ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ‘ ತೊಟ್ಲಕಲ್ಲ್’ ನ ಶ್ರೀಮತಿ ಶ್ರೀದೇವಿ ಮತ್ತು ಶ್ರೀ ಶ್ರೀನಿವಾಸ ಐತಾಳ ದಂಪತಿಗಳ ಏಕ ಮಾತ್ರ ಪುತ್ರ ಶ್ರೀ ಮಂಜುನಾಥ ಐತಾಳರು ದಿನಾಂಕ. 27-10-1952 ರಲ್ಲಿ ತೊಟ್ಲಕಲ್ಲಿನಲ್ಲಿ ಜನಿಸಿದರು. ಎಳವೆಯಿಂದಲೇ ಯಕ್ಷಗಾನವೆಂದರೆ ಒಂತರಾ ಚಟ, ಒಂತರಾ ಹುಚ್ಚು . ಕಲಿತದ್ದು ಒಂದನೇ ತರಗತಿಯಾದರೂ ಯಕ್ಷಗಾನದ 30ಕ್ಕೂ ಹೆಚ್ಚು ಪ್ರಸಂಗಗಳು ಕಂಠಸ್ಥವಾಗಿತ್ತು. ಜೊತೆಗೆ ಜೈಮಿನಿ ಭಾರತ & ಕುಮಾರವ್ಯಾಸ ಭಾರತವೂ ಬಹುತೇಕ ಬಾಯಿಪಾಠ ಬರುತ್ತಿತ್ತು.
ಸಹೋದರ ವೇಂಕಟರಮಣ ಐತಾಳ್ ಬೈಲೂರು – ಶಂಕರನಾರಾಯಣ (ನೀನಾಸಂ ಹೆಗ್ಗೋಡಿನ ನಿವೃತ್ತ ಪ್ರಿನ್ಸಿಪಾಲ್) ಅವರ ಇನ್ನೊಬ್ಬ ಸಹೋದರ ಭಾಗವತರಾದ ಬೈಲೂರು ಸುಬ್ರಹ್ಮಣ್ಯ ಐತಾಳರು . (ಇವರಿಬ್ಬರೂ ಚಿಕ್ಕಪ್ಪನ ಮಕ್ಕಳು) ಇವರಿಂದ ಛಂದಸ್ಸು – ಮಟ್ಟುಗಳನ್ನು ಕಲಿತು ಸತೀ ಶೊಭಾವಳಿ – ಮಾಣಿಕ್ಯ ಪ್ರಭ – ರಾಜಾ ಸೂರ್ಯದತ್ತ – ….. ಮೊದಲಾದ 7 ಯಕ್ಷಗಾನ ಪ್ರಸಂಗಗಳನ್ನು ಬರೆವಷ್ಟು ಸ್ವಾಧ್ಯಾಯ ನಿಷ್ಠರು..
ಇವರ ಎಲ್ಲಾ ಪ್ರಸಂಗಗಳು ರಾಘವೇಂದ್ರ ಮಯ್ಯ ಹಾಲಾಡಿ ಇವರ ಭಾಗವತಿಕೆಯಲ್ಲಿ ಸೌಕೂರು ಮೇಳದಲ್ಲಿ ಹೆಚ್ಚು ಪ್ರದರ್ಶನಗಳನ್ನು ಕಂಡಿರುತ್ತವೆ. ನಮ್ಮ ಈ ಪರಿಸರದಲ್ಲಿ ಮಂಜುನಾಥ ಐತಾಳರನ್ನು ಕಂಡು ಮಾತಾಡದೇ ಇರುವ ಯಕ್ಷಗಾನ ಕಲಾವಿದರು ಇಲ್ಲವೆನ್ನಬಹುದು. ಎಂ ಎ ಹೆಗಡೆ – ಕೆ. ಗೋವಿಂದ ಭಟ್ , ವಾಸುದೇವ ಸಾಮಗ , ಆರ್ಗೋಡು ಮೋಹನದಾಸ ಶೆಣೈ, ಕಟೀಲು ವೇಂಕಟೇಶ್ವರ ಉಪಾಧ್ಯಾಯ ಮೊದಲಾದ ಅನುಭವಿಗಳೊಂದಿಗೆ ತಾಳಮದ್ದಳೆಯಲ್ಲಿಯೂ ಭಾಗವಹಿಸಿದ್ದರು. ನಮ್ಮ ಸಂಸ್ಥೆಯಲ್ಲಿ ಅವರಿಲ್ಲದೆ ತಾಳಮದ್ದಳೆ ಮಾಡಿದ್ದೇ ಇಲ್ಲ. ಜೀವನಕ್ಕಾಗಿ ಕೃಷಿ ಮತ್ತು ವೈದಿಕ ವೃತ್ತಿ ಮಾಡುತಿದ್ದರು. ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು.
ಸ್ವಲ್ಪ ಕಾಲದ ಅಸೌಖ್ಯದಿಂದ (ಒಂದು ವರ್ಷ ಮೂರು ತಿಂಗಳು – ಪಾರ್ಶ್ವವಾಯು ಆಗಿತ್ತು.). ದಿನಾಂಕ 15-08-2019 ರಂದು ಅವರ ಧರ್ಮಪತ್ನಿ ಶ್ರೀಮತಿ ಶಾರದಾ ಐತಾಳ ಸ್ವರ್ಗಸ್ಥರಾದರು. ಮನಸ್ಸಿಗೆ ದು:ಖವಿದ್ದರೂ ‘ಸಾಕ್ ಅವ್ಳ್ ಅನುಭವಿಸಿದ್ದು’ ಅನ್ನುವ ಸಮಾಧಾನಕ್ಕೆ ಬಂದಿದ್ದರು. ಅವಳ ಅಪರಕ್ರಿಯೆ ಎಲ್ಲ ಚೆನ್ನಾಗಿ ಆಗಬೇಕು ಎಂದು ಓಡಾಡಿಕೊಂಡೆ ಇದ್ದರು. ಕಾಲನ ಪಾಶ ಯಾರ ಕೊರಳಿಗೆ ಎಷ್ಟೊತ್ತಿಗೆ ಅಂತ ಯಾರು ಬಲ್ಲರು. ಅದಾದ 8 ಎಂಟನೇ ದಿನ ಮಧ್ಯಾಹ್ನ ಐತಾಳರು ಊಟ ಮಾಡುವಾಗ ‘ಸ್ವಲ್ಪ ಎದೆ ನೊವಾದ್ಹಾಂಗಿತ್ತ್ , ಬೌಶ ಗ್ಯಾಸ್ಟಿಕ್ಕೇನೊ’ ಅಂದಿದ್ದರು. ಚಾವಡಿಗೆ ಹೋಗಿ ಮಾತ್ರೆ ತೆಗೆದು ಬಾಯಿಗೆ ಹಾಕಿದ್ದರು ಅಷ್ಟೆ. ಒಳಗೆ ಹೋಗಲಿಲ್ಲ, ಅಲ್ಲೇ ಬಿದ್ದುಬಿಟ್ಟರು. ದಿನಾಂಕ 22-08-2019 ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಒಟ್ಟಿಗೆ ಬದುಕಿ ಒಟ್ಟಿಗೆ ಹೋಬಗಿಬಿಟ್ಟರು . ಅನಾಯಾಸೇನ ಮರಣಂ ಹೌದು. ಆದರೆ ಅವರಿಬ್ಬರಿಲ್ಲದೆ ಬಣಬಣಿಸುವ ಆ ಮನೆ ಅಬ್ಬಾ. !!
ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ (ರಿ.), ಮೋರ್ಟು – ಬೆಳ್ಳಾಲ.’ ಐತಾಳರು ಈ ಯಕ್ಷಕಲಾ ಸಮಿತಿಯಲ್ಲಿ 20 ವರ್ಷಗಳಿಂದ ತೊಡಗಿಸಿಕೊಂಡವರು. ನಮಗೆ ಎಲ್ಲಾ ರೀತಿಯ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುತ್ತಿದ್ದರು. ನಮ್ಮ ಈ ಹವ್ಯಾಸಿ ತಂಡಕ್ಕೆ ಆಟ – ಕೂಟಗಳಿಗೆ ಯಾವುದೇ ಪ್ರಸಂಗಕ್ಕಾದರೂ ಪದ್ಯ- ನಡೆ- ಅರ್ಥಗಾರಿಕೆಗೆ ಆಧಾರವಾಗಿದ್ದರು. ಗಟ್ಟಿಮುಟ್ಟಗಿಯೇ ಇದ್ದ ಇವರ ಆಕಸ್ಮಿಕ ಮರಣ ನಮ್ಮನ್ನೆಲ್ಲ ನಿಜಕ್ಕೂ ದುರ್ಬಲರನ್ನಾಗಿಸಿದೆ.
ಆಗ ಮಳೆಗಾಲವಾದ್ದರಿಂದ ವ್ಯವಸ್ಥೆಗಳ ಅಡಚಣೆಯಿಂದಾಗಿ (ದು:ಖದ ಭಾರದಿಂದಲೂ) ಸಂಸ್ಮರಣೆ ಕಾರ್ಯಕ್ರಮ ಮಾಡಲಾಗಲಿಲ್ಲ .
ದಿನಾಂಕ 08-02-2020 ರಂದು ಅವರ ಒಡನಾಡಿಗಳು ಹಿತೈಷಿಗಳು ಬಂಧುಗಳನ್ನೂ ಸೇರಿಸಿ ಸಂಸ್ಮರಣಾ ಕಾರ್ಯಕ್ರಮ ಮಾಡಿದೆವು ಎಂಬ ಸಮಾಧಾನದ ನಿಟ್ಟುಸಿರು.
ಬರಹ :- ಮೋರ್ಟು ರಾಘವೇಂದ್ರ ಸೋಮಯಾಜಿ
ಕಾರ್ಯದರ್ಶಿ.
ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ (ರಿ.)
ಮೋರ್ಟು – ಬೆಳ್ಳಾಲ
ಕುಂದಾಪುರ ತಾಲೂಕು – ಉಡುಪಿ ಜಿಲ್ಲೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions