Saturday, January 18, 2025
Homeಯಕ್ಷಗಾನಹಾಸ್ಯ ಕಲಾವಿದ - ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು

ಹಾಸ್ಯ ಕಲಾವಿದ – ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು

ರಂಗಭೂಮಿ ಕಲೆಗಳಾದ ನಾಟಕ, ಚಿತ್ರರಂಗ ಮತ್ತು ಯಕ್ಷರಂಗದಲ್ಲಿ ಅಭಿನಯಿಸಿ, ಮಿಂಚುವ ಕಲಾವಿದರು ಪ್ರೇಕ್ಷಕರ ಮನದಾಳದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ದೈನಂದಿನ ಜೀವನದಲ್ಲಿ ನೊಂದು, ಬೆಂದು ಮುದುಡಿದ ಜೀವಕ್ಕೆ ಒಂದಿಷ್ಟು ಸಂತೋಷದ ಸನ್ನಿವೇಶಗಳು ದೊರೆತಾಗ ‘‘ಹಾಲು ಜೇನು ಸವಿದಂತೆ’’, ಅದರಲ್ಲೂ ಹಾಸ್ಯ ಸನ್ನಿವೇಶಗಳನ್ನು ರಂಗದಲ್ಲಿ ಮೂಡಿಸಿ, ಜನರ ಮನಃಶುದ್ಧಿಗೊಳಿಸುವವನೇ ನಿಜವಾದ ಮನೋವೈದ್ಯ!
ಯಕ್ಷರಂಗಕ್ಕೇ ಬರೋಣ. ಇಲ್ಲಿ ಕಲಾವಿದ ನೊಬ್ಬ ತಲೆಗೊಂದು ದೊಡ್ಡ ಮುಂಡಾಸು, ಉದ್ದ ನಾಮ, ದಪ್ಪ ಮೀಸೆ, ಕಿವಿಗೆ ದೊಡ್ಡ ಓಲೆ (ಚಕ್ಕುಲಿ), ಉದ್ದ ಕೋಲು ಮತ್ತು ದೊಡ್ಡ ಹೊಟ್ಟೆ, ವೇಷಧರಿಸಿ, ರಂಗಪ್ರವೇಶಿಸಿ, ಹಾಸ್ಯನಗೆ ಬೀರುತ್ತಾ, ‘‘ಆಲಿಸಬೇಕು ಜೀಯಾ… ಲಾಲಿಸ ಬೇಕು…’’ ಎಂದು ಹಿಮ್ಮೇಳಕ್ಕೆ ಲಯಬದ್ಧವಾಗಿ ನರ್ತಿಸಿ, ಹಾಸ್ಯದ ಮಾತುಗಳನ್ನಾಡಿದಾಗ, ಹಾಸ್ಯ ಕಲಾವಿದ ತಾನೂ ನಗದೆ, ಪ್ರೇಕ್ಷಕರನ್ನು ನಕ್ಕುನಗಿಸಿ ನೀಡಿದ ಹಾಸ್ಯ ಸನ್ನಿವೇಶಗಳು ಹಾಗೂ ನಲ್ವತ್ತು ವರ್ಷಗಳ ಹಿಂದಿನ ಕಲಾಬದುಕಿನ ಒಂದು ಅವಲೋಕನ, ಏಳು-ಬೀಳಿನ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಕಲಾಸೇವೆ ಗೈದ ಕಲಾವಿದ, ಈಗ ವಿಶ್ರಾಂತ ಜೀವನ ನಡೆಸುತ್ತಿರುವ ‘‘ಕರ್ನಾಟಕ ಸರಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ ಮತ್ತು ಕರ್ನಾಟಕ ಸರಕಾರದ ಮಾನ್ಯ ಕಾರ್ಮಿಕ ಸಚಿವರಾಗಿದ್ದ ಕೆ. ಅಮರನಾಥ ಶೆಟ್ಟಿ ಇವರಿಂದ ‘‘ಹಾಸ್ಯರಸಾಬ್ಧಿಭರತಪೂರ್ಣಚಂದ್ರ’’ ಬಿರುದು ಸ್ವೀಕರಿಸಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು ಕಟೀಲು ಮೇಳದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ವೃತ್ತಿಜೀವನ ನಡೆಸಿ ಪ್ರಸ್ತುತ ಕೃಷ್ಣಾಪುರದಲ್ಲಿ ತನ್ನ ಮಗಳು-ಅಳಿಯನ ಜೊತೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಈ ಕಲಾವಿದರನ್ನು ಸಂದರ್ಶಿಸಿ, ಅವರತ್ತ ಪ್ರಶ್ನೆಗಳನ್ನೆಸೆದು, ಆಯ್ದವು ಗಳನ್ನು ಓದುಗರ ಮುಂದಿಟ್ಟಿದ್ದೇನೆ.
ಪ್ರಶ್ನೆ : ಮೇಳದ ಯಜಮಾನರು ಮತ್ತು ಭಾಗವತರ ನಂತರದ ಪ್ರಥಮ ಸ್ಥಾನ ಹಾಸ್ಯ ಕಲಾವಿದರಿಗಿದೆ ಎನ್ನುತ್ತಾರೆ, ಇದರ ಮಹತ್ತ್ವವೇನು?


ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು : ಹಾಸ್ಯಗಾರನಿಗೆ ವಿಧಾನ ಸಭಾಧ್ಯಕ್ಷರ ಸ್ಥಾನಮಾನದಷ್ಟು ಪ್ರಾಮುಖ್ಯತೆ ಗೌರವವಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಕೇವಲ ಹಾಸ್ಯ ಪಾತ್ರಕ್ಕೇ ಸೀಮಿತವಾಗಿರದೆ, ಎಲ್ಲಾ ಪಾತ್ರಗಳ ರಂಗನಿರ್ವಹಣೆಗೆ ತಯಾರಿರಬೇಕು. ‘‘ಸಕಲ ಕಲಾ ಪಾಂಡಿತ್ಯ, ಪ್ರೌಢಿಮೆ ಇರಬೇಕು. ಒಂದು ವೇಳೆ ಯಾರಾದರೂ ಕಲಾವಿದರು ಬಾರದೇ ಇದ್ದ ಪಕ್ಷದಲ್ಲಿ ಆತನ ಪಾತ್ರ ಮಾಡುವ ಸಾಮರ್ಥ್ಯ ಹಾಸ್ಯ ಕಲಾವಿದನಿಗಿರಬೇಕು. ಸಹಕಲಾವಿದರು ಎದುರು-ಬದುರು ಕುಳಿತು ಬಣ್ಣಗಾರಿಕೆ ಮಾಡುವುದಾದರೆ, ಹಾಸ್ಯ ಕಲಾವಿದ ದೇವರ (ಚೌಕಿ) ಎದುರಿಗೇ ನೇರವಾಗಿ ಕುಳಿತು ಬಣ್ಣಗಾರಿಕೆ ಮಾಡುತ್ತಾನೆ. ಯಕ್ಷಗಾನದ ಪ್ರಾರಂಭದಿಂದ ಮಂಗಲದವರೇಗೆ ಏಳೆಂಟು ಪಾತ್ರಗಳನ್ನು ನಿರ್ವಹಿಸುವವನೇ ಹಾಸ್ಯಗಾರ!


ಪ್ರಶ್ನೆ: ನಿಮ್ಮ ಹಾಸ್ಯಪಾತ್ರಗಳ ಆಯ್ಕೆಯ ಸಂಕಲ್ಪ?
ನಾ. ಹಾ : ಎಳೆಯ ವಯಸ್ಸಿನಲ್ಲಿ ನಿರ್ವಹಿಸಿದ ಪ್ರಹ್ಲಾದ, ಮಾರ್ಕಾಂಡೇಯಾ, ರೋಹಿತಾಶ್ವ, ಮನ್ಮಥ ಮುಂತಾದ ಪಗಡಿವೇಷಗಳು- ದೇವಿ ಮಹಾತ್ಮೆಯ ಚಂಡ ಹಾಗೂ ಮುಂಡಾಸುರ ಪಾತ್ರಗಳು- ಬ್ರಹ್ಮ, ಬೃಹಸ್ಪತಿ, ಶುಕ್ರಾಚಾರ್ಯರಂತಹ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಸಂದರ್ಭಗಳು ಇದ್ದರೂ ಹಾಸ್ಯ ಪ್ರಧಾನ ಪಾತ್ರಗಳಾದ- ಬಾಹುಕ, ಪಾಪಣ್ಣ, ಮಕರಂದ, ಬೈರಾಗಿ ಇತ್ಯಾದಿ ಪಾತ್ರಗಳು ಬಹಳ ಮನಮೆಚ್ಚುವ ಜನಪ್ರಿಯತೆಯ ಶಿಖರವನ್ನು ತಲುಪಿದ್ದುದರಿಂದ, ಅಂತಹ ಪಾತ್ರಲೋಲುಪತೆ ಮತ್ತು ಭಾವಪರವಶತೆಯ ಲೋಕಕ್ಕೆ ಕೊಂಡೊಯ್ದ ಪರಿಣಾಮ ಅಂತಹ ಪಾತ್ರನಿಷ್ಠೆ ಆರಂಭವಾಯಿತು.


ಪ್ರಶ್ನೆ : ನಿಮ್ಮ ಯಕ್ಷಕಲಿಕಾ ಗುರುಗಳು ಯಾರು? ಮತ್ತು ಯಾವ ಪಾತ್ರಗಳನ್ನು ನಿರ್ವಹಿಸಿದ್ದೀರಿ?
ನಾ. ಹಾ : ಪ್ರಾಥಮಿಕ- ಪೂಜ್ಯ ತೀರ್ಥರೂಪರು. ಗುರುಗಳಾಗಿ ದಿ| ಕುರಿಯ ವಿಠಲ ಶಾಸ್ತ್ರಿಗಳು. ದಿ| ಬಣ್ಣದ ಕುಟ್ಯಪ್ಪು. ದಿ| ಕುಂಞಬು ಹಾಸ್ಯ ಗಾರರು ಹಾಗೂ ಪೂಜ್ಯ ಜ್ಯೇಷ್ಠ ಸಹೋದರರು. ಅಲ್ಲದೆ ಕಾವು ಶ್ರೀಕಣ್ಣ, ಮಂಕುಡೆ ಸಂಜೀವ ಶೆಟ್ರು, ಗುಡ್ಡಪ್ಪ ಗೌಡರು, ಬಣ್ಣದ ಮಾಲಿಂಗ, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗಡೆ, ಉರ್ವ ಅಂಬು, ಬೋಳಾರ ನಾರಾಯಣ ಶೆಟ್ರು, ವೇದಮೂರ್ತಿ ವೆಂಕಟ್ರಮಣ ಭಟ್, ಪುತ್ತೂರು ಕೃಷ್ಣ ಭಟ್, ಕುಂಞರಾಮ ಮಣಿಯಾಣಿ, ದಿ| ಮಲ್ಪೆ ಶಂಕರನಾರಾಯಣ ಸಾಮಗರು, ದಿ| ಮಲ್ಪೆ ರಾಮದಾಸ ಸಾಮಗರು ಮುಂತಾದ ದಿಗ್ಗಜ ಯಕ್ಷತಾರೆಗಳೊಡನೆ ಪ್ರಾಮುಖ್ಯ ಪಾತ್ರ ನಿರ್ವಹಿಸಿರುತ್ತೇನೆ.


‘‘ಜನರ ಮಾನಸಿಕ ವಿಕಲ್ಪಗಳಿಗೆ ಹಾಸ್ಯಗಳು ಔಷಧಿಯಾಗಬಲ್ಲುದು ಮತ್ತು ಸೂಕ್ತ ಚಿಕಿತ್ಸೆ ಯಾಗಬಲ್ಲುದು’’ ಎಂಬ ಅಂಶಗಳೇ ನನ್ನ ಹಾಸ್ಯ ಪಾತ್ರಗಳ ಆಯ್ಕೆಯ ಸೂತ್ರವಾಗಿತ್ತು ಮತ್ತು ಯಕ್ಷಗಾನಪ್ರೇಮಿಗಳಿಗೆ ಹಾಸ್ಯದ ಔತಣ ಬಡಿಸುವುದು ನನ್ನ ಕರ್ತವ್ಯವೆಂದು ತಿಳಿದಿರುವೆ. ಹಲವಾರು ಪ್ರಸಿದ್ಧ ಪೌರಾಣಿಕ ಕಥಾಪ್ರಸಂಗಗಳಲ್ಲಿ ಬರುವ ವಿವಿಧ ಹಾಸ್ಯಪಾತ್ರಗಳಲ್ಲಿ ಪಾತ್ರ ನಿರ್ವಹಣೆ- ವಿಶೇಷವಾಗಿ ಪಾಪಣ್ಣ ವಿಜಯದ ಹಾಸ್ಯಪಾತ್ರ, ಶ್ರೀಕೃಷ್ಣ ವಿಜಯದ- ಮಕರಂದ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ- ಮುಸ್ಲಿಂ ಸಹೋದರನ ಪಾತ್ರ, ನಳದಮಯಂತಿ- ಬಾಹುಕ, ದಕ್ಷಾಧ್ವರದ- ಬ್ರಾಹ್ಮಣ, ದೇವಿಮಹಾತ್ಮ್ಯೆ- ದೂತ ಇತರ ಪ್ರಸಂಗಗಳಲ್ಲಿ- ನಾರದ, ಗೋಪಾಲಕರ ಪಾತ್ರ- ಇತ್ಯಾದಿ ನಿರ್ವಹಿಸಿರುತ್ತೇನೆ.


ಪ್ರಶ್ನೆ: ನಿಮ್ಮ ಯಕ್ಷಗಾನ ವ್ಯವಸಾಯದ ವಿವರ?
ನಾ. ಹಾ. : ಯಕ್ಷಗಾನ ಯಾತ್ರೆಯ ಆರು ದಶಕಗಳಲ್ಲಿ- ಸುಮಾರು ನಾಲ್ಕು ದಶಕಗಳಷ್ಟು ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ ದಶಾವತಾರ ಮೇಳದಲ್ಲಿ ಅವಿರತ ಸೇವೆ. ಪ್ರಥಮ ರಂಗಪ್ರವೇಶ ಕೂಡ್ಲು ಶ್ರೀ ಗೋಪಾಲಕೃಷ್ಣ ಮೇಳದಲ್ಲಿ. ಮುಂದೆ ಕ್ರಮವಾಗಿ- ಮೂಲ್ಕಿ ಮೇಳ, ಮುಚ್ಚೂರು, ಧರ್ಮಸ್ಥಳ, ಇರಾ ಶ್ರೀ ಸೋಮನಾಥೇಶ್ವರ ಮೇಳ, ಆದಿ ಸುಬ್ರಹ್ಮಣ್ಯ ಮೇಳ, ಸಾಲಿಗ್ರಾಮ ಶ್ರೀ ಗುರುನರಸಿಂಹ ಮೇಳ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳ- ಈ ಮೇಳಗಳಲ್ಲಿ ಸಂಕ್ಷಿಪ್ತ ಅವಧಿಯ ಸೇವೆ ಸಲ್ಲಿಸಿರುತ್ತೇನೆ.


ಪ್ರಶ್ನೆ: ನಿಮ್ಮ ಕಲಾಪ್ರೌಢಿಮೆಗೆ ಸಂದ ಪ್ರಶಸ್ತಿ/ ಸನ್ಮಾನಗಳೇನು?
ನಾ. ಹಾ.: 1) ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ – 1992; 2) ಆಸ್ರಣ್ಣ ಪ್ರಶಸ್ತಿ – 2002; 3) ಯಕ್ಷಗಾನ ಕಲಾರಂಗ ಪ್ರಶಸ್ತಿ – 2009; 4) ಕರ್ನಾಟಕ ಸರ್ಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ. ಅಲ್ಲದೆ ಪ್ರಮುಖವಾಗಿ ಸನ್ಮಾನಗಳು- ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ, ಬೊಳ್ಳಾಜೆ; ಶಕ್ತಿನಗರ ವೀರಾಂಜನೇಯ ಸ್ವಾಮೀ; ಬಿಕರ್ನಕಟ್ಟೆ- ಶ್ರೀ ಬ್ರಾಹ್ಮರೀ ಯಕ್ಷಗಾನ ಮಂಡಳಿ; ಕಟೀಲು ಯಕ್ಷಗಾನ ಕಲಾಮಂಡಳಿ, ಪಣಂಬೂರು; ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ, ಕುರುಡುಪದವು; ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ; ಮಲ್ಲ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಕಾಸರಗೋಡು; ದೆಹಲಿ ಕರ್ನಾಟಕ ಸಂಘ (ರಿ.), ನವದೆಹಲಿ; ಯಕ್ಷಕಲಾರಂಗ (ರಿ.), ಉಡುಪಿ; ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ; ದೇವಾಡಿಗರ ಸಂಘ, ದುಬಾೈ; ಶಿಕ್ಷಕ-ರಕ್ಷಕರ ಬಳಗ, ಬೇಲಾಡಿ; ಕಾಂತಾವರ ಮುಂತಾದ ಹತ್ತು ಹಲವಾರು ಸಂಘ-ಸಂಸ್ಥೆ ಗಳಿಂದ ಪುರಸ್ಕಾರ, ಸನ್ಮಾನಗಳು ದೊರೆತಿವೆ.


ಪ್ರಶ್ನೆ : ನೀವು ಆರು ದಶಕಗಳಷ್ಟು ಕಾಲ ಕಲಾಸೇವೆಗೈದು ವಿಶೇಷ ಪಾಂಡಿತ್ಯ ಮತ್ತು ಅನುಭವಗಳನ್ನು ಪಡೆದಿದ್ದೀರಿ. ಆ ಹಿಂದಿನ ಕಲಾಬದುಕಿಗೂ ಇಂದಿನ ಕಲಾಬದುಕಿಗೂ ನಿಮ್ಮ ಅಭಿಪ್ರಾಯವೇನು?
ನಾ. ಹಾ.: ಅಜಗಜಾಂತರ. ಆ ಕಾಲದ ಕಷ್ಟದ ಬದುಕು ನಮ್ಮ ಮಕ್ಕಳಿಗೂ ಬೇಡ. ನನ್ನ ವಿರೋಧಿಗಳಿಗೂ ಬೇಡವೇ ಬೇಡ. ಆಟ ಆಡುವ ಸ್ಥಳಗಳಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯಲು ಸ್ಥಳಾವಕಾಶವಿಲ್ಲದಿದ್ದುದರಿಂದ ಸ್ಮಶಾನದಲ್ಲಿ ಮಲಗಿದ್ದೂ ಇದೆ. ಮಲಗಿ ಏನೋ ಭಯವಾಗಿ ಎದ್ದುಬಿದ್ದು ಓಡಿದ್ದೂ ಇದೆ. ಮಧ್ಯಾಹ್ನದ ಊಟದ ವ್ಯವಸ್ಥೆಗಳೂ ಸರಿಯಾಗಿ ಇರುತ್ತಿರಲಿಲ್ಲ. ಆಟ ನಡೆಯುವ ಸ್ಥಳಕ್ಕೆ ಏಳೆಂಟು ಮೈಲುಗಳ ಕಾಲ್ನಡಿಗೆ, ಗುಡ್ಡದಾರಿಗಳು, ನಮ್ಮದು ಆಗಿನ ಸಾಹಸದ ಕಲಾಬದುಕು. ಮೇಳದಲ್ಲಿ ಅಡುಗೆಯವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ಪಾತ್ರೆಪಗಡಿಗಳನ್ನು ಒಂದು ಬಿದಿರಿನ ಗಳೆ(ಕೋಲು)ಗೆ ಕಟ್ಟಿ, ಭುಜದಲ್ಲಿಟ್ಟು ಕೊಂಡು ಕಾಲ್ನಡಿಗೆಯ ಪಯಣ! ಬೇಕೇ ಈ ಬಣ್ಣದ ಬದುಕು ಎಂದೆನಿಸುತ್ತಿತ್ತು. ಆಗ ಆಟಕ್ಕೂ ಸೇವಾದಾರರು ಕಡಿಮೆ. ಈಗಿನ ಕಲಾಬದುಕು ಸ್ವರ್ಗ. ಆದರೂ ಯಾರಿಗೂ ತಾಳ್ಮೆ ಇಲ್ಲ. ಈಗ ಕಲೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಕಡಿಮೆಯೆ! ಎಲ್ಲಾ ವ್ಯಾಪಾರ ಮಯವಾಗಿದೆ, ಭಕ್ತಿಗೆ ಬೆಲೆ ಇಲ್ಲ, ಹಣಕ್ಕೆ ಮಾತ್ರ ಬೆಲೆ ಎಂಬಂತಾಗಿದೆ.


ಪ್ರಶ್ನೆ: ಈ ಕಾಲದಲ್ಲಿ ‘ಕಾಲಮಿತಿ’ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾ. ಹಾ: ಈ ಪ್ರಶ್ನೆ ನನ್ನಲ್ಲಿ ಹಲವರು ಕೇಳಿದ್ದಿದೆ. ದಯವಿಟ್ಟು ನಾನು ಏನೂ ಹೇಳಲಾರೆ. ಇರಲಿ, ನನಗೀಗ 80 ವರ್ಷ, ಸುಧಾರಣೆ ತರಲು ನನ್ನಿಂದ ಸಾಧ್ಯವೆ? ‘‘ಕಾಲಾಯ ತಸ್ಮಯೇ ನಮಃ’’. ಶನಿದೇವರ ಪೂಜೆ, ಸತ್ಯನಾರಾಯಣ ದೇವರ ಪೂಜೆ ಇಂತಹ ಪೂಜೆಗಳಿಗೆ ಒಂದು ಧಾರ್ಮಿಕ ಪೂಜಾ ವಿಧಿವಿಧಾನಗಳಿದ್ದು, ಪ್ರಸಾದ ವಿತರಣೆಯಾಗುತ್ತದೆ. ಯಕ್ಷಗಾನಕ್ಕೂ ಒಂದು ಪರಂಪರೆ ಇದೆ. ಪ್ರಾತಃಕಾಲದಲ್ಲಿ ಕಥಾಪ್ರಸಂಗಕ್ಕೆ ಮಂಗಲ ಹಾಡಿ, ಸೇವಾದಾರರಿಗೆ, ಚೌಕಿ ಪೂಜೆಯ ನಂತರ ಪ್ರಸಾದ ವಿತರಣೆಯಾಗುತ್ತದೆ. ‘ಕಾಲಮಿತಿ’ ಹರಕೆಯ ಸೇವಾಟಕ್ಕೆ ಖಂಡಿತ ಸರಿಯಲ್ಲ. ಯಾರೂ ನಿದ್ದೆಗೆಡಲು ತಯಾರಿಲ್ಲ. ‘‘ಸುಖವನ್ನೇ ಬಯಸುವವ ಯಾವಾಗಲೂ ಕಷ್ಟಪಡಲಿಚ್ಛಿಸಲಾರ. ಆದರೆ, ಕಷ್ಟಪಟ್ಟವ ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸುವನು.’’


ಪ್ರಶ್ನೆ: ನಿಮ್ಮ ಆಗಿನ ಕಾಲದ ಸಂಬಳ / ಗೌರವಧನ ಎಷ್ಟಿತ್ತು?
ನಾ. ಹಾ: ‘ನಾವು ಸಂಬಳ ತಿಂದು ಬದುಕಿದವರಲ್ಲ, ಕೆಲಸಕ್ಕಾಗಿ ಬದುಕಿದವರು’. ಆಗ ಐದು ದಿನಕ್ಕೆ ಮೂರು ರೂಪಾೈ ಸಂಬಳ. ಕೆಲವು ಸಮಯದ ನಂತರ ಮೂರು ದಿನಕ್ಕೆ 300 ರೂಪಾೈ ಸಿಗುತ್ತಿತ್ತು. ಮೇಳ ಬಿಡುವ ಸಮಯಕ್ಕೆ ಆರು ತಿಂಗಳಿಗೆ ರೂಪಾೈ 25,000/- ಪಡೆದಿದ್ದೇನೆ.


ಎಂಬತ್ತರ ಇಳಿವಯಸ್ಸಿನ ಈ ಯಕ್ಷಕಲಾ ಭೀಷ್ಮಾಚಾರ್ಯರು ದಿನಾಂಕ 17-12-2016 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ- ಇದರ 50ನೇ ವರ್ಷದ ಸುವರ್ಣ ಮಹೋತ್ಸವ ಸೇವಾಟದಲ್ಲಿ ‘ಸುಗ್ರೀವ’ನಾಗಿ ಕಲಾಪಾಂಡಿತ್ಯ ಮೆರೆದಿದ್ದಾರೆ. ಕೇವಲ 3,000 ರೂಪಾೈ ಗೌರವಧನ ಸ್ವೀಕರಿಸುತ್ತಾ ಜೀವನ ನಿರ್ವಹಿಸುವ ಈ ಹಿರಿಯ ಕಲಾವಿದರನ್ನು ಸಂಘ-ಸಂಸ್ಥೆಗಳು ಪುರಸ್ಕರಿಸಿದರೆ ಅವರ ಕಲಾಪಾಂಡಿತ್ಯವನ್ನು ಇನ್ನಷ್ಟು ಗೌರವಿಸಿದಂತಾಗುತ್ತದೆ.
ಹುಟ್ಟಿದ ಊರು : ನೆಲ್ಲಿಕಟ್ಟೆ, ಕಾಸರಗೋಡು ತಾಲೂಕು, ಕೇರಳ ರಾಜ್ಯ
ತಂದೆ : ದಿ| ಕೃಷ್ಣ ಚೆಟ್ಟಿಯಾರ್; ತಾಯಿ : ದಿ| ಮಾನು
ಪ್ರಾಥಮಿಕ ವಿದ್ಯಾಭ್ಯಾಸ : ಎರ್ಪೆಕಟ್ಟೆ, ಕಲ್ಲಕಟ್ಟೆ ಶಾಲೆ
ಹೈಸ್ಕೂಲ್ ವಿದ್ಯಾಭ್ಯಾಸ : ನವಜೀವನ ಪ್ರೌಢಶಾಲೆ, ಪೆರಡಾಲ ಮತ್ತು ಎಡನೀರು ಪ್ರೌಢಶಾಲೆ, ಕಾಸರಗೋಡು
ವಿದ್ಯಾಭ್ಯಾಸ : ಎಂಟನೇ ತರಗತಿ.

ಸಂದರ್ಶನ : ರುಕ್ಮಯ್ಯ ಶೆಟ್ಟಿ ಬಿ.

ರುಕ್ಮಯ್ಯ ಶೆಟ್ಟಿ ಬಿ.
‘ದೇವಿಕೃಪಾ’, ಪಡ್ರೆ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments