Friday, September 20, 2024
Homeಯಕ್ಷಗಾನಯಕ್ಷಗಾನ ಪ್ರಸಂಗಕರ್ತರ ಮೇಲೆ ಕುಮಾರವ್ಯಾಸನ ಪ್ರಭಾವ (ಭಾಗ – 2)

ಯಕ್ಷಗಾನ ಪ್ರಸಂಗಕರ್ತರ ಮೇಲೆ ಕುಮಾರವ್ಯಾಸನ ಪ್ರಭಾವ (ಭಾಗ – 2)

ಕುಮಾರವ್ಯಾಸನ ಭಾಮಿನಿಯ ಸೌಂದರ್ಯಕ್ಕೆ ಯಾರಾದರೂ ತಲೆದೂಗಲೇಬೇಕು. ಈ ಕಾವ್ಯ ಸೌಂದರ್ಯಕ್ಕೆ ಮನಸೋತೇ ಪ್ರಸಂಗಕರ್ತೃ ಇದನ್ನು ಹಾಗೆಯೇ ಬಳಸಿಕೊಳ್ಳಲು ನಿರ್ಧರಿಸಿರಬಹುದು ಎಂದು ತೋರುತ್ತದೆ. ಯಕ್ಷಗಾನ ಪ್ರಸಂಗಗಳಲ್ಲಿಯೂ ಕೂಡಾ ನಾವು ಕೆಲವು ಪ್ರಬೇಧಗಳನ್ನು ಗುರುತಿಸಬಹುದು. ಕೃತಿಕಾರನ ಕಾವ್ಯ ಸೃಷ್ಟಿಯ ಮನೋಭಿಲಾಷೆಗೆ ತಕ್ಕಂತೆ ರಚನಕಾರರು ಕೆಲವು ಸಂದರ್ಭಗಳನ್ನು ಮೊಟಕುಗೊಳಿಸಿರುತ್ತಾರೆ ಅಥವಾ ದೀರ್ಘಗೊಳಿಸಿರುತ್ತಾರೆ. ಯಕ್ಷಗಾನ ಪ್ರಸಂಗಗಳಲ್ಲಿ ಒಂದೇ ಪ್ರಸಂಗದ ಬೇರೆ ಬೇರೆ ಪ್ರಸಂಗಕರ್ತರ ಭಿನ್ನ ಪ್ರತಿಗಳನ್ನು ನಾವು ಕಾಣಬಹುದು.


ಕೆಲವೊಮ್ಮೆ ನಿರ್ದಿಷ್ಟ ಕವಿಯ ಒಂದು ಪ್ರತಿಯಲ್ಲಿದ್ದ ಕೆಲವು ಪದ್ಯಗಳು ಇನ್ನೊಂದು ಕವಿಯ ಅದೇ ಪ್ರಸಂಗದ ಪ್ರತಿಯಲ್ಲಿರದೆ ಬೇರೆ ಹೊಸತಾದ ಪದ್ಯಗಳನ್ನು ತನ್ನ ಮನೋಭಿವ್ಯಕ್ತಿಗೆ ತಕ್ಕಂತೆ ಹೊಸೆದಿರುವುದನ್ನು ಗಮನಿಸಬಹುದು. ಇದು ಕವಿ ಸ್ವಾತಂತ್ರ್ಯ. ಒಟ್ಟಾರೆ ಮೂಲ ಕಥೆಗೆ ಭಂಗ ಬರದಿದ್ದರೆ ಅಯಿತು. ಸಾಹಿತ್ಯ ಮತ್ತು ಪದ್ಯಗಳು ಅದು ಕವಿಯ ಸ್ವಾತಂತ್ರ್ಯ. ಹಾಗೆಂದು ಕಥೆಯನ್ನು ತಿರುಚಲು ಹೋಗಬಾರದು.
ನಾವು ನಮ್ಮ ಹಿಂದಿನ ತಲೆಮಾರಿನ ಹಲವಾರು ಹಿರಿಯರು ಹೇಳುವುದನ್ನು  ಕೇಳಿದ್ದೇವೆ. ಆಶುಕವಿಗಳಾಗಿದ್ದ ಕೆಲವು ಭಾಗವತರು ರಂಗದಲ್ಲೇ ಪದ್ಯಗಳನ್ನು ಹೊಸೆದು ಹಾಡುತ್ತಿದ್ದರಂತೆ. ಹಿರಿಯ ಅಗರಿ ಭಾಗವತರು ಇದರಲ್ಲಿ ಅಗ್ರಗಣ್ಯರೆಂದು ಕೇಳಿದ್ದೇವೆ. ಕಡತೋಕಾ ಮಂಜುನಾಥ ಭಾಗವತರು ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕೂಡಾ ಆಶುಕವಿತ್ವವನ್ನು ಮೈಗೂಡಿಸಿಕೊಂಡ ಪ್ರತಿಭಾವಂತರು.

ಮೇಲೆ ಹೇಳಿದಂತೆ ಪ್ರಸಂಗದ ವಿವಿಧ ಪ್ರತಿಗಳ ಪ್ರಸ್ತಾಪ ಯಾಕೆ ಬಂತೆಂದರೆ ಕೆಲವೊಂದು ಕೃತಿಕಾರರು ಕುಮಾರವ್ಯಾಸನನ್ನು ಹೆಚ್ಚಾಗಿ ಹಚ್ಚಿಕೊಂಡಂತೆ ಕಂಡರೂ ಮಿಕ್ಕುಳಿದವರು ಬೇಕಾದಲ್ಲಿ ಅಲ್ಲಲ್ಲಿ ಆತನಿಂದ ಪ್ರಭಾವಿತರಾಗಿರುವುದು ಕಂಡುಬರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ನಾರಣಪ್ಪನ ಭಾಮಿನಿಯ ಸಾಹಿತ್ಯವನ್ನು ಭಾಮಿನಿಯಾಗಿ ಉಪಯೋಗಿಸದೆ ಇತರ ತಾಳಗಳ ಪದ್ಯಗಳಾಗಿ ಪಡಿಮೂಡಿಸಿದ್ದೂ ಆತನ ಪ್ರಭಾವಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಆದರೂ ಭಾಮಿನಿಗೆ ಭಾಮಿನಿಯೇ ಸಾಟಿ. ಕೆಲವು ಭಾಗವತರಂತೂ ಭಾಮಿನಿಯನ್ನು ಹಾಡಲು ಬಹಳಷ್ಟು ಇಷ್ಟಪಡುತ್ತಾರೆ. ತಮ್ಮೆಲ್ಲಾ ಗಾನಪ್ರತಿಭೆಯನ್ನು, ಆಲಾಪನೆಯನ್ನು ಪ್ರದರ್ಶಿಸಲು ಭಾಮಿನಿಯು ಒಂದು ಮಾಧ್ಯಮವೆಂದು ಭಾವಿಸುವವರೂ ಇರಬಹುದು. ಆದರೆ ಆಲಾಪನೆಯ ಗುಂಗಿನಲ್ಲಿ, ಅದರಲ್ಲೇ ತಲ್ಲೀನನಾಗಿರುವ ಹಾಡುಗಾರ ರಂಗದಲ್ಲಿ ಸುಮ್ಮನೆ ನಿಂತಿರುವ ಪಾತ್ರಧಾರಿಯ ಅವಸ್ಥೆಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ ಎಂಬ ವಾದವೂ ಇದೆ. ಅದೇನೇ ಇರಲಿ. ಆ ವಿಷಯ ಇಲ್ಲಿ ಅಪ್ರಸ್ತುತ.

ಪ್ರಸಂಗಕರ್ತರ ಕೃತಿಗಳು ಮತ್ತು ಭಿನ್ನ ಸ್ವರೂಪದ ಪ್ರತಿಗಳಿದ್ದರೂ ಎಲ್ಲಾ ಪ್ರಸಂಗಕಾರರಲ್ಲಿಯೂ ಪ್ರಭಾವ ಬೀರಿದ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ಆದಿಪರ್ವದ ಪದ್ಯವೊಂದು ಹೀಗಿದೆ.
ಸಾಕಲಾರೆನು ಮಗನನಾತನ
ನೂಕುವೆನು ನಿಮ್ಮಸುರನೂಟಕೆ
ಸಾಕು ತನಗುಳಿದವರೆನಲ್ ದ್ವಿಜನದಕೆ ಬೆರಗಾಗಿ
ಸಾಕಲಾರದೆ ಮಗನನುರಿಯಲಿ
ನೂಕಿದವರುಂಟೇ ಮಹಾಸತಿ
ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ

ಅರಗಿನ ಮನೆಯಿಂದ ಪಾರಾಗಿ ಘೋರ ಕಾನನದಲ್ಲಿ ಹಿಡಿಂಬೆಯ ಪ್ರಕರಣದ ನಂತರ ಪಾಂಡವರು ಕುಂತಿ ಸಮೇತರಾಗಿ ಏಕಚಕ್ರ ಎಂಬ ನಗರದಲ್ಲಿ ಬ್ರಾಹ್ಮಣ ವೇಷಧಾರಿಗಳಾಗಿ ವಿಪ್ರನೊಬ್ಬನ ಮನೆಯಲ್ಲಿ ಆಶ್ರಯ ಪಡೆದು ಭಿಕ್ಷಾಟನೆ ವೃತ್ತಿಯಿಂದ ಜೀವಿಸುತ್ತಿದ್ದರು. ಬಕಾಸುರನ ಉಪಟಳದಿಂದ ವ್ಯಾಕುಲಚಿತ್ತದಿಂದ ಶೋಕಸಾಗರದಲ್ಲಿ ಬೊಬ್ಬಿರಿಯುತ್ತಿದ್ದ ನೆರೆಮನೆಯ ಬ್ರಾಹ್ಮಣ ಕುಟುಂಬದವರನ್ನು ಸಮಾಧಾನಪಡಿಸುತ್ತಾ ಕುಂತಿದೇವಿಯು ಬಕಾಸುರನೆಡೆಗೆ ತನ್ನ ಮಗನನ್ನು ಕಳುಹಿಸುವೆನೆಂದು ಮೇಲಿನ ಮಾತನ್ನು ನುಡಿಯುವ ಸಂದರ್ಭದ ಪದ್ಯವಿದು.


ಇದೇ ಸಂದರ್ಭ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದಲ್ಲಿ ಹೀಗೆ ಬಂದಿದೆ. ಅದೂ ಭಾಮಿನಿಯಲ್ಲಿದೆ.
“ಸಾಕಲಾರೆನು ಮಗನನೊಬ್ಬನ |
ಸಾಕು ತನಗುಳಿದವರು ನಾಳೆಗೆ |
ನೂಕಿ ಕಳೆದಪೆನವನನೆಂದಾ ಕುಂತಿ ಪೇಳಲ್ಕೆ ||
ಲೋಕದೊಳಗಿನ್ನೆಂತು ನಿರ್ದಯ |
ದಾಕೆರಿಹರೋ ಶಿವ ಶಿವೇಸು ಮ |
ಹಾ ಕಠಿನ ಮನವಿವಳದೆನುತಿಂತೆಂದನಾ ವಿಪ್ರ ||
ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಪದ್ಯದ ಸಾಹಿತ್ಯದ ಭಾಗಶಃ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದ ಪದ್ಯದಲ್ಲಿಯೂ ಬಂದಿದೆ. ಆದರೆ ಸ್ವಲ್ಪ ಭಾಗ ಅಷ್ಟೇ.


ಈಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಮೇಲಿನ ಪದ್ಯವು ಸಂಪೂರ್ಣ ಕುಮಾರವ್ಯಾಸನ ಸಾಹಿತ್ಯದ ಪ್ರಭಾವ ಎಂದು ಹೇಳಲಾಗದು. ಸ್ವಲ್ಪ ಹೋಲಿಕೆಯಿದೆ ಅಷ್ಟೇ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ  ಇಬ್ಬರು ಒಂದೇ ತೆರನಾದ ಆಲೋಚನಾ ಲಹರಿಗಳಿರುವ ಕವಿಗಳಿರುತ್ತಾರೆ. ಕಾಕತಾಳೀಯವಾಗಿ ಅವರಿಬ್ಬರ ಕೃತಿಗಳೂ, ರಚನೆಗಳೂ ಒಂದನ್ನೊಂದು ಹೋಲುತ್ತಿದ್ದರೆ ಅದು ಮತ್ತೊಬ್ಬರ     ಪ್ರಭಾವವೇ ಆಗಿರಬೇಕೆಂದೇನಿಲ್ಲ. ಅವರಿಬ್ಬರ ಕಾವ್ಯ ಶೈಲಿ ಒಂದೇ ತೆರನಾಗಿದೆ ಅಥವಾ ಅಕಾರಣವಾಗಿ ಹೋಲಿಕೆ ಉಂಟಾಗಿದೆ ಎಂದು ತಿಳಿದುಕೊಳ್ಳಬೇಕು. ಈ ಪದ್ಯಗಳನ್ನು ಹೋಲಿಸುವುದಾದರೆ ಒಂದನೇ ಸಾಲು ಬಹುತೇಕ ಒಂದೇ ರೀತಿಯದಾಗಿದೆ. ಕುಮಾರವ್ಯಾಸ ಭಾರತದ ಎರಡನೆಯ ಸಾಲು ಯಕ್ಷಗಾನ ಪ್ರಸಂಗದ ಮೂರನೆಯ ಸಾಲಿನಲ್ಲಿದೆ. ಅಲ್ಲಿನ ಮೂರನೆಯ ಸಾಲು ಇಲ್ಲಿಯ ಎರಡನೆಯ ಸಾಲಿನಲ್ಲಿದೆ. ಬಹುತೇಕ ಅಲ್ಲ ಭಾಗಶಃ ಬಂದಿದೆ.


ಆದಿಪರ್ವದ ಇದೇ ಸಂದರ್ಭದ ಇನ್ನೊಂದು ಭಾಮಿನಿ ಹೀಗಿದೆ.

ನಳನಳಿಪ ಬಹುವಿಧದ ಭಕ್ಷ್ಯಾ
ವಳಿಯ ಹೆಡಗೆಗಳೋರಣಿಸಿ ಮಂ
ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ
ಬಳಸಿ ಮುಚ್ಚಿದ ವಿವಿಧ ಶಾಖಾ
ವಳಿಯ ಬೋನದ ಬಿಗಿದ ಕುನಿಕಿಲ
ಕಳವೆಯಕ್ಕಿಯ ಕೂಳರಾಶಿಯ ಬಂಡಿ ಜೋಡಿಸಿತು.

ಈ ಪದ್ಯದಲ್ಲಿ ಬಕಾಸುರನಿಗಾಗಿ ಬಂಡಿಯಲ್ಲಿ ವಿವಿಧ ಬಗೆಯ ಆಹಾರಗಳನ್ನು ಜೋಡಿಸಿದ ದೃಶ್ಯವನ್ನು ಕುಂತಿಯು ಕಂಡ ಸಂದರ್ಭದ ವರ್ಣನೆಯಿದೆ. ಇಲ್ಲಿ ಬಗೆಬಗೆಯ ಭಕ್ಷ್ಯಗಳೇ ಕಣ್ಣೆದುರು ಕಂಡಂತಾಗಿ ಓದುಗರ ಬಾಯಲ್ಲಿ ನೀರೂರಿಸುವುದರಲ್ಲಿ ಸಫಲನಾಗುತ್ತಾನೆ ಕುಮಾರವ್ಯಾಸ.
ಇನ್ನು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ ಪ್ರತಿಯೊಂದರಲ್ಲಿ ಈ ಸಂದರ್ಭದ ವರ್ಣನೆ ಈ ರೀತಿ ಕಾಣಿಸುತ್ತದೆ. ಆದರೆ ಅದು ವಾರ್ಧಕ ಷಟ್ಪದಿಯಲ್ಲಿದೆ.
ನಳನಳಿಪ ವಿವಿಧ ಭಕ್ಷ್ಯಾವಳಿಯ ಹೆಡಿಗೆಗಳ |
ಬಳಸಿ  ತುಂಬಿದ  ತುಪ್ಪ ಪಾಲ್ಮೊಸರ ಹರವಿಗಳ |
ಕಳವೆಯಕ್ಕಿಯ ಕೂಳ ರಾಶಿಗಳ ಮುಚ್ಚಿರ್ದ ವಿವಿಧ ಶಾಕದ ರಚನೆಯ ||
ಚೆಲುವೆಸೆವ ಭಂಡಿಯೊಳ್ ಕಂಡು ಸಂತೋಷದಿಂ |
ಬಳಿಕಲಾ ಕುಂತಿ ಪವನಾತ್ಮಜನ ಪೊರೆಗೈದಿ |
ಸಲೆ ಸಕಲ ಸನ್ನಾಹವಾದುದೈ ಕಂದ ಕೇಳೆನುತ ಬಳಿಕಿಂತೆಂದಳು ||

  ವಿಭಿನ್ನ ಷಟ್ಪದಿಗಳಲ್ಲಿ ರಚಿಸಲ್ಪಟ್ಟಿದ್ದರೂ ವರ್ಣನೆ, ಸಾಹಿತ್ಯ, ಕಾವ್ಯ ಸೌಂದರ್ಯದಲ್ಲಿ ಬಹುತೇಕ ಸಾಮ್ಯತೆಯನ್ನು ಮೇಲಿನ ಪದ್ಯಗಳೆರಡರಲ್ಲಿ ನಾವು ಗುರುತಿಸಬಹುದು. ಈ ಯಕ್ಷಗಾನ ಪ್ರಸಂಗದ ಪದ್ಯ ರಚನೆಯ ಸಂದರ್ಭದಲ್ಲಿ, ಇಬ್ಬರು ಕೃತಿ ರಚನೆಕಾರರಲ್ಲಿರುವ ಸಾಮ್ಯತೆ, ಮೊದಲಿನ ಕವಿಯ ಸಾಹಿತ್ಯದ ಪ್ರಭಾವ, ಇವೆರಡೂ ಕೆಲಸ ಮಾಡಿರಬಹುದೆಂದು ತೋರುತ್ತಿದೆ.

(ಮುಂದುವರಿಯುವುದು) 

RELATED ARTICLES

Most Popular

Recent Comments