ಯಕ್ಷಗಾನವು ಈಗೀಗ ವಿಭಿನ್ನ ಪ್ರಯೋಗಗಳನ್ನು ಕಾಣುತ್ತದೆ. ಪ್ರಯೋಗಗಳು ತಪ್ಪಲ್ಲ. ಆದರೆ ಹೊಸತೊಂದು ಯೋಚನೆಯನ್ನು ರಂಗದಲ್ಲಿ ಪ್ರಯೋಗಿಸುವ ಮುನ್ನ ಅದು ಯಕ್ಷಗಾನಕ್ಕೆ ಹೊಂದುತ್ತದೆಯೇ ಎಂದು ಯೋಚಿಸಿ ನಿರ್ಧರಿಸುವುದು ಮುಖ್ಯವಾಗುತ್ತದೆ. ಅದಿಲ್ಲದಿದ್ದರೆ ಆ ಪ್ರಯೋಗವೂ ಒಂದೆರಡು ಪ್ರಯತ್ನಗಳಲ್ಲಿ ಮುಗ್ಗರಿಸಿ ಕೇವಲ ಪ್ರಯೋಗವಾಗಿಯೇ ಉಳಿದುಬಿಡುತ್ತದೆ. ಈ ವಿಷಯವನ್ನು ನಾನು ಬಹಳಷ್ಟು ಬಾರಿ ಯೋಚಿಸುತ್ತಿರುತ್ತೇನೆ.
ಭಾಗವತನು ರಂಗನಿರ್ದೇಶನಕಾರನೂ ಆಗಿರುವುದರಿಂದ ಪ್ರದರ್ಶನಗಳಲ್ಲಿ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಅಷ್ಟೇ ಒತ್ತಡವೂ ಇರುತ್ತದೆ. ಇದನ್ನೆಲ್ಲಾ ನಿಭಾಯಿಸಿಕೊಂಡು ಹೋಗುವುದು ಈಗೀಗ ಅಭ್ಯಾಸವಾಗಿಬಿಟ್ಟಿದೆ. ಒತ್ತಡಗಳ ಜೊತೆಗೆ ಬದುಕುವುದೂ ಒಂದು ಕಲೆ. ನಮ್ಮಂತಹಾ ಕಲಾವಿದರಿಗೆ ನಿದ್ರೆಗೆಡುವುದರ ಜೊತೆಯಲ್ಲಿ ಕೆಲವೊಮ್ಮೆ ಇದೂ ಒಂದು ಪರೀಕ್ಷೆಯಾಗಿ ಪರಿಣಮಿಸುತ್ತದೆ.
ನಮ್ಮಂತಹ ಕಲಾವಿದರಿಗೆ ಇದು ಬಲು ಕಷ್ಟ. ಪ್ರದರ್ಶನಗಳನ್ನೂ ಗೆಲ್ಲಿಸಬೇಕು. ಬಾಕ್ಸ್ ಆಫಿಸ್ ದೃಷ್ಟಿಯಿಂದ ಜನಪ್ರಿಯತೆ ಹೆಚ್ಚಿ ಆಟಗಳ ಸಂಖ್ಯೆಯೂ ಹೆಚ್ಚಾಗಬೇಕು. ಅದು ಮೇಳದ ಯಜಮಾನರ ನಿರೀಕ್ಷೆ. ಕೆಲವೊಮ್ಮೆ ಸಂಪ್ರದಾಯವನ್ನು ಮುರಿದು ನಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿ ಪದ್ಯ ಹೇಳಬೇಕು. ಅದು ಕಲಾವಿದರ ಅಪೇಕ್ಷೆ.
ಪದ್ಯದ ಭಾವ, ರಾಗ, ತಾಳ ಮತ್ತು ಮಟ್ಟು ಮುಖ್ಯವಲ್ಲ. ಕಲಾವಿದರಿಗೆ, ವೇಷಧಾರಿಗೆ ಕುಣಿತಕ್ಕೆ ಅನುಕೂಲವಾಗುವಂತೆ ಪದ್ಯ ಹೇಳಬೇಕು. ಇಲ್ಲದಿದ್ದರೆ ಆ ಭಾಗವತರಿಗೆ ಏನೂ ಗೊತ್ತಿಲ್ಲ ಎಂಬ ಹೇಳಿಕೆಗಳು ಹರಿದಾಡಿ ಅದು ಮೇಳದ ಯಜಮಾನರ ಕಿವಿಗೂ ತಲುಪಿ ಮುಂದಿನ ತಿರುಗಾಟದಲ್ಲಿ ಭಾಗವತನ ಸ್ಥಾನವನ್ನು ಇನ್ನೊಬ್ಬ ಅಲಂಕರಿಸಿರುತ್ತಾನೆ. ಹಾಗೆ ಬಂದ ಹೊಸ ಭಾಗವತನಿಗೆ ಎಲ್ಲರಿಗೂ ಬೇಕಾದಂತೆ ಪದ್ಯ ಹೇಳುವ ಕಲೆ ಸಿದ್ಧಿಸಿರುತ್ತದೆ.
ವೇಷಧಾರಿಗೆ ಬೇಕಾದಂತೆ ಪದ್ಯ ಹೇಳದವನು ಈ ಕಾಲದಲ್ಲಿ ಯಶಸ್ವಿ ಭಾಗವತನಾಗಲಾರ. ಆದುದರಿಂದ ಕೆಲವೊಮ್ಮೆ ಮನಸ್ಸಿಗೆ ಕಿರಿಕಿರಿಯಾದರೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಜಾಣ್ಮೆಯನ್ನು ನಾನೂ ಅನುಸರಿಸಿದ್ದು ಹೌದು. ಹೊಟ್ಟೆ ಕೇಳಬೇಕಲ್ಲ. ನನಗೆ ಈ ಭಾಗವತಿಕೆಯನ್ನು ಬಿಟ್ಟು ಬೇರೆ ಏನೂ ಕೆಲಸ ಗೊತ್ತಿಲ್ಲ. ನನ್ನ ಸಂಸಾರದ ಹೊಟ್ಟೆ ಇದರಲ್ಲೇ ತುಂಬಬೇಕು. ಹೊಟ್ಟೆಗೆ ಕಲ್ಲು ಬೀಳುವ ಪ್ರಸಂಗ ಬಾರದಂತೆ ಒಮ್ಮೊಮ್ಮೆ ಜಾಗ್ರತೆ ವಹಿಸಬೇಕಾಗುತ್ತದೆ.
ನನ್ನ ಆತ್ಮಶಕ್ಷಿಗೆ ವಿರುದ್ಧವಾದ ರೀತಿಯಲ್ಲಿ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಲ್ಲಿ ಒಮ್ಮೊಮ್ಮೆ ನಾನೂ ಸಿಲುಕಿದ್ದೇನೆ. ಇಲ್ಲವೆಂದು ವೃಥಾ ಸುಳ್ಳು ಹೇಳಲಾರೆ. ಆದರದು ಅನಿವಾರ್ಯವಾಗಿತ್ತು. ನನಗೆ ಮಾತ್ರವಲ್ಲ. ಹಿಮ್ಮೇಳದ ಎಲ್ಲಾ ಕಲಾವಿದರೂ ಕೆಲವೊಮ್ಮೆ ತಮ್ಮತನವನ್ನು ಬಿಡಬೇಕಾಗುತ್ತದೆ.
ಇನ್ನು ಕಲಾವಿದರು, ವೇಷಧಾರಿಗಳು ಕೂಡಾ ಹಾಗೆಯೇ ಪೂರ್ಣ ಸ್ವತಂತ್ರರಲ್ಲ. ಅವರಿಗೂ ಹಾಗೆ ಅಭಿನಯಿಸಬೇಕು, ಈ ರೀತಿಯ ಚಪ್ಪಾಳೆ ಬೀಳುವ ಸಂಭಾಷಣೆಗಳನ್ನು ಹೇಳಬೇಕೆಂಬ ಒತ್ತಡವಿರುತ್ತದೆ. ಎಲ್ಲರೂ ಅಷ್ಟೇ. ನಮ್ಮ ಕಲಾವಿದರ ಜೀವನವೇ ಹಾಗೆ. ಜನ ಮೆಚ್ಚಬೇಕು. ನಮ್ಮ ಮೇಳ ಜನಪ್ರಿಯ ಆಗದಿದ್ದರೆ ಆ ಸ್ಥಾನಕ್ಕೆ ಇನ್ನೊಂದು ಮೇಳ ಬರುತ್ತದೆ.
ಆದುದರಿಂದ ನಾವೆಲ್ಲಾ ಆ ಸೂತ್ರಧಾರ ಆಡಿಸುವ ಬೊಂಬೆಗಳು. ಕಲಾವಿದರಿಗೂ ಜೀವನವಿರುತ್ತದೆ. ಕಲಾವಿದರಿಗೂ ಸಂಸಾರ, ಕಷ್ಟಸುಖಗಳಿರುತ್ತವೆ. ನಮಗೂ ಎಲ್ಲರಂತೆಯೇ ಮೃದು ಮನಸೂ ಇರುತ್ತದೆ. ಎಲ್ಲ ರಂಗಗಳಲ್ಲಿರುವಂತೆ ಇಲ್ಲಿಯೂ ಸ್ಪರ್ಧೆ ಇದೆ. ಮೇಳಗಳ ನಡುವೆ ಸ್ಪರ್ಧೆ, ಭಾಗವತರ ನಡುವೆ ಸ್ಪರ್ಧೆ, ಹಿಮ್ಮೇಳ ವಾದಕರ ನಡುವೆ ಸ್ಪರ್ಧೆ, ವೇಷಧಾರಿಗಳ ನಡುವೆ ಸ್ಪರ್ಧೆ ರಂಗಸ್ಥಳದಲ್ಲಿ ನಡೆಯುತ್ತಲೇ ಇರುತ್ತದೆ. ಅದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಜ . ಅದಕ್ಕೆ ಕಲಾಕ್ಷೇತ್ರವೂ ಹೊರತಲ್ಲ. (ಮುಂದಿನ ಸಂಚಿಕೆಯಲ್ಲಿ ಮುಂದುವರಿಯುವುದು)
(ಈ ಕಥಾವಸ್ತು ಕೇವಲ ಕಾಲ್ಪನಿಕ. ಯಾರಿಗಾದರೂ, ಯಾವುದಕ್ಕಾದರೂ ಹೋಲಿಕೆಗಳು ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ)