ಪುರಾಣ ಕಾಲದಲ್ಲಿ ರಾಕ್ಷಸರು ಎಂಬ ವರ್ಗವು ಹೇಗಿದ್ದಿರಬಹುದು? ಅವರ ರೂಪವು ಯಾವ ರೀತಿಯದು? ದೇಹದ ಆಯ ಆಕಾರಗಳು ಹೇಗಿದ್ದಿರಬಹುದು? ಅವರ ವ್ಯವಹಾರಗಳೇನು? ಅವರಲ್ಲಿ ಅಡಗಿದ್ದ ಕ್ರೌರ್ಯದ ತೀವ್ರತೆ ಎಷ್ಟು ಆಳವಾಗಿತ್ತು? ಹೀಗೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಗಂಡುಕಲೆ ಎನಿಸಿದ ಯಕ್ಷಗಾನದಲ್ಲಿ ರಾಕ್ಷಸರನ್ನು ಅವರ ಸ್ವಭಾವಕ್ಕನುಗುಣವಾಗಿಯೇ ಹಿರಿಯರು ಅತ್ಯುತ್ತಮವಾಗಿ ಚಿತ್ರಿಸಿರುತ್ತಾರೆ.
ಅವರು ರಾಕ್ಷಸರನ್ನು ತಮ್ಮ ಮನಸ್ಸಿನಲ್ಲಿ ಕಲ್ಪಿಸಿ ಅದಕ್ಕೆ ಆಕಾರವನ್ನು ನೀಡಿರುತ್ತಾರೆ. ಕವಿಯು ತನ್ನ ಕಲ್ಪನೆಗಳಿಗೆ ಆಕಾರವನ್ನು ನೀಡುತ್ತಾನೆ. ಕವಿಹೃದಯ ಉಳ್ಳವರಿಗೆ ಮಾತ್ರ ಇದು ಸಾಧ್ಯ. ಈ ಬಗೆಗೆ ಯೋಚಿಸುವಾಗ ಯಕ್ಷಗಾನದ ಭೀಷ್ಮ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಮಾತುಗಳು ನೆನಪಾಗದೆ ಇರದು. “ದೇವ, ದಾನವ, ಮಾನವಾದಿ ವೇಷ ವಿಧಾನಗಳಲ್ಲಿ ಯಕ್ಷಗಾನಿಗಳು ಅನುಸರಿಸಿ ಬಂದ ರೀತಿ ಅದ್ಭುತ ರಮ್ಯವಾದುದು. ಪ್ರಪಂಚದ ಯಾವ ಕಲಾವಿದನಿಗೂ ಹೊಳೆಯದ ವರ್ಣ ವಿಭಜನೆ, ವೇಷಭೂಷಣಗಳ ಕಲ್ಪನೆ ಇಲ್ಲಿದೆ. ಇದು ವಿಶಿಷ್ಟ ರೂಪದಿಂದ, ಶುಚಿರುಚಿಗಳಿಂದ, ಸ್ವಂತಿಕೆಯಿಂದಲೇ ರಂಜಿಸುತ್ತಿರುವುದು ಅಪರಾಧವೂ ಅಲ್ಲ. ಅಪವಾದವೂ ಅಲ್ಲ. ಇದನ್ನು ರೂಪಿಸಿದ ಅಜ್ಞಾತ ಶಿಲ್ಪಿಗಳಿಗೆ ಋಣಿಗಳಾಗಿರೋಣ” ಶ್ರೀ ಶೇಣಿಯವರ ಮಾತುಗಳು ಅದೆಷ್ಟು ಅರ್ಥಪೂರ್ಣವಾಗಿವೆ.
ಹೀಗೆ ಯಕ್ಷಗಾನದಲ್ಲಿ ಎಲ್ಲಾ ವೇಷಗಳಿಗೂ ಹಿರಿಯರು ಸ್ಪಷ್ಟ ಆಕಾರವನ್ನು ನೀಡಿರುತ್ತಾರೆ. ಕಲಾವಿದರು ಅದನ್ನು ಅನುಸರಿಸಿಯೇ ಸಾಗುತ್ತಾರೆ. ಯಕ್ಷಗಾನದಲ್ಲಿ ಬಣ್ಣದ ವೇಷಧಾರಿಗಳು ರಾತ್ರಿ ರಂಗದಲ್ಲಿ ರಾಕ್ಷಸರಾಗಿ ಅಬ್ಬರಿಸಿದ್ದಾರೆ. ಪಾತ್ರದ ಸ್ವಭಾವವನ್ನು ಅರಿತು ಅದಕ್ಕೆ ಉಚಿತವಾಗಿಯೇ ಅಭಿನಯಿಸಿದ್ದಾರೆ. ಪ್ರಹ್ಲಾದನ ಮೊಮ್ಮಗ ಬಲಿಯ ಪಾತ್ರವನ್ನು ಬಣ್ಣದ ವೇಷದವರೇ ಮಾಡಿದರೂ ಅವನು ಸಾತ್ವಿಕ, ಹರಿಭಕ್ತನೆಂದು ತಿಳಿದು ಅಭಿನಯಿಸುತ್ತಾರೆ. ಆದರೂ ಹೆಚ್ಚಿನ ಎಲ್ಲಾ ಬಣ್ಣದ ವೇಷಗಳೂ ತಾಮಸೀ ಗುಣವನ್ನೇ ಹೊಂದಿದೆ. ಹೀಗೆ ರಾತ್ರಿ ರಂಗಸ್ಥಳದಲ್ಲಿ ರಾಕ್ಷಸರಾಗಿ ಮೆರೆದ ಅನೇಕ ಬಣ್ಣದ ವೇಷಧಾರಿಗಳಲ್ಲಿ ಶ್ರೀ ಚಂದ್ರಗಿರಿ ಅಂಬು ಅವರೂ ಒಬ್ಬರು.
ತೆಂಕುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಚಂದ್ರಗಿರಿ ಅಂಬು ಅವರ ಹುಟ್ಟೂರು ಕಾಸರಗೋಡು, ಕಾಂಞಂಗಾಡಿನ ಆಜಾನೂರು ಗ್ರಾಮ. ಶ್ರೀ ಚೋಯಿ ಪಾಟಾಳಿ ಮತ್ತು ಶ್ರೀಮತಿ ಕುಂಞಮ್ಮ ಹೆಂಗ್ಸು ದಂಪತಿಗಳ ಪುತ್ರನಾಗಿ ಜನನ. ಓದಿದ್ದು ಕೇವಲ ಮೂರನೇ ತರಗತಿ ವರೆಗೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ಮೇಳಕ್ಕೆ ಸೇರಿ ಯಕ್ಷಗಾನ ಪ್ರದರ್ಶನಗಳನ್ನು ನೋಡಿಯೇ ಕಲಿತವರು. ತನ್ನ ಹದಿಮೂರನೆಯ ವರ್ಷದಲ್ಲಿ ಕೊರಕ್ಕೋಡು ಮೇಳಕ್ಕೆ ಸೇರಿದ್ದರು. ಹದಿನಾರನೆಯ ವಯಸ್ಸು ಅಂದರೆ ತಿರುಗಾಟ ಆರಂಭಿಸಿ ಮೂರು ನಾಲ್ಕು ವರ್ಷಗಳಲ್ಲಿಯೇ ಪ್ರೇಕ್ಷಕರು ಗುರುತಿಸುವ ಹಂತಕ್ಕೆ ವೇಷಧಾರಿಯಾಗಿ ಬೆಳೆದಿದ್ದರು.
ಕಲಾ ಬದುಕಿನಲ್ಲಿ ಇವರದು ಕ್ಷಿಪ್ರ ಬೆಳವಣಿಗೆ. ಕೊರಕ್ಕೋಡು ಮೇಳದ ಬಳಿಕ ಕೂಡ್ಲು ಮನೆಯ ಯಜಮಾನರಾದ ಶ್ರೀ ಸದಾಶಿವ ಶ್ಯಾನುಭಾಗರ ಕಾಲದಲ್ಲಿ ಚಂದ್ರಗಿರಿ ಅಂಬು ಅವರು ಕೂಡ್ಲು ಮೇಳಕ್ಕೆ ಕೆಲಸಕ್ಕೆ ಸೇರಿದ್ದರು. ಊರಿಂದೂರಿಗೆ ಮೇಳದ ಪೆಟ್ಟಿಗೆಗಳನ್ನು ಹೊರುವ ಕೆಲಸ ಮಾಡಿದ್ದರು. ಸೂಕ್ಷ್ಮಮತಿಗಳಾದ ಶ್ಯಾನುಭಾಗರು ಅಂಬು ಅವರೊಳಗಿರುವ ಕಲಾವಿದನನ್ನು ಗುರುತಿಸಿದ್ದರು. ವೇಷಧಾರಿಗಳ ಗೈರುಹಾಜರಿಯಲ್ಲಿ ವೇಷ ಮಾಡಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.
ಮಾಂಬಾಡಿ ನಾರಾಯಣ ಭಾಗವತರ ನಿರ್ದೇಶನ, ಪ್ರೋತ್ಸಾಹ. ಬಣ್ಣದ ಅಯ್ಯಪ್ಪ ಅವರಿಂದ ಕಲಿಕೆ. ಬಳಿಕ ಕಟೀಲು ಮೇಳದಲ್ಲಿ ಹದಿನೆಂಟು ತಿರುಗಾಟ. ಬಳಿಕ ಹಲವು ವರ್ಷಗಳ ಕಾಲ ಕುಂಡಾವು (1), ಮುಲ್ಕಿ (9), ಕೂಡ್ಲು (5) ಮೇಳಗಳಲ್ಲಿ ವ್ಯವಸಾಯ. ಬಳಿಕ ನಿವೃತ್ತಿಯ ವರೆಗೂ ಶ್ರೀ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡಿರುತ್ತಾರೆ. ಚಂದ್ರಗಿರಿ ಅಂಬು ಮತ್ತು ಬಣ್ಣದ ಮಾಲಿಂಗ ಅವರುಗಳು ರಾವಣ – ಮೈರಾವಣ ಪಾತ್ರಗಳಲ್ಲಿ ಜತೆಯಾಗಿ ಅಭಿನಯಿಸಿ ಖ್ಯಾತಿಯನ್ನು ಗಳಿಸಿದ್ದರು.
ರಾವಣ, ಮಹಿರಾವಣ, ಕುಂಭಕರ್ಣ, ವೀರಭದ್ರ, ಶೂರಪದ್ಮ, ರುದ್ರಭೀಮ, ಕಿರಾತ, ವೀರಭದ್ರ, ತಾರಕಾಸುರ, ಶುಂಭ, ಪುರುಷಾಮೃಗ ಅಲ್ಲದೆ ಎಲ್ಲಾ ಹೆಣ್ಣು ಬಣ್ಣದ ಪಾತ್ರಗಳಲ್ಲೂ ಚಂದ್ರಗಿರಿ ಅಂಬು ಅವರು ಪ್ರಸಿದ್ಧಿಯನ್ನು ಪಡೆದಿದ್ದರು. ಸರಳ ನಿರಾಡಂಬರದ ಸಜ್ಜನ ವ್ಯಕ್ತಿಯಾಗಿ ಬದುಕಿದವರು. ರಾತ್ರಿ ರಂಗದಲ್ಲಿ ರಾಕ್ಷಸನಾಗಿ ಅಬ್ಬರಿಸಿದರೂ ನಿಜ ಬದುಕಿನಲ್ಲಿ ಸಾತ್ವಿಕರಾಗಿ ವ್ಯವಹರಿಸಿದವರು. ಸುಮಾರು ಅರುವತ್ತೆರಡು ವರ್ಷಗಳ ಕಲಾಸೇವೆಯನ್ನು ಮಾಡಿರುತ್ತಾರೆ.
ಮುಖವರ್ಣಿಕೆಯನ್ನು ಸಿದ್ಧಗೊಳಿಸುವಲ್ಲಿ ಇವರೊಬ್ಬ ಚತುರ ಚಿತ್ರಕಾರನಾಗಿದ್ದರು.1987ರ ಸುಮಾರಿಗೆ ಇವರು ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಚಂದ್ರಗಿರಿ ಅಂಬು ಅವರ ಪತ್ನಿ ಶ್ರೀಮತಿ ಕುಂಞಿಪ್ಪಾಟಿ . ನಿವೃತ್ತಿ ನಂತರ ಆಜಾನೂರು ಕೆಳಕ್ಕುಂಕರ ಮನೆಯಲ್ಲಿ ವಾಸವಾಗಿದ್ದರು. 1999 ನವೆಂಬರ್ 25ಕ್ಕೆ ಶ್ರೀ ಚಂದ್ರಗಿರಿ ಅಂಬು ಅವರು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಇದಕ್ಕೆ ನಾಲ್ಕು ದಿನ ಮೊದಲು ನವೆಂಬರ್ 21ರಂದು ಉಡುಪಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರನ್ನು ಮುಂದಿಟ್ಟುಕೊಂಡು ಚಂದ್ರಗಿರಿ ಅಂಬು ಅವರ ನಿವಾಸಕ್ಕೆ ತೆರಳಿ ಪ್ರಸ್ತುತ ಸಾಲಿನ ಡಾ| ಬಿ.ಬಿ.ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಅವರಿಗೆ ಅರ್ಪಿಸಿದ್ದರು.
ನಾನು ಯಕ್ಷಗಾನ ವಿದ್ಯೆಯನ್ನು ಮಾಂಬಾಡಿ ನಾರಾಯಣ ಭಾಗವತರಿಂದಲೂ, ಹಿರಿಯ ಕಲಾವಿದರ ಒಡನಾಟದಿಂದಲೂ ಕಲಿತೆನೆಂದು ಶ್ರೀ ಚಂದ್ರಗಿರಿ ಅಂಬು ಅವರು ಹೇಳುತ್ತಿದ್ದರು. ಶ್ರೀಯುತರ ಜೀವಿತಾವಧಿ 1912- 1999. ಇವರು 1999ರಲ್ಲಿ ತನ್ನ ಎಂಬತ್ತೇಳನೆಯ ವಯಸ್ಸಿನಲ್ಲಿ ನಿಧನರಾದರೆಂಬ ಮಾಹಿತಿ ಇರುವುದರಿಂದ ಇವರು 1912ರಲ್ಲಿ ಜನಿಸಿದರೆಂದು ನಿರ್ಣಯಿಸಬಹುದು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions