ರಂಗಸ್ಥಳಕ್ಕೆ ಪ್ರಮುಖ ಸ್ತ್ರೀ ವೇಷದ ಆಗಮನ ಆಗಷ್ಟೇ ಆಗಿದೆ. ಸುಲಲಿತವಾಗಿ ಹಾವಭಾವಕ್ಕೆ ತಕ್ಕಂತೆ ವೇಷಧಾರಿ ನರ್ತಿಸುತ್ತಿದ್ದಾರೆ. ಸುಂದರ ವಾದ ಪದ್ಯಕ್ಕೆ ತಕ್ಕುದಾದ ನರ್ತನ. ಕುಳಿತ ಜನಸ್ತೋಮ ಅದರೊಳಗೇ ತಲ್ಲೀನವಾಗಿ ಅದರ ಸವಿ ಆಸ್ವಾದಿಸುತ್ತಿದ್ದಾರೆ. ಭಾಗವತರ ಗಾಯನ. ವೇಷಧಾರಿಯ ನೃತ್ಯ. ಮತ್ತು ಅದಕ್ಕಿಂತ ಹೆಚ್ಚಾಗಿ ತಾಳಗಳ ಬೋಲ್‍ಗಳು ಸ್ಪಷ್ಟವಾಗಿ ಮತ್ತು ಅತ್ಯಂತ ಮಧುರವಾಗಿ ಮೂಡಿ ಬರುತ್ತಿರುವ ಮದ್ದಲೆಯ ನಾದವನ್ನು ಜನ ಕಿವಿದುಂಬಿಕೊಂಡು ವಾಹ್ ವಾಹ್ ಎನ್ನುತ್ತ ತಮ್ಮ ಹೃತ್ಕರ್ಣಗಳನ್ನೂ ತೆರೆದುಕೊಳ್ಳುತ್ತ ಕರತಾಡನ ಮಾಡುತ್ತಿದ್ದಾರೆ.
ಅದೆಲ್ಲದರ ಪರಿವೆಗೆ ಹೋಗದೆ ತನ್ನಷ್ಟಕ್ಕೆ ತಾನು ಮದ್ದಲೆಯ ಝೇಂಕಾರದಲಿ, ವಾದನದ ನಿರಂತರತೆ ಮತ್ತು ನೃತ್ಯದ ಹೆಜ್ಜೆ, ಶೈಲಿ, ನರ್ತನಕ್ಕೆ ಬೇಕಾಗುವ ಗತ್ತುಗಳನ್ನು ಗಮನಿಸುತ್ತ ತಲ್ಲೀನತೆಯಲಿ ಆ ಹಿರಿಯರು ಬೆರೆತಿದ್ದಾರೆ. ಅವರ ಆ ಶಿಸ್ತು ಯಾರಿಗಾದರೂ ಒಂದು ಬಗೆಯ ಉತ್ಸಾಹ ಮೂಡಿಸುವಂತಿದೆ. ಅವರೇ ಶಿಸ್ತು ಮುಡಿಯ `ನಾದ ಶಂಕರ’ ಶಂಕರ ಭಾಗವತರು. ಭಾಗವತರೆಂದರೆ ಹಾಡುವವರಲ್ಲ ಇವರದು ಮದ್ದಲೆಯ ಜೊತೆಗಿನ ಯಾನ…
ಶಂಕರ ಭಾಗವತರ ಹೆಸರು ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ. ತಮ್ಮ ಅದ್ಭುತ ಮದ್ದಲೆ ವಾದನದ ಮೂಲಕವೇ ತಮ್ಮನ್ನು ತಾವು ಗುರುತಿಸಿ ಕೊಂಡವರು. ಯಲ್ಲಾಪುರ ತಾಲೂಕಿನ ಶಿಸ್ತುಮುಡಿ ಗ್ರಾಮದಲ್ಲಿ ರಾಮಚಂದ್ರ ಭಾಗವತ ಹಾಗೂ ಕಮಲಾ ಭಾಗವತರ ಹಿರಿಯ ಮಗನಾಗಿ 1955ರಲ್ಲಿ ಜನಿಸಿದವರು ಶಂಕರ ಭಾಗವತರು. 7ನೇ ತರಗತಿಯ ವರೆಗೆ ಪ್ರಾಥಮಿಕ ಶಿಕ್ಷಣ ಪೂರೈಸುತ್ತಿರುವಂತೆಯೇ ಯಕ್ಷಗಾನದತ್ತ ಆಕರ್ಷಿತರಾದರು. ದುರ್ಗಪ್ಪ ಗುಡಿಗಾರ ಹಾಗೂ ತಿಮ್ಮಪ್ಪ ನಾಯ್ಕರಲ್ಲಿ ಉಡುಪಿಯ ಹಂಗಾರಕಟ್ಟೆ ಯಕ್ಷಗಾನ ಶಾಲೆಯಲ್ಲಿ ಮದ್ದಲೆ ಅಭ್ಯಾಸ ಮಾಡಿದರು. ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳಲ್ಲಿ ಹೆಸರಾಂತ ಭಾಗವತರಾದ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರಿಗೆ, ಕಾಳಿಂಗ ನಾವುಡರಿಗೆ ಬಹಳಷ್ಟು ವರ್ಷ ಮದ್ದಲೆ ವಾದನದ ಸಾಥ್ ನೀಡಿದ ಅಪಾರ ಅನುಭವ ಉಳ್ಳವರು.
ಮರವಂತೆ ನರಸಿಂಹ ದಾಸರು, ಕಡತೋಕಾ ಮಂಜುನಾಥ ಭಾಗವತರು, ನೆಬ್ಬೂರು ನಾರಾಯಣ ಭಾಗವತರು, ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು, ವಿದ್ವಾನ್ ಗಣಪತಿ ಭಟ್ಟರು, ಕೊಳಗಿ ಕೇಶವ ಹೆಗಡೆ ಭಾಗವತರು, ಅಲ್ಲದೇ ಇಂದು ಪ್ರಚಲಿತರಾಗಿರುವ ಬಹುತೇಕ ಎಲ್ಲಾ ಭಾಗವತರೊಂದಿಗೆ ತಮ್ಮ ವಾದನ ಸಹಕಾರವನ್ನು ನೀಡುತ್ತಿರುವ ಕಲಾವಿದರಿವರು. 40ಕ್ಕೂ ಮಿಕ್ಕಿದ ವರ್ಷಗಳ ಅನುಭವ ಈ ಯಕ್ಷ ರಂಗದಲ್ಲಿ ಇದೆ. ಜಿ.ಆರ್. ಹೆಗಡೆಯವರಲ್ಲಿ ತಬಲಾ ವಾದನವನ್ನೂ ಅಭ್ಯಾಸ ಮಾಡಿ ಅದರಲ್ಲಿಯೂ ಅನುಭವ ಗಳಿಸಿದ್ದಾರೆ.
ಯಕ್ಷಗಾನ ರಂಗದ ಹೆಸರಾಂತ ಕಲಾವಿದರಾದ ಕೆರೆಮನೆ ಶಿವರಾಮ ಹೆಗಡೆ, ಮೂರೂರು ದೇವರು ಹೆಗಡೆ, ಗುರು ವೀರಭದ್ರ ನಾಯಕ, ಪಿ. ವಿ. ಹಾಸ್ಯಗಾರ, ಶಂಭು ಹೆಗಡೆ ಕೆರೆಮನೆ, ಅನಂತ ಹೆಗಡೆ ಕೊಳಗಿ, ವೆಂಕಟೇಶ ರಾವ್ ಜಲವಳ್ಳಿ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀಪಾದ ಹೆಗಡೆ ಹಡಿನಬಾಳ, ರಾಮಚಂದ್ರ ಹೆಗಡೆ ಕೊಂಡದಕುಳಿ, ಕೃಷ್ಣ ಯಾಜಿ ಬಳ್ಕೂರು, ಒಬ್ಬರೆ ಇಬ್ಬರೆ ಇಂದು ಯಕ್ಷಗಾನ ರಂಗದಲ್ಲಿ ಮಿಂಚು ತ್ತಿರುವ ಹಿರಿ ಕಿರಿಯ ಕಲಾವಿದರೆಲ್ಲರಿಗೆ ಮದ್ದಲೆ ನುಡಿಸಿದ್ದಾರೆ, ಕುಣಿಸಿದ್ದಾರೆ ಕುಣಿಸುತ್ತಿದ್ದಾರೆ.
ಇದೀಗ ವೃತ್ತಿ ಮೇಳದಿಂದ ನಿವೃತ್ತಿ ಪಡೆದಿದ್ದರೂ ಯಕ್ಷಗಾನದಲ್ಲಿ ಮದ್ದಲೆಯ ವಾದನ ನಿರಂತರವಾಗಿ ಸಾಗಿದೆ. ಶಿರಸಿಯಲ್ಲಿ ‘ನಾದ ಶಂಕರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಇವರು ಅದರ ಮೂಲಕ ಮದ್ದಲೆ ಹಾಗೂ ಚಂಡೆವಾದನ ಕಲಿಕಾ ವರ್ಗ ನಡೆಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. ನಾಡಿನ ಅನೇಕ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಹಲವು ಬಾರಿ ವಿದೇಶ ಪ್ರವಾಸ ಮಾಡಿ ಅಲ್ಲಿಯೂ ತಮ್ಮ ಮದ್ದಲೆಯ ಸದ್ದನ್ನು ಮೊಳಗಿಸಿ ಬಂದಿದ್ದಾರೆ. ಸಂಗೀತ ಜೊತೆ ಮದ್ದಲೆಯ ನಾದವನ್ನೂ ಹೊರಡಿಸಿದ್ದಾರೆ. ಕೊಳಲು, ತಬಲಾ, ಮದ್ದಲೆ, ಭಾಗವತಿಕೆ, ಸಂಗೀತದ ಹಾಡುಗಳ ಒಳಗೊಂದ ಯಕ್ಷಗಾನ ಗಾಯನ ವಾದನ ವೈಭವ ನೂರಕ್ಕೂ ಅಧಿಕ ಕಾರ್ಯಕ್ರಮ ನಡೆದಿದೆ. ಈ ಮೂಲಕ ಹಿಂದುಸ್ತಾನಿ ಜೊತೆಗೂ ರಸಪಾಕ ಮಾಡಿದ್ದಾರೆ.
ಇವರ ಮದ್ದಲೆಯ ವಾದನದ ಯಕ್ಷಗಾನಗಳ ಸಾವಿರಕ್ಕೂ ಹೆಚ್ಚು ಸಿ.ಡಿ.ಗಳು ಪ್ರಕಟ ಗೊಂಡಿವೆ. ಸಿಂಗಾಪುರದಲ್ಲಿ ಸಿಂಗರ ಕಲಾರತ್ನ, ಹೈದರಾಬಾದಿನಲ್ಲಿ ಯಕ್ಷ ಚೂಡಾಮಣಿ, ಉಡುಪಿ ಯಕ್ಷಕಲಾ ರಂಗದ ಪ್ರಶಸ್ತಿ, ಶಿರಸಿಯ ಮದ್ದಲೆಯ ಮದನ ಸೇರಿದಂತೆ ನೂರಾರು ಬಿರುದು ನೀಡಿ ಸನ್ಮಾನಿಸಲಾಗಿದೆ.
ರಾಜ್ಯ, ಹೊರ ರಾಜ್ಯಗಳಲ್ಲದೇ ಅಮೇರಿಕಾ, ಸಿಂಗಾಪುರ, ದುಬೈ ಸೇರಿದಂತೆ ಅನೇಕ ಹೊರ ದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಪತ್ನಿ ವಿನೋದಾ, ಮಗ ದರ್ಶನ ಹಾಗೂ ಮಗಳು ಪೂಜಾ ಇವರೊಂದಿಗಿನ ಸುಖಮಯ ಸಂಸಾರ ಇವರದು.
ಇವರು ಯಕ್ಷಗಾನದ ಹಿಮ್ಮೇಳದಲ್ಲಿ ಕುಳಿತು ಮದ್ದಲೆ ನುಡಿಸಿದರೆ ಆ ನಾದದ ಸೊಗಸೇ ಬೇರೆ.
ಲೇಖಕಿ: ಗಾಯತ್ರೀ ರಾಘವೇಂದ್ರ, ಶಿರಸಿ
ಹುಲೇಮಳಗಿ ಕಟ್ಟಡ, ಚೌಕಿಮಠ, ಶಿರಸಿ ಉ.ಕ.