ಯಕ್ಷಗಾನ ಮತ್ತು ತಾಳಮದ್ದಲೆ ಎಂತೆಂತಹವರನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಶೇಣಿ, ಸಾಮಗ ಸಹೋದರರು, ನಿವಣೆ ಗಣೇಶ ಭಟ್ಟ, ಹೊನ್ನಪ್ಪ ಗೋಕರ್ಣರಂತಹ ಹರಿದಾಸರನ್ನೂ ಆಕರ್ಷಿಸಿದಂತೆ ವೇ| ಬ್ರ| ಶ್ರೀ ಹಂದಲಸು ಲಕ್ಷ್ಮೀನಾರಾಯಣ ಭಟ್ಟರಂತಹ ಅತ್ಯಂತ ಮಡಿವಂತ, ಸಂಪ್ರದಾಯನಿಷ್ಠ, ತ್ರಿವೇದಿಗಳನ್ನೂ ಆಕರ್ಷಿಸಿದೆ.
ಲಕ್ಷ್ಮೀನಾರಾಯಣ ಭಟ್ಟರು ಜನಿಸಿದ್ದು ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಎಂಬ ಕುಗ್ರಾಮದಲ್ಲಿ (12-10-1939). ಬಾಲ್ಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡ ಭಟ್ಟರು ಬೆಳೆದಿದ್ದ ಶೃಂಗೇರಿಯಲ್ಲಿ ವೇದಾಧ್ಯಯನ ಮಾಡಿ, ಆಗುಂಬೆಯ ಸಮೀಪದ ಹಂದಲಸು ಎಂಬ ಹಳ್ಳಿಯಲ್ಲಿ ಈಶ್ವರ ದೇವಸ್ಥಾನವೊಂದರ ಅರ್ಚಕರಾದರು. ಪೌರೋಹಿತ್ಯ ಹಾಗೂ ಜ್ಯೋತಿಷ್ಯವನ್ನೂ ವ್ಯಾಕರಣ, ಅಲಂಕಾರ, ಋಗ್ವೇದ, ಯಜುರ್ವೇದ, ಸಾಮವೇದಗಳನ್ನೂ, ಸಾಯಣ ಭಾಷ್ಯ ಸಹಿತ ಅಧ್ಯಯನ ಮಾಡಿದರು.
ಯಕ್ಷಗಾನಕ್ಕೆ ತ್ರಿವೇದಿಗಳ ಕೊಡುಗೆ ಅನನ್ಯ. ಅರ್ಥಧಾರಿಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಖ್ಯಾತನಾಮ ರಾದರು. ಶೇಣಿ, ಸಾಮಗ ಸಹೋದರರು, ತೆಕ್ಕಟ್ಟೆ, ಪೆರ್ಲ, ಮೂಡಂಬೈಲು – ಮುಂತಾದವರೊಂದಿಗೆ ಅರ್ಥಧಾರಿಗಳಾಗಿ ಭಾಗವಹಿಸಿದ್ದರು. ಶ್ರುತಿಯ ಕೊರತೆಯಿಂದ ಅವರ ಕೆಲವು ಪಾತ್ರಗಳು ಬೆಳಕಿಗೆ ಬಾರದೆ ಉಳಿದವು. ಬಲಿ, ಜರಾಸಂಧ, ಹಿರಣ್ಯಕಶ್ಯಪ, ರಾವಣ, ಅಂಗದ, ಸಂಧಾನದ ಕೃಷ್ಣ – ಮುಂತಾದ ಪಾತ್ರಗಳ ಮೇಲೆ ಅವರ ಪ್ರಭುತ್ವ ಎಷ್ಟಿತ್ತೆಂದರೆ, ಆ ಪಾತ್ರಗಳ ವಿಶಿಷ್ಟ ಗುಣಗಳನ್ನು ಪ್ರಕಟಪಡಿಸುತ್ತಿದ್ದರು. ಪುರಾಣ ಕೃತಿಗಳಲ್ಲಿ ಬರುವ ಅತಿರಥ, ಮಹಾರಥ, ಅಶ್ವಲಕ್ಷಣ, ರಾಜರ ಧ್ವಜದ ಲಾಂಛನಗಳು, ಶಸ್ತ್ರಾಸ್ತ್ರಗಳ ಗುಣಲಕ್ಷಣಗಳು, ಅಶ್ವಮೇಧದ ಕುದುರೆಯ ಲಕ್ಷಣ, ಯಾಗದ ನಿಯಮಗಳು- ಇತ್ಯಾದಿಗಳ ಒಳನೋಟಗಳನ್ನು ನೀಡುತ್ತಿದ್ದರು.
ಕೇವಲ ಅರ್ಥಗಾರಿಕೆಗೆ ಸೀಮಿತವಾಗಿರಲಿಲ್ಲ, ತ್ರಿವೇದಿಗಳ ಯಕ್ಷಗಾನ ಪ್ರೇಮ. ಅವರು ಭಾಗವತಿಕೆಯನ್ನೂ ಕಲಿತಿದ್ದರು. ಹಂದಲಸಿನಲ್ಲಿರುವಾಗಲೇ ಸ್ಥಳೀಯ ಅರ್ಥಧಾರಿಗಳನ್ನೇ ಬಳಸಿಕೊಂಡು ರಾಮಾಯಣ, ಭಾರತಗಳ ಸಮಗ್ರ ಪ್ರಸಂಗಗಳನ್ನೂ ಬಳಸಿಕೊಂಡು ತಾಳಮದ್ದಲೆ ಮಾಡಿದ್ದರು. ಇದು ಪ್ರತಿ ಏಕಾದಶಿಯಂದು ನಡೆಯುತ್ತಿತ್ತು. ಒಮ್ಮೆ ಭಾಗವತರು ಬಾರದೆಯಿದ್ದಾಗ ಅವರೇ ಭಾಗವತಿಕೆ ಮಾಡಿ ಅರ್ಥವನ್ನೂ ಹೇಳಿದ್ದರು.
ಹಂದಲಸಿನಿಂದ ಬಾಳಗಾರಿಕೆ, ಅಲ್ಲಿಂದ ಸಾಗರಕ್ಕೆ, ಸಾಗರದಿಂದ ಶಿವಮೊಗ್ಗಕ್ಕೆ ಬಂದು ಅಲ್ಲಿಯೇ ನೆಲೆಸಿದ್ದ ಭಟ್ಟರು ಶಿವಮೊಗ್ಗದಲ್ಲಿಯೂ ತಾಳಮದ್ದಲೆ ಸಪ್ತಾಹವನ್ನು ಏರ್ಪಡಿಸುತ್ತಿದ್ದರು. ಅವರು ತಮ್ಮ ಕೊನೆಯ ಮೂರು ವರ್ಷಗಳಲ್ಲಿ ಮಹಾಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕಾಗಿ ಅಗತ್ಯವಿರುವ ಪ್ರಸಂಗ ಕೃತಿಗಳನ್ನೂ ಸಂಗ್ರಹಿಸಿದ್ದರು. (‘ಪಾಂಡವ ಪ್ರಪಂಚ’-ಇತ್ಯಾದಿ) ಅವರು ಪೌರೋಹಿತ್ಯಕ್ಕಾಗಿ ಹೋದ ಮನೆಯ ಯಜಮಾನರಿಗೆ ಹೇಳಿ ತಾಳಮದ್ದಲೆಯನ್ನು ಸಂಘಟಿಸುತ್ತಿದ್ದರು. ಸಪ್ತಾಹಕ್ಕೆ ಆಹ್ವಾನಿತ ಕಲಾವಿದರಿಗೆ ಮನೆಯಲ್ಲಿ ಆತ್ಮೀಯ ಆತಿಥ್ಯವನ್ನು ನೀಡುವಲ್ಲಿ ಅವರ ಕುಟುಂಬದವರ ಪಾತ್ರವೂ ಉಲ್ಲೇಖನೀಯ.
ಪ್ರಾಯೋಜಕರು ಹಣವನ್ನು ನೀಡಿದ ತಕ್ಷಣ ತೆಮೆಮನೆ ರಾಮಮೂರ್ತಿ ಹಾಗೂ ನನ್ನನ್ನು ಕರೆದು ಹಣವನ್ನು ಎಣಿಸಲು ಹೇಳುತ್ತಿದ್ದರು. ಅವರೇ ಕಲಾವಿದರನ್ನು ಕರೆದು ಅವರಿಗೆ ಪ್ರಶಂಸಾತ್ಮಕವಾದ ಮಾತುಗಳನ್ನು ಹೇಳಿ ಸಂಭಾವನೆಯೊಂದಿಗೆ ಪಂಚೆ ಶಾಲುಗಳನ್ನು ನೀಡಿ ಗೌರವಿಸುತ್ತಿದ್ದರು. ಪ್ರತಿವರ್ಷ ಒಬ್ಬೊಬ್ಬ ಕಲಾವಿದರನ್ನು ಸಂಮಾನಿಸುತ್ತಿದ್ದರು. ಸಪ್ತಾಹದಲ್ಲಿ ಹಣ ಉಳಿದರೆ ಅದಕ್ಕೆ ತಮ್ಮ ಹಣವನ್ನು ಸೇರಿಸಿ ಒಂದು ತಾಳಮದ್ದಲೆಯನ್ನು ಸಂಘಟಿಸುತ್ತಿದ್ದರೆ ಹೊರತು ಉಳಿದ ಹಣವನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿರಲಿಲ್ಲ.
ಭಾಗವತಿಕೆ ಮತ್ತು ಮೃದಂಗವನ್ನು ಕಲಿಸುವವರಿಗೆ ಅವರು ಕೇಳಿದ ವೇತನವನ್ನು ನೀಡಲು ಸಿದ್ಧರಾಗಿದ್ದರು. ಶಿವಮೊಗ್ಗದ ಶಂಕರಮಠದಲ್ಲಿ ವೇದ ಶಿಕ್ಷಣದ ಹೊಣೆ ಅವರೇ ಹೊತ್ತಿದ್ದರು.
ತಮ್ಮ ಅರ್ಥಗಾರಿಕೆಯಲ್ಲಿ ಸಣ್ಣ ಸಣ್ಣ ದೃಷ್ಟಾಂತಗಳನ್ನು ಬಳಸಿಕೊಳ್ಳುತ್ತಿದ್ದರು. ಇವುಗಳನ್ನು ಒಂದು ಕೃತಿರೂಪದಲ್ಲಿ ಪ್ರಕಟಿಸಿದ್ದಾರೆ. ಕೆಲವರು ಅವರೊಂದಿಗೆ ಅರ್ಥವನ್ನು ಹೇಳಲು ಒಪ್ಪುತ್ತಿರಲಿಲ್ಲ. ನಿಸ್ರಾಣಿ ರಾಮಚಂದ್ರ ಹೆಗ್ಡೆಯವರ ಮಾತಿನಲ್ಲಿ ಹೇಳುವುದಾದರೆ, “ಒಂದು ಅಂಕದ ಪ್ರಶ್ನೆಗಳನ್ನೇ ಅವರು ಹೆಚ್ಚಾಗಿ ಕೇಳುತ್ತಿದ್ದ ರೀತಿ”. ಪಾಂಡವರ ಗೋತ್ರ, ಕೇಕಯದಿಂದ ಅಯೋಧ್ಯೆಗೆ ಬರಲು ಭರತನಿಗೆ ಎಷ್ಟು ದಿನ ಬೇಕಾಯಿತು – ಇತ್ಯಾದಿ.
ತ್ರಿವೇದಿಗಳು ಅರ್ಥಶೌಚವನ್ನೂ ಅನೃಣ್ಯವನ್ನೂ ಅನುಷ್ಠಾನವನ್ನೂ ಚಾಚೂ ತಪ್ಪದೇ ಪಾಲಿಸಿದವರು. ತಾಳಮದ್ದಲೆ, ಪೌರೋಹಿತ್ಯ, ಜ್ಯೋತಿಷ್ಯದಲ್ಲಿ ಯಾರು ಎಷ್ಟೇ ಕೊಟ್ಟರೂ ಸಂತೋಷದಿಂದ ಸ್ವೀಕರಿಸುತ್ತಿದ್ದರು. ಒಪ್ಪಿಕೊಂಡ ಸಣ್ಣ ಕಾರ್ಯಕ್ರಮಕ್ಕೆ ಬೇರೆಯವರನ್ನು ಕಳುಹಿಸಿ ತಾವು ಹೆಚ್ಚು ದಕ್ಷಿಣೆ ಸಿಗುವ ದೊಡ್ಡ ಕಾರ್ಯಕ್ರಮಕ್ಕೆ ಹೋದವರಲ್ಲ.
ತಾವು ಅಧ್ಯಯನ ಮಾಡಿದ ಗ್ರಂಥಗಳಿಂದ ಮಾಡಿಕೊಂಡ ಟಿಪ್ಪಣಿಗಳನ್ನು ಗ್ರಂಥರೂಪದಲ್ಲಿ ತಂದರೆ ಆಸಕ್ತರಿಗೆ ಅತ್ಯಂತ ಉಪಯುಕ್ತವಾದ ಆಧಾರಗ್ರಂಥಗಳಾಗುತ್ತವೆ. ಅವುಗಳಿಂದ ಆಯ್ದ ಲೇಖನಗಳನ್ನು “ಧರ್ಮಚಿಂತನ” ಎಂದೂ, ಸುಭಾಷಿತಗಳನ್ನು “ಸಾಹಿತ್ಯ ಕೌಮುದಿ” ಎಂದೂ ಪ್ರಕಟಿಸಿದ್ದಾರೆ. ತಮಗೆ ಈ ಕೃತಿಗಳ ಮುದ್ರಣ ವೆಚ್ಚ ಮಾತ್ರವೇ ಸಾಕೆಂದು ಇವುಗಳ ಬೆಲೆ ಕೇವಲ ರೂ. 75-00 ನಿಗದಿಗೊಳಿಸಿದ್ದಾರೆ.
ಶ್ರೀಯುತರಿಗೆ ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ ಬಂದಿರುತ್ತದೆ.
ನಿರಾಡಂಬರ, ಸರಳ, ವಿನಮ್ರ ಸ್ವಭಾವದ ವೇ| ಬ್ರ| ಶ್ರೀ ಹಂದಲಸು ಲಕ್ಷ್ಮೀನಾರಾಯಣ ಭಟ್ಟರ ಇಬ್ಬರು ಗಂಡುಮಕ್ಕಳು ತಂದೆಯ ದಾರಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ. ಹಿರಿಯ ಮಗ ವಿದ್ವಾನ್ ವಾಸುದೇವ ಭಟ್ಟರು ಉತ್ತಮ ಪ್ರವಚನಕಾರ, ಯಕ್ಷಗಾನ ಅರ್ಥಧಾರಿ, ಸಂಸ್ಕೃತ ವಿದ್ವಾಂಸ. ಎರಡನೆಯ ಮಗ ವಿದ್ವಾನ್ ರಾಘವೇಂದ್ರ ಭಟ್ಟರು ಸಂಸ್ಕೃತದಲ್ಲಿ ಎಂ. ಎ., ಎಂ.ಫಿಲ್. ಮಾಡಿ ಪೌರೋಹಿತ್ಯ ಹಾಗೂ ಜ್ಯೋತಿಷ್ಯದಲ್ಲಿ ತೊಡಗಿಕೊಂಡಿದ್ದಾರೆ.
ಹಂದಲಸು ಭಟ್ಟರು ತಾ. 02-07-2016 ರಂದು ಶಿವಮೊಗ್ಗದಲ್ಲಿ ಸ್ವರ್ಗಸ್ಥರಾದರು. ು
ಲೇಖಕ : ಡಾ| ಶಾಂತಾರಾಮ ಪ್ರಭು