Thursday, November 21, 2024
Homeಯಕ್ಷಗಾನಅನುಭವಿ ಪುಂಡುವೇಷಧಾರಿ - ಶ್ರೀ ರತ್ನಾಕರ ಹೆಗ್ಡೆ ಪುತ್ತೂರು

ಅನುಭವಿ ಪುಂಡುವೇಷಧಾರಿ – ಶ್ರೀ ರತ್ನಾಕರ ಹೆಗ್ಡೆ ಪುತ್ತೂರು

ತೆಂಕುತಿಟ್ಟು ಯಕ್ಷಗಾನದಲ್ಲಿ ಇಂದು ಅನೇಕ ಪುಂಡುವೇಷಧಾರಿಗಳು ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಪ್ರವೇಶ, ಗಿರಕಿ, ಹುಡಿನಾಟ್ಯ, ಯುದ್ಧದ ಕ್ರಮಗಳು, ಜಲಕೇಳಿ, ವನವಿಹಾರ, ಯುದ್ಧರೀತಿಗಳು ಮೊದಲಾದ ಸಂದರ್ಭಗಳಲ್ಲಿ ಅಭಿನಯಿಸುತ್ತಾ ಇವರು ಪ್ರೇಕ್ಷಕರ ಮನವನ್ನು ಬೇಗನೆ ಸೂರೆಗೊಳ್ಳುತ್ತಾರೆ. ಪ್ರೇಕ್ಷಕರ ಮನವನ್ನು ಗೆಲ್ಲಲು ಈ ವಿಭಾಗದಲ್ಲಿ ಅವಕಾಶಗಳು ಧಾರಾಳವಾಗಿ ದೊರೆಯುತ್ತವೆ. ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಅದು ಪಾತ್ರೋಚಿತವಾಗಿಯೇ ಇರಬೇಕೆಂಬ ಎಚ್ಚರಿಕೆಯು ಇದ್ದಾಗ ಪಾತ್ರದ ಜತೆ ಪಾತ್ರವನ್ನು ಧರಿಸಿದ ಕಲಾವಿದನೂ ಗೆಲ್ಲುತ್ತಾ ಸಾಗುತ್ತಾನೆ. ಮುಂದು ಅವನೊಬ್ಬ ಶ್ರೇಷ್ಠ ಪುಂಡು ವೇಷಧಾರಿಯೇ ಆಗುತ್ತಾನೆ. ಹೀಗೆ ಸಾಗಿ ಬಂದ ಪುಂಡು ವೇಷಧಾರಿಗಳಲ್ಲೊಬ್ಬರು ಪುತ್ತೂರು ಶ್ರೀ ರತ್ನಾಕರ ಹೆಗ್ಡೆ ಅವರು.

ಇವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ಶ್ರೀ ರತ್ನಾಕರ ಹೆಗ್ಡೆ ಅವರ ಮೂಲಮನೆ ಪುತ್ತೂರು ಸಮೀಪದ ಬಪ್ಪಳಿಗೆ. ಶ್ರೀ ಕರುಣಾಕರ ಹೆಗ್ಡೆ ಮತ್ತು ಶ್ರೀಮತಿ ಸುಲೋಚನಾ ದಂಪತಿಗಳ ಪುತ್ರನಾಗಿ ಮಂಗಳೂರಿನಲ್ಲಿ 1966, ಜೂನ್ 28ರಂದು ಜನನ. ಕರುಣಾಕರ ಹೆಗ್ಡೆ ಅವರ ಎಂಟು ಮಂದಿ ಮಕ್ಕಳಲ್ಲಿ (ಐದು ಗಂಡು ಮತ್ತು ಮೂರು ಹೆಣ್ಣು) ರತ್ನಾಕರ ಹೆಗ್ಡೆ ಕಿರಿಯವರು.

ಕರುಣಾಕರ ಹೆಗ್ಡೆ ಅವರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೂವತ್ತೈದು ವರ್ಷಗಳ ಸೇವೆ ಸಲ್ಲಿಸಿದವರು.(ಮಂಗಳೂರು). ಇವರು ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳನ್ನು ಕಲಿತು ಕಲಾವಿದರಾಗಿದ್ದರು. ರತ್ನಾಕರ ಹೆಗ್ಡೆ ಅವರು ಓದಿದ್ದು ಎಂಟನೆಯ ತರಗತಿಯ ವರೆಗೆ, ಮೂರನೆಯ ತರಗತಿಯ ವರೆಗೆ ಮಂಗಳೂರಿನಲ್ಲಿ. ಬಳಿಕ ಪುತ್ತೂರಿನ ಹಾರಾಡಿ ಶಾಲೆಯಲ್ಲಿ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ಇತ್ತು. ಖ್ಯಾತ ಕಲಾವಿದ ಕೀರ್ತಿಶೇಷ ಶ್ರೀ ಪುತ್ತೂರು ನಾರಾಯಣ ಹೆಗ್ಡೆ ಅವರು ಕುಂಟುಂಬಿಕರೇ ಆಗಿದ್ದರು.

ರತ್ನಾಕರ ಹೆಗ್ಡೆಯವರು ಐದನೆಯ ತರಗತಿಯ ವಿದ್ಯಾರ್ಥಿಯಾಗಿರುವಾಗ ಪುತ್ತೂರು ಶ್ರೀಧರ ಭಂಡಾರಿ ಅವರಿಂದ ಯಕ್ಷಗಾನ ನಾಟ್ಯ ಕಲಿತರು. ಪುತ್ತೂರಿನ ಹೆಗ್ಡೆ ಸಮಾಜದವರು ಪುತ್ತೂರು ನಾರಾಯಣ ಹೆಗ್ಡೆಯವರ ಅಳಿಯ ಶ್ರೀ ವಾಸುದೇವ ಹೆಗ್ಡೆ ಅವರ ನೇತೃತ್ವದಲ್ಲಿ ನಡೆಸಿದ ಪ್ರದರ್ಶನವಾದ ಗುರುದಕ್ಷಿಣೆ ಪ್ರಸಂಗದಲ್ಲಿ ರತ್ನಾಕರ ಹೆಗ್ಡೆ ಅವರು ಅರ್ಜುನನಾಗಿ ರಂಗ ಪ್ರವೇಶ ಮಾಡಿದರು. ಬಳಿಕ ಭಾರ್ಗವ, ಜಯಂತ, ಷಣ್ಮುಖ, ಲಕ್ಷ್ಮಣ, ಅತಿಕಾಯನ ಪಾತ್ರಗಳನ್ನು ಮಾಡಿದ್ದರು. 1980ರಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳಕ್ಕೆ ಸೇರಿ ಮೂರು ವರ್ಷಗಳ ತಿರುಗಾಟ ನಡೆಸಿದ್ದರು.

ಬಳಿಕ ಸುಂಕದಕಟ್ಟೆ ಮೇಳದಲ್ಲಿ ಪುಂಡುವೇಷಧಾರಿಯಾಗಿ 20 ವರ್ಷ ತಿರುಗಾಟ ನಡೆಸಿದರು. ಪುತ್ತೂರು ಮೇಳದಲ್ಲಿ ಒಂದು ವರ್ಷದ ತಿರುಗಾಟದ ನಂತರ ಹೆಚ್ಚಿನ ಕಲಿಕೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ಶ್ರೀ ಕೆ.ಗೋವಿಂದ ಭಟ್ ಮತ್ತು ಅಳಿಕೆ ಶ್ರೀ ರಾಮಯ್ಯ ರೈಗಳಿಂದ ತರಬೇತಿ ಪಡೆದಿದ್ದರು. ಸುಂಕದಕಟ್ಟೆ ಮೇಳದ ಬಳಿಕ ಕುಂಟಾರು ಮೇಳದಲ್ಲಿ ಒಂದು ವರ್ಷ, ಎಡನೀರು ಮೇಳದಲ್ಲಿ ಎರಡು ವರ್ಷ, ಬಪ್ಪನಾಡು ಮೇಳದಲ್ಲಿ ಒಂದು ವರ್ಷ ವ್ಯವಸಾಯ ಮಾಡಿದ್ದರು. ಈ ಸಂದರ್ಭಗಳಲ್ಲಿ ರತ್ನಾಕರ ಹೆಗ್ಡೆಯವರು ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪುಂಡು ವೇಷಧಾರಿಯಾಗಿ ರಂಜಿಸಿದ್ದರು.

ಕೂಡ್ಲು ನಾರಾಯಣ ಬಲ್ಯಾಯ ಅವರಿಂದಲೂ ತರಬೇತಿ ಪಡೆದಿದ್ದ ಇವರು ಕಳೆದ ಹನ್ನೊಂದು ವರ್ಷಗಳಿಂದ ಕಟೀಲು ಒಂದನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪೂರ್ವರಂಗದಲ್ಲಿ ಕೋಡಂಗಿ ವೇಷದಿಂದ ತೊಡಗಿ ಹಂತ ಹಂತವಾಗಿ ಬೆಳೆದು ಬಂದವರಿವರು. ವಿಷ್ಣು, ಶ್ರೀಕೃಷ್ಣ, ಚಂಡಮುಂಡರು, ಬಬ್ರುವಾಹನ, ಅಭಿಮನ್ಯು, ಭಾರ್ಗವ, ಶ್ವೇತಕುಮಾರ, ಅಶ್ವತ್ಥಾಮ, ಅಯ್ಯಪ್ಪ ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆಯು ಜನಮೆಚ್ಚುಗೆಗೆ ಪಾತ್ರವಾಗಿದೆ. 

ಪುತ್ತೂರು ಶ್ರೀ ರತ್ನಾಕರ ಹೆಗ್ಡೆ ಅವರು ವೇಷ ಭೂಷಣ ತಯಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಧರ್ಮಸ್ಥಳದಲ್ಲಿ ಶ್ರೀ ಚಂದ್ರಶೇಖರ ಹೆಗ್ಡೆ ಮತ್ತು ಶ್ರೀ ಕಮಲಾಕ್ಷ ದೇವಾಡಿಗ ಅವರಿಂದ ಈ ಕಲೆಯನ್ನು ಅಭ್ಯಸಿಸಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಧರ್ಮಸ್ಥಳ ಮತ್ತು ಸುಂಕದಕಟ್ಟೆ ಮೇಳಗಳಿಗೆ ಬೇಕಾದ ವೇಷಭೂಷಣಗಳ ತಯಾರಿಯಲ್ಲಿ ಇವರೂ ಭಾಗವಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳಗಳ ರಂಗ ಪ್ರಸಾಧನ ಕೆಲಸವನ್ನು ಮಾಡುತ್ತಿದ್ದಾರೆ.

ಪುತ್ತೂರು ರತ್ನಾಕರ ಹೆಗ್ಡೆ ಅವರ ಅಣ್ಣಂದಿರೂ ಕಲಾವಿದರಾಗಿ ಪ್ರಸಿದ್ದರು. ಹಿರಿಯ ಅಣ್ಣ ಶ್ರೀ ದಿವಾಕರ ಹೆಗ್ಡೆ ಅವರು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದರು. ವೇಷಧಾರಿಯಾಗಿ ಯಕ್ಷಗಾನ ಮೇಳ ಮತ್ತು ಸಂಘಗಳನ್ನು ನಡೆಸಿದವರು. ಮತ್ತೊಬ್ಬ ಸಹೋದರ ಶ್ರೀ ತಿಲಕರಾಜ್ ಹೆಗ್ಡೆ ಅವರು ವೃತ್ತಿ ಕಲಾವಿದರು. ರತ್ನಾಕರ ಹೆಗ್ಡೆ ಅವರ ಪತ್ನಿ ಶ್ರೀಮತಿ ಯಶೋದ (1997ರಲ್ಲಿ ವಿವಾಹ). ಇವರಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಜೀವನ್ ರಾಜ್. ದ್ವಿತೀಯ ಪುತ್ರ ಶ್ರೀ ಭರತ್ ರಾಜ್. ಇಬ್ಬರೂ ವಿದ್ಯಾವಂತರಾಗಿ ಉದ್ಯೋಗಿಗಳಾಗಿದ್ದಾರೆ. ಪುತ್ತೂರು ರತ್ನಾಕರ ಹೆಗ್ಡೆ ಅವರು ಪ್ರಸ್ತುತ ಸುಂಕದಕಟ್ಟೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಇವರಿಗೆ ಅನುಗ್ರಹಿಸಲಿ. 

ಲೇಖಕ: ರವಿಶಂಕರ್ ವಳಕ್ಕುಂಜ 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments