Saturday, January 18, 2025
Homeಯಕ್ಷಗಾನಯಕ್ಷಭೀಮ - ಮಾಣಂಗಾಯಿ ಕೃಷ್ಣ ಭಟ್ಟರು

ಯಕ್ಷಭೀಮ – ಮಾಣಂಗಾಯಿ ಕೃಷ್ಣ ಭಟ್ಟರು

ಹಲವಾರು ಮಂದಿ ಮಹನೀಯರ ತ್ಯಾಗದ ಫಲವಾಗಿ ಇಂದು ಯಕ್ಷಗಾನ ವೇಗೋತ್ಕರ್ಷವನ್ನು ಪಡೆದುಕೊಂಡಿದೆ. ಅಂತಹವರೆಲ್ಲಾ ಕೇವಲ ಯಕ್ಷಗಾನವನ್ನೇ ಉಸಿರಾಗಿಸಿಕೊಂಡವರು. ನಾಳೆಯ ಬದುಕಿಗೆ ಒಂದಷ್ಟು ಕೂಡಿಡಲಿಲ್ಲ. ಪರಿವಾರದ ಬಗ್ಗೆ ಅತಿಯಾದ ಚಿಂತೆ ಮಾಡಲಿಲ್ಲ. ತಮ್ಮ ಕನಸು ಮನಸುಗಳಲ್ಲಿಯೂ ಕೇವಲ ಯಕ್ಷಗಾನದ ಬಗ್ಗೆ ಮಾತ್ರ ಯೋಚಿಸಿದರು. ಆ ಯೋಚನೆಯಲ್ಲಿಯೇ ತಮ್ಮ ಪೂರ್ಣ ಆಯುಸ್ಸನ್ನು ಕಳೆದರು. ಹಾಗಾಗಿ ತಮ್ಮ ಬದುಕನ್ನು ಯಕ್ಷಗಾನ ಕಲೆಯ ಉತ್ಕರ್ಷೆಗಾಗಿಯೇ ಸವೆಸಿದ ಹಿರಿಯ ಕಲಾವಿದರುಗಳೆಲ್ಲಾ ನಮ್ಮ ಪಾಲಿಗೆ ವಂದನೀಯರು. ಪ್ರಾತಃಸ್ಮರಣೀಯರು. ಅವರು ಪಟ್ಟ ಕಷ್ಟ, ತ್ಯಾಗದ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಹೀಗೆ ತಮ್ಮ ಬದುಕನ್ನು ಯಕ್ಷಗಾನ ಕಲೆಗಾಗಿಯೇ ಮುಡಿಪಾಗಿರಿಸಿದ ಖ್ಯಾತ ಕಲಾವಿದರಲ್ಲಿ ಪುತ್ತೂರು ಕೃಷ್ಣ ಭಟ್ಟರೂ (ಮಾಣಂಗಾಯಿ ಕೃಷ್ಣ ಭಟ್ಟರು) ಒಬ್ಬರು. ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಪುತ್ತೂರು ಕೃಷ್ಣ ಭಟ್ಟರದ್ದು ಭೌಮ ಸಾಧನೆ.  ಮಾಣಂಗಾಯಿ ಕೃಷ್ಣ ಭಟ್ಟರ ಜೀವಿತಾವಧಿ 1904-1979. ಸುಮಾರು ಐವತ್ತೆಂಟಕ್ಕೂ ಹೆಚ್ಚಿನ ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿರುತ್ತಾರೆ. 
ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಭೀಮಗುಳಿ ವೆಂಕಟರಮಣಯ್ಯ ಮತ್ತು ದೇವಮ್ಮ ದಂಪತಿಗಳ ಪುತ್ರನಾಗಿ 1904 ಆಗಸ್ಟ್ 1ರಂದು  ಮಾಣಂಗಾಯಿ ಕೃಷ್ಣ ಭಟ್ಟರು ಈ ಲೋಕದ ಬೆಳಕನ್ನು ಕಂಡವರು. ಜನಿಸಿದ್ದು ಅಜ್ಜನ ಮನೆಯಲ್ಲಿ. ಕಾಸರಗೋಡು ತಾಲೂಕಿನ ಕಾರಡ್ಕ ಗ್ರಾಮದ  ಮಾಣಂಗಾಯಿ ಎಂಬಲ್ಲಿ. ಹಾಗಾಗಿ  ಮಾಣಂಗಾಯಿ ಕೃಷ್ಣ ಭಟ್ಟರೆಂದೇ ಕರೆಸಿಕೊಂಡಿದ್ದರು. ದಾಖಲೆಗಳ ಪ್ರಕಾರ ಇವರ ಹೆಸರು ಭೀಮಗುಳಿ ಕೃಷ್ಣಯ್ಯ ಎಂದು. ಇದು ಮನೆ ಅಜ್ಜನ ಹೆಸರು.  ಮಾಣಂಗಾಯಿ ಎಂಬ ಊರನ್ನು ಮಾಡಂಗಾಯಿ, ಮಾಳಂಗಾಯಿ ಎಂದು ಕರೆಯುವ ರೂಢಿಯೂ ಇದೆ. ತಂದೆ ಭೀಮಗುಳಿ ವೆಂಕಟರಮಣಯ್ಯ ಅವರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಅಲ್ಲದೆ ಅಜ್ಜನಗದ್ದೆ ಗಣಪಯ್ಯ, ಮಂಗಲ್ಪಾಡಿ ಕೃಷ್ಣಯ್ಯ (ದೇರಾಜೆ ಸೀತಾರಾಮಯ್ಯನವರ ತೀರ್ಥರೂಪರು) ಅವರುಗಳು ಬಂಧುಗಳೇ ಆಗಿದ್ದರು.  ಮಾಣಂಗಾಯಿ ಕೃಷ್ಣ ಭಟ್ಟರ ತಾಯಿಯ ತಂದೆ (ಅಜ್ಜನ ಮನೆಯ ಅಜ್ಜ)  ಮಾಣಂಗಾಯಿ ವೆಂಕಟೇಶ್ವರ ಭಟ್ಟರು ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಖ್ಯಾತ ಕಲಾವಿದರಾಗಿ ಮೆರೆದವರು. ಇವರು ಕೂಡ್ಲು ಮೇಳದಲ್ಲಿ ತಿರುಗಾಟ ನಡೆಸಿದವರು.  ಮಾಣಂಗಾಯಿ ವೆಂಕಪ್ಪ ಭಟ್ಟರೆಂದೇ ಖ್ಯಾತರಾಗಿದ್ದರು. ಕೂಡ್ಲು ಶ್ಯಾನುಭಾಗರ ಮನೆಯವರಿಗೂ, ಕಲಾಸಕ್ತರಾಗಿದ್ದ ಪುಂಡೂರು ಪುಣಿಂಚತ್ತಾಯರ ಮನೆಯವರಿಗೂ ಇವರು ಆತ್ಮೀಯರಾಗಿದ್ದರು. 
ಮಾಣಂಗಾಯಿ ಕೃಷ್ಣ ಭಟ್ಟರಿಗೆ ಎಳವೆಯಲ್ಲಿಯೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು. ತಂದೆ ತಾಯಿಯರ ಕಡೆಯಿಂದ ಅದು ರಕ್ತಗತವಾಗಿಯೇ ಬಂದಿತ್ತು. ಚೊಕ್ಕಾಡಿ ಮೇಳದ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಪ್ರದರ್ಶನಗಳನ್ನು ನೋಡಿ ಮನೆಗೆ ಬಂದು  ವಿಭೂತಿ, ಬಣ್ಣಗಳನ್ನು ಬಳಿದು ಅಡಿಕೆ ಹಾಳೆಯಿಂದ ತಯಾರಿಸಿದ ಪರಿಕರಗಳನ್ನು ಕಟ್ಟಿಕೊಂಡು ಕುಣಿಯುತ್ತಿದ್ದರಂತೆ. ಇವರ ಆಸಕ್ತಿಗೆ ತಂದೆ ವೆಂಕಟರಮಣಯ್ಯನವರು ಅಡ್ಡಿಪಡಿಸಿದವರಲ್ಲ. ಓದಿದ್ದು ಕಲ್ಮಡ್ಕ ಶಾಲೆಯಲ್ಲಿ. ಎರಡನೇ ತರಗತಿ ವರೆಗೆ ಮಾತ್ರ. ಕಾಟುಕುಕ್ಕೆ ಮಾಲಿಂಗ ರೈಗಳಿಂದ ನಾಟ್ಯಾಭ್ಯಾಸ. ಅಲ್ಲದೆ ಬಣ್ಣದ ನರಸಪ್ಪನವರಿಂದಲೂ ತರಬೇತಿಯನ್ನು ಪಡೆದಿದ್ದರು. 1918ರಲ್ಲಿ ತನ್ನ ಹದಿನಾಲ್ಕನೇ ವರ್ಷದಲ್ಲಿ ಧರ್ಮಸ್ಥಳ ಮೇಳಕ್ಕೆ. ಬಾಲಗೋಪಾಲನಾಗಿ ರಂಗಪ್ರವೇಶ. ಹಿರಿಯ ಕಲಾವಿದರ ನಿರ್ವಹಣೆಯನ್ನು ನೋಡಿ ಕಲಿತೇ ಬೆಳೆಯುತ್ತಾ ಸಾಗಿದರು. ಈ ಸಂದರ್ಭದಲ್ಲಿ ತೀರ್ಥರೂಪರ ಅಗಲುವಿಕೆ ಮತ್ತು ಇನ್ನಿತರ ಕಾರಣಗಳಿಂದ ಪುತ್ತೂರಿಗೆ ಬಂದು ನೆಲೆಸಿದ್ದರು. ಹೀಗೆ  ಮಾಣಂಗಾಯಿ ಕೃಷ್ಣ ಭಟ್ಟರು ಪುತ್ತೂರು ಕೃಷ್ಣ ಭಟ್ಟರೆಂದು ಕರೆಸಿಕೊಂಡರು. 1933ರಲ್ಲಿ ವಿವಾಹ. ಪರಮೇಶ್ವರಿ ಎಂಬವರು ಬಾಳಸಂಗಾತಿಯಾಗಿ ಬದುಕನ್ನು ಪ್ರವೇಶಿಸಿದ್ದರು. ಬಳಿಕ ಕೊರಕೋಡು ಮತ್ತು ಕಟೀಲು ಮೇಳಗಳಲ್ಲಿ ತಿರುಗಾಟ. ಆ ವೇಳೆಗಾಗಲೇ  ಮಾಣಂಗಾಯಿ ಕೃಷ್ಣ ಭಟ್ಟರು ಅಕ್ರೂರ, ಕರ್ಣ, ಭರತ, ವಲಲ, ಕೀಚಕ, ಶಕುನಿ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರು. ತನ್ನ ವೃತ್ತಿ ಜೀವನದಲ್ಲಿ ಒಮ್ಮೆಯೂ ಕುಸಿತವನ್ನು ಕಾಣದೆ ಬೆಳೆಯುತ್ತಾ ಸಾಗಿದ್ದರು. ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಅನೇಕ ವರ್ಷಗಳ ವ್ಯವಸಾಯ. 1937ರಿಂದ 1954ರ ವೆರೆಗೆ ವೃತ್ತಿ ಬದುಕಿಗೆ ಅನುಕೂಲವೆಂಬ ಕಾರಣಕ್ಕೆ ಮಂಗಳೂರಿನಲ್ಲಿ ನೆಲೆಸಿದ್ದರು. ಮಳೆಗಾಲದಲ್ಲಿ ಹರಿದಾಸರಾಗಿ ಹರಿಕಥೆಯನ್ನು ನಡೆಸುತ್ತಿದ್ದರು. ನಾಟ್ಯ ತರಬೇತಿಯನ್ನೂ ನೀಡುತ್ತಿದ್ದರು. ಶ್ರೀ ಕುಬಣೂರು ಬಾಲಕೃಷ್ಣ ರಾಯರು ನಡೆಸುತ್ತಿದ್ದ ಆಟ ಕೂಟಗಳಲ್ಲೂ ಇವರು ಭಾಗವಹಿಸುತ್ತಿದ್ದರು. 1954ರಲ್ಲಿ ಸಂಗೀತ ವಿದ್ವಾಂಸರಾಗಿದ್ದ ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ನಿರ್ದೇಶನದಂತೆ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ್ದರು.(ಕಾಂಚನ ಮೇಳ) 


ಶ್ರೀ  ಮಾಣಂಗಾಯಿ ಕೃಷ್ಣ ಭಟ್ಟರು ತಿರುಗಾಟ ನಡೆಸಿದ ಮೇಳಗಳು: ಧರ್ಮಸ್ಥಳ, ಕಟೀಲು, ಕೂಡ್ಲು, ಕುಂಡಾವು, ಸುರತ್ಕಲ್, ಮುಲ್ಕಿ, ಕದ್ರಿ, ಮೂಡುಬಿದಿರೆ, ಕಾಪು, ಪೊಳಲಿ, ತಲಪಾಡಿ ಮೊದಲಾದವು. ಅಲ್ಲದೆ ತಾನೇ ಕಟ್ಟಿ ಬೆಳೆಸಿದ ಕಾಂಚನ ಮೇಳದಲ್ಲೂ ವ್ಯವಸಾಯ ಮಾಡಿದ್ದರು. ಎಳವೆಯಲ್ಲಿ ಶ್ರೀಯುತರು ಬಣ್ಣದ ನರಸಪ್ಪ, ಕೋಲುಳಿ ಸುಬ್ಬ, ಕುಂಬಳೆ ನರಸಿಂಹ ಮೊದಲಾದ ಹಿರಿತಲೆಮಾರಿನ ಕಲಾವಿದರನ್ನು ಮೆಚ್ಚಿಕೊಂಡಿದ್ದರು. ತನ್ನ ವೃತ್ತಿ ಜೀವನದುದ್ದಕ್ಕೂ ಅನೇಕ ಹಿರಿಯ ಹಿಮ್ಮೇಳ, ಮುಮ್ಮೇಳ ಕಲಾವಿದರೊಂದಿಗಿನ ಒಡನಾಟದಿಂದ, ತನ್ನ ಸ್ವಯಂ ಪ್ರತಿಭೆ  ಪ್ರಯತ್ನಗಳಿಂದ  ಮಾಣಂಗಾಯಿಯವರು ಕಲಾವಿದನಾಗಿ ಬೆಳೆದು ಖ್ಯಾತರಾದವರು. ಕಂಸ, ಇಂದ್ರಜಿತು, ಕರ್ಣ, ತಾಮ್ರಧ್ವಜ, ಕಾರ್ತವೀರ್ಯ, ಮಾಗಧ, ಭಸ್ಮಾಸುರ, ವಲಲ,ಅಕ್ರೂರ, ದುಷ್ಟಬುದ್ಧಿ, ಹನುಮಂತ, ಶಕುನಿ, ಭರತ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ವಾಲಿ  ಮಾಣಂಗಾಯಿಯವರು ಇಷ್ಟಡುವ ಪಾತ್ರಗಳು. ಜೋಡಾಟದಲ್ಲಿ ಅವರಿಗೆ ಸ್ಪರ್ಧಿಯಾಗಿದ್ದವರು ಶ್ರೀ ಕದ್ರಿ ವಿಷ್ಣು. ಕದ್ರಿ ವಿಷ್ಣು- ಮಾಣಂಗಾಯಿ ಜೋಡಿಯು ಜೋಡಾಟದಲ್ಲಿ ಪ್ರಸಿದ್ಧವಾಗಿತ್ತು. ಬ್ರಹ್ಮ ಕಪಾಲದ ಬ್ರಹ್ಮ, ಕೃಷ್ಣಾರ್ಜುನದ ಅರ್ಜುನ, ಚಂಡ ಮುಂಡರು, ಕಂಸ ವಧೆಯ ಕಂಸ, ಕರ್ಣ, ಭರತ, ಮಾಗಧ, ಮೊದಲಾದ ಪಾತ್ರಗಳಂತೂ ಇವರಿಗೆ ಅಪಾರ ಖ್ಯಾತಿಯನ್ನೂ ತಂದು ಕೊಟ್ಟವು. ರಂಗದಲ್ಲಿ ಖಳನಾಯಕನಾಗಿ ವಿಜೃಂಭಿಸಿದರೂ ನಿಜ ಬದುಕಿನಲ್ಲಿ ಸರಳ ಸಜ್ಜನರಾಗಿದ್ದರೆಂದು ಹಿರಿಯ ಕಲಾಭಿಮಾನಿಗಳು ಅವರ ಬಗೆಗೆ ತಿಳಿಸುತ್ತಾರೆ.  ಮಾಣಂಗಾಯಿ ಕೃಷ್ಣ ಭಟ್ಟರು ಮಾಡದ ಪಾತ್ರಗಳಿಲ್ಲ. ಮಾಡಿದ ಪಾತ್ರಗಳೆಲ್ಲಾ ಯಶಸ್ವಿಯಾಗಿ ಇವರಿಗೆ ಹೆಸರನ್ನು ತಂದು ಕೊಟ್ಟಿತ್ತು. ಇದು ಗಮನಿಸಬೇಕಾದ ವಿಷಯ. 1954ರಲ್ಲಿ ಪುಟ್ಟಪರ್ತಿಯಲ್ಲಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ತಂಡದ ಪ್ರದರ್ಶನ. ಕಂಸ ವಧೆ ಪ್ರಸಂಗ.  ಮಾಣಂಗಾಯಿಯವರ ಕಂಸ. ಶ್ರೀಧರ ಭಂಡಾರಿಗಳ ಬಾಲಕೃಷ್ಣ. ಪ್ರದರ್ಶನವನ್ನು ನೋಡಿ ಮೆಚ್ಚಿಕೊಂಡ ಶ್ರೀ  ಸಾಯಿಬಾಬಾ ಅವರು ಉಭಯರನ್ನೂ ಸನ್ಮಾನಿಸಿ ಗೌರವಿಸಿದ್ದರು. 
ಜ್ಯೋತಿಷ್ಯ, ಕೆತ್ತನೆ ಕೆಲಸಗಳಿಂದ ಮೂರ್ತಿ ನಿರ್ಮಿಸುವುದು ಇವರ ಹವ್ಯಾಸಗಳಾಗಿತ್ತು. ಅಲ್ಲದೆ ವಾಹನ ಚಾಲನೆಯಲ್ಲೂ ಆಸಕ್ತರಾಗಿದ್ದರು. ಕುರಿಯ ವಿಠಲ ಶಾಸ್ತ್ರಿ, ಕರ್ಗಲ್ಲು ಸುಬ್ಬಣ್ಣ ಭಟ್, ಕಡಂದೇಲು ಪುರುಷೋತ್ತಮ ಭಟ್, ಮಧೂರು ನಾರಾಯಣ ಹಾಸ್ಯಗಾರ, ಕದ್ರಿ ವಿಷ್ಣು, ವೇಣೂರು ವೆಂಕಟ್ರಮಣ, ಮೊದಲಾದವರ ಜತೆ ಜೋಡಿ ಪಾತ್ರಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದರು. 
“ಕಣ್ಣುಗಳ ಮೂಲಕವೇ ಅನೇಕ ಭಾವಗಳನ್ನು ಪ್ರಕಟಿಸುತ್ತಿದರು. ನಾಟ್ಯದ ಮುಕ್ತಾಯಕ್ಕೆ ಚಂಗನೆ ನೆಗೆದು ತಾಳಕ್ಕೆ ಸರಿಯಾಗಿ ಸಿಂಹಾಸನವೇರುತ್ತಿದ್ದರು. ಯಾರಿಗೂ ಕರಗತವಾಗದ ಕಲೆಯು  ಮಾಣಂಗಾಯಿಯವರಿಗೆ ಸಿದ್ಧಿಯಾಗಿತ್ತು. ಕಂಸನಾಗಿ ಕನಸು ಕಾಣುವ ದೃಶ್ಯದಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದರು” ಅವರ ವೇಷಗಳನ್ನು ನೋಡಿದ ಹಿರಿಯ ಕಲಾಭಿಮಾನಿಗಳ ಅನಿಸಿಕೆ ಇದು. ಹಾಸ್ಯಪಾತ್ರಗಳನ್ನೂ ನಿರ್ವಹಿಸಿದ ಪುತ್ತೂರು ಕೃಷ್ಣ ಭಟ್ಟರು ಪಾತ್ರ ಯಾವುದೇ ಇರಲಿ, ಸಣ್ಣ ದೊಡ್ಡದೆಂಬ ಭೇದವಿಲ್ಲದೆ ಅಭಿನಯಿಸಿದವರು. ವೇಷಭೂಷಣಗಳ ಚಿತ್ರವನ್ನೂ ವಿವಿಧ ಪಾತ್ರಗಳ ಮುಖವರ್ಣಿಕೆಯನ್ನೂ ಬರೆದಿರಿಸಿ ಮುಂದಿನ ಜನಾಂಗಕ್ಕೆ ನೀಡಿರುತ್ತಾರೆ. 1954ರ ನಂತರ ಕಾಂಚನದಲ್ಲಿ ನೆಲೆಸಿ ತಿರುಗಾಟದ ಜತೆ ಕೃಷಿ ಕಾಯಕವನ್ನು ನಡೆಸುತ್ತಾ ಬಂದ  ಮಾಣಂಗಾಯಿ ಕೃಷ್ಣ ಭಟ್ಟರು 1966ರಲ್ಲಿ  ವೃತ್ತಿರಂಗದಿಂದ ನಿವೃತ್ತರಾಗಿದ್ದರು. ಆದರೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ವೇಷ ಮಾಡಿದ್ದಾರೆ. ಕಲಾಸಕ್ತರಿಗೆ ತರಬೇತಿಯನ್ನೂ ನೀಡಿರುತ್ತಾರೆ. 1979 ಮಾರ್ಚ್ 29ರಂದು  ಪುತ್ತೂರು ಕೃಷ್ಣ ಭಟ್ಟರು ಕಲಾಮಾತೆಯ ಮಡಿಲನ್ನು ಸೇರಿಕೊಂಡಿದ್ದರು. 2004ರಲ್ಲಿ ‘ಯಕ್ಷಭೀಮನ ನೂರು ಹೆಜ್ಜೆಗಳು” ಪುತ್ತೂರು ಕೃಷ್ಣ ಭಟ್ಟರ ಸಂಸ್ಮರಣ ಗ್ರಂಥವು ಪ್ರಕಟವಾಗಿತ್ತು. ಇದರ ಸಂಪಾದಕರು ಡಾ. ಪಾದೇಕಲ್ಲು ವಿಷ್ಣು ಭಟ್ ಮತ್ತು ಶ್ರೀ ರಾಜಗೋಪಾಲ ಕನ್ಯಾನ. ಪ್ರಕಾಶಕರು  ಮಾಣಂಗಾಯಿ ಕೃಷ್ಣ ಭಟ್ಟರ ಮೊಮ್ಮಗ ಡಾ. ಕೃಷ್ಣಮೂರ್ತಿ ಪಂಜ ಅವರು. ಖ್ಯಾತ ಕಲಾವಿದ ದಿ| ಪುತ್ತೂರು (ಮಾಣಂಗಾಯಿ) ಕೃಷ್ಣ ಭಟ್ಟರಿಗೆ ನುಡಿನಮನಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

 

RELATED ARTICLES

1 COMMENT

  1. ಮಾಣಂಗಾಯಿ ಯಾ ಪುತ್ತೂರು ಕೃಷ್ಣ ಭಟ್ಟರು ಲೇಖನ ವನ್ನು ಎದುರು ನೋಡುತ್ತಿದ್ದೆ.
    ಉತ್ತಮವಾಗಿ ಮೂಡಿ ಬಂದಿದೆ.
    ಅವರು ಮಗ‌ ರಾಧಾಕೃಷ್ಣ ರು ನನ್ನ ಫಿಸಿಕ್ಸ್ ಗುರುಗಳು.ಅವರ ಅಣ್ಣ ಬಾಲಚಂದ್ರ ರು ನನ್ನ ಮಿತ್ರರು.
    1955 ನೆ ಇಸವಿ ಯಲ್ಲಿ ಬೆಂಗಳೂರು ಲಾಲ್ಬಾಗ್ ನಲ್ಲಿ ರಶ್ಶ ಪ್ರಧಾನಿ ಕ್ರಶ್ಚೇವ್ ಎದುರು ನಡೆದ ಯಕ್ಷಗಾನ ಪ್ರದರ್ಶನ ದ ಬಗ್ಗೆ ಬರೆಯಿರಿ

LEAVE A REPLY

Please enter your comment!
Please enter your name here

Most Popular

Recent Comments