ಕಲಿಯುವಿಕೆ ಎಂಬ ಕ್ರಿಯೆಯು ನಿರಂತರವಾಗಿ ಸಾಗುತ್ತದೆ. ಅದು ಮುಗಿಯಿತು ಎಂದು ಹೇಳುವ ಹಾಗಿಲ್ಲ. ಬದುಕಿನುದ್ದಕ್ಕೂ ಕಲಿಯುತ್ತಾ ಇರುತ್ತೇವೆ. ಹಿರಿಯರು ಬದುಕಿನಲ್ಲಿ ತಾವು ಗಳಿಸಿದ ಅನುಭವಗಳನ್ನು ಕಿರಿಯರಿಗೆ ಧಾರೆಯೆರೆದು ಅವರಿಗೆ ಮಾರ್ಗದರ್ಶಕರಾಗುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲೂ ಹೀಗೊಂದು ಕೌಟುಂಬಿಕ ವಾತಾವರಣವು ಸದಾ ಇದ್ದರೆ ಅದೆಷ್ಟು ಸೊಗಸು! ಕಿರಿಯರು ಹಿರಿಯರನ್ನು ಗೌರವಿಸಿ ಅವರ ಅನುಭವಗಳನ್ನು ಪಡೆದುಕೊಳ್ಳುವುದು. ಹಿರಿಯರು ಕಿರಿಯರಿಗೆ ಪ್ರೀತಿಯಿಂದ ಹೇಳಿಕೊಡುವುದು. ಇದು ನಮ್ಮ ಭಾರತೀಯ ಸಂಸ್ಕೃತಿ. ಎಲ್ಲಾ ಕಡೆಗಳಲ್ಲಿಯೂ ಈ ಶ್ರೇಷ್ಠ ವ್ಯವಸ್ಥೆಯು ಸದಾ ಇರಲೆಂದು ನಾವು ಆಶಿಸೋಣ.
ಯಕ್ಷಗಾನ ಕ್ಷೇತ್ರದಲ್ಲಿ ಈಗ ವ್ಯವಸಾಯ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ನಿಡ್ಲೆ ಶ್ರೀ ಉಮೇಶ ಹೆಬ್ಬಾರರೂ ಒಬ್ಬರು. ಇವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಬಲ್ಲ, ನಿರ್ವಹಿಸಿದ ಕಲಾವಿದರಿವರು. ನಿಡ್ಲೆ ಉಮೇಶ ಹೆಬ್ಬಾರರ ಮೂಲ ಮನೆ ಕಡಬ ಸಮೀಪದ ಹೊಸಮಠ. ಶ್ರೀ ಪದ್ಮನಾಭ ಹೆಬ್ಬಾರ್ ಮತ್ತು ಶ್ರೀಮತಿ ಯಮುನಾ ಬಾಯಿ ದಂಪತಿಗಳ ಮಗನಾಗಿ 1955 ನವಂಬರ್ 1ರಂದು ಜನನ. ಶ್ರೀ ಪದ್ಮನಾಭ ಹೆಬ್ಬಾರ್ ಮತ್ತು ಶ್ರೀಮತಿ ಯಮುನಾ ಬಾಯಿ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು) ನಿಡ್ಲೆ ಉಮೇಶ ಹೆಬ್ಬಾರರು ಪದ್ಮನಾಭ ಹೆಬ್ಬಾರ್ ದಂಪತಿಗಳ ಮಕ್ಕಳಲ್ಲಿ 5ನೇಯವರು. ಪದ್ಮನಾಭ ಹೆಬ್ಬಾರರು ಕೃಷಿಕರೂ, ಪುರೋಹಿತರೂ, ಯಕ್ಷಗಾನ ಕಲಾವಿದರೂ ಆಗಿದ್ದರು. ಹಿಮ್ಮೇಳ ಮುಮ್ಮೇಳಗಳ ಜ್ಞಾನವನ್ನು ಹೊಂದಿದ್ದರು.
ಇವರು ನಾರಾವಿ ಸಮೀಪದ ಈದು ಎಂಬಲ್ಲಿ ವಾಸವಾಗಿದ್ದರು. ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಸಕ್ರಿಯರಾಗಿದ್ದರು. ಅನೇಕ ಕಲಿಕಾಸಕ್ತರಿಗೆ ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳ ವಿದ್ಯೆಯನ್ನು ಕಲಿಸಿದ್ದರು. ಉಮೇಶ ಹೆಬ್ಬಾರರಿಗೆ ಕಲೆಯು ರಕ್ತಗತವಾಗಿಯೇ ಇತ್ತು. ಓದಿದ್ದು ಹತ್ತನೇ ತರಗತಿ ವರೆಗೆ. ನಾರಾವಿ ಪ್ರಾಢಶಾಲೆಯಲ್ಲಿ. ಇವರು ಪುರಾಣ ಪ್ರಪಂಚದತ್ತ ಆಕರ್ಷಿತರಾಗಲು ಕನ್ನಡ ಪಂಡಿತರಾದ ಶ್ರೀ ಬಾಬು ಶೆಟ್ಟರು ಕಾರಣರು. ಪುರಾಣದಲ್ಲಿ ಬರುವ ಎಲ್ಲಾ ಪಾತ್ರಗಳ ಬಗೆಗೂ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಅವರು ವಿವರಿಸುತ್ತಿದ್ದರಂತೆ. ಹರಿಶ್ಚಂದ್ರ, ಸೀತೆ, ಶ್ರೀರಾಮ, ಲಕ್ಷ್ಮಣ, ನಳ, ದಮಯಂತಿ, ದ್ರೌಪದಿ ಮೊದಲಾದ ಪಾತ್ರಗಳ ಬಗ್ಗೆ ಕುತೂಹಲ ಹುಟ್ಟಿಕೊಂಡಿತ್ತು. ಪುರಾಣ ಪುಣ್ಯ ಪುರುಷರು ಶ್ರೀ ಬಾಬು ಶೆಟ್ಟರ ನಿರೂಪಣೆಯಿಂದ ಉಮೇಶ ಹೆಬ್ಬಾರರ ಮನದಲ್ಲಿ ಬಂದು ನೆಲೆಸುವಂತಾಗಿತ್ತು.

ಕಾರಣಾಂತರಗಳಿಂದ ಓದು ಮುಂದುವರಿಸಲಾಗಲಿಲ್ಲ. ಯಕ್ಷಗಾನಾಸಕ್ತರಾಗಿ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಬಯಕೆ ಉಂಟಾಗಿತ್ತು. ಇಡಗುಂಜಿ ಮೇಳದ ಪ್ರದರ್ಶನ. ಕೆರೆಮನೆ ಶ್ರೀ ಗಜಾನನ ಹೆಗಡೆ ಅವರ ಸ್ತ್ರೀ ವೇಷದ ಅಭಿನಯಕ್ಕೆ ಉಮೇಶ ಹೆಬ್ಬಾರರು ಆಕರ್ಷಿತರಾಗಿದ್ದರು. (ಅಂಬೆ ಪಾತ್ರ) ಎಳವೆಯಲ್ಲಿ ಶೇಣಿ, ಸಾಮಗ, ವಿಟ್ಲ ಜೋಶಿ, ತೆಕ್ಕಟ್ಟೆ, ಪೆರುವೋಡಿ, ಕೊಳ್ಯೂರು, ಮೂಡಬಿದಿರೆ ಮಾಧವ ಶೆಟ್ಟರು, ಬೋಳಾರ ನಾರಾಯಣ ಶೆಟ್ಟಿ, ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಗೋವಿಂದ ಭಟ್, ಕ್ರಿಶ್ಚನ್ ಬಾಬು ಮೊದಾಲಾದವರು ಉಮೇಶ ಹೆಬ್ಬಾರರ ಪಾಲಿಗೆ ಹೀರೋಗಳಾಗಿದ್ದರು.
ನಿಡ್ಲೆ ಉಮೇಶ ಹೆಬ್ಬಾರರು ಕಲಾವಿದನಾಗಬೇಕೆಂಬ ಬಯಕೆಯಿಂದ ನಾಟ್ಯ ಕಲಿಯುವ ಮನ ಮಾಡಿದ್ದರು. 1974ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ಸೇರಿದ್ದರು. ಶ್ರೀ ಪಡ್ರೆ ಚಂದು ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆ ಅಭ್ಯಾಸ. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಕೇಂದ್ರದಲ್ಲಿ ಕಲಿಯುತ್ತಿರುವಾಗಲೇ ಅಳಿಕೆ ಶಾಲೆಯಲ್ಲಿ ನಡೆದ ಪ್ರದರ್ಶನ. ಪ್ರಸಂಗ ವಾಲಿ ವಧೆ. ಕೇದಗಡಿ ಗುಡ್ಡಪ್ಪ ಗೌಡರ ವಾಲಿ. ಉಮೇಶ ಹೆಬ್ಬಾರರಿಗೆ ತಾರೆ ಪಾತ್ರವನ್ನು ಮಾಡುವ ಅವಕಾಶ ಸಿಕ್ಕಿತ್ತು. ಅದೇ ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಆರಂಭ. (1974ರಲ್ಲಿ) ಪೂರ್ವ ರಂಗದಲ್ಲಿ ಮುಖ್ಯ ಸ್ತ್ರೀ ವೇಷದಿಂದ ಆರಂಭ.
ಇರಾ ಭಾಗವತರು, ನೆಡ್ಲೆ ನರಸಿಂಹ ಭಟ್ಟರ ಜತೆ ತಿರುಗಾಟ. ಅವರಿಬ್ಬರ ನಿರ್ದೇಶನದಲ್ಲಿ ಬೆಳೆದರು. ರಂಗದ ಪರಿಪೂರ್ಣ ಮಾಹಿತಿ ನೀಡಿದವರು ನೆಡ್ಲೆ ನರಸಿಂಹ ಭಟ್ಟರು. ತಾಳ, ಪಾತ್ರದ ಸ್ವಭಾವ, ಅರ್ಥಗಾರಿಕೆಯ ಬಗ್ಗೆ ಅವರಿಂದ ಕಲಿತಿದ್ದರು. ನಾಲ್ಕು ತಿರುಗಾಟ ಕಳೆದಾಗ ಎರಡನೇ ಪುಂಡು ವೇಷ ಮತ್ತು ಸ್ತ್ರೀ ವೇಷಗಳನ್ನು ಮಾಡುತ್ತಿದ್ದರು. ಆಗ ಎಸ್. ಸಂಜೀವ ಅವರು ಪ್ರಧಾನ ಸ್ತ್ರೀ ವೇಷಧಾರಿಯಾಗಿದ್ದರು. ಅನಿವಾರ್ಯವಾದರೆ ಮೊದಲನೇ ಪುಂಡುವೇಷ ಮತ್ತು ಸ್ತ್ರೀ ವೇಷಗಳನ್ನು ಮಾಡುತ್ತಿದ್ದರು. ಐದು ತಿರುಗಾಟ ಕಳೆದಾಗ ಶ್ರೀದೇವಿ ಪಾತ್ರವನ್ನು ಮಾಡುವ ಅವಕಾಶವು ಸಿಕ್ಕಿತ್ತು. ಬಳಿಕ ಪ್ರಧಾನ ಸ್ತ್ರೀ ಪಾತ್ರಗಳ ನಿರ್ವಹಣೆ. ಅಕ್ಷಯಾಂಬರ ವಿಲಾಸದ ದ್ರೌಪದಿ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ನೀಡಿತ್ತು. ಆಗ ಶ್ರೀ ಗಂಗಯ್ಯ ಶೆಟ್ರು ದುಶ್ಶಾಸನನ ಪಾತ್ರ ಮಾಡುತ್ತಿದ್ದರು.
ಪ್ರಮೀಳೆ, ಶಶಿಪ್ರಭೆ ಮೊದಲಾದ ಕಸೆ ಸ್ತ್ರೀ ವೇಷಗಳೂ ಉಮೇಶ ಹೆಬ್ಬಾರರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿತ್ತು. ಈ ವೇಷಗಳಲ್ಲಿ ಹೆಬ್ಬಾರರ ನಿರ್ವಹಣೆಯು ಮೇಳದ ಯಜಮಾನರಾದ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಮೆಚ್ಚುಗೆಗೂ ಪಾತ್ರವಾಯಿತು. ಇವರ ಕಲಾ ಸೇವೆಗೆ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಮತ್ತು ಕಟೀಲು ಶ್ರೀ ಕೃಷ್ಣ ಆಸ್ರಣ್ಣರ ಆಶೀರ್ವಾದವೂ ಇತ್ತು. ಹತ್ತು ತಿರುಗಾಟ ಒಂದನೇ ಮೇಳದಲ್ಲಿ. ಆಗ ಕೊಗ್ಗು ಹಾಸ್ಯಗಾರರ ಒಡನಾಟವೂ ದೊರಕಿತ್ತು. ಇರಾ ಭಾಗವತರು, ಬಲಿಪರು ನೆಡ್ಲೆ, ಸರಪಾಡಿ ಶಂಕರನಾರಾಯಣ ಕಾರಂತ ಮೊದಲಾದವರ ಸಹಕಾರವೂ ಸಿಕ್ಕಿತ್ತು. ಬಳಿಕ 3ನೇ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಅನಿವಾರ್ಯವಾಗಿ ತುಳು ಪ್ರಸಂಗಗಳಲ್ಲಿ ವೇಷಗಾರಿಕೆ. ಅರುವ ನಾರಾಯಣ ಶೆಟ್ಟರ ನೇತೃತ್ವದ ಅಳದಂಗಡಿ ಶ್ರೀ ಸೋಮನಾಥೇಶ್ವರ ಮೇಳದಲ್ಲಿ. ಮೂರು ವರ್ಷ ಟೆಂಟ್ ಮೇಳದಲ್ಲಿ ತಿರುಗಾಟ. ಬಳಿಕ ಕೌಟುಂಬಿಕ ಹೊಣೆಯನ್ನು ವಹಿಸಬೇಕಾಗಿ ಬಂದುದರಿಂದ ಶ್ರೀ ಉಮೇಶ ಹೆಬ್ಬಾರರು ಮೇಳದ ತಿರುಗಾಟ ನಿಲ್ಲಿಸಿದ್ದರು.

1985ರಲ್ಲಿ ವಿವಾಹ. ಶ್ರೀ ನಿಡ್ಲೆ ಉಮೇಶ ಹೆಬ್ಬಾರರ ಪತ್ನಿ ಶ್ರೀಮತಿ ಅಪರ್ಣಾ ಹೆಬ್ಬಾರ್. 1985ರಿಂದ ನಿಡ್ಲೆಯಲ್ಲಿ ವಾಸ್ತವ್ಯ. ಮೇಳದ ತಿರುಗಾಟದಿಂದ ದೂರವಾದರೂ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು. ಮೊಂಟೆತ್ತಡ್ಕ ಮೇಳದಲ್ಲಿ 22 ವರ್ಷಗಳ ಕಾಲ ವೇಷ ಮಾಡಿದ್ದರು. ಶ್ರೀ ನಾರಾಯಣ ಕಮ್ತಿ ಅವರ ಬಪ್ಪನಾಡು ಮೇಳದಲ್ಲಿ 1 ವರ್ಷ. ಕಟೀಲು 5ನೇ ಮೇಳ ಆರಂಭವಾದಾಗ ಮತ್ತೆ ಕಟೀಲು ಮೇಳಕ್ಕೆ ಸೇರಿ ವ್ಯವಸಾಯ ಮಾಡುತ್ತಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ನಲುವತ್ತೇಳು ವರ್ಷಗಳ ಅನುಭವಿ ಶ್ರೀ ಉಮೇಶ ಹೆಬ್ಬಾರರು. ಪುಂಡುವೇಷ, ಸ್ತ್ರೀವೇಷ, ಕಿರೀಟ ವೇಷ ಹೀಗೆ ಯಾವ ವೇಷ ನೀಡಿದರೂ ಸಮರ್ಪಕವಾಗಿ ನಿರ್ವಹಿಸಬಲ್ಲ ಕಲಾವಿದರಿವರು. ಇವರ ನಾಟ್ಯವು ಬಲು ಸೊಗಸು. ಪಾತ್ರೋಚಿತವಾದ ಮಾತು ಮತ್ತು ನಾಟ್ಯಗಳಿಂದ ಅಭಿನಯಿಸುತ್ತಾರೆ. ಇನ್ನೂ ಮೂರು ನಾಲ್ಕು ವರ್ಷಗಳ ತಿರುಗಾಟ ಕಟೀಲು ಮೇಳದಲ್ಲಿ ಮಾಡಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದಾರೆ. ನಿಡ್ಲೆ ಶ್ರೀ ಉಮೇಶ ಹೆಬ್ಬಾರರೊಂದಿಗೆ ಸಹಕಲಾವಿದನಾಗಿ ವ್ಯವಸಾಯ ಮಾಡುವ ಅವಕಾಶವು ನನಗೆ ಸಿಕ್ಕಿದೆ. ಸರಳ, ಸಜ್ಜನ ಸಹೃದಯೀ ಕಲಾವಿದರು. ಕೋಪವೆಂಬುದು ಇವರ ಬಳಿ ಬಾರದು. ನಗು ನಗುತ್ತಾ ಎಲ್ಲರೊಡನೆ ಬೆರೆಯುತ್ತಾರೆ.
ಶ್ರೀ ಉಮೇಶ ಹೆಬ್ಬಾರ್ ಮತ್ತು ಅಪರ್ಣಾ ಹೆಬ್ಬಾರ್ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರಿ ಸುಹಾಸಿನಿ. ವಿವಾಹಿತೆ. ಗೃಹಣಿ. ದ್ವಿತೀಯ ಪುತ್ರಿ ವಿಧೀಶಾ ವಿವಾಹಿತೆ. ಗೃಹಣಿ. ಪುತ್ರ ಶಿವರಂಜನ್. ಕೃಷಿಕ. ನಿಡ್ಲೆ ಉಮೇಶ ಹೆಬ್ಬಾರರು ಕಟೀಲು ದಿ| ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಮತ್ತು ಉಡುಪಿ ಯಕ್ಷಗಾನ ಕಲಾ ರಂಗದ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಶ್ರೀಯುತರಿಂದ ಇನ್ನಷ್ಟು ವರ್ಷಗಳ ಕಲಾ ಸೇವೆಯು ನಡೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ನಿಡ್ಲೆ ಶ್ರೀ ಉಮೇಶ ಹೆಬ್ಬಾರರಿಗೆ ಅನುಗ್ರಹಿಸಲಿ ಎಂಬ ಹಾರೈಕೆಗಳು.
