ಭಾಗವತರ ಹಾಡನ್ನು ಅನುಸರಿಸಿ ಮುನ್ನಡೆಯುವುದು ಯಕ್ಷಗಾನದ ಉಳಿದ ಹಿಮ್ಮೇಳ ಮುಮ್ಮೇಳದ ಕಲಾವಿದರಿಗೆ ಕರ್ತವ್ಯ. ಭಾಗವತರು ಯಕ್ಷಗಾನದ ಒಂದನೇ ವೇಷಧಾರಿ. ಹಾಗಾಗಿ ತಂಡದಲ್ಲಿ ಅವರು ಪ್ರಬಲರಾಗಿರಬೇಕು. ಪ್ರದರ್ಶನದ ಗೆಲುವಿಗೂ ಸೋಲಿಗೂ ಹೊಣೆಗಾರರಾಗುತ್ತಾರೆ. ಭಾಗವತ ಎಂಬ ಸ್ಥಾನವು ಶ್ರೇಷ್ಠವಾದುದು. ಗೌರವಯುತವಾದುದು. ಹಾಗಾಗಿಯೇ ಕಲಾವಿದರು ರಂಗಪ್ರವೇಶ ಮಾಡುವಾಗ ಆ ಸ್ಥಾನಕ್ಕೆ ನಮಸ್ಕರಿಸುತ್ತಾರೆ. ಅಲ್ಲಿ ಅರ್ಹತೆಯನ್ನು ಹೊಂದಿಯೇ ಕುಳಿತರೆ ಚಂದ. ಸ್ಥಾನ ಮತ್ತು ಪ್ರದರ್ಶನಗಳ ಸೌಂದರ್ಯವು ಹೆಚ್ಚುವುದು.
ಹಲವು ಪದ್ಯಗಳನ್ನು ಹೇಳಿಯೋ, ನಾಲ್ಕಾರು ಪ್ರಸಂಗ ಆಡಿಸಿಯೋ ಭಾಗವತರು ಎನಿಸಿಕೊಳ್ಳಲಾರರು. ಪ್ರಸಂಗವನ್ನು ಮುನ್ನಡೆಸುವಲ್ಲಿ ನಿರ್ದೇಶನಾ ಸಾಮರ್ಥ್ಯ ಹೊಂದಿರಬೇಕು. ಪುರಾಣಜ್ಞಾನ, ಪ್ರಸಂಗಜ್ಞಾನ, ಪ್ರಸಂಗಗಳ ನಡೆಯ ಅರಿವು, ಅರ್ಥಜ್ಞಾನ, ಕಲಾವಿದನ ಸಾಮರ್ಥ್ಯವನ್ನು ಅರಿತು ನುಡಿಸುವ ಕಲೆಗಾರಿಕೆ ಮೊದಲಾದ ಗುಣಗಳು ಬೇಕು. ‘‘ಸ್ವರಮಾಧುರ್ಯವಿದ್ದರೆ ಸಾಲದು. ರಾಗ-ತಾಳ-ಲಯಜ್ಞಾನ, ನಾಟ್ಯಾನುಭವವನ್ನೂ ಹೊಂದಿರಬೇಕು. ನಟನ ಸಾಮರ್ಥ್ಯದ ಬಗ್ಗೆ ಅರಿವು ಇರಬೇಕು. ಪ್ರಸಂಗ ಪುಸ್ತಕದಲ್ಲಿ ಪದ್ಯಗಳು ತಪ್ಪಾಗಿದ್ದರೂ ಸರಿಮಾಡಿ ಹಾಡಲು ಗೊತ್ತಿರಬೇಕು. ಆತನು ರಂಗದ ನಿರ್ದೇಶಕ. ಕವಿತಾಶಕ್ತಿ ಇರಬೇಕು. ಅವರ ಹಾಡುಗಳು ನಟನಲ್ಲಿ ಭಾವೋತ್ಪತ್ತಿಗೆ ಕಾರಣವಾಗಬೇಕು. ನಿರ್ದೇಶನಾ ಸಾಮರ್ಥ್ಯವನ್ನು ಹೊಂದಿರಬೇಕು. ಈ ಗುಣಗಳನ್ನು ಹೊಂದಿರದವರು ಎಷ್ಟೇ ಸ್ವರವುಳ್ಳವ ರಾದರೂ ಪ್ರಯೋಜನವಿಲ್ಲ’’.
ಭಾಗವತರಲ್ಲಿರ ಬೇಕಾದ ಗುಣಗಳನ್ನು ಹಿರಿಯರು ಹೀಗೆ ಹೇಳಿದರು. ಹೀಗೆ ಹಾಡುಗಾರಿಕೆ ಯನ್ನು ತಪಸ್ಸೇ ಎಂದು ಸ್ವೀಕರಿಸಿ ಸತತ ಸಾಧನೆಯಿಂದ ಭಾಗವತರಾಗಿ, ಶ್ರೇಷ್ಠ ನಿರ್ದೇಶಕರಾಗಿ ಮೆರೆದವರನೇಕರಲ್ಲಿ ದಿ| ಅಗರಿ ಶ್ರೀನಿವಾಸ ಭಾಗವತರು ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಭಾಗವತಿಕೆಗೆ ವೇಷ ಮಾಡುವ ಭಾಗ್ಯ ನನಗೆ ಒದಗಲಿಲ್ಲ. ಇಳಿವಯಸ್ಸಿನಲ್ಲಿ ಭಾಗವತರಾಗಿ ಪ್ರಸಂಗವನ್ನು ಮುನ್ನಡೆಸಿದ್ದನ್ನು ನಾನು ಚಿಕ್ಕ ಹುಡುಗನಾಗಿದ್ದಾಗ ನೋಡಿದ ನೆನಪು ಅಷ್ಟೆ. ಆದರೂ ಇಂದಿನ ಹಿರಿಯ ಕಲಾವಿದರೂ ಕಲಾಭಿಮಾನಿಗಳೂ ಅಗರಿಯವರ ಬಗೆಗೆ ಆಡುವ ಮಾತುಗಳಿಂದ ಅವರೊಂದು ಅಗಾಧ ಪ್ರತಿಭೆಯೆಂದು ತಿಳಿಯಲು ಸಾಧ್ಯ. ವೇಷಧಾರಿಯಾಗಿ, ಭಾಗವತರಾಗಿ, ಪ್ರಸಂಗಕರ್ತರಾಗಿ, ಆಶುಕವಿಯಾಗಿ ಅವರು ಪ್ರಸಿದ್ಧರು. ಹಾಗಾಗಿಯೇ ‘ಯಕ್ಷಬ್ರಹ್ಮ’ ಎಂದು ಖ್ಯಾತರಾದರು.
ಅಗರಿ ಶ್ರೀನಿವಾಸ ಭಾಗವತರು ಸುರತ್ಕಲ್ಲು ಸಮೀಪದ ಹೊಸಬೆಟ್ಟು ಎಂಬಲ್ಲಿ 1906ನೇ ಇಸವಿ ಮೇ 22ರಂದು ಇಡ್ಯ ತಿಮ್ಮಪ್ಪಯ್ಯ ಮತ್ತು ರಾಧಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಕಾರಣ ಅಜ್ಜನ ಮನೆಯ ಆಸರೆಯಲ್ಲಿ ಬೆಳೆಯಬೇಕಾಯಿತು. ಸುರತ್ಕಲ್ಲು ವಿದ್ಯಾದಾಯಿನೀ ಶಾಲೆಯಲ್ಲಿ ಏಳನೇ ತರಗತಿವರೇಗೆ ಓದು. ಆಗಲೇ ಅವರೊಳಗೆ ಕವಿಯೊಬ್ಬ ವಾಸವಾಗಿದ್ದ. ಸಣ್ಣ ಸಣ್ಣ ಕವನಗಳನ್ನು ರಚಿಸಿ ಹಾಡುತ್ತಿದ್ದರು. ಶಿಕ್ಷಕರಾದ ಶ್ರೀ ಸುಬ್ಬರಾವ್ ಅವರಿಂದ ‘‘ಪುಟ್ಟ ಕಬ್ಬಿಗ’’ ಎಂದು ಆಗಲೇ ಹೊಗಳಿಸಿಕೊಂಡಿದ್ದರು.
ಆಗ 1ನೇ ತರಗತಿಯಿಂದಲೇ ಸಂಸ್ಕೃತ ಕಲಿಯುವ ಪದ್ಧತಿ. ಓದಿದ್ದು 7ನೇ ತರಗತಿಯ ವರೇಗಾದರೂ ಸಂಸ್ಕೃತಜ್ಞಾನವನ್ನು ಗಳಿಸಿಕೊಂಡರು. ನಂತರ ಮಂಗಳೂರಿನಲ್ಲಿ ಸೋದರಮಾವನ ಜತೆಯಾಗಿ ಅಂಗಡಿಯೊಂದನ್ನು ತೆರೆದಿದ್ದರು. ಆಗ ನಾಟಕಾಸಕ್ತಿಯೂ ಬೆಳೆದಿತ್ತು. ಕವಿತಾಶಕ್ತಿಯು ರಕ್ತಗತವಾಗಿ ಬಂದುದರಿಂದ ಹಾಡುಗಾರಿಕೆಗೆ ಇದು ಅನುಕೂಲವೇ ಆಯಿತು. ಮಾವ ರಾಮರಾಯರು ಭಾಗವತರಾಗಿಯೂ, ಮದ್ದಳೆವಾದಕರಾಗಿಯೂ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದರು. ಪಾವಂಜೆ ಲಕ್ಷ್ಮೀನಾರಾಯಣಪ್ಪಯ್ಯನವರು ಆ ಕಾಲದ ಶ್ರೇಷ್ಠ ಹರಿದಾಸರಾಗಿದ್ದರು. ಆಶುಕವಿಗಳೂ ಆಗಿದ್ದರು. ಅವರ ಹರಿಕಥೆಗಳನ್ನು ಕೇಳಲು ಅಗರಿಯವರು ಹೋಗುತ್ತಿದ್ದರು. ನಾರಾಯಣಪ್ಪಯ್ಯನವರ ಕವನ ರಚನಾ ಶಕ್ತಿಗೆ ಅಗರಿಯವರು ಮಾರು ಹೋಗಿದ್ದರು. ಇದು ಹಾಡುಗಾರರಾಗಲು ಅಗರಿಯವರಿಗೆ ಪ್ರೇರಣೆಯೂ ಆಯಿತು.
ಅಗರಿಯವರು ಮೊದಲು ತಿರುಗಾಟ ಮಾಡಿದ್ದು ನಾರಾವಿ ಮೇಳದಲ್ಲಿ. ಮುಂದೆ ಅಗರಿಯವರಿಗೆ ಬೆಳೆಯಲು ಕಲಾಮಾತೆಯು ಅವಕಾಶಗಳನ್ನು ಅನುಗ್ರಹಿಸಿದ್ದಳು. ನಾಟಕ ತಂಡವನ್ನು ರಚಿಸಿ ನಿರ್ದೇಶಕನಾಗಿ ನಟನಾಗಿ ಹಣ ಸಂಪಾದಿಸದಿದ್ದರೂ, ಅನುಭವ ಸಂಪತ್ತನ್ನು ಗಳಿಸಿದರು. ಸಮರ್ಥ ನಿರ್ದೇಶಕನಾಗಲು ಈ ಅನುಭವವು ವೇದಿಕೆಯಾಯಿತು. ಅಗರಿ ಶ್ರೀನಿವಾಸ ಭಾಗವತರು ಖ್ಯಾತ ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರಿಂದ ಭಾಗವತಿಕೆ ಮತ್ತು ಕೂಡ್ಲು ಶಾನುಭಾಗರಿಂದ ಸಂಗೀತವನ್ನೂ ಕಲಿತರು. ಪ್ರತಿಭೆಯು ಬೆಳೆಯಲು ಇದೂ ಕಾರಣವಾಗಿತ್ತು. ಅನಿವಾರ್ಯ ಸಂದರ್ಭದಲ್ಲಿ ಕೀಚಕವಧೆ ಪ್ರಸಂಗವನ್ನು ಯಶಸ್ವಿಯಾಗಿ ಆಡಿಸಿ ಅಗರಿ ಶ್ರೀನಿವಾಸ ಭಾಗವತ ಎಂದು ಕರೆಸಿಕೊಂಡರು.
ಅಗರಿಯವರ ಅಣ್ಣ ಶಿವರಾಮ ರಾಯರೂ ಒಳ್ಳೆಯ ಹಾಡುಗಾರರಾಗಿದ್ದರು. ಮಂಗಳೂರಿನಿಂದ ಶ್ರೀ ಗುಣಪಾಲ ಶೆಟ್ಟರ ಆಶ್ರಯದಲ್ಲಿ ಅಗರಿ ಎಂಬಲ್ಲಿ ನೆಲೆಸಿದರು. (ಎಡಪದವು ಸಮೀಪದ ಊರು). ಅಗರಿಯಲ್ಲಿರುವಾಗಲೇ ಮೇಳದ ತಿರುಗಾಟವನ್ನು ಮಾಡಲು ಆರಂಭ. ಹಾಗಾಗಿಯೇ ಅಗರಿ ಎಂಬುದು ಇವರ ಹೆಸರಿನೊಂದಿಗೆ ಬೆಸೆದು ಶಾಶ್ವತವಾಯಿತು. ಅಲ್ಲಿರುವಾಗ ಅಗರಿಯವರು ಶಿಕ್ಷಕನಾಗಿಯೂ ಮಕ್ಕಳಿಗೆ ವಿದ್ಯಾದಾನ ಮಾಡಿದ್ದರು. ಕದ್ರಿ ಮೇಳದಲ್ಲಿರುವಾಗ ಮಂಗಳೂರಿನ ಕೊಡಿಯಾಲಗುತ್ತಿನ ಬಾಕಿಮಾರು ಗದ್ದೆಯಲ್ಲಿ ಇಪ್ಪತ್ತೆರಡು ದಿನಗಳ ಮಹಾಭಾರತ ಪ್ರಸಂಗಗಳ ಬಯಲಾಟ. ತನ್ನ ಕವಿತಾ ಶಕ್ತಿಯಿಂದ ಪದ್ಯಗಳನ್ನು ಸುಂದರವಾಗಿ ರಚಿಸಿ ಹಾಡಿ ಪ್ರದರ್ಶನಗಳನ್ನು ರಂಜಿಸುವಂತೆ ಮಾಡಿದರು. ಮುಂದಕ್ಕೆ ನಡೆದುದೆಲ್ಲಾ ಸಾಧನೆ, ಸಾಹಸವಾಗಿಯೇ ಕೊಂಡಾಡಲ್ಪಟ್ಟಿತು.
ಪ್ರಸಂಗ ರಚನೆಗೂ ಮುಂದಾದರು. ಅವರು ರಚಿಸಿದ ಒಟ್ಟು ಪ್ರಸಂಗಗಳು 26. ಅವುಗಳಲ್ಲಿ ಬ್ರಹ್ಮಕಪಾಲ, ದೇವೀಮಹಾತ್ಮ್ಯೆ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ, ವೆಂಕಟೇಶ್ವರ ಮಹಾತ್ಮ್ಯೆ, ತಿರುಪತಿ ಕ್ಷೇತ್ರ ಮಹಾತ್ಮ್ಯೆ, ಭಸ್ಮಾಸುರ ಮೋಹಿನಿ, ಮಹಾದೇವೀ ಲಲಿತೋಪಾಖ್ಯಾನ, ಸುಂದೋಪಸುಂದರ ಕಾಳಗ, ಅಂಧಕಾಸುರ ವಧೆ ಮೊದಲಾದವು ಅತ್ಯಧಿಕವಾಗಿ ಪ್ರದರ್ಶನಗೊಳ್ಳುತ್ತಿವೆ. ಧರ್ಮಸ್ಥಳ ಮೇಳದಲ್ಲಿದ್ದಾಗ ಶ್ರೀ ಮಂಜಯ್ಯ ಹೆಗ್ಡೆಯವರ ಸಲಹೆಯಂತೆ ಭರತೇಶ ವೈಭವ ಎಂಬ ಪ್ರಸಂಗವನ್ನೂ ಬರೆದರು. ಇವರು ಬರೆದ ಇನ್ನು ಕೆಲವು ಪ್ರಸಂಗಗಳ ಹಸ್ತಪ್ರತಿಗಳು ಲಭ್ಯವಾಗದೇ ಹೋಗಿತ್ತು. ತನ್ನಲ್ಲಿರುವ ಅಗಾಧವಾದ ಕವನ ರಚನಾ ಸಾಮರ್ಥ್ಯದಿಂದ ಪ್ರಸಂಗಗಳನ್ನು ರಚಿಸಿದರು.
ಅಗರಿಯವರ ಪ್ರಸಂಗಗಳ ಹಾಡುಗಳಲ್ಲಿರುವ ಸೌಂದರ್ಯವು ಅನುಪಮವಾದುದೆಂದು ವಿದ್ವಾಂಸರೂ ಕಲಾವಿದರೂ ಮೆಚ್ಚಿಕೊಂಡಿದ್ದಾರೆ. ಕದ್ರಿ, ಕೂಡ್ಲು, ಧರ್ಮಸ್ಥಳ, ಸುರತ್ಕಲ್ಲು ಮೊದಲಾದ ಮೇಳಗಳನ್ನು ಭಾಗವತರಾಗಿ ಮುನ್ನಡೆಸಿ, ಪ್ರಸಂಗಕರ್ತರಾಗಿಯೂ ಕಲಾಮಾತೆಯ ಸೇವೆಯನ್ನು ಮಾಡಿದರು. 1960ರಿಂದ ಮಂಗಳೂರಿನ ಬಲ್ಲಾಳರು ನೀಡಿದ ಕುಪ್ಪೆಪದವಿನ ಆರು ಎಕರೆ ಜಾಗದಲ್ಲಿ ವಾಸವಿದ್ದು ಕೃಷಿಕಾರ್ಯಗಳನ್ನೂ ಮಾಡಿದರು. ಕಟೀಲು ಶ್ರೀ ಭ್ರಮರಾಂಬೆಯ ಭಕ್ತರಾಗಿ ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ ಪ್ರಸಂಗದಲ್ಲಿ, ಬೆಳಗಿನ ಹೊತ್ತು ಬಪ್ಪನೆಂಬೋರ್ವ ಮುಸಲ್ಮಾನ ವ್ಯಾಪಾರಿ ತಪ್ಪದೆ ಕುಲಧರ್ಮವ || ಒಪ್ಪುವ ಮೂಲಿಕಾ ಪುರವರದೊಳು ಮೆರೆದಿರ್ಪವೇಳ್ಯದಿ ಮುದದಿ || ಈ ಹಾಡಿಗೆ ಶೇಣಿಯವರು ಬಪ್ಪಬ್ಯಾರಿಯಾಗಿ ಪ್ರವೇಶ. ಬಪ್ಪಬ್ಯಾರಿ ಮತ್ತು ಭಾಗವತ ಅಗರಿಯವರ ಸಂಭಾಷಣೆಗಳು ಬೆಳಗಿನ ಹೊತ್ತಾದರೂ ಪ್ರೇಕ್ಷಕರನ್ನು ಹಿಡಿದಿಡುತ್ತಿತ್ತು. ಆ ಸನ್ನಿವೇಶದ ವೀಡಿಯೋ ತುಣುಕು ಈಗಲೂ ಇದೆ. ಅಲ್ಲದೆ ವಾಟ್ಸಾಪ್‍ಗಳಲ್ಲಿ ಹರಿದಾಡುತ್ತಿರುವಾಗ ಎಲ್ಲರೂ ನೋಡಿ ಆನಂದಿಸಿದ್ದಾರೆ. ಆಗ ವಿಟ್ಲ ಜೋಯಿಸರು ಉಸ್ಮಾನ್ ಬ್ಯಾರಿಯಾಗಿ ಅಭಿನಯಿಸಿದ್ದರು.
ಕಟೀಲು ಒಂದನೇ ಮೇಳದಲ್ಲಿ ನಾನು ತಿರುಗಾಟ ಆರಂಭ ಮಾಡಿದಾಗ (1998-99) ಖ್ಯಾತ ಸ್ತ್ರೀಪಾತ್ರಧಾರಿ, ರಾಜ್ಯ ಪ್ರಶಸ್ತಿ ವಿಜೇತ ಡಾ| ಕೋಳ್ಯೂರು ರಾಮಚಂದ್ರ ರಾಯರು ಅಗರಿಯವರ ಬಗೆಗೆ ಹೇಳುತ್ತಿದ್ದ ಗೌರವದ ನುಡಿಗಳು ಈಗಲೂ ನೆನಪಿದೆ. ಅಲ್ಲದೆ ಅಗರಿಯವರು ಕೋಳ್ಯೂರು ಅವರಿಗೆ ಹೀಗೆ ಉಪದೇಶಿಸಿದ್ದರಂತೆ- ‘‘ರಂಗದಲ್ಲಿ ಯಾವಾಗಲೂ ಉದಾಸೀನನಾಗಬೇಡ. ಪಾತ್ರಗೌರವಗಳನ್ನು ಮರೆತು ಮಾತನಾಡಬೇಡ. ಆಡುವ ಮಾತುಗಳನ್ನು ಭಾವಪೂರ್ಣವಾಗಿ ಆಡು. ಅವಿದ್ಯಾವಂತರ ಚಪ್ಪಾಳೆಗೆ ಮರುಳಾಗದೆ ವಿದ್ವಾಂಸನೊಬ್ಬನ ಮೆಚ್ಚುಗೆಗೆ ಪಾತ್ರನಾಗು.’’ ಕಲಿಕಾಸಕ್ತರಲ್ಲಿ ಅದೆಂತಹ ಪ್ರೀತಿ, ಕಾಳಜಿ ಅಗರಿಯವರಿಗೆ!
ಪದವೀಧರ ಯಕ್ಷಗಾನ ಸಮಿತಿ ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಈ ಸಂಸ್ಥೆಗಳು ಅಗರಿಯವರ ಪ್ರಸಂಗಗಳನ್ನು ಸಂಪುಟಗಳಾಗಿ ಪ್ರಕಟಿಸಿವೆ. 1972ರಲ್ಲಿ ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಸನ್ಮಾನ, ಕಟೀಲು ಭ್ರಾಮರೀ ಸಂಘದ ಸನ್ಮಾನ, 1988ರಲ್ಲಿ ಬೆಳ್ತಂಗಡಿಯಲ್ಲಿ ಕಲಾಪೋಷಕ ಶ್ರೀ ಕೆ. ವಿ. ಮುಚ್ಚಿನ್ನಾಯರಿಂದ ಸನ್ಮಾನ ಮತ್ತು ‘ಯಕ್ಷಬ್ರಹ್ಮ’ ಅಭಿನಂದನಾ ಗ್ರಂಥ ಸಮರ್ಪಣೆ ಹೀಗೆ ಅನೇಕ ಸಂಘ-ಸಂಸ್ಥೆಗಳು, ಸಂಘಟಕರು ಅಗರಿ ಭಾಗವತರನ್ನು ಗೌರವಿಸಿರುತ್ತಾರೆ. ಹಿರಿಯರೂ, ಅವರ ಸಮಕಾಲೀನ ಕಲಾವಿದರಿಂದಲೂ ಮೆಚ್ಚುಗೆಯನ್ನು ಪಡೆದರು.
‘ಯಕ್ಷಗಾನ ಆಟದಲ್ಲಿ ಭಾಗವತರೇ ಸೂತ್ರಧಾರಿಗಳು ಎಂಬ ವಾಸ್ತವಿಕ ಸತ್ಯವನ್ನು ನಾನು ಸಾಕ್ಷಾತ್ತಾಗಿ ಅನುಭವಿಸಿದ್ದು ಅಗರಿಯವರ ಭಾಗವತಿಕೆಯಲ್ಲಿ’ ಎಂದು ಮಲ್ಪೆ ಶಂಕರನಾರಾಯಣ ಸಾಮಗರೂ, ‘ಧನಕನಕಾದಿಗಳನ್ನು ಸಂಪಾದಿಸುವಷ್ಟು ಸುಲಭವಲ್ಲ ಜನಮನಗಳನ್ನು ಸಂಪಾದಿಸುವುದೆಂಬ ಅನುಭವವುಳ್ಳ ಅಗರಿಯವರ ಶ್ರೀಮಂತಿಕೆಗೆ ತಲೆಬಾಗದಿರದು’ ಎಂದು ಶೇಣಿ ಗೋಪಾಲಕೃಷ್ಣ ಭಟ್ಟರೂ, ‘ಅಗರಿಯವರು ಯಕ್ಷಗಾನದ ಸೀಮಾಪುರುಷರೆಂದು’ ಶಿಮಂತೂರು ನಾರಾಯಣ ಶೆಟ್ಟರೂ, ‘ಅಗರಿ ಅವರಂತೆ ಭಾವವನ್ನು ಪರಿಣಾಮಕಾರಿಯಾಗಿ ತಲುಪಿಸಿದ ಭಾಗವತರು ಇನ್ನೊಬ್ಬರಿಲ್ಲ’ ಎಂದು ಡಾ| ಕೆ. ಎಂ. ನಂಬಿಯಾರರೂ, ‘ಅವರ ದಾರಿಗೆ ಅವರೇ ಮೀಸಲು. ಅದನ್ನು ಯಾರಾದರೂ ಅನುಕರಿಸಲು ಮುಂದಾದರೆ ಅದು ಅವರಿಗೇ ಕೇಡು. ಏಕೆಂದರೆ ಅಗರಿ ಅಗರಿಯೆ! ಅವರಿಗೆ ನಮಸ್ಕರಿಸುವುದೇ ನಮ್ಮ ಭಾಗದ ಕಾಯಕ’ ಎಂದು ದಾಮೋದರ ಮಂಡೆಚ್ಚರೂ, ‘ಅಗರಿಯವರಂತಹ ಕಲಾವಿದರನ್ನು ಪಡೆದು ಯಕ್ಷಗಾನ ಮಾತೆ ಸತ್ಪುತ್ರವತಿಯಾದಳು’ ಎಂದು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳೂ, ‘ಪ್ರಸಂಗ ಕಳೆಯೇರುವುದು ಭಾಗವತರಿಂದ ಎಂಬ ಮಾತು ಅಗರಿಯವರು ಇದ್ದಲ್ಲಿ ನೂರಕ್ಕೆ ನೂರು ಸತ್ಯ’ ಎಂದು ಅಳಿಕೆ ರಾಮಯ್ಯ ರೈಗಳೂ, ‘ತನ್ನ ಎಲ್ಲಾ ಭೌತಿಕ, ಬೌದ್ಧಿಕ ಸಾಧ್ಯತೆಗಳನ್ನು ಕೇವಲ ಯಕ್ಷಗಾನಕ್ಕೆ ದುಡಿಸಿಕೊಂಡ ಅಗರಿ ಆಚಾರ್ಯರಾಗಬೇಕಿತ್ತು. ಒಬ್ಬ ಅಗರಿಯವರಿಂದ ಶಿಷ್ಯತ್ವೇನ ನೂರಾರು ಗರಿಗಳು ಮೂಡಬೇಕಿತ್ತು’ ಎಂದು ಕೊರ್ಗಿ ವೆಂಕಟೇಶ ಉಪಾಧ್ಯಾಯರೂ ‘ಅಗರಿಯವರೊಂದಿಗೆ ಹಿಮ್ಮೇಳ ನುಡಿಸುತ್ತಿರುವಾಗ ಕೇಳಿಯೇ ಗಿರಿಜಾ ಕಲ್ಯಾಣ, ಬ್ರಹ್ಮಕಪಾಲ, ಶಕುಂತಲಾ ಪರಿಣಯ ಮೊದಲಾದ ಪ್ರಸಂಗಗಳು ನನಗೆ ಬಾಯಿಪಾಠವಾದವು. ಇನ್ನುಳಿದ ಯಾವ ಭಾಗವತರ ಒಡನಾಟದಲ್ಲೂ ಹೀಗಾಗಿಲ್ಲ’ ಎಂದು ನೆಡ್ಲೆ ನರಸಿಂಹ ಭಟ್ಟರೂ ‘ಅಗರಿ ಭಾಗವತರು ನನ್ನನ್ನು ಹಾಸ್ಯಪಾತ್ರಕ್ಕೆ ಬೇಕು ಬೇಕಾದಂತೆ ತಿದ್ದಿ ಪಳಗಿಸಿದರು’ ಎಂದು ರಸಿಕರತ್ನ ವಿಟ್ಲ ಜೋಯಿಸರೂ ‘ಅಗರಿಯವರ ಹಾಡುಗಾರಿಕೆ ಶ್ರಾವಕ ವರ್ಗಕ್ಕೊಂದು ಹಬ್ಬ. ಕೇಳುವಾಗ ಅಸ್ತಿತ್ವವನ್ನೇ ಮರೆತು ಭಾವಪರವಶರಾಗುತ್ತೇವೆ’ ಎಂದು ಕಡತೋಕಾ ಮಂಜುನಾಥ ಭಾಗವತರೂ ಅಗರಿಯವರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಸಂಗ ರಚನೆಯಲ್ಲಿ ವಿದ್ವಾಂಸರಾದ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಸಲಹೆ ಸಹಕಾರಗಳಿದ್ದುದನ್ನು ಅಗರಿ ಶ್ರೀನಿವಾಸ ಭಾಗವತರು ನೆನಪಿಸುತ್ತಿದ್ದರು. ವನಿತೆ ಮತ್ತು ಕವಿತೆಗಳು ಒಲಿದು ಬರಬೇಕು ಎಂಬಂತೆ ಕವಿತಾ ರಚನೆಯಲಿ ತಾನಾಗಿ ಒಲಿದುದರಿಂದ ಅಗರಿಯವರು ಪ್ರಸಂಗಕರ್ತರಾಗಿಯೂ, ಭಾಗವತರಾಗಿಯೂ, ಮೆರೆದರು. ಕುರಿಯ ವಿಠಲ ಶಾಸ್ತ್ರಿಗಳಿಂದ ತೊಡಗಿ ಅಗರಿಯವರು ನಿವೃತ್ತ ರಾಗುವ ವರೇಗೆ ಅನೇಕ ಕಲಾವಿದರು ಅವರ ಗರಡಿಯಲ್ಲಿ ಕಲಾಸೇವೆಯನ್ನು ಮಾಡಿದರು. ಯಕ್ಷಗಾನ ಕ್ಷೇತ್ರದಿಂದ ನಿವೃತ್ತರಾದರೂ ಆತ್ಮೀಯರು ಕರೆದರೆ ಭಜನಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರಂತೆ.
ಎಲ್ಲರೊಡನೆ ಬೆರೆಯುತ್ತಿದ್ದ ಅಗರಿಯವರು ಅಲಂಕಾರಪ್ರಿಯರಾಗಿಲ್ಲ. ಸರಳವಾಗಿ ಸಾಮಾನ್ಯರಂತೆ ಬದುಕಿದ್ದರು. ಆರೋಗ್ಯವಂತರಾಗಿ ಬದುಕಿನುದ್ದಕ್ಕೂ ಔಷಧೋಪಚಾರಗಳಿಂದ ಬಹಳ ದೂರ ಉಳಿದಿದ್ದರು. 1997ನೇ ಇಸವಿ, ತನ್ನ 91ನೆಯ ವಯಸ್ಸಿನಲ್ಲಿ ಅಗರಿಯವರು ಅಮರರಾದರು. ದಿ| ಅಗರಿ ಶ್ರೀನಿವಾಸ ಭಾಗವತರಿಗೆ ನಮನಗಳು. ದಿ| ಅಗರಿ ಶ್ರೀನಿವಾಸ ಭಾಗವತರ ಕುಟುಂಬದವರೆಲ್ಲಾ ಯಕ್ಷಗಾನ ನಂಟನ್ನು ಬಿಡದೆ ಉಳಿಸಿಕೊಂಡುದನ್ನೂ ನಾವು ಗಮನಿಸಬಹುದು. ಅವರ ಹಿರಿಪುತ್ರ ಇತ್ತೀಚೆಗೆ ಇಹಲೋಕವನ್ನು ತ್ಯಜಿಸಿದ ಅಗರಿ ರಘುರಾಮ ರಾಯರು ವಿದ್ಯಾವಂತರು. ಸರಕಾರೀ ಉದ್ಯೋಗದ ಜತೆ ಭಾಗವತಿಕೆಯನ್ನೂ ಮಾಡುತ್ತಿದ್ದರು. ಅಗರಿ ಶೈಲಿಯನ್ನು ಮುಂದುವರಿಸಿ ಅದರ ಕೀರ್ತಿಗೆ ಕಾರಣರಾದರು.
ತೀರ್ಥರೂಪರ ನಂತರ ಅನೇಕ ವರ್ಷಗಳ ಕಾಲ ಸುರತ್ಕಲ್ಲು ಮೇಳವನ್ನು ಮುನ್ನಡೆಸಿ ಸಮರ್ಥ ಭಾಗವತರೆಂದು ಖ್ಯಾತರಾದರು. ಬೇಡಿಕೆಯಲ್ಲಿರುವಾಗಲೇ ನಿವೃತ್ತರಾಗಿ ‘ಅಗರಿ ಎಂಟರ್‍ಪ್ರೈಸಸ್’ ಎಂಬ ಇಲೆಕ್ಟ್ರೋನಿಕ್ಸ್ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಆರಂಭಿಸಿ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದರು. ಮಂಗಳೂರು, ಸುರತ್ಕಲ್ಲು, ಎಡಪದವು, ಮೂಡುಬಿದಿರೆ ಮೊದಲಾದೆಡೆ ಈ ಸಂಸ್ಥೆಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ಟರು ಅಗರಿ ರಘುರಾಮ ಭಾಗವತರನ್ನು ಗುರುಗಳೆಂದು ಹೇಳಿ ಗೌರವಿಸುತ್ತಾರೆ. ಸುರತ್ಕಲ್ಲು ಮೇಳದಲ್ಲಿ ಒಡನಾಡಿಗಳಾಗಿ ಅನೇಕ ತಿರುಗಾಟ ಮಾಡಿದ್ದರು.
ಅಗರಿ ರಘುರಾಮ ಭಾಗವತರ ತಮ್ಮ ಅಗರಿ ಭಾಸ್ಕರರಾಯರು ಲೇಖಕನಾಗಿ ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಬರೆದ ಪ್ರಸಂಗಗಳಲ್ಲಿ ಹತ್ತು ಪ್ರಸಂಗಗಳು ಇತ್ತೀಚೆಗೆ ‘ಯಕ್ಷಗಾನ ಪ್ರಸಂಗ ದಶಕ’ ಎಂಬ ಸಂಪುಟವಾಗಿ ಪ್ರಕಟಣೆಗೊಂಡಿದೆ. ಅಗರಿ ರಘುರಾಮ ಭಾಗವತರ ಪುತ್ರರಾದ ಅಗರಿ ರಾಘವೇಂದ್ರ ರಾವ್ ಮತ್ತು ಅಗರಿ ವಾದಿರಾಜ ರಾವ್ ಇಬ್ಬರೂ ಯಕ್ಷಗಾನಾಸಕ್ತರು. ‘ಅಗರಿ ಎಂಟರ್‍ಪ್ರೈಸಸ್’ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಕಲಾಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಸಹಕರಿಸಿ, ಭಾಗವಹಿಸುವ ಗುಣವನ್ನು ಹೊಂದಿದವರು. ಅಂಟಿದ ಯಕ್ಷಗಾನದ ನಂಟನ್ನು ನಿರಂತರ ವಾಗಿ ಮುಂದುವರಿಸುತ್ತಿರುವ ಕಲಾಪ್ರಿಯ ಅಗರಿ ಕುಟುಂಬಕ್ಕೆ ಶುಭಾಶಯಗಳು. ಕಲಾಮಾತೆಯ ಅನುಗ್ರಹವು ನಿರಂತರ ವಾಗಿರಲಿ. ು
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions