ಲೇಖಕ: ಎಂ.ಶಾಂತರಾಮ ಕುಡ್ವ, ಮೂಡಬಿದಿರೆ
ಅಬ್ಬರಿಸಿ ಬೊಬ್ಬಿರಿವ ಮಹಿಷಾಸುರ
ಶ್ರೀ ದೇವಿಮಹಾತ್ಮೆ ಪ್ರಸಂಗದಲ್ಲಿ ಬರುವ `ಮಹಿಷಾಸುರ’ ಪಾತ್ರ ಯಕ್ಷಗಾನ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂಥಹುದು. ತನ್ನ ಪತಿಯಾದ ವಿದ್ಯುನ್ಮಾಲಿ ಯಕ್ಷರಾಜ ಪಿಂಗಳಾಕ್ಷನಿಂದ ಮಡಿದ ವಾರ್ತೆ ಕೇಳಿ ಮಾಲಿನಿಯು ತನ್ನ ಮಗನಾದ ಮಹಿಷಾಸುರನನ್ನು ಕರೆದಾಗ, ಸಭೆಯಿಂದಲೇ ಅಬ್ಬರದಿಂದ ಕೊಡುವ ಪ್ರವೇಶವನ್ನು ನೋಡಲೆಂದೇ ಬರುವ ಪ್ರೇಕ್ಷಕರು ಅಪಾರ. ಭೀಕರವಾದ, ಕೋಣವನ್ನೇ ಹೋಲುವ ಮುಖವರ್ಣಿಕೆ, ತಲೆಯ ಮೇಲೆರಡು ಉದ್ದ ಕೊಂಬು, ಕೈಯಲ್ಲಿ ದೊಂದಿ ಹಿಡಿದು ರಾಳದ ಪುಡಿ ಎರಚಿ, ಭೀಕರ ಬೆಂಕಿಯ ಜ್ವಾಲೆಯೊಂದಿಗೆ ಸಭಾ ಮಧ್ಯದಿಂದಲೇ ರಂಗಸ್ಥಳ ಪ್ರವೇಶಿಸುವ ಅಬ್ಬರ, ಬೈಹುಲ್ಲಿನ ರಾಶಿಗೆ ಬೆಂಕಿ ಕೊಟ್ಟು, ಜ್ವಾಲೆ ನಿರ್ಮಿಸುತ್ತಾ ಮಹಿಷನ ಹಿಂದೆ ‘ಸೂಟೆ’ ಹಿಡಿದ ಹತ್ತೈವತ್ತು ಯುವಕರ ಗುಂಪು – ಇವೆಲ್ಲಾ ವರ್ಣನಾತೀತ. ನೋಡಿದ ಪ್ರೇಕ್ಷಕರಿಗೆ ಮಾತ್ರ ನಿಲುಕುವ ನೋಟವಿದು.
‘ಶ್ರೀ ದೇವಿಮಹಾತ್ಮೆ’ ಪ್ರಸಂಗದ ಎಲ್ಲಾ ಪಾತ್ರಗಳೂ ಮಹತ್ವದ್ದೇ. ಅದರಲ್ಲೂ ಮಹಿಷಾಸುರ ಪಾತ್ರ ಯಕ್ಷಗಾನಪ್ರಿಯರಿಗೆ ರೋಮಾಂಚನ ಹುಟ್ಟಿಸುವಂಥಹದು. ಇದಕ್ಕೆ ಮುಖ್ಯ ಕಾರಣ, ತಲೆಯ ಮೇಲಿರುವ ನೀಳವಾದ ಕೋಡುಗಳು, ಕೋಣದಂತೆಯೇ ಅನುಕರಿಸುವ ಧ್ವನಿ ಹಾಗೂ ವಿಶಿಷ್ಠವಾದ ನಾಟ್ಯಪ್ರಸ್ತುತಿ. 1930ರಲ್ಲಿ ಕಾಸರಗೋಡಿನ ಕೊರಕ್ಕೋಡಿನಲ್ಲಿ ಏಳು ದಿನಗಳ ‘ಶ್ರೀ ದೇವಿಮಹಾತ್ಮೆ’ ಪ್ರಸಂಗ ಪ್ರಪ್ರಥಮವಾಗಿ ಪ್ರದರ್ಶನಗೊಂಡಾಗ ಮಹಿಷಾಸುರ ಪಾತ್ರದ ಮುಖವರ್ಣಿಕೆಯನ್ನು ಹೇಗೆ ಚಿತ್ರಿಸುವುದು ಎಂಬ ಕುತೂಹಲವಿತ್ತು.
ದಿತಿಪುತ್ರಿಯಾದ ಮಾಲಿನಿಯು ಮಹಿಷಿಯ (ಎಮ್ಮೆಯ) ರೂಪ ತಾಳಿ ಬ್ರಹ್ಮದೇವರ ಕುರಿತು ತಪಸ್ಸು ಮಾಡುತ್ತಾಳೆ. ಅವಳ ತಪೋಜ್ವಾಲೆಯಿಂದ ಅಲ್ಲೇ ಆಶ್ರಮದಲ್ಲಿ ತಪೋಮಗ್ನನಾಗಿದ್ದ ‘ಸುಪಾರ್ಶ್ವಕ’ ಎಂಬ ಋಷಿಗೆ ತಪೋಭಂಗವಾದಾಗ, ಮಾಲಿನಿಯು ಮಹಿಷಿ ರೂಪ ತಾಳಿದ ಕಾರಣ ಅವಳಿಗೆ ಹುಟ್ಟುವ ಮಗು ಕೋಣದ ರೂಪವೇ ತಾಳಲಿ ಎಂದು ಶಪಿಸುತ್ತಾನೆ. ಆ ಶಾಪವಾಕ್ಯದ ಫಲವೇ ಮಹಿಷಾಸುರನ ಜನನ. ಪ್ರಪ್ರಥಮ ಶ್ರೀ ದೇವಿಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ಮಾಡಿದವರು ಅಂದಿನ ಕಾಲದ ಸುಪ್ರಸಿದ್ಧ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಕುಂಞ ಎಂಬವರು. ಕುಂಞರವರು ಬಣ್ಣಗಾರಿಕೆಯಲ್ಲಿ ಅದ್ಭುತವಾದ ಕಲ್ಪನೆ ಹೊಂದಿದ ಕಲಾವಿದರಾಗಿದ್ದರು. ಅವರು ಮುಖವು ಕೋಣದಂತೆಯೇ ಕಾಣಲು ವಿಶಿಷ್ಟ ಮುಖವರ್ಣಿಕೆ ಮಾಡಿದ್ದರಂತೆ. ಎರಡೂ ಕಿವಿಯ ಮೇಲೆ ದಪ್ಪವಾದ ರಟ್ಟಿನಿಂದ ಮಾಡಿದ ಉದ್ದವಾದ ಎರಡು ಕೊಂಬುಗಳನ್ನು ಮಾಡಿ ಅದನ್ನು ಕಪ್ಪುಬಟ್ಟೆಯಿಂದ ಮುಚ್ಚಿ ಕೊಂಬೇ ಹೌದು ಎನ್ನುವಂತೆ ರಚಿಸಿ, ಎರಡು ದೊಡ್ಡದಾದ ಕಿವಿ ಗಳನ್ನೂ ಧರಿಸಿದ್ದರಂತೆ. ಅದನ್ನು ನೋಡಿದವರು ಇಂದು ಯಾರೂ ಇರಲಿಕ್ಕಿಲ್ಲ.
ಅದರ ನಂತರ 1941ರಲ್ಲಿ ಕಿನ್ನಿಗೋಳಿಯಲ್ಲಿ ಕಟೀಲು ಮೇಳದವರಿಂದ ದ್ವಿತೀಯ ಪ್ರಯೋಗವಾಗಿ ಶ್ರೀ ದೇವಿಮಹಾತ್ಮೆ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ನಂತರವೂ ಎರಡು ಮೂರು ಭಾರಿ ಈ ಪ್ರಸಂಗ ಪ್ರದರ್ಶನವಾಗಿದೆ. ಆಗ ಹಿಂದಿನ ಸುಪ್ರಸಿದ್ಧ ಬಣ್ಣದ ವೇಷಧಾರಿಗಳಾಗಿದ್ದ ಕೋಲುಳಿ ಸುಬ್ಬ, ಕಾಸರಗೋಡು ಸುಬ್ಬಯ್ಯ ಶೆಟ್ಟಿ, ಬಣ್ಣದ ಅಯ್ಯಪ್ಪರಂಥವರೂ ಮಹಿಷಾಸುರ ಪಾತ್ರ ಮಾಡಿದ್ದರಂತೆ. ಆದರೆ ಸುಮಾರು 1960ರ ನಂತರ ಕಟೀಲು ಮೇಳದವರಿಂದ ಈ ಪ್ರಸಂಗವು ಪ್ರದರ್ಶನ ನೀಡಲಾರಂಭಿಸಿತು. ಈ ಕಾಲಘಟ್ಟದಲ್ಲಿ ಮಹಿಷಾಸುರನ ಪಾತ್ರವು ವಿಜೃಂಭಿಸಲಾರಂಭವಾದುದು ಬಣ್ಣದ ಕುಟ್ಯಪ್ಪುರವರಿಂದ. ಕುಟ್ಯಪ್ಪರು ಮಹಿಷಾಸುರ ಪಾತ್ರಕ್ಕೆ ಹೊಸ ಆಯಾಮ ನೀಡಿದರು. ಬಣ್ಣದ ಕುಂಞರವರ ಮೂಲ ಚಿತ್ರಣದ ಆಧಾರದಲ್ಲೇ ಸ್ವಲ್ಪ ತಮ್ಮ ಕಲ್ಪನೆಯ ಮೂಲಕ ಬದಲಾವಣೆ ತಂದರು. ಆದರೂ ಮಹಿಷಾಸುರ ಪಾತ್ರಕ್ಕೆ ಮೂಲಚಿತ್ರಣ ಕೊಟ್ಟವರು ಬಣ್ಣದ ಕುಂಞರವರೇ ಎಂಬುದು ನಿರ್ವಿವಾದ. ಇಂದಿಗೂ ಕೆಲವೊಂದು ಬದಲಾವಣೆ ಹೊರತು ಪಡಿಸಿದರೆ, ಮಹಿಷಾಸುರ ಪಾತ್ರವು ಬಣ್ಣದ ಕುಂಞರವರ ಮೂಲಚಿತ್ರಣದ ಆಧಾರದಲ್ಲೇ ರಚಿತವಾಗಿದೆ. ಇದನ್ನು ಡಾ. ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಹಿರಿಯ ಯಕ್ಷಗಾನ ಕಲಾವಿದರೂ ಒಪ್ಪಿರುವ ವಿಷಯ. ಮಹಿಷಾಸುರ ಪಾತ್ರಚಿತ್ರಣದ ಕುರಿತಾಗಿ ಕೆಲವೊಂದು ಮಾಹಿತಿ ಒದಗಿಸಲು ಈ ಲೇಖನ.
ಮುಖವರ್ಣಿಕೆ : ಯಕ್ಷಗಾನದ ಯಾವುದೇ ಪಾತ್ರಗಳು ಗುರುತಿಸಲ್ಪಡುವುದು ಅದರ ಮುಖವರ್ಣಿಕೆಯ ಮೂಲಕ. ಮಹಿಷಾಸುರ ಪಾತ್ರದ ಮುಖವರ್ಣಿಕೆ ವಿಶಿಷ್ಠವಾಗಿದೆ. ಇಂದು ಶ್ರೀ ದೇವಿಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಮಾಡುವವರು ಸಾಮಾನ್ಯವಾಗಿ ಒಂದನೇ (ಪ್ರಧಾನ) ಬಣ್ಣದ ವೇಷಧಾರಿ. ಆದರೆ ಯಕ್ಷಗಾನದ ಪರಂಪರೆಯ ಸ್ಥಾನಮಾನದ ಪ್ರಕಾರ ಒಂದನೇ ಬಣ್ಣದ ವೇಷಧಾರಿಯು ಮಾಡಬೇಕಾ ದುದು ‘ಶುಂಭಾಸುರ’ ಪಾತ್ರ. ಆದರೆ ಮಹಿಷಾಸುರ ಪಾತ್ರವು ಪ್ರೇಕ್ಷಕರ ಆಕರ್ಷಣೆಯ ಪಾತ್ರವಾದ ಕಾರಣ, ಬಹುಷಃ ಒಂದನೇ ಬಣ್ಣದ ವೇಷಧಾರಿಗೆ ನೀಡಿರಬಹುದು. ಇಂದು ಮಹಿಷಾಸುರ ಪಾತ್ರ ಬಣ್ಣದ ವೇಷಧಾರಿಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈ ಪಾತ್ರಕ್ಕಾಗಿ ಕಲಾವಿದರೊಳಗೆ ಪೈಪೋಟಿಯೂ ನಡೆದಿರುವುದು, ಅದೇ ಕಾರಣದಿಂದ ಮೇಳ ಬಿಟ್ಟದ್ದು, ‘ರೊಟೇಷನ್’ ಆಧಾರದಲ್ಲಿ ಪಾತ್ರ ಹಂಚಿಕೆ ಎಲ್ಲವೂ ಮಹಿಷಾಸುರ ಪಾತ್ರದ ಹಿರಿಮೆಯನ್ನು ಸಾರುತ್ತಿದೆ.

ಮಹಿಷಾಸುರ ಪಾತ್ರದ ಮುಖ ವರ್ಣಿಕೆಯು ‘ಹಸಿಬಣ್ಣ’ದ ಸಾಲಿಗೆ ಸೇರುವ ವಿಶಿಷ್ಟ ಪಾತ್ರ. ಹಸಿಬಣ್ಣ ಎಂದರೆ, ಮೂಲಬಣ್ಣದ (ಯಕ್ಷಗಾನ ಪರಿಭಾಷೆಯಲ್ಲಿ ಛಾಯಾಬಣ್ಣ) ಲೇಪನವಿಲ್ಲದೇ (Foundation) ನೇರವಾಗಿ ಮುಖವರ್ಣಿಕೆ ಬಳಿಯುವ ಪಾತ್ರಗಳು. ಮಹಿಷಾಸುರನ ಮುಖವರ್ಣಿಕೆ ಮಾಡುವಾಗ ಪ್ರಥಮವಾಗಿ ಹಣೆಗೆ ಪಟ್ಟಿ ಕಟ್ಟಿ ಬಿಳಿ ನಾಮ ಹಾಕುತ್ತಾರೆ. (ಸಾಮಾನ್ಯವಾಗಿ ಬಣ್ಣಗಾರಿಕೆ ಮಾಡುವಾಗ ಪ್ರಥಮವಾಗಿ ನಾಮ ಹಾಕಿ, ನಂತರ ಬಣ್ಣ ಬಳಿಯುವುದು ಸಂಪ್ರದಾಯ). ನಂತರ ಹಣೆಯಿಂದ ಆರಂಭಿಸಿ ಕೆಳಮುಖವಾಗಿ ಮೂಗಿನ ಬದಿಯಿಂದ ಬಿಳಿಬಣ್ಣದ ಗೆರೆಯನ್ನು ಮೀಸೆಗಿಂತ ಮೇಲೆ ವರೆಗೆ ತಂದು ಕಿವಿಯ ತನಕ ಎರಡೂ ಬದಿಯಲ್ಲಿ ಬರೆಯುವುದು ಪ್ರಾರಂಭಿಕ ಹಂತ. ಇದು ಸಾಮಾನ್ಯವಾಗಿ ಸರ್ಪದ ಆಕಾರದಲ್ಲಿ ಇರುತ್ತದೆ. ನಂತರ ಈ ಬಿಳಿ ವರ್ಣದ ಎರಡೂ ಬದಿಗಳಲ್ಲಿ ಕಪ್ಪು ಬಣ್ಣದ ಲೈನಿಂಗ್ ಕೊಡಲಾಗುತ್ತದೆ. ನಂತರ ಹಣೆಗೆ ನಾಮ ಇಟ್ಟು ಎರಡೂ ಕಣ್ಣಿನ ಸುತ್ತಲೂ ಕಪ್ಪು ಬಣ್ಣ ಹಚ್ಚುತ್ತಾರೆ.
ಈ ಕಪ್ಪು ಬಣ್ಣ ಹಾಗೂ ಪ್ರಾರಂಭದಲ್ಲಿ ಬಳಿದ ಬಿಳಿಬಣ್ಣದ ನಡುವೆ ಕಣ್ಣಿನ ಮೇಲ್ಮುಖದ ವರೆಗೆ ಛಾಯಾಬಣ್ಣ ಬಳಿಯುತ್ತಾರೆ. ಈಗ ಇದು ನೋಡುವಾಗ ಕೋಣದ ಕಣ್ಣುಗಳ ಹಾಗೇ ಚಿತ್ರಿತವಾಗುತ್ತದೆ. ಮುಖದ ಉಳಿದ ಭಾಗಗಳಲ್ಲಿ ಅಂದರೆ ಹಣೆ, ಮೂಗು, ಮೂಗಿನ ಬದಿಗಳಲ್ಲಿ, ತುಟಿಗೆ ಕಪ್ಪು ಬಣ್ಣ ಲೇಪಿಸುತ್ತಾರೆ. ಗದ್ದಭಾಗಕ್ಕೆ ಮೂಲಬಣ್ಣದ ಗೆರೆಗಳನ್ನು ಎಳೆಯುತ್ತಾರೆ. ಸಾಮಾನ್ಯವಾಗಿ ಮಹಿಷಾಸುರನ ಮುಖವರ್ಣಿಕೆಗೆ ಇತರ ರಾಕ್ಷಸ ಬಣ್ಣದ ವೇಷಗಳಂತೆ ಪಾತ್ರಗಳಂತೆ ಅಕ್ಕಿಹಿಟ್ಟಿನ ‘ಚುಟ್ಟಿ’ ಇಡುವ ಕ್ರಮವಿಲ್ಲ. ಕೆಲವು ವೇಷಧಾರಿಗಳು ಬಿಳಿಬಣ್ಣದಲ್ಲೇ ಚುಟ್ಟಿ ಇಡುತ್ತಾರೆ. (ಆದರೆ ಹಿಂದೆ ಕೆಲವು ಮಹಿಷಾಸುರ ವೇಷಧಾರಿ ಗಳು ಅಕ್ಕಿಹಿಟ್ಟಿನ ಚುಟ್ಟಿ ಇಟ್ಟದ್ದೂ ಇದೆ). ಹಣೆಯ ನಾಮ ಯಾವ ರೀತಿ ಎಂಬುದು ಕಲಾವಿದರ ಕಲ್ಪನೆಗೆ ಬಿಟ್ಟ ವಿಚಾರ. ಇದು ಬಣ್ಣದ ವೇಷಧಾರಿಗಳ ಕಲಾಪ್ರಜ್ಞೆಗೆ ಉತ್ತಮ ಉದಾಹರಣೆಯಾಗಿ ಗುರುತಿಸಿಕೊಳ್ಳುತ್ತದೆ. ಬಣ್ಣದ ಕುಟ್ಯಪ್ಪುರವರು ಹಣೆಯಲ್ಲಿ ಅರ್ಧಚಂದ್ರಾಕಾರದ ನಾಮ ಇಟ್ಟರೆ, ಬಣ್ಣದ ಮಾಲಿಂಗರು ಕಸ್ತೂರಿ ತಿಲಕದೊಂದಿಗೆ ಮೂರು ಅಡ್ಡ ನಾಮ ಇಡುತ್ತಿದ್ದರು. ತ್ರಿಶೂಲ, ಆಟೀನ್, ಉರುಟು ನಾಮ ಇಡುವ ಕ್ರಮವೂ ಇದೆ. ಇಲ್ಲಿಗೆ ಮುಖವರ್ಣಿಕೆಯು ಕೋಣ ನಂತೆಯೇ ಕಾಣುತ್ತದೆ.
ವೇಷಭೂಷಣ : ಯಕ್ಷಗಾನದ ಮಹಿಷಾಸುರ ಪಾತ್ರದಲ್ಲಿ ಮುಖವು ಮಾತ್ರ ಕೋಣನ ರೂಪ. ಮುಖದಿಂದ ಕೆಳಗೆ ಮನುಷ್ಯ ರೂಪ. ಹಾಗಾಗಿ ವೇಷಭೂಷಣವು ಉಳಿದ ಬಣ್ಣದ ರಾಕ್ಷಸ ಪಾತ್ರಗಳಂತೆಯೇ. ಆದರೆ ವಸ್ತ್ರಭೂಷಣ ಕಪ್ಪು ವರ್ಣದ್ದೇ ಆಗಬೇಕು. ಅಂಗಿ, ಚಲ್ಲಣ, ಬಾಲ್ ಮುಂಡು, ಸೋಗೆವಲ್ಲಿ, ಎದೆಪದಕ, ವೀರಕಸೆ (ವೀರಗಾಸೆ), ಭುಜಕೀರ್ತಿ (ಭುಜದಂಬೆ) – ಎಲ್ಲವೂ ಕಪ್ಪು ಬಣ್ಣದವು.

ಕೊಂಬು, ಕಿವಿ ಹಾಗೂ ಕಿರೀಟ : ಈ ಪ್ರಸಾಧನ ಮಹಿಷಾಸುರ ಪಾತ್ರದ ಮುಖ್ಯ ಅಂಶ. ಇದರ ನಂತರ ಮಾತ್ರ ಮಹಿಷಾಸುರನ ಪಾತ್ರ ಪೂರ್ಣಗೊಳ್ಳುವುದು. ಚಿಟ್ಟೆಪಟ್ಟಿ ಕಟ್ಟಿದ ನಂತರ ಕಿವಿಯ ಬಳಿ ಉದ್ದವಾದ ಎರಡು ಕೊಂಬು, ಕೊಂಬಿನ ಹತ್ತಿರ ದೊಡ್ಡ ಕಿವಿ ಕಟ್ಟುತ್ತಾರೆ. ಕಿವಿಯ ಬಳಿ ಓಲೆ ಧರಿಸಿ, ತಲೆಗೆ ಕೇಸರಿಯನ್ನು (ಕೂದಲು) ಕಟ್ಟುತ್ತಾರೆ. ಹಣೆಯಿಂದ ಮೇಲ್ಮುಖವಾಗಿ ‘ಎದೆ ಪದಕ’ ಕಟ್ಟುತ್ತಾರೆ. ಇದೇ ಮಹಿಷಾಸುರನ ಕಿರೀಟ. ಯಕ್ಷಗಾನದಲ್ಲಿ ಇತರ ರಾಕ್ಷಸ ಪಾತ್ರಗಳಿಗಿರುವಂತೆ, ಮಹಿಷಾಸುರ ಪಾತ್ರಕ್ಕೆ ಬೇರೆ ಕಿರೀಟ ಬಳಸುವ ಕ್ರಮವಿಲ್ಲ ಎಂಬುದನ್ನು ಗಮನಿಸಬೇಕಾದ ಅಂಶ.
ಕೊಂಬು ಕಟ್ಟುವ ಕ್ರಮ : ಹಿಂದಿನ ಕಾಲದಲ್ಲಿ ಮಹಿಷಾಸುರನ ಕೊಂಬು ಕಟ್ಟುವುದು ಎಂದರೆ ಪರಿಶ್ರಮದ ಕೆಲಸವಾಗಿತ್ತು. ದಪ್ಪವಾದ ರಟ್ಟು ಅಥವಾ ಶರ್ಟ್‍ನ ಕಾಲರ್‍ಗೆ ಬಳಸುತ್ತಿದ್ದ ‘ಬಾಂಟೆಕ್ಸ್’ನಂಥಹ ವಸ್ತು ಉಪಯೋಗಿಸಿ ಒಂದೂವರೆಯಿಂದ ಎರಡು ಅಡಿಗಳಷ್ಟು ಉದ್ದವಾದ ಕೊಂಬು ರಚಿಸುತ್ತಿದ್ದರು. ಈ ಕೊಂಬನ್ನು ಗಟ್ಟಿಯಾಗಿ ಕಟ್ಟಿ, ಚಿಟ್ಟೆಪಟ್ಟಿ ಕಟ್ಟಿದ ನೆತ್ತಿಯ ಮೇಲೆ ಏಳೆಂಟು ಸೀರೆಗಳ ಅಟ್ಟೆಯನ್ನು ಇಟ್ಟು ಅದನ್ನು ಜಟ್ಟಿಯಿಂದ ಕಟ್ಟಿ ಕಪ್ಪು ವಸ್ತ್ರದಿಂದ ಮುಚ್ಚುತ್ತಿದ್ದರು. ಶಿರೋಭಾಗವು ಕೋಣದ ಶಿರದಂತೆ ಎತ್ತರವಾಗಿ ಕಾಣಲು ಈ ವಿಧಾನ. ಈ ಕೊಂಬುಗಳು ಜಾರಿ ಬೀಳದಂತೆ ಚಿಟ್ಟೆಪಟ್ಟಿಯ ಬಳಿ ಕೊಂಬಿಗೆ ತಾಗಿ ಕೋಲಿನ ಸಣ್ಣ ತುಂಡು ಕಟ್ಟುತ್ತಿದ್ದರು. ದಪ್ಪವಾದ ರಟ್ಟಿನಿಂದ ಮಾಡಿದ ಎರಡು ದೊಡ್ಡ ಕಿವಿಗಳನ್ನು ಕಟ್ಟಿ ಕಿವಿಯೋಲೆ ಧರಿಸುತ್ತಿದ್ದರು. ಕೊಂಬಿನ ಬಳಿ ತಲಾ ಎರಡು ಕೇಸರಿ ಹಾಗೂ ಹಿಂದಲೆಯಲ್ಲಿ ಒಂದು ಕೇಸರಿಯಂತೆ ಐದು ಕೇಸರಿ ಕಟ್ಟಿ, ಎದೆಪದಕವನ್ನು ಹಣೆಯಿಂದ ಹಿಂದಕ್ಕೆ ಕಿರೀಟದ ಹಾಗೆ ಕಟ್ಟುತ್ತಿದ್ದರು. ದಪ್ಪವಾದ ಮೀಸೆಯನ್ನು ಕಟ್ಟಿ ಗದ್ದದ ಕೆಳಗೆ ಗಡ್ಡ ಕಟ್ಟುವುದು.
ಇಲ್ಲಿಗೆ ವೇಷವು ಕೋಣದಂತೇ ಕಂಡು ಮಹಿಷಾಸುರ ವೇಷ ಪೂರ್ಣವಾಗುತ್ತದೆ. ಈ ಹಂತ ಮುಟ್ಟುವಾಗ ಮಹಿಷಾಸುರ ಪಾತ್ರಧಾರಿಯ ತಲೆಯ ಮೇಲೆ ಸುಮಾರು 8 ಕಿಲೋದಷ್ಟು ಭಾರ ಬೀಳುತ್ತಿತ್ತು. ಇಷ್ಟೆಲ್ಲಾ ಮಾಡಬೇಕಾದರೆ, ಕಲಾವಿದನ ಪರಿಣತಿಯೊಂದಿಗೆ ಪರಿಣತ ರಂಗ ಸಹಾಯಕರ ಸೇವೆಯೂ ಅಗತ್ಯವಿತ್ತು. ಈ ಕೆಲಸಕ್ಕೆ ಸುಮಾರು ಅರ್ಧ ಘಂಟೆಗಳಾದರೂ ಬೇಕಿತ್ತು. ಈ ರೀತಿಯ ವೇಷಭೂಷಣದಿಂದಾಗಿ ಪಾತ್ರವು ಮಹಿಷ (ಕೋಣ) ನಂತೆಯೇ ಕಾಣಿಸುತ್ತದೆ.
ಆದರೆ ಇಂದಿನ ಮಹಿಷಾಸುರ ಪಾತ್ರಕ್ಕೆ ಇಷ್ಟೆಲ್ಲಾ ಪರಿಶ್ರಮ ಬೇಕಿಲ್ಲ. ಈಗ ಕೊಂಬು ಕಟ್ಟುವ ಕೆಲಸವಿಲ್ಲ. ಈಗ ಮಹಿಷಾಸುರ ಪಾತ್ರಕ್ಕೆ ಬಳಸುವುದು ‘ರೆಡಿಮೇಡ್ ಟೊಪ್ಪಿ’ಯನ್ನು. ಕೇಸರಿ, ಕೊಂಬು, ಕಿವಿ ಹಾಗೂ ಎದೆಪದಕವನ್ನು ಈ ಟೊಪ್ಪಿ ಹೊಂದಿರುತ್ತದೆ.
ಇದನ್ನು ತಲೆಗೆ ಕಟ್ಟಿದರೆ ಆಯಿತು. ಈಗ ಏಳೆಂಟು ಸೀರೆಗಳ ಅಟ್ಟೆಯನ್ನು ನೆತ್ತಿಯ ಮೇಲೆ ಕಟ್ಟಲಿಕ್ಕೂ ಇಲ್ಲ. ಈ ಕೆಲಸಕ್ಕೆ ಹೆಚ್ಚೆಂದರೆ ಏಳೆಂಟು ನಿಮಿಷಗಳ ಶ್ರಮ ಸಾಕು. ಈ ಟೊಪ್ಪಿ ಹೆಚ್ಚು ಭಾರವೂ ಇಲ್ಲ. ಹೆಚ್ಚೆಂದರೆ ಒಂದೂವರೆ ಕಿಲೋ ಭಾರವಿದ್ದೀತು. ಏಕೆಂದರೆ ಈಗಿನ ಕೊಂಬುಗಳು ಫಾಮ್, ಫೈಬರ್, ಪೀಲಿ ಅಥವಾ ದಪ್ಪ ಕ್ಯಾನ್ವಾಸ್ ಗಳಿಂದ ಮಾಡಿರುವುದು. ಹಿಂದಿನ ಕಾಲದಲ್ಲಿ ಕೇಸರಿಯು ಸೆಣಬಿನ ಅಥವಾ ಬೇರೆ ನಾರುಗಳಿಂದ ಮಾಡುತ್ತಿದ್ದ ಕಾರಣ, ಒಂದೊಂದು ಕೇಸರಿಯೇ ಅರ್ಧ ಕೆ.ಜಿ.ಯಷ್ಟಿತ್ತು. ಈಗಿನ ಕೇಸರಿ ಹಗುರ ವಸ್ತುವಿನಿಂದ ಮಾಡಿರುವುದು ಹಾಗೂ ಕೇವಲ ಎರಡು ಕೇಸರಿಯನ್ನು ಮಾತ್ರ ಕಟ್ಟುವುದು. ಹಾಗೆಂದು ಮಹಿಷಾಸುರ ಪಾತ್ರ ನಿರ್ವಹಿಸುವುದು ಸುಲಭದ ಕೆಲಸವಲ್ಲ.
ಮಹಿಷಾಸುರ ಪಾತ್ರ ರಂಗಸ್ಥಳ ಪ್ರವೇಶಿಸುವುದು ಸಭೆಯ ಮೂಲಕ. ಸಭೆಯಿಂದಲೇ ದೊಂದಿ ಹಿಡಿದು ರಾಳದ ಪುಡಿ ಎರಚುತ್ತಾ ಅಬ್ಬರದಿಂದ, ಅಟ್ಟಹಾಸದಿಂದ ಬರಲೇ ಸುಮಾರು 10ರಿಂದ 15 ನಿಮಿಷಗಳು ಬೇಕು. ರಂಗಸ್ಥಳವು ಇಪ್ಪತ್ತು ಮೀಟರ್‍ನಷ್ಟಿರುವಾಗ ಕೈಗಳೆರಡನ್ನೂ ನೆಲಕ್ಕೆ ಊರಿ ನಾಲ್ಕು ಕಾಲಿನಿಂದ ಬರಬೇಕು. ನಂತರ ರಂಗಸ್ಥಳ ಪ್ರವೇಶಿಸಿದ ಕೂಡಲೇ ಏರು ಪದ್ಯಗಳ ವೀರಾವೇಶ ತೋರ್ಪಡಿಸಬೇಕು. ಕೊಂಬುಗಳನ್ನು ಅಲುಗಾಡಿಸುತ್ತಾ ಮಹಿಷಾಸುರನದ್ದೇ ಆದ ವಿಶಿಷ್ಟ ನಾಟ್ಯ ಮಾಡಿ, ಸಂಭಾಷಣೆಯ ನಡುವೆ ಕೋಣದಂತೆ ‘ಗುಟುರು’ ಹಾಕಬೇಕು. ಸುಮಾರು ಒಂದೂವರೆ ಘಂಟೆಗಳ ಕಾಲ ರಂಗಸ್ಥಳದಲ್ಲೇ ಕಳೆಯಬೇಕು.
ಮಹಿಷಾಸುರ ಪಾತ್ರಕ್ಕೆ ಮೂಲ ಚಿತ್ರಣ ಕೊಟ್ಟವರು ಬಣ್ಣದ ಕುಂಞರು. ಹಾಗೆಯೇ ಹಲವಾರು ಸುಪ್ರಸಿದ್ಧ ಕಲಾವಿದರು ಮಹಿಷಾಸುರ ಪಾತ್ರಕ್ಕಾಗಿ ಹೆಸರು ಗಳಿಸಿದ್ದಾರೆ. ಅದರಲ್ಲಿ ಪ್ರಮುಖರು ಕಟೀಲು ಮೇಳದಲ್ಲಿದ್ದ ಬಣ್ಣದ ಕುಟ್ಯಪ್ಪು. ಬಣ್ಣದ ಕುಂಞರ ಮೂಲಚಿತ್ರಣಕ್ಕೆ ತಮ್ಮ ಸ್ವಂತ ಕಲ್ಪನೆಯನ್ನು ಸೇರಿಸಿ ಮಹಿಷಾಸುರ ಪಾತ್ರಕ್ಕೆ ಚಿತ್ರಣ ನೀಡಿದವರು. ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು, ಪಕಳಕುಂಞ ಕೃಷ್ಣ ನಾಯ್ಕ, ತ್ರಿವಿಕ್ರಮ ಶೆಣೈ, ಕರವೋಳು ದೇರಣ್ಣ ಶೆಟ್ಟಿ, ಪುಳಿಂಚ ರಾಮಯ್ಯ ಶೆಟ್ಟಿ, ಪುಂಜಾಲುಕಟ್ಟೆ ಧರ್ಣಪ್ಪ ಶೆಟ್ಟಿ, ತನಿಯಪ್ಪ ಗೌಡ, ಮೂಡಬಿದ್ರೆ ಮಾಧವ ಶೆಟ್ಟಿ ಮೊದಲಾದವರ ಮಹಿಷಾಸುರ ಪಾತ್ರವು ಜನರಿಂದ ಮೆಚ್ಚುಗೆ ಗಳಿಸಿದವುಗಳು. ಇತ್ತೀಚಿಗೆ ರಂಗಸ್ಥಳದಲ್ಲೇ ರಂಗೈಕ್ಯರಾದ ಗೇರುಕಟ್ಟೆ ಗಂಗಯ್ಯ ಶೆಟ್ಟರ ಮಹಿಷಾಸುರ ತುಂಬಾ ಪ್ರಸಿದ್ಧ. ಕುಟ್ಯಪ್ಪುರ ಪರಂಪರೆಯಲ್ಲೇ ಮಹಿಷಾಸುರ ಪಾತ್ರ ನಿರ್ವಹಿಸಿದವರು.
ಪ್ರಸ್ತುತ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಧರ್ಮಸ್ಥಳ ಗೋಪಾಲ್ ಭಟ್, ಹರಿನಾರಾಯಣ ಭಟ್ ಎಡನೀರು, ಶಿವಪ್ರಸಾದ್ ಭಟ್ ಪೆರುವಾಜೆ, ಸತೀಶ್ ನೈನಾಡು, ಉಮೇಶ್ ಕುಪ್ಪೆಪದವು, ನಗ್ರಿ ಮಹಾಬಲ ರೈ, ಬಾಲಕೃಷ್ಣ ಮಿಜಾರು, ಸುರೇಶ ಕುಪ್ಪೆಪದವು, ಲಕ್ಷ್ಮಣ ಕೋಟ್ಯಾನ್, ಶಬರೀಶ ಮಾನ್ಯ, ಸುಬ್ರಾಯ ಪಾಟಾಳಿ, ಹರೀಶ್ ಮಣ್ಣಾಪು, ಶಶಿಕಿರಣ್ ಕಾವು, ಜಗದಾಭಿರಾಮ, ರವಿರಾಜ ಪನೆಯಾಲ, ಮನೀಶ್ ಪಾಟಾಳಿ, ಸಚಿನ್ ಪಾಟಾಳಿ, ರಾಮಕೃಷ್ಣ ನಂದಿಕೂರು ಮುಂತಾದವರು ಮಹಿಷಾಸುರ ಪಾತ್ರದಲ್ಲಿ ಸುಪ್ರಸಿದ್ಧರಾದವರು. ಮಹಿಳಾ ಕಲಾವಿದರೂ ಮಹಿಷಾಸುರ ಪಾತ್ರ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಪ್ರಸಿದ್ಧ ಹವ್ಯಾಸೀ ಮಹಿಳಾ ಕಲಾವಿದರಾದ, 2016ರ ಸಾಲಿನಲ್ಲಿ ಯಕ್ಷಗಾನದ ಸಾಧನೆಗಾಗಿ ‘ಕಿತ್ತೂರ ರಾಣಿ ಚೆನ್ನಮ್ಮ’ ಪ್ರಶಸ್ತಿ ಪುರಸ್ಕೃತರಾದ ಸುರತ್ಕಲ್ ಕಾಟಿಪಳ್ಳದ ಶ್ರೀಮತಿ ಪೂರ್ಣಿಮಾ ಯತೀಶ್ ರೈಯವರು ಸುಮಾರು 200ಕ್ಕೂ ಹೆಚ್ಚು ಭಾರಿ ಮಹಿಷಾಸುರ ಪಾತ್ರ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ದಿ. ಗಂಗಯ್ಯ ಶೆಟ್ಟರಿಂದಲೇ ‘ನನ್ನ ನಿರ್ವಹಣೆಯ ಮಟ್ಟದಲ್ಲೇ ಮಾಡಿದ್ದಿಯಲ್ಲ?’ ಎಂಬ ಪ್ರಶಂಸೆ ಗಳಿಸಿದ್ದಾರೆ. ಸಾಯಿಸುಮಾ, ರೇಶ್ಮಾ ಕಾರಂತರೂ ಒಂದೆರಡು ಭಾರಿ ಮಹಿಷಾಸುರ ಪಾತ್ರ ಮಾಡಿದ್ದಾರೆ

ಸುಪ್ರಸಿದ್ಧ ಭಾಗವತರಾದ ‘ರಂಗನಾಯಕ’ ಎನಿಸಿದ ಕುರಿಯ ಗಣಪತಿ ಶಾಸ್ತ್ರಿಯವರೂ, ತಮ್ಮ ಯೌವನದ ಕಾಲದಲ್ಲಿ ಮಹಿಷಾಸುರ ಪಾತ್ರದ ಮೂಲಕ ಮಿಂಚಿದ್ದನ್ನು ಈಗಲೂ ನೆನಪಿಸುವಂಥಹದು. ತಮ್ಮ ಅದ್ಭುತ ನಿರ್ವಹಣೆಯಿಂದ ಕುರಿಯರು ಮಹಿಷಾಸುರ ಪಾತ್ರದಲ್ಲಿ ಪ್ರಸಿದ್ಧರಾಗಿದ್ದರು. ಮಹಿಷಾಸುರ ಪಾತ್ರ ನಿರ್ವಹಣೆಯ ಬಗ್ಗೆ ಪಾತ್ರಧಾರಿಗಳ ಅನಿಸಿಕೆ :
ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ : ಸುಮಾರು 30 ವರ್ಷಗಳಿಂದ ಮಹಿಷಾಸುರ ಪಾತ್ರ ಮಾಡುತ್ತಿರುವ ಸದಾಶಿವ ಶೆಟ್ಟಿಗಾರ್ ಪ್ರಸ್ತುತ ಹನುಮಗಿರಿ ಮೇಳದ ಪ್ರಧಾನ ಬಣ್ಣದ ವೇಷಧಾರಿ. ಬಣ್ಣದ ವೇಷಗಳ ಕುರಿತು ಅಪಾರ ಜ್ಞಾನವುಳ್ಳ ಶೆಟ್ಟಿಗಾರ್‍ರು ಬಣ್ಣದ ಮಾಲಿಂಗರ ಶಿಷ್ಯ. ಬಣ್ಣದ ಮಾಲಿಂಗರೊಂದಿಗೇ ತಿರುಗಾಟ ಮಾಡಿದವರು. ಅವರ ಅನಿಸಿಕೆಯಂತೆ ‘‘ಹಿಂದಿನ ಮಹಿಷಾಸುರ ಪಾತ್ರ ನಿಧಾನ ಗತಿಯದ್ದಾಗಿತ್ತು. ಈಗಿನದ್ದು ಕ್ಷಿಪ್ರ ಗತಿಯದ್ದು. ಸಭೆಯಲ್ಲಿ ಅಟ್ಟಹಾಸ ತೋರಿದರೆ ಸಾಲದು. ಅದೇ ಕಸುವನ್ನು ರಂಗಸ್ಥಳದಲ್ಲಿಯೂ ತೋರಿಸಿದರೆ ಮಾತ್ರ ಪಾತ್ರಕ್ಕೆ ನ್ಯಾಯ ಒದಗಿಸಿ ದಂತಾಗುತ್ತದೆ. ರಂಗಸ್ಥಳ ಪ್ರವೇಶಿಸಿದ ಕೂಡಲೇ ಏರುಪದಗಳಿರುವ ಕಾರಣ, ಮೊದಲ ಪದ್ಯವನ್ನು ನಿಧಾನಗತಿಯಲ್ಲಿ ಕುಣಿದು, ಮುಂದಿನ ಪದ್ಯಗಳಿಗೆ ಹಂತಹಂತವಾಗಿ ಏರು ಕುಣಿತದೊಂದಿಗೆ ವೀರೋತ್ಕರ್ಷದ ನಿರ್ವಹಣೆ ತೋರಿದರೆ ಉತ್ತಮ’’
ಸತೀಶ್ ನೈನಾಡು : ಕಟೀಲು ನಾಲ್ಕನೇ ಮೇಳದ ಮಹಿಷಾಸುರ ಪಾತ್ರಧಾರಿಯಾದ ನೈನಾಡರು ಕೋಳ್ಯೂರು ರಾಮಚಂದ್ರ ರಾವ್‍ರವರ ಶಿಷ್ಯ. ಧರ್ಮಸ್ಥಳ ಗೋಪಾಲಭಟ್ಟರ ಶಿಷ್ಯರಾಗಿಯೂ ಬಣ್ಣದ ವೇಷಗಳ ನಡೆಯನ್ನು ಕರಗತ ಮಾಡಿಕೊಂಡವರು. ಮಹಿಷಾಸುರನ ಪಾತ್ರ ಮಾಡಿ 20 ವರ್ಷಗಳ ಅನುಭವ ಇರುವ ಇವರು ಮಹಿಷಾಸುರನ ಕೊಂಬು ರಚನೆಯಲ್ಲೂ ಪರಿಣತಿ ಹೊಂದಿದ್ದಾರೆ. ಅವರ ಅನಿಸಿಕೆ : ”ಮಹಿಷಾಸುರನ ಪ್ರವೇಶವು ಸಭೆಯಿಂದಲೇ ಆರಂಭವಾಗುವುದು ಸರಿಯೇ. ಆದರೂ ಹೆಚ್ಚು ಸಮಯವನ್ನು ಸಭೆಯಲ್ಲೇ ತೊಡಗಿಸುವುದು ಸರಿಯಲ್ಲ. ಮಾಲಿನಿಯು ಸೀರೆ ಬದಲಾಯಿಸಿ ಬರುವಷ್ಟರಲ್ಲಿ ಮಹಿಷಾಸುರ ರಂಗಸ್ಥಳ ತಲುಪಿದರೆ ಉತ್ತಮ. ಸಭೆಯಲ್ಲಿ ಮಾಡಿದ ಪ್ರಸ್ತುತಿಯು ಎಲ್ಲಾ ಪ್ರೇಕ್ಷಕರನ್ನು ತಲುಪುವುದಿಲ್ಲ. ಅದರ ಬದಲು ರಂಗಸ್ಥಳದಲ್ಲೇ ಬೇಕಾದಷ್ಟು ಕಸುಬು ಮಾಡುವ ಅವಕಾಶವಿದೆ. ಸಭೆಯಲ್ಲೇ ಹೆಚ್ಚಿನ ಸಮಯ ಕಳೆದರೆ, ರಂಗಸ್ಥಳದಲ್ಲಿ ಮಾಡುವ ಕೆಲಸದ ಸಮಯವೇ ಕಡಿತವಾಗುತ್ತದೆ. ಏಕೆಂದರೆ ಮಹಿಷವಧೆ ಇಂತಿಷ್ಟೇ ಸಮಯಕ್ಕೆ ಮುಗಿಯಬೇಕು ಎಂಬ ಮಿತಿಯಿದೆ. ನಂತರವೂ ತುಂಬಾ ಪಾತ್ರಗಳು ಬರಲಿಕ್ಕಿವೆಯಲ್ಲಾ?’’
ಉಮೇಶ್ ಕುಪ್ಪೆಪದವು : ಗಂಗಯ್ಯ ಶೆಟ್ಟರ ಶಿಷ್ಯರಾದ ಉಮೇಶ್ ಕುಪ್ಪೆಪದವು ಮಹಿಷಾಸುರ ಪಾತ್ರದಲ್ಲಿ ತಮ್ಮದೇ ಆದ ಛಾಪು ಹೊಂದಿದವರು. ಯುವಜನರ ಮೆಚ್ಚುಗೆಯ ಮಹಿಷಾಸುರ ಪಾತ್ರ ಇವರದ್ದು. ರಂಗಸ್ಥಳದಲ್ಲಿ ಹುಡಿ ಹಾರಿಸುವ ಪ್ರಸ್ತುತಿಯ ಇವರು ಕಟೀಲು ಮೇಳದಲ್ಲಿ ಎಂಟು ವರ್ಷಗಳ ಕಾಲ ಮಹಿಷಾಸುರ ಪಾತ್ರ ಮಾಡಿದ ಅನುಭವಿಗಳು. ಪ್ರಸ್ತುತ ಕಟೀಲು ಮೇಳದಲ್ಲಿದ್ದಾರೆ. ಅವರ ಅನಿಸಿಕೆ :
ನನ್ನ ಮಹಿಷಾಸುರ ಪಾತ್ರದ ನಿರ್ವಹಣೆಗೆ ಗುರುಗಳಾದ ಗಂಗಯ್ಯ ಶೆಟ್ಟರೇ ಆದರ್ಶ. ಸಭೆಯಲ್ಲಿ ತೋರುವಷ್ಟೇ ನಿರ್ವಹಣೆಯನ್ನು ರಂಗಸ್ಥಳದಲ್ಲೂ ನೀಡುತ್ತಿದ್ದೇನೆ. ಬೇಸಿಗೆ ಕಾಲದಲ್ಲೂ ಮಹಿಷಾಸುರ ನಿರ್ವಹಣೆ ಮಾಡುವಾಗ ನನಗೆ ಆಯಾಸ, ಸುಸ್ತು ಎಂದು ಇಷ್ಟರ ತನಕ ಅನಿಸಿದ್ದಿಲ್ಲ. ಇದಕ್ಕೆ ಶ್ರೀ ಭ್ರಮರಾಮಂಬಿಕೆಯ ಅನುಗ್ರಹ ಹಾಗೂ ಗುರುಗಳ ಆಶೀರ್ವಾದವೇ ಕಾರಣ’’ವೆಂದು ನನ್ನ ಅನಿಸಿಕೆಯಾಗಿದೆ.
ಹವ್ಯಾಸಿ ಮಹಿಳಾ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ : ಮಹಿಷಾಸುರ ಪಾತ್ರದ ಪ್ರಸ್ತುತಿಯಲ್ಲಿ ಪುರುಷ ಕಲಾವಿದರ ಸಮಾನ ರೀತಿಯ ನಿರ್ವಹಣೆ ತೋರುತ್ತಿರುವ ಶ್ರೀಮತಿ ಪೂರ್ಣಿಮಾರವರು 1995ರಿಂದಲೇ ಸುಮಾರು 200ಕ್ಕಿಂತಲೂ ಹೆಚ್ಚು ಭಾರಿ ಮಹಿಷಾಸುರ ಪಾತ್ರ ನಿರ್ವಹಿಸಿದ ಅನುಭವಿಗಳು. ಇವರು ರಮೇಶ್ ಶೆಟ್ಟಿ ಬಾಯಾರುರವರ ಶಿಷ್ಯೆ. ಅವರ ಅನಿಸಿಕೆ : “ಮಹಿಷಾಸುರ ಸಭೆಯಿಂದ ಪ್ರವೇಶ ಮಾಡುವ ಸನ್ನಿವೇಶ ನನಗೆ ಇಷ್ಟವಾದುದು. ಈ ಸಂದರ್ಭದಲ್ಲಿ ನನಗೆ ಇಷ್ಟರ ತನಕ ಆಯಾಸ ಎಂದು ತೋರಿದ್ದೇ ಇಲ್ಲ. ಆದರೂ ದೊಂದಿಗೆ ರಾಳದ ಹುಡಿ ಎರಚಿದಾಗ ಉಂಟಾಗುವ ಜ್ವಾಲೆಯಿಂದಾಗಿ ಕೆಲಕ್ಷಣ ಉರಿಯ ಅನುಭವವಾಗುತ್ತದೆ. ಆದರೆ ರಂಗಸ್ಥಳ ಪ್ರವೇಶಿಸಿದಾಕ್ಷಣ ಎಲ್ಲವೂ ಸರಿಯಾಗುತ್ತದೆ. ಮಹಿಷಾಸುರನ ಪ್ರಾರಂಭದ ಏರು ಪದ್ಯಗಳಿಗೆ ವಿಭಿನ್ನ ನಾಟ್ಯ ನೀಡುತ್ತಿದ್ದೇನೆ. ಇದಕ್ಕೆಲ್ಲಾ ಶ್ರೀದೇವರ ಕೃಪೆಯೇ ಕಾರಣ ಎಂದು ನನ್ನ ಅನಿಸಿಕೆ’’.
ಹತ್ತಿಪ್ಪತ್ತು ವರ್ಷಗಳ ಹಿಂದಿನ ತನಕ ಮಹಿಷಾಸುರ ಸಭೆಯಿಂದ ಬರುವಾಗ ಎದುರು ಸಾಲಿನಲ್ಲಿ ಕುಳಿತಿರುವ ಯಕ್ಷಗಾನದ ಸೇವಾ ಕರ್ತರು ಗಣ್ಯರ ಮೂಲಕ ಮಹಿಷಾಸುರ ಪಾತ್ರಧಾರಿಗೆ ಮಲ್ಲಿಗೆಯ ಮಾಲೆ ಹಾಕುವ ಸಂಪ್ರದಾಯವಿತ್ತು. ಇತ್ತೀಚೆಗೆ ಆ ಕ್ರಮವಿಲ್ಲ. ಮಹಿಷಾಸುರನ ವಧೆಯಾದಾಗ ಶಿರಚ್ಛೇದವಾಗಿದೆ ಎಂಬ ಸಂಕೇತವಾಗಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದಲ್ಲೇ ತನ್ನ ಕೊಂಬು, ಕಿವಿಗಳೊಂದಿಗೆ ಮೀಸೆ ಗಡ್ಡವನ್ನೂ ಕಳಚಿದಾಗ ಶ್ರೀದೇವಿ ಪಾತ್ರಧಾರಿಯು ತನ್ನ ಕೈಯಲ್ಲಿರುವ ತ್ರಿಶೂಲಕ್ಕೆ ಸಿಕ್ಕಿಸಿ ಸಿಂಹಕ್ಕೆ ಎಸೆಯುವ ದೃಶ್ಯವಿತ್ತು. ಈಗ ಟೊಪ್ಪಿಯನ್ನೇ ಕಳಚಿ ಕೊಡುವ ಕ್ರಮವಿದೆ. ಈ ಸನ್ನಿವೇಶಕ್ಕೆ ಕೆಲವಾರು ಕ್ಷಣಗಳು ಬೇಕಾಗುತ್ತದೆ. ಆದ ಕಾರಣ, ಪ್ರೇಕ್ಷಕರ ಗಮನ ಬೇರೆಡೆ ಹರಿಸಲು ಮಹಿಷಾಸುರ ಪಾತ್ರಧಾರಿಯು ಶ್ರೀದೇವಿಗೆ ಹೂವನ್ನು ಎಸೆಯುತ್ತಾರೆ. ಮಹಿಷಾಸುರ ವಧೆಯಿಂದ ದೇವತೆಗಳು ಸಂತುಷ್ಟರಾಗಿ ಪುಷ್ಪವೃಷ್ಟಿ ಮಾಡಿದರು ಎಂಬ ಸಂಕೇತವೂ ದೊರಕಿದಂತಾಗುತ್ತದೆ ಎಂಬುದೇ ಇದರ ಹಿನ್ನೆಲೆ. ು

ಪೂರಕ ಮಾಹಿತಿ : ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ , ಸತೀಶ್ ನೈನಾಡ್ , ಉಮೇಶ್ ಕುಪ್ಪೆಪದವು .
ಚಿತ್ರಕೃಪೆ : ಅಶ್ವಿತ್ ಶೆಟ್ಟಿ , ತುಳುನಾಡು, ಯಕ್ಷಮಾಧವ