Saturday, January 18, 2025
Homeಯಕ್ಷಗಾನಯಕ್ಷಾಗಸದಲ್ಲಿ ಮಿಂಚಿ ಮರೆಯಾದ ಕಲಾತಾರೆ - ಕಾಂಚನ ಶ್ರೀ ಸಂಜೀವ ರೈ

ಯಕ್ಷಾಗಸದಲ್ಲಿ ಮಿಂಚಿ ಮರೆಯಾದ ಕಲಾತಾರೆ – ಕಾಂಚನ ಶ್ರೀ ಸಂಜೀವ ರೈ

ಅನುಪಮ ಕಲೆಯಾದ ಯಕ್ಷಗಾನದಲ್ಲಿ ಸಾಧನೆಯ ಮೂಲಕವೇ ಮಿಂಚಿ, ಕಲಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿ ಅನೇಕ ಕಲಾವಿದರುಗಳು ಕೀರ್ತಿಶೇಷರಾದರು. ಪ್ರೇಕ್ಷಕರಿಗೆ ಅವರ ನೆನಪು ಸದಾ ಇರುತ್ತದೆ. ಅಂತಹ ಹಿರಿಯ ಶ್ರೇಷ್ಠ ಕಲಾವಿದರನ್ನೂ, ಅವರ ಪಾತ್ರ ನಿರ್ವಹಣೆಯನ್ನೂ ನೆನಪಿಸಿಕೊಂಡು ಕಲಾಭಿಮಾನಿಗಳು ಸಂತೋಷಪಡುತ್ತಾರೆ. ಯಕ್ಷಗಾನ ಕ್ಷೇತ್ರದಲ್ಲಿ ಸಾಧಕನಾಗಿ ಮೆರೆದು ಮರೆಯಾದ ಕಲಾವಿದರಲ್ಲಿ ಕಾಂಚನ ಶ್ರೀ ಸಂಜೀವ ರೈಗಳ ಹೆಸರು ಮೊದಲ ಸಾಲಿನಲ್ಲಿಯೇ ಇರುತ್ತದೆ. ಮರೆಯಲಾಗದ ಮರೆಯಬಾರದ ಮಹಾನುಭಾವರಿವರು. ಸದಾ ಅಧ್ಯಯನಶೀಲರಾಗಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸಮಾನವಾಗಿ ಮಿಂಚಿದ ಕಲಾವಿದರುಗಳಲ್ಲಿ ಇವರೂ ಒಬ್ಬರು.  ಕಾಂಚನ ಶ್ರೀ ಸಂಜೀವ ರೈಗಳು ಯಕ್ಷಗಾನ ಕ್ಷೇತ್ರದಲ್ಲಿ ಕಾಂಚನದಂತೆ ಹೊಳೆದು ಕಾಣಿಸಿಕೊಂಡವರು. 


ಕಾಂಚನ ಶ್ರೀ ಸಂಜೀವ ರೈಗಳ ಹುಟ್ಟೂರು ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ನಗ್ರಿಗುತ್ತು. ಶ್ರೀ ಮುಂಡಪ್ಪ ರೈ ಮತ್ತು ಶ್ರೀಮತಿ ಮುತ್ತಕ್ಕೆ ದಂಪತಿಗಳ ಪುತ್ರನಾಗಿ 1942ನೇ ಇಸವಿ ಆಗಸ್ಟ್ 24ರಂದು ಜನನ. ಶ್ರೀ ಮುಂಡಪ್ಪ ರೈಗಳು ಉತ್ತಮ ಕೃಷಿಕರು. ಮಾಣಿ ಸಮೀಪದ ಬಾರ್ದಿಲ, ಅಲ್ಲದೆ ಪೆಲತ್ತಿಮಾರು, ನಾಯ್ಲ ಎಂಬ ಸ್ಥಳಗಳಲ್ಲಿ ವಾಸವಾಗಿ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಬಳಿಕ ಕಾಂಚನ ಸಮೀಪದ ಪಾತ್ರಮಾಡಿ ಎಂಬಲ್ಲಿ ವಾಸವಾಗಿದ್ದರು. ಇವರು ಕಲಾಸಕ್ತರಾಗಿದ್ದರು. 

ಕಾಂಚನ ಶ್ರೀ ಸಂಜೀವ ರೈಗಳು ಓದಿದ್ದು ಏಳನೆಯ ತರಗತಿ ವರೆಗೆ. ಗೋಳಿತಟ್ಟು ಮತ್ತು ಕಾಂಚನ ಶಾಲೆಗಳಲ್ಲಿ. ಅನಿವಾರ್ಯ ಕಾರಣಗಳಿಂದ ಓದು ಮುಂದುವರಿಸಲಾಗಿರಲಿಲ್ಲ. ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತರಾಗಿದ್ದರು. ಹಾಗಾಗಿ ಯಕ್ಷಗಾನ ಕಲಾವಿದನಾಗುವ ಮನಮಾಡಿದ್ದರು. ಖ್ಯಾತ ಕಲಾವಿದ ಮಾಣಂಗಾಯಿ ಶ್ರೀ ಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಇವರು ಕಾಂಚನದ ಸಮೀಪವೇ ವಾಸವಾಗಿದ್ದುದು ಯಕ್ಷಗಾನ ಕಲಾಸಕ್ತರಿಗೆ ಅನುಕೂಲವೇ ಆಗಿತ್ತು. ಹಿರಿಯ ಶ್ರೇಷ್ಠ ಕಲಾವಿದ ಶ್ರೀ ಶಿವರಾಮ ಜೋಗಿಯವರು ಕಾಂಚನ ಸಂಜೀವ ರೈಗಳ ಸಹಪಾಠಿಯಾಗಿದ್ದರು.

ಹೆಜ್ಜೆಗಾರಿಕೆ ಕಲಿತು  ಕಾಂಚನ ಶ್ರೀ ಸಂಜೀವ ರೈಗಳು ತನ್ನ ಹತ್ತೊಂಭತ್ತನೆಯ ವರ್ಷದಲ್ಲಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ನೇತೃತ್ವದ ಆದಿಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಸಣ್ಣ ಪುಟ್ಟ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದು ಪಕ್ವರಾದರು. ಯಕ್ಷಗಾನ ಕ್ಷೇತ್ರದಲ್ಲೇ ಇವರನ್ನು ಮುಂದುವರಿಯಲು ಪ್ರೇರೇಪಿಸಿದವರು ಶ್ರೀ ಮಾಣಂಗಾಯಿ ಕೃಷ್ಣ ಭಟ್ ಮತ್ತು ಸಂಗೀತ ವಿದ್ವಾಂಸರಾದ ಕಾಂಚನ ಶ್ರೀ ವೆಂಕಟಸುಬ್ರಹ್ಮಣ್ಯ ಅಯ್ಯರ್. ಈ ಶ್ರೇಷ್ಠ ಕಲಾವಿದರೀರ್ವರೂ  ಕಾಂಚನ ಸಂಜೀವ ರೈಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದರು. ಸುಬ್ರಹ್ಮಣ್ಯ, ನಂದಾವರ, ವೇಣೂರು, ಸುರತ್ಕಲ್, ಕರ್ನಾಟಕ, ಕದ್ರಿ, ಪುತ್ತೂರು ಮೊದಲಾದ ಮೇಳಗಳಲ್ಲಿ ಸುಮಾರು 42 ತಿರುಗಾಟ. ಒಟ್ಟು ಐವತ್ತೊಂದು ವರ್ಷಗಳ ಕಾಲ  ಕಾಂಚನ ಸಂಜೀವ ರೈಗಳು ಯಕ್ಷಗಾನ ಕಲಾವಿದನಾಗಿ ಸೇವೆ ಸಲ್ಲಿಸಿದ್ದರು. 


ಕಾಂಚನ ಶ್ರೀ ಸಂಜೀವ ರೈಗಳು ಪುಂಡುವೇಷ ಮತ್ತು ಕಿರೀಟ ವೇಷಗಳಲ್ಲಿ  ಮಿಂಚಿದವರು. ಎಳವೆಯಲ್ಲಿ ವಿವಿಧ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ ಅನುಭವವುಳ್ಳವರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪರಿಣತಿಯನ್ನು ಹೊಂದಿದ ಶ್ರೇಷ್ಠ ಕಲಾವಿದರಿವರು. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಂದರವಾಗಿ, ಸರಳವಾಗಿ ಸಂಭಾಷಣೆಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಹೇಳುತ್ತಿದ್ದರು. ಪಾತ್ರ ನಿರ್ವಹಣೆಯಲ್ಲಿ ಭಾವನೆಗಳು ತುಂಬಿರುತ್ತಿದ್ದುವು. ಆಕರ್ಷಕವಾಗಿ, ಪ್ರಭಾವಪೂರ್ಣವಾಗಿ ಸಂಭಾಷಣೆಗಳನ್ನು ಹೇಳುತ್ತಿದ್ದರು.

ಪ್ರೇಕ್ಷಕರ ಮನಸೂರೆಗೊಳ್ಳುವ ಮಾತಿನ ಶೈಲಿಯು ಇವರಿಗೆ ಕಲಾಮಾತೆಯ ಅನುಗ್ರಹದಿಂದ ಒಲಿದಿತ್ತು. ಧರ್ಮಾಂಗದ, ವಿಷ್ಣು, ಮಾರ್ತಾಂಡತೇಜ, ಬಬ್ರುವಾಹನ, ಶ್ವೇತಕುಮಾರ, ಅಯ್ಯಪ್ಪ, ಶ್ರೀಕೃಷ್ಣ, ಕರ್ಣ, ಅತಿಕಾಯ, ಅರ್ಜುನ ಮೊದಲಾದವು  ಕಾಂಚನ ಸಂಜೀವ ರೈಗಳಿಗೆ ಹೆಸರು ಮತ್ತು ತೃಪ್ತಿಯನ್ನು ನೀಡಿದ ಪಾತ್ರಗಳು. ತುಳು ಪ್ರಸಂಗಗಳಲ್ಲಿ ಬುದ್ಧಿವಂತ, ದೇವಪೂಂಜ, ಕಾಂತಾಬಾರೆ, ಕೋಟಿ, ಚಂದನ, ಪದ್ಮತಾಮರೆ ಪ್ರಸಂಗದ ಮಂತ್ರಿ ಪದ್ಮ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಧನ ಸಂಪಾದನೆಗಿಂತಲೂ ಜನರ ಮೆಚ್ಚುಗೆ, ಪ್ರೀತಿ, ವಿಶ್ವಾಸಗಳನ್ನು ಯಕ್ಷಗಾನದಿಂದಾಗಿ ಪಡೆದಿದ್ದೇನೆ ಎಂದು ಆತ್ಮೀಯರಲ್ಲಿ ಹೇಳುತ್ತಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2009ನೇ ಸಾಲಿನ ಗೌರವ ಪ್ರಶಸ್ತಿಯನ್ನು  ಕಾಂಚನ ಶ್ರೀ ಸಂಜೀವ ರೈಗಳಿಗೆ ನೀಡಿ ಗೌರವಿಸಿದೆ. ಅಳಿಕೆ ರಾಮಯ್ಯ ರೈ ಪ್ರಶಸ್ತಿಯೂ ಇವರಿಗೆ ದೊರಕಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹವ್ಯಾಸಿ ಬಳಗ ಕದ್ರಿ ಈ ಸಂಸ್ಥೆಗಳಿಂದಲೂ ಸನ್ಮಾನಿತರಾಗಿದ್ದಾರೆ. ಮುಂಬೈ, ಮದರಾಸು, ಹೈದರಾಬಾದ್ ನಗರಗಳ ಪ್ರದರ್ಶನಗಳಲ್ಲಿ ಭಾಗಿಯಾಗಿ ಸನ್ಮಾನ, ಗೌರವಗಳನ್ನು ಪಡೆದಿರುತ್ತಾರೆ. ಇನ್ನೂ ಅನೇಕ ಕಡೆ ಸನ್ಮಾನಗಳನ್ನು ಪಡೆದ  ಕಾಂಚನ ಶ್ರೀ ಸಂಜೀವ ರೈಗಳು ಸರಕಾರವು ನೀಡುವ ಗೌರವಧನಕ್ಕೂ ಪಾತ್ರರಾಗಿದ್ದರು. ಇದು ಶ್ರೀಯುತರ ಪ್ರಾಮಾಣಿಕ ಕಲಾಸೇವೆಗೆ ಸಂದ ಗೌರವಗಳೇ ಹೌದು.  ಕಾಂಚನ ಶ್ರೀ ಸಂಜೀವ ರೈಗಳ ಜೀವಿತಾವಧಿ 1942 ಆಗಸ್ಟ್ 24 – 2013 ಮಾರ್ಚ್ 5. 


ಕಾಂಚನ ಶ್ರೀ ಸಂಜೀವ ರೈಗಳ ಪತ್ನಿ ಶ್ರೀಮತಿ ಶುಭವತಿ. ಇವರಿಗೆ ಐದು ಮಂದಿ ಮಕ್ಕಳು. (ಇಬ್ಬರು ಪುತ್ರಿಯರು ಮತ್ತು ಮೂವರು ಪುತ್ರರು) ಹಿರಿಯ ಪುತ್ರಿ ಶ್ರೀಮತಿ ಸರೋಜ. ಇವರ ಪತಿ ಶ್ರೀ ವಿಠಲ ಚೌಟರು. ಇವರು ಕೃಷಿಕರು. ಸಕಲೇಶಪುರದಲ್ಲಿ ವಾಸ್ತವ್ಯ. ಪ್ರಥಮ ಪುತ್ರ ಶ್ರೀ ರಘುನಾಥ ರೈ . ಇವರು ಪುತ್ತೂರು ನಗರಪಾಲಿಕೆಯ ಉದ್ಯೋಗಿಯಾಗಿದ್ದಾರೆ. ದ್ವಿತೀಯ ಪುತ್ರ ಶ್ರೀ ಬಾಲಚಂದ್ರ ರೈ ಕೃಷಿಕರು. ದ್ವಿತೀಯ ಪುತ್ರಿ ಶ್ರೀಮತಿ ಚಂದ್ರಾವತಿ ರೈ. ಇವರು ಹಲವು ವಿದ್ಯಾಸಂಸ್ಥೆಗಳಲ್ಲಿ ಉಪಾನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಶ್ರೀ ಸುಧಾಕರ ರೈ ಪಾಲ್ತಾಡಿ. ಇವರು ಕೃಷಿಕರು ಮತ್ತು ಫೋಟೋಗ್ರಾಫರ್. ಬೆಳ್ಳಾರೆಯ ಶೃಂಗಾರ್ ಸ್ಟುಡಿಯೋ ಮಾಲಕರು. ತೃತೀಯ ಪುತ್ರ ಶ್ರೀ ವಿಠಲ್ ರೈ. ಇವರು ಕೃಷಿಕರು ಮತ್ತು ಸ್ವಂತ ಉದ್ಯೋಗವನ್ನು ನಡೆಸುತ್ತಿದ್ದಾರೆ.  ಕಾಂಚನ ಶ್ರೀ ಸಂಜೀವ ರೈಗಳ ಮಕ್ಕಳು, ಮೊಮ್ಮಕ್ಕಳು, ಬಂಧುಗಳಿಗೆ ಕಲಾಮಾತೆಯ ಅನುಗ್ರಹವು ಸದಾ ದೊರೆಯಲಿ ಎಂಬ ಹಾರೈಕೆಗಳು. 

ಲೇಖನ: ರವಿಶಂಕರ್ ವಳಕ್ಕುಂಜ 


ಲೇಖನ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments