ಪ್ರಚಾರವನ್ನು ಬಯಸದೆ, ಇದು ನನಗೆ ಕರ್ತವ್ಯ ಎಂಬಂತೆ ಕಲಾಸೇವೆಯನ್ನು ಮಾಡಿ ತನ್ನಲ್ಲಿರುವ ವಿದ್ಯೆಯನ್ನು ಮುಂದಿನ ಪೀಳಿಗೆಗೆ ನೀಡಿ ಮರೆಯಾದ ಅನೇಕ ಕಲಾವಿದರಲ್ಲಿ ಅರಸಿನಮಕ್ಕಿ ಪರಮೇಶ್ವರ ಆಚಾರ್ಯರೂ ಒಬ್ಬರು. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲ ಕಲಾವಿದರಾಗಿದ್ದರು. ತಾನು ಕಲಿತ ಯಕ್ಷಗಾನ ವಿದ್ಯೆಯನ್ನು ಸುಲಭ, ಸರಳ ರೀತಿಯಲ್ಲಿ ಕಲಿಕಾಸಕ್ತರಿಗೆ ಹೇಳಿ ಕೊಡುವ ವಿದ್ಯೆಯೂ ಇವರಿಗೆ ಕರಗತವಾಗಿತ್ತು. ಹೇಳಿಕೊಡುವವರೆಲ್ಲಾ ಚೆನ್ನಾಗಿ ಮಾಡಲಾರರು. ಚೆನ್ನಾಗಿ ಮಾಡಬಲ್ಲವರಿಗೆಲ್ಲರಿಗೂ ಕಲಿಸುವ ಕಲೆಯು ಸಿದ್ಧಿಸದು. ಇವರು ಚೆನ್ನಾಗಿ ಮಾಡಬಲ್ಲವರೂ. ಹೇಳಿಕೊಡಬಲ್ಲವರೂ ಆಗಿದ್ದರು.
ದಿ| ಶ್ರೀ ಪರಮೇಶ್ವರ ಆಚಾರ್ಯರು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಸಮೀಪದ ಇರ್ನಾಡಿ ಎಂಬಲ್ಲಿ ಶ್ರೀ ಗಿರಿಯಪ್ಪ ಆಚಾರ್ಯ ಮತ್ತು ಶ್ರೀಮತಿ ರಾಜೀವಿ ದಂಪತಿಗಳಿಗೆ ಮಗನಾಗಿ 1963ನೇ ಇಸವಿಯಲ್ಲಿ ಜನಿಸಿದರು. ಓದಿದ್ದು ಸಿದ್ಧಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಮನೆ ಧರ್ಮಸ್ಥಳ ಕ್ಷೇತ್ರ ಬಳಿ ಎಂದರೆ ಕೇಳಬೇಕೆ? ಪ್ರದರ್ಶನಗಳನ್ನು ನೋಡುವ ಅವಕಾಶಗಳು ಕಲಾಭಿಮಾನಿಗಳಿಗೆ ಧಾರಾಳವಾಗಿ ಸಿಗುತ್ತಿತ್ತು. ನಾಟ್ಯ ಕಲಿತು ತಾನೂ ಕಲಾವಿದನಾಗಬೇಕೆಂಬ ಛಲದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಸೇರಿದರು. ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು. ಬಳಿಕ ಕಟೀಲು ಮೇಳದಲ್ಲಿ ಕಲಾ ಸೇವೆ ಆರಂಭಿಸಿದ್ದರು. ಬಳಿಕ ಬೆಳ್ಮಣ್ಣು, ಅರುವ, ಬಂಡೀಹೊಳೆ ಮೇಳಗಳಲ್ಲೂ ಕಲಾಸೇವೆಯನ್ನು ಮಾಡಿದರು.
ಪುಂಡುವೇಷ, ಸ್ತ್ರೀ ವೇಷದ ನಿರ್ವಹಣೆಯಲ್ಲಿ ಒಳ್ಳೆಯ ಹೆಸರು ಗಳಿಸಿದರು. ಅಲ್ಲದೆ ಅನಿವಾರ್ಯವಾದರೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುವ ಸಾಮರ್ಥ್ಯ ಹೊಂದಿ ತಂಡಕ್ಕೆ ಆಪದ್ಬಾಂಧವ ಎನಿಸಿಕೊಂಡಿದ್ದರು. “ಇವರ ವೇಷ ಅತ್ಯಂತ ಚಂದ. ಬಣ್ಣಗಾರಿಕೆ, ವೇಷಗಾರಿಕೆ, ನಾಟ್ಯ, ಮಾತುಗಾರಿಕೆ ಎಲ್ಲವೂ ಪಾತ್ರಕ್ಕೆ ತಕ್ಕಂತೆ ಇರುತ್ತಿತ್ತು. ಕೊರತೆಯಿಲ್ಲದ ವೇಷಗಾರಿಕೆ ಪರಮೇಶ್ವರ ಆಚಾರ್ಯರದ್ದು” ಇದು ಅವರ ವೇಷಗಳನ್ನು ನೋಡಿದ ಪ್ರೇಕ್ಷಕರ ಅಭಿಪ್ರಾಯ. ಕಲಾವಿದನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿಯು ಇನ್ನೊಂದಿಲ್ಲ. ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡಬೇಕು ಎಂಬ ಸದುದ್ದೇಶದಿಂದ ಪರಮೇಶ್ವರ ಆಚಾರ್ಯರು ಯಕ್ಷಗಾನ ತರಬೇತಿಯನ್ನು ಆರಂಭಿಸಿದರು.
ಧರ್ಮಸ್ಥಳ, ಕುಂಟಾಲು ಪಳಿಕೆ, ಅರಸಿನಮಕ್ಕಿ, ಕೊಕ್ಕಡ, ಅನ್ನಾರು, ಪಟ್ರಮೆ, ಗೇರುಕಟ್ಟೆ, ಮುಂಡೂರು ಪಳಿಕೆ, ಉರುವಾಲು,ಕಲ್ಲುಗುಂಡಿ, ಕೊರಿಂಜ ಎಂಬ ಸ್ಥಳದಲ್ಲಿ ನಾಟ್ಯ, ತರಬೇತಿಯನ್ನು ನೀಡಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ್ದರು. ಜಯಾನಂದ ಸಂಪಾಜೆ, ರಾಧಾಕೃಷ್ಣ ಕಲ್ಲುಗುಂಡಿ, ಜನಾರ್ದನ ಕೊಕ್ಕಡ, ಆನಂದ ಕೊಕ್ಕಡ, ರಮೇಶ ಪಟ್ರಮೆ, ಬನಾರಿ ಚಂದ್ರಶೇಖರ ಮೊದಲಾದವರು ಪರಮೇಶ್ವರ ಆಚಾರ್ಯರಿಂದ ನಾಟ್ಯ ಕಲಿತಿದ್ದರು. ತನ್ನದೇ ಖರ್ಚಿನಲ್ಲಿ ಅರಸಿನಮಕ್ಕಿಯಿಂದ ಸಂಪಾಜೆ ಕಲ್ಲುಗುಂಡಿಗೆ ಬಂದು ತರಬೇತಿಯನ್ನು ನೀಡಿ ಹೋಗುತ್ತಿದ್ದರಂತೆ. ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿಯನ್ನು ನೀಡಿದವರು.
2008ನೇ ಇಸವಿಯಲ್ಲಿ ತನ್ನ ಅಣ್ಣ ಶ್ರೀ ಜನಾರ್ದನ ಆಚಾರ್ಯರ ಮನೆಯಲ್ಲಿರುವಾಗ ಶ್ರೀ ಪರಮೇಶ್ವರ ಆಚಾರ್ಯರು ನಿಧನ ಹೊಂದಿದ್ದರು. ಎಳೆಯ ಪ್ರಾಯದಲ್ಲಿ ಉತ್ತಮ ಕಲಾವಿದ ಮತ್ತು ತರಬೇತುದಾರರನ್ನು ಕಳೆದುಕೊಂಡು ಕಲಾಭಿಮಾನಿಗಳು ನೋವನ್ನು ಅನುಭವಿಸಿದ್ದರು. ಇಂತಹ ಕಲಾವಿದರುಗಳನ್ನು ನೆನಪಿಸಿ ಗೌರವಿಸಬೇಕಾದುದು ಕಲಾಭಿಮಾನಿಗಳಿಗೆ ಕರ್ತವ್ಯ. ಎರಡು ವರ್ಷಗಳ ಹಿಂದೆ ಅರಸಿನಮಕ್ಕಿ ಸಮೀಪದ ನೆಕ್ಕರಡ್ಕಪಳಿಕೆ ಎಂಬಲ್ಲಿ ದಿ| ಪರಮೇಶ್ವರ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿತ್ತು. ಶ್ರೀ ಹನುಮಗಿರಿ ಮೇಳದ ಪ್ರದರ್ಶನದ ಸಂದರ್ಭ. ಸದ್ರಿ ಮೇಳದ ವೇದಿಕೆಯಲ್ಲಿ ಈ ಕಾರ್ಯಕ್ರಮವು ನಡೆದಿತ್ತು. ಈ ಪ್ರಶಸ್ತಿಯನ್ನು ಹುಟ್ಟು ಹಾಕಿದವರು ಪರಮೇಶ್ವರ ಆಚಾರ್ಯರ ಶಿಷ್ಯರಾದ ಶ್ರೀ ಜಯಾನಂದ ಸಂಪಾಜೆ ಅವರು. ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಸೆಯು ಅವರಿಗೆ. ಈ ಸತ್ಕಾರ್ಯಕ್ಕೆ ಕಲಾಮಾತೆಯ ಅನುಗ್ರಹವಿರಲಿ. ಕೀರ್ತಿಶೇಷ ಕಲಾವಿದರಾದ ಅರಸಿನಮಕ್ಕಿ ಶ್ರೀ ಪರಮೇಶ್ವರ ಆಚಾರ್ಯರಿಗೆ ನುಡಿನಮನಗಳು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions