Saturday, January 18, 2025
Homeಯಕ್ಷಗಾನಬರೆ ಕೇಶವ ಭಟ್ - ಹಿರಿತನದ ಹಿರಿಯ ಅರ್ಥಧಾರಿ

ಬರೆ ಕೇಶವ ಭಟ್ – ಹಿರಿತನದ ಹಿರಿಯ ಅರ್ಥಧಾರಿ

ಶ್ರೀ ಬರೆ ಕೇಶವ ಭಟ್ಟರು ಯಕ್ಷಗಾನ ತಾಳಮದ್ದಳೆಯ ಹಿರಿಯ, ಶ್ರೇಷ್ಠ ಅರ್ಥಧಾರಿಗಳಲ್ಲೊಬ್ಬರು. ವಿಮರ್ಶಕ, ಲೇಖಕ, ಶ್ರೇಷ್ಠ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಷಿ, ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಂತೆ ಯಕ್ಷಗಾನ ಕಲೆಯ ಬಗೆಗೆ ಅನುಭವಗಳನ್ನು ಹೊಂದಿ ಇದಮಿತ್ಥಂ ಎಂದು ಹೇಳಬಲ್ಲವರು. ಜೋಷಿ, ಶಾಸ್ತ್ರಿಗಳಂತೆ ಶೇಣಿ, ಸಾಮಗರ ಸಮಕಾಲೀನರಾಗಿ ಕೂಟಗಳಲ್ಲಿ ಭಾಗವಹಿಸಿ ಪಕ್ವರಾದವರು. ಗಂಭೀರ ಸ್ವಭಾವದವರಾದರೂ ಸರಳವಾಗಿ ಜೀವಿಸಿದವರು. ಧರಿಸಿದ ಉಡುಪುಗಳಂತೆ ಅಂತರಂಗವೂ ಸ್ವಚ್ಛ. ಮಗುವಿನಂತೆ ಮುಗ್ಧ ಮನಸ್ಸನ್ನು ಹೊಂದಿದ ಶ್ರೀ ಬರೆ ಕೇಶವ ಭಟ್ಟರು ಕಿರಿಯರಿಗೆ ಗುರುವಾಗಿಯೂ, ಸಮಾನ ವಯಸ್ಕರಿಗೆ ಅತ್ಯುತ್ತಮ ಮಿತ್ರರಾಗಿಯೂ ಸಲಹೆಗಳನ್ನು ಕೊಡಬಲ್ಲ, ಕೊಟ್ಟ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿ ಬದುಕಿದವರು. ಸಹ ಕಲಾವಿದರ ನಿರ್ವಹಣೆ ಮೆಚ್ಚುಗೆಯಾದರೆ ಪ್ರೋತ್ಸಾಹಿಸುವ, ತಪ್ಪಾದರೆ ನಯವಾಗಿ ಖಂಡಿಸುವ ಗುಣಗಳನ್ನು ಹೊಂದಿದವರು. ತಾನು ಕಾಣಿಸಿಕೊಳ್ಳಬೇಕೆಂಬ ಆಸೆಯೇ ಇಲ್ಲ. ತಾಳಮದ್ದಳೆ ಒಳ್ಳೆಯದಾಗಬೇಕೆಂಬ ತುಡಿತ ಮಾತ್ರ.

ಶ್ರೀ ಬರೆ ಕೇಶವ ಭಟ್ಟರು ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಬರೆ ಎಂಬಲ್ಲಿ 30-10-1941ರಂದು ಬರೆ ವೆಂಕಟ್ರಮಣ ಭಟ್ಟ ಮತ್ತು ಶ್ರೀಮತಿ ಗೌರಿ ದಂಪತಿಗಳ ಮಗನಾಗಿ ಜನಿಸಿದರು. ಕೈರಂಗಳ ಮತ್ತು ವಿಟ್ಲ ಶಾಲೆಗಳಲ್ಲಿ ಓದಿದ ಇವರದು ಕೃಷಿ ಕುಟುಂಬ. ನಂತರ ಮಂಗಳೂರು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಜನೆ (TCH). ತರಬೇತು ಪೂರೈಸಿ ಮರಳಿದ ಇವರು ಕೈರಂಗಳ ಶಾಲೆಯಲ್ಲಿ 1 ವರ್ಷ, ಶಿರಂಕಲ್ಲು ಶಾಲೆಯಲ್ಲಿ 3 ವರ್ಷ, ನಂತರ ನಿರಂತರ 31 ವರ್ಷಗಳ ಕಾಲ ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕನಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ಎಂಬ ಅಮೃತವನ್ನು ನೀಡಿದರು. ಅವರ ಶಿಷ್ಯಂದಿರನೇಕರು ದೇಶ ವಿದೇಶಗಳಲ್ಲಿ ಉದ್ಯೋಗಿಗಳಾಗಿ ಇಂದು ದುಡಿಯುತ್ತಿದ್ದಾರೆ.

ಇವರ ಹುಟ್ಟೂರು ಕೈರಂಗಳವು. ಯಕ್ಷಗಾನಾಸಕ್ತರೇ ತುಂಬಿಕೊಂಡಿರುವ ಪ್ರದೇಶ. ಯಕ್ಷಗಾನ ಸಂಘವೂ ಕಾರ್ಯಾಚರಿಸುತ್ತಿತ್ತು. ಶ್ರೀ ಬರೆ ಕೇಶವ ಭಟ್ಟರಿಗೆ ಯಕ್ಷಗಾನವು ಹಿರಿಯರಿಂದ ಬಂದ ಬಳುವಳಿ. ಇವರ ಸಣ್ಣಜ್ಜ ಹವ್ಯಾಸೀ ಭಾಗವತರಾಗಿದ್ದರು. ಕೈರಂಗಳದಲ್ಲಿ ಪ್ರತೀ ಶನಿವಾರ ರಾತ್ರೆ ತಾಳಮದ್ದಳೆ ಕಾರ್ಯಕ್ರಮವೂ ನಡೆಯುತ್ತಿತ್ತು. ಯಕ್ಷಗಾನದತ್ತ ಆಸಕ್ತರಾದ ಶ್ರೀ ಬರೆಯವರು ಪ್ರಥಮ ಬಾರಿ ಕೈರಂಗಳ ಶಾಲೆಯ ಅಭ್ಯಾಸೀ ಕೂಟದಲ್ಲಿ ಅತಿಕಾಯ ಕಾಳಗ ಪ್ರಸಂಗದ ಅಂಗದನಾಗಿ ಅರ್ಥ ಹೇಳಿದ್ದರು. ಹಂತ ಹಂತವಾಗಿ ಬೆಳೆದ ಕೇಶವ ಭಟ್ಟರು ಅತಿಕಾಯನ ಪಾತ್ರವನ್ನು ನಿರ್ವಹಿಸುವ ಸಾಧಕರಾದರು.

ಕೈರಂಗಳ ಯಕ್ಷಗಾನ ಸಂಘದ ಆಟದಲ್ಲಿ ಮೊತ್ತಮೊದಲು ನಾರದನಾಗಿ ರಂಗವೇರಿದ ಇವರು ಹೆಜ್ಜೆಗಾರಿಕೆ ಅಭ್ಯಸಿಸದಿದ್ದರೂ ಹಿರಣ್ಯಕಶ್ಯಪ, ಮಯೂರಧ್ವಜ ಮುಂತಾದ ಪಾತ್ರಗಳನ್ನು ನಿರ್ವಹಿಸಿದರು. ಕಲ್ಲಡ್ಕ ಮತ್ತು ನೆಟ್ಲ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಆಟಕೂಟಗಳಿಗೂ ಇವರು ಬೇಕೇ ಬೇಕು. ಇವರ ಅನುಭವಗಳು, ಪ್ರೀತಿಯನ್ನು ಅವರು ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಬರೆ ಕೇಶವ ಭಟ್ಟರು ಇಲ್ಲದ ಪ್ರದರ್ಶನಗಳನ್ನು ಅವರು ಒಪ್ಪುತ್ತಿರಲಿಲ್ಲ. ಬರಲೇಬೇಕು. ಅಡ್ಯನಡ್ಕ ಪರಿಸರದಲ್ಲಿ ಮತ್ತು ಇನ್ನೂ ಅನೇಕ ಕಡೆ ಇವರು ತಾಳಮದ್ದಳೆ ಕೂಟಗಳನ್ನು ಏರ್ಪಡಿಸುತ್ತಿದ್ದರು. ಬರೆಯವರು ಶ್ರೇಷ್ಠ ಸಂಘಟಕರೂ ಹೌದು.
                     ಶ್ರೀ ಬರೆ ಕೇಶವ ಭಟ್ಟರು ತಾಳಮದ್ದಳೆ ಕ್ಷೇತ್ರದಲ್ಲಿ ಬೆಳೆಯಲು ಮೂಲ ಕಾರಣರು ಮುಳಿಯಾಲ ಕೃಷ್ಣ ಭಟ್ಟರು. ಇವರು ಹಳೇ ಕ್ರಮದ ಅರ್ಥಧಾರಿ ಎಂದು ಕೇಶವ ಭಟ್ಟರು ಹೇಳುತ್ತಾರೆ. ಅಡ್ಯನಡ್ಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಮುಳಿಯಾಲ ಕೃಷ್ಣ ಭಟ್ಟರು ಬರೆಯವರನ್ನು ತಾಳಮದ್ದಳೆಗಳಿಗೆ ಕರೆದುಕೊಂಡು ಹೋಗುತ್ತಿದ್ದರಂತೆ (ಸಹೋದ್ಯೋಗಿಗಳು ಜತೆಯಾಗಿ ಸಾಗುತ್ತಿದ್ದರು). ಕೈರಂಗಳ ಸಂಘದ ನಿರ್ದೇಶಕರಾದ ನಾರಾಯಣ ಹೊಳ್ಳರಿಗೆ (ಭಾಗವತ ರಾಜಾರಾಮ ಹೊಳ್ಳರ ತಂದೆ) ಕಲಾವಿದರಲ್ಲಿ ಬಲು ಪ್ರೀತಿ. ಅವರು ಅರ್ಥಧಾರಿ ಅಲ್ಲದಿದ್ದರೂ ನನಗೆ ಅರ್ಥಗಾರಿಕೆಯನ್ನು ಕಲಿಸಿದರು. ಅಧ್ಯಾಪಕರಾದ ಕೈರಂಗಳ ಕೃಷ್ಣ ಸಫಲ್ಯರೂ ಹೇಳಿಕೊಟ್ಟರು. ಅಭ್ಯಾಸ ಮಾಡಿದೆ. ಬೆಳೆದು ಬೆಳೆದು ದೊಡ್ಡ ಕೂಟಗಳಿಗೂ ಆಹ್ವಾನ ಬಂತು.

ದೊಡ್ಡ ಸಾಮಗರು, ಶೇಣಿ, ದೇರಾಜೆ, ರಾಮದಾಸ ಸಾಮಗ, ಜೋಷಿ, ಮೂಡಂಬೈಲು, ವಾಸುದೇವ ಸಾಮಗ ಈ ಮೊದಲಾದ ಹಿರಿಯರೊಂದಿಗೂ, ಕಿರಿಯರೊಂದಿಗೂ ಅರ್ಥ ಹೇಳಿದೆ. ಇದು ಪೂರ್ವಜನ್ಮದ ಸುಕೃತ ಫಲದಿಂದ ಸಾಧ್ಯವಾಯಿತು ಎಂಬುದು ಬರೆ ಕೇಶವ ಭಟ್ಟರ ಅಭಿಪ್ರಾಯ. ಯಕ್ಷಗಾನ ಕಲಾವಿದನಾಗಲು ಭಾಗ್ಯ ಬೇಕು. ಪೂರ್ವಜನ್ಮದ ಪುಣ್ಯ ಬೇಕು. ಅದು ದೈವೀಕಲೆ. ಯಕ್ಷಗಾನದಲ್ಲಿ ಅನೇಕ ಉತ್ತಮ ವಿಚಾರಗಳಿವೆ. ಆ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳಬೇಕಾದರೆ ಯೋಗ ಬೇಕು ಎಂಬ ಧ್ವನಿ ಬರೆ ಕೇಶವ ಭಟ್ಟರ ಮಾತು ಗಳಲ್ಲಿ ಅಡಗಿದೆ.


                           ಶ್ರೀ ಬರೆ ಕೇಶವ ಭಟ್ಟರಿಗೆ ಭಾವನಾತ್ಮಕ ಪಾತ್ರಗಳೆಂದರೆ ಬಲು ಇಷ್ಟ. ಸಹಕಲಾವಿದರೊಂದಿಗೆ ಹೊಂದಾಣಿಕೆಯಿಂದ ಪಾತ್ರಗಳನ್ನು ನಿರ್ವಹಿಸುತ್ತಾರೆ. ಬಾಹುಕನಾಗಿ ಪಾತ್ರವನ್ನು ಅನುಭವಿಸುವ ಸ್ವಭಾವ. ಹಾಗಾಗಿ ಭಾವನಾತ್ಮಕ ಸನ್ನಿವೇಶಗಳನ್ನು ನಿರ್ವಹಿಸುವಾಗ ಗದ್ಗದಿತರಾಗುತ್ತಾರೆ. ಇಂದ್ರಜಿತು ಕಾಳಗದ ಶ್ರೀರಾಮನಾಗಿ ಮಾಯಾಸೀತೆಯ ದೇಹವನ್ನು ಕಂಡು ನಿಜಸೀತೆಯೆಂದೇ ಭ್ರಮಿಸಿ 3 ಪದ್ಯಗಳಿಗೆ ಮಾತನಾಡುವ ರೀತಿ, ಹೆಂಡತಿಯನ್ನು ಕಳೆದುಕೊಂಡ ಗಂಡನ, ಆಕೆಯನ್ನು ರಕ್ಷಿಸಿಕೊಳ್ಳಲಾಗದ ಗಂಡನ ಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸುತ್ತಾರೆ. ಇಂದ್ರಜಿತು ಕಾಳಗ ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಇವರು ನಿರ್ವಹಿಸಿದ್ದರಂತೆ! ಅತಿಕಾಯ, ವಿದುರ, ಶ್ರೀಕೃಷ್ಣ, ದಶರಥ, ಶ್ರೀರಾಮ, ಭೀಷ್ಮ, ಮಯೂರಧ್ವಜ ಮೊದಲಾದ ಪಾತ್ರಗಳಲ್ಲಿ ಶ್ರೀಯುತರು ರಂಜಿಸಿದರು. ಅನುಭವಿಸಿ ಹೇಳುವ ಬರೆ ಕೇಶವ ಭಟ್ಟರು ತಾನು ನಿರ್ವಹಿಸಿದ ಪಾತ್ರವನ್ನು ಕಲ್ಪನೆಯಿಂದ ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರು. ಭೀಷ್ಮಪರ್ವದ ಭೀಷ್ಮನಾಗಿ ಶ್ರೀ ಮನೋಹರ, ಪದ್ಯಕ್ಕೆ ಚೆನ್ನಾಗಿ ಹೇಳಿ ಎನ್ನಯ ಕಂಠವ ಇರಿಯಲು ಚಿನುಮಯ ಚಕ್ರವ ಕೈಯೊಳು ಪಿಡಿದಿಹೆಯೊ ಪದ್ಯಕ್ಕೆ ಅರ್ಥವನ್ನು ಪೂರ್ತಿಗೊಳಿಸಿದ ದಾಖಲೆ ಇಲ್ಲವಂತೆ. ಗದ್ಗದಿತರಾಗಿ ಮಾತು ನಿಂತು ಹೋಗುತ್ತಿಂತೆ. ಇವರ ಅರ್ಥವನ್ನು ಕೇಳಿದ ಪ್ರೇಕ್ಷಕರು ಈಗಲೂ ಅದನ್ನು ನೆನಪಿಸುತ್ತಾರೆ. ಕಲಾವಿದನ ಸಂತೋಷಕ್ಕೆ ಇನ್ನೇನು ಬೇಕು? ಅವನ ಪಾತ್ರನಿರ್ವಹಣೆಗೆ ಸಂದ ಪ್ರಶಸ್ತಿಯಲ್ಲವೇ?


                 ಶ್ರೀರಾಮನಿರ್ಯಾಣ ಪ್ರಸಂಗದ ಶ್ರೀರಾಮ ಬರೆ ಕೇಶವ ಭಟ್ಟರ ಪ್ರೀತಿಯ, ಉಲ್ಲೇಖನೀಯ ಪಾತ್ರಗಳಲ್ಲೊಂದು. ಶ್ರೀರಾಮ ನಿರ್ಯಾಣದ ಶ್ರೀರಾಮನಾಗಿ- ಲಕ್ಷ್ಮಣ ಹೋದಾಗ ರಾಮನ ಅರ್ಧಭಾಗ ಹೋಯಿತು ಎಂಬ ಸಂದೇಶ! ಪಾದುಕಾ ಪ್ರಧಾನದ ಭರತನನ್ನು ಬೀಳ್ಕೊಟ್ಟ ಶ್ರೀರಾಮ, ಲಕ್ಷ್ಮಣನಿಗೆ ದೇಹಾಂತ್ಯ ಶಿಕ್ಷೆ ವಿಧಿಸುವ ಶ್ರೀರಾಮ ಪಾತ್ರಗಳು ಒಂದೇ ಆದರೂ ಸಂದರ್ಭಗಳೊಳಗಿನ ಅಂತರವನ್ನು ಇವರ ಅರ್ಥಗಾರಿಕೆಯಲ್ಲಿ ಕಾಣಬಹುದು. ಪಾದುಕಾಪ್ರದಾನ ಪ್ರಸಂಗದ ‘ಸುಮ್ಮಗಿರು ಭರತ ಬರುವ ಮರ್ಮವನ್ನು ಅರಿಯೆ ನೀನು, ಹೆಮ್ಮೆಗಾರನಲ್ಲಿ ಗುಣದಿ ನಮ್ಮ ಸಹಜನು’ ಮತ್ತು ‘ಬಂದೆಯಾ ಇನವಂಶ ವಾರಿಧಿಚಂದ್ರ’ ಪದ್ಯಗಳ ಅರ್ಥಗಾರಿಕೆಯು ಪೂರ್ತಿಯಾಗದೆ ಭಾವನೆಗಳ ಪ್ರವಾಹವೇ ಉಕ್ಕಿ ಹರಿಯುತ್ತಿತ್ತು. ಪಟ್ಟಾಭಿಷೇಕ ಪ್ರಸಂಗದಿಂದ ತೊಡಗಿ ನಿರ್ಯಾಣದ ವರೆಗಿನ ಶ್ರೀರಾಮನ ಪಾತ್ರವನ್ನು ಸಮರ್ಥ ರೀತಿಯಲ್ಲಿ ಕೆತ್ತಿ, ರೂಪಿಸಿ, ನಿರ್ವಹಿಸಿದ ಕಲಾವಿದರು ಬರೆ ಕೇಶವ ಭಟ್ಟರು.

ವಾಲಿಮೋಕ್ಷ ಪ್ರಸಂಗದ- ‘ವಾನರರಧಿಪನೆ ಕೇಳೆನ್ನ ಮಾತಾ’ ಮತ್ತು ‘ಮುಂದಿನ್ನು ಬದುಕ ಬೇಕೆಂಬ ಆಸೆ’ ಈ ಪದ್ಯಗಳ ಅರ್ಥಗಾರಿಕೆಯಲ್ಲೂ ಇವರು ನಿಜವಾಗಿ ಶ್ರೀರಾಮನೇ ಆಗುತ್ತಾರೆ. ಬರೆಯವರ ಮಾತುಗಳನ್ನು ಕೇಳುವುದಕ್ಕಾಗಿಯೇ ಪ್ರೇಕ್ಷಕರು ಕೂಟಗಳಿಗೆ ಬರುತ್ತಿದ್ದರು. ಮಲ್ಪೆ ಶ್ರೀ ವಾಸುದೇವ ಸಾಮಗರ ‘ಸಂಯಮಂ’ ತಂಡದಲ್ಲಿ ಆರು ವರ್ಷಗಳ ತಿರುಗಾಟವನ್ನೂ ನಡೆಸಿದ್ದರು. ‘‘ಬರೆಯವರು ಇದ್ದಾರಲ್ಲ; ಇನ್ನು ಇಬ್ಬರು ಸಾಕು ನಮ್ಮ ತಂಡಕ್ಕೆ’’- ಸಾಮಗರ ಈ ಮಾತುಗಳು ಬರೆ ಕೇಶವ ಭಟ್ಟರ ಸಾಮರ್ಥ್ಯ, ಪ್ರತಿಭೆಗೆ ಸಂದ ಗೌರವ.

1999ನೇ ಇಸವಿ ತನ್ನ 58ನೇ ವಯಸ್ಸಿನಲ್ಲಿ ವೃತ್ತಿ ಜೀವನದಿಂದ (ಅಧ್ಯಾಪಕ) ನಿವೃತ್ತರಾಗಿದ್ದರೂ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಪ್ರಸ್ತುತ ವಯಸ್ಸು ಮತ್ತು ಆರೋಗ್ಯದ ಸಮಸ್ಯೆಯಿಂದಾಗಿ ಕೂಟಗಳಲ್ಲಿ ಕಲಾವಿದನಾಗಿ ಕಾಣಿಸಿಕೊಳ್ಳದಿದ್ದರೂ ಪ್ರೇಕ್ಷಕರಾಗಿ ಕಾಣಿಸಿಕೊಳ್ಳುತ್ತಾರೆ! ಇದು ಯಕ್ಷಗಾನ ಕಲೆಯ ಮೇಲೆ ಅವರಿಗಿರುವ ಗೌರವ, ಪ್ರೀತಿಯನ್ನು ತೋರಿಸುತ್ತದೆ. ಶೇಣಿ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಪುತ್ತೂರು ಯಕ್ಷಾಂಜನೇಯ ಪ್ರಶಸ್ತಿ, ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಬರೆ ಕೇಶವ ಭಟ್ಟರನ್ನು ಗುರುತಿಸಿ ಗೌರವಿಸಿವೆ. ಶ್ರೀಯುತರ ವಿದ್ಯೆ, ಅನುಭವಗಳು ಯಕ್ಷಗಾನಕ್ಕೆ ಕೊಡುಗೆಯೂ, ಕಲಾವಿದರಿಗೆ ಸ್ವೀಕಾರಾರ್ಹವೂ ಹೌದು.

ಅಧ್ಯಾಪಕನಾಗಿ, ಕಲಾವಿದನಾಗಿ ಮೆರೆದ ಇವರು ಸಾಂಸಾರಿಕವಾಗಿಯೂ ತೃಪ್ತರು. ಬಂಟ್ವಾಳ ತಾಲೂಕು ಇರಾ ಗ್ರಾಮದ ಸಣ್ಣಯಬೈಲು ಎಂಬಲ್ಲಿ ಪತ್ನಿ ಶ್ರೀಮತಿ ದುರ್ಗಾಪರಮೇಶ್ವರೀ ಮತ್ತು ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಾರೆ. ಹಿರಿಯ ಪುತ್ರ ಶ್ರೀ ವೆಂಕಟೇಶ್ವರ ಮತ್ತು ಕಿರಿಯ ಪುತ್ರ ಶ್ರೀ ಸತ್ಯಶಂಕರ ಇಬ್ಬರೂ ಕೃಷಿಕರು. ಯಕ್ಷಗಾನ ಅಭ್ಯಾಸ ಮಾಡುವ ಕಿರಿಯರಿಗೆ ಸಂದೇಶವೇನು? ಎಂದು ಕೇಳಿದರೆ- ‘‘ಹತ್ತು ಓದಿ ಒಂದು ಹೇಳು. ಒಂದು ಓದಿ ಹತ್ತು ಹೇಳಲು ಹೋಗದಿರಿ. ಲೋಕದಲ್ಲಿ ಒಂದು ಓದಿ ಹತ್ತನ್ನು ಹೇಳುವವರು ಅಭಿವೃದ್ಧಿಯಾಗಲಾರರು’’!   ಎಂಬ ಅತ್ಯುತ್ತಮ ಕಿವಿಮಾತನ್ನು ಹೇಳಿದರು.

ವಿಳಾಸ : ಬರೆ ಕೇಶವ ಭಟ್, ಸಣ್ಣಯಬೈಲು
ಅಂಚೆ ಮತ್ತು ಗ್ರಾಮ : ಇರಾ, ಬಂಟ್ವಾಳ ತಾಲೂಕು, ದ. ಕ. ಮೊ. : 9449281771

ಲೇಖಕ: – ರವಿಶಂಕರ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments