Saturday, January 18, 2025
Homeಯಕ್ಷಗಾನಪ್ರಸಂಗ ನಿಷ್ಠ ಹಾಗೂ ಕವಿನಿಷ್ಠ - ಭಾಗವತ ಶ್ರೇಷ್ಠ

ಪ್ರಸಂಗ ನಿಷ್ಠ ಹಾಗೂ ಕವಿನಿಷ್ಠ – ಭಾಗವತ ಶ್ರೇಷ್ಠ

ಯಕ್ಷಗಾನದ ಪ್ರಸಂಗಕ್ಕೆ ಪ್ರಸಂಗದ ಪಠ್ಯವೇ (ಪ್ರಸಂಗ ಪುಸ್ತಕ) ಪ್ರಧಾನವಾಗಿದೆ. ಹಾಗೂ ಪ್ರಸಂಗವನ್ನು ರಚಿಸಿದ ಕವಿಗೆ ಮಹತ್ತರವಾದ ಸ್ಥಾನವಿದೆ. ಇದನ್ನು ಪ್ರತಿಯೊಬ್ಬ ಕಲಾವಿದನೂ ಹಾಗೂ ಕಲಾಪೋಷಕರು, ಕಲಾರಸಿಕರೂ ಅರಿತಿರಲೇಬೇಕು.

    ಯಾಕೆಂದರೆ ಒಂದು ಪ್ರಸಂಗದ ಪ್ರದರ್ಶನದ ಗೆಲುವಿನ ಹಿಂದೆ ಭಾಗವತರು, ಹಿಮ್ಮೇಳದವರು, ಹಾಗೂ ಎಲ್ಲಾ ಕಲಾವಿದರ ಶ್ರಮ  ಇದ್ದಹಾಗೆ ಪ್ರಸಂಗವನ್ನು ರಚಿಸಿದ ಕವಿಯ ಶ್ರಮವೂ ಇರುತ್ತದೆ. ಪ್ರಸಂಗದ ಹಾಗೂ ಕವಿಯ *ಆಶಯ* ವನ್ನು ಮೀರಿ ಕಲಾವಿದ ಹೋಗುವಂತಿಲ್ಲ ಹೋಗಬಾರದು. ಕಲಾವಿದನಾದವನು ಪ್ರಸಂಗಕ್ಕೆ ಹಾಗೂ ಕವಿಗೆ *ನಿಷ್ಠ* ನಾಗಿ ಇದ್ದರೆ ಒಳ್ಳೆಯದು. ಇಂತಹ *ಕವಿ ನಿಷ್ಠೆ* ಹಾಗೂ *ಪ್ರಸಂಗ ನಿಷ್ಠೆ* ಯನ್ನು ತನ್ನಲ್ಲಿ ಮೈಗೂಡಿಸಿಕೊಂಡು ರಂಗ ವನ್ನಾಳಿದ ಹಲವು ಮಂದಿ ಕಲಾವಿದರು ಇದ್ದಾರೆ, ಅಂಥವರಲ್ಲಿ *ಯಕ್ಷರಂಗದ ಬೀಷ್ಮ ಅಜಾತಶತ್ರು* ಇತ್ಯಾದಿ ನೆಗಳ್ತೆಗೆ ಪಾತ್ರರಾದ ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ *ಶ್ರೀ ಬಲಿಪ ನಾರಾಯಣ ಭಾಗವತರು* ಅಗ್ರಗಣ್ಯರಾಗಿದ್ದಾರೆ.

    ಯಾಕೆಂದರೆ….
ಕವಿಯು ಪ್ರಸಂಗದಲ್ಲಿ ಬರೆದ ಸಾಲುಗಳನ್ನು ಮಾತ್ರ ಭಾಗವತ ನಾದವನು ಹಾಡಬೇಕು ಎಂಬ ನಿಯಮ ಹಿಂದೆ ಇತ್ತಂತೆ.ಅದರಂತೆ ಬಲಿಪರು ಕೂಡ ಪ್ರಸಂಗ ಸಾಹಿತ್ಯದಲ್ಲಿ ಇದ್ದಂತಹ ಸಾಲುಗಳನ್ನೇ ಹೇಳುತ್ತಾರೆ ಹೊರತು ಬೇರೆ ಸ್ವಂತ ವಾಕ್ಯಗಳನ್ನು ಅಥವಾ ಬದಲಿ ಶಬ್ದಗಳನ್ನು ಹೇಳುವುದಿಲ್ಲ.
ಉದಾಹರಣೆಗೆ: ದೇವ ಲಾಲಿಪುದೀಗ  ಬಿಡದೊಂದು ಯೋಜನ….ಎಂಬ ಪದ  ಹೇಳಿ ಪುನಃ ದೇವ ಎನ್ನುವ ಬದಲು ಕೃಷ್ಣಾ….. ಎಂದು ಸೇರಿಸಿ ಆಲಾಪನೆ ಗೈಯುವುದು. ಲಾಲಿಪುದೆಲೆ ತಾಯೆ ಎನ್ನ ಬಿನ್ನಪವನು…. ಎಂಬ ಪದದಲ್ಲಿ ಕೊನೆಗೆ ಅಮ್ಮ, ಜನನಿ ಇತ್ಯಾದಿ ಶಬ್ದಗಳನ್ನು ಭಾಗವತನಾದವ ಸೇರಿಸಿ ಹಾಡುವುದನ್ನು ನೋಡುತ್ತೇವೆ. ಈ ವಿಚಾರವಾಗಿ ಒಮ್ಮೆ ಬಲಿಪ ರಲ್ಲಿ ಕೇಳಿದಾಗ ಅವರು ಹೇಳಿದ ಮಾತು ಹೀಗಿದೆ.
“ಭಾಗವತನಾದವ ಪ್ರಸಂಗ ಸಾಹಿತ್ಯದಲ್ಲಿ ಕವಿ ಬರೆದ ಸಾಲುಗಳನ್ನು ಮಾತ್ರವೇ ತಾಳಕ್ಕೆ ಮಾತ್ರೆಗೆ ಸರಿಯಾಗಿ ಹೇಳಬೇಕು, ಹೊರತು ತನಗೆ ಇಷ್ಟ ಬಂದ ಬದಲಿ ಶಬ್ದಗಳನ್ನು ಸೇರಿಸಿಕೊಂಡು ಹಾಡಬಾರದು, ನಮಗೆ ಇಷ್ಟ ಬಂದಂತೆ ಸಾಹಿತ್ಯಗಳನ್ನು ಬದಲಿಸಿ ಹಾಡುವುದಾದರೆ ಅಲ್ಲಿ ಕವಿ ಬರೆದದ್ದು ಯಾಕೆ? ಬರೆದ ಕವಿಗೆ ಬೇರೆ ಶಬ್ದಗಳು ಗೊತ್ತಿಲ್ಲದೆ ಬರೆದದ್ದೋ? ಭಾಗವತನಿಗೆ ಕವಿಯನ್ನು ಮೀರಿಹೋಗುವ ಸ್ವಾತಂತ್ರ್ಯ ಇಲ್ಲ.ನೀವು ಸಿನಿಮಾದ ಹಾಡುಗಳನ್ನು ನೋಡಿ ಇಲ್ಲದಿದ್ದರೆ ಶಾಸ್ತ್ರೀಯ ಸಂಗೀತದಲ್ಲಿ ಬರುವ ಪದ್ಯಗಳನ್ನು ಕೇಳಿ,ಅಲ್ಲಿ ಕವಿ ಬರೆದ ಸಾಲುಗಳನ್ನು ಮಾತ್ರವೇ ಹಾಡುಗಾರರು ಹಾಡುತ್ತಾರೆ ವಿನಃ ಇವರ ಸ್ವಂತದ್ದನ್ನು ಸೇರಿಸಿ ಹಾಡುವುದಿಲ್ಲ.(ಲಂಬೋದರ ಲಕುಮಿಕರ ಎಂಬ ಹಾಡಿನಲ್ಲಿ ಲಂಬೋದರ ಎಂದು ಹೇಳಿ ಪುನಃ ಗಣೇಶ, ಗಜಮುಖ, ಎಂದು ಸಂಗೀತದವರು ಹೇಳುವುದಿಲ್ಲ ತಾನೇ?)  ಹಾಗೆಯೇ ಭಾಗವತ ಪ್ರಸಂಗದಲ್ಲಿ ಕವಿ ಬರೆದದ್ದನ್ನು ಬಿಟ್ಟು ಬೇರೆ ಹಾಡಿದರೆ ಅದು ಕವಿಗೆ ಮಾಡಿದ ಅಪಚಾರವಾಗುತ್ತದೆ.”
ಬಲಿಪರ ಈ ಮಾತುಗಳು ಭಾಗವತನಾದವನು ಕವಿಗೆ ಎಷ್ಟು ಗೌರವವನ್ನು ಕೊಡಬೇಕು, ನಿಷ್ಠನಾಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದೆ.
 
*ಪ್ರಸಂಗದ ಆಶಯ*….
ಕೆಲವೊಮ್ಮೆ ಕಲಾವಿದರು ರಂಗದಲ್ಲಿ ಪ್ರಸಂಗದ ಹಾಗೂ ಕವಿಯ ಆಶಯಕ್ಕೆ ವಿರುದ್ಧವಾಗಿ ಅರ್ಥವನ್ನು ಹೇಳುತ್ತಾರೆ.ಕಲಾವಿದನಾದವನು ತನ್ನ ಪ್ರತಿಭೆಯಿಂದ ಅಥವಾ ವಿದ್ವತ್ತಿನಿಂದ ಅರ್ಥಗಾರಿಕೆಯನ್ನು ವಿಸ್ತಾರಗೊಳಿಸಬಹುದು ಆದರೆ ಪ್ರಸಂಗದ ಆಶಯಕ್ಕೆ ಚ್ಯುತಿ ಬಾರದಂತೆ ವರ್ತಿಸಬೇಕಾಗುತ್ತದೆ. ಎಷ್ಟೋಬಾರಿ ಬಲಿಪರು ಹೇಳಿದ್ದು ಇದೆ “ಅರ್ಥ ಬಹಳ ಚಂದವಾಗಿ ತುಂಬಾ ಮಾತಾಡಿದ್ದಾರೆ ಒಳ್ಳೆಯ ವಿಷಯ ಇತ್ತು ಆದರೆ ಕವಿ ಬರೆದ ಪದದ ಅರ್ಥ ಮಾತ್ರ ಬರಲಿಲ್ಲ” ಎಂದರೆ ಕಲಾವಿದನಾದವನು ಪ್ರಸಂಗದ ಪದದಲ್ಲಿ ಅಡಕವಾಗಿರುವ ಅರ್ಥವನ್ನು ಹೇಳದಿದ್ದರೆ ಅವರು ಸಹಿಸುತ್ತಿರಲಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಯಕ್ಷಗಾನ ರಂಗದಲ್ಲಿ ಕಲಾವಿದನಾದವನು ಪ್ರಸಂಗದ ಪಠ್ಯಕ್ಕೆ ಹಾಗೂ ಪ್ರಸಂಗವನ್ನು ರಚಿಸಿದ ಕವಿಗೆ ನಿಷ್ಠನಾಗಿರಬೇಕು ಎಂಬುದು ತಾತ್ಪರ್ಯ.  ಅಂತಹ *ಕವಿ ನಿಷ್ಠ ಪ್ರಸಂಗ ನಿಷ್ಠ ಭಾಗವತ ಶ್ರೇಷ್ಠ* ನಮ್ಮ ಬಲಿಪಜ್ಜ.

ಬಲಿಪ ಭಾಗವತರ ಇಂತಹ ಅನೇಕ ವಿಚಾರಗಳು  ಯಕ್ಷಗಾನ ರಂಗದಲ್ಲಿ ಮುಂದೆ ಕಾಣಿಸಿಕೊಳ್ಳಲಿರುವ ಯುವಕಲಾವಿದರಿಗೆ ಹಾಗೂ ವ್ಯವಸಾಯ ಮಾಡುತ್ತಿರುವ ಎಲ್ಲಾ ಕಲಾವಿದರಿಗೂ ದಾರಿದೀವಿಗೆಯಾಗಲಿ….

ಲೇಖಕ: ಚಂದ್ರಶೇಖರ್ ಭಟ್, “ಅದ್ವೆತ” ಕೊಂಕಣಾಜೆ.

ಚಂದ್ರಶೇಖರ್ ಭಟ್, “ಅದ್ವೆತ” ಕೊಂಕಣಾಜೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments