ತೆಂಕಣ ಮತ್ತು ಬಡಗಣ ಶೈಲಿಯ ಯಕ್ಷಗಾನ ಪ್ರಸಂಗಕರ್ತರು ಚಂದ್ರಹಾಸ ಚರಿತೆಯನ್ನು ಆಧರಿಸಿ ಬರೆದ ಪ್ರಸಂಗ – ಮಹಾಮಂತ್ರಿ ದುಷ್ಟಬುದ್ಧಿ, ವಿಷಯಾ ಕಲ್ಯಾಣವು; ಭಕ್ತ ಚಂದ್ರಹಾಸ ಎಂಬಿತ್ಯಾದಿ ಹೆಸರಿನವು. ಈ ಪ್ರಸಂಗಕ್ಕೆ ಮೂಲ ಆಕರ ಲಕ್ಷ್ಮೀಶ ಕವಿಯು (ಕಾಲ ಸು. ಕ್ರಿ. ಶ. 1550) ಬರೆದ ಕನ್ನಡ ಜೈಮಿನಿಭಾರತ. ಈ ಕೃತಿಯ ಇಪ್ಪತ್ತೆಂಟನೆಯ ಸಂಧಿಯಲ್ಲಿ ಕಥಾ ಸೂಚನೆಯಾಗಿ ‘ನಾರದಂ ದೃಷ್ಟಿಗೋಚರಕ್ಕೈದಿ ವಿಸ್ತರಿಸಿದಂ ಚಂದ್ರಹಾಸ ಕಥಾ ವಿಶೇಷಮಂ ಕರ್ಣ ಪೀಯೂಷಮಂ ಪ್ರೀತಿಯಿಂದೆ’ ಎಂದಿದೆ. ಈ ಕತೆಯು ಮೂವತ್ತೆರಡನೆಯ ಸಂಧಿಯವರೆಗೆ ಒಟ್ಟು 301 ವಾರ್ಧಕ ಷಟ್ಪದಿಗಳಲ್ಲಿ ಹರಡಿಕೊಂಡಿದೆ.
ಕನ್ನಡ ಜೈಮಿನಿಭಾರತವು 1912; 1913, 1931ನೆಯ ಇಸವಿಗಳಲ್ಲಿ ಸಂಪಾದಿತವಾಗಿ ಪ್ರಕಟಗೊಂಡಿರುವುದು ಕಾವ್ಯದ ಜನಪ್ರಿಯತೆಗೆ ಸಾಕ್ಷಿ. ಅನಂತರವೂ ಈ ಕೃತಿ ಸಂಪಾದಿತವಾಗಿ ಪ್ರಕಟಿಸಲ್ಪಟ್ಟಿದೆ. ಮೂಲತಃ ಲಿಪಿಕಾರರ ಸ್ಖಾಲಿತ್ಯದಿಂದಲೊ, ಪ್ರತಿಕಾರರ ಅನವಧಾನದಿಂದಲೊ, ತಾನೇ ನಿಷ್ಕರ್ಷಿಸಿದ ಪಾಠಾಂತರದಿಂದಲೊ ಈ ಕೃತಿಯಲ್ಲಿ ಇನ್ನೂ ಕೆಲವು ಪ್ರಮಾದಗಳು ಉಳಿದುಕೊಂಡಿರುವಂತೆ ಕಾಣುತ್ತದೆ. ಲಕ್ಷ್ಮೀಶನ ಕೃತಿಗೆ ಸಂಸ್ಕೃತ ಜೈಮಿನಿಭಾರತವು ಮೂಲ ಆಕರವಾದ್ದರಿಂದ ಅದನ್ನಿರಿಸಿಕೊಂಡು ಕೃತಿ ಸಂಪಾದನೆಗೊಂಡಿದ್ದರೆ ಕೆಲವೊಂದು ತಪ್ಪುಗಳನ್ನು ಸರಿಪಡಿಸಬಹುದಿತ್ತು; ಸಂಪಾದಕರು ಹಾಗೆ ನೋಡದಿರುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಈ ಕೃತಿಯ ಶುದ್ಧಪ್ರತಿಯು ಇನ್ನು ಸಿದ್ಧವಾಗಬೇಕಾದ ಅಗತ್ಯವಿದೆಯೆಂದು ತೋರುತ್ತದೆ. ಈಗಿರುವ ಕೃತಿಯಲ್ಲಿ-
ಕುಂತೀಕುಮಾರ ಕೇಳಾ ಮಹಾಪಟ್ಟಣದೊ
ಳಿಂತರ್ಭಕರೊಳಾಡುತಿಹ ಪಸುಳೆಗೈದು ಬರಿ
ಸಂ ತುಂಬಿತಾ ಸಮಯದೊಳ್ಪ್ರಬಲದಿಂ ಪ್ರವರ್ತಿಪ ದುಷ್ಟಬುದ್ಧಿಯೆಂಬ
ಕುಂತಳೇಂದ್ರನ ಮಂತ್ರಿ… (28-25)
ಎಂಬುದಾಗಿ ಮಂತ್ರಿಯ ಹೆಸರು ‘ದುಷ್ಟಬುದ್ಧಿ’ಯೆಂದೇ ಹೇಳಿದೆ.
ಬೆನಗಲ್ ರಾಮರಾಯರ ‘ಪುರಾಣನಾಮ ಚೂಡಾಮಣಿ’ (ಮೂರನೆಯ ಮುದ್ರಣ, 1968) ಕೃತಿಯ ಪುಟ 319ರಲ್ಲಿ ದುಷ್ಟಬುದ್ಧಿ ಕುಂತಲರಾಜನ ಮಂತ್ರಿಃ ವಿಷಯೆಯ ತಂದೆ ಎಂದೇ ಹೇಳಿದೆ. ಕತೆಯ ದೃಷ್ಟಿಯಿಂದ ಮಂತ್ರಿಯ ಜನನ, ಬಾಲ್ಯ, ನಾಮಕರಣಗಳ ವಿಚಾರ ಅಗತ್ಯವಿಲ್ಲವಾದರೂ; ಯಾವ ತಾಯ್ತಂದೆಯೂ ತಮ್ಮ ಮಗನಿಗೆ ‘ದುಷ್ಟಬುದ್ಧಿ’ಯೆಂದು ಹೆಸರಿಡಲಾರರೆಂದೇ ತೋರುತ್ತದೆ. ‘‘ಕ್ಷಿತಿಯೊಳೆ ರೂಢಾನ್ವರ್ಥಾಂಕಿತಮೆಂದಾ ನಾಮಮರಿಗೆ ಮೂಡೆರನಂ’’ (ಕೇಶಿರಾಜ, ಶ.ದ. 2-26) ಎಂದಿರು ವುದರಿಂದ ‘ದುಷ್ಟಬುದ್ಧಿ’ ಎಂಬುದು ಅಂಕಿತನಾಮವಾಗಿರಲಾರದು; ಚಂದ್ರಹಾಸ ಕತೆಯ ಬೆಳವಣಿಗೆಯನ್ನು ಗಮನಿಸಿದಾಗ; ಮಂತ್ರಿಯ ಕೃತ್ಯಗಳನ್ನು ಓದಿದಾಗ ಅವನಿಗದು ‘‘ಅನ್ವರ್ಥನಾಮ’’.
ಲಕ್ಷ್ಮೀಶನ ಕನ್ನಡ ಜೈಮಿನಿಭಾರತಕ್ಕೆ ಸಂಸ್ಕೃತದ ಜೈಮಿನಿಭಾರತ ಆಕರ ಗ್ರಂಥ. ಜೈಮಿನಿಯು ವ್ಯಾಸಮಹರ್ಷಿಗಳ ನಾಲ್ವರು ಪ್ರಧಾನ ಶಿಷ್ಯರಲ್ಲೊಬ್ಬ. (ಪೈಲ, ವೈಶಂಪಾಯನ, ಸುಮಂತು ಇತರ ಶಿಷ್ಯರು) ಈತನೂ ಒಂದು ಭಾರತವನ್ನು ರಚಿಸಿದ್ದನಂತೆ. ಆದರೆ ನಮಗಿಂದು ಆತನ ‘‘ಅಶ್ವಮೇಧಿಕ ಪರ್ವ’’ವೊಂದು ಮಾತ್ರ ದೊರೆಯುತ್ತದೆ. ಈ ಕೃತಿಯಲ್ಲಿ ಒಟ್ಟು 68 ಅಧ್ಯಾಯಗಳಿದ್ದು; 5194 ಶ್ಲೋಕ ಛಂದಸ್ಸಿನ ರಚನೆಗಳಲ್ಲಿ ಕತೆಯು ಹರಡಿಕೊಂಡಿದೆ. ಈ ಕೃತಿಯ 50ನೆಯ ಅಧ್ಯಾಯದಿಂದ 59ನೆಯ ಅಧ್ಯಾಯದವರೆಗೆ ‘‘ಚಂದ್ರಹಾಸೋಪಾಖ್ಯಾನ’’ವಿದೆ.
50ನೆಯ ಅಧ್ಯಾಯದ ಕೊನೆಗೆ ‘‘ಇತ್ಯಾಶ್ವಮೇಧಿಕೇ ಪರ್ವಾಣಿ ಜೈಮಿನೀಯೇ ಚಂದ್ರಹಾಸೋಪಾಖ್ಯಾನೇ ಪಂಚಾಶತ್ತಮೋ„ಧ್ಯಾಯಃ’’ ಎಂದಿದೆ. ಇದರಲ್ಲಿ-
ನಾರದಸ್ತ್ವಬ್ರವೀದಶ್ವೌಗತೌ ಕೌಂತಲಕಂ ಪುರಮ್ |
ಯತ್ರ ರಾಜಾ ಚಂದ್ರಹಾಸೋ ವೈಷ್ಣವಃ ಪಾಲಿತಾಂಪುರೀಂ (50-10)
ಯಸ್ಮೈ ಕುಂತಲಕೋ ರಾಜಾ ರಾಜ್ಯಂ ದತ್ತ್ವಾ ವನಂ ಯಯೌ |
ಧೃಷ್ಟಬುದ್ಧೇಃ ಪ್ರಧಾನಸ್ಯ ಕನ್ಯಾಂ ಯಃ ಪರಿಣೀತವಾನ್ || (50-11)
ಕೇರಲಾಧಿಪತೇಃ ಪುತ್ರಃ ಕುಲಿಂದೇನಾನು ಪಾಲಿತಃ
ಲಕ್ಷ್ಮೀಪತೇಃ ಪ್ರಸಾದಾಸ್ಸಪ್ರಾಪ್ಯ ಕೌಂತಲಕಾಂ ಪುರೀಂ || (50-12)
ಚಂದ್ರಹಾಸೋ ಮಹಾಬಾಹುರ್ಯೋದ್ಧತಾ ದ್ವಙನ ವಿದ್ಯತೇ |
ಅಮೀನೃತತಯಸ್ತಸ್ಯ ಕಲಾಂ ನಾರ್ಹತಿ ಷೋಡಶೀಮ್ || (50-13)
ಹೀಗೆ ಎಲ್ಲ ಕಡೆಗಳಲ್ಲೂ ‘ಧೃಷ್ಟಬುದ್ಧಿ’ ಎಂದೇ ಉಲ್ಲೇಖವಿದೆ.
ಕಾವ್ಯದುದ್ದಕ್ಕೂ ಓದುತ್ತಾ ಹೋಗುವಾಗ ನಮಗೆಲ್ಲಿಯೂ ‘ದುಷ್ಟಬುದ್ಧಿ’ ಎಂಬ ಪ್ರಯೋಗ ಕಾಣಸಿಕ್ಕುವುದೇ ಇಲ್ಲ. ಆದುದರಿಂದ ‘ಧೃಷ್ಟಬುದ್ಧಿ’ ಎಂಬುದು ಸಾಧುರೂಪವೇ ಹೊರತು ‘ದುಷ್ಟಬುದ್ಧಿ’ಯೆಂಬುದಲ್ಲ.
ಧೃತರಾಷ್ಟ್ರ, ಧೃಷ್ಟದ್ಯುಮ್ನ (ದ್ರುಪದ ಪುತ್ರ), ಧೃಷ್ಟಕೇತು (ಶಿಶುಪಾಲನ ಮಗ) ಧೃಷ್ಟಿ (ದಶರಥನ ಮಂತ್ರಿ) ಧೃತರಾಷ್ಟ್ರೀ (ಕಶ್ಯಪತಾಮ್ರೆಯರ ಮಗಳು) ಧೃತದೇವಾ (ವಸುದೇವನ ಪತ್ನಿ) ಮುಂತಾದ ಕಡೆಗಳ ಹೆಸರಿನ ಆದಿಗೆ ಕಾಣಿಸುವ ‘ಧೃ’ವೇ ಚಂದ್ರಹಾಸಚರಿತೆಯಲ್ಲಿ ಬರುವ ‘ಧೃ’ವೇ ಪ್ರಧಾನನ ಹೆಸರಿನ ಆದಿಗೆ ಬರುವುದಾಗಿದ್ದು ಅದು ‘ಧೃಷ್ಟಬುದ್ಧಿ’ ‘ಧೃ’ ಅಥವಾ ‘ಧೃತ’ ಎಂದರೆ ‘ಧರಿಸಿದ’; ‘ಹಿಡಿಯಲ್ಪಟ್ಟ’; ‘ನಿಶ್ಚಲವಾದ’ ಎಂಬರ್ಥ ಬರುತ್ತದೆ. ‘ಧೃಷ್ಟ’ ಎಂದರೆ ‘ಅಶಿಶಯಸಮರ್ಥ’; ಪ್ರೌಢಿಯನ್ನು ಮೆರೆಸುವ ನಾಯಕ ಎಂಬರ್ಥ ಬರುತ್ತದೆ. ಆದುದರಿಂದ ‘ಧೃಷ್ಟಬುದ್ಧಿ’ಯೆಂದರೆ ಅತಿಶಯಬುದ್ಧಿಯುಳ್ಳವನೆಂದೂ; ಚಲವನ್ನು ಸಾಧಿಸುವ ಬುದ್ಧಿಯವನೆಂದೂ ಅರ್ಥ. ಚಂದ್ರಹಾಸಚರಿತೆಯಲ್ಲಿ ಬರುವ ಮಹಾಪ್ರಧಾನನ ಕಾರ್ಯವೈಖರಿಯನ್ನು ಓದಿದರೆ ಅದು ಸ್ಪಷ್ಟವಾಗುತ್ತದೆ.
ಪ್ರಾಜ್ಞರಾದವರು; ಅಧ್ಯಾಪಕರು; ಯಕ್ಷಗಾನ ಕಲಾವಿದರು ತಥ್ಯಮಿಥ್ಯ ಗಳನ್ನು ಮನಗಾಣುವರೆಂದು ನಂಬಿದ್ದೇನೆ.
ಗ್ರಂಥಋಣ :
- ಜೈಮಿನಿಯ ಅಶ್ವಮೇದಪರ್ವ, 1989, ಲಕ್ಷ್ಮೀವೆಂಕಟೇಶ್ವರ ಪ್ರೆಸ್, ಕಲ್ಯಾಣ, ಮುಂಬಯಿ. ಸಂ. ಖೇಮರಾಜ ಶ್ರೀಕೃಷ್ಣದಾಸ.
- ಮಹಾಕವಿ ಲಕ್ಷ್ಮೀಶನ ಕನ್ನಡ ಜೈಮಿನಿಭಾರತ, ಸಂ. ಡಾ| ಪಾಂಡುರಂಗ.
- ಪುರಾಣನಾಮಚೂಡಾಮಣಿ, ಬೆನಗಲ್ ರಾಮರಾವ್, ಮೃ.ವಿವಿ. 1969.

ಚಿನ್ಮಯಾ ಮಿಶನ್ ಕಾಲನಿ, ಅಂಚೆ : ವಿದ್ಯಾನಗರ – 631 123
ಕಾಸರಗೋಡು