Saturday, January 18, 2025
Homeಯಕ್ಷಗಾನಹಿರಿಯ, ನಿವೃತ್ತ ಬಣ್ಣದ ವೇಷಧಾರಿ ದಾಸನಡ್ಕ ಶ್ರೀ ರಾಮ ಕುಲಾಲ್

ಹಿರಿಯ, ನಿವೃತ್ತ ಬಣ್ಣದ ವೇಷಧಾರಿ ದಾಸನಡ್ಕ ಶ್ರೀ ರಾಮ ಕುಲಾಲ್

                         ಯಕ್ಷಗಾನದಲ್ಲಿ ತೆಂಕುತಿಟ್ಟಿಗೆ ಸಂಬಂಧಿಸಿದಂತೆ ಕೇಶಾವರೀ, ಭೀಮನ ಮುಡಿ ಮೊದಲಾದ ಕಿರೀಟಗಳಲ್ಲಿ ಬಣ್ಣದ ವೇಷಗಳು ಕಾಣಿಸಿಕೊಳ್ಳುತ್ತವೆ. ಹೆಣ್ಣುಬಣ್ಣಕ್ಕೆ ಅದರದ್ದೇ ಆದ ಕಿರೀಟವಿದೆ. ಹಿಂದಿನ ಕಾಲದಲ್ಲಿ ಹಿರಣ್ಯಕಶ್ಯಪ, ಕಂಸ ಮೊದಲಾದ ವೇಷಗಳನ್ನು ಕೇಶಾವರೀ ಕಿರೀಟದಲ್ಲಿ ಬಣ್ಣದ ವೇಷದವರೇ ಮಾಡುತ್ತಿದ್ದರಂತೆ. ಹೀಗೆ ಯಕ್ಷಗಾನ ಕಲೆಯ ಬಣ್ಣದ ವೇಷಗಳಲ್ಲಿ ಕಾಣಿಸಿಕೊಂಡು ಅಭಿನಯಿಸಿದರು ಅನೇಕರು. ದಾಸನಡ್ಕ ಶ್ರೀ ರಾಮ ಕುಲಾಲ್ ಅವರು ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ. ವೃತ್ತಿ ಕಲಾವಿದರಾಗಿ ಕಲಾಸೇವೆಯನ್ನು ಮಾಡಿದವರು. ಒಟ್ಟು 52 ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿ ಪ್ರಸ್ತುತ ಕಲಾಬದುಕಿನಿಂದ ನಿವೃತ್ತರಾಗಿದ್ದಾರೆ.

ದಾಸನಡ್ಕ ರಾಮ ಕುಲಾಲರು 1942ನೇ ಇಸವಿ ದಶಂಬರ 3ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ, ಕುಡಾಲು ಮೇರ್ಕಳ ಗ್ರಾಮದ ಪೆರ್ಮುದೆ ಸಮೀಪದ ಬಾಯಾಡಿ ಎಂಬಲ್ಲಿ ಜನಿಸಿದರು. ತಂದೆ ಶ್ರೀ ಕುಂಞ ಮೂಲ್ಯ. ತಾಯಿ ಶ್ರೀಮತಿ ಅಪ್ಪು. ಪ್ರಸ್ತುತ ರಾಮ ಕುಲಾಲರು ಧರ್ಮತ್ತಡ್ಕದ ತೆಂಕಕರೆ ಮನೆಯಲ್ಲಿ ವಾಸವಾಗಿರುತ್ತಾರೆ. ಓದಿದ್ದು 6ನೇ ತರಗತಿವರೇಗೆ. 1ನೇ ತರಗತಿಯಿಂದ 3ರ ವರೇಗೆ ಹೇರೂರು ಶಾಲೆಯಲ್ಲಿ. 4ರಿಂದ 6ನೇ ತರಗತಿ ವರೇಗೆ ಚೇವಾರು ಶಾಲೆಯಲ್ಲಿ. ಶಾಲಾ ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ. ಆಟಗಳನ್ನು ನೋಡುತ್ತಿದ್ದರು.

ಕೂಡ್ಲು ಮಕ್ಕಳ ಮೇಳದ ಆಟ-ಪ್ರಸಂಗ ಶ್ರೀಕೃಷ್ಣಲೀಲೆ ಕಂಸವಧೆ. ಪೆರ್ಮುದೆ ಪೆರಿಯಡ್ಕದಲ್ಲಿ ನಡೆದ ಈ ಆಟವನ್ನು ನೋಡಿ ತಾನೂ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಶಾಲೆ ಬಿಟ್ಟ ನಂತರ ಯಕ್ಷಗಾನ ಕಲಾವಿದನಾಗುವ ಆಸೆಯನ್ನು ಹೊತ್ತು ಕಲಾಪ್ರಿಯನಾದ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನಕ್ಕೆ ತೆರಳಿದರು. ಆ ಕಾಲದ ಪ್ರಸಿದ್ಧ ಎದುರು ವೇಷಧಾರಿಯಾಗಿದ್ದ ಮಧೂರು ತಿಮ್ಮಪ್ಪನವರಿಂದ ನಾಟ್ಯ ಕಲಿತರು. ಕೂಡ್ಲು ದೇವಳದ ಆಡಳಿತದಾರರಾದ ಶ್ರೀ ಈಶ್ವರ ಶ್ಯಾನುಭಾಗರ ಸಲಹೆಯಂತೆ ಕೂಡ್ಲು ಮೇಳದಲ್ಲಿ ಮೊದಲ ತಿರುಗಾಟ. ಪೆರುವಡಿ ನಾರಾಯಣ ಭಟ್ಟರ ಸಂಚಾಲಕತ್ವ. ಕೊಕ್ಕಡ ಸುಬ್ರಾಯ ಆಚಾರ್ಯರು ಭಾಗವತರಾಗಿದ್ದರು.

ಮಾಳಂಗಾಯಿ ಕೃಷ್ಣ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾೈಕ, ಏಕ್ಟರ್ ಜೋಷಿ, ಎಂಪೆಕಟ್ಟೆ ರಾಮಯ್ಯ ರೈ, ಕೂಡ್ಲು ನಾರಾಯಣ ಬಲ್ಯಾಯ ಮೊದಲಾದ ಕಲಾವಿದರೊಂದಿಗೆ ತಿರುಗಾಟ ನಡೆಸಿ, ಕಲಿಯುವ ಅವಕಾಶ ಸಿಕ್ಕಿತ್ತು. ಮುಂದಿನ ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ 1 ವರ್ಷ (ಕುರಿಯ ವಿಠಲ ಶಾಸ್ತ್ರಿಗಳ ಜತೆ) ನಂತರ ಮೇಳದಲ್ಲಿ ಕೆಲವು ವರ್ಷಗಳ ತಿರುಗಾಟ. ತಿರುಗಾಟ ಪ್ರಥಮ ವರ್ಷ ಕೋಡಂಗಿ, ಬಾಲಗೋಪಾಲರು, ರಾಕ್ಷಸ ಬಲ… ಹೀಗೆ ಬೆಳೆಯುತ್ತಾ ಸಾಗಿದವರು ದಾಸನಡ್ಕ ರಾಮ ಕುಲಾಲ್. ಬಣ್ಣದ ವೇಷ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದರು.

ಈ ಸಂದರ್ಭದಲ್ಲಿ ಕೊಲ್ಲೂರು ಮೇಳದವರು ಬಣ್ಣದ ವೇಷಧಾರಿಗಳ ಅನ್ವೇಷಣೆಯಲ್ಲಿದ್ದರು. ರಾಮ ಕುಲಾಲರಿಗೆ ಅವಕಾಶವೂ ಸಿಕ್ಕಿತ್ತು. ಕೊಲ್ಲೂರು ಮೇಳಕ್ಕೆ 2ನೇ ಬಣ್ಣದ ವೇಷಧಾರಿಯಾಗಿ ಸೇರಿದರು. ಅಗರಿ ಶ್ರೀನಿವಾಸ ಭಾಗವತರಿದ್ದ ಮೇಳ. ದೊಡ್ಡ ಸಾಮಗರೂ ಇದ್ದರು. ಅವರೀರ್ವರೂ ರಾಮ ಕುಲಾಲರಿಗೆ ಹೇಳಿಕೊಡುತ್ತಿದ್ದರಂತೆ. ಆಗ ಕೊಳ್ತಿಗೆ ನಾರಾಯಣ ಗೌಡರು ರಾಮ ಕುಲಾಲರ ಸಹಕಲಾವಿದರಾಗಿದ್ದರು. ಬಳಿಕ ನಂದಾವರ ಮೇಳದಲ್ಲಿ ತುಳು ಪ್ರಸಂಗಗಳಲ್ಲಿ ವೇಷ ಮಾಡಿ ಅನುಭವಗಳನ್ನು ಗಳಿಸಿಕೊಂಡರು. ಪದ್ಮತಾಮರೆ ಪ್ರಸಂಗದ ಜಟ್ಟಿ ಮತ್ತು ಬಂಗರಸು ಅಲ್ಲದೆ ಕೋಟಿ, ಬುದ್ಧಿವಂತ, ಚಂದುಗಿಡಿ ಮೊದಲಾದ ವೇಷಗಳನ್ನು ಮಾಡುವ ಅವಕಾಶವೂ ಸಿಕ್ಕಿತ್ತು.


                                        1991-92ರ ಸುಮಾರಿಗೆ ಕಟೀಲು ಮೇಳಕ್ಕೆ ಸೇರಿದೆನೆಂದು ರಾಮ ಕುಲಾಲರು ಹೇಳುತ್ತಾರೆ. ಕುರಿಯ ಗಣಪತಿ ಶಾಸ್ತ್ರಿಗಳು ಕರೆಸಿ ಮೇಳಕ್ಕೆ ಬರುವಂತೆ ಹೇಳಿದರಂತೆ. ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಶುಂಭಾಸುರ ಪಾತ್ರವನ್ನು ಮಾಡಲೆಂದೇ ಕರೆಸಿದ್ದರು. ‘‘ಅವರಿಂದಾಗಿಯೇ ನಾನು ಯಕ್ಷಗಾನದಲ್ಲಿ ಕಾಣಿಸಿಕೊಂಡೆ. ಪ್ರತಿಯೊಂದು ವೇಷಕ್ಕೂ ಹೇಳಿಕೊಟ್ಟು ತಯಾರು ಮಾಡುತ್ತಿದ್ದರು. ಜತೆಗೆ ಪದ್ಯಾಣ ಶಂಕರನಾರಾಯಣ ಭಟ್ಟರ ನಿರ್ದೇಶನವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ಸಹಕಾರವೂ ಇತ್ತು. ನಾನು ಕಟೀಲು ಮೇಳಕ್ಕೆ ಸೇರಿದ ವರ್ಷ ನೆಡ್ಲೆ ನರಸಿಂಹ ಭಟ್ರು, ದಿವಾಣ ಭೀಮ ಭಟ್ರೂ ಇದ್ದರು. ಅವರ ಜತೆ ತಿರುಗಾಟ ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯವೆಂದೇ ಭಾವಿಸುತ್ತೇನೆ.

ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರೂ, ಆಸ್ರಣ್ಣರೂ ಆಶೀರ್ವದಿಸಿ ಪ್ರೋತ್ಸಾಹಿಸಿದ್ದರು. ಅಲ್ಲದೆ ಅಡೂರು ಲಕ್ಷ್ಮೀನಾರಾಯಣ ರಾವ್ ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕಾಕ್ಷ ಉಪಾಧ್ಯಾಯ, ಕೈರಂಗಳ ಕೃಷ್ಣ ಮೂಲ್ಯ ಮೊದಲಾದವರ ಸಹಕಾರವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ರುದ್ರಭೀಮನಿಗೆ ದುಶ್ಶಾಸನನಾಗಿ ಅಭಿನಯಿಸಿದ್ದು ವಿಶೇಷ ಅನುಭವ. 23ನೇ ವಯಸ್ಸಿನಲ್ಲೇ ಮಹಿಷಾಸುರನ ಪಾತ್ರವನ್ನು ಮಾಡಿದ್ದೆ. ಕುರಿಯ ಗಣಪತಿ ಶಾಸ್ತ್ರಿಗಳು ನನ್ನಿಂದ ಮಾಡಿಸಿದ್ದರು. ಆದರೆ ನನಗೆ ಆ ವೇಷದಲ್ಲಿ ಆಸಕ್ತಿಯಿರಲಿಲ್ಲ. ಶುಂಭಾಸುರನೇ ಮೊದಲಾದ ಕೇಶಾವರೀ ವೇಷಗಳೇ ನನಗೆ ಇಷ್ಟವಾಗಿತ್ತು.’’ ಹೀಗೆ ಹೇಳುತ್ತಾ ಕಟೀಲು ಮೇಳದ ತನ್ನ ತಿರುಗಾಟದ ಅನುಭವಗಳನ್ನು ದಾಸನಡ್ಕ ರಾಮ ಕುಲಾಲರು ನೆನಪಿಸಿದ್ದರು.

ಕಟೀಲು ಮೇಳಕ್ಕೆ ಸೇರುವ ಮೊದಲು ಹಾಸ್ಯರತ್ನ ನಯನ ಕುಮಾರರು ನಡೆಸುತ್ತಿದ್ದ ಚೌಡೇಶ್ವರೀ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಆಗ ನಾಟಕೀಯ ವೇಷಗಳನ್ನೂ ಮಾಡುತ್ತಿದ್ದರು. ಆಗ ರಾಮ ಕುಲಾಲರ ವಯಸ್ಸು 30. ಭಸ್ಮಾಸುರನಾಗಿ ಇವರ ಅಭಿನಯಕ್ಕೆ ಮೆಚ್ಚಿ ಸಭಿಕರು ನೋಟಿನ ಮಾಲೆಯನ್ನು ತೊಡಿಸಿದ ಘಟನೆಯನ್ನು ರಾಮ ಕುಲಾಲರು ನೆನಪಿಸಿದ್ದರು. ತನ್ನ 18ನೆಯ ವಯಸ್ಸಿನಲ್ಲಿ ಕುತ್ಯಾಳ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಗೆಜ್ಜೆಕಟ್ಟಿ ಕಲಾಬದುಕನ್ನು ಆರಂಭಿಸಿದ ದಾಸನಡ್ಕ ರಾಮ ಕುಲಾಲರು  52 ವರ್ಷಗಳ ಕಾಲ ಕಲಾವಿದನಾಗಿ ವ್ಯವಸಾಯ ಮಾಡಿರುತ್ತಾರೆ.

ಅನೇಕ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಬಣ್ಣದ ಮಹಾಲಿಂಗ ಯಕ್ಷಪ್ರಶಸ್ತಿಯೂ ದೊರೆತಿದೆ. ಶುಂಭ, ಭಂಡಾಸುರ, ಶೂರಪದ್ಮ, ತಾರಕ, ರಾವಣ, ಕುಂಭಕರ್ಣ, ಶೂರ್ಪನಖಿ, ಪೂತನಿ, ಘಟೋತ್ಕಚ, ಮಹಿಷಾಸುರ, ಕಾಲಜಂಘ, ವಜ್ರದುಂಬಿ ಘೋರ ಗರುಡ, ಲವಣಾಸುರ ಮೊದಲಾದ ಪಾತ್ರಗಳಲ್ಲಿ ಮಿಂಚಿದ ಶ್ರೀ ರಾಮ ಕುಲಾಲರು 2011ರಲ್ಲಿ ಕಲಾಬದುಕಿಗೆ ವಿದಾಯ ಹೇಳಿದ್ದರು.  

(ಫೆಬ್ರವರಿ 2020ರಲ್ಲಿ ಬರೆದ ಲೇಖನ) 

ಲೇಖಕ: ರವಿಶಂಕರ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments