ವರ್ತಮಾನ ಕಾಲದಲ್ಲಿ ತೆಂಕುತಿಟ್ಟಿನ ಅತೀ ಹಿರಿಯ ಭಾಗವತರು, ಹಿಂದಿನ ಹಾಗೂ ಈಗಿನ ಕಾಲದ ಭಾಗವತರ ನಡುವಿನ ಕೊಂಡಿಯಂತಿದ್ದ, ಅಗರಿ ಶೈಲಿ’’ಯ ಪ್ರವರ್ತಕ ಅಗರಿ ರಘುರಾಮ ಭಾಗವತರ ನಿಧನ ಯಕ್ಷರಂಗಕ್ಕೊಂದು ಅತೀ ದೊಡ್ಡ ನಷ್ಟ.
ಅಗರಿ ಶೈಲಿ’’ಯ ಸಮರ್ಥ ಪ್ರತಿನಿಧಿಗಳಾದ ರಘುರಾಮ ಭಾಗವತರು ಎಲ್ಲಾ ಪ್ರಸಂಗಗಳ ನಡೆ ಅರಿತಿದ್ದ, ಹೊಸ ಪ್ರಸಂಗಗಳಿಗೆ ನಿರ್ದೇಶನ ನೀಡುತ್ತಿದ್ದ, ಪರಂಪರೆ ಹಾಗೂ ಸಂಗೀತ ಶೈಲಿ- ಎರಡನ್ನೂ ಅರಿತಿರುವ ಅಪರೂಪದ ಭಾಗವತರೆನಿಸಿಕೊಂಡಿದ್ದರು.
ನಿಧನದಲ್ಲೂ ಒಂದು ಪವಾಡ – ಸತ್ತು ಬದುಕಿದ ಅಗರಿ ರಘುರಾಮ ಭಾಗವತರು : ಹೌದು, ಇದೊಂದು ಪವಾಡ ಜರಗಿತ್ತು. ಭಾಗವತರು ನಿಧನರಾದುದು ಬೆಳಿಗ್ಗೆ 10.30ಕ್ಕೇ ಆದರೂ, ಅದರ 9 ಘಂಟೆಗಳ ಮೊದಲೇ, ಅಂದರೆ ರಾತ್ರಿ ಒಂದೂವರೆ ಘಂಟೆಗೇ ಕೆಲವು ವಾಟ್ಸಾಪ್ ವೇದಿಕೆಗಳಲ್ಲಿ ಅಗರಿ ರಘುರಾಮ ಭಾಗವತರು ಇನ್ನಿಲ್ಲ’’ ಎಂಬ ಸುದ್ದಿ ಹರಿದಾಡಲಾರಂಭಿಸಿತ್ತು. ನಾನೂ ಇದನ್ನು ಓದಿ
ವಿಷಯ ದೃಢೀಕರಿಸದೇ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ’’ ಎಂದು ರಾತ್ರಿಯೇ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದೆ. ಆದರೆ ನಂತರ ನನಗೆ ತಿಳಿದದ್ದು ಈ ಪವಾಡ. ರಾತ್ರಿ ಸುಮಾರು 12.30ಕ್ಕೆ ರಘುರಾಮ ಭಾಗವತರ ಹೃದಯ ಬಡಿತ, ರಕ್ತದ ಒತ್ತಡ, ನಾಡಿಬಡಿತ ಎಲ್ಲವೂ ಸಂಪೂರ್ಣವಾಗಿ ಸ್ಥಬ್ದವಾಗಿತ್ತು. ವೈದ್ಯರೂ ಕ್ಷಮಿಸಿ, ಮುಗಿಯಿತು’’ ಎಂದಿದ್ದರು. ಕುಟುಂಬದ ಸದಸ್ಯರೆಲ್ಲರೂ ಆಸ್ಪತ್ರೆಗೆ ಬಂದೂ ಆಗಿತ್ತು. ಆದರೆ, ವಿಚಿತ್ರ ಎಂಬಂತೆ ಭಾಗವತರ ಹೃದಯ, ನಾಡಿ ಬಡಿತ, ರಕ್ತದ ಒತ್ತಡ ಪುನಃ ಆರಂಭವಾಯಿತು. ಇದೊಂದು ಪವಾಡವೇ ಸರಿ. ವೈದ್ಯರು ಪುನಃ ಶುಶ್ರೂಶೆ ನೀಡಲಾರಂಭಿಸಿದರು. ಉಸಿರಾಟವೂ ಪುನರಾರಂಭವಾಯಿತು. ಆದರೂ ಬೆಳಿಗ್ಗೆ 10.30ಕ್ಕೆ ನಿಧನರಾದರು. ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಘಟನೆ ಎಷ್ಟೋ ಲಕ್ಷಕ್ಕೊಂದರಂತೆ ಜರಗುವುದುಂಟು.
ತೆಂಕು ತಿಟ್ಟಿನಲ್ಲಿ ಪ್ರಾತಃಸ್ಮರಣೀಯರು ಎನಿಸಿದ್ದ ಸುಪ್ರಸಿದ್ಧ ಭಾಗವತರು, ದಕ್ಷ ನಿರ್ದೇಶಕರು ದಿ. ಅಗರಿ ಶ್ರೀನಿವಾಸ ಭಾಗವತರು - ರುಕ್ಮಿಣಿ ಅಮ್ಮನವರ ಸುಪುತ್ರರಾಗಿ ಅಗರಿ ರಘುರಾಮರು 07.02.1935ರಂದು ಜನಿಸಿದರು. ಸುರತ್ಕಲ್ ವಿದ್ಯಾದಾಯಿನಿ ವಿದ್ಯಾ ಸಂಸ್ಥೆಯಲ್ಲಿ ಇಂಟರ್ ಮೀಡಿಯೆಟ್, ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ FA ವ್ಯಾಸಂಗ ಪೂರೈಸಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಲ್ಲಿ ನೌಕರಿಗೆ ಸೇರಿದರು. ತಂದೆಯವರಂತೆ ತಾನೂ ಭಾಗವತನಾಗಬೇಕೆಂಬ ಆಕಾಂಕ್ಷೆ ಬಾಲ್ಯದಲ್ಲೇ ಮೊಳಕೆ ಒಡೆದಿದ್ದ ಕಾರಣ, ತಮ್ಮ ತಂದೆಯವರನ್ನೇ ಗುರುವಾಗಿ ಸ್ವೀಕರಿಸಿ ಭಾಗವತಿಕೆಯ ಪಟ್ಟುಗಳನ್ನು ಕರಗತ ಮಾಡಿ ಕೊಂಡರು. ತಂದೆಯವರು ಹೇಳಿ ಕೊಟ್ಟದ್ದಕ್ಕಿಂತಲೂ ನೋಡಿಯೇ ಭಾಗವತಿಕೆ ಕಲಿತದ್ದು ಜಾಸ್ತಿ ಎನ್ನಬಹುದಾದರೂ, ತಂದೆಯವರ ಕಡು ನಿರ್ದೇಶನ, ಸಲಹೆಗಳ ಅನುಷ್ಠಾನದಿಂದಲೇ
ಭಾಗವತರು’’ ಎನಿಸಿಕೊಂಡರು.
ಸರಕಾರಿ ನೌಕರಿಯಲ್ಲಿದ್ದರೂ, ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದರು. ಆದರೂ ಮೇಳದ ಪೂರ್ಣಕಾಲಿಕ ತಿರುಗಾಟದ ಭಾಗವತರಾದುದು ಒಂದು ಆಕಸ್ಮಿಕ ಘಟನೆಯಿಂದಾಗಿ. ಸುಮಾರು 1965-66ರ ಕಾಲ. ಅಗರಿ ಶ್ರೀನಿವಾಸ ಭಾಗವತರು ಕಸ್ತೂರಿ ಪೈ ಸಹೋದರರ ಸುರತ್ಕಲ್ ಮೇಳದ ಪ್ರಧಾನ ಭಾಗವತರಾಗಿದ್ದ ಸಮಯವದು. ಮೇಳಗಳೊಳಗೇ ತೀವ್ರ ಪೈಪೋಟಿಯ ಕಾಲಘಟ್ಟವದು. ತುಳು ಪ್ರಸಂಗಗಳು ಯಕ್ಷರಂಗ ಪ್ರವೇಶದ ಪ್ರಾಥಮಿಕ ಹಂತದಲ್ಲಿತ್ತು. ಸುರತ್ಕಲ್ ಮೇಳಕ್ಕೂ ಉಳಿದ ಮೇಳಗಳಂತೆಯೇ ತುಳುನಾಡ ಸಿರಿ, ಕೋಟಿ ಚೆನ್ನಯ, ಕೋರ್ದಬ್ಬು ಬಾರಗ ಮುಂತಾದ ಪಾಡ್ದನ ಆಧರಿತ ಪ್ರಸಂಗಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ. ಪೈ ಸಹೋದರರು ಆದಷ್ಟು ಹೆಚ್ಚು ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸಲು ಕಂಟ್ರಾಕ್ಟುದಾರರ ಮನ ಒಲಿಸುತ್ತಿದ್ದರೂ, ಕೆಲವೊಂದು ಕಡೆಗಳಲ್ಲಿ ತುಳು ಪ್ರಸಂಗವೇ ಬೇಕೆಂಬ ಬೇಡಿಕೆಯಿತ್ತು.
ಆದರೆ ಈ ಸಂದರ್ಭದಲ್ಲಿ ಪೈ ಸಹೋದರರಿಗೊಂದು ಸಂಕಷ್ಟ ಎದುರಾಯಿತು. ಮೇಳದ ಪ್ರಧಾನ ಭಾಗವತರಾದ ಅಗರಿಯವರು ತುಳುನಾಡ ಸಿರಿ’’ ತುಳು ಪ್ರಸಂಗವನ್ನು ಬರೆದಿದ್ದರೂ, ಅವರಿಗೆ ತುಳು ಪ್ರಸಂಗಗಳ ಬಗ್ಗೆ ಒಲವಿರಲಿಲ್ಲ. ತುಳು ಪ್ರಸಂಗಗಳು ಯಕ್ಷಗಾನದ ಮೌಲ್ಯಗಳನ್ನು ಉಳಿಸಿಕೊಳ್ಳಲಾರದು ಎಂಬ ಮನೋಭಾವ ಹೊಂದಿದ್ದರು. ಹಾಗಾಗಿ ತಾವು ತುಳು ಪ್ರಸಂಗಗಳಿಗೆ ಭಾಗವತಿಕೆ ಮಾಡಲಾರೆ ಎಂದು ಪೈ ಸಹೋದರರಲ್ಲಿ ಖಡಾ ಖಂಡಿತವಾಗಿ ತಿಳಿಸಿದರು. ಅಗರಿಯವರು ಕಟ್ಟುನಿಟ್ಟಿನ ಶಿಸ್ತಿನ ಭಾಗವತರು. ಒಮ್ಮೆ ಹೇಳಿದ ಮಾತು, ಅದೇ ಅಂತಿಮ. ಪೈಗಳು ಇಕ್ಕಟ್ಟಿಗೆ ಸಿಲುಕಿದರು. ಪ್ರಸಿದ್ಧಿಯ ತುತ್ತ ತುದಿಯಲ್ಲಿದ್ದ ಅಗರಿ ಶ್ರೀನಿವಾಸ ಭಾಗವತರು ಇಲ್ಲದಿದ್ದರೆ ಕಲೆಕ್ಷನ್‍ಗೆ ತೊಂದರೆ, ಹಾಗೆಂದು ತುಳು ಪ್ರಸಂಗ ಆಡಿಸದಿದ್ದರೆ ಕಂಟ್ರಾಕ್ಟುದಾರರನ್ನು ಕಳೆದುಕೊಳ್ಳುವ ಅಪಾಯ. ಕೊನೆಗೆ ಅಗರಿಯವರೇ ಪೈಗಳಿಗೆ ಒಂದು ಸಲಹೆ ಕೊಟ್ಟರು. ಪೌರಾಣಿಕ ಪ್ರಸಂಗಗಳಿಗೆ ತಾನೇ ಭಾಗವತಿಕೆ ಮಾಡುವುದು, ತುಳು ಪ್ರಸಂಗಗಳು ಇದ್ದ ದಿನ, ತನ್ನ ಭಾಗವತಿಕೆಯ ಪಡಿಯಚ್ಚಿನಂತಿರುವ ತನ್ನ ಮಗನಾದ ಅಗರಿ ರಘುರಾಮ ಭಾಗವತರನ್ನು ಬರ ಹೇಳುವುದು, ಆ ಮೂಲಕ ಅಗರಿ ಶ್ರೀನಿವಾಸ ಭಾಗವತರ ಕೊರತೆ ಕಾಣದಂತೆ ನಿಭಾಯಿಸುವುದು. ಹೀಗೆ ಆರು ತಿಂಗಳ ಕಾಲ ರಘುರಾಮರು ವೃತ್ತಿಗೆ ರಜೆ ಹಾಕಿ ಸುರತ್ಕಲ್ ಮೇಳದ ತಿರುಗಾಟ ನಡೆಸಿದರು.
ಮುಂದಿನ ವರ್ಷ ಅಗರಿಯವರು ಕೂಡ್ಲು ಮೇಳ ಸೇರಿದಾಗ, ರಘುರಾಮ ಭಾಗವತರು ಪೈಗಳ ಒತ್ತಾಯಕ್ಕೆ ಮಣಿದು, ತಾವು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸರಕಾರೀ ನೌಕರಿಗೆ ರಾಜೀನಾಮೆ ಕೊಟ್ಟು ಸುರತ್ಕಲ್ ಮೇಳಕ್ಕೆ ಪ್ರಧಾನ ಭಾಗವತರಾಗಬೇಕಾಯಿತು. ಹೀಗೆ ತೆಂಕು ತಿಟ್ಟಿಗೆ ಒಬ್ಬ ಪ್ರತಿಭಾವಂತ, ದಕ್ಷ ಭಾಗವತರ ಪ್ರವೇಶ, ಮುಂದೆ ಯಕ್ಷರಂಗಕ್ಕೆ ದೊಡ್ಡ ಲಾಭ ತಂದು ಕೊಟ್ಟಿತು. (ಆದರೆ ಇದರಿಂದಾಗಿ ಅಗರಿ ರಘುರಾಮ ಭಾಗವತರಿಗೆ ವೈಯುಕ್ತಿಕವಾಗಿ ನಷ್ಟವಾಯಿತು. ಏಕೆಂದರೆ, ರಘುರಾಮರು ಯಕ್ಷರಂಗ ಸೇರುವ ಕಾಲಕ್ಕೆ ಸರಕಾರೀ ನೌಕರಿಯ ಸಂಬಳ, ಭಾಗವತರ ಸಂಬಳಕ್ಕಿಂತಲೂ ಕಡಿಮೆಯೇ ಇದ್ದರೂ, ತದನಂತರ ವೇತನ ತುಂಬಾ ಹೆಚ್ಚಳವಾಯಿತಲ್ಲದೇ, ಸರಕಾರೀ ಸೌಲಭ್ಯಗಳಾದ ನಿವೃತ್ತಿ ವೇತನ, ಪಿ.ಎಫ್., ಇ.ಎಸ್.ಐ., ರಜಾವೇತನ ಹಾಗೂ ಇನ್ನಿತರ ಸರಕಾರೀ ಸೌಲಭ್ಯಗಳಿಂದ ವಂಚಿತರಾದರು. ಅದರಲ್ಲೂ ನಿವೃತ್ತಿ ವೇತನ ಕಳಕೊಂಡೆ ಎಂಬ ಬೇಸರವನ್ನು ಆ ಕಾಲದಲ್ಲಿ ನನ್ನಲ್ಲೂ ವ್ಯಕ್ತಪಡಿಸಿದ್ದರು.)
ಅಗರಿ ರಘುರಾಮ ಭಾಗವತರು ಶುದ್ಧ ಅಗರಿ ಶೈಲಿಯ, ಪರಂಪರೆಯ ಭಾಗವತರು. ತಮ್ಮ ತಂದೆಯವರಂತೆಯೇ ಆಶು ಕವಿಗಳು. ಹೆಚ್ಚಿನ ಎಲ್ಲಾ ಪ್ರಸಂಗಗಳ ಪದ್ಯ ಕಂಠಪಾಠವಿದ್ದ ಕಾರಣ ಪ್ರಸಂಗ ನೋಡದೇ ಪದ್ಯ ಹೇಳುವುದು ರಘುರಾಮರಿಗೆ ಸಿದ್ದಿಸಿತ್ತು. ಉತ್ತಮ ಸ್ಮರಣ ಶಕ್ತಿ, ಕವಿತಾ ಶಕ್ತಿ ಹೊಂದಿದ್ದು, ಛಂದಸ್ಸು, ರಾಗ-ತಾಳಗಳ ಕುರಿತು ಆಳವಾದ ಜ್ಞಾನ ಹೊಂದಿದ್ದರು. ರಘುರಾಮರು, ಈ ಮೊದಲೇ ಉಲ್ಲೇಖಿಸಿದಂತೆ, ಸುರತ್ಕಲ್ ಮೇಳ ಸೇರುವಾಗ ಹೊಸ ಪ್ರಸಂಗಗಳ ಪ್ರವೇಶದ ಕಾಲ. ಹೊಸ ಪ್ರಸಂಗಗಳಾದ ಕಾರಣ, ಇದರ ರಂಗ ನಡೆ, ಪಾತ್ರಚಿತ್ರಣ, ನಿರ್ದೇಶನ ಎಲ್ಲವೂ ಒಂದು ಸವಾಲಾಗಿ ರಘುರಾಮರ ಹೆಗಲಿಗೆ ಬಿತ್ತು. ರಘುರಾಮರು ಈ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಪ್ರಸಂಗಗಳು ಯಶಸ್ವಿಯಾಗಲು ಕಾರಣರಾದರು.
ಈ ಅವಧಿಯಲ್ಲಿ ತುಳುನಾಡ ಸಿರಿ, ಶನೀಶ್ವರ ಮಹಾತ್ಮೆ, ಪಾಪಣ್ಣ ವಿಜಯ, ಸಾಧ್ವಿ ಸದಾರಮೆ, ತಿರುಪತಿ ಕ್ಷೇತ್ರ ಮಹಾತ್ಮೆ, ಬೇಡರ ಕಣ್ಣಪ್ಪ, ಚಂದ್ರಾವಳಿ ವಿಲಾಸ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಕೋಟಿ ಚೆನ್ನಯ, ಕೋರ್ದಬ್ಬು ಬಾರಗ, ಸತಿ ಶೀಲವತಿ, ಕಡುಗಲಿ ಕುಮಾರರಾಮ, ನಾಟ್ಯರಾಣಿ ಶಾಂತಲಾ, ಶೀಂತ್ರಿದ ಚೆನ್ನಕ್ಕೆ, ಬಲ್ಮೆದ ಭಟ್ರ್, ಸರ್ಪ ಸಂಕಲೆ, ರಾಜಾ ಯಯಾತಿ ಮುಂತಾದ ಪ್ರಸಂಗಗಳು ಸುರತ್ಕಲ್ ಮೇಳದಲ್ಲಿ ಜಯಭೇರಿ ಬಾರಿಸಲು ಅಗರಿಯವರ ಕೊಡುಗೆ ಅಪಾರವಾಗಿದೆ. ಸುರತ್ಕಲ್ ಮೇಳದಲ್ಲಿ ಪ್ರಾರಂಭದ ಕಾಲದಲ್ಲಿ ರಾತ್ರಿಯಿಡೀ ರಘುರಾಮ ಭಾಗವತರು ಒಬ್ಬರೇ ಭಾಗವತಿಕೆಯನ್ನು ಮಾಡುತ್ತಿದ್ದರು. ಮುಂದಕ್ಕೆ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿ ರಘುರಾಮ ಭಾಗವತರಿಗೆ ಸಹಕಾರಿಯಾದರು.
ಅಗರಿ ರಘುರಾಮ ಭಾಗವತರ ಭಾಗವತಿಕೆಯು ಅಗರಿ ಶ್ರೀನಿವಾಸ ಭಾಗವತರದ್ದೇ ಶೈಲಿ. ದೊಡ್ಡ ಅಗರಿಯವರು ಕೋಪಿಷ್ಟ ಸ್ವಭಾವದವರಾದರೆ, ರಘುರಾಮರು ಅಷ್ಟೇ ಮೃದು ಸ್ವಭಾವ ಹೊಂದಿದ್ದು ಕಲಾವಿದರಲ್ಲಿ ಸ್ನೇಹಿತರಂತೆಯೇ ವರ್ತಿಸುವ ಸ್ವಭಾವದವರು. ಕಲಾವಿದರಿಗೆ ಹೇಳಿ ಕೊಡುವ, ತಿದ್ದುವ ಗುಣ ಹೊಂದಿದ್ದರು. ದೊಡ್ಡ ಸಾಮಗರು, ಶೇಣಿ, ತೆಕ್ಕಟ್ಟೆ, ರಾಮದಾಸ ಸಾಮಗ, ಕುಂಬ್ಳೆ, ಕೊಳ್ಯೂರು, ಗೋವಿಂದ ಭಟ್ಟ, ಜಲವಳ್ಳಿ, ವಾಸುದೇವ ಸಾಮಗ, ಶಿವರಾಮ ಜೋಗಿ, ಪೂಕಳ, ಕುಡ್ತಡ್ಕ, ಪಾತಾಳ, ವಿಟ್ಲ ಜೋಷಿ, ಎಂ.ಕೆ. ರಮೇಶಾಚಾರ್ಯ, ವೇಣೂರು ಸುಂದರಾಚಾರ್ಯ, ಕೊಕ್ಕಡ ಈಶ್ವರ ಭಟ್, ಮದವೂರು ಗಣಪತಿ ರಾವ್‍ರಂಥಹ ದಿಗ್ಗಜರನ್ನು ರಂಗದಲ್ಲಿ ಕುಣಿಸಿದವರು.
ವರದರಾಯ ಪೈಗಳು ಮೇಳದ ಯಜಮಾನರಾದರೂ, ರಘುರಾಮರಿಗೆ ಅತೀವವಾದ ಗೌರವ ನೀಡುತ್ತಿದ್ದಂತೆ, ಪೈಗಳೂ ರಘುರಾಮರಲ್ಲಿ ಅದೇ ರೀತಿಯಲ್ಲಿ ಇದ್ದವರು. ಸುರತ್ಕಲ್ ಮೇಳದ ಸ್ವಂತ ಪ್ರದರ್ಶನವಾದರೆ, ಟಿಕೇಟ್ ಕೌಂಟರ್ ತೆರೆಯುವಾಗ, ಪ್ರಥಮವಾಗಿ ರಘುರಾಮರೇ ಕೌಂಟರ್‍ನಲ್ಲಿ ಕುಳಿತು ಟಿಕೇಟ್ ನೀಡಬೇಕು. ಒಂದು ಘಂಟೆಯ ನಂತರವೇ ಪೈಗಳು ಕುಳಿತುಕೊಳ್ಳುವುದು. ಅಷ್ಟರ ಮಟ್ಟಿಗೆ ಭಾಗವತರ ಮೇಲೆ ಪೈಗಳಿಗೆ ಗೌರವ. ಮೇಳದ ಹಣಕಾಸಿನ ಲೆಕ್ಕಾಚಾರವನ್ನೂ ರಘುರಾಮರೇ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಒಂದು ಕ್ಯಾಂಪ್‍ನಿಂದ ಇನ್ನೊಂದು ಕ್ಯಾಂಪ್‍ಗೆ ತೆರಳುವಾಗ ಕಲಾವಿದರಿಗೆ ಪ್ರತ್ಯೇಕವಾದ ವಾಹನ ವ್ಯವಸ್ಥೆ ಇದ್ದರೂ, ರಘುರಾಮರು ಪೈಗಳೇ ಚಲಾಯಿಸುವ ಜೀಪಿನಲ್ಲೇ ಇರಬೇಕು, ಪೈಗಳೊಂದಿಗೇ ಬೆಳಗ್ಗಿನ ಉಪಾಹಾರ ಸೇವಿಸಬೇಕು. ಅಷ್ಟರ ಮಟ್ಟಿಗೆ ಪೈಗಳಿಗೆ ರಘುರಾಮರ ಮೇಲಿರುವ ಗೌರವ. (ಆ ಕಾಲದಲ್ಲಿ ಶೇಣಿ, ತೆಕ್ಕಟ್ಟೆ ಆನಂದ ಮಾಸ್ತರ್, ಪದ್ಯಾಣ, ಮೇಳದ ಮೆನೇಜರ್ ಐತಪ್ಪ, ಕುಮಾರಗೌಡ ಅಥವಾ ಇನ್ನಾರಾದರೊಬ್ಬ ಕಲಾವಿದರು ಪೈಗಳ ಜೀಪಿನಲ್ಲೇ ಹೋಗುವುದು ವಾಡಿಕೆಯಾಗಿತ್ತು.)
ಸತ್ಯ ಹರಿಶ್ಚಂದ್ರ, ನಳದಮಯಂತಿ, ಶನೀಶ್ವರ ಮಹಾತ್ಮೆ ಮುಂತಾದ ಪೌರಾಣಿಕ ಪ್ರಸಂಗಗಳನ್ನು ಪ್ರಪ್ರಥಮವಾಗಿ ತುಳು ಭಾಷೆಯಲ್ಲಿ ಪ್ರದರ್ಶಿಸಲು ಯೋಚಿಸಿ, ಸೂಕ್ತ ನಿರ್ದೇಶನ ನೀಡಿ ಅದರಲ್ಲಿ ಯಶಸ್ವಿಯೂ ಆಗಿ, ಸುರತ್ಕಲ್ ಮೇಳದಲ್ಲಿ ಇದೊಂದು ಹೊಸತನದ ಪ್ರಯೋಗ ಎನಿಸಿತ್ತು. ರಘುರಾಮರ ಭಾಗವತಿಕೆ ಆಕರ್ಷಕವಾಗಿತ್ತು. ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಲಾವಿದರ ಮನೋಧರ್ಮವನ್ನರಿತು, ಪಾತ್ರಗಳ ಸಂದರ್ಭಕ್ಕನುಗುಣವಾಗಿ, ರಸೋತ್ಕರ್ಷವಾಗುವ ವಾತಾವರಣ ನಿರ್ಮಿಸುವಲ್ಲಿ ರಘುರಾಮರು ಪರಿಣತರಾಗಿದ್ದರು. ಸುರತ್ಕಲ್ ಮೇಳದಲ್ಲಿ ಜಯಭೇರಿ ಭಾರಿಸಿದ
ರಾಜಾ ಯಯಾತಿ’’ಯ ಇಂದು ದೂರವಿರುವೆ | ಕುಡಿಯದೆ | ಬಂದರೆ ಬಳಿ ಬರುವೆ’’,
ಇಂದಿನ ಜಲಕ್ರೀಡೆ | ಮನದಾನಂದವಾಯ್ತು ನೋಡೆ |, ಶನೀಶ್ವರ ಮಹಾತ್ಮೆಯ ಘೋಡಾ ಸುಂದರ್ ಹೈ’’, ನಳ ದಮಯಂತಿಯ
ವರ ಕಾರ್ಕೋಟಕ ಕಚ್ಚಿದ ದೆಸೆಯಿಂ’’, ದೇವಿ ಮಹಾತ್ಮೆಯ ಯಾತಕೆ ಜನ್ಮವನಿತ್ತೆ’’,
ಸಿಕ್ಕಿದಿರಿ ಕೈಯೊಳಗೆ’’ ಮುಂತಾದ ಪದ್ಯಗಳು ನಿತ್ಯ ನೂತನ ಹಾಗೂ ಒಮ್ಮೆ ಕೇಳಿದವರು ಮತ್ತೆಂದೂ ಮರೆಯಲಾಗದ ಅನುಭೂತಿ ನೀಡಿದ್ದವು. ಅಗರಿಯವರ ಈ ಶೈಲಿಯ ಭಾಗವತಿಕೆ ಕೇಳಲೆಂದೇ ಎಷ್ಟೋ ದೂರದ ಊರುಗಳಿಂದ ಪ್ರೇಕ್ಷಕರು ನೆರೆಯು ತ್ತಿದ್ದುದು ಈಗ ಇತಿಹಾಸ.
ರಘುರಾಮರು ಶೃಂಗಾರ, ಕರುಣ, ಶಾಂತ, ಹಾಸ್ಯರಸಗಳಲ್ಲಿ ಹಾಡುವಾಗ ಒಂದು ಅಲೌಕಿಕ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸುರುಟಿ, ಮಧ್ಯಮಾವತಿ, ಶಂಕರಾಭರಣ, ಪೀಲು, ಹಿಂದೋಳ, ಅರಭಿ, ಪಂತುವರಾಳಿ, ಭೀಂಪಲಾಸ್, ಶಂಕರಾಭರಣ, ಮೋಹನ ರಾಗಗಳಲ್ಲಿ ಅಪಾರ ಸಿದ್ಧಿ ಹೊಂದಿದ್ದು, ಪ್ರೇಕ್ಷಕರೂ ಅತೀವವಾಗಿ ಮೆಚ್ಚುವ ಆಕರ್ಷಣೆಯಾಗಿತ್ತು. ಪ್ರೇಕ್ಷಕರೂ, ಭಾಗವತರಿಗೆ ತಮಗೆ ಬೇಕಾದ ರಾಗ ಹಾಡಬೇಕೆಂದು ಚೀಟಿಯನ್ನು ಭಾಗವತರಿಗೆ ಕಳಿಸಿ ಅಗರಿ ಶೈಲಿ’’ಯನ್ನು ಆಸ್ವಾದಿಸುತ್ತಿದ್ದರು. ರಂಗದ ನಡೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಘುರಾಮರು, ಈ ವಿಚಾರದಲ್ಲಿ ಮಾತ್ರ ತಮ್ಮ ತಂದೆಯವರಂತೆ, ಬಿಗು ನಿರ್ಧಾರ ತಾಳುತ್ತಿದ್ದರು. ಕಲಾವಿದರು ಪಾತ್ರದ ಔಚಿತ್ಯ ಮರೆತು ಅಭಿನಯಿಸಿದರೆ ಕೆರಳುತ್ತಿದ್ದರು. ನಂತರ ಚೌಕಿಯಲ್ಲಿ ಆ ಕಲಾವಿದರಿಗೆ ಪಾತ್ರದ ಚಿತ್ರಣ ಹೇಗಿರಬೇಕೆಂದು ಸೌಮ್ಯವಾಗಿಯೇ ಹೇಳಿ ಚೆನ್ನಾಗಿ ಮನದಟ್ಟು ಮಾಡಿಸುತ್ತಿದ್ದರು.
ಕಳೆದ ವರ್ಷ ಜುಲೈನಲ್ಲಿ ವರದರಾಯ ಪೈಯವರ ಪ್ರಥಮ ಸಂಸ್ಮರಣೆ ಯಂದು ರಘುರಾಮರು
ವರದರಾಯ ಪೈ ಪ್ರಶಸ್ತಿ’’ ಪಡೆದು ಸಂಮಾನಿತರಾಗಿದ್ದಾಗ ನಾನೂ ವೇದಿಕೆಯಲ್ಲಿ ಇದ್ದೆ. ಆಗ ನನ್ನೊಂದಿಗೆ ಮಾತಾಡುತ್ತಾ ಕುಡ್ವರೇ, ಭಾಗವತರು ಎಂದರೆ ಪುಸ್ತಕ ನೋಡದೇ ಪದ್ಯ ಹೇಳುವವ ಆದರೆ ಮಾತ್ರ ಆ ಸ್ಥಾನಕ್ಕೆ ಭೂಷಣ. ಸಂದರ್ಭೋಚಿತವಲ್ಲದ ಕಡೆ ಪದ್ಯಗಳನ್ನು ಆಲಾಪನೆಯ ಮೂಲಕ ಲಂಬಿಸುವುದು ಸರಿಯಲ್ಲ. ಪಾತ್ರಗಳ ಮನೋಭಾವವನ್ನು ಅರಿತು ಭಾಗವತರು ಅದೇ ಭಾವದಲ್ಲಿ ಪದ್ಯ ಹೇಳಿ ಅಭಿವ್ಯಕ್ತಿಗೊಳಿಸಿದರೆ, ವೇಷಧಾರಿಯಲ್ಲೂ ಆ ಭಾವ ಮೂಡಿ ಪ್ರಸಂಗ ಯಶಸ್ವಿಯಾಗುತ್ತದೆ’’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಗರಿ ರಘುರಾಮ ಭಾಗವತರ ವಿದ್ವತ್ತನ್ನು ಲಕ್ಷಿಸಿ ನೂರಾರು ಕಡೆ ಸಂಮಾನ ನಡೆದಿವೆ. ವಿಟ್ಲ ಜೋಷಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಉಳ್ಳಾಲ ಶ್ರೀನಿವಾಸ ಮಲ್ಯ ಪ್ರಶಸ್ತಿ, ತ್ರಿಕಣ್ಣೇಶ್ವರ ಪ್ರಶಸ್ತಿ, ಪದ್ಯಾಣ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಜಗದಂಬಾ ಯಕ್ಷಗಾನ ಪ್ರಶಸ್ತಿ, ಮುಂಬೈ, ಕರಾವಳಿ ಯಕ್ಷಗಾನ ಪ್ರಶಸ್ತಿ, ಯಕ್ಷಲಹರಿ ಪ್ರಶಸ್ತಿಯಂಥಹ ಹಲವಾರು ಪ್ರಶಸ್ತಿ ಪಡೆದಿದ್ದಾರೆ.
2015ರಲ್ಲಿ ಮೂಡಬಿದಿರೆಯ ನನ್ನ ಸಂಚಾಲಕತ್ವದ
ಯಕ್ಷಸಂಗಮ ಪ್ರಶಸ್ತಿ’’ಯನ್ನೂ ಸ್ವೀಕರಿಸಿದ್ದಾರೆ. ಅಂದು ಮೂಡಬಿದಿರೆಯಲ್ಲಿ ಭಾಗವತಿಕೆಯನ್ನೂ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದರು. ಅಂದು ನಾನು ಅವರಿಗೆ ಕರೆ ಮಾಡಿ ಸಂಮಾನ ಸ್ವೀಕರಿಸಬೇಕು ಎಂದಾಗ ಕುಡ್ವರೇ, ನನಗಿಂದು ನಿಮ್ಮ ಕರೆ ಕೇಳಿ ತುಂಬಾ ಸಂತೋಷವಾಯಿತು. ನೀವು ಸಂಮಾನ ಮಾಡುತ್ತೀರಿ ಎಂಬ ಸಂತೋಷ ಕ್ಕಿಂತಲೂ, ಇಷ್ಟು ವರ್ಷಗಳ ನಂತರವೂ ನೀವು ನನ್ನ ನೆನಪು ಉಳಿಸಿಕೊಂಡಿದ್ದೀರಲ್ಲಾ? ಅದೇ ನನಗೆ ದೊರೆತ ದೊಡ್ಡ ಸಂಮಾನ’’ ಎಂದಿದ್ದರು. 2006ರಿಂದ ತಮ್ಮ ಸಹೋದರರು ಹಾಗೂ ಮಕ್ಕಳ ಸಹಕಾರದಲ್ಲಿ ತಮ್ಮ ತಂದೆ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ ಕಾರ್ಯಕ್ರಮ ಹಾಗೂ
ಅಗರಿ ಪ್ರಶಸ್ತಿ’’ಯನ್ನು ಪ್ರತೀವರ್ಷ ತಮ್ಮ ಪುತ್ರರ ಸಂಸ್ಥೆಯಾದ ಅಗರಿ ಎಂಟರ್ ಪ್ರೈಸಸ್’’ ಮೂಲಕ ನೀಡುವ ಸಂಪ್ರದಾಯ ಪ್ರಾರಂಭಿಸಿದ್ದರು.
ಅಗರಿ ಶೈಲಿ’’ಯು ಮುಂದಿನ ಪೀಳಿಗೆಗೂ ಹರಿದು ಹೋಗಬೇಕು ಎಂಬ ಉದ್ದೇಶದಿಂದ, ಅಗರಿಶೈಲಿಯ ಭಾಗವತಿಕೆ ಹಾಡುವವರಿಗೆ, ಕಲಿಯುವವರಿಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದರು.
84 ವರ್ಷದ ಅಗರಿ ರಘುರಾಮ ಭಾಗವತರು 3 ಮಂದಿ ಸುಪುತ್ರರು ಅಗರಿ ರಾಘವೇಂದ್ರ ರಾವ್, ಶ್ರೀನಿವಾಸ ರಾವ್, ವಾದಿರಾಜ ರಾವ್ ಹಾಗೂ ಸುಪುತ್ರಿ ಶ್ರೀಮತಿ ಮಂಗಳಾ ಹಾಗೂ ಅಳಿಯ ಶೇಷಶಯನ ಕಾರಿಂಜೆ ಸಹೋದರರಾದ ಪ್ರಸಂಗಕರ್ತ ಅಗರಿ ಭಾಸ್ಕರ ರಾವ್, ಅಗರಿ ದಿನೇಶ್ ರಾವ್.
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ
(ಸುಪ್ರಸಿದ್ಧ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿದಾಗ, ಪದ್ಯಾಣರಿಗೆ ಉತ್ತಮ ಅವಕಾಶ ನೀಡಿ, ಅವರಿಗೆ ರಂಗನಡೆ ಹೇಳಿಕೊಟ್ಟು ತಮ್ಮ ಶಿಷ್ಯರಂತೆ ವ್ಯವಹರಿಸುತ್ತಿದ್ದರು. ಪದ್ಯಾಣರೂ ಸಹಾ ಅಗರಿಯವರ ಮೇಲೆ ಗುರು ಭಾವನೆ ಹೊಂದಿದ್ದು ಅಗರಿಯವರನ್ನು ಗುರುಗಳೇ’’ ಎಂದೇ ಸಂಬೋಧಿಸುತ್ತಿದ್ದರು.
“ಅಗರಿಯವರೊಂದಿಗೆ 23 ವರ್ಷಗಳ ತಿರುಗಾಟ ಮಾಡಿದ ತೃಪ್ತಿ ನನಗಿದೆ. ನಾನು ಅಗರಿಯವರ ಭಾಗವತಿಕೆಯಿಂದ ಪ್ರಭಾವಿತ ನಾದವ. ಅಗರಿಯವರು ನನಗೆ ಗುರು ಸಮಾನರು. ನಾನು ಇಂದಿಗೂ ಆ ಪ್ರಭಾವ ದಿಂದ ಹೊರಬಂದಿಲ್ಲ. ಇಂದಿಗೂ ನನ್ನ ಭಾಗವತಿಕೆಯಲ್ಲಿ ಕನಿಷ್ಟ ಏಳೆಂಟು ಪದ್ಯ ಗಳನ್ನಾದರೂ ಅಗರಿ ಶೈಲಿ’’ಯಲ್ಲಿ ಹಾಡ ದಿದ್ದಲ್ಲಿ ನನಗೆ ಸಮಾಧಾನವಿಲ್ಲ. ಅದನ್ನು ಪ್ರೇಕ್ಷಕರೂ ಬಯಸುತ್ತಾರೆ. ಇಪ್ಪತ್ತು ವರ್ಷಗಳ ಹಿಂದಿನಿಂದಲೂ ಮೂಡಬಿದಿರೆಯ ಶಾಂತರಾಮ ಕುಡ್ವರು ನಾನು ಭಾಗವತಿಕೆ ಯಲ್ಲಿದ್ದರೆ, ಪ್ರತೀಸಲವೂ ಸಭೆಯಿಂದ
ಅಗರಿ ಶೈಲಿಯ ಪದ್ಯ ಹೇಳಿ’’ ಎಂದು ಚೀಟಿ ಕಳಿಸು ತ್ತಿದ್ದರು. ನಂತರದ ದಿನಗಳಲ್ಲಿ ಕುಡ್ವರನ್ನು ಕಂಡ ಕೂಡಲೇ ನಾನು ಅಗರಿ ಶೈಲಿ’’ಯ ಹಾಡು ಹೇಳುತ್ತಿದ್ದೆ. ಅದು ಇಂದಿಗೂ ಮುಂದುವರಿದಿದೆ. ನಾವು
ಪದ್ಯಾಣ ಪ್ರಶಸ್ತಿ’’ ಪ್ರಾರಂಭಿಸಿದಾಗ ಪ್ರಥಮ ಪ್ರಶಸ್ತಿಯನ್ನು ಯಾರಿಗೆ ನೀಡುವುದು ಎಂಬ ಪ್ರಶ್ನೆ ಬಂದಾಗ ಅಗರಿ ರಘುರಾಮ ಭಾಗವತರ ಹೊರತಾಗಿ ಬೇರೆ ಯಾವುದೇ ಆಯ್ಕೆ ನನ್ನ ಮುಂದೆ ಇರಲಿಲ್ಲ. ಪ್ರಥಮ “ಪದ್ಯಾಣ ಪ್ರಶಸ್ತಿ’’ ರಘುರಾಮ ಭಾಗವತರಿಗೆ ನೀಡಿದ್ದುದರಲ್ಲಿ ನನಗೆ ಅಪಾರ ತೃಪ್ತಿ ಹಾಗೂ ಅಭಿಮಾನವಿದೆ.’’ – ಪದ್ಯಾಣ ಗಣಪತಿ ಭಟ್)
(ಒಂದೆರಡು ವರ್ಷಗಳ ಹಿಂದೆ, ಯಾವುದೇ ಲಾಬಿ ನಡೆಸದೇ, ಅರ್ಜಿಯನ್ನೂ ಹಾಕದೇ ಕರ್ನಾಟಕ ರಾಜ್ಯೋತ್ಸವ’’ ಪ್ರಶಸ್ತಿಗೆ ಅಗರಿ ರಘುರಾಮ ಭಾಗವತರ ಹೆಸರು ಆಯ್ಕೆಯಾಗಿತ್ತು. ಸಂಬಂಧ ಪಟ್ಟ ಅಧಿಕಾರಿಗಳು ಫೋನ್ ಮೂಲಕ ಅಗರಿಯವರಿಗೆ ಈ ವಿಷಯವನ್ನೂ ತಿಳಿಸಿದ್ದರು. ಇದೊಂದು ಸರಿಯಾದ ಆಯ್ಕೆಯೂ ಆಗಿತ್ತು. ಅಗರಿಯವರೂ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಹೋಗಲು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ
ಕಾಣದ ಕೈಗಳ ಕೈವಾಡ’’ದಿಂದ ಅಗರಿಯವರ ಹೆಸರಿನ ಬದಲು ಬೇರೊಬ್ಬ ಕಲಾವಿದರ ಹೆಸರು ಕಾಣಿಸಿಕೊಂಡಿತ್ತು. ಈ ನೋವು ಅಗರಿಯವರಿಗೆ ಕೊನೆಗಾಲದ ತನಕವೂ ಇತ್ತು. ನನ್ನಲ್ಲಿ ಮಾತಾಡುತ್ತಾ ಕುಡ್ವರೇ, ನಾನು ಸಂಮಾನ, ಪ್ರಶಸ್ತಿಯನ್ನು ಬೆಂಬತ್ತಿ ಹೋದವನಲ್ಲಾ. ಅದನ್ನು ಆಶಿಸುವವನೂ ಅಲ್ಲ. ಆದರೆ, ತಾನಾಗಿ ಅರಸಿ ಬಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಯಾರೋ ಪಡೆದರಲ್ಲಾ?’’ ಎಂದು ಕೆಲವು ಸಮಯದ ಹಿಂದೆ ನನ್ನಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದರು. ಕಲಾವಿದರಿಗೆ ಅರ್ಹವಾಗಿ ಸಲ್ಲಬೇಕಾದ ಪ್ರಶಸ್ತಿಯನ್ನು ಅವರ ಜೀವಿತ ಕಾಲದಲ್ಲಿ ನೀಡಿದರೆ ಮಾತ್ರ ಆ ಪ್ರಶಸ್ತಿಗೆ ಮೌಲ್ಯ ಬರುವುದಲ್ಲವೇ? ಭಾಗವತರು ಹಾಡುವಾಗ ಪಾತ್ರದ ಭಾವನೆಗನುಗುಣವಾಗಿ ಹಾಡು ಹೇಳಬೇಕು ಎಂದು ನನ್ನಲ್ಲಿ ತಿಳಿಸಿದ್ದ (ಲೇಖನದಲ್ಲಿ ಉಲ್ಲೇಖಿಸಿದ್ದೇನೆ ನೋಡಿ) ಅಗರಿಯವರು ಅದಕ್ಕೊಂದು ಉದಾಹರಣೆಯನ್ನೂ ನೀಡಿದ್ದರು. ರಘುರಾಮರು ಪ್ರಾರಂಭದ ಕಾಲದಲ್ಲಿ ತಾಳಮದ್ದಳೆಯಲ್ಲಿ ಭಾಗವತಿಕೆ ಮಾಡಿದ ಸಂದರ್ಭ.
ಕೃಷ್ಣ ಸಂಧಾನ’’ ಪ್ರಸಂಗ. ದಿ. ಅಗರಿ ಶ್ರೀನಿವಾಸ ಭಾಗವತರು ಭೀಮನ ಪಾತ್ರದಲ್ಲಿದ್ದರು (ಅಗರಿ ಶ್ರೀನಿವಾಸ ಭಾಗವತರು ಅಪರೂಪಕ್ಕೆ ಅರ್ಥವನ್ನೂ ಹೇಳುತ್ತಿದ್ದರು). ರಘುರಾಮರು ಭೀಮ – ದ್ರೌಪದಿಯ ಸಂಭಾಷಣೆಯ ಭೀಮನ ಪದ್ಯವನ್ನು ವಿಷಾದ ಭಾವದಲ್ಲಿ ಹಾಡಿದರು. (ಅಲ್ಲಿ ಭೀಮನಿಗಿರುವುದು ವೈರಾಗ್ಯ ಎನ್ನುವ ನೆಲೆಯಲ್ಲಿ) ಆದರೆ, ತಂದೆಯಾದ ಶ್ರೀನಿವಾಸ ಭಾಗವತರು ಆಕ್ಷೇಪಿಸಿ “ಆ ಪದ್ಯವನ್ನು ವಿಷಾದದಲ್ಲಿ ಹಾಡಿದರೆ ಭೀಮ ಹೇಗೆ ಅರ್ಥ ಹೇಳುವುದು? ಅಲ್ಲಿರುವುದು ವೈರಾಗ್ಯದ ಭಾವವಾದರೂ, ಅದು ಯಾರ ವೈರಾಗ್ಯ? ಭೀಮನದ್ದಲ್ಲವೇ? ಭೀಮನಲ್ಲಿ ವೈರಾಗ್ಯವೂ ವೀರರಸವೇ ಆಗಬೇಕು” ಎಂದು ತಿದ್ದಿದರಂತೆ.’’ ಇಂತಹ ಸೂಕ್ಷ್ಮಗಳು ಭಾಗವತರಿಗೆ ತಿಳಿದರೆ, ಪ್ರಸಂಗವು ಯಶಸ್ವಿಯಾಗುತ್ತದೆ’’ ಎಂಬುದು ಅಗರಿ ರಘುರಾಮ ಭಾಗವತರ ಅಭಿಪ್ರಾಯ. – ಎಂ. ಶಾಂತರಾಮ ಕುಡ್ವ, ಮೂಡಬಿದಿರೆ)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions