ಇತ್ತೀಚಿಗಿನ ಕೆಲವು ಸಿನಿಮಾಗಳಲ್ಲಿ ಯಕ್ಷಗಾನ ಕಲಾವಿದರನ್ನು ಹಾಗೂ ಯಕ್ಷಗಾನ ಹಿಮ್ಮೇಳ ಕಲಾವಿದರನ್ನು (ಭಾಗವತರನ್ನೂ ಸೇರಿಸಿ) ಬಳಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಹಿಂದೆ 1960-70, 1970-80ರ ದಶಕದಲ್ಲಿ ಈ ಪದ್ಧತಿ ಇರಲಿಲ್ಲವೆಂದೇ ಹೇಳಬಹುದು. ಇದಕ್ಕೆ ಕಾರಣ ಆ ಕಾಲದ ಸಿನಿಮಾ ನಿರ್ದೇಶಕರು, ಸಂಗೀತ ನಿರ್ದೇಶಕರು ತೆಲುಗು-ತಮಿಳು ಮೂಲದವರಾಗಿದ್ದರು.
ಉದಾಹರಣೆಗೆ ಜಿ. ಕೆ. ವೆಂಕಟೇಶ್, ಉಪೇಂದ್ರಕುಮಾರ್, ಟಿ. ಜಿ. ಲಿಂಗಪ್ಪ ಮೊದಲಾದವರು. ನಿರ್ದೇಶಕರಲ್ಲಿಯೂ ಕೆಲವರು ಈ ಕಾರಣಕ್ಕೇ ಯಕ್ಷಗಾನವನ್ನು ಬಳಸಿರಲಿಲ್ಲವೆಂದೇ ಹೇಳಬಹುದು. ಮಾತ್ರವಲ್ಲದೇ ಆ ಕಾಲದ ಸಿನಿಮಾಗಳೆಲ್ಲವೂ ಅಂದಿನ ಮದ್ರಾಸ್(ಇಂದಿನ ಚೆನ್ನೈ)ನಲ್ಲಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದುದು ಇನ್ನೊಂದು ಕಾರಣವೂ ಇರಬಹುದು. ಅವರೆಲ್ಲರಿಗೂ ಕರಾವಳಿಯ ಪರಿಚಯ ಇಲ್ಲದೆಯೋ ಅಥವಾ ಯಕ್ಷಗಾನ ಕಲೆಯ ಬಗ್ಗೆ ಮಾಹಿತಿ ಇಲ್ಲದಿರುವುದೂ ಸಹ ಇದಕ್ಕೆ ಕಾರಣವಿರಬಹುದು.
ಆದರೆ ಇತ್ತೀಚಿನ ದಶಕಗಳಲ್ಲಿ ಸಿನಿಮಾ ಹಾಗೂ ಸಿನಿಮಾ ಸಂಗೀತದಲ್ಲಿ ಯಕ್ಷಗಾನ ಬಳಕೆ ಮಾಡುತ್ತಿರುವುದು ಒಂದು ವಿಶೇಷವಾಗಿ ಕಾಣುತ್ತಿದ್ದೇವೆ. ಸುನೀಲ್‍ಕುಮಾರ್ ದೇಸಾಯಿ ಅವರ `ಪರ್ವ’ ಸಿನಿಮಾದಲ್ಲಿ ಬಡಗುತಿಟ್ಟಿನ ಇಡಗುಂಜಿ ಮೇಳವನ್ನು ಪೂರ್ಣವಾಗಿ ತೊಡಗಿಸಿಕೊಂಡದ್ದನ್ನು ಕಾಣಬಹುದು. ವಿಷ್ಣುವರ್ಧನ್ ನಾಯಕ ನಟನಾಗಿ, ಪ್ರೇಮಾ ನಾಯಕಿಯಾಗಿ ಅಭಿನಯಿಸಿದ ಈ ಸಿನಿಮಾದಲ್ಲಿ ಬಡಗುತಿಟ್ಟು ಯಕ್ಷಗಾನದ ಮೇರುಕಲಾವಿದ ಕೆರೆಮನೆ ಶಂಭು ಹೆಗಡೆಯವರ ಪ್ರಬುದ್ಧ ಅಭಿನಯ ಸಿನಿಮಾ ಕಲಾವಿದರಿಗಿಂತ ತಾನೇನೂ ಕಡಿಮೆಯಿಲ್ಲ ಎಂಬಂತೆ ನಟಿಸಿದ್ದು ಆ ಸಿನಿಮಾದ ಹೆಗ್ಗಳಿಕೆಯೂ ಆಗಿದೆ.
1962ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಚಿತ್ರದಲ್ಲಿ ಶ್ರೀ ಶಂಕರ್ ಸಿಂಗ್ ಅವರು(ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ತಂದೆ) ಯಕ್ಷಗಾನ ಪ್ರಸಂಗವನ್ನು ಸಿನಿಮಾದಲ್ಲಿ ಪ್ರಥಮವಾಗಿ ಬಳಸಿಕೊಂಡರು. ಪ್ರತಿಮಾದೇವಿ ನಾಯಕಿಯಾಗಿ ಅಭಿನಯಿಸಿದ್ದರು. ಇತ್ತೀಚಿಗಿನ ಎ. ಎಂ. ಆರ್. ರಮೇಶ್ ನಿರ್ದೇಶನದ ಮಿಂಚಿನ ಓಟ ಮತ್ತು ಇಂದ್ರಧನುಷ್ (ಸಂಗೀತ: ವಿ. ಮನೋಹರ್), ಗಾಳಿಪಟ (ಸಂಗೀತ: ವಿ. ಹರಿಕೃಷ್ಣ), ರಂಗಿತರಂಗ (ಸಂಗೀತ ಮತ್ತು ನಿರ್ದೇಶನ: ಅನೂಪ್ ಭಂಡಾರಿ), ಬಣ್ಣದ ವೇಷ, ನಮ್ಮೂರ ಮಂದಾರ ಹೂವೇ (ಇಳಯರಾಜ) ಸಿನಿಮಾಗಳಲ್ಲಿ ಸಹನರ್ತಕರಾಗಿ ಯಕ್ಷಗಾನ ವೇಷಗಳನ್ನು ಬಳಸಿಕೊಳ್ಳಲಾಗಿದೆ.
ಹಲವಾರು ತುಳು ಸಿನಿಮಾಗಳಲ್ಲೂ ಯಕ್ಷಗಾನ ಕಲಾವಿದರು ಮತ್ತು ಹಿಮ್ಮೇಳ ಕಲಾವಿದರನ್ನು ಬಳಸಲಾಗಿದೆ. ದಕ್ಷಿಣ ಕನ್ನಡದಲ್ಲಿ ತುಳುವೇ ಪ್ರಧಾನ ಭಾಷೆಯಾಗಿದ್ದು ಯಕ್ಷಗಾನದ ತವರೂರೆನಿಸಿದೆ. ಆನಂದ್ ಪಿ. ರಾಜ್ ಅವರು ನಿರ್ದೇಶಿಸಿದ ಕೋಟಿ ಚೆನ್ನಯ ಎರಡನೇ ಬಾರಿ ತುಳುವಿನಲ್ಲಿ ತಯಾರಾಗಿದ್ದು ಇದರಲ್ಲಿ ಪದ್ಯಾಣ ಗಣಪತಿ ಭಟ್ಟರಿಂದ ಯಕ್ಷಗಾನದ ಹಾಡುಗಳನ್ನು ರಚಿಸಿ ಹಾಡಿಸಿದ್ದೇನೆ.
ನಂತರದ ದಿನಗಳಲ್ಲಿ ನಾನು (ವಿ. ಮನೋಹರ್) ಗುರುಕಿರಣ್, ಮಣಿಕಾಂತ್ ಕದ್ರಿ, ಗಿರಿಧರ್ ದಿವಾಣ ಮುಂತಾದವರು ದಕ್ಷಿಣ ಕನ್ನಡದವರೇ ಆಗಿದ್ದು ಯಕ್ಷಗಾನದ ಮೇಲೆ ವಿಶೇಷ ಆಸಕ್ತಿ ಮತ್ತು ಕಾಳಜಿ ಇರುವುದರಿಂದ ಸಿನಿಮಾಗಳಲ್ಲಿ ಯಕ್ಷಗಾನ ಕಲಾವಿದರು ಮತ್ತು ಭಾಗವತರನ್ನು ಬಳಸಿಕೊಂಡಿದ್ದೇವೆ.
ನನ್ನ ಸಿನಿಮಾಗಳಲ್ಲಿ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯ, ಪದ್ಯಾಣ ಗಣಪತಿ ಭಟ್ಟ, ಪಟ್ಲ ಸತೀಶ ಶೆಟ್ಟಿ ಮೊದಲಾದವರ ಹಾಡುಗಾರಿಕೆಯನ್ನು ಬಳಸಿಕೊಂಡಿದ್ದೇನೆ. ಆದರೆ ಯಕ್ಷಗಾನ ಭಾಗವತಿಕೆಗೂ ಸಿನಿಮಾ ರಾಗ ಸಂಯೋಜನೆಗೂ ಯಾವುದೇ ರೀತಿಯಲ್ಲಿ ಹೊಂದಾಣಿಕೆಯಾಗದೇ ಇರುವುದರಿಂದ ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಅವರ ಹಿಮ್ಮೇಳದೊಂದಿಗೆ ಗಾಯನವನ್ನು ಅವರ ಮನೋಧರ್ಮಕ್ಕನುಗುಣವಾಗಿ ಹಾಡಿಸಿದ್ದೇನೆ. ಕಾರಣ ಸಿನಿಮಾದಲ್ಲಿ ಬಳಸುವ ರಾಗ-ತಾಳಗಳೂ, ಪಲ್ಲವಿ-ಚರಣಗಳೂ ಯಕ್ಷಗಾನ ಹಾಡುಗಳಂತಿಲ್ಲವೆನ್ನಬಹುದು. ಮಾತ್ರವಲ್ಲದೇ ಯಕ್ಷಗಾನ ಕಲಾವಿದರು ಯಾರೂ ಸಿನಿಮಾ ಕಲಾವಿದರಾಗಲಿಲ್ಲ. ಭಾಗವತರೂ ಯಾವುದೇ ಸಿನಿಮಾ ಹಿನ್ನೆಲೆ ಗಾಯಕರೂ ಆಗಲಿಲ್ಲ. ಪೂರ್ಣ ಪ್ರಮಾಣದಲ್ಲಿ ಯಕ್ಷಗಾನವನ್ನು ಸಿನಿಮಾದಲ್ಲಿ ಬಳಸಲೂ ಬರುವುದಿಲ್ಲ. ಇದೆಲ್ಲವನ್ನು ಅವಲೋಕಿಸಿದರೆ ಕೇವಲ ನಮ್ಮ ಆಸಕ್ತಿಗೋಸ್ಕರ ಯಕ್ಷಗಾನವನ್ನು ಸಿನಿಮಾದಲ್ಲಿ ಬಳಸುತ್ತಿದ್ದೇವೆ ಎನ್ನಬಹುದು.
ಯಕ್ಷಗಾನದ ಭಾಷೆ:
ಯಕ್ಷಗಾನಕ್ಕೆ ಭಾಷೆಯ ಪರಿಮಿತಿ ಇಲ್ಲವೆನ್ನಬಹುದು. ಶುದ್ಧ ಕನ್ನಡದಲ್ಲಿ ಸ್ಪಷ್ಟ ಉಚ್ಚಾರ ಹೊಂದಿದ ಯಕ್ಷಗಾನದ ಭಾಗವತಿಕೆಯೂ ಅರ್ಥಗಾರಿಕೆಯೂ ಕೇಳಲು ಅತ್ಯಂತ ಸೊಗಸು ಎನ್ನಬಹುದು. ಪ್ರಾಯೋಗಿಕವಾಗಿ ಇತ್ತೀಚಿಗಿನ ಹಲವಾರು ಭಾಷೆಗಳಲ್ಲಿ ಉದಾಹರಣೆಗೆ ಮಲಯಾಳಂ, ತುಳು, ಕುಂದಾಪುರ ಕನ್ನಡ, ಕೊಂಕಣಿ ಭಾಷೆಗಳಲ್ಲಿ ಯಕ್ಷಗಾನವು ಪ್ರಯೋಗಗೊಂಡಿದೆ. ಆದರೆ ಕನ್ನಡದಷ್ಟು ಪ್ರಭಾವಶಾಲಿಯಾಗಲಿಲ್ಲ ಎನ್ನುವುದು ವಿಶೇಷ.
ತುಳು ಯಕ್ಷಗಾನಗಳು ಪ್ರಸಿದ್ಧವಾಗಲು ಕಾರಣ ದಕ್ಷಿಣ ಕನ್ನಡದಲ್ಲಿ ಮಾತ್ರ ಚಾಲ್ತಿಯಲ್ಲಿರುವ ತುಳು ಭಾಷೆ. ತುಳು ಭಾಷೆಯಲ್ಲಿ ಪೌರಾಣಿಕವನ್ನು ಬಿಂಬಿಸಲು ಕಷ್ಟವೆನ್ನಬಹುದು. ಆದರೆ ತುಳುನಾಡಿನಲ್ಲಿರುವ ದೈವ ದೇವರು ಕಾರಣಿಕ ಪುರುಷರ ಕತೆಯನ್ನು ಧಾರಾಳವಾಗಿ ತುಳುವಿನಲ್ಲಿ ಬಳಸಿದ್ದಾರೆ. ಉದಾಹರಣೆಗೆ ಕೋಟಿ ಚೆನ್ನಯ, ಕಾಂತಬಾರೆ-ಬೂದಬಾರೆ, ದೇವಪೂಂಜ ಪ್ರತಾಪ, ಸತ್ಯದಪ್ಪೆ ಚೆನ್ನಮ್ಮ ಮುಂತಾದ ಪ್ರಸಂಗಗಳು ಜನಮಾನಸದಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಯಕ್ಷಗಾನ ಕಥಾನಕಗಳು. ಹಾಗೆಯೇ ಸಾಮಾಜಿಕ ಕತೆ ಅಥವಾ ಸಿನಿಮಾ ಕತೆಗಳ ಯಕ್ಷಗಾನ ಪ್ರಸಂಗಗಳು ಮನೋರಂಜನೆಗೆ ಮಾತ್ರ ಸೀಮಿತವಾಗಿದೆಯೇ ವಿನಾ ಯಕ್ಷಗಾನಕ್ಕೇನೂ ಶಾಶ್ವತ ಕೊಡುಗೆಗಳಲ್ಲವೆನ್ನಬಹುದು.
ಯಕ್ಷಗಾನ ಒಂದು ಶ್ರೀಮಂತ ಕಲೆ. ಸಂಪೂರ್ಣ ಕಲೆ. ಅದರಲ್ಲಿ ಶಾಸ್ತ್ರೀಯ, ಲಘು ಸಂಗೀತವಿದೆ. ತಾಳವಿದೆ, ನಾಟ್ಯವಿದೆ, ಮಾತುಗಾರಿಕೆ ಇದೆ, ನವರಸ ಅಭಿನಯ ಇದೆ. ಅಮೋಘ ವೇಷಭೂಷಣಗಳಿವೆ. ಅಷ್ಟೇ ಅಲ್ಲ, ಪಾತ್ರಧಾರಿ, ಅರ್ಥಧಾರಿ, ಎಲ್ಲಾ ಪುರಾಣಗಳ ಅಧ್ಯಯನವನ್ನೂ ಮಾಡಿರುವ ಜ್ಞಾನಿ ಆಗಿರಲೇಬೇಕು! ಹಾಗಾಗಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ ಎಂಬುದು ನಾವು ಯಾವತ್ತೂ ಕಾಣಬಹುದಾದ ಸತ್ಯ.
ಅನಿಸಿಕೆ ಮತ್ತು ಅಭಿಪ್ರಾಯ : ಖ್ಯಾತ ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್

(ಚರವಾಣಿ: 6362685049)