ಯಜ್ಞ ಎನ್ನುವುದು ತ್ಯಾಗಭೂಯಿಷ್ಟವಾದ ಒಂದು ಶ್ರೇಷ್ಠಕರ್ಮ. ಕಳೆದ ಅರುವತ್ತು ವರ್ಷಗಳಿಂದ ಇಂತಹ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡು, ಕಟೀಲುತಾಯಿಗೆ ಸರ್ವ ಸಮರ್ಪಣಾ ಭಾವದಿಂದ ಯಕ್ಷಸೇವೆಯನ್ನು ನೀಡುತ್ತಾ ಬರುತ್ತಿರುವ ತ್ಯಾಗಿ ಮನೆತನ ದೆಪ್ಪುಣಿಗುತ್ತಿನ ಮನೆತನ. ಸೇವಾ ವರುಷಗಳ ಸಂಖ್ಯೆ ಅರುವತ್ತಾದರೂ ಸೇವೆಯ ಸಂಖ್ಯೆ ಶತಕವನ್ನು ದಾಟುತ್ತದೆ. ಈ ಸೇವೆಯ ಹಿಂದೆ ಅಹಂಕಾರ ಇಲ್ಲ, ಬಿಗುಮಾನ ಇಲ್ಲ. ಇರುವುದು ಕೇವಲ ಬಾಗುವಿಕೆ ಮಾತ್ರ. ಇದುವೇ ಈ ನಿರಂತರತೆಯ ಗುಟ್ಟು.
ಒಂದು ಕಾಲದಲ್ಲಿ ಕಲೆ ಸಾಹಿತ್ಯಗಳೆಲ್ಲ ರಾಜಾಶ್ರಯಕ್ಕೆ ಒಳಪಟ್ಟಿದ್ದವು. ಇಂದಿನ ಪ್ರಜಾಪ್ರಭುತ್ವದ ದಿನಗಳಲ್ಲಿ ಯಕ್ಷಗಾನದಂತಹ ಕಲೆಗಳಿಗೆ ಮಹಾಪೋಷಣೆ ದೊರಕುತ್ತಿರುವುದು ದೆಪ್ಪುಣಿ, ಕಲ್ಲಾಡಿಯಂತಹ ಮನೆತನಗಳಿಂದ. ಇಲ್ಲದೇ ಇದ್ದಲ್ಲಿ ರಾಜಮನೆತನಗಳು ಮರೆಯಾದ ಹಾಗೆ ಸಹಸ್ರಾರು ಕಲೆಗಳೂ ವಿನಾಶವಾಗಿ ಹೋಗುತ್ತಿದ್ದವೋ ಏನೋ. ಅವಿನಾಶಿಯಾದ ಈ ಕಲೆಗಳಿಗೆ ವರ್ತಮಾನ ಕಾಲದಲ್ಲಿ ಆಶ್ರಯ ತಾಣವಾಗಿ ದೇವರು ಆಯ್ದುಕೊಂಡದ್ದು ದೆಪ್ಪುಣಿಯಂತಹ ನೂರಾರು ಮನೆತನಗಳನ್ನು. ಸಂದ ಅರುವತ್ತು ವರುಷಗಳ ಮಹಾಯಜ್ಞದಲ್ಲಿ ಕರ್ತೃಗಳಾಗಿ ಸಾರ್ಥಕ್ಯತೆಯನ್ನು ಪಡಕೊಂಡ ತಲೆಗಳು ಅನೇಕ. ದೆಪ್ಪುಣಿಗುತ್ತು ಮತ್ತು ಕಟೀಲು ಮೇಳಗಳ ಅವಿನಾಭಾವ ಸಂಬಂಧ ಕೇವಲ ಅರುವತ್ತಕ್ಕೆ ಸೀಮಿತವಾಗುವುದಿಲ್ಲ, ಬದಲಾಗಿ 120 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಕೊಡೆತ್ತೂರುಗುತ್ತು ದಿ. ರಾಮಣ್ಣ ಶೆಟ್ರು 1880ರಿಂದ 1920ರ ತನಕ ಕಟೀಲು ದೇವಳದ ಮೊದಲ ಆಡಳಿತ ಮೊಕ್ತೇಸರರು. ಅವರು ದೆಪ್ಪುಣಿಗುತ್ತು ದೇವಕಿ ಶೆಟ್ಟಿಯವರನ್ನು ವಿವಾಹವಾಗಿ ದೆಪ್ಪುಣಿಗೇ ಸ್ಥಳಾಂತರಗೊಂಡರು. ಅಲ್ಲಿಯೇ ಕೊಡೆತ್ತೂರುಗುತ್ತಿನ ಮನೆಯನ್ನೇ ಹೋಲುವ ಗೃಹ ನಿರ್ಮಾಣ ಮಾಡಿದರು. ಯಕ್ಷಗಾನ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಮಣ್ಣ ಶೆಟ್ಟರು ತನ್ನ ಮನೆಯಲ್ಲಿ ಕಟೀಲು ಮೇಳದ ಸೇವೆಯನ್ನು ಆರಂಭಿಸಿದ್ದು ಮಾತ್ರವಲ್ಲದೆ, ಅದರ ಅಭಿವೃದ್ಧಿಗೂ, ಸ್ಥಿರತೆಗೂ ಕಾರಣೀಕರ್ತರೆನಿಸಿದರು. ಅವರೇ ಸ್ವತಃ ಮದ್ದಳೆವಾದಕರೂ ಆಗಿದ್ದರು. ಅವರ ಕಾಲದಲ್ಲಿ ಗುತ್ತಿನ ಮನೆಯಲ್ಲಿ 1 ತಿಂಗಳ ಪರ್ಯಂತ ಕಟೀಲು ಮೇಳದ ಆಟ ನಡೆಯುತ್ತಿತ್ತು. ರಾಮಾಯಣ, ಮಹಾಭಾರತಗಳು ಪ್ರದರ್ಶನಗೊಳ್ಳುತ್ತಿದ್ದವು.
ಆ ಕಾಲದಲ್ಲಿ ಮೇಳಕ್ಕೆ ಆಟಗಳೇ ಸಿಗದ ಕಾಲ. ಈ ದೃಷ್ಟಿಯಿಂದ ದೆಪ್ಪುಣಿಗುತ್ತಿನ ಕೊಡುಗೆ ಮರೆಯಲಾರದ್ದು, ಮರೆಯಬಾರದ್ದು. ಅದು ಕಲ್ಲಾಡಿ ಕೊರಗ ಶೆಟ್ರ ಕಾಲ. ಕಲ್ಲಾಡಿ ಮನೆತನಕ್ಕೂ, ದೆಪ್ಪುಣಿ ಮನೆತನಕ್ಕೂ ಸುಮಾರು ಮೂರು ತಲೆಮಾರಿನ ದೀರ್ಘವಾದ ನಂಟಿದೆ. ಹಾಗೇ ದೆಪ್ಪುಣಿ ಮನೆತನಕ್ಕೂ, ಆಸ್ರಣ್ಣ ಬಂಧುಗಳಿಗೂ ಇವರ ಕಾಲದಿಂದಲೇ ಬಾಂಧವ್ಯ ಬೆಳೆದುಕೊಂಡು ಬಂದಿದೆ. ವಿಶೇಷ ವ್ಯಕ್ತಿತ್ವದ ರಾಮಣ್ಣ-ದೇವಕಿ ಶೆಟ್ಟಿ ದಂಪತಿಗಳು ಇಂತಹ ಪರಂಪರೆಯನ್ನು ಹುಟ್ಟುಹಾಕಿ ಕೀರ್ತಿಶೇಷರಾದರು. ಈ ದಂಪತಿಗಳಿಗೆ ಮೂರು ಮಂದಿ ಮಕ್ಕಳು, ಚಂದ್ರಹಾಸ ಶೆಟ್ಟಿ, ಸದಾಶಿವ ಶೆಟ್ಟಿ, ಪದ್ಮನಾಭ ಶೆಟ್ಟಿ.
ರಾಮಣ್ಣ ಶೆಟ್ರ ಕಾಲಾ ನಂತರ ಅವರ ಭಾವ ದೆಪ್ಪುಣಿಗುತ್ತು ಕೋಚಣ್ಣ ಶೆಟ್ರು ಗುತ್ತಿನ ಮನೆಯಲ್ಲೇ ಈ ಸೇವೆಯನ್ನು ಮುಂದುವರಿಸಿಕೊಂಡು ಬಂದರು. ನಂತರ ಈ ಯಕ್ಷಸೇವೆಯನ್ನು ಮುಂದುವರೆಸಿಕೊಂಡು ಬಂದವರು ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟರು. ಅವರು ದಿ. ಕಲ್ಲಾಡಿ ಕೊರಗ ಶೆಟ್ರು ಮತ್ತು ದಿ. ಗೋಪಾಲಕೃಷ್ಣ ಅಸ್ರಣ್ಣರು ಬಹಳ ಆತ್ಮೀಯರು. ಅವರು ಕಾವೂರು ದೇವಸ್ಥಾನದ ಎದುರಿನ ಗೋಪುರ ನಿರ್ಮಾಣ ಮಾಡಿಕೊಟ್ಟವರು. ಕಟೀಲು ಬ್ರಹ್ಮಕಲಶದ ನೇತೃತ್ವ ವಹಿಸಿದವರು. ಹಾಗೇ ದೇವಕಿ ಶೆಟ್ಟಿಯವರ ಬಗ್ಗೆ ಅಸ್ರಣ್ಣರಿಗೂ ಮಾತೃವತ್ ಪ್ರೇಮ. ಇಂದಿನ ಲಕ್ಷ್ಮೀನಾರಾಯಣ ಅಸ್ರಣ್ಣರನ್ನು ಎತ್ತಿ ಆಡಿಸಿದ ಪುಣ್ಯ ಕೈ ದೇವಕಿ ಶೆಟ್ಟಿಯವರದ್ದು. ಅವರ ನೇತೃತ್ವದಲ್ಲಿ ವರ್ಷದಲ್ಲಿ ಎರಡು ಆಟಗಳು ಪ್ರದರ್ಶನಗೊಳ್ಳುತ್ತಿದ್ದವು. ಅದರಲ್ಲಿ ಒಂದು ಆಟ ದೆಪ್ಪುಣಿಗುತ್ತು ರಾಮಣ್ಣ ಶೆಟ್ಟಿಯವರ ಕಾಲದಿಂದ ನಡೆಯುತ್ತಿದ್ದ ಪ್ರದರ್ಶನ ವೀಳ್ಯ ಇಲ್ಲದೆ ಸೇವಾರೂಪವಾಗಿ. ಮತ್ತೊಂದು ಚಂದ್ರಹಾಸ ಶೆಟ್ಟರೇ ಆರಂಭಿಸಿದ ಆಟ. ದಿ. ಚಂದ್ರಹಾಸ ಶೆಟ್ಟರ ಸ್ಮರಣಾರ್ಥ ಅವರ ಪತ್ನಿ ಕೊಡಿಯಾಲುಗುತ್ತು ವೇದಾವತಿ ಶೆಡ್ತಿಯವರು 1990ರಲ್ಲಿ ಎಕ್ಕಾರು ದ್ವಾರ ಕಟ್ಟಿಸಿದ್ದಾರೆ.
ದಿ. ದೆಪ್ಪುಣಿಗುತ್ತು ದೇವಕಿ ಶೆಟ್ಟಿಯವರು ಆಶ್ರಯ ನೀಡಿ ಬೆಳೆಸಿದ ಮತ್ತೊಂದು ಮಹಾನ್ ವ್ಯಕ್ತಿತ್ವ ದಿ. ನಾರಾಯಣ ಕಿಲ್ಲೆಯವರು. ಪುತ್ತೂರಿನ ಆಧುನಿಕ ಜನಕ ಎಂದೇ ಪ್ರಸಿದ್ಧರಾದ ಕಿಲ್ಲೆಯವರು ಅದ್ಭುತ ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಕಿಲ್ಲೆಯವರು ದೇವಕಿ ಶೆಟ್ಟಿಯವರಿಗೆ ‘ಕಾಣಿಗೆ’ ಎಂಬ ಪುಸ್ತಕವನ್ನು ಅರ್ಪಿಸಿದ್ದರು. ಅಲ್ಲದೆ ಸನ್ಮಾನ ಮಾಡಲು ತೆಗೆದಿರಿಸಿದ್ದ ಶಾಲನ್ನು ದುರದೃಷ್ಟವಶಾತ್ ಅವರ ಪತ್ನಿ ಕಿಲ್ಲೆಯವರ ಮರಣಾ ನಂತರ ದೇವಕಿ ಶೆಟ್ಟಿಯವರ ಮರಣದ ಕಾಲಕ್ಕೆ ತಂದು ಹಸ್ತಾಂತರಿಸಿದ್ದರಂತೆ. ಹಾಗೆಯೇ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಒಂದು ಹಿಡಿ ಉಪ್ಪನ್ನು ಕೊಟ್ಟು ದೇವಕಿ ಶೆಟ್ಟಿಯವರು ಕಿಲ್ಲೆ ಯವರನ್ನು ಆಶೀರ್ವದಿಸಿದ್ದರಂತೆ.
ದೇವಕಿ ಶೆಟ್ಟಿಯವರ ಬಗ್ಗೆ ಕಾವೂರು ಮಹಾಲಿಂಗೇಶ್ವರ ದೇವಳದ ಈಗಿನ ಅರ್ಚಕ ರಾದ ಶ್ರೀನಿವಾಸ ಭಟ್ ಮತ್ತು ಅವರ ತಂದೆ ದಿ. ನಾರಾಯಣ ಭಟ್ ಬಹಳ ಗೌರವವನ್ನು ಹೊಂದಿದ್ದರು. ಹಾಗೆಯೇ ಕೊಂರ್ಗಿಬೈಲು ವಿಷ್ಣುಮೂರ್ತಿ ದೇವಳದ ಅರ್ಚಕರುಗಳಾದ ಮಯ್ಯರ ಮನೆತನಕ್ಕೂ ದೆಪ್ಪುಣಿಗೂ ಬಹಳ ಹತ್ತಿರದ ಸಂಬಂಧ.
ಮುಂದೆ ರಾಮಣ್ಣ ಶೆಟ್ರ ದ್ವಿತೀಯ ಪುತ್ರ ಸದಾಶಿವ ಶೆಟ್ಟರು 1960ರಲ್ಲಿ ವಾಸ್ತವ್ಯವನ್ನು ದೆಪ್ಪುಣಿಯಿಂದ ಬೋಂದೆಲ್‍ಗೆ ಬದಲಾಯಿಸಿದಾಗ, ಇಲ್ಲಿಯೇ ಯಕ್ಷಸೇವೆಯನ್ನು ಆರಂಭಿಸಿದರು. ಈ ಸೇವೆ ಈಗ ವಜ್ರಮಹೋತ್ಸವದ ಹೊಸ್ತಿಲಲ್ಲಿದೆ. ಅವರಿಗೆ ಕಂಬಳ ಮತ್ತು ಕೋಳಿ ಅಂಕವೆಂದರೆ ಬಹಳ ಆಸಕ್ತಿ. ಮುಗಿಪು ಮನೆಯಲ್ಲಿ ಕಂಬಳವನ್ನು ಆಯೋಜಿಸಿ ಯಶಸ್ವಿಯಾಗಿದ್ದರು. ಆಗ ಕಟೀಲಿನಲ್ಲಿ ಇದ್ದದ್ದು ಒಂದೇ ಮೇಳ. ಅವರಿಗೆ ಕಿಲ್ಲೆ, ಕಲ್ಲಾಡಿ ಕೊರಗ ಶೆಟ್ರು ಮತ್ತು ವಿಠಲ ಶೆಟ್ರ ಆತ್ಮೀಯ ಒಡನಾಟವೂ ಇತ್ತು. ಅವರು ಅನೇಕ ನ್ಯಾಯ ಪಂಚಾಯತಿಕೆಗಳನ್ನೂ ಮಾಡುತ್ತಿದ್ದರು. ಅವರಿಗೆ ಶ್ರೀಮಂತ ಗೆಳೆಯರೂ ಇದ್ದರು, ಹಾಗೆಯೇ ಬಡವರ ಆಶ್ರಯದಾತರೂ ಆಗಿದ್ದರು. ಇವರು 1944ರಲ್ಲಿ ಬೈಲುಮೂಡುಕೆರೆ ತ್ಯಾಂಪಣ್ಣ ನಾಯ್ಕ್ ಮತ್ತು ಶೆಡ್ಡೆ ಮೇಗಿನಮನೆ ಜಾನಕಿ ನಾಯ್ಕ್ ದಂಪತಿಗಳ ಮಗಳು ಗುಲಾಬಿ ಶೆಡ್ತಿಯವರನ್ನು ವಿವಾಹವಾದರು. ಸದಾಶಿವ ಶೆಟ್ಟರು ಹತ್ತು ವರ್ಷಗಳ ಕಾಲ ಸೇವೆಯನ್ನು ನಡೆಸಿ 1970ರ ಫೆಬ್ರವರಿ 11ರಂದು ಮರಣ ವನ್ನೈದಿದರು.
ಶೆಡ್ಡೆ ಮೇಗಿನಮನೆ ಜಾನಕಿ ನಾಯ್ಕ್‍ರ ಸಹೋದರ ಶೆಡ್ಡೆ ಮೇಗಿನಮನೆ ಕೃಷ್ಣ ಮಲ್ಲಿ ಆಗಿನ ದಿನಗಳ ಹಿರಿಯ ಅರ್ಥಧಾರಿ ಹಾಗೂ ಪ್ರವಚನಕಾರರಾಗಿದ್ದರು. ಇವರು ಕಿಲ್ಲೆಯವರೊಂದಿಗೆ ಅನೇಕ ಕೂಟಗಳಲ್ಲಿ ಅರ್ಥ ಹೇಳಿದ್ದಾರೆ.
ನಂತರ 1992ರ ತನಕ ಈ ಆಟವನ್ನು ದಿ. ಸದಾಶಿವ ಶೆಟ್ರ ಭಾವ ಶೆಡ್ಡೆ ಮೇಗಿನಮನೆ ಜಯರಾಮ್ ನಾಯ್ಕ್‍ರವರು ಮುಂದುವರೆಸಿ ಕೊಂಡು ಬಂದರು. ಇವರು ಮೂಡುಶೆಡ್ಡೆ ಮಂಡಲ ಪಂಚಾಯತ್‍ನ ಅಧ್ಯಕ್ಷರಾಗಿದ್ದವರು ಮತ್ತು ಮೂಡುಶೆಡ್ಡೆಯ ಸಮಗ್ರ ಅಭಿವೃದ್ಧಿಯ ಹರಿಕಾರರು. ಇವರು ಒಂದು ದಶಕಗಳ ಕಾಲ ಕಾವೂರು ದೇವಳದ ಮೊಕ್ತೇಸರರಾಗಿದ್ದು ದೇವಳದ ಜೀರ್ಣೋದ್ಧಾರದ ರೂವಾರಿಯಾಗಿದ್ದರು. ಜಯರಾಮ್ ನಾಯ್ಕ್ ಮತ್ತು ವಿಠಲ ಶೆಟ್ರು ಆತ್ಮೀಯ ಒಡನಾಡಿಗಳಾಗಿದ್ದರು. ಖ್ಯಾತ ಸಂಗೀತ ವಿದ್ವಾನ್ ದಿ. ಬೆಳಿಂಜೆ ಮೈಂದಪ್ಪ ರೈಗಳ ಹಿರಿಯ ಮಗಳಾದ ತಲಪಾಡಿ ದೊಡ್ಡಮನೆ ಸುಮವಾಣಿಯವರನ್ನು ಇವರು ವಿವಾಹವಾಗಿದ್ದರು.
ಕಿರಿಯ ಮಗಳನ್ನು ಈಗಿನ ಮುಗಿಪು ರಾಮಣ್ಣ ಶೆಟ್ಟಿಯವರು ವಿವಾಹವಾದರು. ಮೈಂದಪ್ಪ ರೈಗಳು ಯಕ್ಷಗಾನಕ್ಕೆ ಸಂಗೀತವನ್ನು ಅಳವಡಿಸಿದ ಮೊದಲ ಶಕಪುರುಷ. ಅವರು ಪಿಟೀಲು ಕೃಷ್ಣರಾಯರಿಂದ ಸಂಗೀತಾಭ್ಯಾಸವನ್ನು ಮಾಡಿದವರು. ಅವರು ದಿ. ಮಂಡೆಚ್ಚರ ಗುರುಗಳೂ ಹೌದು. ಕುಂಡಾವು ಮೇಳದ ಆರಂಭ ಕಾಲದಲ್ಲಿ ಅದರ ಭಾಗವತರಾಗಿದ್ದವರು. ಹಾಗೆಯೇ ತನ್ನ 16ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಬಲಿಪ ನಾರಾಯಣ ಭಾಗವತರೊಂದಿಗೆ ಭಾಗವತಿಕೆ ಮಾಡಿದವರು. ಅವರ ಭಾಗವತಿಕೆಗೆ ನಾರಾಯಣಕಿಲ್ಲೆ, ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಅರ್ಥ ಹೇಳಿದ್ದಾರೆ.
ಜಯರಾಮ್ ನಾಯ್ಕ್‍ರ ನೇತೃತ್ವದಲ್ಲಿ 1985ರಲ್ಲಿ ಬೆಳ್ಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಟೀಲಿನ ಮೂರು ಮೇಳಗಳ ಕೂಡಾಟದಲ್ಲಿ ‘ಸಮುದ್ರ ಮಥನ’ ಪ್ರಸಂಗ ಪ್ರದರ್ಶಿತವಾಯಿತು. ಈ ಆಟಕ್ಕೆ ಧರ್ಮಸ್ಥಳದಿಂದ ಆನೆ ತರಿಸಿದ್ದರಂತೆ.
ದೆಪ್ಪುಣಿಗುತ್ತು ಸದಾಶಿವ ಶೆಟ್ಟಿ – ಶೆಡ್ಡೆ ಮೇಗಿನಮನೆ ಗುಲಾಬಿ ಶೆಡ್ತಿಯವರ ಒಬ್ಬನೇ ಪುತ್ರ ಮುಗಿಪು ರಾಮಣ್ಣ ಶೆಟ್ಟಿ. ಇವರು ಕೊಡೆತ್ತೂರು ರಾಮಣ್ಣ ಶೆಟ್ಟರ ಒಬ್ಬರೇ ಮೊಮ್ಮಗ. ಅಜ್ಜ ಹಾಗೂ ಮೊಮ್ಮಗನಿಗೆ ಒಂದೇ ಹೆಸರು. ಇವರು ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದು, ಅತ್ತಾವರ ಫ್ರೆಂಡ್ಸ್ ಸರ್ಕಲ್ ತಂಡದ ನಾಯಕರೂ ಆಗಿದ್ದು ಅನೇಕ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡ ಸಾಧಕ. ನೆರೆಯ ರಾಜ್ಯ ಕೇರಳದಲ್ಲೂ ಅವರು ಆಟಗಾರನಾಗಿ ಹೆಸರುವಾಸಿಯಾಗಿದ್ದರು. 2006ರಲ್ಲಿ ಮಂಗಳ ಕ್ರೀಡಾಂಗಣದಲ್ಲಿ ನಡೆದ ‘ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ ಕಪ್’ ಪಂದ್ಯಾಟದ ಸಂದರ್ಭದಲ್ಲಿ ರಾಮಣ್ಣ ಶೆಟ್ಟರನ್ನು ಬಂಟ್ವಾಳದ ರಾಜೀವ ಗಾಂಧಿ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಫೌಂಡೇಶನ್ ನವರು ‘ಜೀವಮಾನ ಶ್ರೇಷ್ಠ ಸಾಧನಾ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 1996ರಲ್ಲಿ ಕಾವೂರಿನ ಬ್ರಹ್ಮಕಲಶದ ಅಧ್ಯಕ್ಷರಾಗಿ ಸಮರ್ಥ ಮುಂದಾಳತ್ವ ವನ್ನು ನೀಡಿದ್ದಾರೆ. 1997ರಲ್ಲಿ ಆರಂಭವಾದ ಕಾವೂರಿನ ಮೊಸರುಕುಡಿಕೆಯ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ಕಾವೂರು ದೇವಳದ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರು 1992ರಿಂದ ಯಕ್ಷಸೇವಾ ಪರಂಪರೆಯನ್ನು ಕಲ್ಲಾಡಿ ವಿಠಲ ಶೆಟ್ರ ಮಾರ್ಗದರ್ಶನದಲ್ಲಿ ಮುಂದುವರೆಸಿಕೊಂಡು ಬಂದರು. 1995ರಲ್ಲಿ ತಂದೆ ದಿ. ದೆಪ್ಪುಣಿಗುತ್ತು ಸದಾಶಿವ ಶೆಟ್ಟರ 25ನೇ ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದು ಬೋಂದೆಲ್‍ನ ಸೇವೆಗೆ 35ನೇ ವರ್ಷ. ಈ ಪ್ರಯುಕ್ತ ಕಲ್ಲಾಡಿ ವಿಠಲ ಶೆಟ್ಟರನ್ನು ಪೇಜಾವರ ಸ್ವಾಮಿಗಳ ಘನ ಉಪಸ್ಥಿತಿ-ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ಸಮಕ್ಷದಲ್ಲಿ ಸನ್ಮಾನಿಸಲಾಯಿತು. ಇದು ಅವರಿಗೆ ಸಂದ ಮೊದಲ ಸನ್ಮಾನವೂ ಹೌದು. ದಾಖಲೆಯೂ ಹೌದು. ಕಾರಣ ವಿಠಲ ಶೆಟ್ಟರು ಎಲ್ಲಿಯೂ ಸನ್ಮಾನಕ್ಕೆ ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ವಿಧಾನಸಭಾ ಸದಸ್ಯ ಮತ್ತು ಕಲಾವಿದ ಕುಂಬ್ಳೆ ಸುಂದರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಜತ ಸಂಭ್ರಮದಲ್ಲಿ ವಿದ್ವಾಂಸ ರಾಮದಾಸ ಸಾಮಗರು ತಮ್ಮ ಧನಿಗಳಿಗೆ ಅಭಿನಂದನಾ ಭಾಷಣವನ್ನು ನೆರವೇರಿಸಿದರು.
1997ರ ತನಕ ಈ ಸೇವೆ ಬೋಂದೆಲ್ ನಲ್ಲಿಯೇ ನಡೆಯಿತು. ನಂತರ ಈ ಸೇವೆ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆದು ಕೊಂಡು ಬರುತ್ತಿದೆ. 2010ನೇ ಇಸವಿ ಈ ಯಕ್ಷ ಯಜ್ಞದ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕಾವೂರು ದೇವಳದಲ್ಲಿ ನಡೆದ ಈ ಸ್ವರ್ಣಜಾತ್ರೆಯಲ್ಲಿ ದೆಪ್ಪುಣಿಗುತ್ತು ಸದಾಶಿವ ಶೆಟ್ಟಿ – ಶೆಡ್ಡೆ ಮೇಗಿನಮನೆ ಜಯರಾಮ್ ನಾಯ್ಕ್- ಕಲ್ಲಾಡಿ ವಿಠಲ ಶೆಟ್ಟರ ಸಂಸ್ಮರಣೆಯನ್ನು ನಡೆಸಲಾಯಿತು. ಉತ್ಸವದೋಪೇತವಾಗಿ ನಡೆದ ಕಾರ್ಯಕ್ರಮದಲ್ಲಿ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರಿಗೆ ಅದ್ದೂರಿ ಸನ್ಮಾನ, ಹಿರಿಯ ಕಲಾವಿದ ಸಾಧಕರಾದ ಕೋಳ್ಯೂರು ರಾಮಚಂದ್ರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಸುಣ್ಣಂಬಳ ವಿಶ್ವೇಶ್ವರ ಭಟ್‍ರವರುಗಳಿಗೆ ಗೌರವಾರ್ಪಣೆ ನಡೆಯಿತು. ನಂತರ ದೇವಿಮಹಾತ್ಮೆ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.
ಬಳಿಕ 2013ರಿಂದ 2017ರ ತನಕ ಮತ್ತೆ ಬೋಂದೆಲ್‍ನಲ್ಲಿಯೇ ಈ ಸೇವೆ ಮುಂದುವರಿಯಿತು. 2015, ಫೆಬ್ರವರಿ 16ರ ಸೇವೆಯಲ್ಲಿ ಕಟೀಲು ಮೇಳವೊಂದರಲ್ಲಿಯೇ ಅರ್ಚಕರಾಗಿ ಸ್ವರ್ಣತಿರುಗಾಟ ನಡೆಸಿದ ಕಾಂತಾವರ ಅನಂತರಾಮ ಭಟ್ಟರನ್ನು ಸನ್ಮಾನಿಸಲಾಯಿತು. 2015, ಮೇ 18ರಂದು ರಾಮಣ್ಣ ಶೆಟ್ಟಿ-ತಲಪಾಡಿ ದೊಡ್ಡಮನೆ ಶಂಕರಿ ಶೆಟ್ಟಿಯವರ ವೈವಾಹಿಕ ಜೀವನದ 35ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ಹಿರಿಯ ಕಲಾವಿದ ಗಂಗಯ್ಯ ಶೆಟ್ಟರನ್ನು ಸನ್ಮಾನಿಸಲಾಯಿತು ಮತ್ತು ಕಟೀಲು ಮೇಳದ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು. 2017 ರಾಮಣ್ಣ ಶೆಟ್ರ ಮುಂದಾಳತ್ವಕ್ಕೆ ರಜತ ಸಂಭ್ರಮದ ವರ್ಷ. ಈ ಸೇವೆಯಾಟದಲ್ಲಿ ಈ ಸೇವೆಯೊಳಗಿನ ತನ್ನ ರಜತ ಸೇವೆಗೆ ಸುಣ್ಣಂಬಳ ವಿಶ್ವೇಶ್ವರ ಭಟ್ಟರನ್ನು ‘ಯಕ್ಷಾವ್ಯಯನಿಧಿ’ ಬಿರುದು ಪ್ರದಾನಿಸಿ ಗೌರವಿಸಲಾಯಿತು.
ಈ ಯಕ್ಷಯಜ್ಞದ ವಜ್ರಮಹೋತ್ಸವ 2020 ಫೆಬ್ರವರಿ 8ರಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯಿತು.
ಒಂದೂವರೆ ಶತಕದ ಈ ಸುದೀರ್ಘ ಕಟೀಲಮ್ಮನ ಯಕ್ಷಸೇವೆಯಲ್ಲಿ ಅನೇಕ ತಲೆಮಾರುಗಳು, ಕುಟುಂಬಗಳು ಕೃತಾರ್ಥತೆಯನ್ನು ಕಂಡಿವೆ. ಈ ಯಜ್ಞ ಮನಗಳನ್ನು – ಕುಟುಂಬಗಳನ್ನು ಕೂಡಿಸಿದೆ, ಮಣ್ಣನ್ನು ಪವಿತ್ರಗೊಳಿಸಿದೆ, ಕಲೆಯನ್ನು ಬೆಳೆಸಿದೆ – ಶ್ರೀಮಂತಗೊಳಿಸಿದೆ, ಸಾಧಕರನ್ನು ಗುರುತಿಸಿದೆ, ಕಲಾವಿದರಿಗೆ ಆಶ್ರಯವಾಗಿದೆ. ಒಂದು ಕಲಾಪೋಷಣೆಯ ಪುಣ್ಯಕರ್ಮ ಇದಕ್ಕಿಂತ ಹೆಚ್ಚಿನದ್ದೇನನ್ನು ಮಾಡುವುದಕ್ಕೆ ಸಾಧ್ಯ? ಗರಿಷ್ಟವಾದ ಸರ್ವವನ್ನೂ ಬೋಂದೆಲ್‍ನ ಮುಗಿಪು ಕುಟುಂಬ ಆ ಕಲಾಮಾತೆಯ ಪದಕ್ಕೆ ಸೇವಾರೂಪವಾಗಿ ಅರ್ಪಿಸಿದೆ. ಮುಗಿಪು ರಾಮಣ್ಣ ಶೆಟ್ಟಿ, ಅವರ ಮಕ್ಕಳು ಮತ್ತು ಕುಟುಂಬಸ್ಥರು ಈ ಪವಿತ್ರಕಾರ್ಯದಲ್ಲಿ ಪುಣ್ಯಸ್ನಾನ ಮಿಂದೆದ್ದಿದ್ದಾರೆ. ಈ ಸೇವೆ ಶತಕದ ಸಂಭ್ರಮವನ್ನು ಕಾಣಲಿ ಎಂದು ಹಾರೈಸುತ್ತಾ ಮುಗಿಪು ಕುಟುಂಬದ ಈ ಸರ್ವಸಮರ್ಪಣಾ ಭಾವಕ್ಕೆ ನಾಡಿನ ಎಲ್ಲಾ ಕಲಾಹೃದಯಗಳು ಮುಡಿಬಾಗಿ ವಂದಿಸುತ್ತವೆ. ು