Thursday, November 21, 2024
Homeಯಕ್ಷಗಾನಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ...

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ – 5)

ಪ್ರತಿದಿನವೂ ಸಂಜೆ ಹೊತ್ತು ಮನೆಯಲ್ಲಿ ಪಾಠ. ಶಿಷ್ಯರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಗಿತ್ತು. ಉರವರೆಲ್ಲರಿಗೂ ಮಾಸ್ತರರು ಅತಿ ಪ್ರಿಯರಾಗಿದ್ದರು. ಗುರುಗಳೆಂದೇ ಸಂಭೋದಿಸಿ ಗೌರವಿಸುತ್ತಿದ್ದರು. ಪಾಠದ ಜೊತೆ ಕೂಟಗಳನ್ನೂ ನಡೆಸಲಾರಂಭಿಸಿದರು. ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ  ಕಲಿಸುವ ಕಲೆಯು ಮಾಸ್ತರರಿಗೆ ಕೀರಿಕ್ಕಾಡಿನಲ್ಲಿರುವಾಗಲೇ ಕರಗತವಾಗಿತ್ತು.

ಕಲಿಕಾಸಕ್ತರಾಗಿ ಬರುವವರ ಸಂಖ್ಯೆ ಹೆಚ್ಚಾದುದು ಇದೇ ಕಾರಣದಿಂದ. ನಾಯಕತ್ವ, ಸಂಘಟನಾ ಕೌಶಲವೂ ರಕ್ತಗತವಾಗಿಯೇ ಬಂದಿತ್ತು. 1944ನೇ ಇಸವಿಯಲ್ಲಿ (ಕೀರಿಕ್ಕಾಡಿನಿಂದ ಬನಾರಿಗೆ ಬಂದ ಮಾರನೇ ವರ್ಷ) ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಕೀರಿಕ್ಕಾಡು ಸಮೀಪದ ಮುನಿಯೂರು ಶ್ರೀ ಗೋಪಾಲಕೃಷ್ಣ ದೇವರ ಪರಮ ಭಕ್ತರಾಗಿದ್ದರು ಮಾಸ್ತರರು. ತಮ್ಮ ಇಷ್ಟ ದೇವರ ಹೆಸರಿನಲ್ಲಿಯೇ ಸಂಸ್ಥೆಯನ್ನು ಆರಂಭಿಸಿ ಯಕ್ಷಗಾನ ಸಂಬಂಧೀ ಚಟುವಟಿಕೆಗಳಲ್ಲಿ ತೊಡಗಿದರು.

ಯಕ್ಷಗಾನ ತರಗತಿಗಳನ್ನು ನಡೆಸಲು ಮನೆಯ ಹತ್ತಿರವೇ ಸೋಗೆ ಮಾಡಿನ ಕಟ್ಟಡವನ್ನು ನಿರ್ಮಿಸಿದ್ದರು. ಅದನ್ನು ನಾಟಕ ಶಾಲೆ ಎಂದು ಎಲ್ಲರೂ ಕರೆಯುತ್ತಿದ್ದರು. ಆಗ ಬಯಲಾಟಗಳು ನಡೆಯುತ್ತಿರಲಿಲ್ಲ. ಯಕ್ಷಗಾನ ನಾಟಕ ನಡೆಯುತ್ತಿತ್ತು. ಹಾಗಾಗಿ ನಾಟಕ ಶಾಲೆ ಎಂಬ ಹೆಸರಾಯಿತು. 1944ರಲ್ಲಿ ಶಿಷ್ಯಂದಿರನ್ನು ಸಿದ್ದಗೊಳಿಸಿ ಪ್ರಥಮ ವಾರ್ಷಿಕೋತ್ಸವವನ್ನೂ ನಡೆಸಿದ್ದರು. ದೇಲಂಪಾಡಿ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವದಲ್ಲಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು , ದೊಡ್ಡ ಸಾಮಗರು, ನಾರಾಯಣ ಕಿಲ್ಲೆಯವರು, ಫಕೀರ ಶೆಟ್ಟಿಯವರು, ಮೊದಲಾದವರು ಭಾಗವಹಿಸಿದ್ದರು.

ಮಳೆಗಾಲದ ತಾಳಮದ್ದಲೆಗಳನ್ನೂ ದೇಲಂಪಾಡಿ ಶಾಲೆಯಲ್ಲಿ ನಡೆಸುತ್ತಿದ್ದರು. ವಾರಕ್ಕೊಂದು ತಾಳಮದ್ದಳೆ ನಿರಂತರ. ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಾರ್ಯಕ್ರಮಗಳಲ್ಲಿ ಅಡೂರು ಶಿವ ಮದ್ದಳೆಗಾರರು, ಅಣ್ಣಿ ಭಾಗವತರು, ನಡುಮನೆ ಜತ್ತಪ್ಪ ರೈಗಳು, ಈಶ್ವರಯ್ಯ ಭಾಗವತರು, ಪೊಳಲಿ ಶಾಸ್ತ್ರಿಗಳು, ಪುಂಡೂರು ಗೋಪಾಲಕೃಷ್ಣ ಪುಣಿಚಿತ್ತಾಯರು, ಕೋಟೆಕುಂಜ ನಾರಾಯಣ ಶೆಟ್ಟರು, ಮಹಾಬಲ ನೋಂಡರು, ಮೈಂದಪ್ಪ ರೈಗಳು ಹೆಚ್ಚಾಗಿ ಭಾಗವಹಿಸುತ್ತಿದ್ದರು. ಕೀರಿಕ್ಕಾಡು ಮಾಸ್ತರರಿಂದ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದಡಿ ಹಿಮ್ಮೇಳ ಮುಮ್ಮೇಳಗಳ ತರಗತಿಗಳೂ ಆರಂಭವಾಗಿತ್ತು.

ಅರ್ಥಗಾರಿಕೆಯನ್ನು ಮಾಸ್ತರ್ ವಿಷ್ಣು ಭಟ್ಟರೇ ಹೇಳಿಕೊಡುತ್ತಿದ್ದರು. ನಡುಮನೆ ಜತ್ತಪ್ಪ ರೈಗಳು ಭಾಗವತಿಕೆಯನ್ನೂ ಕಡಾರು ನಾರಾಯಣ ಭಟ್ಟರು ನಾಟ್ಯವನ್ನೂ ಹೇಳಿಕೊಡುತ್ತಿದ್ದರು. ಪ್ರತಿಫಲಾಪೇಕ್ಷೆಯಿಲ್ಲದ ಕಲಾಸೇವೆ ಅದಾಗಿತ್ತು. ಹೀಗೆ ಗುರುಕುಲ ಮಾದರಿಯ ತರಬೇತಿ ಕೇಂದ್ರವನ್ನು ಮೊತ್ತ ಮೊದಲು ತೆರೆದು ಮುನ್ನಡೆಸಿದ ಕೀರ್ತಿ ವಿಷ್ಣು ಭಟ್ಟರದ್ದು. ಕಲಿಕಾಸಕ್ತರು ದುಶ್ಚಟಗಳನ್ನು ಮಾಡದೆಯೇ ತರಬೇತಿಗೆ ಬರುತ್ತೇವೆ ಎಂದು ದೇವರೆದುರು ಪ್ರಮಾಣ ಮಾಡಬೇಕೆಂಬ ನಿಯಮವನ್ನು ಇರಿಸಿದ್ದರು. ಹೀಗೆ ವಿದ್ಯಾದಾನದ ಜೊತೆ ಸಮಾಜದ ಕೆಡುಕುಗಳನ್ನು ತಿದ್ದುವ ಕೆಲಸವನ್ನು ಮಾಡಿದ್ದರು.

ಯಕ್ಷಗಾನ ಶಾಲೆಯಲ್ಲಿ ಅಕ್ಷರಾಭ್ಯಾಸವನ್ನೂ ಮಾಡಿಸುತ್ತಿದ್ದರು. ಉಚ್ಚಾರದೋಷಗಳಿದ್ದರೆ ತಿದ್ದಿ, ಭಾವನಾತ್ಮಕವಾಗಿ ಅಭಿನಯಿಸುವ ರೀತಿಯನ್ನು ಹೇಳಿಕೊಡುತ್ತಿದ್ದರು. ಅರ್ಥಗಾರಿಕೆ ಕಲಿಯುವವರು ಮೊದಲು ಪದ್ಯ ಬಾಯಿಪಾಠ ಮಾಡಬೇಕಿತ್ತು. ಬಳಿಕ ಮರುದಿನ ಬಾಯಿಪಾಠ ಮಾಡಿ ಒಪ್ಪಿಸಬೇಕೆಂಬ ನಿರ್ಣಯದೊಂದಿಗೆ ಅರ್ಥ ಬರೆದು ಕೊಡುತ್ತಿದ್ದರು. 1946ರಲ್ಲಿ ಮಾಸ್ತರರು ತನ್ನ ಖರ್ಚಿನಲ್ಲೇ ತಾತ್ಕಾಲಿಕ ಕಲಾಮಂದಿರವನ್ನು ನಿರ್ಮಿಸಿದ್ದರು. ಜೊತೆಗೆ ಚೆಂಡೆ,ಮದ್ದಳೆ,ಜಾಗಟೆ, ಶ್ರುತಿ ಪೆಟ್ಟಿಗೆ, ಎಲ್ಲವನ್ನೂ ಕೊಡಿಸಿದ್ದರು. 1947ರಲ್ಲಿ ಮೂರನೇ ವರ್ಷ ‘ಯಕ್ಷಗಾನ ನಾಟಕ’ದ  ತರಬೇತಿಯೂ ನಡೆದು ಅಗತ್ಯವಿರುವ ಪೆರೇಡ್, ವೇಷಭೂಷಣಗಳನ್ನೂ ಸಿದ್ಧಪಡಿಸಿದ್ದರು.

ನಾಟ್ಯವಿಲ್ಲದ ಈ ಪ್ರದರ್ಶನಗಳಲ್ಲಿ ಅಭಿನಯಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಕುರಿಯ, ಕೊಳ್ಯೂರು, ಚೊಕ್ಕಾಡಿಗಳಲ್ಲಿ ಇಂತಹಾ ತಂಡಗಳೂ ಕಾರ್ಯಾಚರಿಸುತ್ತಿತ್ತೆಂಬ ಹೇಳಿಕೆಯಿದೆ. ಮಾಸ್ತರರ ನೇತೃತ್ವದ ಯಕ್ಷಗಾನ ನಾಟಕ ಸಂಘದ ಪ್ರದರ್ಶನಗಳು ದೂರದ ಮಡಿಕೇರಿಯಲ್ಲಿಯೂ ನಡೆದು ಪ್ರೇಕ್ಷಕರ ಪ್ರಶಂಸೆಗೊಳಗಾಯಿತು. ಮತ್ತೆ ಯಕ್ಷಗಾನದ ಮೂಲ ಸ್ವರೂಪದತ್ತ ಒಲವು ಮೂಡಿ ಆ ನಿಟ್ಟಿನಲ್ಲಿಯೇ ತೊಡಗಿಸಿಕೊಂಡಿದ್ದರು. ಈ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ದೊಡ್ಡ ದೊಡ್ಡ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. “ತನ್ನ ಸರಳ ಸುಂದರ ಅರ್ಥಗರ್ಭಿತ ಸಂಭಾಷಣೆಗಳಿಂದ ‘ಕೀರಿಕ್ಕಾಡು ಶೈಲಿ’ಯನ್ನು ಹುಟ್ಟುಹಾಕಿದರು.

ಕೀರಿಕ್ಕಾಡು ಮಾಸ್ತರರ ಅರ್ಥಗಾರಿಕೆಯಲ್ಲಿ ಎಲ್ಲವೂ ಹೈಲೈಟ್ಸ್ ಆಗಿತ್ತು. ಪ್ರತಿಯೊಂದು ಪಾತ್ರವನ್ನೂ ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದ ಮಹಾನ್ ಪ್ರತಿಭೆ ಅವರು” ಎಂದು ಹಳೆಯ ಪ್ರೇಕ್ಷಕರು ಹೇಳುವುದನ್ನು ನಾವು ಕೇಳಿದ್ದೇವೆ. ಶ್ರೀಕೃಷ್ಣ, ಶ್ರೀರಾಮ, ಭರತ, ಸಂಜಯ, ಧರ್ಮರಾಯ, ವಿಭೀಷಣ, ಸುಧನ್ವ,ಮೊದಲಾದ ಸಾತ್ವಿಕ ಪಾತ್ರಗಳಲ್ಲೂ ಕರ್ಣ, ವಾಲಿ, ಕೌರವ, ಬಲರಾಮ,ಅರ್ಜುನ, ಶೂರ್ಪನಖಾ, ಅಜಮುಖಿ ಮೊದಲಾದ ವೀರರಸದ ಪಾತ್ರಗಳಲ್ಲೂ ಸಮಾನವಾಗಿ ಇವರು ಮಿಂಚಿದವರಂತೆ.

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಾರ್ಯಕ್ರಮಗಳಲ್ಲಿ ತೆಂಕಿನ ಹೆಚ್ಚಿನ ಎಲ್ಲಾ ಕಲಾವಿದರೂ ಪ್ರೀತಿಯಿಂದ ಭಾಗವಹಿಸುತ್ತಿದ್ದರು. ಪ್ರಕೃತಿ ಚಿಕಿತ್ಸಾ ನಿಪುಣರಾಗಿ, ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕರಿಗೆ ಚಿಕಿತ್ಸೆ ನೀಡಿ ನೆರವಾಗಿದ್ದರು. ಖ್ಯಾತ ಭಾಗವತ ದಾಮೋದರ ಮಂಡೆಚ್ಚರಿಗೆ ಕೀರಿಕ್ಕಾಡು ಮಾಸ್ತರರಲ್ಲಿ  ಅಪಾರ ಗೌರವ. ಪೆರ್ಲಂಪಾಡಿಯಲ್ಲಿ ಬನಾರಿ ಯಕ್ಷಗಾನ ನಾಟಕ ಸಂಘದ ಪ್ರದರ್ಶನದಲ್ಲಿ ಮಂಡೆಚ್ಚರು ಮೊತ್ತಮೊದಲು ಭಾಗವತರಾಗಿ ರಂಗವೇರಿದ್ದರು. ಆಗಾಗ ಪತ್ರ ಬರೆಯುತ್ತಿದ್ದು ದಾಮೋದರ ಮಂಡೆಚ್ಚರ ಬರಹ (ಅಕ್ಷರ ) ಅತ್ಯಂತ ಸುಂದರ ಎಂದು ಮಾಸ್ತರರು ಹೇಳುತ್ತಿದ್ದರಂತೆ.

ಭಾಗವತರು ಸುಖವಾಗಿ ಹಾಡುವ ಹಾಗೆ ಪ್ರಸಂಗ ರಚಿಸಿದ ಕವಿಗಳಲ್ಲಿ ಕೀರಿಕ್ಕಾಡು ಮಾಸ್ತರರು ಪ್ರಮುಖರು ಎಂಬ ಅಭಿಪ್ರಾಯವನ್ನು ಮಂಡೆಚ್ಚರು ಪ್ರಕಟಿಸಿದ್ದರು. ಪ್ರಸಂಗ ಬರೆಯುವುದೆಂದರೆ ಮಾಸ್ತರರಿಗೆ ನೀರು ಕುಡಿದಷ್ಟು ಸುಲಭ ಎಂಬ ಅಭಿಪ್ರಾಯವನ್ನು ಖ್ಯಾತ ಪ್ರಸಂಗಕರ್ತ ಅಮೃತ ಸೋಮೇಶ್ವರರು ವ್ಯಕ್ತಪಡಿಸಿದ್ದರು. 

ಲೇಖನ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments