Tuesday, December 3, 2024
Homeಯಕ್ಷಗಾನಯಕ್ಷಗಾನ ಕಲೆಯಲ್ಲಿ ಗುರುವಿನ ಮಹತ್ವ

ಯಕ್ಷಗಾನ ಕಲೆಯಲ್ಲಿ ಗುರುವಿನ ಮಹತ್ವ

ನಮ್ಮ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹಾಸುಹೊಕ್ಕಾಗಿರುವ ಯಕ್ಷಗಾನ ಕಲೆಗೆ ಅದರದ್ದೇ ಆದ ಮಹತ್ವವಿದೆ. ಕಾರಣಿಕವಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಮಾನಸದಲ್ಲಿ ನೆಲೆಯೂರಿದ ಒಂದು ವಿಶಿಷ್ಟ ಕಲೆ ಯಕ್ಷಗಾನ. ಶತಮಾನಗಳ ಹಿಂದೆ ಕಾಸರಗೋಡಿನ ಪಾರ್ತಿಸುಬ್ಬನೇ ಯಕ್ಷಗಾನ ಪಿತಾಮಹನೆಂಬ ನಂಬಿಕೆ ನಮ್ಮದು. ತೀರಾ ಅವಿದ್ಯಾವಂತರ ಕಲೆ, ಜನಪದರ ಕಲೆ ಎಂದೆಲ್ಲಾ ಒಂದು ರೀತಿಯಾಗಿ ನೋಡುತ್ತಿದ್ದ ಯಕ್ಷಗಾನಕ್ಕೆ ಕೇರಳದ ಕಥಕ್ಕಳಿಯಿಂದ ಪ್ರೇರಿತರಾದ ಕುಂಬಳೆ ಪಾರ್ತಿಸುಬ್ಬನವರು ಸ್ಪಷ್ಟಚಿತ್ರಣ ಹಾಗೂ ಶುದ್ಧವಾದ ರೂಪವನ್ನು ಕೊಟ್ಟು ಹಲವಾರು ಪ್ರಸಂಗಗಳನ್ನು ರಚಿಸಿ ಯಕ್ಷಗಾನಕ್ಕೊಂದು ಅದ್ಭುತವಾದ ರೂಪುರೇಷೆಯನ್ನು ಕೊಟ್ಟರು.


ಮಲಯಾಳಂನ ‘ಗುರುನೆಲೆ ಇಲ್ಲೆಂಗಿ ಒರುನೆಲೆ ಇಲ್ಲ’ ಕನ್ನಡದ ಕವಿವಾಣಿ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಇದು ಇತರ ಕಲೆಗಳಾದ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಅನ್ವಯವಾಗುತ್ತದೆ. ಇವೆಲ್ಲವೂ ಕೇವಲ ವಿದ್ಯೆಗಳಲ್ಲ; ದೇವತಾರಾಧನಾ ಕಲೆಗಳು; ದೈವೀ ಕಲೆಗಳು. ಇದನ್ನು ಗುರು ಮುಖೇನ ಕಲಿತರೇ ಸಿದ್ಧಿಸಲು ಸಾಧ್ಯ. ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಕಲಿಯುವವರು ಆರಂಭದಲ್ಲಿ ಆಯಾ ದೇವರಿಗೆ ನಮಿಸಿ ಗುರುಗಳಿಗೆ ವಂದಿಸಿ ಏಕಾಗ್ರಚಿತ್ತದಿಂದ ಕಲಿತು ಕೊನೆಯಲ್ಲಿ ಮತ್ತೆ ವಂದಿಸುತ್ತಾರೆ. ಶ್ರದ್ಧೆ, ನಿಷ್ಠೆ ಇದ್ದರಷ್ಟೆ ಇಂತಹ ಕಲೆಯು ಸಿದ್ಧಿಸಲು ಸಾಧ್ಯ.
ಈ ಕಲೆಯನ್ನು ಕಲಿಯಲು ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ. ಜಾತಿ, ವಯೋಮಾನದ ಬಂಧನವೂ ಇಲ್ಲ. ಯಾರು ಯಾವಾಗ ಬೇಕಾದರೂ ಆಸಕ್ತಿ, ಭಕ್ತಿ ಮತ್ತು ನಿಷ್ಠೆಯಿಂದ ಸೂಕ್ತ ಗುರುವಿನ ಮೂಲಕ ಕಲಿತರೆ ಈ ಕಲೆ ಕರಗತವಾಗುವುದರಲ್ಲಿ ಸಂದೇಹವಿಲ್ಲ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಅನೇಕ ವಿಭಾಗಗಳಿದ್ದು ಅವುಗಳ ಬಗ್ಗೆ ತಿಳಿಯೋಣ.


ಹಿಮ್ಮೇಳ:
ಮುಖ್ಯವಾಗಿ ಹಿಮ್ಮೇಳದಲ್ಲಿ ಭಾಗವತಿಕೆ, ಚಂಡೆ, ಮದ್ದಳೆ, ಚಕ್ರತಾಳವಿದ್ದು ಇದನ್ನು ಶ್ರುತಿ ಮತ್ತು ತಾಳಗಳಿಗೆ ಅನುಸಾರವಾಗಿ ಅಭ್ಯಸಿಸತಕ್ಕದ್ದು. ಭಾಗವತರು ಇಡೀಯಕ್ಷಗಾನ ಕಾರ್ಯಕ್ರಮದ ಸೂತ್ರಧಾರರು. ಅಂದರೆ ಭಾಗವತರೇ ಅಂದಿನ ಕಥಾನಕದ ಪಾತ್ರಧಾರಿಗಳ ಅಯ್ಕೆ ಮತ್ತು ಪದ್ಯಗಳನ್ನು ಆರಿಸಿ ಹಾಡುವವರು.


ಭಾಗವತರಿಗೆ ಶಾಸ್ತ್ರೀಯ ಸಂಗೀತದ ಜ್ಞಾನವಿದ್ದರೆ ಮತ್ತಷ್ಟು ಅನುಕೂಲ. ಸುಶ್ರಾವ್ಯ ಕಂಠಸಿರಿ, ಶ್ರುತಿಲಯಗಳ ಜ್ಞಾನ, ಪ್ರಸಂಗ, ಕಥೆಗಳ ಜ್ಞಾನ, ಅರ್ಥಧಾರಿಗಳನ್ನು ಸಂಭಾಳಿಸಿಕೊಂಡು ಹೋಗುವ ಚಾಕಚಕ್ಯತೆಯೂ ಅಗತ್ಯವಾಗಿದೆ. ಉತ್ತಮ ಗುರುವಿನಿಂದ ಕಲಿತ ಭಾಗವತರು ಯಕ್ಷಗಾನದ ಪ್ರಧಾನ ಕಲಾವಿದರು. ಇವರ ಜೊತೆಯಲ್ಲಿ ಚಂಡೆ-ಮದ್ದಳೆ ವಾದಕರೂ ಸಹ ಬಹುಮುಖ್ಯ ಕಲಾವಿದರು. ಸಾಮಾನ್ಯವಾಗಿ ಉತ್ತಮ ಗುರುವಿನ ಮೂಲಕ ಕಲಿತ ಚಂಡೆ-ಮದ್ದಳೆ ವಾದಕರು ಎರಡರಲ್ಲಿಯೂ ನಿಷ್ಣಾತರಾಗಿರುತ್ತಾರೆ. ಕೆಲವೊಮ್ಮೆ ಒಂದೇ ಉಪಕರಣದಲ್ಲಿ ಪ್ರಾವೀಣ್ಯತೆಯನ್ನು ಪಡೆಯುತ್ತಾರೆ. ಚಂಡೆ-ಮದ್ದಳೆವಾದಕರಿಗೆ ಚಂಡೆ-ಮದ್ದಳೆಗಳನ್ನು ಸುಸ್ಥಿತಿಯಲ್ಲಿಡುವುದು ಶ್ರುತಿಗೆ ತಕ್ಕಂತೆ ಸಿದ್ಧಗೊಳಿಸುವುದು ಬಹಳ ಕಠಿಣದಾಯಕ. ಹಾಗಾಗಿ ಇದಕ್ಕೆ ಸೂಕ್ತ ಗುರು ಮತ್ತು ಶಿಷ್ಯನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಕಲಾ ಪಕ್ವತೆಯನ್ನು ಪಡೆಯುವುದು ಅಷ್ಟು ಸುಲಭ ಸಾಧ್ಯವಲ್ಲ.


ಅರ್ಥಗಾರಿಕೆ:
ಇದು ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗ. ಇದಕ್ಕೆ ಪ್ರಸಂಗದ ಹಾಡುಗಳ ಅಧ್ಯಯನ, ಪುರಾಣ ಗ್ರಂಥಗಳ ಅವಲೋಕನ, ಓದುವ, ಗ್ರಹಿಸುವ ಮನೋಭಾವನೆ ಅತ್ಯವಶ್ಯವಾಗಿದೆ. ಯಕ್ಷಗಾನವು ಈ ಮೊದಲೇ ಹೇಳಿದಂತೆ ಒಂದುದೈವೀ ಕಲೆ; ಅರಾಧನಾ ಕಲೆ. ಹಾಗಾಗಿ ಆ ಬಗ್ಗೆ ಹೆಚ್ಚಿನ ಭಕ್ತಿ ಶ್ರದ್ಧೆ ನಿಷ್ಠೆ ಇದ್ದರಷ್ಟೇ ಅರ್ಥಗಾರಿಕೆಯನ್ನು ಕರಗತಗೊಳಿಸಬಹುದು. ಅರ್ಥಗಾರಿಕೆಯಲ್ಲಿ ಎದುರಾಳಿ ಕಲಾವಿದರನ್ನು ಸಂಭಾಳಿಸಿಕೊಂಡು ಕಥೆಗೆ ಪೂರಕವಾಗಿ ಮಾತನಾಡುತ್ತಾ ಸಭಿಕರನ್ನು ರಂಜಿಸುತ್ತಾ ಮಾತನಾಡುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅಂಥ ಮಾತುಗಾರಿಕೆ ಚಾಕಚಕ್ಯತೆ ಕೆಲವೇ ಕಲಾವಿದರಿಗಷ್ಟೇ ಸಿದ್ಧಿಸಲು ಸಾಧ್ಯ. ಹಿಂದಿನ ಕಾಲದಲ್ಲಿ ಕೇವಲ ಎರಡು ಮೂರನೇ ಕ್ಲಾಸು ಕಲಿತವರೂ ಕೆಲವೊಮ್ಮೆ ಶಾಲೆಗೆ ಹೋಗದೇ ಇರುವ ಕಲಾವಿದರು ವಾಗ್ಮಿಗಳಾಗಿರುವುದನ್ನು ಕಂಡಿದ್ದೇವೆ. ಇದಕ್ಕೆ ಕಾರಣ ಅವರ ಗುರುಗಳೋ ಸಹವರ್ತಿ ಕಲಾವಿದರೋ ಆಗಿರುತ್ತಾರೆ. ಮಾತ್ರವಲ್ಲದೆ ಸಂಸ್ಕೃತ -ಕನ್ನಡ ಇತರೆ ಭಾಷೆಗಳಲ್ಲಿರುವ ಗ್ರಂಥಗಳ ಓದು ಅಧ್ಯಯನದಿಂದಲೂ ಅರ್ಥಗಾರಿಕೆಯ ಕಲೆ ಸಿದ್ಧಿಸಲು ಸಾಧ್ಯ.


ಹೆಜ್ಜೆಗಾರಿಕೆ/ನೃತ್ಯ:
ಇದು ಯಕ್ಷಗಾನದ ಬಯಲಾಟ-ಟೆಂಟ್‍ ಆಟದ ಕಲಾವಿದರಿಗೆ ಮೀಸಲು. ಕಾರಣ ಹೆಜ್ಜೆಗಾರಿಕೆ-ನೃತ್ಯದಲ್ಲಿ ಸುಂದರವಾದ ಮುಖ ಸೌಂದರ್ಯ, ಅಂಗಸೌಷ್ಠವ ಅವಶ್ಯವಿದೆ. ಸಾಮಾನ್ಯವಾಗಿ ಯಕ್ಷಗಾನದಲ್ಲಿ ಬರುವ ಪಾತ್ರಧಾರಿಗಳಿಗೆ ನೃತ್ಯಾಭ್ಯಾಸದ ಜತೆಗೆ ಬಣ್ಣಗಾರಿಕೆ-ವೇಷಭೂಷಣದ ಬಗ್ಗೆಯೂ ಮಾಹಿತಿ ಬೇಕು. ಹೆಜ್ಜೆಗಾರಿಕೆ ನೃತ್ಯದಲ್ಲಿ ಪುಂಡುವೇಷ, ಸ್ತ್ರೀವೇಷ, ಬಣ್ಣದವೇಷ, ಹಾಸ್ಯವೇಷ ಹೀಗೆ ಒಂದೊಂದು ವೇಷಗಳಿಗೆ ತಕ್ಕಂತೆ ನೃತ್ಯವೂ ಸಹ ಬದಲಾಗಿದೆ. ಕೆಲವೊಮ್ಮೆ ಕಲಾವಿದನ ಆಸಕ್ತಿಗನುಗುಣವಾಗಿ ಪಾತ್ರಗಳ ಆಯ್ಕೆಗನುಗುಣವಾಗಿ ನೃತ್ಯಾಭ್ಯಾಸವನ್ನು ಮಾಡುತ್ತಾರೆ. ಕೆಲವು ಕಲಾವಿದರು ಎಲ್ಲ ವಿಭಾಗಗಳಲ್ಲಿಯೂ ಅಭಿನಯಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಸ್ತ್ರೀವೇಷ ಕಲಾವಿದರಿಗೆ ನೃತ್ಯದಲ್ಲಿ ಅಪರಿಮಿತವಾದ ಸಾಧನೆ ಬೇಕಾಗಿದೆ. ಅವರಿಗೆಗುರುವಿನ ಸೂಕ್ತ ಮಾರ್ಗದರ್ಶನ ಬೇಕೇಬೇಕು. ಬಣ್ಣದ ವೇಷವು ಬಣ್ಣಗಾರಿಕೆ ಮತ್ತು ವೇಷಭೂಷಣಗಳಿಂದಲೇ ರಂಗಸ್ಥಳದಲ್ಲಿ ಕಳೆಗಟ್ಟಬಹುದಾಗಿದೆ. ಅದೇ ರೀತಿ ಹಾಸ್ಯ ಪಾತ್ರದವರೂ ಅವರ ವಿಭಿನ್ನ ಹಾಸ್ಯ ಕುಣಿತದಿಂದ ಹಾವಭಾವದಿಂದ ಅವರ ಪಾತ್ರವನ್ನು ಆಕರ್ಷಣೀಯವಾಗಿಸಬಲ್ಲರು. ಆ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಬಲ್ಲರು. (ಆಡುಮಾತಿನಲ್ಲಿ ಹೇಳುವುದಾದರೆ ರೈಸುವುದು) ಹೀಗೆ ಹೆಜ್ಜೆಗಾರಿಕೆ ರಂಗಸ್ಥಳದಲ್ಲಿ ಯಕ್ಷಗಾನ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಮುಖಅಂಶವಾಗಿದೆ.


ಯಕ್ಷಗಾನದ ಇನ್ನೊಂದು ವಿಭಾಗ ತಾಳಮದ್ದಳೆ:
ತಾಳಮದ್ದಳೆಯು ಸಂಭಾಷಣೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಅರ್ಥಧಾರಿಗಳಿಗೆ ಬೇಕೇ ಬೇಕು. ಹಿರಿಯ ಅರ್ಥಧಾರಿಗಳು ಹೊಸ ಅರ್ಥಧಾರಿಗಳನ್ನು ಕಥೆಗೆ ಪೂರಕವಾಗಿ ವಾದವಿವಾದವನ್ನು ಮುನ್ನಡೆಸುತ್ತಾ ಭಾಗವತರ ಆಶಯಕ್ಕೆ ಸರಿಯಾಗಿ ಕೂಟವನ್ನು ರಂಜನೀಯವಾಗಿ ಮುಕ್ತಾಯಗೊಳಿಸಬೇಕು. ಕೆಲವೊಮ್ಮೆ ಹಿರಿಯ ಕಲಾವಿದರು ಎದುರಾಳಿಯನ್ನು ಮಣಿಸುವುದರಲ್ಲಿ ವಾದವಿವಾದವು ವಿಕೋಪಕ್ಕೆ ತಿರುಗಿ ಹೊಯ್ ಕೈ ಆಗಿರುವುದನ್ನೂ ಕಂಡಿದ್ದೇವೆ. ಇದು ಕಲಾಮಾತೆಗೆ ಎಸಗುವ ಅಪಚಾರವೆಂದೇ ಹೇಳಬಹುದು. ಕಲಾವಿದರು ಒಮ್ಮೆಗೆ ರೈಸಿದರೂ ಮುಂದೆ ಅವರ ಘನತೆ ಗೌರವಗಳು ಕುಸಿಯುವುದಂತೂ ಸತ್ಯ, ಕೆಲವು ದಶಕಗಳ ಹಿಂದಿನ ಕಲಾವಿದರು ಜಾಣ್ಮೆಯ ಮಾತುಗಳಿಂದ ವಿದ್ವತ್ತಿನಿಂದ ಇಡೀ ರಾತ್ರಿ ಬೆಳಗಿನ ಕಾರ್ಯಕ್ರಮವು ಎಲ್ಲಿಯೂ ಕಳಾಹೀನವಾಗದಂತೆ ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದು ಕಲೆಗೆ ಸೂಕ್ತವಾದ ಮರ್ಯಾದೆಯನ್ನು ಸಲ್ಲಿಸುತ್ತಿದ್ದರು.


ನಮ್ಮ ಹಿಂದಿನ ತಲೆಮಾರಿನಲ್ಲಿ ಯಕ್ಷಗಾನವು ಒಂದು ಉತ್ತಮ ಮನೋರಂಜನಾ ಮಾಧ್ಯಮವಾಗಿತ್ತು. ರಾತ್ರಿ ಬೆಳಗಿನ ತನಕ ನಡೆಯುತ್ತಿದ್ದ ತಾಳಮದ್ದಳೆ-ಯಕ್ಷಗಾನ ಬಯಲಾಟಗಳು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದವು. ಇಂದು ವಿವಿಧದೃಶ್ಯ ಮಾಧ್ಯಮಗಳು, ಮೊಬೈಲು ವಾಟ್ಸಾಪ್‍ಗಳಿಂದ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದನ್ನು ಕಾಣುತ್ತೇವೆ. ಅದರಿಂದಾಗಿ ಕಾಲಮಿತಿ ಪ್ರದರ್ಶನಗಳು ಬಳಕೆಗೆ ಬಂದವು. ತಾಳಮದ್ದಳೆಗಳಂತೂ ಕೆಲವೇ ಘಂಟೆಗಳ ಮಿತಿಗೆ ಒಳಪಟ್ಟವು. ಇದರಿಂದಾಗಿ ಕಲಾವಿದರ ಕಲಾಭಿಜ್ಞತೆಗೆ ಅವಕಾಶಗಳು ಕಡಿಮೆಯಾದವು. ಸೀಮಿತ ಅವಧಿಯಲ್ಲಿ ಅವರ ಪ್ರತಿಭೆ ಅನಾವರಣ ಕುಂಠಿತಗೊಂಡಿತು.ಆ ಸಂದರ್ಭದಲ್ಲಿ ನಾ ಮೇಲು ತಾ ಮೇಲು ಭಾವನೆಗಳು ರೂಪುಗೊಳ್ಳಲು ಆರಂಭವಾದವೆಂದು ತೋರುತ್ತವೆ. ಕಲೆಯ ಬಗೆಗಿನ ಗೌರವ ಮಾನ್ಯತೆಗಳು ಇದರಿಂದಾಗಿ ಕುಸಿತವಾದವು. ಆದರೆ ಇದರ ಬಗ್ಗೆ ಕಿಂಚಿತ್ ಯೋಚಿಸಿದರೆ ಕಲಾಮಾತೆಗೆ ಸಲ್ಲುವ ಗೌರವ ಪೂಜ್ಯತೆ ಕಲಾವಿದರ ಗೌರವ ಘನತೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.


ಯಕ್ಷಗಾನದ ಎಲ್ಲ ವಿಭಾಗಗಳಿಗೂ ಶ್ರದ್ಧೆ ಪ್ರಾಮಾಣಿಕತೆಯಿಂದ ಉತ್ತಮ ಗುರುವಿನಿಂದ ಕಲಿತರೆ ಪ್ರಬುದ್ಧ ಕಲಾವಿದನಾಗುತ್ತಾನೆ ಎನ್ನಬಹುದು. ಇಂದು ಯಕ್ಷಗಾನ ಪಠ್ಯವೂ ಬಂದಿದೆ. ಯಕ್ಷಗಾನ ತರಗತಿಗಳು ಆರಂಭಗೊಂಡಿವೆ. ಯಕ್ಷಗಾನ ಕೇಂದ್ರಗಳು ಪೂರ್ಣಕಾಲಿಕ ತರಗತಿಗಳನ್ನು ನಡೆಸಿದ್ದು ನೋಂದಾಯಿತ ಸಂಸ್ಥೆಗಳಾಗಿವೆ. ಕೆಲವೆಡೆ ಬೇಸಿಗೆ ಶಿಬಿರಗಳೂ ನಡೆಯುತ್ತಿವೆ. ಬಾಲ್ಯದಿಂದಲೇ ಅಭ್ಯಾಸ ಮಾಡಿದರೆ ಪರಿಪೂರ್ಣ ಕಲಾವಿದರಾಗಬಹುದು. ಶಾಲೆ ಕಾಲೇಜುಗಳಲ್ಲಿ ವಾರ್ಷಿಕೋತ್ಷವ ಸಂದರ್ಭಗಳಲ್ಲಿ ಹಿರಿಯ ಕಲಾವಿದರಿಂದ ತರಬೇತಿ ಪಡೆದು ಪ್ರದರ್ಶನಗಳನ್ನು ನೀಡುತ್ತಿರುವುದನ್ನೂ ಕಾಣಬಹುದು. ಆದರೆ ಅದು ಅಲ್ಲಿಗೇ ಸೀಮಿತವಾಗದೆ ಪ್ರತಿಭಾವಂತ ಕಲಾವಿದರು ಮುಂದುವರಿದು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕಾಗಿದೆ.

ಈ ಹಿಂದೆಯೇ ಹೇಳಿದಂತೆ ಕಲೆಗೆ ಸರಿಯಾದ ಗೌರವ ಮಾನ್ಯತೆಗಳು ದೊರೆತು, ಗುರುಗಳಿಂದ ಕಲಿತ ವಿದ್ಯೆಯನ್ನು ಕೊನೆಯ ತನಕ ಉಳಿಸಿಕೊಂಡು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸಿದರೆ,ಯಕ್ಷಗಾನಕ್ಕೆಅಂತಾರಾಷ್ಟ್ರೀಯ ಮಾನ್ಯತೆ ದೊರಕೀತು. ಇನ್ನಷ್ಟು ಹೊಸ ಕಲಾವಿದರು ರೂಪುಗೊಂಡು ಹಿಮ್ಮೇಳ ಮುಮ್ಮೇಳಗಳು ಪ್ರಭಾವಶಾಲಿಯಾಗಬೇಕಾದರೆ ಪಠ್ಯ ಪಠ್ಯೇತರ ಚಟುವಟಿಕೆಯೊಂದಿಗೆ ಉತ್ತಮ ಗುರು ಮಾರ್ಗದರ್ಶನ ಬೇಕೇ ಬೇಕು.
ಸಿರಿಗನ್ನಡಂ ಗೆಲ್ಗೆ ಯಕ್ಷಗಾನಂ ಬಾಳ್ಗೆ

ಶಂಕರ ಕುಳಮರ್ವ ವಿಟ್ಲ
(ಚರವಾಣಿ: 6362685049)
RELATED ARTICLES

Most Popular

Recent Comments