Friday, November 22, 2024
Homeಯಕ್ಷಗಾನಯಕ್ಷಕಲೆಯ ಭೀಷ್ಮ ಶ್ರೀ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು (1918-2006)

ಯಕ್ಷಕಲೆಯ ಭೀಷ್ಮ ಶ್ರೀ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು (1918-2006)

ಹರಿದಾಸ ಶೇಣಿ ಡಾ. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷರಂಗದ ಭೀಷ್ಮನೆಂದೇ ಖ್ಯಾತರಾಗಿದ್ದವರು. ಹರಿದಾಸರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ವೇಷಧಾರಿಯಾಗಿ ಕಲಾಬದುಕಿನುದ್ದಕ್ಕೂ ಕಲಾಭಿಮಾನಿಗಳನ್ನು ರಂಜಿಸಿ, ಅವರ ಪ್ರಶಂಸೆಗೆ ಪಾತ್ರರಾಗಿದ್ದರು. ಸಂಘಟಕರಾಗಿಯೂ ಪ್ರಸಂಗಕರ್ತರಾಗಿಯೂ ಯಕ್ಷಗಾನಕ್ಕೆ ಶ್ರೀ ಶೇಣಿಯವರ ಕೊಡುಗೆಗಳಿವೆ. ಯಕ್ಷಗಾನದ ವಿದ್ವಾಂಸರಾಗಿದ್ದ ಶ್ರೀ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಬಗೆಗೆ ಬರೆಯಬೇಕೆಂಬ ಆಸೆಯ ಜೊತೆಗೆ ಭಯವೂ ಹುಟ್ಟಿಕೊಂಡಿತ್ತು. ಅವರ ಬಗೆಗೆ ಬರೆಯುವ ಅರ್ಹತೆ ನನಗಿದೆಯೇ? ಬರೆಯಲು ನನ್ನಿಂದ ಸಾಧ್ಯವೇ? ಹೀಗೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿದ್ದುವು. ನಿಜವಾಗಿಯೂ ಶೇಣಿ ಸಾಮಗರಂತಹಾ ವಿದ್ವಾಂಸರ ಬಗೆಗೆ ಬರೆಯಲು ನಾನು ಅರ್ಹತೆಯನ್ನು ಹೊಂದಿಲ್ಲ. ಆದರೂ ಲೇಖಕನಿಗೆ ಕರ್ತವ್ಯ ಎಂಬ ನೆಲೆಯಲ್ಲಿ ಇದು ಒಂದು ನನ್ನ ಸಣ್ಣ ಪ್ರಯತ್ನ ಅಷ್ಟೆ.

ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಇಳಿವಯಸ್ಸಿನಲ್ಲಿ ಅವರು ನಿರ್ವಹಿಸಿದ ಕೆಲವು ವೇಷಗಳನ್ನು ನೋಡುವ ಅವಕಾಶ ಸಿಕ್ಕಿದೆ. ತಾಳಮದ್ದಳೆ ಅರ್ಥಗಾರಿಕೆಯನ್ನು ಅದೆಷ್ಟೋ ಬಾರಿ ಕೇಳುವ ಅವಕಾಶವೂ ದೊರೆತಿದೆ. ಅವರ ಬಳಿ ಕುಳಿತು ಮಾತನಾಡುವ ಭಾಗ್ಯವೂ ನನ್ನದಾಗಿತ್ತು. ಪ್ರೀತಿಯಿಂದ ಬಹಳ ಹೊತ್ತು ಹಲವು ಬಾರಿ ಮಾತನಾಡಿಸಿದ್ದಾರೆ. ಹಲವು ಬಾರಿ ಅವರ ಭಾಷಣಗಳನ್ನು ಕೇಳುವ ಭಾಗ್ಯವೂ ನನ್ನದಾಗಿತ್ತು. ಶ್ರೀ ಶೇಣಿಯವರ ಕುರಿತು ಹಿರಿಯರಿಂದ ಕೇಳಿ ತಿಳಿದ ವಿಚಾರ, ನನ್ನ ಅನಿಸಿಕೆ ಮತ್ತು ಅವರ ಕುರಿತಾಗಿ ಪ್ರಕಟವಾದ ಪುಸ್ತಕಗಳನ್ನು ಓದಿ ಸಂಗ್ರಹಿಸಿದ ವಿಚಾರಗಳಿಂದ ಭಯದಿಂದಲೇ ಬರೆಯುವುದಕ್ಕೆ ಪ್ರಯತ್ನಿಸುತ್ತೇನೆ. 

ಸರಕಾರದಿಂದ ಮಾಶಾಸನವನ್ನು ಪಡೆಯುವುದಕ್ಕೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆಯುವುದಕ್ಕೆ ಅದರದ್ದೇ ಆದ ರೀತಿ ನೀತಿಗಳಿರುತ್ತವೆ (Formalities). ಆದರೆ ಯಾವುದೇ ನಿಯಮಕ್ಕೊಳಪಡದೆ ತನ್ನ ಪ್ರತಿಭೆ ಸಾಮರ್ಥ್ಯದಿಂದಲೇ ಇವೆರಡನ್ನೂ ತನ್ನದಾಗಿಸಿಕೊಂಡವರು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು. ಅಲ್ಲದೆ ಕೀರ್ತಿ, ಗೌರವ, ಪ್ರಶಸ್ತಿಗಳೆಲ್ಲವೂ ತಾನಾಗಿ ಒಲಿದು ಬಂದಿದ್ದುವು. ಎಲ್ಲವೂ ಶೇಣಿಯವರನ್ನು ಅರಸಿ ಬಂದು ಸೇರಿಕೊಂಡಿದ್ದುವು.

ಶ್ರೀ ಶೇಣಿಯವರು ಕಾಸರಗೋಡು ಪ್ರದೇಶದ ಕುಂಬಳೆ ಸಮೀಪದ ಎಡನಾಡು ಗ್ರಾಮದ ಅಜ್ಜಕಾನ ಮನೆಯವರು. ಅಜ್ಜಕಾನ ಶಂಭಟ್ಟರ ಪುತ್ರ ಶ್ರೀ ಅಜ್ಜಕಾನ ನಾರಾಯಣ ಭಟ್ಟ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ 1918 ಏಪ್ರಿಲ್ ತಿಂಗಳ 7ರಂದು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಈ ಲೋಕದ ಬೆಳಕನ್ನು ಕಂಡವರು. ಜನಿಸಿದ್ದು ನೀರ್ಚಾಲು ಸಮೀಪದ ಉಬ್ಬಾನ ಮನೆಯಲ್ಲಿ. ಇದು ಶೇಣಿಯವರ ಅಜ್ಜನ ಮನೆ. ನಾರಾಯಣ ಭಟ್ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮದುವೆಯಾಗಿ ಬಹಳ ಕಾಲ ಮಕ್ಕಳನ್ನು ಪಡೆಯುವ ಭಾಗ್ಯ ಒದಗಿರಲಿಲ್ಲ. ಆ ಭಾಗ್ಯವು ನಮಗಿಲ್ಲ ಎಂದೇ ಭಾವಿಸಿದ್ದರಂತೆ. ಆದರೆ ದೇವರ ಇಚ್ಛೆ ಹಾಗಿರಲಿಲ್ಲ. ಲಕ್ಷ್ಮಿ ಅಮ್ಮನವರು ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮವಿತ್ತರು. ಇದು ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವರ ಪ್ರಸಾದ ಎಂದು ಭಾವಿಸಿ ಅಜ್ಜಕಾನ ನಾರಾಯಣ ಭಟ್, ಲಕ್ಷ್ಮಿ ಅಮ್ಮ  ದಂಪತಿಗಳು ಸಂತಸದಿಂದ ಹಿಗ್ಗಿದರು. ಅಜ್ಜಕಾನ ಗೋಪಾಲಕೃಷ್ಣ ಎಂದು ಹೆಸರನ್ನಿರಿಸಿದರು.

ಕೇವಲ ಮೂರು ವರ್ಷ ತುಂಬುವ ಮೊದಲೇ ತೀರ್ಥರೂಪರನ್ನು ಕಳೆದುಕೊಂಡು, ತಾಯಿ ಮತ್ತು ಅಜ್ಜಿಯ ಆಸರೆಯಲ್ಲೇ ಬೆಳೆಯಬೇಕಾಗಿ ಬಂದಿತ್ತು. ಉಬ್ಬಾನ ಮನೆಯನ್ನು ತೊರೆದು ಪೆರಡಾಲದ ಕೊಡ್ವಕೆರೆ ಎಂಬಲ್ಲಿ ವಾಸ. ಕೆಲ ಸಮಯದ ಬಳಿಕ ಅಜ್ಜನನ್ನೂ ಕಳೆದುಕೊಂಡಿದ್ದರು. (ತಾಯಿಯ ತಂದೆ). ಚಿಕ್ಕಪ್ಪ ಕಾರಿಂಜ ವೆಂಕಟೇಶ ಭಟ್ಟರು (ಚಿಕ್ಕಮ್ಮನ ಗಂಡ) ತನ್ನ ಕುಟುಂಬದ ಹೊಣೆಯ ಜತೆ ಇವರ ಮನೆಯ ಹೊಣೆಯನ್ನೂ ಹೊತ್ತು ಸಹಕರಿಸಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದ ಶೇಣಿಯವರು ಚಿಕ್ಕಮ್ಮನ ಮನೆಗೆ ಹೋಗಿ ರಜಾದಿನಗಳನ್ನು ಕಳೆಯುವ ನೆಪವನ್ನು ಹೂಡಿ ಅಲ್ಲಿ ನಡೆಯುತ್ತಿದ್ದ ಇಚ್ಲಂಪಾಡಿ ಮೇಳದ ಆಟಗಳನ್ನು ನೋಡುತ್ತಿದ್ದರು. ಹಾಗಾಗಿ ಹಿಂದಿನ ಕಾಲದ ಪ್ರದರ್ಶನಗಳು ಹೇಗಿದ್ದುವು ಎಂಬುದನ್ನು ಪ್ರತ್ಯಕ್ಷದರ್ಶಿಯಾಗಿ ಶ್ರೀ ಶೇಣಿಯವರು ಹೇಳುವ ಅಧಿಕಾರವನ್ನು ಹೊಂದಿದ್ದರು.

ಓದಿದ್ದು ಮೂರು ವಿದ್ಯಾಸಂಸ್ಥೆಗಳಲ್ಲಿ. ಐದನೇ ತರಗತಿಯ ವರೆಗೆ ಬೇಳ ಬೋರ್ಡ್ ಎಲಿಮೆಂಟರಿ ಶಾಲೆಯಲ್ಲಿ. ಅಲ್ಲಿನ ಅಧ್ಯಾಪಕರು ಯಕ್ಷಗಾನ ಪ್ರಿಯರಾಗಿದ್ದರು. ಶ್ರೀ ಶೇಣಿಯವರ ಹಸ್ತಾಕ್ಷರಗಳು ಸುಂದರವಾಗಿವೆ ಎಂಬ ಕಾರಣಕ್ಕೆ ‘ಅಂಶುಮತಿ ಕಲ್ಯಾಣ’ ಎಂಬ ಪ್ರಸಂಗ ಪುಸ್ತಕವನ್ನು ನೀಡಿ ಹಸ್ತಪ್ರತಿ ಬರೆಯಲು ಅಧ್ಯಾಪಕರು ಸೂಚಿಸಿದ್ದರು. ಆಟ ನೋಡಿ ಶೇಣಿಯವರು ಆ ಪ್ರಸಂಗದ ಪದ್ಯಗಳನ್ನು ಮೊದಲೇ ಕೇಳಿದ್ದರು. ಓದುತ್ತಾ ಬರೆಯುತ್ತಾ ಇಡೀ ಪ್ರಸಂಗವೇ ಶೇಣಿಯವರಿಗೆ ಕಂಠಪಾಠವಾಗಿತ್ತು. ಅದೇ ಹೊತ್ತಿಗೆ ಬೇಳದಲ್ಲಿ ಕೋಡಿಂಗಾರು ಕೋಚಣ್ಣ ಭಂಡಾರಿಗಳು ಮತ್ತು ಕಿಂಞಣ್ಣ ಭಂಡಾರಿಗಳು ಸಮಾನ ಮನಸ್ಕರನ್ನು ಸೇರಿಸಿಕೊಂಡು ‘ಶ್ರೀ ಸುಬ್ರಹ್ಮಣ್ಯ ಕೃಪಾಪೋಷಿತ ನಾಟಕ ಮಂಡಳಿ’ ಎಂಬ ತಂಡವನ್ನು ಸ್ಥಾಪಿಸಿದರು. ಮೊದಲ ನಾಟಕ ‘ಭಕ್ತಿ ಸಾಮ್ರಾಜ್ಯ’. ಅಹಲ್ಯೆಯ ಪಾತ್ರ ಧರಿಸಿ ಶೇಣಿಯವರು ರಂಗವೇರಿದ್ದರು (1927). ಈ ನಾಟಕವನ್ನು ಬರೆದವರು ಸುರತ್ಕಲ್ಲು ಸುಬ್ಬರಾಯರು. ಇವರು ಬರೆದ ನಾಟಕದಲ್ಲಿ ಮೊದಲು ಬಣ್ಣ ಹಚ್ಚಿದ ಶೇಣಿಯವರು ಶ್ರೀ ಸುರತ್ಕಲ್ ಮೇಳದಲ್ಲಿ ಕೊನೆವರೆಗೂ ಬಣ್ಣ ಹಚ್ಚಿ ಕಲಾವಿದನಾಗಿ ರಂಜಿಸಿದ್ದು ವಿಶೇಷ.

ಮೊದಲ ನಾಟಕ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು ಉತ್ಸಾಹಿತರಾಗಿ ನಾಟಕ ಶಾಲೆಯನ್ನೇ ತೆರೆಯಲಾಯಿತು. ನಾಟಕ ಅಧ್ಯಾಪಕರಾಗಿ ವಿಟ್ಲ ಗಣಪತಿ ರಾಯರು ತರಬೇತಿಯನ್ನು ನೀಡಿದ್ದರು. ಸದಾರಮೆ ನಾಟಕದಲ್ಲಿ ಶೇಣಿಯವರು ಲೀಲಾವತಿ ಪಾತ್ರವನ್ನು ನಿರ್ವಹಿಸಿದರು. ಬಳಿಕ ಮೃಚ್ಛಕಟಿಕ, ಹರಿಶ್ಚಂದ್ರ, ಗಿರಿಜಾ ಕಲ್ಯಾಣ, ಪ್ರಹ್ಲಾದ ಚರಿತ್ರೆ ಮೊದಲಾದ ಸಂಗೀತ ನಾಟಕಗಳು ಯಶಸ್ವಿಯಾದವು. ಅಭಿನಯದ ರೀತಿ, ಮಾತಿನ ಧಾಟಿ, ಸಂಗೀತದ ಜ್ಞಾನ, ತಾಳಲಯಗಳ ಹೊಂದಾಣಿಕೆಯಿಂದ ಛಂದಸ್ಸಿಗೆ ಭಂಗವಾಗದಂತೆ ಸಾಹಿತ್ಯ ಶುದ್ಧಿಯಿಂದ ಹಾಡುವ ರೀತಿಗಳು ವಿಟ್ಲ ಗಣಪತಿ ರಾಯರ ಪಾಠದಿಂದ ತಿಳಿದುಕೊಂಡ ಶೇಣಿಯವರ ಕಲಾಜೀವನದ ಗೆಲುವಿಗೆ ಅದುವೇ ಮೂಲಧನವಾಗಿ ಪರಿಣಮಿಸಿತ್ತು.

ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಎರಡು ವರ್ಷಗಳ ಕಾಲ ನಾಟಕ ನಟನಾಗಿ ಕಲಾಸೇವೆ. ಮತ್ತೆ ವಿದ್ಯಾರ್ಜನೆಯತ್ತ. ಕುಂಬಳೆಯ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಗೆ ಆರನೇ ತರಗತಿಗೆ ಸೇರ್ಪಡೆ. ಎಂಟನೇ ತರಗತಿಯಲ್ಲಿ ಉತ್ತೀರ್ಣನಾಗಿ ನಾಯ್ಕಾಪು ಏಡೆಡ್ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ. ಅದು ಖ್ಯಾತ ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರ ಸಹೋದರ ವಿದ್ವಾನ್ ಡಿ.ವಿ. ಹೊಳ್ಳರ ಮ್ಯಾನೇಜ್ಮೆಂಟ್ ಶಾಲೆಗಳಲ್ಲಿ ಒಂದಾಗಿತ್ತು. ಅವರೇ ಮುಖ್ಯೋಪಾದ್ಯಾಯರಾಗಿದ್ದರು. ಶ್ರೀಯುತರು ಅರ್ಥಧಾರಿಗಳೂ ಪ್ರಸಂಗಕರ್ತರೂ ಆದುದರಿಂದ ಶೇಣಿಯವರಿಗೆ ಅನುಕೂಲವೇ ಆಗಿತ್ತು. ಒಂದು ವರ್ಷ ಅಧ್ಯಾಪಕನಾಗಿ ಮತ್ತೆ ಹೆಚ್ಚಿನ ವಿದ್ಯಾರ್ಜನೆಗಾಗಿ ಪೆರಡಾಲ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿಗೆ ಸೇರ್ಪಡೆ. ಕನ್ನಡದೋಜ ಪೆರಡಾಲ ಕೃಷ್ಣಯ್ಯ, ಸಂಸ್ಕೃತ ವಿದ್ವಾಂಸರಾದ ದರ್ಭೆ ನಾರಾಯಣ ಶಾಸ್ತ್ರಿ, ಚಾರಿಗುಳಿ ಸುಬ್ರಾಯ ಶಾಸ್ತ್ರಿಗಳಿಂದ ಜ್ಞಾನಾರ್ಜನೆ. ಮುಖ್ಯೋಪಾಧ್ಯಾಯರಾದ ಶ್ರೀ ಬಿ. ನಾರಾಯಣ ಭಟ್ಟರಿಂದ ನಾಟಕ ಪ್ರದರ್ಶನಕ್ಕೆ ಪ್ರೋತ್ಸಾಹ. ಪ್ರಿನ್ಸಿಪಾಲ, ಅಧ್ಯಾಪಕರುಗಳ ನಿರ್ದೇಶನದಲ್ಲಿ ವಿಷಮ ವಿವಾಹ, ಸತ್ಯ ಸಂಕಲ್ಪ, ಕಂಸ ವಧೆ, ನಿರುಪಮಾ ಎಂಬ ನಾಟಕಗಳು ಯಶಸ್ವಿಯಾಗಿದ್ದುವು.

ಹೀಗೆ ವಿದ್ಯಾರ್ಥಿ, ಅಧ್ಯಾಪಕ, ನಾಟಕ ನಟ ಎಂಬ ಸ್ತರಗಳಲ್ಲಿ ಹದಿನೈದು ವರ್ಷ ಕಳೆದರೂ ಯಕ್ಷಗಾನಾಸಕ್ತಿ ಅವ್ಯಕ್ತವಾಗಿಯೇ ಇತ್ತು. ಅದು ಹೊರಪ್ರಪಂಚಕ್ಕೆ ಪ್ರಕಟವಾಗಲು ಚಡಪಡಿಸುತ್ತಿತ್ತು. ಇಚ್ಲಂಪಾಡಿ, ಕೂಡ್ಲು, ಕೊರಕ್ಕೋಡು, ಹಂಪನಕಟ್ಟೆ ಮೊದಲಾದ ಮೇಳಗಳ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದರು. ಕೊರಕ್ಕೋಡು ಮೇಳದವರು ಪ್ರದರ್ಶಿಸಿದ  ಮೊತ್ತ ಮೊದಲ ದೇವಿ ಮಹಾತ್ಮೆ ಪ್ರಸಂಗ. ಮೂರು ದಿನಗಳ ಆಟ. ಎರಡನೇ ದಿನದ ಆಟವನ್ನು ಶೇಣಿಯವರು ನೋಡಿದ್ದರಂತೆ. ಆ ಕಾಲದ ಸುಪ್ರಸಿದ್ಧ ಕಲಾವಿದರ ಅರ್ಥಗಾರಿಕೆಯನ್ನು ವೇಷಗಾರಿಕೆಯನ್ನು ನೋಡುತ್ತಾ ಬೆಳೆದವರು. ಪೆರಡಾಲ ಮಹಾಜನ ಕಾಲೇಜಿನ ವಿದ್ಯಾರ್ಥಿಯಾಗಿರುವಾಗ ಪೆರಡಾಲ ಕೃಷ್ಣಯ್ಯನವರ ಸೂಚನೆಯಂತೆ ‘ಯಾದವಾಭ್ಯುದಯ’ ಎಂಬ ಪ್ರಸಂಗದ ಹಸ್ತಪ್ರತಿಯನ್ನು ಬರೆದು ನೀಡಿದ್ದರು. ಅಂದಿನ ಎಲ್ಲಾ ತಾಳಮದ್ದಳೆ ಕಲಾವಿದರ ಅರ್ಥಗಾರಿಕೆಯನ್ನು ಕೇಳುತ್ತಿದ್ದರು. ಅದರಲ್ಲಿ ಶೇಣಿಯವರ ಮನಸ್ಸನ್ನು ಆಕರ್ಷಿಸಿದವರು ಕೆ.ಪಿ.ವೆಂಕಪ್ಪ ಶೆಟ್ಟರು ಮತ್ತು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು.

ಪೆರಡಾಲ ಮಹಾಜನ ಕಾಲೇಜಿನಲ್ಲಿ ವಿದ್ಯಾರ್ಜನೆಯ ಬಳಿಕ ಮೈರೆ ಗ್ರಾಮದ ಶೇಣಿ  ಎಂಬಲ್ಲಿ ವಾಸ. ಹೀಗೆ ಅಜ್ಜಕಾನ ಗೋಪಾಲಕೃಷ್ಣ ಭಟ್ಟರು ಶೇಣಿ ಗೋಪಾಲಕೃಷ್ಣ ಭಟ್ ಎನಿಸಿಕೊಂಡರು. ಉಕ್ಕಿನಡ್ಕ ಮತ್ತು ಪೆರ್ಲ ಶೇಣಿಗೆ ಸಮೀಪದ ಊರುಗಳು. ಈ ಊರುಗಳಲ್ಲಿ ವಿದ್ವಾಂಸರ, ಕಲಾವಿದರ ಗಡಣವೇ ತುಂಬಿತ್ತು. ಆಟ ತಾಳಮದ್ದಲೆಗಳೂ ನಡೆಯುತ್ತಿದ್ದುವು. ಉಕ್ಕಿನಡ್ಕ ವಸಿಷ್ಠಾಶ್ರಮ ಶಾಲೆಯಲ್ಲಿ ರತಿಕಲ್ಯಾಣ ಪ್ರಸಂಗ. ಕೀರಿಕ್ಕಾಡು ಮಾಸ್ತರರ ಹೇಳಿಕೆಯಿಂದ ಅರ್ಜುನನಾಗಿ ತಾಳಮದ್ದಳೆ ರಂಗಪ್ರವೇಶ. ಮತ್ತೆ ಹಿಂತಿರುಗಿ ನೋಡಿದವರಲ್ಲ. ತಾಳಮದ್ದಳೆ ಅರ್ಥಧಾರಿಯಾಗಿ ಹಿರಿಯರ ಜತೆ ಖಾಯಂ ಕಾಣಿಸಿಕೊಂಡರು. ಅದೇ ಉಕ್ಕಿನಡ್ಕ ಶಾಲೆಯಲ್ಲಿ ಅನಿವಾರ್ಯವಾಗಿ ಹರಿಕಥೆಯನ್ನೂ ನಡೆಸಿಕೊಡುವ ಸಂದರ್ಭವು ಒದಗಿತ್ತು. ಮೊದಲ ಪ್ರಯೋಗದಲ್ಲೇ ಯಶಸ್ವಿಯಾದುದು ಮಾತ್ರವಲ್ಲ, ಆರು ತಿಂಗಳೊಳಗೆ ಶಾಲೆ, ದೇವಸ್ಥಾನ, ಮನೆಗಳಲ್ಲಿ ನೂರಕ್ಕೂ ಹೆಚ್ಚು ಹರಿಕಥೆಗಳನ್ನು ನಡೆಸುವಂತಾಗಿತ್ತು. ಗಾಳಿಗೆ ಸಿಕ್ಕ ಕಸ್ತೂರಿಯ ಪರಿಮಳವು ಹರಡಿದಂತೆ ಶೇಣಿಯವರ ಹರಿಕಥೆಯ ಕೀರ್ತಿಯು ಎಲ್ಲೆಡೆ ಪ್ರಚಾರವನ್ನು ಪಡೆದಿತ್ತು.

1944ರಲ್ಲಿ ಮೇಘನಾದ ವಿಜಯ ಎಂಬ ಪ್ರಸಂಗ ರಚನೆ. 1945ರಲ್ಲಿ ಶೇಣಿಯಿಂದ ತೆರಳಿ ಕಾಸರಗೋಡಿನಲ್ಲಿ ನೆಲೆಸಿದ್ದರು. ಆದರೂ ಶೇಣಿ ಗೋಪಾಲಕೃಷ್ಣ ಭಟ್ ಎಂದೇ ಕರೆಸಿಕೊಂಡರು. ಮೈಸೂರು, ಕಲ್ಲಿಕೋಟೆ ಮೊದಲಾದೆಡೆ ಹರಿಕಥೆಗಳನ್ನು ನಡೆಸಿ ಹರಿದಾಸರೆಂಬ ಖ್ಯಾತಿಗೆ ಪಾತ್ರರಾದರು. ಆ ವೇಳೆಗಾಗಲೇ ಗೃಹಣಿ, ರಾಮಾಂಜನೇಯ, ಮಾತೃಭಕ್ತಿ ಎಂಬ ನಾಟಕಗಳನ್ನು ಬರೆದಿದ್ದರು. ಇವೆಲ್ಲವೂ ಪ್ರದರ್ಶಿಸಲ್ಪಟ್ಟಿತ್ತು. ಇವುಗಳಲ್ಲಿ ಮಾತೃಭಕ್ತಿ ಎಂಬ ನಾಟಕವು ಅಚ್ಚಾಗಿ ಪ್ರಕಟವಾಗಿತ್ತು. ಮೈಸೂರು ಕಲ್ಲಿಕೋಟೆಯಿಂದ ಮರಳಿದ ಬಳಿಕ ತಾಳಮದ್ದಳೆ ಅರ್ಥಧಾರಿಯಾಗಿ ತೊಡಗಿಸಿಕೊಂಡರು. ಕವಿಭೂಷಣ ವೆಂಕಪ್ಪ ಶೆಟ್ಟಿ, ಕೀರಿಕ್ಕಾಡು ಮಾಸ್ತರ್ ಮೊದಲಾದ ಹಿರಿಯರೊಂದಿಗೆ ಅರ್ಥಗಾರಿಕೆಯಲ್ಲಿ ತೊಡಗಿ ಬೆಳೆಯುತ್ತಾ ಸಾಗಿದ್ದರು. ಇವರ ಗರಡಿಯಲ್ಲಿ ನಾನು ಕಲಿತು ಪಳಗಿದೆನೆಂದು ಶೇಣಿಯವರು ಹೇಳುತ್ತಿದ್ದರು. ವೆಂಕಪ್ಪ ಶೆಟ್ಟರ ಜೊತೆಯಾಗಿ ಅರ್ಥ ಹೇಳಲು ತೊಡಗಿ, ಪೊಳಲಿ ಶಾಸ್ತ್ರಿಗಳು, ಕುಬಣೂರು ಬಾಲಕೃಷ್ಣ ರಾಯರು, ಮಲ್ಪೆ ಶಂಕರನಾರಾಯಣ ಸಾಮಗ ಮೊದಲಾದ ಹಿರಿಯರ ಜತೆಗೆ ಅರ್ಥ ಹೇಳುವ ಭಾಗ್ಯವೂ ಒದಗಿತ್ತು.

ಕೆ.ಪಿ.ವೆಂಕಪ್ಪ ಶೆಟ್ಟರ ಇಳಿ ವಯಸ್ಸಿನಲ್ಲಿ ಅವರನ್ನು ನೋಡಲು ಕುಬಣೂರು ಬಾಲಕೃಷ್ಣ ರಾಯರೂ ಶೇಣಿಯವರೂ ತೆರಳಿದ ಸಂದರ್ಭದಲ್ಲಿ “ನಾನಿನ್ನು ಮೊದಲಿನಂತಾಗಿ ಅರ್ಥ ಹೇಳಲು ಸಾಧ್ಯತೆಯಿದೆಯೆಂಬ ಭರವಸೆ ಇಲ್ಲ. ಆದರೆ ಇದೋ ಈ ಶೇಣಿಯನ್ನು ನನ್ನ ಪ್ರತಿನಿಧಿಯಾಗಿ ನಿಮ್ಮ ಕೈಗೆ ಒಪ್ಪಿಸುತ್ತೇನೆ. ಸ್ವಲ್ಪ ದುಡುಕು, ಒಗರಿದೆಯೆಂಬ ದೋಷವನ್ನು ಬಿಟ್ಟರೆ ಈತನನ್ನು ತಿದ್ದಿ ಸರಿ ದಾರಿಯಲ್ಲಿ ನೀವು ನಡೆಸಿಕೊಂಡರೆ ಒಬ್ಬ ಒಳ್ಳೆಯ ಅರ್ಥಧಾರಿಯನ್ನು ನೀವು ಸಂಗ್ರಹಿಸಿದಂತಾದೀತು. ನಾನು ಕಂಡ ಕಿರಿಯರಲ್ಲಿ ನನಗೆ ಭರವಸೆ ಹುಟ್ಟಿಸಿದವರಲ್ಲಿ ಈತನೇ ಮೊದಲಿಗನೆಂದು ಈ ಮಾತನ್ನು ಹೇಳುತ್ತಿದ್ದೇನೆ” ಕೆ.ಪಿ.ವೆಂಕಪ್ಪ ಶೆಟ್ಟರು ಕುಬಣೂರು ಬಾಲಕೃಷ್ಣ ರಾಯರಲ್ಲಿ ಹೇಳಿದ ಮಾತಿದು. ಶೇಣಿಯವರಿಗೆ ಬೇರೆ ಪ್ರಮಾಣ ಪತ್ರ ಬೇಕೇ?

ಅವರ ಮಾತು ಹುಸಿಯಾಗಲಿಲ್ಲ. ಕುಬಣೂರು ಬಾಲಕೃಷ್ಣ ರಾಯರ ತಂಡವು ಕಡತೋಕಾ ಮಂಜುನಾಥ ಭಾಗವತರ ಕೇಳಿಕೆಯಂತೆ ಉತ್ತರ ಕನ್ನಡದಾದ್ಯಂತ ನಡೆಸಿಕೊಟ್ಟ ತಾಳಮದ್ದಳೆಗಳಲ್ಲಿ ಶೇಣಿಯವರು ಹೊಳೆದು ಕಾಣಿಸಿಕೊಂಡಿದ್ದರು. ಕೂಡ್ಲು ಮೇಳದ ಪ್ರದರ್ಶನ. ಕೃಷ್ಣ ಸಂಧಾನ ಪ್ರಸಂಗ. ಶಂಕರನಾರಾಯಣ ಸಾಮಗರ ಕೌರವ. ಶೇಣಿಯವರು ಶ್ರೀಕೃಷ್ಣನಾಗಿ ಕಾಣಿಸಿಕೊಂಡು ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು. ಇದಕ್ಕಿಂತ ಮೊದಲು ಕೆಲವು ಬಾರಿ ಯಕ್ಷಗಾನ ನಾಟಕಗಳಲ್ಲಿ ವೇಷ ಮಾಡಿದ್ದರಂತೆ. ಬಳಿಕ ಧರ್ಮಸ್ಥಳ ಮೇಳದಲ್ಲೂ ಸಾಮಗರು ಮತ್ತು ಶೇಣಿಯವರು ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಇವರುಗಳ ಪ್ರವೇಶದಿಂದ ನೇಪಥ್ಯವನ್ನು ಸೇರಿಕೊಂಡಿದ್ದ ರಾವಣವಧೆ, ವಾಲಿವಧೆ, ಮಾಗದವಧೆ ಮೊದಲಾದ ಪ್ರಸಂಗಗಳು ಮತ್ತೆ ಪ್ರದರ್ಶನಗೊಂಡವು. ಹರಿದಾಸರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ವೇಷಧಾರಿಯಾಗಿ ಶ್ರೀ ಶೇಣಿಯವರ ಕಲಾಬದುಕು ವಿಜೃಂಭಿಸುತ್ತಾ ಮುನ್ನಡೆಯಿತು. 

ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಕ್ಕೆ ಸೇರಿ ಹೋಗಿತ್ತು. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿ ಎರಡು ಶತಮಾನಗಳ ಭವ್ಯ ಇತಿಹಾಸವುಳ್ಳ ಕೂಡ್ಲು ಮೇಳವನ್ನು ಬೆಳೆಸಿ ಕರ್ನಾಟಕದಾದ್ಯಂತ ತಿರುಗಾಟ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಇದು ಕೂಡ್ಲು ಶಾನುಭಾಗ ಮನೆಯವರ ನಿರ್ಣಯ. ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಎಂಬ ಹೆಸರಿನಲ್ಲಿ ಶೇಣಿಯವರ ಸಂಚಾಲಕತ್ವದಲ್ಲಿ ಮೇಳವು ತಿರುಗಾಟಕ್ಕೆ ಹೊರಟಿತ್ತು. ಹೀಗೆ ಸಂಘಟಕನಾಗಿಯೂ ಕಾಣಿಸಿಕೊಂಡರು.

ಮೂರು ವರ್ಷಗಳ ಕಾಲ ಮೇಳದ ಸಂಚಾಲಕರಾಗಿ ಮತ್ತು ಕಲಾವಿದರಾಗಿ ಕೂಡ್ಲು ಮೇಳದಲ್ಲಿ ತಿರುಗಾಟ. ಬಳಿಕ ಕಸ್ತೂರಿ ಪೈ ಸಹೋದರರ ಕೇಳಿಕೆಯಂತೆ ಸುರತ್ಕಲ್ ಮೇಳಕ್ಕೆ. ಬಳಿಕ ಕಲ್ಲಾಡಿ ಕೊರಗ ಶೆಟ್ಟರ ಆಹ್ವಾನದಂತೆ ಕುಂಡಾವು ಮೇಳಕ್ಕೆ. ಒಂದು ವರ್ಷ ತಿರುಗಾಟ. ಮತ್ತೆ ಕೂಡ್ಲು ಮೇಳದಲ್ಲಿ ಮೂರು ತಿರುಗಾಟ. ಬಳಿಕ ಒಂದು ವರ್ಷ ಧರ್ಮಸ್ಥಳ ಮೇಳದಲ್ಲಿ. ಮತ್ತೆ ಪುನಃ ಒಂದು ವರ್ಷ ಕುಂಡಾವು ಮೇಳದಲ್ಲಿ. ಬಳಿಕ ಕಸ್ತೂರಿ ವಾಸುದೇವ ಪೈ ಸಹೋದರರ ಸುರತ್ಕಲ್ ಮೇಳದಲ್ಲಿ ತಿರುಗಾಟ. ಅಗರಿಯವರ ಭಾಗವತಿಕೆಯಲ್ಲಿ ಹೆಸರಾಂತ ಕಲಾವಿದರ ತಂಡ. ನಿವೃತ್ತಿಯ ತನಕವೂ ಸುರತ್ಕಲ್ ಮೇಳದಲ್ಲಿ ಕಲಾವ್ಯವಸಾಯ.

ವೇಷಧಾರಿಯಾಗಿ ತಾಳಮದ್ದಳೆ ಅರ್ಥಧಾರಿಯಾಗಿ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಸಾಧನೆ, ಅವರು ಗಳಿಸಿದ ಕೀರ್ತಿಯ ಬಗೆಗೆ ಎಲ್ಲರಿಗೂ ತಿಳಿದಿದೆ. ರಾಜ್ಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ, ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ, ಹೀಗೆ ಪಡೆದ ಗೌರವಗಳು ಅನೇಕ. ಶೇಣಿಯವರು ಬರೆದ ಪ್ರಸಂಗಗಳಲ್ಲಿ ಒಂದಾದ ‘ಶ್ರೀಮತಿ ಪರಿಣಯ’ ಪ್ರಸಂಗ ಪುಸ್ತಕದಲ್ಲಿ ಶೇಣಿಯವರು ಬರೆದ ಪ್ರಸಂಗಗಳು, ನಾಟಕಗಳು, ಕೃತಿಗಳು ಮತ್ತು ಅವರ ಕುರಿತಾಗಿ ಪ್ರಕಟಗೊಂಡ ಕೃತಿಗಳ ವಿವರಗಳಿವೆ. ಕರ್ನಾಟಕ ಮತ್ತು ಕೇರಳ ಉಭಯ ರಾಜ್ಯಗಳು ಕೊಡಮಾಡುವ ರಾಜ್ಯಪ್ರಶಸ್ತಿಗಳನ್ನು ಪಡೆದ ಯಕ್ಷಗಾನ ಕಲಾವಿದರು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು. ಶ್ರೀಯುತರ ಜೀವಿತಾವಧಿ 1918-2006. ದಿನಾಂಕ 08.06.2006ರಂದು ಶೇಣಿಯವರು ಈ ಲೋಕದ ಯಾತ್ರೆಯನ್ನು ಮುಗಿಸಿದರು. ಯಕ್ಷರಂಗದ ಭೀಷ್ಮ ದಿ| ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ನುಡಿನಮನಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments