ನಮ್ಮ ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳು ಎತ್ತ ಸಾಗುತ್ತಿವೆ ಎಂದು ಯೋಚಿಸಿದಾಗ ಕೆಲವೊಮ್ಮೆ ಮನಸ್ಸಿಗೆ ತುಂಬಾ ಖೇದವೆನಿಸುತ್ತದೆ. ಮದುವೆಯ ನಿಶ್ಚಿತಾರ್ಥವೇ ಇರಲಿ ಅಥವಾ ಹುಟ್ಟಿದ ಹಬ್ಬವೇ ಇರಲಿ. ನಾವು ನಮ್ಮತನ ಮತ್ತು ನಮ್ಮ ಸನಾತನ ಹಿಂದೂ ಸಂಪ್ರದಾಯವನ್ನು ಮರೆತುಬಿಡುತ್ತೇವೆ. ಈಗ ಎಲ್ಲವೂ ಪಾಶ್ಚಾತ್ಯಮಯ. ನಿಶ್ಚಿತಾರ್ಥಕ್ಕೆ ವಧೂವರರು ಪರಸ್ಪರ ಉಂಗುರ ಬದಲಾಯಿಸಬೇಕು. ಅದೂ ಅಲ್ಲದೆ ಪ್ರಿ ವೆಡ್ಡಿಂಗ್ ಫೋಟೋಶೂಟ್, ವೀಡಿಯೊ ಶೂಟ್ ಬೇಕೇ ಬೇಕು. ಮದುವೆಯ ನಂತರದ ಶೃಂಗಾರ ಚೇಷ್ಟೆಗಳೆಲ್ಲಾ ಈ ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ಬರಬೇಕು. ಹುಟ್ಟುಹಬ್ಬವಂತೂ ಈಗ ಸಂಪೂರ್ಣ ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಿದೆ.
ಆದರೆ ಇದಕ್ಕೆ ಅಪವಾದವೋ ಎಂಬಂತೆ ಇಂದೊಂದು ಹುಟ್ಟಿದ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡೆ. ನಿವೃತ್ತ ಭಾರತೀಯ ಆಡಳಿತ ಸೇವೆಯ ಅಧಿಕಾರಿ ತಿಂಗಳಾಡಿಯ ಶ್ರೀ ಪ್ರಮೋದ ಕುಮಾರ್ ರೈಯವರ ಮೊಮ್ಮಗನ ಹುಟ್ಟಿದ ಹಬ್ಬ. ಆದರೆ ಹುಟ್ಟಿದ ಹಬ್ಬವೆಂದು ಸಮಾರಂಭದ ಕೊನೆಯಲ್ಲಿ ಗೊತ್ತಾದದ್ದು. ಈ ರಹಸ್ಯವನ್ನು ಹೇಳದೆ ಕೊನೆಯವರೆಗೂ ಕಾಪಾಡಿಕೊಂಡು ಬಂದಿದ್ದರು.
ಅವರ ಆಮಂತ್ರಣದ ಕರೆ ಬಂದಾಗ ಸಹಜವಾಗಿಯೇ ಯಾಕೆಂದು ಕೇಳಿದ್ದೆ. ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಸಾಹಿತ್ಯಸೇವೆಯಲ್ಲಿ ನಿರತರಾಗಿರುವವರನ್ನು ಗೌರವಿಸುವ ಕಾರ್ಯಕ್ರಮವೆಂದು ಹೇಳಿದ್ದರು. ಸಂಜೆ ಏಳು ಘಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸಾಹಿತಿಗಳು ಅಥವಾ ಸಾಹಿತ್ಯಪ್ರೇಮಿಗಳು, ಪುಸ್ತಕ ಪ್ರೇಮಿಗಳನ್ನು ಗೌರವಿಸಲಾಗಿತ್ತು. ಪ್ರತಿಯೋರ್ವರನ್ನೂ ಗೌರವಿಸುವಾಗ ಅವರ ವಿವರಗಳನ್ನು ಸ್ವತಃ ಪ್ರಮೋದ್ ಕುಮಾರ್ ರೈಯವರೇ ಹೇಳುತ್ತಿದ್ದರು.
ಇದೊಂದು ವಿಶಿಷ್ಟ ರೀತಿಯಲ್ಲಿ ಆಯೋಜಿಸಿದ ಸಮಾರಂಭ. ತಲೆಚಿಟ್ಟು ಹಿಡಿಸುವ ಸ್ವಾಗತ, ನಿರೂಪಣೆ, ಧನ್ಯವಾದಗಳಿಲ್ಲದೆ ಅಚ್ಚುಕಟ್ಟಾದ ಸೊಗಸಾದ ಕಾರ್ಯಕ್ರಮ. ಎಲ್ಲವನ್ನೂ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ಪ್ರಮೋದ್ ಕುಮಾರ್ ರೈಯವರೇ ನಿರ್ವಹಿಸಿದರು. ಸಾಹಿತ್ಯ ಕರ್ಮಿಗಳನ್ನು ಗೌರವಿಸುವಾಗ ನಾನೊಂದು ವಿಚಾರ ಗಮನಿಸಿದೆ. ವೇದಿಕೆಯ ಆಸನದ ಹಿಂಭಾಗದಲ್ಲಿ ಮೂರು ದಿನಪತ್ರಿಕೆಗಳನ್ನು ನೇತಾಡಿಸಿದ್ದರು. ಅದು ಇಂದಿನ ಪತ್ರಿಕೆಯೇ ಆಗಿರಬೇಕೆಂದು ಭಾವಿಸಿದೆ.
ಪ್ರಮೋದ್ ಕುಮಾರ್ ರೈಗಳ ಸಾಹಿತ್ಯ, ಪತ್ರಿಕಾ ಪ್ರೇಮದ ಬಗ್ಗೆ ಆಶ್ಚರ್ಯವಾಯಿತು. ಅದಕ್ಕಾಗಿಯೇ ಪತ್ರಿಕೆಗಳನ್ನು ಅಲ್ಲಿ ಹಾಕಿದ್ದಿರಬಹುದು ಎಂದು ತರ್ಕಿಸಿದೆ. ಆದರೆ ಕಾರ್ಯಕ್ರಮದ ಕೊನೆಯ ಹಂತದಲ್ಲಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಪ್ರಮೋದ್ ಕುಮಾರ್ ರೈಗಳ ಸೂಚನೆಯಂತೆ ಆ ಹಳೆಯ ದಿನಪತ್ರಿಕೆಗಳನ್ನೂ ಅಲ್ಲಿಂದ ತೆಗೆಯಲಾಯಿತು! ಆಗ ಅಲ್ಲಿ ‘HAPPY BIRTHDAY’ ಎನ್ನುವ ಬರಹ ಗೋಚರಿಸಿತು.
ತಮ್ಮ ಮೊಮ್ಮಗನ ಜನ್ಮದಿನವನ್ನು ಈ ರೀತಿ ಸಾಹಿತಿ, ಸಾಹಿತ್ಯ ಪ್ರೇಮಿಗಳನ್ನು ಗೌರವಿಸಿ ಆಚರಿಸುವ ತಮ್ಮ ನಿರ್ಧಾರವನ್ನು ರೈಗಳು ಈ ರೀತಿ ಬಹಿರಂಗಪಡಿಸಿದರು. ಇಂತಹದೊಂದು ಅಪೂರ್ವ ಹಾಗೂ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಎಲ್ಲರಿಗೂ ಧನ್ಯತಾಭಾವ. ಇದೊಂದು ಅವರ್ಣನೀಯ ಅನುಭವ. ಜನಮ ದಿನವನ್ನು ಹೀಗೂ ಆಚರಿಸಬಹುದಲ್ಲ ಎಂಬ ಉದ್ಘಾರ ನನ್ನ ಬಾಯಿಯಿಂದ ನನಗರಿವಿಲ್ಲದೆ ಹೊರಬಂತು. ಆಮೇಲೆ ಇನ್ನುಳಿದ ಅತಿಥಿ ಸತ್ಕಾರ ಕೂಟ ಇತ್ಯಾದಿಗಳು ಜರಗಿದುವು. ಕಾರ್ಯಕ್ರಮ ಮುಗಿದು ಮನೆಗೆ ತಲುಪುವ ವರೆಗೂ ಮನಸ್ಸು ಅದೇ ಗುಂಗಿನಲ್ಲಿ ವಿಹರಿಸುತ್ತಿತ್ತು.
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
- ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ಪ್ರದಾನ – ಭೀಷ್ಮ ವಿಜಯ ತಾಳಮದ್ದಳೆ