Thursday, November 21, 2024
Homeಯಕ್ಷಗಾನಕಲ್ಮಡ್ಕ 'ಸಂಗಮ ಕಲಾ ಸಂಘ'ದ ರೂವಾರಿ - ದಿ| ಕೆರೆಕೋಡಿ ಪಿ. ಗಣಪತಿ ಭಟ್ಟರು

ಕಲ್ಮಡ್ಕ ‘ಸಂಗಮ ಕಲಾ ಸಂಘ’ದ ರೂವಾರಿ – ದಿ| ಕೆರೆಕೋಡಿ ಪಿ. ಗಣಪತಿ ಭಟ್ಟರು

‘ಸಂಗಮ ಕಲಾ ಸಂಘ’ ಎಂಬುದು ಸುಳ್ಯ ತಾಲೂಕಿನ ಕಲ್ಮಡ್ಕ ಪರಿಸರದಲ್ಲಿ ಕಲೆಯ ಕಂಪನ್ನು ಪಸರಿಸಿದ ಸಂಸ್ಥೆ. ಯಕ್ಷಗಾನ, ನಾಟಕ, ಸಂಗೀತ, ಭರತನಾಟ್ಯ, ತಾಳಮದ್ದಳೆ, ಸಂಗೀತ ರೂಪಕ ಮೊದಲಾದ ಕಲಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ಕಲ್ಮಡ್ಕವನ್ನು ಒಂದು ಸಾಂಸ್ಕೃತಿಕ, ಕಲಾ ಕೇಂದ್ರವನ್ನಾಗಿ ಎಲ್ಲರೂ ಗುರುತಿಸುವಂತೆ ಮಾಡಿದ ಕೀರ್ತಿಯು ಈ ಸಂಸ್ಥೆಗೆ ಸಲ್ಲುತ್ತದೆ.

ಅನೇಕ ಮಂದಿ ಕಲಾವಿದರ ಪ್ರತಿಭಾ ಪ್ರಕಟೀಕರಣಕ್ಕೆ ಈ ‘ಸಂಗಮ ಕಲಾ ಸಂಘ’ವು ವೇದಿಕೆಯಾಗಿ ಒದಗಿ ಬಂದಿತ್ತು. ಬೆಳೆಯುತ್ತಾ ಸಾಗಿ ಜನಪ್ರಿಯವಾದ ಕಲ್ಮಡ್ಕದ ‘ಸಂಗಮ ಕಲಾ ಸಂಘ’ದ ರೂವಾರಿಗಳು ಕಲಾವಿದ. ಸಮಾಜಸೇವಕ. ವೈದ್ಯ ದಿ| ಕೆರೆಕೋಡಿ ಪಂಡಿತ ಗಣಪತಿ ಭಟ್ಟರು. ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಹುಟ್ಟೂರು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಪಳ್ಳತ್ತಡ್ಕ. 1921 ಜನವರಿ 6ರಂದು ಶ್ರೀ ಶಂಭಯ್ಯ ಭಟ್ ಮತ್ತು ಶ್ರೀಮತಿ ಶಂಕರಿ ಅಮ್ಮನವರ ಪುತ್ರನಾಗಿ ಜನನ. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಓದು. ಸಂಸ್ಕೃತ ಭಾಷೆಯ ಜತೆಗೆ ಆಯುರ್ವೇದ ವೈದ್ಯ ಶಾಸ್ತ್ರವನ್ನು ಕಲಿತು ಪರಿಣತಿಯನ್ನು ಹೊಂದಿದರು.

1944ನೇ ಇಸವಿಯಲ್ಲಿ ಕಲ್ಮಡ್ಕದ ಕೆರೆಕೋಡಿ ಎಂಬಲ್ಲಿ ಬಂದು ನೆಲೆಸಿದರು. ಉತ್ತಮ ಕೃಷಿಕರಾಗಿ, ಸಮಾಜ ಸೇವಕರಾಗಿ, ಕಲಾಸಂಘಟಕರಾಗಿ, ಸಾಹಿತಿಯಾಗಿ ತಮ್ಮ ಬಹುಮುಖೀ ಪ್ರತಿಭೆಯಿಂದ ಕಲ್ಮಡ್ಕ ಎಂಬ ಊರಿನ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದ ಸಾಹಸಿ ಇವರು. ಎಳವೆಯಲ್ಲೇ ಕಲಾಸಕ್ತರಾಗಿದ್ದ ಇವರು ಕಲ್ಮಡ್ಕಕ್ಕೆ ಬಂದು ನೆಲೆಸಿದ ಮೇಲೆ ಮಿತ್ರರೂ, ಸಮಾನಮನಸ್ಕರೂ ಆಗಿದ್ದ ಶ್ರೀ ಟಿ.ಜಿ. ಮೂಡೂರು, ಶ್ರೀ ಕೆ. ಸಚ್ಚಿದಾನಂದ ಶರ್ಮ, ಮತ್ತು ಕುಂಞಿಹಿತ್ತಿಲು ರಾಮಚಂದ್ರ ಅವರ ಜತೆ ಸೇರಿ ‘ಸಂಗಮ ಕಲಾ ಸಂಘ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು(1951).

ಕಲಾಚಟುವಟಿಕೆಗಳನ್ನು ನಡೆಸುತ್ತಾ ಕಲ್ಮಡ್ಕವನ್ನು ಕಲಾ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಬೇಕಾದರೆ ಇಂತಹಾ ಒಂದು ಕಲಾಸಂಸ್ಥೆಯ ಅವಶ್ಯಕತೆಯನ್ನು ಅವರು ಮನಗಂಡಿದ್ದರು.  ಕೆರೆಕೋಡಿ ಪಂಡಿತ ಗಣಪತಿ ಭಟ್ಟರು ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಈ ಸಂಸ್ಥೆಯ ಸರ್ವತೋಮುಖ ಏಳಿಗೆಗೆ ಕಾರಣರಾಗಿದ್ದರು. ಬಳಿಕ ‘ಸಂಗಮ ಕಲಾ ಸಂಘ’ದ ಅಧ್ಯಕ್ಷರಾಗಿ ಬದುಕಿನ ಕೊನೆ ತನಕವೂ ಸೇವೆ ಸಲ್ಲಿಸಿದ್ದರು. ಯಕ್ಷಗಾನ ನಾಟಕ, ತಾಳಮದ್ದಳೆ ಕಾರ್ಯಗಳನ್ನು ಈ ಸಂಘದ ಮೂಲಕ ನಡೆಸುತ್ತಾ ಕಲ್ಮಡ್ಕ ಪರಿಸರದ ಜನರಲ್ಲಿ ಕಲಾಸಕ್ತಿಯು ಕೆರಳಲು ಕಾರಣರಾದರು. ಬಣ್ಣಗಾರಿಕೆ, ವೇಷಗಾರಿಕೆ, ಮಾತುಗಾರಿಕೆ ಈ ಎಲ್ಲಾ ವಿಭಾಗಗಳಲ್ಲೂ ಕಲಿಕಾಸಕ್ತರಿಗೆ ಇವರು ಗುರುವೇ ಆಗಿದ್ದರು.

ಅನೇಕರಿಗೆ ತರಬೇತಿಯನ್ನು ನೀಡಿ ಕಲಾವಿದರಾಗಿ ಸಿದ್ಧಗೊಳಿಸಿದ್ದರು. ಮೊದಲೆಲ್ಲಾ ಪ್ರದರ್ಶನಗಳಿಗೆ ಬೇಕಾದ ವೇಷಭೂಷಣಗಳನ್ನು ಮಂಗಳೂರಿನ ಗುಲ್ವಾಡಿ ಆರ್ಟ್ಸ್ ನಿಂದ ತರಿಸಲಾಗುತ್ತಿತ್ತು. ಸಾಗಾಣಿಕೆಯ ಕಷ್ಟವನ್ನು ಸ್ವಯಂ ಅನುಭವಿಸಿದ ಇವರು, ಸಂಘವು ತನ್ನದೇ ಆದ ವೇಷಭೂಷಣಗಳನ್ನು ಹೊಂದಬೇಕೆಂದು ನಿರ್ಧರಿಸಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಯಶಸ್ವಿಯೂ ಆದರು. ಹೀಗೆ ಯಕ್ಷಗಾನ, ನಾಟಕ ವೇಷಭೂಷಣಗಳ ತಯಾರಿಕೆಯಲ್ಲೂ  ಕೆರೆಕೋಡಿ ಪಂಡಿತ ಗಣಪತಿ ಭಟ್ಟರು ಪರಿಣತಿಯನ್ನು ಹೊಂದಿದ್ದರು. ಸಂಗಮ ಕಲಾ ಸಂಘವು ತನ್ನದೇ ಆದ ವೇಷಭೂಷಣಗಳನ್ನು ಹೊಂದಿದಾಗ ಅದರ ಹೊಣೆ ಹೊತ್ತು ತೊಡಗಿಸಿಕೊಂಡಿದ್ದರು.

ಕಲ್ಮಡ್ಕ ಅಲ್ಲದೆ ಊರ ಪರವೂರ ಕಾರ್ಯಕ್ರಮಗಳಿಗೂ ವೇಷಭೂಷಣಗಳನ್ನು ಪ್ರೀತಿಯಿಂದ ಒದಗಿಸಿ ಕಲಾಪ್ರೀತಿಯನ್ನು ಮೆರೆದರು. ರಂಗಪ್ರದರ್ಶನಗಳಲ್ಲಿ, ಪ್ರಸಾಧನದಲ್ಲಿ ತಾವೂ ಭಾಗಿಯಾಗಿ ಕಲಾಚಟುವಟಿಕೆಗಳು ನಿರಂತರವಾಗಿ ನಡೆಯಲು ಕಾರಣರಾದರು. ಮುಂದೆ ಯಕ್ಷಗಾನ ಪ್ರದರ್ಶನಗಳಿಗೆ ಕಲ್ಮಡ್ಕ ಸಂಗಮ ಕಲಾ ಸಂಘದ ವೇಷಭೂಷಣಗಳು ಅನಿವಾರ್ಯ ಎನ್ನುವಷ್ಟು ಜನಪ್ರಿಯವಾಗಲು ಕಾರಣರಾಗಿದ್ದರು  ಕೆರೆಕೋಡಿ ಪಂಡಿತ ಗಣಪತಿ ಭಟ್ಟರು. ಯಕ್ಷಗಾನದ ಒಬ್ಬ ನಿರ್ದೇಶಕರಾಗಿಯೂ ಇವರು ಪ್ರಸಿದ್ಧರಾಗಿದ್ದರು.

ಬಳಿಕ ‘ಸಂಗಮ ಸಾಹಿತ್ಯಮಾಲೆ’ ಮತ್ತು ‘ಸಂಗಮ ರಂಗಭೂಮಿ’ಯನ್ನೂ ಹುಟ್ಟುಹಾಕಿದ್ದರು. ಸಾಹಿತ್ಯ ಕೃತಿಗಳ ಪ್ರಕಾಶನ, ಯಕ್ಷಗಾನ ತರಬೇತಿ ಶಿಬಿರ. ವೇಷಭೂಷಣಗಳ ತಯಾರಿ ಕುರಿತಾದ ಕಾರ್ಯಾಗಾರ, ತರಬೇತಿ, ಸಂಗೀತ ಶಿಕ್ಷಣ, ಭರತನಾಟ್ಯ ತರಬೇತಿ, ಯಕ್ಷಗಾನ, ನಾಟಕ, ಸಂಗೀತ ರೂಪಕಗಳ ಪ್ರದರ್ಶನ ಇತ್ಯಾದಿ ಚಟುವಟಿಕೆಗಳನ್ನು ಸಂಗಮ ಕಲಾ ಸಂಘದ ಆಶ್ರಯದಲ್ಲಿ ಸದಾ ನಡೆಸುತ್ತಾ  ಬಂದವರು. ಪರಿಸರದ ಜನರಿಗೆ ಕಲಾ ರಸದೌತಣವನ್ನು ಬಡಿಸುತ್ತಾ ಕಲ್ಮಡ್ಕವನ್ನು ಸದಾ ಕ್ರಿಯಾಶೀಲವನ್ನಾಗಿರಿಸಿದ ಕೀರ್ತಿಯು  ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಗೆ ಸಲ್ಲುತ್ತದೆ.

ಶ್ರೀಯುತರ ಪುತ್ರ ಶ್ರೀ ಮಹಾಬಲ ಕಲ್ಮಡ್ಕ ಅವರೂ ತೀರ್ಥರೂಪರಂತೇ ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಖ್ಯಾತರಾಗಿರುವುದು ಸಂತೋಷದ ವಿಚಾರ. ಇವರು ಕೃಷಿಕರಾಗಿ, ಕಲಾವಿದರಾಗಿ, ಸಂಘಟಕರಾಗಿ ಎಲ್ಲರಿಗೂ ಪರಿಚಿತರು. ‘ರಂಗ ಸುರಭಿ’ ಕಲ್ಮಡ್ಕ ಎಂಬ ಸಂಸ್ಥೆಯ ರೂವಾರಿಗಳು. ದಿ|  ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಂದ ಆರಂಭಗೊಂಡ ‘ಸಂಗಮ ಕಲಾ ಸಂಘ’ ಕಲ್ಮಡ್ಕ ಎಂಬ ಸಂಸ್ಥೆಯು ಸದಾ ಸಕ್ರಿಯವಾಗಿರಲಿ. ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಲಿ. 

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments