ಪುತ್ತೂರು ನಾರಾಯಣ ಹೆಗ್ಡೆಯವರು ಉಪ್ಪಳಿಗೆ ಮನೆತನದ ಸುಬ್ರಾಯ ಹೆಗಡೆಯವರ ಪುತ್ರ. ಹಿರಿಯ ಅಣ್ಣ ದಾಸಪ್ಪ ಹೆಗಡೆ, ಆಮೇಲೆ ಶೇಷಮ್ಮ ಅಂತ ಇವರ ಅಕ್ಕ.ಇವರ ತಾಯಿ ಗರ್ಭಿಣಿಯಾಗಿರುವಾಗಲೇ ತಂದೆ ಸುಬ್ರಾಯ ಹೆಗಡೆಯವರು ತೀರಿ ಹೋಗಿದ್ದರು. ಇವರನ್ನು ಪ್ರಸವಿಸಿದ ನಂತರ ಮೂರೇ ತಿಂಗಳಲ್ಲಿ ತಾಯಿ ಕೂಡಾ ತೀರಿ ಹೋದರು. ಆಮೇಲೆ ಅಕ್ಕನ ಆರೈಕೆಯಲ್ಲೇ ಬೆಳೆದರು. ರಾಗಿಕುಮೇರಿ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ. ಬಿದಿರಿನ ಕೋಲು ಮಾಡಿ ಹೊೈಗೆಯಲ್ಲಿ ಗೆರೆಹಾಕಿ ಬರೆಯುವ ಪದ್ಧತಿಯಿತ್ತಂತೆ ಆಗ. ದನಗಳನ್ನು ಮೇಯಿಸುವ ಕೆಲಸ ಕೂಡಾ ಇತ್ತು. ಹಟ್ಟಿಯಲ್ಲೇ ಮಲಗಿಕೊಳ್ಳುವುದು. ಯಾಕೆಂದರೆ ಆಟಕ್ಕೆ ಹೋಗುವ ಚಪಲ. ಆಟ ನೋಡಿ ಬೆಳಿಗ್ಗೆ ಬೇಗನೇ ಬಂದು ಪುನಃ ಹಟ್ಟಿಯಲ್ಲೇ ಮಲಗಿಕೊಳ್ಳುವುದು. ಆಟಕ್ಕೆ ಹೋದದ್ದು ಮನೆಯವರಿಗೆ ತಿಳಿಯಬಾರದೆನ್ನುವ ಹೆದರಿಕೆಯಿಂದ.
ಯಾಕೋ ಏನೋ 13ನೇ ವಯಸ್ಸಿನಲ್ಲಿ ಮನೆಯವರೊಂದಿಗೆ ಮುನಿಸಿಕೊಂಡು ಮನೆಬಿಟ್ಟು ಮಂಗಳೂರಿಗೆ ಹೋಗಿ ಅಲ್ಲಿ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಸೈಕಲಿನಲ್ಲಿ ಬ್ರೆಡ್ ತೆಗೆದುಕೊಂಡು ಹೋಗುವ ಕೆಲಸ. ಅಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು. ಪುನಃ ಅಲ್ಲಿಂದ ಬಂದು Forest Guard ಆಗಿ ಕೆಲಸ ಮಾಡಿದರು. ಶಿರಾಡಿ, ನಾರಾವಿ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡಿದರು. ಆಟದ ಆಸಕ್ತಿಯಿಂದ ಆಟ-ಕೂಟಗಳನ್ನು ಬಿಡದೆ ನೋಡುತ್ತಿದ್ದರು.
ಈ ಯಕ್ಷಗಾನದ ಆಸಕ್ತಿಯಿಂದಾಗಿ ಮೇಳವೊಂದಕ್ಕೆ ಸೇರುವ ಸಂದರ್ಭವೊದಗಿತು. ಚಿಕ್ಕಪ್ಪ ದೇವಪ್ಪ ಹೆಗಡೆಯವರು ಇವರನ್ನು ಮೇಳಕ್ಕೆ ಸೇರಿಸಿದರು. ಪೆರ್ಣಂಕಿಲ ಮೇಳದಲ್ಲಿ ಪೆಟ್ಟಿಗೆ ಹೊರುವ ಕೆಲಸ. ಮೇಳದ ತಿರುಗಾಟದ ನಂತರ ಪುನಃ Guard ಆಗಿ ಕೆಲಸಕ್ಕೆ ಸೇರಿದರು. ಅರಣ್ಯ ರಕ್ಷಕರಾಗಿದ್ದಾಗ ಮರ ಕದ್ದು ಸಾಗಿಸುವವರ ಲಾರಿಯನ್ನು ಒಮ್ಮೆ ಹಿಡಿದರು. ಆಗ ಇವರಿಂದ ತಪ್ಪಿಸಿಕೊಳ್ಳಲೋಸುಗ ಮರಗಳ್ಳರು ಇವರ ತಲೆಗೆ ಮರದ ತುಂಡೊಂದರಿಂದ ಹೊಡೆದು ಓಡಿದರು. ಒಸರುವ ರಕ್ತಕ್ಕೆ ಬಟ್ಟೆಯ ತುಂಡೊಂದನ್ನು ಕಟ್ಟಿಕೊಂಡು ಮರಗಳ್ಳರ ಲಾರಿಯನ್ನು ತಾನೇ ಚಲಾಯಿಸಿಕೊಂಡು ಉಪ್ಪಿನಂಗಡಿಯ ಗೇಟ್ ಬಳಿ ನಿಲ್ಲಿಸಿದ ಅಪೂರ್ವ ಸಾಹಸಿ. ಅವರಿಗೆ Driving ಗೊತ್ತಿತ್ತು. ಆದರೆ ಆಮೇಲೆ ಮಾತ್ರ ಅವರು ಅರಣ್ಯ ರಕ್ಷಕರ ಕೆಲಸ ಮಾಡಲಿಲ್ಲ.
ಆ ನಂತರ ಮೂಲ್ಕಿ ಮೇಳಕ್ಕೆ ಸೇರಿದರು. ಆ ಮೊದಲು ಸಣ್ಣ ಸಣ್ಣ ಮೇಳಗಳಲ್ಲಿ ಕಿರು ಅವಧಿಯಲ್ಲಿ ಕೆಲಸ ಮಾಡಿದ ಅನುಭವ ಅವರಿಗಿತ್ತು. ಯಕ್ಷಗಾನದಲ್ಲಿ ಸಣ್ಣ ತಿಮ್ಮಪ್ಪು ಎಂಬವರ ಮಾರ್ಗದರ್ಶನ ಅವರಿಗಾಗಿತ್ತು. ಅವರ ವೇಷಗಳಲ್ಲಿ ಸಣ್ಣ ತಿಮ್ಮಪ್ಪು ಅವರ ಛಾಯೆಯಿತ್ತಂತೆ. ಆದರೆ ಕ್ರಮೇಣ ಮುಂದುವರಿಯುತ್ತಾ ಹೋದಂತೆ ಪುತ್ತೂರು ನಾರಾಯಣ ಹೆಗ್ಡೆಯವರು ತನ್ನದೇ ಸ್ವಂತ ಶೈಲಿಯನ್ನು ರೂಢಿಸಿಕೊಂಡು ಪ್ರಸಿದ್ಧಿ ಯನ್ನು ಪಡೆದರು. ಮೂಲ್ಕಿ ಮೇಳದಲ್ಲಿ ಸುಮಾರು ಏಳೆಂಟು ವರ್ಷಗಳಷ್ಟು ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ಮೂಲ್ಕಿ ಮೇಳವನ್ನು ತ್ಯಜಿಸಬೇಕಾಗಿ ಬಂತು.
ಕಸ್ತೂರಿ ಪೈಗಳ ಕರೆಯಂತೆ ಸುರತ್ಕಲ್ ಮೇಳವನ್ನು ಸೇರಿದರು. ಆಮೇಲೆ ಸುರತ್ಕಲ್ ಮೇಳದಲ್ಲಿ ನಾರಾಯಣ ಹೆಗ್ಡೆಯವರು ನಿರ್ವಹಿಸಿದ ಪಾತ್ರದಿಂದ ಪೂಜ್ಯ ಶ್ರೀ ಹೆಗ್ಗಡೆಯವರು ಪ್ರಭಾವಿತರಾಗಿ ಅವರನ್ನು ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿಸಿದರು. ಅಲ್ಲಿಂದ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲಿ ಕೊನೆಯ ತನಕ ತಿರುಗಾಟ ನಡೆಸಿದರು.
ಮರುವರ್ಷ, ಒಬ್ಬೊಬ್ಬರಾಗಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಪಾತಾಳ ವೆಂಕಟ್ರಮಣ ಭಟ್, ಕುಂಬಳೆ ಸುಂದರ ರಾಯರು, ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈಗಳು ಮೊದಲಾದವರೆಲ್ಲಾ ಧರ್ಮಸ್ಥಳ ಮೇಳವನ್ನು ಸೇರಿದರು. ಕಲಾವಿದರಲ್ಲಿ ಧರ್ಮಸ್ಥಳ ಮೇಳದ ಧಣಿಗಳಾದ ಪೂಜ್ಯ ಹೆಗಡೆಯವರಿಗೆ ಬಹಳ ಪ್ರೀತಿ. ಈಗಲೂ ಅಷ್ಟೇ ಪ್ರೀತಿ-ವಿಶ್ವಾಸ ಇದೆ. ಅದನ್ನು ಕಲಾವಿದರು ಉಳಿಸಿಕೊಳ್ಳಬೇಕು. ಅರ್ಥಮಾಡಿಕೊಳ್ಳಬೇಕು. ಕಲಾವಿದರ ಬಗ್ಗೆ ಅತೀವ ಕಾಳಜಿ. ಮೇಳವನ್ನು ಕಾಲಮಿತಿ ಯಕ್ಷಗಾನಕ್ಕೊಳಪಡಿಸುವ ಮೊದಲು ಸುದೀರ್ಘವಾಗಿ ಚಿಂತಿಸಿದ್ದರು ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಹರ್ಷೇಂದ್ರ ಕುಮಾರ್. ಮಧ್ಯರಾತ್ರಿ ಕಲಾವಿದರನ್ನು ಎಲ್ಲಿಗೆ ಕಳುಹಿಸುವುದು ಎನ್ನುವ ಚಿಂತೆ ಹಾಗೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅವರು ಬಹಳ ಚಿಂತಿಸಿದ್ದರು.
ಪಾತ್ರಚಿತ್ರಣ ಮತ್ತು ಶೈಲಿಯಲ್ಲಿ ಪುತ್ತೂರು ನಾರಾಯಣ ಹೆಗ್ಡೆಯವರ ಕ್ರಮವೇ ಬೇರೆಯಂತೆ ಕಾಣುತ್ತದೆ. ಪಾತ್ರೋಚಿತ ನಾಟ್ಯ ಮತ್ತು ಮಿತವಾದ ಮಾತುಗಳು. ನಾಟಕೀಯ ವೇಷಗಳಿಗೆ ಒಂದು ಚಿತ್ರಣ ಮತ್ತು ಜೀವ ಕೊಟ್ಟವರು ಎಂದು ಅವರನ್ನು ಜನರು ಗುರುತಿಸುತ್ತಾರೆ. ಅವರಿಗೋಸ್ಕರವೇ ನಾಟಕೀಯ ವೇಷ ಭೂಷಣಗಳು ತಯಾರಾಗಿ ಬರುತ್ತಿದ್ದುವು. ಇತ್ತೀಚಿನ ವರೆಗೂ ಅವರು ಉಪಯೋಗಿಸುತ್ತಿದ್ದ ವೇಷಭೂಷಣಗಳು ಇದ್ದುವಂತೆ.
ವಂಶವಾಹಿನಿ ಪ್ರಸಂಗದಲ್ಲಿ ಪೀಠಿಕೆ ವೇಷವಾದ ‘ಧ್ರುವಸಂಧಿ’ ಪಾತ್ರವನ್ನು ಅವರು ಮಾಡುತ್ತಿದ್ದರು. ಬೆಳಿಗ್ಗಿನ ವರೆಗೆ ಆ ಪಾತ್ರವನ್ನು ಅವರೊಬ್ಬರೇ ನಿಭಾಯಿಸುತ್ತಿದ್ದ ರೀತಿ ಅದ್ಭುತ. ಧ್ರುವಸಂಧಿ ಮಹಾರಾಜನು ತನ್ನ ರಾಣಿಯರಿಗೆ ತನ್ನ ವಂಶವಾಹಿನಿಯನ್ನು ಅಂದರೆ ತನ್ನ ವಂಶಜರ ಹೆಸರನ್ನು ಹೇಳುವ ರೀತಿ ಬಹಳ ಮನೋಜ್ಞವಾಗಿತ್ತು.
‘ವಜ್ರದಷ್ಟು ಕಠಿಣ, ಹೂವಿನಷ್ಟು ಕೋಮಲ’ ಎಂಬ ಮಾತು ನಾರಾಯಣ ಹೆಗ್ಡೆಯವರಂತಹಾ ವ್ಯಕ್ತಿಗಳನ್ನು ನೋಡಿಯೇ ಹೇಳಿರಬಹುದು ಎಂದು ತೋರುತ್ತದೆ. ತಾನು ನಿರ್ವಹಿಸುತ್ತಿದ್ದ ಖಳನಾಯಕನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಕಠೋರತೆಯ ಒಂದಂಶವನ್ನೂ ನಿಜಜೀವನದಲ್ಲಿ ತೋರಿಸದ ಮೃದುಹೃದಯಿ. ಅದೂ ಅಲ್ಲದೆ ಕಲಾವಿದನಾಗಿ ರಂಗದಲ್ಲಿ ತನ್ನನ್ನು ತಾನೇ ಶಿಸ್ತಿಗೆ ಒಳಪಡಿಸಿಕೊಂಡ ಅಪೂರ್ವ ನಟ. ತನ್ನ ಸಹಕಲಾವಿದರಿಂದಲೂ ಅದನ್ನೇ ಅಪೇಕ್ಷಿಸುತ್ತಿದ್ದರು. ಸಹಕಲಾವಿದರು, ಕಿರಿಯ ಕಲಾವಿದರು ರಂಗದಲ್ಲಿ ತಪ್ಪಿದರೆ ಸಹಿಸಿಕೊಳ್ಳುತ್ತಿರಲಿಲ್ಲ. ತಿದ್ದುತ್ತಿದ್ದರು. ಕೆಲವೊಮ್ಮೆ ಗದರುತ್ತಿದ್ದರು.
ಪುತ್ತೂರು ನಾರಾಯಣ ಹೆಗ್ಡೆಯವರು ಯಕ್ಷಗಾನಕ್ಕೆಂದೇ ಹುಟ್ಟಿದವರು. ಕರುಣರಸದಲ್ಲಿ, ಆಳಂಗದಲ್ಲಿ, ವೇಷಕಟ್ಟುವುದರಲ್ಲಿ ಕೂಡಾ ಅತಿ ನಿಪುಣತೆ, ಶ್ರದ್ಧೆ ಅವರಲ್ಲಿ ಎದ್ದು ಕಾಣುತ್ತದೆ. ಎಷ್ಟು ಬೇಕೋ ಅಷ್ಟೇ ಪಾತ್ರೋಚಿತವಾದ ಮಾತು ಅವರದು. ‘ಕೆತ್ತಲಿಕ್ಕಿಲ್ಲ, ಮೆತ್ತಲಿಕ್ಕಿಲ್ಲ’ ಎಂಬ ಮಾತು ಹೆಗ್ಡೆಯವರ ವೇಷಗಾರಿಕೆಯ ಬಗ್ಗೆ ಪ್ರಚಲಿತದಲ್ಲಿದೆ.
ಕಲಾಜೀವನದಲ್ಲಿ ನಿರ್ವಿವಾದದ ಪಾತ್ರಗಳು, ವೇಷಗಳು ಅವರ ವೈಶಿಷ್ಟ್ಯ. ಅವರು ರಂಗದಲ್ಲಿರುವ ವರೆಗೆ ಹಲವು ಪಾತ್ರಗಳು ಅವರಿಗೆ ಮೀಸಲಿಟ್ಟಂತಹವುಗಳು. ರಂಗದಲ್ಲಿ ನಿಷ್ಠುರತೆ ಇಲ್ಲ. ಒಂದೆರಡು ಪ್ರಸಂಗಗಳನ್ನು ಹೊರತುಪಡಿಸಿ ರಂಗದ ಹೊರಗೆ ಕೂಡಾ ನಿಷ್ಠುರತೆ, ವಿವಾದಗಳಿಲ್ಲ. ಚೌಕಿಯಲ್ಲೂ ಶಿಸ್ತು, ರಂಗದಲ್ಲೂ ಶಿಸ್ತು. ಅವರ ಪಾತ್ರ ಬೆಳಿಗ್ಗಿನ ಝಾವ 4 ಗಂಟೆಗೆ ಆದರೂ ಅವರು ರಾತ್ರಿ 8 ಗಂಟೆಗೆ ಮೊದಲೇ ಚೌಕಿಯಲ್ಲಿ ಹಾಜರಿರು ತ್ತಿದ್ದರು. ಹಾಗೆಂದು ಚೌಕಿಯಲ್ಲಿ ನಿದ್ರೆ ಮಾಡುವ ಅಭ್ಯಾಸವೂ ಇರಲಿಲ್ಲ.
ಸಭೆಯನ್ನು ನೋಡಿ ವೇಷ ಮಾಡುವ ಕ್ರಮ ಇಲ್ಲ. ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೂ ತನ್ನ ಪಾತ್ರದಲ್ಲಿ ಎಳ್ಳಿನಿತೂ ಕೊರತೆ ಬಾರದಂತೆ ನಿರ್ವಹಿಸುತ್ತಿದ್ದರು. ರಂಗದಲ್ಲಿ ಅವರ ಯಾವ ಪಾತ್ರವೂ ಅನುತ್ತೀರ್ಣತೆಯನ್ನು ಹೊಂದಲಿಲ್ಲ. ಕಟ್ಟಿದ ವೇಷಭೂಷಣಗಳು ಜಾರುವುದೋ, ಬೀಳುವುದೋ ಅತಿ ವಿರಳ. ಅವರ ಖಳಪಾತ್ರದ ಕಠೋರತೆಯಷ್ಟೇ ಕರುಣರಸದ ಪಾತ್ರಗಳೂ ಪ್ರಖ್ಯಾತ. ವೀರರಸದಂತೆ ಕರುಣರಸದಲ್ಲಿ ಕೂಡಾ ಆರ್ತತೆಯಿರುತ್ತಿತ್ತು. ಋತುಪರ್ಣನ ಹತಾಶಭಾವ, ಕರ್ಣನ ರಥದ ಗಾಲಿಗಳು ಹೂತುಹೋದ ಸಂದರ್ಭದ ಚಿತ್ರಣ. ಅಂತಹಾ ಸಂದರ್ಭಗಳಲ್ಲೆಲ್ಲಾ ಅವರೇ ಪಾತ್ರವಾಗುತ್ತಿದ್ದರು. ಪಾತ್ರದಲ್ಲಿ ಅವರ Involvement ಅಷ್ಟಿತ್ತು.
ಎಷ್ಟು ಬರೆದರೂ ಮುಗಿಯದಷ್ಟು ಇರುವ ಅವರ ವಿಶೇಷತೆಗಳಲ್ಲೊಂದನ್ನು ಪ್ರಸ್ತಾಪ ಮಾಡದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ಶ್ರುತಿಯ ಗುಂಗಿನಲ್ಲಿ ಅರ್ಥ ಮುಗಿಸುವುದು ಇವರ ಇನ್ನೊಂದು ವೈಶಿಷ್ಟ್ಯ. ಸಾಧಾರಣವಾಗಿ ಭಾಗವತರು ಪದ್ಯ ಹೇಳಿದ ಸ್ವಲ್ಪ ಹೊತ್ತಿನ ವರೆಗೆ ಆ ಶ್ರುತಿಯ ಗುಂಗು ಗುಯ್‍ಗುಡುತ್ತಿರುತ್ತದೆ. ಆ ಶ್ರುತಿಯ ಗುಂಗಿನೊಳಗೇ ಆ ಪದ್ಯದ ಅರ್ಥವನ್ನೆಲ್ಲಾ ಹೇಳಿ ಮುಗಿಸುವ ಅಪೂರ್ವ ಕಲೆ ಅವರಿಗೆ ಸಿದ್ಧಿಸಿತ್ತು. ಅವರ ಈ ವೈಶಿಷ್ಟ್ಯತೆಯನ್ನು ಸಮಯದ ಅಭಾವವಿರುವ ಸಂದರ್ಭಗಳಲ್ಲೆಲ್ಲಾ ಕಾಣಬಹುದಿತ್ತು.
ಪಾತ್ರದ ಸನ್ನಿವೇಶವನ್ನು ರಂಗದಲ್ಲಿ ನಿರ್ಮಾಣ ಮಾಡುವ ಮಹಾನ್ ನಟ. ಅಂದರೆ ತಾನೇ ಪಾತ್ರವಾಗಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಸಾಂಸಾರಿಕ ಹಾಗೂ ಇತರ ಒತ್ತಡಗಳು, ಕಷ್ಟಗಳು ಎಷ್ಟೇ ಎದುರಾದರೂ ಅದರ ಪ್ರತಿಫಲನ ರಂಗದಲ್ಲಿ ಇರುತ್ತಿರಲಿಲ್ಲ.
ಧೀಮಂತ ವ್ಯಕ್ತಿತ್ವ : ಆಗಿನ ಕಾಲದಲ್ಲಿ ಸಾಧಾರಣವಾಗಿ ಮದುವೆ ಮುಂತಾದ ಸಂದರ್ಭಗಳಲ್ಲೆಲ್ಲಾ ಸಣ್ಣ ಸಣ್ಣ ಅಸಮಾಧಾನಗಳು, ಗಲಾಟೆ ಜಗಳಗಳು ಆಗುತ್ತಿದ್ದುದು ಮಾಮೂಲಿ. ತನಗೆ ಗೌರವ, ಮರ್ಯಾದೆ ಕೊಡಲಿಲ್ಲವೆಂದೋ ಅಥವಾ ಇನ್ಯಾವುದೋ ಕ್ಷುಲ್ಲಕ ಕಾರಣಗಳನ್ನು ಹಿಡಿದು ತಗಾದೆ ತೆಗೆಯುವವರು ಜಾಸ್ತಿ. ಗಂಡಿನ ಕಡೆಯವರಿಗಂತೂ ಹೆಣ್ಣಿನ ಕಡೆಯವರನ್ನು ಗೋಳಾಡಿಸಲು ಇದು ಒಂದು ಅಸ್ತ್ರವಾಗಿರುತ್ತಿತ್ತು. ಆದರೆ ಯಾವ ಸಮಾರಂಭಗಳಲ್ಲೆಲ್ಲಾ ಪುತ್ತೂರು ನಾರಾಯಣ ಹೆಗ್ಡೆಯವರ ಉಪಸ್ಥಿತಿಯಿರುತ್ತಿತ್ತೋ ಅಂತಹಾ ಸಮಾರಂಭಗಳಲ್ಲಿ, ಸ್ಥಳಗಳಲ್ಲಿ ಅಂತಹಾ ತಕರಾರುಗಳಿಗೆ ಆಸ್ಪದವಿರುತ್ತಿರಲಿಲ್ಲ. ಯಾರಾದರೂ ಅಂತಹಾ ಬಾಲಿಶ ವರ್ತನೆಗಳನ್ನು ತೋರಿದರೆ ‘ಏನೋ… ನಿಂದು…’ ಅಂತ ಇವರು ಸ್ವರ ತೆಗೆದರೆ ಸಾಕು ಗಲಾಟೆ ಮಾಡುವವರು ಹೆದರಿ ತಣ್ಣಗಾಗುತ್ತಿದ್ದರು. ಅಂತಹಾ ಧೀಮಂತ ಹಾಗೂ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾಗಿದ್ದರು ಪುತ್ತೂರು ನಾರಾಯಣ ಹೆಗ್ಡೆಯವರು. ಅಂತಹಾ ಯಕ್ಷರಂಗ ಕಂಡ ಅಪೂರ್ವ ಸಂಪತ್ತು ಶ್ರೀ ಪುತ್ತೂರು ನಾರಾಯಣ ಹೆಗ್ಡೆಯವರು 1992ರಲ್ಲಿ ನಿಧನರಾದರು.
ಲೇಖನ: ಮನಮೋಹನ್. ವಿ. ಎಸ್.
ಛಾಯಾಚಿತ್ರ: ಗಿರೀಶ್ ಹೆಗ್ಡೆಯವರ ಸಂಗ್ರಹದಿಂದ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ