Saturday, January 18, 2025
Homeಯಕ್ಷಗಾನಪುಂಡಿಕಾಯಿ ಕೃಷ್ಣ ಭಟ್

ಪುಂಡಿಕಾಯಿ ಕೃಷ್ಣ ಭಟ್

“ಸುಂದರವಾದ ಚೌಕಟ್ಟಿಗೆ ಚಿತ್ರವೇ ಇಲ್ಲ! ಹೌದು… ಸಂಪ್ರದಾಯದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಕಲಾವಿದರು ಹೇಗೆ ಚಿತ್ರವಿಲ್ಲದ ಚೌಕಟ್ಟು ಆಗ್ತಾರೆ ಎನ್ನುವುದಕ್ಕೆ ಪುಂಡಿಕಾಯಿ ದಿ| ಕೃಷ್ಣ ಭಟ್ಟರು ಪ್ರತ್ಯಕ್ಷ ಸಾಕ್ಷಿ”
30-10-1943ರಂದು ಶ್ರೀ ಅಚ್ಯುತ ಭಟ್ ಮತ್ತು ಸರಸ್ವತಿಯವರ ಪುತ್ರನಾಗಿ ಜನಿಸಿದವರೇ ಪುಂಡಿಕಾಯಿ ಕೃಷ್ಣ ಭಟ್ಟರು. ಎಲ್ಲಾ ಯಕ್ಷಗಾನ ಕಲಾವಿದರಂತೆ ಕಿತ್ತುತಿನ್ನುವ ಬಡತನವೇ ಶ್ರೀಯುತರ ಆಸ್ತಿ. ಹೇಳಿಕೊಳ್ಳುವ ವಿದ್ಯಾಭ್ಯಾಸ ಇಲ್ಲದಿದ್ದರೂ ಕಲೆಯ ಸೆಳೆತಕ್ಕೇನೂ ಕೊರತೆಯಿಲ್ಲ. ಆ ತುಡಿತಕ್ಕೆ ಬಡಿತದ ಗುರುತ್ವ ಸಿಕ್ಕಿದ್ದು ಮದ್ದಳೆಯ ದಂತಕಥೆ ದಿ| ಕುದ್ರೆಕೋಡ್ಳು ರಾಮಭಟ್ಟರು. ಗುರುಗಳ ಪೂರ್ಣಾಶೀರ್ವಾದವೇ ಅವರಿಗೆ ಸಂಪ್ರದಾಯದ ಭದ್ರ ಸುಂದರ ಚೌಕಟ್ಟು ಒದಗಿಸಿದ್ದು.

ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲೇ ತಿರುಗಾಟ ಪ್ರಾರಂಭಿಸಿದ ಶ್ರೀಯುತರು ಮೂಲ್ಕಿ, ಕಟೀಲು, ಕರ್ನಾಟಕ, ಕೊಲ್ಲೂರು, ಕದ್ರಿ, ಕೂಡ್ಳು, ಬಪ್ಪನಾಡು… ಅಂತಹ ಅಂದಿನ ಗಜಮೇಳಗಳಲ್ಲಿ ಮದ್ದಳೆಗಾರರಾಗಿ ಮಿಂಚತೊಡಗಿದರು. 2005ರ ತನಕವೂ ಅಂದರೆ ಸುಮಾರು 40 ವರ್ಷಗಳ ತಿರುಗಾಟದಲ್ಲಿ ಸಂಪಾದಿಸಿದ್ದು ಶೂನ್ಯ. ಬರಿಗೈದಾಸರಾಗಿ ಇರುವ ಅಂಗೈ ಅಗಲ ಭೂಮಿಯಲ್ಲಿ ಸಿಕ್ಕಿದ್ದರಲ್ಲಿ ತೃಪ್ತಿಪಟ್ಟು ಕೊನೆಗಾಲದಲ್ಲಿ ಅಸ್ತಮಾದಿಂದ ಬಳಲಿ 1-2-2012ರಂದು ಪತ್ನಿ ಶ್ರೀಮತಿ ಇಂದುಮತಿ, ಮಗ ರಾಜೇಂದ್ರ ಪ್ರಸಾದ್ (ಹವ್ಯಾಸಿ ಮದ್ದಳೆಗಾರ), ಮಗಳು ಶಾಂತಕುಮಾರಿಯನ್ನು ಅಗಲಿದರು. ಹಾಗಿದ್ದರೆ ಇವರೇಕೆ ಚಿತ್ರವಿಲ್ಲದೇ ಚೌಕಟ್ಟಿನಲ್ಲೇ ಉಳಿದರು? ಇದೊಂದು ಯಕ್ಷಪ್ರಶ್ನೆ. ಕೊನೆಗಳಿಗೆವರೆಗೂ ಯಕ್ಷಗಾನದ ಚೌಕಟ್ಟು ಬಿಡದಿದ್ದು ಕಾರಣವೇ? ಸ್ವಾಭಿಮಾನಿ ನಡವಳಿಕೆಯೇ? ಯಾರ ಮುಂದೆಯೂ, ಹಿಂದೆಯೂ ಬೀಸಣಿಗೆಯಾಗದಿದ್ದುದೇ?


ನನ್ನ ಅವರ ಒಡನಾಟ ಸುಮಾರು 15 ವರ್ಷಗಳದ್ದು. ಕಲಾವಿದನಾಗಿ ಅಲ್ಲ. ಕೇವಲ ಇಷ್ಟಾಚಾರ. ಗಣೇಶ ಕಲಾವೃಂದದ ವೇಷಭೂಷಣ ತಂಡದಲ್ಲಿ ನಾನೊಬ್ಬ ಹವ್ಯಾಸಿ ಪ್ರಸಾಧನ ಕಲಾವಿದ. ಅಂದು ವಿಟ್ಲದಿಂದ ಕಾಸರಗೋಡು ತನಕ ಹವ್ಯಾಸಿ ಆಟಗಳಲ್ಲಿ ಅವರ ಮದ್ದಳೆವಾದನ ಯಥೇಚ್ಛವಾಗಿ ಕೇಳಿದವ. ದೈಹಿಕವಾಗಿ ಆಗಲೇ ದುರ್ಬಲರಾಗಿದ್ದ ಅವರು ಬಣ್ಣದ ಮಾಲಿಂಗರಂತಹ ಕಲಾವಿದರಿದ್ದರೆ ಮಾತ್ರ ಚೆಂಡೆ ಹೆಗಲೇರಿಸುತ್ತಿದ್ದರು. ಬರಬರುತ್ತಾ ಅವರನ್ನು ನೋಡದಿದ್ದರೂ ಇಂದು ಪುಂಡಿಕಾಯಿ ನುಡಿತ ಎನ್ನುವಷ್ಟು ವೈಶಿಷ್ಟ್ಯ ಅವರ ವಾದನದಲ್ಲಿ ಕೇಳಿದವ.

ಹಾಗೆಂದು ಅವರಿಗೆ ಜೊತೆಯಾಗುತ್ತಿದ್ದವರಲ್ಲಿ ಹೊಸಬರೇ ಹೆಚ್ಚು. ಹಾಡುಗಾರಿಕೆ ದಾರಿ ತಪ್ಪಿದಾಗ ನಿರ್ಭಾವದಿಂದ ಸುಧಾರಿಸುತ್ತಾ ಚೌಕಿಯಲ್ಲಿ ಬಂದು, “ಎಂಥಾ ಪದ್ಯ ಮಾರಾಯಾ!” ಎನ್ನುತ್ತಿದ್ದರು. ಯಾವ ಅರ್ಥದಲ್ಲಿ ಎಂದರೆ, “ಹಾಡುಗಾರಿಕೆಯಲ್ಲಿ ಇಷ್ಟು ಕ್ರಮ ಉಂಟೆಂದು ನನಗೆ ಗೊತ್ತೇ ಇರಲಿಲ್ಲ. ನನ್ನ ಗುರುಗಳು ಇದನ್ನೆಲ್ಲಾ ಹೇಳಿಕೊಡಲೇ ಇಲ್ಲ. ನಾನು ಕೇಳಿದಷ್ಟರಲ್ಲಿ ಬಾರಿಸಿದ್ದೂ ಇಲ್ಲ ಗ್ರಹಚಾರ” ಎನ್ನುತ್ತಿದ್ದರು. ಈ ಕಾರಣಕ್ಕೆ ಇರಬೇಕು, ಕೊನೆ ತನಕವೂ ಎಲೆಮರೆಯ ಕಾಯಾಗಿ ಹೋದರು.


ಹಾಗೆಂದು ನವಕಲಾವಿದರಿಂದ ಸಲ್ಲದ ನಡವಳಿಕೆ ನಡೆದರೆ ಜಗಳವಾಡದೆ ಆ ಜಾಗವನ್ನೇ ಬಿಟ್ಟು ರಂಗದಿಂದ ಹೊರನಡೆದದ್ದೂ ಇದೆ. ಈ ಘಟನೆಗೆ ಲೇಖಕ ಪ್ರತ್ಯಕ್ಷ ಸಾಕ್ಷಿ. ನಮ್ಮ ಊರಿನ ಪರಿಸರದಲ್ಲಿ ಮೈರಾವಣ ಕಾಳಗ ಪ್ರಸಂಗ. ದಿ| ಬಣ್ಣದ ಮಾಲಿಂಗರ ಮೈರಾವಣ. ದಿ| ಪಕಳಕುಂಜ ಕೃಷ್ಣ ನಾಯ್ಕರ ರಾವಣ. ಮೊದಲು ಯಾವುದೋ ಸೌಮ್ಯ ಪದಕ್ಕೆ ಪುಂಡಿಕಾಯಿಯವರು ಚೆಂಡೆ ಕೆಳಗಿಟ್ಟು ಚೌಕಿಯಲ್ಲಿದ್ದರು. ಮೊದಲಿನ ಆಧುನಿಕ ಭಾಗವತರಿಗೆ ಬರೀ ಮದ್ದಳೆ ಸಾಕಾಗಲಿಲ್ಲ. ಇವರಿಗೆ ಕರೆಹೋಯಿತು.

“ಈ ಸೌಮ್ಯ ಸನ್ನಿವೇಶಕ್ಕೆ ಯಾಕಪ್ಪಾ ಚೆಂಡೆ?” ಎಂದಿದ್ದೇ ತಡ, ಮತ್ತೊಬ್ಬ ಚೆಂಡೆಯವರು ಬಂದು ಬಾರಿಸಲಾರಂಭಿಸಿದರು. ಆ ಭಾಗ ಮುಗಿದು ಬಣ್ಣದ ಮಾಲಿಂಗರ ಮೈರಾವಣ ಪ್ರವೇಶಕ್ಕಾಯಿತು. ಮದ್ದಳೆ (ಚೆಂಡೆ)ಗಾರರು ಉತ್ಸಾಹದಿಂದಲೇ ಬಾರಿಸಲಾರಂಭಿಸಿದರು. ಕೇಳಿದ ಮಾಲಿಂಗಜ್ಜ ಚೌಕಿಯಲ್ಲಿ ನಿಂತಲ್ಲಿಂದಲೇ ಅಬ್ಬರಿಸಿದರು. “ಏರಿಯೇ ಅವು ಚೆಂಡೆದಾಯೆ? ಪುಂಡಿಕಾಯಿದಾರ್ ಓಲುಲ್ಲೇರ್? ಲೆಪ್ಪುಲೇ” ಚೌಕಿಯಲ್ಲಿ ಅವರಿರಲಿಲ್ಲ. ಹುಡುಕಿದ್ದೇ ಬಂತು. ಇವರು ಬಸ್‍ಸ್ಟ್ಯಾಂಡಿನಲ್ಲೇ ನಿಂತಿದ್ದರು. “ಭಾಗವತರು ಕರೀತಿದ್ದಾರಂತೆ. ಬರಬೇಕಂತೆ” ಎಂದಿದ್ದಕ್ಕೆ, “ಸೌಮ್ಯ ಪದ್ಯಕ್ಕೆ ಚೆಂಡೆ ಬೇಕಾದರೆ ಬಣ್ಣದ ವೇಷಕ್ಕೆ ಮದ್ದಳೆಯೇ ಸಾಕು” ಎನ್ನುತ್ತಾ ನಡೆದೇ ಬಿಟ್ಟರು. ಅಸಂಬದ್ಧ ಕಂಡರೆ ಮೌನವಾಗಿ ರೋದಿಸುತ್ತಿದ್ದರು ಎಂಬುದಕ್ಕೆ ಈ ಪ್ರಕರಣ.


ಇನ್ನೊಮ್ಮೆ ನಮ್ಮದೇ ತಂಡದ ಆಟ. ಹೊಸ ಉತ್ಸಾಹಿ ಭಾಗವತರೊಬ್ಬರು ಯಾವುದೋ ಕ್ರಮದಲ್ಲಿ ಪದ್ಯ ಹೇಳಲಾರಂಭಿಸಿದರು. ಇವರು ತನ್ನ ಕನ್ನಡಕವನ್ನು ಮೂಗಿನ ಮೇಲೆ ಜಾರಿಸಿ ಬರೀಛಾಪಿನಲ್ಲಿ ಪದ್ಯ ಮುಗಿಸುವಂತೆ ಮಾಡಿದರು. ಚೌಕಿಯಲ್ಲಿ, “ಎಂತದ್ದು ಮಾರಾಯ್ರೇ? ಈ ಕ್ರಮದ ಪದ್ಯವೂ ಉಂಟೋ? ನನಗೆ ತಾಳವೇ ಗೊತ್ತಾಗ್ಲಿಲ್ಲ. ಇವರಿಗೆ ಒಳ್ಳೆ ಭವಿಷ್ಯವಿದೆ. ಮದ್ದಳೆಗೆ ಆಚೆಯವರನ್ನು ಕಳುಹಿಸಿ ಆಯ್ತಾ?” ಎನ್ನುತ್ತಾ ಚೌಕಿಯಲ್ಲಿ ಕುಳಿತೇ ಬೆಳಗು ಮಾಡಿದರು. ಈ ಎರಡು ಉದಾಹರಣೆಗಳು ಸಂಪ್ರದಾಯದ ಬಗ್ಗೆ ಅವರಿಗಿರುವ ನಿಷ್ಠೆಯನ್ನು ಹೇಳುವುದಕ್ಕಾಗಿ ಮಾತ್ರ.


ಇವರ ಪಠ್ಯಕ್ರಮವೂ ವೈಶಿಷ್ಟ್ಯಪೂರ್ಣವಾಗಿತ್ತು. ನಮ್ಮ ಮನೆಯಲ್ಲಿ ನನ್ನ ಮಗನಿಗೆ ಮದ್ದಳೆ ಪಾಠಕ್ಕೆ ಕನ್ಯಾನದಿಂದ 3 ಕಿ.ಮೀ. ದೂರವನ್ನು ಏದುಸಿರು ಬಿಡುತ್ತಾ ನಡೆದೇ ಬರುತ್ತಿದ್ದರು. ತಪ್ಪಿಯೂ ವಾಹನಕ್ಕಾಗಿ ಕರೆಮಾಡಿದವರಲ್ಲ. ಬಂದೊಡನೆ ಪಾಠ ಶುರು. ತಪ್ಪಿದರೆ, ಹುಡುಗ ಎಂದು ನೋಡದೆ, “ಎಲ್ಲಿಗೆ ಅವಸರ? ಕೆಲಸ ಇದ್ದರೆ ಮುಗಿಸಿ ಬಾ” ಎಂದು ನಯವಾಗಿ ಗದರಿಸಿ ಸರಿಯಾಗುವ ತನಕ ಬಿಡುತ್ತಿರಲಿಲ್ಲ. ಆರು ತಿಂಗಳಲ್ಲಿ ಎಲ್ಲಾ ತಾಳ, ಮಟ್ಟುಗಳನ್ನು ತಿಳಿಸಿ ನೀನು ಕಲಿತದ್ದು ಯಕ್ಷಗಾನದ ಮದ್ದಳೆ ಚೆಂಡೆ. ಇಂಗ್ಲಿಷ್ ಪೆಟ್ಟು ಹಾಕುವುದು ನಿನ್ನಿಷ್ಟ” ಎಂದು ಆಶೀರ್ವದಿಸಿದ್ದರು.

ಬೆನ್ನ ಹಿಂದೆ ಮದ್ದಳೆ ಇಟ್ಟು ಹೇಳಿಕೊಡುವ ಕ್ರಮ ಅವರಲ್ಲಿತ್ತು. ಅವರಿಂದ ಕಲಿತ ಶಿಷ್ಯರು ಅನೇಕರು. ಬಹುಮಂದಿ ಈಗಾಗಲೇ ಉತ್ತಮ ಹೆಸರು ಗಳಿಸುತ್ತಿದ್ದಾರೆ ಎಂಬುದೂ ಸತ್ಯ. ಉದಾ: ಶ್ರೀಕೃಷ್ಣ ಪ್ರಕಾಶ ಉಳಿತ್ತಾಯ, ಶ್ರೀಧರ, ಆನಂದ ಪಡ್ರೆ ಮೊದಲಾದವರು. ಅವರ ಶಿಷ್ಯರ ವಾದನಗಳು ಕೇಳಿದೊಡನೆ, ಇದು ಪುಂಡಿಕಾಯಿ ಶೈಲಿ ಎಂದು ಹೇಳುವಷ್ಟು ಪ್ರಖರತೆ ಅದರಲ್ಲಿತ್ತು… ಇದೆ….
ಅಂದಿನ ಕಾಲದ ಮಹಾನ್ ಭಾಗವತರಾದ ಇರಾ ಭಾಗವತರು, ಅಗರಿಯವರು, ಶ್ರೀ ಬಲಿಪರು, ಮಂಡೆಚ್ಚರನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು.

ಹೊಸತನದ ಹುಚ್ಚಿನಲ್ಲಿ ಕೊಚ್ಚಿಹೋಗುತ್ತಿರುವ ಹಾಡುಗಾರಿಕೆಯನ್ನು ಕೇಳಿ ಮರುಗುತ್ತಿದ್ದರು. ಕಸುಬು ಎಂಬ ಹೆಸರಲ್ಲಿ ವಿಕೃತ, ರಂಗಕ್ಕೊಪ್ಪದ ಶೈಲಿಯನ್ನು ಅವರು ಟೀಕಿಸಲಿಲ್ಲ. ಹಾಗೆಂದು ಹೊಂದಾಣಿಕೆಯನ್ನು ಮಾಡಿಕೊಂಡವರಲ್ಲ. ಸಂಭಾವನೆಗಾಗಿ ಪೀಡಿಸಿದವರಲ್ಲ. ಆಟ ಮುಗಿದೊಡನೆ ಕವರಿಗೆ ಕಾಯದೇ ಹೊರಟೇ ಬಿಡುವಷ್ಟು ಸ್ವಾಭಿಮಾನಿ.


ಸಿಕ್ಕಿ ಸಿಕ್ಕಿದವರಿಗೆ ಸಲ್ಲುವ ಸನ್ಮಾನಗಳನ್ನು ಕಂಡಾಗ ಶ್ರೀಯುತರಿಗೆ ಒಲಿದದ್ದು ಬಹಳ ಕಡಿಮೆ ಎನಿಸುತ್ತದೆ. ಅದುವೇ ಚೌಕಟ್ಟಿಗೆ ಚಿತ್ರವಿಲ್ಲ. ಮುಂದಾದರೂ ಸತ್ಪಾತ್ರರನ್ನು ಗುರುತಿಸುವ ಕೆಲಸ ಖಂಡಿತ ಆಗಬೇಕು. ಇಂತವರನ್ನು ಪರಿಚಯಿಸುವ ‘ಯಕ್ಷದೀಪ’ದ ಸತ್ಕಾರ್ಯಕ್ಕೆ ನಮೋ ನಮಃ.

ಲೇಖಕರ ವಿಳಾಸ :
ಶ್ಯಾಮ ಭಟ್ಟ ಪೆರ್ನಡ್ಕ
ಪೆರ್ನಡ್ಕ ಮನೆ, ಕನ್ಯಾನ ಅಂಚೆ
ಬಂಟ್ವಾಳ ತಾಲೂಕು, ದ. ಕ., 574 279

ಮೊ. : +919141589368
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments