Saturday, January 18, 2025
Homeಯಕ್ಷಗಾನಯಕ್ಷಗಾನ ಕಲಾವಿದ, ಹಿಮ್ಮೇಳ ವಾದಕ, ಸಂಘಟಕ ಬಳ್ಳಮೂಲೆ ಈಶ್ವರ ಭಟ್ ಸವಿನೆನಪು 

ಯಕ್ಷಗಾನ ಕಲಾವಿದ, ಹಿಮ್ಮೇಳ ವಾದಕ, ಸಂಘಟಕ ಬಳ್ಳಮೂಲೆ ಈಶ್ವರ ಭಟ್ ಸವಿನೆನಪು 

ಶ್ರೀ ಕಾರ್ತಿಕೇಯ ಕಲಾನಿಲಯ, ಕೋಟೂರು ಇದರ ಪ್ರಾರಂಭ ಕಾಲದಿಂದಲೂ ವೇಷಧಾರಿ ಹಾಗೂ ಹಿಮ್ಮೇಳವಾದಕರಾಗಿದ್ದವರು ಬಳ್ಳಮೂಲೆ ಈಶ್ವರ ಭಟ್ಟರು. ಅಂದಿನ ಪ್ರಸಿದ್ಧ ಕಲಾವಿದ ಹೊಸಹಿತ್ತಿಲು ಮಹಾಲಿಂಗ ಭಟ್ಟರಿಂದ ಯಕ್ಷಗಾನದ ಹೆಜ್ಜೆಯನ್ನೂ, ಪ್ರಸಿದ್ಧ ಹಿಮ್ಮೇಳ ವಾದಕರಾಗಿದ್ದ ಪುಂಡಿಕಾಯಿ ಕೃಷ್ಣ ಭಟ್ಟರಿಂದ ಹಿಮ್ಮೇಳವಾದನವನ್ನೂ ಅಭ್ಯಾಸ ಮಾಡಿ ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಅಧ್ಯಾಪಕರಾದ (ಚಿಕ್ಕಪ್ಪ) ಅಡ್ಕ ಗೋಪಾಲಕೃಷ್ಣ ಭಟ್ಟರ ನಿರ್ದೇಶನ ಹಾಗೂ ನೇತೃತ್ವದಲ್ಲಿ ಕೆಲವು ವರ್ಷಗಳ ಕಾಲ ವೇಷಧಾರಿಯಾಗಿಯೂ, ಶಾಲಾ ದಿನಗಳಿಂದ ಹಿಡಿದು 40-42 ವರ್ಷಗಳ ಕಾಲ ಹಿಮ್ಮೇಳ ವಾದಕರಾಗಿಯೂ ಮಿಂಚಿದ ಈಶ್ವರ ಭಟ್ಟರು ಕಾಸರಗೋಡಿನಿಂದ ತೊಡಗಿ ತಿರುವನಂತಪುರದ ವರೆಗೂ ಕಲಾನಿಲಯದ ಸದಸ್ಯರಿಂದ ಕನ್ನಡ ಹಾಗೂ ಮಲೆಯಾಳ ಭಾಷೆಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿದ್ದಂತಹ ಸಂದರ್ಭಗಳಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಹಿಮ್ಮೇಳವಾದಕರಾಗಿ ಭಾಗವಹಿಸಿದ ಹೆಮ್ಮೆಯ ಕಲಾವಿದರಾಗಿದ್ದರು.

ಐದು ವರ್ಷಗಳ ಹಿಂದೆ ಸಮಾನಮನಸ್ಕ ಗೆಳೆಯರ ಜೊತೆ ಸೇರಿ ‘ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮುಂದೆ ಇದೇ ಸಂಸ್ಥೆಯ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಾಗಿದ್ದ ಪೆರಡಂಜಿ ದಿ. ಗೋಪಾಲಕೃಷ್ಣ ಭಟ್ಟರ ಹಾಗೂ ಕಲಾಪೋಷಕರಾದ ವೇಣುಗೋಪಾಲ ತತ್ವಮಸಿ ಇವರ ಸಹಕಾರದಿಂದ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಪ್ರಾರಂಭಗೊಂಡ ‘ಯಕ್ಷಬಳಗ ಮುಳಿಯಾರು’ ಇದರ ಬಾಲಕಲಾವಿದರಿಗೆ ಪ್ರಾರಂಭದಿಂದಲೂ ಅಡ್ಕ ಕೃಷ್ಣ ಭಟ್ಟರ ಜೊತೆಗೂಡಿ ನಾಟ್ಯತರಬೇತಿ ನೀಡುತ್ತಾ ಬಂದಿದ್ದರು. ಯಕ್ಷತೂಣೀರ ಹಾಗೂ ಯಕ್ಷಬಳಗದ ಎಲ್ಲಾ ಕಾರ್ಯಕ್ರಮಗಳಲ್ಲೂ ನಿರ್ದೇಶನದ ಜೊತೆ ಹಿಮ್ಮೇಳದಲ್ಲಿಯೂ ಕಾಣಿಸಿಕೊಂಡಿದ್ದರು. ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನೋತ್ಸವ ಆಚರಣೆಯು ಇವರ ಕಲಾಜೀವನದ ಬಲುದೊಡ್ಡ ಆಸೆಯಾಗಿತ್ತು; ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.


ಸುಮಾರು ಹತ್ತು ವರ್ಷಗಳ ಕಾಲ ಕೇರಳದ ಹಲವಾರು ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಯಕ್ಷಗಾನದ ಹೆಜ್ಜೆಗಳನ್ನು ಕಲಿಸಿ, ಅವರನ್ನು ಕೇರಳ ಶಾಲಾ ಯುವಜನೋತ್ಸವದ ಯಕ್ಷಗಾನ ಸ್ಪರ್ಧೆಗಳ ವೇದಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಬಹುಮಾನವನ್ನು ಪಡೆಯುವಂತೆ ಮಾಡಿದ ಸಮರ್ಥ ಯಕ್ಷಗಾನ ನಿರ್ದೇಶಕರೂ, ಕೆಲವು ಸ್ಪರ್ಧೆಗಳಿಗೆ ತೀರ್ಪುಗಾರರೂ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಶ್ರೀ ಕಾರ್ತಿಕೇಯ ಕಲಾನಿಲಯದ ಸದಸ್ಯರನ್ನೊಡಗೂಡಿಕೊಂಡು ಕೇರಳದ ‘ಕಲಾಮಂಡಲಂ’ ಸಹಿತ ಹಲವೆಡೆ ಮಲೆಯಾಳ ಯಕ್ಷಗಾನ ಪ್ರದರ್ಶನಗಳನ್ನೂ ಸಂಘಟಿಸಿದ ಸಂಘಟಕರಾಗಿಯೂ ತಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನು ತೋರ್ಪಡಿಸಿದ್ದರು.


ಮಂಗಳೂರು, ತ್ರಿಶ್ಶೂರು, ಕಲ್ಲಿಕೋಟೆ, ಕಣ್ಣೂರು ಮುಂತಾದ ಆಕಾಶವಾಣಿ ಕೇಂದ್ರಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ದಿ. ಉಪ್ಪಳ ಕೃಷ್ಣ ಮಾಸ್ತರರ ಯಕ್ಷಗಾನ ತಂಡಕ್ಕೆ ಹಿಮ್ಮೇಳವಾದಕರಾಗಿ ತಮ್ಮ ಕಲಾನೈಪುಣ್ಯವನ್ನು ಹೊರಹೊಮ್ಮಿಸಿದ್ದರು. ಅಲ್ಲದೆ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ಕಾರ್ಯಕ್ರಮಗಳಿಗೂ ಹಿಮ್ಮೇಳವಾದನದಲ್ಲಿ ಸಹಕಾರವನ್ನು ನೀಡಿದ್ದರು. ‘ನಿಲಾವರಿಯಾದೆ’ ಎಂಬ ಮಲೆಯಾಳಂ ಸಿನಿಮಾದಲ್ಲೂ ಹಿಮ್ಮೇಳ ವಾದಕರಾಗಿಯೇ ಕಾಣಿಸಿಕೊಂಡಿದ್ದರು. ಸಹೋದರ ಗೋವಿಂದ ಬಳ್ಳಮೂಲೆಯವರ ನೇತೃತ್ವದಲ್ಲಿ ‘ವರ್ಣ ಧ್ವನಿಸುರುಳಿ’ಯ ಮೂಲಕ ಬಿಡುಗಡೆಗೊಂಡ ಕೆಲವು ಹವ್ಯಕ ಹಾಗೂ ಕನ್ನಡ ಭಾಷೆಗಳ ಯಕ್ಷಗಾನ ಕ್ಯಾಸೆಟ್‍ಗಳಲ್ಲಿ ಯಕ್ಷಗಾನದ ‘ಭೀಷ್ಮಾಚಾರ್ಯ’ ದಿ. ಶೇಣಿ ಗೋಪಾಲಕೃಷ್ಣ ಭಟ್ಟರನ್ನೊಳಗೊಂಡ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.


ಯಕ್ಷಗಾನದ ಧ್ರುವತಾರೆಗಳೆಂದೇ ಪರಿಗಣಿಸಲ್ಪಟ್ಟ ಬಣ್ಣದ ವೇಷಧಾರಿಗಳಾದ ದಿ. ಬಣ್ಣದ (ಗಾಂಧಿ) ಮಾಲಿಂಗ, ದಿ. ಚಂದ್ರಗಿರಿ ಅಂಬು ಮುಂತಾದ ಧೀಮಂತ ಕಲಾವಿದರ ನಾಟ್ಯ, ಅಭಿನಯಕ್ಕೆ ಚೆಂಡೆಯ ಸಾಥಿ ನೀಡಿ ಆ ಹಿರಿಯರಿಂದ ‘ಮಾಣಿ ಅಡ್ಡಿಯಿಲ್ಲೆ’ ಎಂದು ಹೊಗಳಿಸಿಕೊಳ್ಳುವುದು ಸಾಮಾನ್ಯವೇ! ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಮಾನ್ಯ ಸಂತೋಷ್ ಕುಮಾರರಂತಹ ಚುರುಕಿನ ವೇಷಧಾರಿಗಳಿಂದಲೂ ‘ಈಶ್ವರ ಭಟ್ರ ಕೈ ಒಳ್ಳೆದುಂಟು’ ಎಂದು ಮೆಚ್ಚುಗೆ ಪಡೆದವರು. ಪ್ರಸಿದ್ಧ ವೇಷಧಾರಿಗಳಾದ ನಿಡ್ಲೆ ಗೋವಿಂದ ಭಟ್, ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ, ಉಬರಡ್ಕ ಉಮೇಶ ಶೆಟ್ಟಿ, ಭಾಗಮಂಡಲ ಮಹಾಬಲೇಶ್ವರ ಭಟ್, ಸಬ್ಬಣಕೋಡಿ ರಾಮ ಭಟ್ ಮೊದಲಾದವರ ಹೆಜ್ಜೆಗಳಿಗೆ ಚೆಂಡೆಯನ್ನು ನುಡಿಸಿದ ಅನುಭವ ಈಶ್ವರ ಭಟ್ಟರದ್ದು. ತೆರೆಮರೆಯಲ್ಲಿದ್ದ ಅನೇಕ ವೃತ್ತಿಪರ ಹಾಗೂ ಹವ್ಯಾಸೀ ಕಲಾವಿದರಿಗೆ ತನ್ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರಗಳನ್ನು ನೀಡಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಅವಕಾಶ ಒದಗಿಸಿದ ಕೀರ್ತಿ ಇವರದ್ದು.


ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಚಂದ್ರಶೇಖರ ಭಟ್ ಆದೂರು ಇವರ ನೇತೃತ್ವದಲ್ಲಿದ್ದ ಆದೂರು ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಯಂ. ಸುಬ್ರಹ್ಮಣ್ಯ ಭಟ್ (ಮಾವ) ಇವರಿಂದ ರೂಪೀಕರಣಗೊಂಡ ಪುಂಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಪ್ರಶಸ್ತ ಕಲಾವಿದ ದಿ. ಉಪ್ಪಳ ಕೃಷ್ಣ ಮಾಸ್ತರ್ ಅವರ ನಿರ್ದೇಶನದಲ್ಲಿ ಹುಟ್ಟಿಕೊಂಡ ಮಹಿಳಾ ಯಕ್ಷಗಾನ ತಂಡಗಳ ಖಾಯಂ ಹಿಮ್ಮೇಳವಾದಕರಾಗಿಯೂ ಕೇರಳ ಮೊದಲ್ಗೊಂಡು ತಮಿಳುನಾಡು, ಕರ್ನಾಟಕಗಳಲ್ಲೂ ಭಾಗವಹಿಸಿದ ಕೀರ್ತಿ ಇವರದು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದು ಅಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮದ್ದಳೆವಾದಕರಾಗಿ ಭಾಗವಹಿಸುತ್ತಿರುವ ಗಿರೀಶ್ ಪರಂಗೋಡು (ಭಾವ) ಇವರ ಶಿಷ್ಯನಾಗಿದ್ದಾರೆ.


ಹಲವು ವರ್ಷಗಳ ಹಿಂದೆಯೇ ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ವರಮಾಧುರ್ಯಕ್ಕೆ ಚೆಂಡೆಯ ನಾದ ನುಡಿಸುವ ಸುಯೋಗವೂ ಇವರಿಗೆ ಲಭಿಸಿತ್ತು. ಶ್ರೀ ಕುಪ್ಪಂಗಾನ ಗೋಪಾಲಕೃಷ್ಣ ಭಟ್ಟ, ಶ್ರೀ ಸತೀಶ ಪುಣಿಚಿತ್ತಾಯ ಪೆರ್ಲ, ಶ್ರೀ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಶ್ರೀ ಮನೋಹರ ಬಲ್ಲಾಳ್ ಅಡ್ವಳ, ತಲ್ಪಣಾಜೆ ಸಹೋದರರಾದ ಶ್ರೀ ಶಿವಶಂಕರ ಭಟ್ಟ, ಶ್ರೀ ವೆಂಕಟ್ರಮಣ ಭಟ್ಟರ ಮೆಚ್ಚಿನ ಹಿಮ್ಮೇಳ ಸಾಥಿ-ಈಶ್ವರ ಭಟ್ಟರಾಗಿದ್ದರು. ಹಿಂದಿನ ಪ್ರಸಿದ್ಧ ಭಾಗವತರುಗಳಾಗಿದ್ದ ದಿ. ದಾಸರಬೈಲು ಚನಿಯ ನಾಯ್ಕರಿಂದ ತೊಡಗಿ ವರ್ತಮಾನ ಕಾಲದ ಪ್ರಸಿದ್ಧ ವೃತ್ತಿಪರ ಭಾಗವತರುಗಳಾದ ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುಂಡಿಕಾೈ ಗೋಪಾಲಕೃಷ್ಣ ಭಟ್, ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮೊದಲಾದವರು ಕೂಡಾ ಈಶ್ವರ ಭಟ್ಟರನ್ನು ಮೆಚ್ಚಿದವರೇ.


ಅದೇ ರೀತಿಯಲ್ಲಿ ‘ಯಕ್ಷಭಾರತಿ ನೀರ್ಚಾಲು’, ಇವರ ತಂಡದೊಂದಿಗೆ ಕಾಸರಗೋಡು ಸುತ್ತಮುತ್ತಲ್ಲದೆ ಕರ್ನಾಟಕದಲ್ಲೂ ಯಕ್ಷಗಾನ ಕೂಟಗಳಿಗೆ ಚೆಂಡೆವಾದಕರಾಗಿ ಭಾಗವಹಿಸಿದ್ದರು. ‘ಬೊಡ್ಡಜ್ಜ ಯಕ್ಷಗಾನ ಸಂಘ, ಮಧೂರು’ ಇತ್ಯಾದಿ ಹತ್ತು ಹಲವು ಯಕ್ಷಗಾನ ಸಂಘ – ಸಂಸ್ಥೆಗಳ ಆಟ-ಕೂಟಗಳಿಗೆ ಹಿಮ್ಮೇಳವಾದಕರಾಗಿ ಸಹಕರಿಸಿರುವ ಶ್ರೀಯುತರು ಎರಡು ವರ್ಷಗಳ ಹಿಂದೆ ಕೊಲ್ಲಂಗಾನ ಶ್ರೀ ನಿಲಯ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಿಂದ ನೀಡಲಾಗುವ ‘ಪಟ್ಟಾಜೆ ಪ್ರಶಸ್ತಿ’ಗೂ (ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ದಿ. ಪಟ್ಟಾಜೆ ವೆಂಕಟ್ರಮಣ ಭಟ್ಟರ ಸ್ಮರಣಾರ್ಥ) ಪಾತ್ರರಾಗಿದ್ದರು.


ಇವರ ಕಲಾಪರವಾದ ಎಲ್ಲಾ ಚಟುವಟಿಕೆ ಗಳಿಗೂ ಬೆನ್ನೆಲುಬಾಗಿ ನಿಂತು ನಿರಂತರ ಪ್ರೋತ್ಸಾಹವನ್ನು ನೀಡಿದವರು ಇವರ ಧರ್ಮಪತ್ನಿ ಶ್ರೀಮತಿ ರಾಜೇಶ್ವರಿ ಈಶ್ವರ ಭಟ್. ದಿ. ಬಳ್ಳಮೂಲೆ ಕೇಶವ ಭಟ್ ಹಾಗೂ ದಿ. ದೇವಕಿ ಅಮ್ಮ ದಂಪತಿಗಳ ದ್ವಿತೀಯ ಸುಪುತ್ರರಾಗಿ ತಾ. 28-11-1961ರಲ್ಲಿ ಜನಿಸಿದ ಈಶ್ವರ ಭಟ್ಟರು ಒಂದು ವರ್ಷದ ಹಿಂದೆ ಕೋಟೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಮ್ಮನ್ನಗಲಿ ವಿಧಿವಶ ರಾದುದು ನಂಬಲಸದಳ ಹಾಗೂ ಅಸಹನೀಯ. ು

ಲೇಖಕ: ಕೃಷ್ಣ ಭಟ್ ಅಡ್ಕ
ಹಿಮ್ಮೇಳವಾದಕ, ಯಕ್ಷಗಾನ ಕಲಾವಿದ
ನಿವೃತ್ತ ಅಧ್ಯಾಪಕ, ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments