ಕೀರ್ತಿಶೇಷ ಶ್ರೀ ಪಡ್ರೆ ಚಂದು ಅವರನ್ನು ಕಲಾಭಿಮಾನಿಗಳೆಲ್ಲಾ ಬಲ್ಲರು. ಶ್ರೀಯುತರು ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಕಲಾವಿದರೂ ಹೌದು, ಗುರುಗಳೂ ಹೌದು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗಿಕ್ಕಿದ ಸಾಧಕರು. ಈಗ ಅವ್ಯಕ್ತ ಪ್ರಪಂಚದಲ್ಲಿರುವ ಅವರು ಹಿರಿಯ ಅನುಭವೀ ವೇಷಧಾರಿಯಾಗಿ ರಂಗವನ್ನಾಳಿದ್ದರು, ಇದು ಮರ್ತ್ಯ ಲೋಕ. ಮೃತ್ಯುವು ಸಹಜವಾದುದರಿಂದ ಈ ಹೆಸರು. ಮೃತ್ಯುವಿಗೆ ವಶವಾಗತಕ್ಕವರು ಎಂಬರ್ಥದಲ್ಲಿ ಇಲ್ಲಿ ಜನಿಸಿದವರೆಲ್ಲಾ ಮರ್ತ್ಯರು. ಲೋಕನಿಯಮಗಳನ್ನು ಮುರಿದು ಮೆರೆಯಲು ಯಾರಿಗೂ ಸಾಧ್ಯವಿಲ್ಲ. ಆದರೂ ಬದುಕಿರುವಾಗ ಮಾಡಿದ ಸಾಧನೆಗಳು, ಸತ್ಕಾರ್ಯಗಳು ಅವರನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ. ಇದುವೇ ಸತ್ತು ಬದುಕುವ ರೀತಿಯು. ಅವರು ಮರೆಯಲಾಗದ, ಮರೆಯಬಾರದ ಮಹಾನುಭಾವರಾಗಿ ಜನಮಾನಸದಲ್ಲಿ ಶಾಶ್ವತರಾಗಿ ನೆಲೆಸುತ್ತಾರೆ. ಅಂತಹಾ ಶ್ರೇಷ್ಠ ಕಲಾವಿದರಲ್ಲೊಬ್ಬರು ಕೀರ್ತಿಶೇಷ ಶ್ರೀ ಪಡ್ರೆ ಚಂದು ಅವರು.
ಪುಂಡುವೇಷಧಾರಿಯಾಗಿ ದೈವದತ್ತವಾದ ತನ್ನ ರೂಪ, ಸುಂದರವಾದ ನಾಟ್ಯ, ಹಿತಮಿತವಾದ ಮಾತುಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡ ಕಲಾವಿದರಿವರು. ನಾಟ್ಯಾಚಾರ್ಯ, ನಾಟ್ಯವಿಶಾರದ ಎಂಬ ಬಿರುದುಗಳನ್ನು ಅರ್ಹತೆಯಿಂದಲೇ ಗಳಿಸಿಕೊಂಡು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದಾರೆ. ಈಗ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಪಡ್ರೆ ಶ್ರೀ ಚಂದು ಅವರ ಹುಟ್ಟೂರು. ಅವರು ಜನಿಸಿದ್ದು ಬಹುಶಃ 1919ರಲ್ಲಿ ಇರಬೇಕು. ನಿಖರವಾಗಿ ತಿಳಿದಿಲ್ಲ. ಶ್ರೀ ಕುಂಞ ಶೆಟ್ಟಿಗಾರ್ ಮತ್ತು ಶ್ರೀಮತಿ ಕೊರಪ್ಪಾಳು ದಂಪತಿಗಳ ಮಗನಾಗಿ ಜನನ. ಹಳ್ಳಿ ಪ್ರದೇಶ. ಅಲ್ಲಿಂದ ಕರ್ನಾಟಕ ಗಡಿಗೆ ಹೆಚ್ಚು ದೂರವಿಲ್ಲ. ಕೇವಲ ಐದಾರು ಕಿ.ಮೀ. ಇರಬಹುದು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ವಾಹನ ಸೌಕರ್ಯಗಳಿಲ್ಲದ ಕಾಲ. ನಡೆದುಕೊಂಡೇ ಸಾಗಿ ಆಟ ನೋಡುತ್ತಿದ್ದರು. ಇಚ್ಲಂಪಾಡಿ ಮತ್ತು ಕೊರಕ್ಕೋಡು ಮೇಳಗಳ ಪ್ರದರ್ಶನ. ಅಲ್ಲದೆ ಊರ ಪರವೂರ ಆಟಗಳನ್ನೂ ನೋಡುತ್ತಿದ್ದರು.
ಪಡ್ರೆ ಪರಿಸರದಲ್ಲಿ ನಡೆಯುತ್ತಿದ್ದ ತಾಳಮದ್ದಲೆಗೂ ಇವರು ಖಾಯಂ ಪ್ರೇಕ್ಷಕ. ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು. ತಾನೂ ಕಲಾವಿದನಾಗಬೇಕೆಂಬ ಆಸೆಯೂ ಸಹಜವಾಗಿ ಮೂಡಿತ್ತು. ನಾಟ್ಯ ಕಲಿಯುವ ಮೊದಲೇ ತನ್ನ ಹನ್ನೆರಡನೇ ವಯಸ್ಸಿನಲ್ಲಿ ಚೊಕ್ಕಾಡಿ ಮೇಳಕ್ಕೆ ಸೇರಿದ್ದರು. ಅದೂ ಮನೆಯವರಿಗೆ ತಿಳಿಸದೇ! ಒಂದು ವರ್ಷ ತಿರುಗಾಟದ ಬಳಿಕ ಸ್ತ್ರೀ ಪಾತ್ರಧಾರಿ ಶ್ರೀ ಗಣಪತಿ ಭಟ್ಟರಿಂದ ನಾಟ್ಯ ಕಲಿಕೆ. ಕೊರಕ್ಕೋಡು ಮೇಳದಲ್ಲಿ ಒಂದು ವರ್ಷ ತಿರುಗಾಟ. ಬಳಿಕ ತನ್ನ ಗುರುಗಳ ಮೂಲಕ ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಶ್ರೀ ಸದಾಶಿವ ಶಾನುಭೋಗರ ಕೂಡ್ಲು ಮೇಳದಲ್ಲಿ ತಿರುಗಾಟ. ಮತ್ತೆ ಮೂಲ್ಕಿ ಮತ್ತು ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ. ಇದು ತಲಾ ಒಂದು ವರ್ಷ. ಅಲ್ಲದೆ ಪಡ್ರೆ ಜಟಾಧಾರೀ ಮೇಳ ಮತ್ತು ಕುಂಡಾವು ಮೇಳಗಳಲ್ಲೂ ತಿರುಗಾಟ ನಡೆಸಿದ್ದರು. ನಂತರ ಸುಮಾರು 50 ವರ್ಷಗಳ ಕಾಲ ಪಡ್ರೆ ಚಂದು ಅವರು ಕಟೀಲು ಮೇಳದಲ್ಲಿ ವ್ಯವಸಾಯ ಮಾಡಿದ್ದರಂತೆ.
ತನ್ನ ವೃತ್ತಿ ಜೀವನದಲ್ಲಿ ಮವ್ವಾರು ಕಿಟ್ಟಣ್ಣ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು, ಮಾಂಬಾಡಿ ನಾರಾಯಣ ಭಾಗವತರು, ಅಗರಿ ಶ್ರೀನಿವಾಸ ಭಾಗವತರು, ನೆಡ್ಲೆ ನರಸಿಂಹ ಭಟ್, ಇರಾ ಗೋಪಾಲಕೃಷ್ಣ ಭಾಗವತರು, ವೇಷಧಾರಿಗಳಾದ ಸುಬ್ರಾಯ ಹಾಸ್ಯಗಾರ, ಅಳಿಕೆ ಮೋನಪ್ಪ ಶೆಟ್ರು, ಕಾವು ಕಣ್ಣನ್, ನರ್ಸಪ್ಪಯ್ಯ, ಕದ್ರಿ ವಿಷ್ಣು, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ಕಡಂದೇಲು ಪುರುಷೋತ್ತಮ ಭಟ್, ಬೋಳಾರ ನಾರಾಯಣ ಶೆಟ್ಟಿ, ಸ್ತ್ರೀ ವೇಷದ ಐತಪ್ಪ ಶೆಟ್ರು ಮೊದಲಾದ ಅನೇಕ ಶ್ರೇಷ್ಠ ಕಲಾವಿದರ ಒಡನಾಟವು ಪಡ್ರೆ ಚಂದು ಅವರಿಗೆ ದೊರಕಿತ್ತು. ಶ್ರದ್ಧೆಯಿಂದ ನೋಡುವುದು, ಕೇಳುವುದು, ಓದುವುದು ಹೀಗೆ ಸದಾ ಅಧ್ಯಯನದಿಂದ ಚಂದು ಅವರು ಬೆಳೆಯುತ್ತಾ ಸಾಗಿದವರು. ಜತೆಗೆ ಹಿರಿಯ ಶ್ರೇಷ್ಠ ಕಲಾವಿದರ ಒಡನಾಟ. ಮೇಲೆ ಹೇಳಿದ ಹೆಚ್ಚಿನ ಕಲಾವಿದರನ್ನೂ ನಾನು ನೋಡಿಲ್ಲ. ಆ ಭಾಗ್ಯ ನನಗಿಲ್ಲ.
ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ ಶ್ರೀ ಪಡ್ರೆ ಚಂದು ಅವರು ಕೇಶಾವರೀ ಕಿರೀಟದ ವೇಷಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿರುತ್ತಾರೆ. ಹಾಸ್ಯ ಪಾತ್ರಗಳನ್ನೂ ಮಾಡುತ್ತಿದ್ದರಂತೆ. ಪುಂಡು ವೇಷ, ಸ್ತ್ರೀ ವೇಷ, ಕಸೆ ಸ್ತ್ರೀ ವೇಷಗಳಲ್ಲಿ ಹೊಳೆದು ಕಾಣಿಸಿಕೊಂಡರು. ದೇವರ ಕೊಡುಗೆಯಾದ ರೂಪ, ಮುಗುಳುನಗೆ ಮತ್ತು ಅಂದವಾದ ಚುರುಕಿನ ನಾಟ್ಯಗಳಿಂದ ಅವರ ವೇಷಗಳು ಮೆರೆಯುತ್ತಿದ್ದುವು ಎಂದು ಹಿರಿಯ ಪ್ರೇಕ್ಷಕರು ಹೇಳುತ್ತಾರೆ. ಕಾವು ಕಣ್ಣನ್ ಅವರಿಂದ ಶ್ರೀಕೃಷ್ಣನ ಒಡ್ಡೋಲಗದ ಕ್ರಮವನ್ನು ಅಭ್ಯಸಿಸಿ, ಅಭಿನಯಿಸಿದರು. ಈ ಒಡ್ಡೋಲಗ ಎಂಬ ಪ್ರದರ್ಶನವು ಪಡ್ರೆ ಚಂದು ಅವರಿಗೆ ಖ್ಯಾತಿಯನ್ನೂ ತಂದು ಕೊಟ್ಟಿತ್ತು. ಹಿರಿಯ ಬಲಿಪ ನಾರಾಯಣ ಭಾಗವತರ ಒಡನಾಟ ಮತ್ತು ಮಾರ್ಗದರ್ಶನ, ಶ್ರೇಷ್ಠ ಕಲಾವಿದರೊಂದಿಗಿನ ತಿರುಗಾಟವೇ ನನ್ನ ಯಶಸ್ವೀ ಕಲಾಬದುಕಿಗೆ ಕಾರಣ ಎಂದು ಪಡ್ರೆ ಚಂದು ಅವರು ಹೇಳುತ್ತಿದ್ದರಂತೆ.
ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಆರಂಭದಿಂದ ತೊಡಗಿ ಏಳು ವರ್ಷಗಳ ಕಾಲ ಕೇಂದ್ರದ ಗುರುವಾಗಿ ನಾಟ್ಯ ತರಬೇತಿಯನ್ನು ನೀಡಿದ್ದರು. ಇಲ್ಲೊಂದು ಗಮನಿಸಬೇಕಾದ ಅಂಶವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರ. ಅಲ್ಲಿಗೆ ಗುರುಗಳಾಗಿ ಕಟೀಲು ಮೇಳದ ಕಲಾವಿದರು. ಅದೆಂತಹಾ ಅತ್ಯುತ್ತಮ ಸೌಹಾರ್ದತೆ. ಧರ್ಮಸ್ಥಳ ಕ್ಷೇತ್ರ ಮತ್ತು ಅಲ್ಲಿನ ಖಾವಂದರುಗಳ ಹೃದಯ ವೈಶಾಲ್ಯತೆಯನ್ನು ಇದು ತೆರೆದು ತೋರಿಸುತ್ತದೆ. ನಿಜ ಪ್ರತಿಭಾವಂತರನ್ನು ಗುರುತಿಸಿ ಅವಕಾಶ ನೀಡುವ ಅವರ ಶ್ರೇಷ್ಠ ಗುಣವು ಅಭಿನಂದನೀಯವಾದುದು. ಯಕ್ಷಗಾನ ಕ್ಷೇತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಗಳು ಅನುಪಮವಾದುವು. ಶ್ರೀ ಪಡ್ರೆ ಚಂದು ಅವರ ಶಿಷ್ಯರನೇಕರು ಇಂದು ಕಲಾವಿದರಾಗಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ.
ಶ್ರೀ ಪಡ್ರೆ ಚಂದು ಅವರು ತನ್ನ 9ನೆಯ ವಯಸ್ಸಿನಲ್ಲಿ ಗುರು ಶ್ರೀ ಗಣಪತಿ ಭಟ್ಟರ ಜತೆ ತೆರಳಿ ಇರಾ ಎಂಬಲ್ಲಿ ವಾಸಿಸಿದ್ದರು. ಮತ್ತೆ ಹಿರಿಯ ಬಲಿಪರ ಹೇಳಿಕೆಯಂತೆ ವಿಟ್ಲ ಸಮೀಪದ ಓಡ್ನಾಳಕ್ಕೆ ಬಂದು ನೆಲೆಸಿದ್ದರು. ಪಡ್ರೆ ಚಂದು ಅವರ ಪತ್ನಿ ಶ್ರೀಮತಿ ಭಾಗೀರಥಿ. ಪಡ್ರೆ ಚಂದು ದಂಪತಿಗಳಿಗೆ ಏಳು ಮಂದಿ ಮಕ್ಕಳು. (ಐದು ಗಂಡು ಮತ್ತು ಎರಡು ಹೆಣ್ಣು)
ಗಂಡುಮಕ್ಕಳು: ಪಡ್ರೆ ಕುಮಾರ, ರಾಮ, ಕೃಷ್ಣ, ನಾರಾಯಣ, ಪದ್ಮನಾಭ. ಇವರಲ್ಲಿ ಪಡ್ರೆ ಕುಮಾರ ಅವರು ಕಟೀಲು ಮೇಳದ ಹಿರಿಯ ಕಲಾವಿದರು. ಕಳೆದ 58 ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದಾರೆ. ಪಡ್ರೆ ಚಂದು ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಜಯ ಮತ್ತು ಅಂಬಿಕಾ.
ನಾಟ್ಯಾಚಾರ್ಯ ಶ್ರೀ ಪಡ್ರೆ ಚಂದು ಅವರ ಶಿಷ್ಯ ಗಡಣ ದೊಡ್ಡದು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಮೊದಲ ಏಳು ವರ್ಷ ಕಲಿತವರೆಲ್ಲಾ ಅವರ ಶಿಷ್ಯಂದಿರೇ ಆಗಿದ್ದಾರೆ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಡಿ.ಮನೋಹರ ಕುಮಾರ್, ನಿಡ್ಲೆ ಗೋವಿಂದ ಭಟ್, ಗುಂಡಿಮಜಲು ಗೋಪಾಲ ಭಟ್, ಸಬ್ಬಣಕೋಡಿ ಸಹೋದರರು, ಮಾಡಾವು ಕೊರಗಪ್ಪ ರೈ, ವಸಂತ ಗೌಡ ಮೊದಲದವರೆಲ್ಲಾ ಪಡ್ರೆ ಚಂದು ಅವರಿಂದಲೇ ನಾಟ್ಯಾಭ್ಯಾಸ ಮಾಡಿದವರೆಂದು ನನ್ನ ನೆನಪು. ಪಡ್ರೆ ಶ್ರೀ ಚಂದು ಅವರ ಶಿಷ್ಯ ಸಬ್ಬಣಕೋಡಿ ಶ್ರೀ ರಾಮ ಭಟ್ಟ ಅವರೂ ಯಕ್ಷಗಾನ ನಾಟ್ಯ ತರಬೇತುದಾರರು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ್ದಾರೆ. ಅವರ ಶಿಷ್ಯಂದಿರೂ ಇಂದು ಅನೇಕ ಮೇಳಗಳಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಅಲ್ಲದೆ ಸಬ್ಬಣಕೋಡಿ ರಾಮ ಭಟ್ಟರು ಪೆರ್ಲದಲ್ಲಿ ಶ್ರೀ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಕಲಿಕಾಸಕ್ತರಿಗೆ ತರಬೇತಿ ನೀಡುವುದರ ಮೂಲಕ ಗುರು ಪಡ್ರೆ ಚಂದು ಅವರನ್ನು ನೆನಪಿಸಿ ಗೌರವಿಸುತ್ತಿದ್ದಾರೆ. ಕಲಾವಿದರಾಗಿ, ನಾಟ್ಯಾಚಾರ್ಯರಾಗಿ ಯಕ್ಷಗಾನ ಕಲೆಗೆ ಶ್ರೇಷ್ಠ ಕೊಡುಗೆಗಳನ್ನು ನೀಡಿದ ಕೀರ್ತಿಶೇಷ ಶ್ರೀ ಪಡ್ರೆ ಚಂದು ಅವರಿಗೆ ನುಡಿನಮನಗಳು.
ನಿಮ್ಮ ಪಡ್ರೆ ಚಂದು ಬಗ್ಗೆ ಬರೆದ ಲೇಖನವು ಹಳೆ ಯಕ್ಷಗಾನ ಕಲಾವಿದ ರನ್ನು ಪರಿಚಯಿಸುವ ಪ್ರಯತ್ನ ಒಳ್ಳೆಯ ಕೆಲಸ.
ಹೀಗೆ ನೀವು ಇನ್ನೂ ಹಳೆಯ ಯಕ್ಷಗಾನ ಕಲಾವಿದ ರನ್ನು ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿ ಎಂದು ಆಶಿಸುತ್ತೇನೆ