Saturday, November 23, 2024
Homeಯಕ್ಷಗಾನತೆಂಕಿನ ಅಪ್ರತಿಮ ಪುಂಡುವೇಷಧಾರಿಯಾಗಿ ಮೆರೆದ ಕುಡಾನ ಗೋಪಾಲಕೃಷ್ಣ ಭಟ್

ತೆಂಕಿನ ಅಪ್ರತಿಮ ಪುಂಡುವೇಷಧಾರಿಯಾಗಿ ಮೆರೆದ ಕುಡಾನ ಗೋಪಾಲಕೃಷ್ಣ ಭಟ್

ಹಳೆಯ ಪ್ರೇಕ್ಷಕರಿಗೆಲ್ಲಾ ಕುಡಾನ ಗೋಪಾಲಕೃಷ್ಣ ಭಟ್ ಎಂಬ ಹೆಸರು ಚಿರಪರಿಚಿತವಾದುದು. ಆದರೆ ಹೆಚ್ಚಿನವರ ಬಾಯಲ್ಲೂ ಶ್ರೀಯುತರು ಕುಡಾನ ಗೋಪಿ ಅಣ್ಣ ಎಂದೇ ಪ್ರಸಿದ್ಧರು. ಕೇರಳ ಕರ್ನಾಟಕದ ಗಡಿಭಾಗದ ಊರು ಕುಡಾನದಲ್ಲಿ ಜನಿಸಿ ತೆಂಕುತಿಟ್ಟಿನ ಅಪ್ರತಿಮ ಪುಂಡುವೇಷಧಾರಿಯಾಗಿ ರಂಗವನ್ನಾಳಿ ಮೆರೆದವರು ಕುಡಾನ ಗೋಪಾಲಕೃಷ್ಣ ಭಟ್. 1950ರಿಂದ ತೊಡಗಿ 1990ರ ತನಕ ಒಟ್ಟು 40 ವರ್ಷಗಳ ಕಾಲ ಕಲಾಸೇವೆಯನ್ನು ಗೈದ ಶ್ರೇಷ್ಠ ಕಲಾವಿದರಿವರು.

ಇಂತಹ ಹಿರಿಯ ಕಲಾವಿದರನೇಕರ ಪರಿಶ್ರಮ, ತ್ಯಾಗಗಳಿಂದಲೇ ಯಕ್ಷಗಾನ ಎಂಬ ಗಂಡುಕಲೆಯು ಉಳಿದು ಬೆಳೆಯುತ್ತಾ ಸಾಗಿದೆ. ಕುಡಾಣ ಗೋಪಿ ಅಣ್ಣ ಅವರು ಯಕ್ಷಗಾನ ವೇಷಧಾರಿಯಾಗಿ ಬೆಳೆಯುತ್ತಾ ಕೀರ್ತಿಯನ್ನು ಗಳಿಸಿದ್ದು ಮಾತ್ರವಲ್ಲ ತನ್ನ ಹುಟ್ಟೂರು ಕುಡಾನ ಎಂಬ ಹೆಸರನ್ನು ಕೂಡಾ ಕಲಾಭಿಮಾನೀ ಜನಮಾನಸದಲ್ಲಿ ಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಶ್ರೀಯುತರ ವೇಷಗಳನ್ನು ನೋಡಿ ಆಸ್ವಾದಿಸಿದ ಹಿರಿಯ ಪ್ರೇಕ್ಷಕರು ಅವುಗಳೆಲ್ಲಾ ಮಾಸ್ಟರ್ ಪೀಸ್‍ಗಳೆಂದು ದೃಢವಾಗಿ ಹೇಳುತ್ತಾರೆ. ತಾನು ನಿರ್ವಹಿಸಿದ ಪ್ರತಿಯೊಂದು ವೇಷಗಳನ್ನೂ ಅತ್ಯುತ್ತಮವಾಗಿ ಚಿತ್ರಿಸಿ ಕಲಾಭಿಮಾನಿಗಳ ಮನಸೂರೆಗೊಂಡವರು ಕುಡಾನ ಗೋಪಿಯಣ್ಣನವರು.

ಶ್ರೀಯುತರು ಎರಡೂ ಕಾಲುಗಳನ್ನೆತ್ತಿ ಗಿರಕಿ ಹಾರುವುದನ್ನು ನೋಡುವುದು ಎಂದರೆ ಅದು ಕಣ್ಣಿಗೆ ಒಂದು ಹಬ್ಬವೇ ಸರಿ ಎಂದು ಹಳೆಯ ಪ್ರೇಕ್ಷಕರು ಹೇಳುತ್ತಾರೆ. ಅಂದಿನ ಕಾಲದಲ್ಲಿ ಕುಡಾನದವರು ಗಿರಕಿವೀರನೆಂದೇ ಖ್ಯಾತರಾಗಿದ್ದರು. ತಾನು ನಿರ್ವಹಿಸಿದ ಪ್ರತಿಯೊಂದು ಪಾತ್ರಗಳನ್ನೂ ತನ್ನ ಪ್ರತಿಭಾ ವ್ಯಾಪಾರದಿಂದ ಕೆತ್ತಿ ಚಿತ್ರಿಸಿದ್ದರು. ಕಿರಿಯ ಕಲಾವಿದರು ನೋಡಿ ಕಲಿಯಲೇಬೇಕಾದ ರೀತಿಯಲ್ಲಿ, ಪರಂಪರೆಗೆ ಒಂದಿನಿತೂ ಧಕ್ಕೆ ಬಾರದ ರೀತಿಯಲ್ಲಿ ಅಭಿನಯಿಸಿ, ಪಾತ್ರಗಳನ್ನು ಅದ್ಭುತವಾಗಿ ಚಿತ್ರಿಸುತ್ತಿದ್ದರಂತೆ ಕುಡಾನದವರು. ಅವರು ನಿರ್ವಹಿಸಿದ ಪಾತ್ರಗಳೆಲ್ಲಾ ದಾಖಲೀಕರಣಗೊಳ್ಳುತ್ತಿದ್ದರೆ ನಿಜವಾಗಿಯೂ ಕಲಿಕಾಸಕ್ತರಿಗೆ ಅದೊಂದು ಶ್ರೇಷ್ಠ ಕೊಡುಗೆಯಾಗಿ ಪರಿಣಮಿಸುತ್ತಿತ್ತು.


ಶ್ರೀ ಕೊಕ್ಕಡ ಈಶ್ವರ ಭಟ್, ಶ್ರೀ ಶಿವರಾಮ ಜೋಗಿ ಬಿ. ಸಿ. ರೋಡು, ರೆಂಜಾಳ ಶ್ರೀ ರಾಮಕೃಷ್ಣ ರಾವ್ ಇವರುಗಳು ಕುಡಾನ ಗೋಪಾಲಕೃಷ್ಣ ಭಟ್ಟರ ಶಿಷ್ಯಂದಿರು. ಕೊಕ್ಕಡ ಈಶ್ವರ ಭಟ್ ಮತ್ತು ಶಿವರಾಮ ಜೋಗಿಯವರು ಕುಡಾನ ಮನೆಯಲ್ಲಿದ್ದು ನಾಟ್ಯ ಕಲಿತಿದ್ದರು. ಪೆರುವಾಯಿ ನಾರಾಯಣ ಶೆಟ್ಟರೂ, ದೇವಕಾನ ಕೃಷ್ಣ ಭಟ್ಟರೂ ಕುಡಾನದವರ ಶಿಷ್ಯರು. ಕಲಾವಿದ, ಅಧ್ಯಾಪಕ, ಶ್ರೀ ದೇವಕಾನ ಕೃಷ್ಣ ಭಟ್ಟರಿಗೂ ಕುಡಾನ ಗೋಪಾಲಕೃಷ್ಣ ಭಟ್ಟರಿಗೂ ಒಳ್ಳೆಯ ಬಾಂಧವ್ಯವಿತ್ತು. ದೇವಕಾನದವರನ್ನು ಕುಡಾನ ಗೋಪಿಯಣ್ಣನವರು ಅತೀವವಾಗಿ ಪ್ರೀತಿಸುತ್ತಿದ್ದರು. ದೇವಕಾನದವರು ಕುಡಾನದವರನ್ನು ಗೌರವಭಾವದಿಂದ ಕಾಣುತ್ತಿದ್ದರು.


ಕಾಸರಗೋಡು ತಾಲೂಕು ಬಾಯಾರು ಗ್ರಾಮದ ಕುಡಾನ ಎಂಬಲ್ಲಿ ನಾರಾಯಣ ಭಟ್ಟ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ಗೋಪಿ ಅಣ್ಣನವರು ಈ ಲೋಕದ ಬೆಳಕನ್ನು ಕಂಡರು. ಓದಿದ್ದು 5ನೇ ತರಗತಿಯ ವರೇಗೆ ಪೆರುವಡಿ ಶಾಲೆಯಲ್ಲಿ (ಕುದ್ರೆಡ್ಕ ಶಾಲೆ). ಇವರದು ಕೃಷಿ ಕುಟುಂಬ. ಗೋಪಿ ಅಣ್ಣ ಅವರ ತೀರ್ಥರೂಪರು ಶ್ರೀ ನಾರಾಯಣ ಭಟ್ಟರು ಕೃಷಿಕರಾಗಿದ್ದರು. ಕಲಾವಿದರಲ್ಲದಿದ್ದರೂ ಯಕ್ಷಗಾನಾಸಕ್ತರಾಗಿದ್ದರು. ಬಾಯಾರು ಪರಿಸರದಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಳೆ, ಭಜನಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ತೀರ್ಥರೂಪರ ಜತೆ ಹೋಗುತ್ತಿದ್ದ ಗೋಪಿ ಅಣ್ಣನವರಿಗೂ ಕಲಾಸಕ್ತಿ ಚಿಗುರೊಡೆದು ಬೆಳೆಯತೊಡಗಿತು. ಯಕ್ಷಗಾನ ಕಲಾವಿದನಾಗಬೇಕೆಂಬ ನಿರ್ಧಾರವನ್ನೂ ಮಾಡಿದ್ದರು.

ಶ್ರೀ ಪೆರುವಡಿ ನಾರಾಯಣ ಹಾಸ್ಯಗಾರರಿಂದ ಅವರ ಮನೆಯಲ್ಲಿಯೇ ಪಾಠ ಆರಂಭವಾಯಿತು. ನಂತರ ಖ್ಯಾತ ಸ್ತ್ರೀಪಾತ್ರಧಾರಿ ಕೋಳ್ಯೂರು ಶ್ರೀ ರಾಮಚಂದ್ರರಾಯರಿಂದ ಮನೆಯಲ್ಲಿಯೇ ಪಾಠ. ಚುರುಕು ಮತ್ತು ತೀಕ್ಷ್ಣಮತಿಯಾಗಿದ್ದ ಕುಡಾನದವರು ಪಾಠಗಳನ್ನು ಬಹುಬೇಗನೇ ಗ್ರಹಿಸುತ್ತಿದ್ದರು. ತನ್ಮಧ್ಯೆ ಊರಲ್ಲಿ ನಡೆದ ಕೆಲವು ತಾಳಮದ್ದಳೆಗಳಲ್ಲಿ ಅನಿವಾರ್ಯಕ್ಕೆ, ಒತ್ತಾಯಕ್ಕೆ ಅರ್ಧವನ್ನೂ ಹೇಳಿದ್ದರು. ನಾಟ್ಯ ಕಲಿತ ಕುಡಾನದವರು ಮೇಳದ ತಿರುಗಾಟವನ್ನು ನಡೆಸುವ ಮನಮಾಡಿದರು.


ಕುಡಾನ ಗೋಪಾಲಕೃಷ್ಣ ಭಟ್ಟರು ತಿರುಗಾಟ ಆರಂಭಿಸಿದ್ದು 1950ನೇ ಇಸವಿ. ಶ್ರೀ ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಜತೆ. ಅವರಿಂದಲೇ ಅರ್ಥಗಾರಿಕೆ, ರಂಗತಂತ್ರಗಳನ್ನು ಕಲಿತರು. ಇದಕ್ಕಿಂತಲೂ ಮೊದಲು ವೇಷ ಮಾಡಿದ ಅನುಭವಗಳು ಇತ್ತು. ಗೆಜ್ಜೆ ಕಟ್ಟಿದ್ದು ತನ್ನ 16ನೆಯ ವಯಸ್ಸಿನಲ್ಲಿ (1948). ಶ್ರೀ ಕ್ಷೇತ್ರ ಕಟೀಲಿನಲ್ಲಿ ನವರಾತ್ರಿ ಪ್ರಯುಕ್ತ ನಡೆದ ಪ್ರದರ್ಶನದಲ್ಲಿ. ಮೇಳದಲ್ಲಿ ಹಿರಿಯ ಕಲಾವಿದರ ಮಾರ್ಗದರ್ಶನ, ಸ್ವಂತ ಪರಿಶ್ರಮಗಳಿಂದ ಗೋಪಿಯಣ್ಣ ಬೆಳೆಯುತ್ತಾ ಸಾಗಿದರು. ಪುಂಡುವೇಷ, ಕಸೆವೇಷಗಳಲ್ಲಿ ಮಿಂಚಿದರು. ಮೊದ ಮೊದಲು ಇವರು ಸ್ತ್ರೀವೇಷಗಳನ್ನೂ ಮಾಡುತ್ತಿದ್ದರಂತೆ. ಆದರೂ ಇವರ ಆಯ್ಕೆ ಪುಂಡುವೇಷಗಳೇ ಆಗಿತ್ತು. ಅದಕ್ಕೆ ಅಗತ್ಯವಾದ ಚುರುಕಿನ ನಾಟ್ಯ, ವೀರರಸಾಭಿನಯ ಸಾಮರ್ಥ್ಯ ಕುಡಾನದವರಲ್ಲಿ ತುಂಬಿತ್ತು. ಹೀಗೆ ಧರ್ಮಸ್ಥಳ ಮೇಳದಲ್ಲಿ 7 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

ಕುಡಾನ ಗೋಪಿಯಣ್ಣ ದಿಗಿಣವೀರ, ಗಿರಕಿವೀರನೆಂದೇ ಅಂದಿನ ಕಾಲದಲ್ಲಿ ಕರೆಸಿಕೊಂಡಿದ್ದರು. ಆದರೆ ಎಲ್ಲಾ ಪಾತ್ರಗಳಿಗೂ ಹಾಗೆ ಹಾರುತ್ತಿರಲಿಲ್ಲ. ಪಾತ್ರೋಚಿತವಾಗಿ ಗಿರಕಿ ಹಾರುತ್ತಿದ್ದರು. ಹಾಗಾಗಿ ನಿಜ ದಿಗಿಣವೀರ ಎನಿಸಿಕೊಂಡಿದ್ದರು. ಇವರು ಎರಡೂ ಕಾಲುಗಳನ್ನು ಎತ್ತಿ, ಮಡಚಿ ಗಿರಕಿ ಹೊಡೆಯುವುದು ಅದೆಷ್ಟು ಸೊಗಸು! ಎಂಬುದು ನೋಡುಗರ ಅಭಿಪ್ರಾಯ. ಪ್ರದರ್ಶನವೊಂದರಲ್ಲಿ ಗಿರಕಿ ಹಾರುತ್ತಾ ರಂಗಸ್ಥಳದಿಂದ ಹೊರಗೆ ಎಸೆಯಲ್ಪಟ್ಟರಂತೆ. ಆಗ ಹಿರಿಯ ಬಲಿಪರು- ‘ಎಂತಕೆ ಮಾರಾಯಾ ಹಾಂಗೆ ಹಾರುತ್ತೆ?’ ಎಂದು ಗದರಿಸಿದ್ದರೆಂಬ ಹೇಳಿಕೆಯಿದೆ.

ಖ್ಯಾತ ಕಲಾವಿದರಾಗಿದ್ದ ಹೊಸಹಿತ್ತಿಲು ಮಹಾಲಿಂಗ ಭಟ್ಟರೂ (ಲಿಂಗಣ್ಣ) ಕುಡಾನ ಗೋಪಿ ಅಣ್ಣನೂ ಬಂಧುಗಳು. ಲಿಂಗಣ್ಣನವರಿಗೆ ಕುಡಾನ ಅಜ್ಜನ ಮನೆ. ಧರ್ಮಸ್ಥಳ ಮೇಳದ ತಿರುಗಾಟದ ನಂತರ ಕುಡಾನದವರು ಮೂಲ್ಕಿ ಮೇಳವನ್ನು ಸೇರಿದ್ದರು. ಪೆರುವಡಿ ಸುಬ್ರಾಯ ಭಟ್ಟರು, ಪೆರುವಡಿ ನಾರಾಯಣ ಭಟ್ಟರು ಮೇಳವನ್ನು ನಡೆಸುತ್ತಿದ್ದರು. ಇವರುಗಳು ಕುಡಾನದವರ ನೆರೆಯ ಬಂಧುಗಳು. ನಿರಂತರ 13 ವರ್ಷಗಳ ತಿರುಗಾಟ ಮೂಲ್ಕಿ ಮೇಳದಲ್ಲಿ. ಧರ್ಮಸ್ಥಳ ಮತ್ತು ಮೂಲ್ಕಿ ಮೇಳಗಳಲ್ಲಿ ಗೋಪಿ ಅಣ್ಣ ಪ್ರಹ್ಲಾದ, ಧ್ರುವ, ಪರಶುರಾಮ, ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ, ಲಕ್ಷ್ಮಣ, ಚಂಡಮುಂಡರು ಪ್ರಮೀಳೆ, ಶಶಿಪ್ರಭೆ, ಸ್ವಯಂಪ್ರಭೆ, ಮೀನಾಕ್ಷಿ ಮಾರ್ತಾಂಡತೇಜ, ಅಶ್ವತ್ಥಾಮ ಮೊದಲಾದ ಪಾತ್ರಗಳಲ್ಲಿ ಮಿಂಚಿದರು.

ಇವರ ಶ್ರೀಕೃಷ್ಣ ಮತ್ತು ಪೆರುವಡಿ ಹಾಸ್ಯಗಾರರ ವಿಜಯನ ಜೋಡಿ ಪಾತ್ರಗಳು ಅಂದಿನ ಕಾಲ ಜನಪ್ರಿಯವಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳ ಜಮದಗ್ನಿ ಕುಡಾನದವರ ಪರಶುರಾಮ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ಅಲ್ಲದೆ ಕುರಿಯ ವಿಠಲ ಶಾಸ್ತ್ರಿಗಳ ಈಶ್ವರನಿಗೆ ದಾಕ್ಷಾಯಿಣಿಯಾಗಿಯೂ, ಭಸ್ಮಾಸುರನ ಪಾತ್ರಕ್ಕೆ ಮೋಹಿನಿಯಾಗಿಯೂ ಅಭಿನಯಿಸಿದ್ದರು. ರಂಗನಾಯಕರೆಂದೇ ಖ್ಯಾತರಾದ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿಯೂ ಜತೆಗೆ ವೇಷಧಾರಿಯಾಗಿಯೂ ಕಲಾಸೇವೆಯನ್ನು ಮಾಡಿದವರು. ಭಾಗವತ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ಮಹಿಷಾಸುರನ ಪಾತ್ರಕ್ಕೆ ಅನೇಕ ಬಾರಿ ಕುಡಾನ ಗೋಪಿ ಅಣ್ಣ ಮಾಲಿನಿಯಾಗಿ ಅಭಿನಯಿಸಿದ್ದರು.


ಮೂಲ್ಕಿ ಮೇಳದ ನಂತರ ಇರಾ ಮೇಳದಲ್ಲಿ ತಿರುಗಾಟ 4 ವರ್ಷ. ಬಳಿಕ 4 ವರ್ಷ ಕೂಡ್ಲು ಮೇಳದಲ್ಲಿ. ತದನಂತರ 4 ವರ್ಷ ಸುಂಕದಕಟ್ಟೆ ಮೇಳದಲ್ಲಿ. ಕಟೀಲು ಮೇಳದ ಶ್ರೇಷ್ಠ ಕಲಾವಿದ ವಾಟೆಪಡ್ಪು ವಿಷ್ಣುಶರ್ಮರೂ ಕುಡಾನ ಮನೆಯವರೂ ಬಂಧುಗಳು. ಕುಡಾನ ಗೋಪಿಯಣ್ಣನವರು ವಿವಾಹವಾದುದು ವಿಷ್ಣುಶರ್ಮರ ಸೋದರ ಅತ್ತೆಯನ್ನು (ತಂದೆಯ ತಂಗಿ). ಸುಂಕದಕಟ್ಟೆ ಮೇಳದಲ್ಲಿ ಮಾವನೂ ಅಳಿಯನೂ ಜತೆಯಾಗಿ ಕಲಾಸೇವೆಯನ್ನು ಮಾಡಿದ್ದರು. ಕುಡಾನ ಗೋಪಾಲಕೃಷ್ಣ ಭಟ್ಟರು ಎಡನೀರು ಮಠ ಮತ್ತು ಮಠಾಧೀಶರಲ್ಲಿ ವಿಶೇಷ ಗೌರವವುಳ್ಳವರಾಗಿದ್ದರು. ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಗೆ ಅಚ್ಚುಮೆಚ್ಚಿನ ಕಲಾವಿದರಾಗಿದ್ದರು ಕುಡಾನ ಗೋಪಿಯಣ್ಣ. ಮಳೆಗಾಲ ಶ್ರೀಮಠದಲ್ಲಿ ಕಳೆದ ದಿನಗಳನೇಕ.

ತನ್ನ 18ನೆಯ ವಯಸ್ಸಿನಲ್ಲಿ ತಿರುಗಾಟ ಆರಂಭಿಸಿದ ಕುಡಾನ ಗೋಪಿಯಣ್ಣ ಅವರಿಗೆ ಭರತನಾಟ್ಯ ಮತ್ತು ಶಿವತಾಂಡವ ನೃತ್ಯವನ್ನು ಅಭ್ಯಸಿಸುವ ಅವಕಾಶವೂ ಒದಗಿಬಂದಿತ್ತು. ಕೇರಳ ರಾಜ್ಯದ ಪಾಲಕ್ಕಾಡ್ ಸಮೀಪದ (ಪಾಲ್ಘಾಟ್) ಪಲ್ಲಶ್ಯನ ಶ್ರೀ ಭಗವತೀ ದೇವಸ್ಥಾನದಲ್ಲಿ ಕುಡಾನ ಗೋಪಿಯಣ್ಣನವರ ದೊಡ್ಡಪ್ಪ ಮತ್ತು ತಂದೆ ನಾರಾಯಣ ಭಟ್ಟರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈಗಲೂ ಕುಡಾನ ಮನೆಯವರು ಸದ್ರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯವನ್ನು ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ತೀರ್ಥರೂಪರ ಜತೆಗೆ ಪಾಲ್ಘಾಟ್‍ಗೆ ತೆರಳಿ ಶ್ರೀ ನಾರಾಯಣನ್ ನಂಬೂದಿರಿ ಮತ್ತು ಶ್ರೀ ಕೆ. ಎಸ್. ಮೂರ್ತಿಯವರಿಂದ ಭರತನಾಟ್ಯ ಮತ್ತು ಶಿವತಾಂಡವ ನೃತ್ಯವನ್ನು ಕಲಿತಿದ್ದರು. ಯಕ್ಷಗಾನ ಹೆಜ್ಜೆಗಾರಿಕೆಗೆ ಇದರಿಂದ ಅನುಕೂಲವೇ ಆಗಿತ್ತು.

ಕುಡಾನರು ಜನಿಸಿದ್ದು 1932ರಲ್ಲಿ. ಇಳಿವಯಸ್ಸಿನಲ್ಲಿ ವಯೋಸಹಜವಾದ ಮರೆವು ಕಾಡಿತ್ತು. ಆದರೂ ನಾನು ಜನಿಸಿದ್ದು ಅಂಗೀರಸ ಸಂವತ್ಸರದಲ್ಲಿ ಎಂದು ಹೇಳುತ್ತಿದ್ದರಂತೆ. ತನ್ನ 22-24ರ ವಯಸ್ಸಿನಲ್ಲೇ ಯಕ್ಷಗಾನ, ಭರತನಾಟ್ಯ, ಶಿವತಾಂಡವಗಳನ್ನು ಕಲಿತು ರಂಗದಲ್ಲಿ ಪುಂಡುವೇಷಧಾರಿಯಾಗಿ ಮಿಂಚಿದ ಪ್ರತಿಭಾವಂತರು ಕುಡಾನ ಗೋಪಿಯಣ್ಣ. ಕಾಯರ್‍ಕಟ್ಟೆ, ಬೆರಿಪದವು, ಮಿತ್ತನಡ್ಕ, ಸುಳ್ಯ, ತೊಡಿಕಾನ, ಬಿಳಿನೆಲೆ, ಮುಳಿಗದ್ದೆ ಮೊದಲಾದೆಡೆ ಯಕ್ಷಗಾನ ನಾಟ್ಯ ತರಗತಿಗಳನ್ನು ನಡೆಸಿ ತರಬೇತಿ ನೀಡಿರುತ್ತಾರೆ. ಸುಂಕದಕಟ್ಟೆ ಮೇಳದ ತಿರುಗಾಟ ನಂತರ ನಿರಂತರ 7 ವರ್ಷಗಳ ಕಾಲ ಕಟೀಲು ಮೇಳದಲ್ಲಿ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ಕಟೀಲು 3ನೇ ಮೇಳದಲ್ಲಿ ವ್ಯವಸಾಯ. 1995ನೇ ಇಸವಿ ಅನಿವಾರ್ಯವಾಗಿ ರಂಗದಿಂದ ನಿವೃತ್ತರಾದರು.

ತಿರುಗಾಟದ ಸಂದರ್ಭ ಶಿಸ್ತಿನ ಬದುಕನ್ನು ರೂಢಿಸಿಕೊಂಡಿದ್ದ ಇವರು ಆರೋಗ್ಯವಂತರಾಗಿದ್ದರು. ಅನೇಕ ಸಂಘ-ಸಂಸ್ಥೆಗಳು ಕುಡಾಣ ಗೋಪಾಲಕೃಷ್ಣ ಭಟ್ ಎಂಬ ಮೇರುಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಅಲ್ಲದೆ ಅವರ ಕಷ್ಟಗಳಿಗೆ ಸ್ಪಂದಿಸಿಯೂ ಇದ್ದಾರೆ. ತನ್ನ ಯಕ್ಷಕಲಾ ಬದುಕಿನಲ್ಲಿ ದಿಗ್ಗಜ ಕಲಾವಿದರನೇಕರ ಒಡನಾಡಿಯಾಗಿ ಸಹಕಲಾವಿದರಾಗಿ ಮೆರೆದರು. ಆದರೂ ಗರ್ವಪಟ್ಟವರಲ್ಲ ಕುಡಾನ ಗೋಪಿ ಅಣ್ಣ. ಯಕ್ಷಗಾನ ಕಲೆಯಿಂದಾಗಿ ನಾನು ಗುರುತಿಸಲ್ಪಟ್ಟೆ. ಅದು ನನಗೆ ಎಲ್ಲವನ್ನೂ ನೀಡಿತು. ಶ್ರೇಷ್ಠ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳಲು ಅವಕಾಶವಾದುದಕ್ಕೆ ಸಂತೋಷವಿದೆ ಎನ್ನುತ್ತಿದ್ದರಂತೆ.

ಕುಡಾನ ಗೋಪಾಲಕೃಷ್ಣ ಭಟ್ಟರ ಧರ್ಮಪತ್ನಿ ಶ್ರೀಮತಿ ಸಾವಿತ್ರಿ ಅಮ್ಮ. ಕುಡಾನ ದಂಪತಿಗಳಿಗೆ 4 ಮಂದಿ ಮಕ್ಕಳು (2 ಹೆಣ್ಣು ಮತ್ತು 2 ಗಂಡು) ಹಿರಿಯ ಪುತ್ರಿ ಶ್ರೀಮತೀ ಸರಸ್ವತೀ ಗೃಹಿಣಿ. ಕಿರಿಯ ಪುತ್ರಿ ಶ್ರೀಮತೀ ಶ್ರೀದೇವಿ ಗೃಹಿಣಿ. ಪ್ರಥಮ ಪುತ್ರ ಶ್ರೀ ಗಣೇಶ ಕುಡಾನ ಕೃಷಿ ಮತ್ತು ಪಾಕತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ದ್ವಿತೀಯ ಪುತ್ರ ಶ್ರೀ ಚಂದ್ರಶೇಖರ ಕುಡಾನ ಪೌರೋಹಿತ್ಯ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರುಗಳೆಲ್ಲಾ ಯಕ್ಷಗಾನಾಸಕ್ತರು. ಶ್ರೀ ಗಣೇಶ ಕುಡಾನ ಇವರ ಮಕ್ಕಳಾದ ಕು| ಗೀತಾಂಜಲೀ, ಕು| ಮೇಘನಾ ಮತ್ತು ಕು| ಸ್ವಾತಿ ಯಕ್ಷಗಾನ ಬಾಲಕಲಾವಿದೆಯರು. ಬಾಯಾರು ರಮೇಶ ಶೆಟ್ಟಿಯವರಿಂದ ನಾಟ್ಯಾಭ್ಯಾಸ ಮಾಡಿರುತ್ತಾರೆ. ಇವರು ಮೂವರೂ ಬಾಯಾರು ಮುಳಿಗದ್ದೆಯ ಹೆದ್ದಾರಿ ಶಾಲೆಯ ವಿದ್ಯಾರ್ಥಿನಿಯರು.

ಎಳವೆಯಲ್ಲೇ ಯಕ್ಷಗಾನವನ್ನು ಕಲಿತು ಗ್ರಾಮೀಣ ಪ್ರದೇಶವಾದ ಹುಟ್ಟೂರು ಕುಡಾನಕ್ಕೆ ಕೀರ್ತಿಯನ್ನು ತಂದಿತ್ತವರು ಶ್ರೀ ಗೋಪಾಲಕೃಷ್ಣ ಭಟ್ಟರು. ಶಾಸ್ತ್ರೀಯವಾಗಿ ಕಲಿತು ಬಾಲಗೋಪಾಲ ವೇಷದಿಂದ ತೊಡಗಿ ಹಂತ ಹಂತವಾಗಿ ಬೆಳೆದು ಪಕ್ವರಾದವರು. ಪಾದರಸದಂತೆ ಚುರುಕಾದ ನಡೆ, ಶಾಸ್ತ್ರೀಯ, ಸುಂದರವಾದ ನಾಟ್ಯ, ಅದ್ಭುತ ದಿಗಿಣ, ಹಿತಮಿತವಾದ ಮಾತುಗಳಿಂದ ತೆಂಕುತಿಟ್ಟಿನ ಶ್ರೇಷ್ಠ ಪುಂಡುವೇಷಧಾರಿಯಾಗಿ ಮೆರೆದರು. ಅವರೆಂದೂ ಪ್ರಚಾರಪ್ರಿಯರಾಗಿರಲಿಲ್ಲ. ಪ್ರತಿಷ್ಠೆಗಾಗಿ ಹಾತೊರೆದವರಲ್ಲ. ಯಾವುದೇ ಅತಿರೇಕಗಳಿಲ್ಲದ ದೆಸೆಯಿಂದ ಪ್ರಚಾರಗಳಿಂದ ದೂರ ಉಳಿದರೇನೋ? ಎಂದು ಅನಿಸಿದರೆ ತಪ್ಪಾಗಲಾರದು.

ತಾನೊಬ್ಬ ಖ್ಯಾತ ಕಲಾವಿದ ಎಂದು ಬೀಗದೆ ಬಾಗುತ್ತಾ ಬದುಕಿದ ಇವರು ನಿವೃತ್ತಿಯ ಅನಂತರ ಪತ್ನಿ ಮತ್ತು ಮಕ್ಕಳ ಜತೆ ಕುಡಾನ ಮೂಲಮನೆಯಲ್ಲಿ ವಾಸಿಸುತ್ತಿದ್ದರು. 2010ರ ನಂತರ ವಯೋಸಹಜವಾಗಿ ದೇಹದ ಆರೋಗ್ಯವೂ ಕ್ಷೀಣಿಸುತ್ತಾ ಹೋಗಿತ್ತು. 2019 ಜೂನ್ 13ರಂದು ತೆಂಕುತಿಟ್ಟಿನ ಅಪ್ರತಿಮ ಪುಂಡುವೇಷಧಾರಿಯಾಗಿ ಮೆರೆದ ಕುಡಾನ ಗೋಪಾಲಕೃಷ್ಣ ಭಟ್ ಬದುಕಿನ ಯಾತ್ರೆಯನ್ನು ಮುಗಿಸಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು.

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments