀ ವೇಷ ಮಾಡಲು ಹೇಳುತ್ತಾರೆ ಎಂದು ಗೊತ್ತಾದರೆ ಕೂಡಲೇ ಇವರಿಗೆ ಹೊಟ್ಟೆ ನೋವು ಆರಂಭವಾಗುತ್ತಿತ್ತು! ಹೊಟ್ಟೆ ನೋವಿನ ಅಭಿನಯ ಮಾಡಿ ವೇಷ ತಪ್ಪಿಸಿಕೊಂಡದ್ದೂ ಉಂಟು. ತಿರುಗಾಟ ಹೊಸತು. ಹುಡುಗಾಟಿಕೆಯೂ ಇತ್ತು.
ಪಡ್ರೆ ಕುಮಾರರ ಕನ್ನಡ ಬರವಣಿಗೆ ಅತ್ಯಂತ ಚಂದ. ಅಕ್ಷರಗಳು ಸುಂದರವಾಗಿ ಸ್ಪಷ್ಟ. ಬರೆಯುವ ಕಲೆ ಕರಗತವಾಗಿತ್ತು. ಇದನ್ನು ಕಲ್ಲಾಡಿ ಕೊರಗ ಶೆಟ್ರು ಗಮನಿಸುತ್ತಿದ್ದರು. ಆಟದ ನೋಟೀಸ್, ವಾಲ್ ಪೋಸ್ಟ್ ವಗೈರೆಗಳನ್ನು ಬರೆಯಲು ಕುಮಾರ ಅವರಲ್ಲಿಯೇ ಹೇಳುತ್ತಿದ್ದರಂತೆ. ಕುಂಡಾವು ಮೇಳದಿಂದ ಕಟೀಲು ಮೇಳಕ್ಕೆ. 2 ತಿಂಗಳ ತಿರುಗಾಟದ ಬಳಿಕ ಯಜಮಾನರು ಕುಂಡಾವು ಮೇಳಕ್ಕೆ ಕಳುಹಿಸಿದರು. ಬಾಲಗೋಪಾಲರ ವೇಷ ಮಾಡಲು ಇವರ ಜತೆ ರಾಮ ನಾಯ್ಕ ಎಂಬ ಕಲಾವಿದರೂ ಹೋಗಿದ್ದರು. ಮತ್ತೆ ಪುನಃ ಕಟೀಲು ಮೇಳದಲ್ಲಿ ವ್ಯವಸಾಯ.

ಆಗ ವೇಷಧಾರಿಯಾಗಿದ್ದ ಪಡ್ರೆ ಚಂದು ಅವರಿಗೆ ಮೇಳದ ಮ್ಯಾನೇಜರ್ ಆಗಿ ಹೊಣೆಯೂ ಸಿಕ್ಕಿತ್ತು. ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರೂ, ಪಡ್ರೆ ಚಂದು ಅವರೂ ಎಳೆಯ ಕಲಾವಿದರಿಗೆ ಹಗಲುಆಟ ಆಡಬಾರದು, ಓದಬೇಕು, ಕುಣಿಯಲು ಕಲಿಯಬೇಕು ಎಂಬ ಅಪ್ಪಣೆ ಕೊಟ್ಟಿದ್ದರು. ಆಗಾಗ ಎಚ್ಚರಿಸುತ್ತಲೂ ಇದ್ದರು. ಕುಮಾರ ಅವರು ಹಂತ ಹಂತವಾಗಿ ಕಲಾವಿದರಾಗಿ ಬೆಳೆಯುತ್ತಾ ಸಾಗಿದರು. ನಾಟ್ಯದಲ್ಲಿ ಹಿಡಿತವನ್ನೂ ಸಾಧಿಸಿದರು. ವಾಹನ ಸೌಕರ್ಯಗಳಿಲ್ಲದೆ ಸರಂಜಾಮುಗಳನ್ನು ಹೊತ್ತು ನಡೆದುಕೊಂಡೇ ಸಾಗುತ್ತಿದ್ದ ಕಾಲದಲ್ಲಿ ಕಲಾವಿದರಾಗಿ ಬೆಳೆದ ಕಾರಣ ಪಡ್ರೆ ಕುಮಾರರಿಗೆ ಕಷ್ಟದ ಬದುಕಿನ ಅರಿವಿದೆ.
ಕಟೀಲು ಎರಡನೇ ಮೇಳ ಆರಂಭವಾದಾಗ ಪಡ್ರೆ ಕುಮಾರ ಸದ್ರಿ ಮೇಳಕ್ಕೆ ಸೇರಿದ್ದರು. ಮ್ಯಾನೇಜರ್ ಆಗಿ ಹೊಣೆಯೂ ಬಂದಿತ್ತು. 3ನೇ ಮೇಳ ಆರಂಭವಾದಾಗ ಮತ್ತು 4ನೇ ಮೇಳ ಆರಂಭವಾದಾಗ ಆ ಮೇಳಗಳಲ್ಲಿ ಕಲಾವಿದನಾಗಿಯೂ, ವ್ಯವಸ್ಥಾಪಕನಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ನಾಲ್ಕು ವರ್ಷಗಳಿಂದ ಕಟೀಲು 3ನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪಡ್ರೆ ಕುಮಾರರಿಗೆ ಹೆಚ್ಚಿನ ಎಲ್ಲಾ ಹಿರಿಯ ಶ್ರೇಷ್ಠ ಕಲಾವಿದರೆಲ್ಲರ ಒಡನಾಟವಿದೆ. ಅವರೊಂದಿಗೆ ತಿರುಗಾಟ ಮಾಡಿದ ಕಾರಣದಿಂದ ಅನುಕೂಲವೂ ಆಗಿದೆ.

ಪುಂಡು ವೇಷ, ಕಿರೀಟ ವೇಷ ಅಲ್ಲದೆ ಹಾಸ್ಯ ಪಾತ್ರಗಳನ್ನೂ ಮಾಡಬಲ್ಲರು. ನಂದಿಶೆಟ್ಟಿ, ಕೊರವಂಜಿ, ಬಕುಳಾದೇವಿ ಮೊದಲಾದ ಪಾತ್ರಗಳನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ. ಪಡ್ರೆ ಚಂದು ಅವರಂತೆ ಒಳ್ಳೆಯ ರೂಪ ಹುಟ್ಟಿನಿಂದಲೇ ಬಂದ ಕಾರಣ ವೇಷಗಳನ್ನೆಲ್ಲಾ ಮೊದಲ ನೋಟಕ್ಕೇ ಪ್ರೇಕ್ಷಕರು ಸ್ವೀಕರಿಸುತ್ತಾರೆ. ನಾಟ್ಯವೂ ಬಲು ಚಂದ. ಪಾತ್ರಕ್ಕೆ ಬೇಕಾಗುವಷ್ಟೇ ಹಿತಮಿತವಾದ ಮಾತುಗಳು. ತನ್ನನ್ನು ತಾನು ಉದ್ಘೋಷಿಸಿಕೊಳ್ಳರು.
“ನಾನು ಹೆಚ್ಚು ತಿಳಿದವನಲ್ಲ. ಕೊಟ್ಟ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತಾಡಿ ವೇಷ ಮಾಡುವ ಅಭ್ಯಾಸವನ್ನು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ನಾನು ಒಳ್ಳೆಯ ಮಾತುಗಾರನಲ್ಲವೆಂದು ತಿಳಿದಿದೆ. ಮಾಡುವ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಕಲೆಗಿಂತ ಕಲಾವಿದ ದೊಡ್ಡವನಲ್ಲ. ಎಲ್ಲಕ್ಕಿಂತ ಹೆಚ್ಚು ನಾನೊಬ್ಬ ಯಕ್ಷಗಾನ ಕಲಾವಿದ ಎಂದು ಹೇಳುವ ಭಾಗ್ಯ ಸಿಕ್ಕಿದ್ದು ಸಂತೋಷದ ವಿಚಾರ” ಇದು ಪಡ್ರೆ ಕುಮಾರರ ಅಭಿಪ್ರಾಯ.
ಶ್ರೀರಾಮ, ಹನುಮಂತ, ಈಶ್ವರ ಮೊದಲಾದ ಪಾತ್ರಗಳು ಪಡ್ರೆ ಕುಮಾರರಿಗೆ ಅತ್ಯಂತ ಪ್ರಿಯವಾದವು. ಪಡ್ರೆ ಕುಮಾರರು ಬಣ್ಣ ಹಾಕಿ, ಈ ವೇಷಗಳನ್ನು ಧರಿಸಿ ನಿಂತರೆ ಸಾಕು. ಮತ್ತೂ ಮತ್ತೂ ನೋಡಬೇಕೆನಿಸುವಷ್ಟು ಅಂದವಾಗಿ ಕಾಣಿಸುತ್ತಾರೆ. ಬಣ್ಣ ಮತ್ತು ವೇಷಗಾರಿಕೆಯಲ್ಲಿ ಅವರು ರಾಜಿ ಮಾಡಿಕೊಳ್ಳಲಾರರು. ನಿಷ್ಠೆಯಿಂದ ಮಾಡುತ್ತಾರೆ. ಅಂದವಾದ ಕುಣಿತವೂ ಕರಗತವಾಗಿರುವ ಕಾರಣ ಇನ್ನೇನು ಬೇಕು ರಂಗದಲ್ಲಿ ಕಾಣಿಸಿಕೊಳ್ಳಲು? ಹಿತಮಿತ ಮಾತುಗಳಿದ್ದರೆ ಅಷ್ಟೇ ಸಾಕು. ಶ್ರೀ ಪಡ್ರೆ ಕುಮಾರ ಅವರು ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ಪಳಗಿದವರು. ಕಳೆದ ನಲವತ್ತು ವರುಷಗಳಿಂದ ಕಟೀಲು ಮೇಳದ ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಕಟೀಲು ಮೇಳಕ್ಕೆ ಬಾಲಕನಾಗಿದ್ದಾಗ ಸೇರಿದ ಸಮಯ. ಪಡ್ರೆ ಕುಮಾರರು ಶ್ರೀ ಕ್ಷೇತ್ರ ಕಟೀಲಿನ ಆಶ್ರಯದಲ್ಲೇ ಎಂಟು ವರ್ಷಗಳನ್ನು ಕಳೆದಿದ್ದರು. ಸಾಂಸಾರಿಕವಾಗಿಯೂ ಇವರು ತೃಪ್ತರು. 1985ರಲ್ಲಿ ಸರಸ್ವತಿ (ವಿದ್ಯಾ) ಜತೆ ವಿವಾಹ. ಪಡ್ರೆ ಕುಮಾರ ಮತ್ತು ವಿದ್ಯಾ ದಂಪತಿಗಳಿಗೆ ಮೂವರು ಮಕ್ಕಳು. (ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಪುತ್ರ). ಹಿರಿಯ ಪುತ್ರಿ ಲಾವಣ್ಯ ವಿವಾಹಿತೆ. ಪುತ್ರ ಯೋಗೀಶ ಉದ್ಯೋಗಿ. ವಿವಾಹಿತ. ಕಿರಿಯ ಪುತ್ರಿ ವಿನುತ ವಿವಾಹಿತೆ. ಮೊಮ್ಮಕ್ಕಳು ಜನಿಸಿ ಪಡ್ರೆ ಕುಮಾರಣ್ಣ ‘ಅಜ್ಜ’ ಎನಿಸಿಕೊಂಡಿದ್ದಾರೆ.
ಕೌಟುಂಬಿಕ ಸಂತೋಷ ಎಂದರೆ ಇದುವೇ ತಾನೇ. ಮಕ್ಕಳು ಮೊಮ್ಮಕ್ಕಳೊಂದಿಗೆ ಬದುಕುವುದೆಂದರೆ ಅದೊಂದು ಅವರ್ಣನೀಯ ಆನಂದಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಪತ್ನಿ ಮಗ ಮತ್ತು ಸೊಸೆ ಇವರೊಂದಿಗೆ ಕಟೀಲು ಸಮೀಪದ ಅಜಾರು ಎಂಬಲ್ಲಿ ವಾಸಿಸುತ್ತಿದ್ದಾರೆ. ಪಡ್ರೆ ಕುಮಾರ ಅವರಿಂದ ಇನ್ನಷ್ಟು ಕಲಾ ಸೇವೆ ನಡೆಯಲಿ. ಅವರಿಗೆ ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳು.
