Saturday, January 18, 2025
Homeಯಕ್ಷಗಾನ'ಕೊರೊನಾಸ್ತ್ರ': ಕೊರೊನಾ ವಿಮುಕ್ತಿಯ ಯಕ್ಷ ಜಾಗೃತಿ

‘ಕೊರೊನಾಸ್ತ್ರ’: ಕೊರೊನಾ ವಿಮುಕ್ತಿಯ ಯಕ್ಷ ಜಾಗೃತಿ

ಪ್ರಪಂಚವನ್ನು ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾದ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು ಜನಜೀವನವನ್ನು  ಕಂಗೆಡಿಸಿದೆ. ಈ ಸೋಂಕಿನಿಂದ ಪಾರಾಗಲು ಮುನ್ನೆಚ್ಚರಿಕೆಯ ಸಂದೇಶಗಳು ವಿವಿಧ ಮಾಧ್ಯಮಗಳಲ್ಲಿ ನಿರಂತರ ಹರಿದಾಡುತ್ತಿವೆ. ಇದಕ್ಕೆ ಯಕ್ಷಗಾನವೂ ಹೊರತಾಗಿಲ್ಲ. ಈ ಹಿಂದೆ ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ ಮೊದಲಾದ ಜನಜಾಗೃತಿ ಯಕ್ಷಗಾನಗಳನ್ನು ನೀಡಿದ ಕಲಾವಿದರ ತಂಡ ಇದೀಗ ಕೋವಿಡ್-19 ‘ಕೊರೊನಾ’ ಸಾಂಕ್ರಾಮಿಕ ರೋಗದ ವಿರುದ್ಧ ಜಾಗೃತಿ ಸಂದೇಶ ನೀಡುವ ವಿಶೇಷ ಯಕ್ಷಗಾನ ತಾಳಮದ್ದಳೆಯೊಂದನ್ನು ಲಾಕ್ ಡೌನ್ ಅವಧಿಯಲ್ಲಿ ಮತ್ತೊಮ್ಮೆ ಸಾಮಾಜಿಕ ಜಾಲದ ಮೂಲಕ ಪ್ರಸಾರ ಮಾಡುತ್ತಿದೆ.


ಕೃಷ್ಣೋಪದೇಶದ ಹಿನ್ನೆಲೆ: ಮಹಾಭಾರತ ಯುದ್ಧದಲ್ಲಿ ದ್ರೋಣ ವಧೆಯಾದ ಬಳಿಕ ಕುಪಿತನಾದ ಗುರುಪುತ್ರ ಅಶ್ವತ್ಥಾಮ ಪಾಂಡವ ಸೇನೆಯ ಮೇಲೆ ಮಾರಣಾಂತಿಕ ನಾರಾಯಣಾಸ್ತ್ರವನ್ನು ಪ್ರಯೋಗ ಮಾಡುತ್ತಾನೆ.  ಅದನ್ನು ಪ್ರತಿಭಟಿಸಲು ಸಿದ್ಧನಾದ ಭೀಮಸೇನನನ್ನು ತಡೆದ ಶ್ರೀಕೃಷ್ಣ ‘ಪ್ರಕೃತಿಯ ಎದುರಿನಲ್ಲಿ ಮಾನವನ ಶಕ್ತಿ ಕ್ಷುಲ್ಲಕ. ಅದಕ್ಕೆ ಶರಣಾಗುವುದೇ ಪರಿಹಾರ’ ಎಂದು ಉಪದೇಶಿಸುತ್ತಾನೆ. ಅವನ ಮುನ್ನೆಚ್ಚರಿಕೆಯಂತೆ ಪಾಂಡವರು ಆ ಮಹಾಸ್ತ್ರಕ್ಕೆ ಶರಣಾಗಿ ಜೀವ ಉಳಿಸಿಕೊಳ್ಳುತ್ತಾರೆ.

ಈ ಘಟನೆಯನ್ನಾಧರಿಸಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ *’ನಾರಾಯಣಾಸ್ತ್ರ – ಕೊರೊನಾಸ್ತ್ರ’* ಎಂಬ ಜನಜಾಗೃತಿಯ ಯಕ್ಷಗಾನ ಪ್ರಸಂಗವನ್ನು ಹೆಣೆಯಲಾಗಿದೆ. ಇದರಲ್ಲಿ ಸುಶ್ರುತನೆಂಬ ವೈದ್ಯ ಪಂಡಿತನ ಮೂಲಕ ಶ್ರೀಕೃಷ್ಣನ ಮಾದರಿಯಲ್ಲಿ ಮನುಕುಲಕ್ಕೆ ಕೋವಿಡ್ ವಿಮುಕ್ತಿಯ ಮುಂಜಾಗ್ರತಾ ಕ್ರಮಗಳನ್ನು ನಿರೂಪಿಸಲಾಗಿದೆ. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಡಾ.ದಿನಕರ ಎಸ್. ಪಚ್ಚನಾಡಿ ಹಾಡುಗಳನ್ನು ರಚಿಸಿದ್ದಾರೆ. ಕಾರ್ಯಕ್ರಮದ ನಿರ್ಮಾಣದಲ್ಲಿ ಸಹಕರಿಸಿದವರು ಪೊಸಕುರಲ್ ಸುದ್ದಿ ಮಾಧ್ಯಮದ ವಿದ್ಯಾಧರ ಶೆಟ್ಟಿ.

ಪ್ರಸಿದ್ಧ ಕಲಾವಿದರ ಸಮ್ಮಿಲನ: ಕೊರೋನಾ ಜಾಗೃತಿಯ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಲೇಖಕ – ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ ಡಾ.ದಿನಕರ ಎಸ್. ಪಚ್ಚನಾಡಿ, ಸದಾಶಿವ ಆಳ್ವ ತಲಪಾಡಿ, ವಿದ್ಯಾಧರ ಶೆಟ್ಟಿ, ಪ್ರಶಾಂತ ಸಿ.ಕೆ. ಅವರೂ ಅರ್ಥಧಾರಿಗಳಾಗಿದ್ದಾರೆ.       ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ ಹಾಗೂ ಚಂಡೆ-ಮದ್ದಳೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ರಾಜೇಶ್  ಜೆಪ್ಪು ಕುಡುಪಾಡಿ ಸಹಕರಿಸಿದ್ದಾರೆ. ಚಿತ್ರೀಕರಣ ಶಿವಶಂಕರ್ ಮತ್ತು ಧನುಶ್  ಪೊಸಕುರಲ್ ಅವರದು.


‘ರಂಗವಿಹಾರ’ದಲ್ಲಿ ಪ್ರಸಾರ: ಮಂಗಳೂರಿನ ಪ್ರಾದೇಶಿಕ ಸುದ್ದಿವಾಹಿನಿ  ‘ನಮ್ಮಕುಡ್ಲ’ ಪ್ರತಿ ಆದಿತ್ಯವಾರ ಪ್ರಸ್ತುತ ಪಡಿಸುವ ‘ರಂಗ ವಿಹಾರ’ ಕರಾವಳಿಯ ಸಾಂಸ್ಕೃತಿಕ ಜಗತ್ತಿನ ಅನಾವರಣ ಕಾರ್ಯಕ್ರಮದ 13 ನೇ ಅಂಕವಾಗಿ ಈ ‘ನಾರಾಯಣಾಸ್ತ್ರ- ಕೊರೋನಾಸ್ತ್ರ’ ಯಕ್ಷಗಾನ ತಾಳಮದ್ದಳೆ 2 ಭಾಗಗಳಲ್ಲಿ ಪ್ರಸಾರವಾಗುವುದು. ಮೊದಲ ಭಾಗ ಮೇ 15, 2021 ರಂದು ಶನಿವಾರ ಸಂಜೆ ಗಂಟೆ 4.00 ಕ್ಕೆ ಪ್ರಸಾರವಾಗುವುದು. ದ್ವಿತೀಯ ಭಾಗ  ಮರುದಿನ ಮೇ 16, 2021 ರಂದು ಆದಿತ್ಯವಾರ ಸಾಯಂಕಾಲ ಗಂ.6.00 ಕ್ಕೆ ಪ್ರಸಾರ ವಾಗುವುದು. ಹೊರನಾಡು ಮತ್ತು ವಿದೇಶಗಳಲ್ಲಿರುವ ಕಲಾಸಕ್ತರು ವೆಬ್ ಸೈಟ್ ಮತ್ತು ಫೇಸ್ ಬುಕ್ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದೆಂದು ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments