ನಿಡಂಬೂರು ಮಾಗಣೆಯ ಶ್ರೇಷ್ಠ ಸಾಧಕರಿಗೆ ನೀಡುವ ‘ನಿಡಂಬೂರು ಶ್ರೀ’ ಪ್ರಶಸ್ತಿಯನ್ನು ಈ ಬಾರಿ ಕಿದಿಯೂರಿನ ಖ್ಯಾತ ವಯಲಿನ್ ವಾದಕಿ ವಿದ್ವಾನ್ ವಸಂತಿ ರಾಮ ಭಟ್ ಇವರಿಗೆ ಏಪ್ರಿಲ್ ಹನ್ನೊಂದರಂದು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆದ ಮಧೂರು ಮಾಧುರ್ಯ ಸಮಾರಂಭದ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ವಸಂತಿ ರಾಮ ಭಟ್ ನೂರಾರು ವಿದ್ಯಾರ್ಥಿಗಳಿಗೆ ಬಹಳ ಪ್ರೀತಿಯಿಂದ ವಯಲಿನ್ ವಿದ್ಯೆಯನ್ನು ಕಲಿಸಿ ಅವರನ್ನು ಕಲಾವಿದರನ್ನಾಗಿಸಿ ಸಮಾಜಕ್ಕೆ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಸ್ವತಃ ಶ್ರೇಷ್ಠ ವಯಲಿನ್ ವಾದಕಿಯಾಗಿರುವ ವಸಂತಿ ಭಟ್ರು ನಮ್ಮ ನಿಡಂಬೂರು ಮಾಗಣೆ ಹೆಮ್ಮೆಪಡುವ ಸಾಧಕಿ. ಈ ಬಾರಿಯ ನಿಡಂಬೂರು ಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂಬುದಾಗಿ ಪ್ರಶಸ್ತಿಯ ಸ್ಥಾಪಕರಾದ ಡಾಕ್ಟರ್ ನಿಡಂಬೂರು ಬೀಡು ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಿ ನುಡಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಅರ್ಜುನ್ ಬಲ್ಲಾಳ್, ಡಾಕ್ಟರ್ ಶ್ರುತಿ ಅರ್ಜುನ್ ಬಲ್ಲಾಳ್, ವಿದ್ವಾನ್ ಮದ್ವೇಶ ಭಟ್ ಹಾಗೂ ಶ್ರೀಮತಿ ಜ್ಯೋತಿ ಸತೀಶ್ ಭಟ್ ಉಪಸ್ಥಿತರಿದ್ದರು. ಕಳೆದ ಬಾರಿ ಈ ಪ್ರಶಸ್ತಿಯನ್ನು ಅಂಬಲಪಾಡಿಯ ಹಿರಿಯ ಸಮಾಜಸೇವಕರಾದ ವಿಶು ಶೆಟ್ಟಿ ಅವರಿಗೆ ನೀಡಲಾಗಿತ್ತು.