Saturday, January 18, 2025
Homeಯಕ್ಷಗಾನಯಕ್ಷಜಗತ್ತು ಕಂಡ ಅಪೂರ್ವ ಜೋಡಿ - ಹರಿಲೀಲಾ

ಯಕ್ಷಜಗತ್ತು ಕಂಡ ಅಪೂರ್ವ ಜೋಡಿ – ಹರಿಲೀಲಾ

‘ಯಕ್ಷಗಾನ’ ಗಂಡುಮೆಟ್ಟಿನ ಕಲೆಯೆಂದೇ ಪ್ರಸಿದ್ಧ. ಈ ವಿಶಿಷ್ಟ ಜನಪದ ಕಲೆಯನ್ನು ಈವರೆಗೆ ಪುರುಷರೇ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಈಚಿನ ದಿನಗಳಲ್ಲಿ ಮಹಿಳೆಯರು ಸಹಾ ಯಕ್ಷಗಾನದ ಹಿಮ್ಮೇಳ, ಮುಮ್ಮೇಳದಲ್ಲಿಯೂ ಕಾಣಿಸಿಕೊಂಡು, ಪುರುಷರಂತೆ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಈ ಯಕ್ಷಕಲೆಯಲ್ಲಿ ದಂಪತಿಗಳಿಬ್ಬರು ತೊಡಗಿಕೊಂಡು ಸೇವೆ ಸಲ್ಲಿಸುವುದು ಬಹಳ ಅಪರೂಪವೇ!! ಅಂಥಹ ಅಸಾಮಾನ್ಯರಲ್ಲಿ ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾ ಬೈಪಾಡಿತ್ತಾಯ ದಂಪತಿಗಳು ಸಹಾ ಒಬ್ಬರು.


ಪತಿ ಕೆ. ಹರಿನಾರಾಯಣ ಬೈಪಾಡಿತ್ತಾಯ
ಮದ್ದಲೆವಾದಕರು :

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದಲ್ಲಿ ಹುಟ್ಟಿ ಪ್ರಸ್ತುತ ಬಜ್ಪೆ ನಿವಾಸಿಯಾದ ಕೆ. ಹರಿನಾರಾಯಣ ಮದ್ದಲೆ ವಾದನದಲ್ಲಿ ತೊಡಗಿಕೊಂಡಿರುವ ಅದ್ಭುತ ಪ್ರತಿಭೆ. ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ದಂಪತಿಗಳ ಮಗನಾಗಿರುವ ಇವರು 1946 ನವೆಂಬರ್ 13ರಂದು ಜನಿಸಿದರು.


ಕೆ. ಹರಿನಾರಾಯಣ ಅವರು ಯಕ್ಷಗಾನ ಕುಟುಂಬದಲ್ಲಿಯೇ ಜನಿಸಿದವರು. ಇವರ ಸಹೋದರರಾದ ಮೋಹನ ಬೈಪಾಡಿತ್ತಾಯ, ಕೇಶವ ಬೈಪಾಡಿತ್ತಾಯ ಹಿಮ್ಮೇಳದ ವಾದಕರಾಗಿದ್ದರೆ, ಅನಂತ ಬೈಪಾಡಿತ್ತಾಯ ಮುಮ್ಮೇಳದಲ್ಲಿ ವೇಷಧಾರಿಯಾಗಿ ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ತೊಡಗಿಕೊಂಡಿದ್ದರೂ ಮನೆಯೊಳಗೆ ಯಕ್ಷಕಲೆಯ ಗಂಧ-ಗಾಳಿಯ ವಾತಾವರಣ ಇದ್ದಿದ್ದರಿಂದ ಯಕ್ಷಗಾನವು ಕೆ. ಹರಿನಾರಾಯಣ ಅವರನ್ನು ಆಕರ್ಷಿಸಿತು. ಯಕ್ಷಗಾನದ ಕಲೆಗೆ ಮರುಳಾದ ಇವರು 7ನೇ ತರಗತಿಯ ವಿದ್ಯಾಭ್ಯಾಸ ನಿಲ್ಲಿಸಿ, ಯಕ್ಷರಂಗಕ್ಕೆ ಧುಮುಕಿದರು. ಬಾಲ್ಯದಲ್ಲಿಯೇ ‘ಚೆಂಡೆಯ ಗುಡುಗು’ ಎಂದೇ ಹೆಸರಾದ ನೆಡ್ಲೆಯ ನರಸಿಂಹ ಭಟ್ ಅವರಿಂದ ಚೆಂಡೆ-ಮದ್ದಳೆಯ ಅಭ್ಯಾಸ ಪ್ರಾರಂಭಿಸಿದರು. ನಿರಂತರವಾದ ಪ್ರಯತ್ನ, ಛಲ, ಆತ್ಮವಿಶ್ವಾಸದಿಂದ ಆ ಕಲೆಯನ್ನು ರೂಢಿಸಿ ಕೊಂಡ ಕೆ. ಹರಿನಾರಾಯಣ ಅವರು ಹಿಮ್ಮೇಳದ ವಾದನ ಕಲೆಯಲ್ಲಿ ವಿಶಿಷ್ಟ ಛಾಪು ಮೂಡಿಸುವ ಮಟ್ಟಕ್ಕೆ ಬೆಳೆದು ನಿಂತರು.


ಅಲ್ಲದೇ, ಕಡಬದ ಪುರುಷಯ್ಯ ಆಚಾರ್ಯ ಅವರಿಂದ ಯಕ್ಷಗಾನದ ಬಾಲಪಾಠ ಪಡೆದಿರುವ ಇವರು, ವಿದ್ವಾನ್ ಕಾಂಚನ ಕೆ. ವಿ. ಮೂರ್ತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗದ ನಡೆಗಳನ್ನು ಅಭ್ಯಾಸ ಮಾಡಿ, ಸಮಗ್ರವಾದ “ಮೃದಂಗ ಸಾಹಿತ್ಯ”ವನ್ನು ಆಳ ವಾಗಿ ಪ್ರಯೋಗಗಳ ಮೂಲಕವೇ ರೂಢಿಸಿಕೊಂಡರು. ಅತೀ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರಕ್ಕೆ ಧುಮುಕಿದ ಇವರು, ತಮ್ಮ 15ನೇ ವಯಸ್ಸಿನಲ್ಲಿಯೇ ತಿರುಗಾಟ ಮೇಳದ ಮೃದಂಗವಾದಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು.


ಕೆ. ಹರಿನಾರಾಯಣ ಅವರು ಕುಂಡಾವು, ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಕುಂಬಳೆ, ಅಳದಂಗಡಿ (12 ವರ್ಷ) ಬಪ್ಪನಾಡು, ತಲಕಳ… ಇತ್ಯಾದಿ ಟೆಂಟ್ ಮತ್ತು ಬಯಲಾಟ ಮೇಳಗಳಲ್ಲಿ ತಮ್ಮ ಕಲಾಸೇವೆಯನ್ನು ಸಲ್ಲಿಸಿದ್ದಾರೆ. ಇವರು ಪ್ರಮುಖ ಭಾಗವತರಾದ ದಾಮೋದರ ಮಂಡೆಚ್ಚರು, ಅಗರಿ ಭಾಗವತರು, ಬಲಿಪ ಭಾಗವತರು- ಮುಂತಾದ ಭಾಗವತರಿಗೆ ತಮ್ಮ ಕೈ-ಚಳಕದಿಂದ ಮೃದಂಗ ಸಾಥ್ ನೀಡಿದ ಹೆಗ್ಗಳಿಕೆ ಇವರದ್ದು. ಕೆ. ಹರಿನಾರಾಯಣ ಕೇವಲ ಮೃದಂಗವಾದಕರೂ ಒಂದೇ ಅಲ್ಲಾ, ಯಕ್ಷ ಪದ್ಯಗಳನ್ನು ತಾಳಗತಿ ಸಹಿತ ಹೇಳುತ್ತಾರೆ. ಮತ್ತು ಭಾಗವತಿಕೆ ಪಾಠ ಮಾಡುತ್ತಾರೆ.


ಕಳೆದ ಐದು ದಶಕಗಳಿಂದ ಯಕ್ಷಗಾನದ ಕಲೆಯಲ್ಲಿಯೇ ಇವರು ತೊಡಗಿಕೊಂಡಿರುವ ಇವರ ಸೇವೆ ಸಾರ್ಥಕವಾದುದು. ಇವರು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಕೆ. ಹರಿನಾರಾಯಣ ಅವರ ಅನೇಕ ಶಿಷ್ಯರು ಈಗ ವಿವಿಧ ಮೇಳಗಳಲ್ಲಿ ಪ್ರಧಾನ ಪಾತ್ರವಹಿಸಿ ಪ್ರಸಿದ್ಧರಾಗಿದ್ದಾರೆ. ಅಲ್ಲದೇ, 150ಕ್ಕೂ ಹೆಚ್ಚು ಹಿಮ್ಮೇಳದ ವಾದಕರನ್ನು ರೂಪಿಸಿದ ಖ್ಯಾತಿ ಇವರದ್ದು. ಕರ್ನಾಟಕದ ವಿವಿಧ ಕಡೆಗಳಲ್ಲಿ ಅಲ್ಲದೇ, ಮುಂಬಯಿ, ಗುಜರಾತ್, ಚೆನ್ನೈ, ದೆಹಲಿ… ಮುಂತಾದ ಕಡೆಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.


ತಮ್ಮ 75ರ ಇಳಿವಯಸ್ಸಿನಲ್ಲಿಯೂ ‘ಮೃದಂಗ’ ಸಾಥ್ ನೀಡುತ್ತಿರುವ ಕೆ. ಹರಿನಾರಾಯಣ ಅವರು ಕಟೀಲು, ಕೈಕಂಬ, ಕಾರ್ಕಳ, ಮೂಡಬಿದ್ರೆ ಮುಂತಾದ ಕಡೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವುದು ಗಮನಾರ್ಹ ಸಂಗತಿ. ಅಲ್ಲದೇ, ಸಂಗೀತ ಪ್ರವೀಣೆ ಆಗಿದ್ದ ಬಾಳಿನ ಸಂಗಾತಿಯೂ ಆದ ಲೀಲಾ ಅವರನ್ನು ಸೂಕ್ತ ತರಬೇತಿಯನ್ನು ನೀಡಿ ರಂಗಕ್ಕೆ ತಂದು, ಉತ್ತಮ ಭಾಗವತರಾಗಿ ರೂಪಿಸಿದ ಹೆಗ್ಗಳಿಕೆ ಇವರದ್ದು. ಇವರ ಕಲಾಸೇವೆಯನ್ನು ಅನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿದೆ.


ಪತ್ನಿ ಲೀಲಾವತಿ ಬೈಪಾಡಿತ್ತಾಯ ಭಾಗವತಿಕೆ ಪ್ರವೀಣೆ
ಪ್ರಸಿದ್ಧ ಮದ್ದಲೆಗಾರರಾಗಿ ಗುರುತಿಸಿಕೊಂಡಿರುವ ಕೆ. ಹರಿನಾರಾಯಣ ಅವರ ಪತ್ನಿಯಾದ ಲೀಲಾ ಯಕ್ಷಗಾನದ ಭಾಗವತಿಕೆಯಲ್ಲಿ ತೊಡಗಿಸಿಕೊಂಡಿರುವ ಪ್ರವೀಣೆ. ಪತಿಯಂತೆ ಯಕ್ಷಸೇವೆಗೈಯುತ್ತಿರುವ ಅವರು ಈಗ ಪ್ರಸಿದ್ಧ ಭಾಗವತರಾಗಿ ಹೊರಹೊಮ್ಮಿದ್ದಾರೆ.
ಕಾಸರಗೋಡಿನ ಮಧೂರಿನ ಪುಂಡರೀಕಾಕ್ಷ ಹೆಬ್ಬಾರ ಮತ್ತು ಮಹಾಲಕ್ಷ್ಮಿ ದಂಪತಿಗಳ ಮಗಳಾದ ಲೀಲಾ ಅವರು 1947 ಮೇ 23 ರಂದು ಜನಿಸಿದರು. ಮನೆಯ ಬಡತನದಿಂದಾಗಿ ಶಾಲೆಯ ವಿದ್ಯಾಭ್ಯಾಸದಿಂದ ವಿಫಲರಾದ ಅವರು ಸಹೋದರ ಹಾಗೂ ನೆರೆಹೊರೆಯವರ ಸಹಾಯದಿಂದ ಅಕ್ಷರ ಅಭ್ಯಾಸವನ್ನು ಕಲಿತುಕೊಂಡರು. ಮಧೂರಿನ ಪದ್ಮನಾಭ ಸರಳಾಯರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಲು ಆರಂಭಿಸಿದ ಲೀಲಾ ಅವರು ಅಣ್ಣನ ಸಹಕಾರದಿಂದ “ಹಿಂದಿ ವಿಶಾರದ” ಪದವಿಯನ್ನು ಖಾಸಗಿಯಾಗಿ ಪೂರೈಸಿದರು. ಬಹಳ ಆಸಕ್ತಿ, ಶ್ರದ್ಧೆ, ನಿಷ್ಠೆಯಿಂದ ಸಂಗೀತಾಭ್ಯಾಸ ಮಾಡಿದ ಲೀಲಾ ಸ್ಥಳೀಯ ವೇದಿಕೆಯಲ್ಲಿಯೂ ಕಛೇರಿ ನೀಡತೊಡಗಿದರು. ಅದೇ ಸಂದರ್ಭದಲ್ಲಿ ಕಂಕಣಭಾಗ್ಯವೂ ಸಮ್ಮಿಲನವಾಗಿದ್ದರಿಂದ ಕೆ. ಹರಿನಾರಾಯಣ ಅವರನ್ನು ವಿವಾಹವಾದರು.


ಸ್ವತಃ ಪತಿಯೇ ಯಕ್ಷಗಾನದ ಹಿಮ್ಮೇಳದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರಿಂದ ಲೀಲಾ ಅವರ ಆಸೆ-ಆಕಾಂಕ್ಷೆಗೂ ಉತ್ತೇಜನ ಲಭಿಸಿತು. ಸಂಗೀತವನ್ನು ಅಭ್ಯಾಸ ಮಾಡಿದ್ದ ಅವರಿಗೆ ಪತಿ ಮನೆಯಲ್ಲಿಯೂ ಅದೇ ವಾತಾವರಣ ತುಂಬಿತ್ತು. ಯಕ್ಷಗಾನದ ಹಿಮ್ಮೇಳದ ವೈಭವವೇ ಅಲ್ಲಿ ತುಂಬಿಕೊಂಡಿದ್ದರಿಂದ ಸಹಜವಾಗಿಯೇ ಲೀಲಾ ಅವರನ್ನು ಯಕ್ಷಗಾನದ ಕ್ಷೇತ್ರ ಸೆಳೆದುಕೊಂಡಿತು. ಆಮೇಲೆ ಪತಿಯಿಂದಲೇ ಯಕ್ಷ ಪದ್ಯಗಳನ್ನು ಹೇಳಿಸಿಕೊಳ್ಳಲು ಆರಂಭಿಸಿದರು.


ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದ ಪತಿ ಕೆ. ಹರಿನಾರಾಯಣ ಪ್ರತಿನಿತ್ಯ ಊರಿಂದ ಊರಿಗೆ ಹೋಗಬೇಕಿತ್ತು. ಅವರೊಂದಿಗೆ ಲೀಲಾ ಸಹಾ ಅನಿವಾರ್ಯವಾಗಿ ತೆರಳಬೇಕಾಗಿತ್ತು. ಹೋದ ಸ್ಥಳದಲ್ಲಿಯೇ ಯಕ್ಷಪದ್ಯ ಹೇಳಿಸಿಕೊಂಡು, ರೂಢಿಸಿಕೊಳ್ಳಲು ಆರಂಭಿಸಿದರು. ಕಡಬದ ಪರಿಸರದಲ್ಲಿ ನಡೆಯುತ್ತಿದ್ದ ತಾಳಮದ್ದಲೆಯಲ್ಲಿ ಕೆಲವು ಪದ್ಯಗಳನ್ನು ಹೇಳಿದ ಲೀಲಾವತಿ ಅವರ ಸುಮಧುರ ಕಂಠವು ಟೆಂಟು ಮೇಳಗಳ ಒಡೆಯರ ಗಮನ ಸೆಳೆಯಿತು. ಆಮೇಲೆ “ಸುಬ್ರಹ್ಮಣ್ಯ ಮೇಳ”ದಲ್ಲಿ ಅತಿಥಿ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನದ ವೃತ್ತಿ ಆರಂಭಿಸಿದರು.


ಪುರುಷ ಭಾಗವತರಂತೆ ಯಕ್ಷ ಪದ್ಯ ಹೇಳುವ ಲೀಲಾ ಅವರು, ಆ ಕಲೆಯಲ್ಲಿ ಸಾಕಷ್ಟು ಪ್ರಾವಿಣ್ಯತೆ ಪಡೆದುಕೊಂಡಿದ್ದಾರೆ. ಭಾಗವತಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿರುವ ಇವರು, ಏಕಾಂಗಿಯಾಗಿಯೇ ಇಡೀ ಆಟವನ್ನು (ರಾತ್ರಿ ಯಿಂದ ಬೆಳಗಿನ ತನಕ ನಡೆಯುವ ಯಕ್ಷಗಾನ ಪ್ರದರ್ಶನ) ನಡೆಸಿಕೊಡುವಷ್ಟರ ಮಟ್ಟಕ್ಕೆ ಬೆಳೆದು ನಿಂತ ಬಗೆ ಅಚ್ಚರಿಪಡುವಂತದ್ದು. “ಯುಕ್ಷಗಾನದ ಗಾನ ಕೋಗಿಲೆ” ಎಂದು ಯಕ್ಷಗಾನ ಅಭಿಮಾನಿಗಳಿಂದ ಕರೆಸಿಕೊಂಡಿರುವ ಲೀಲಾವತಿ ಬೈಪಾಡಿತ್ತಾಯ ಅವರು ಆಗ ರಾಜ್ಯದ ಏಕೈಕ ವೃತ್ತಿಪರ ಮಹಿಳಾ ಭಾಗವತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.


ಲೀಲಾ ಅವರು ಕದ್ರಿ, ಪುತ್ತೂರು, ಅಳದಂಗಡಿ, ಕುಂಬಳೆ, ಬಪ್ಪನಾಡು, ತಲಕಳ… ಮುಂತಾದ ವೃತ್ತಿ ಮೇಳಗಳಲ್ಲಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಪೂರ್ಣಪ್ರಮಾಣದ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಬಡಗುತಿಟ್ಟಿನ ಪ್ರಾಧಾನ್ಯತೆಯಿರುವ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ತಮ್ಮ ಸುಮಧುರ ಕಂಠನಾದ ದಿಂದ ಪದ್ಯಗಳನ್ನು ಹೇಳಿ ಯಕ್ಷಪ್ರೇಮಿಗಳಿಂದ ಶಬ್ಬಾಸ್ ಎಂಬ ಪ್ರಶಂಸೆಯನ್ನು ಗಿಟ್ಟಿಸಿ ಕೊಂಡಿದ್ದಾರೆ. ಅಲ್ಲದೇ ಇವರು ಮುಂಬಯಿ, ಬೆಂಗಳೂರು, ಚೆನ್ನೈ, ಅಹಮದಾಬಾದ್, ದೆಹಲಿಯಲ್ಲಿಯೂ ಭಾಗವತಿಕೆಯ ಕಲೆಯನ್ನು ಪ್ರದರ್ಶಿಸಿದ್ದಾರೆ.


ಇವರು ತಮ್ಮ ಕಂಠನಾದದಿಂದ ಶೇಣಿ, ಕುಂಬಳೆ, ಬಣ್ಣದ ಮಾಲಿಂಗ, ಪಡ್ರೆ ಚಂದು, ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಪುತ್ತೂರು ಕೃಷ್ಣ ಭಟ್, ಮಹಾಲಿಂಗ ಭಟ್ ಮುಂತಾದ ಘಟಾನುಘಟಿ ಹಿರಿಯ ಕಲಾವಿದರನ್ನು ಕುಣಿಸಿದ್ದಾರೆ.
ಇರುಳಿಡೀ ನಿದ್ದೆಗೆಟ್ಟು ಹಗಲು ನಿದ್ರಿಸುವ ಕಾಯಕದಲ್ಲಿಯೇ ಸಕ್ರಿಯವಾಗಿ ತೊಡಗಿಕೊಂಡಿರುವ ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನದ ರಂಗದಲ್ಲಿ ಮಹಿಳೆಯರು ಹೇಗೆ ತೊಡಗಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯಕ್ಷಗಾನ ರಂಗದಲ್ಲಿ ಹೊಸ ಭಾಷ್ಯವನ್ನು ಬರೆದಿರುವ ಅವರು, ನೆಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಬಣ್ಣದ ಮಾಲಿಂಗ, ಶೇಣಿ ಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರ ರಾವ್, ಪಾತಾಳ ವೆಂಕಟ್ರಮಣ ಭಟ್… ಮುಂತಾದ ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದರಿಂದಲೂ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ, ಪಾರಂಪರಿಕ ಕಲೆಯಾದ ಯಕ್ಷಗಾನಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ಅವರು ಸಲ್ಲಿಸಿದ್ದಾರೆ.


ಆರು ತಿಂಗಳ ತಿರುಗಾಟ, ಆರು ತಿಂಗಳ ಯಕ್ಷಗಾನ ಆಕಾಂಕ್ಷಿಗಳಿಗೆ ಪಾಠ ಹೇಳಿಕೊಡುವ ಕಾಯಕದಲ್ಲಿ ತಲ್ಲೀನರಾಗಿರುವ ಲೀಲಾ ಅವರು ಧರ್ಮಸ್ಥಳದ ಯಕ್ಷಗಾನ ಲಲಿತಾ ಕಲಾ ಕೇಂದ್ರದಲ್ಲಿ ಪತಿಯೊಂದಿಗೆ ಹತ್ತು ವರ್ಷಗಳ ಕಾಲ ಗುರುಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. 70ರ ಇಳಿವಯಸ್ಸಿನಲ್ಲಿಯೂ ಭಾಗವತಿಕೆಯಲ್ಲಿ ತೊಡಗಿಕೊಂಡಿರುವ ಲೀಲಾವತಿ ಬೈಪಾಡಿತ್ತಾಯ ಕೆಲವು ಕಡೆಗಳಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ.


ಇವರ ಯಕ್ಷ ಸೇವೆಯನ್ನು ಗುರುತಿಸಿ ರಾಜ್ಯದ ವಿವಿಧ ಸಂಘ-ಸಂಸ್ಥೆಗಳು ಗೌರವಿಸಿವೆ. ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಕೆದ್ಲಾಮ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಮ್ಮೇಳನದ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಮುಂಬಯಿಯ ಅಭಿಮಾನಿ ಬಳಗ, ಕಿನ್ನಿಗೋಳಿ ಯಕ್ಷಲಹರಿ, ಯಕ್ಷಮಿತ್ರ ಪೆರ್ಲ, ಇಡಗುಂಜಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಸನ್ಮಾನ, ಶಿವಮೊಗ್ಗದ ಯಕ್ಷ ಸಂಪದದಿಂದ ಪುರಸ್ಕಾರವನ್ನು ಲೀಲಾ ಬೈಪಾಡಿತ್ತಾಯ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ, 2010ರಲ್ಲಿ ಕರ್ನಾಟಕ ಸರ್ಕಾರವು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಬೆಂಗಳೂರಿನಲ್ಲಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಕೂಡಾ ದೊರಕಿದೆ.


ಯಕ್ಷಗಾನದ ಹಿಮ್ಮೇಳದಲ್ಲಿ ತೊಡಗಿಕೊಂಡು ಕಲಾಸೇವೆ ಗೈಯುತ್ತಿರುವ ಈ ದಂಪತಿಗಳ ಸೇವೆ ಆದರ್ಶವಾದುದು. ದಂಪತಿಗಳಿಬ್ಬರು ಒಂದೇ ವೃತ್ತಿಯಲ್ಲಿದ್ದರು, ಅಕ್ಕಪಕ್ಕದಲ್ಲಿ ಕುಳಿತು ಸೇವೆ ಸಲ್ಲಿಸುವ ದಂಪತಿಗಳು ಬೇರೆಲ್ಲೂ ಕಾಣಲು ಸಿಗದು. ಆದರೆ ಕೆ. ಹರಿನಾರಾಯಣ ಮತ್ತು ಲೀಲಾ ದಂಪತಿ ಒಂದೇ ವೇದಿಕೆಯಲ್ಲಿ ಕುಳಿತು ತಮ್ಮ ಕಲಾಪ್ರತಿಭೆಯನ್ನು ಅಭಿವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ. ಹಿಮ್ಮೇಳದಲ್ಲಿ ಪಳಗಿದ ಈ ದಂಪತಿಗಳ ಯಕ್ಷಸೇವೆ ಗಂಡುಮೆಟ್ಟಿನ ಕಲೆಯ ಮೈಲುಗಲ್ಲು ಎಂದರೂ ಅತಿಶಯೋಕ್ತಿ ಆಗಲಾರದು. ು

ಲೇಖಕ: ಗಣಪತಿ ಹಾಸ್ಪುರ
ಅಂಚೆ : ಚವತ್ತಿ – 581 347
ತಾಲೂಕು : ಯಲ್ಲಾಪುರ (ಉ. ಕ.)
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments