ಮಾಸ್ತರರ ಗುರುಮನೆ ಕಂಡೆತ್ತೋಡಿ. ಹೊಳೆಯ ಒಂದು ತೀರದಲ್ಲಿದ್ದ ಕೀರಿಕ್ಕಾಡು ಮನೆಯಿಂದ ಮತ್ತೊಂದು ತೀರದಲ್ಲಿ ಕಂಡೆತ್ತೋಡಿ ಗುರು ಮನೆ ಕಾಣಿಸುತ್ತಿತ್ತು. ಮಾಸ್ತರರಿಗೆ ಆ ಮನೆ ಒಂದು ಕಲಿಕಾ ಕೇಂದ್ರವೇ ಆಗಿತ್ತು. ಗುರುಗಳಾದ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ಸಂಗ್ರಹಗಳಲ್ಲಿದ್ದ ಪುಸ್ತಕಗಳನ್ನು ಓದುತ್ತಿದ್ದರು. ಅವರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು.
ಕೀರಿಕ್ಕಾಡಿನಿಂದ ಬನಾರಿಗೆ ಬಂದು ನೆಲೆಸಿದ ಮೇಲೂ ಕಂಡೆತ್ತೋಡಿಗೆ ಮಾಸ್ತರರು ಆಗಾಗ ಹೋಗುತ್ತಿದ್ದರಂತೆ. ಹಾಗಿತ್ತು ಗುರು ಶಿಷ್ಯರ ಸಂಬಂಧ. ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ಪುತ್ರ ಶ್ರೀಧರ ಕೇಕುಣ್ಣಾಯರೂ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಉಕ್ಕಿನಡ್ಕ ವಸಿಷ್ಠಾಶ್ರಮ ಸಂಸ್ಕೃತ ಪಾಠಶಾಲೆಯ ತಾಳಮದ್ದಳೆಯ ಸಂದರ್ಭದಲ್ಲಿ ಪ್ರಾರಂಭವಾದ ಕೀರಿಕ್ಕಾಡು – ಶೇಣಿಯವರ ಗುರು ಶಿಷ್ಯ ಸಂಬಂಧ ನಿರಂತರ ಮುಂದೆ ಸಾಗಿತ್ತು.
ಜೊತೆಯಾಗಿ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಉಕ್ಕಿನಡ್ಕ ಎಂಬ ಊರು ಇವರಿಗೆಂದಲ್ಲ, ಹಲವಾರು ಕಲಾವಿದರಿಗೆ ಒಂದು ನಿಲ್ದಾಣವೇ ಆಗಿತ್ತು. ಅಲ್ಲೊಂದು ಉಪಾಹಾರ ಗೃಹವನ್ನು ವಳಕ್ಕುಂಜ ರಾಮ ಭಟ್ಟರು ನಡೆಸುತ್ತಿದ್ದರು. ಶೇಣಿಯವರೂ ರಾಮ ಭಟ್ಟರೂ ಒಂದೇ ಕುಟುಂಬಸ್ಥರು. ರಾಮ ಭಟ್ಟರಿಗೆ ಶೇಣಿಯವರೆಂದರೆ ಬಲು ಪ್ರೀತಿ. ಶೇಣಿಯವರೂ ರಾಮ ಭಟ್ಟರೂ ಆತ್ಮೀಯರಾಗಿದ್ದರು. ಕಲೆ ಮತ್ತು ಕಲಾವಿದರನ್ನು ಪ್ರೀತಿಸಿ ಗೌರವಿಸುವ ಗುಣ ರಾಮ ಭಟ್ಟರದು. ಅವರ ಉಪಾಹಾರ ಗೃಹವು ಕಲಾವಿದರ ಹಸಿವು ತೃಷೆಗಳನ್ನು ತಣಿಸುವ ಮನೆಯಾಗಿತ್ತು.
ಅಲ್ಲಿ ಕಲಾವಿದರೆಲ್ಲಾ ಒಟ್ಟು ಸೇರಿ ನಡೆದೇ ತಾಳಮದ್ದಳೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದರಂತೆ. ರಾಮ ಭಟ್ಟರು ಅವರ ಜೊತೆಗೆ ಹೋಗುತ್ತಿದ್ದರು. ಕೀರಿಕ್ಕಾಡು ಪರಿಸರದ ಕಲಾಸಕ್ತರಿಗೆ ತಮ್ಮ ಶಿಷ್ಯ ಕಡಾರು ನಾರಾಯಣ ಭಟ್ಟರಿಂದ ನಾಟ್ಯ ತರಬೇತಿಯನ್ನು ಮಾಸ್ತರ್ ವಿಷ್ಣು ಭಟ್ಟರು ಕೊಡಿಸಿದರು. ತನ್ನ ತಮ್ಮ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರಿಗೂ ಅರ್ಥಗಾರಿಕೆ ಕಲಿಸಿ ತಾಳಮದ್ದಳೆ ಕ್ಷೇತ್ರಕ್ಕೆ ಪ್ರವೇಶ ಮಾಡುವಂತೆ ಪ್ರಚೋದಿಸಿದರು.
ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರು ಅತ್ಯುತ್ತಮ ಅರ್ಥಧಾರಿಯಾಗಿದ್ದರು. ಮಾಸ್ತರರಂತೆ ಪ್ರತಿಫಲಾಪೇಕ್ಷೆಯಿಲ್ಲದೆ ಕಲಾಸೇವೆ ಮಾಡಿದ್ದರು. ಕೂಟಗಳಲ್ಲಿ ಅವರು ಬಹಳ ಬೇಡಿಕೆಯ ಕಲಾವಿದರಾಗಿದ್ದರು. ರಾತ್ರಿ ತಾಳಮದ್ದಳೆ. ಬೆಳಗ್ಗೆ ನಡೆದೇ ಸಾಗಿ ಬಂದು ಶಾಲೆಯಲ್ಲಿ ಮಕ್ಕಳಿಗೆ ಪಾಠ. ಸಾಹಿತ್ಯ ಸೇವೆ, ಮನೆ ನಿರ್ವಹಣೆ ಹೀಗೆ ನಿರಂತರ ಚುರುಕಾದ ಚಟುವಟಿಕೆ. ನಿದ್ದೆಯಿಲ್ಲದೆ ಕಳೆದ ದಿನಗಳನೇಕ. ಯಕ್ಷಗಾನ ಕಲೆಯನ್ನು ತನ್ನ ಉಸಿರೆಂದೇ ಸ್ವೀಕರಿಸಿದ್ದರು.
ಕಲೆಯ ಹೊರತಾದ ಬದುಕನ್ನು ಮಾಸ್ತರ್ ವಿಷ್ಣು ಭಟ್ಟರು ಕನಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. ಯಕ್ಷಗಾನದ ಜೊತೆಗಿನ ನಂಟು ಅಷ್ಟು ತೀವ್ರವಾಗಿತ್ತು. ಕೀರಿಕ್ಕಾಡಿನಲ್ಲಿರುವಾಗ ಭಾಗವತರಾದ ನಡುಮನೆ ಜತ್ತಪ್ಪ ರೈಗಳು ಮಾಸ್ತರರ ಆತ್ಮೀಯರಾಗಿದ್ದರು. ಹಳೆಯ ಕಾಲದ ಒಳ್ಳೆಯ ಭಾಗವತರಾಗಿದ್ದ ನಡುಮನೆ ಶ್ರೀ ಜತ್ತಪ್ಪ ರೈಗಳು ವೃತ್ತಿ ಕಲಾವಿದರಾಗಿಯೂ ಪ್ರಸಿದ್ಧರು. ಉತ್ತಮ ಕೃಷಿಕರೂ ಆಗಿದ್ದ ಮಾಸ್ತರರು ಜೀವನ ನಿರ್ವಹಣೆಯ ಉದ್ದೇಶದಿಂದ ಕೀರಿಕ್ಕಾಡಿನಿಂದ ಹೊರಟು ದೇಲಂಪಾಡಿಯ ಬನಾರಿಗೆ ಹೋಗಿ ನೆಲೆಸುವ ತೀರ್ಮಾನವನ್ನು ಮಾಡಿದರು.
ಕೀರಿಕ್ಕಾಡು ಸ್ಥಳವನ್ನು ವಿಕ್ರಯಿಸಿ 1943 ರಲ್ಲಿ ಬನಾರಿಗೆ ನಡೆದೇ ಬಂದಿದ್ದರು. ಶಾಲೆಯ ಅಧ್ಯಾಪಕ ವೃತ್ತಿಯನ್ನು ತಮ್ಮನಾದ ಕೀರಿಕ್ಕಾಡು ಗೋಪಾಲಕೃಷ್ಣ ಭಟ್ಟರಿಗೆ ವಹಿಸಿ ಬಂದಿದ್ದರು. ಕೀರಿಕ್ಕಾಡು ಗೋಪಾಲಕೃಷ್ಣ ಭಟ್ ಅವರ ಪುತ್ರರಾದ ಗಣೇಶ ಶರ್ಮ ಕೀರಿಕ್ಕಾಡು ವೃತ್ತಿ ಕಲಾವಿದರು. ಮಾಸ್ತರ್ ವಿಷ್ಣು ಭಟ್ಟರು ಪತ್ನಿ ಮತ್ತು ಇಬ್ಬರು ಪುತ್ರರ ಜೊತೆಗೆ ಹುಟ್ಟೂರಿಗೆ ವಿದಾಯ ಹೇಳಿ 1943 ಮಾರ್ಚ್ ತಿಂಗಳಲ್ಲಿ ಬನಾರಿಗೆ ಬಂದಾಗ ಪರಿಸರದ ಜನರೆಲ್ಲಾ ಅತ್ಯಂತ ಸಂತೋಷಪಟ್ಟಿದ್ದರು. ನಮಗೂ ಯಕ್ಷಗಾನ ಕಲಿಯಬೇಕು, ಕಲಿಸಿ ಕೊಡಿ ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ಕೀರಿಕ್ಕಾಡಿನಂತೆ ಸಂಪರ್ಕ ವ್ಯವಸ್ಥೆಗಳಿಲ್ಲದೆ ತೀರಾ ಹಿಂದುಳಿದ ಪ್ರದೇಶವಾಗಿತ್ತು ಬನಾರಿ. ಒಣ ಭೂಮಿಯನ್ನು ಶ್ರಮ ವಹಿಸಿ, ಬೆವರಿಳಿಸಿ ದುಡಿದು ಕೃಷಿ ಯೋಗ್ಯ ಪ್ರದೇಶವನ್ನಾಗಿ ಮಾಡಿದರು. ಜೊತೆಗೆ ಕಲಾಸೇವೆ. ಊರಿನ ಮಂದಿಗಳ ಪ್ರೀತಿಯ ಕೋರಿಕೆಯನ್ನು ಸ್ವೀಕರಿಸಿ ಯಕ್ಷಗಾನ ತರಬೇತಿಯನ್ನು ನೀಡುವ ಮನ ಮಾಡಿದರು.
ಮಾಸ್ತರರ ಆಗಮನದಿಂದ ದೇಲಂಪಾಡಿಯ ಚಿತ್ರಣವೇ ಬದಲಾಗಿತ್ತು. ಜಾತಿ ಬೇಧವಿಲ್ಲದೆ ಕಲಿಕಾಸಕ್ತರೆಲ್ಲರನ್ನೂ ತನ್ನ ಮನೆಗೆ ಕರೆದು ಕುಳ್ಳಿರಿಸಿ ಪ್ರತಿಫಲಾಪೇಕ್ಷೆಯಿಲ್ಲದೆ ಹೇಳಿಕೊಟ್ಟರು. ಶಿಸ್ತಿನಿಂದ ಬದುಕನ್ನು ನಡೆಸಬೇಕೆಂಬ ನಿಯಮವನ್ನು ಪಾಠ ಆರಂಭಿಸುವ ಮೊದಲೇ ಹೇಳಿದ್ದರು.
ಲಕ್ಷ್ಮೀನಾರಾಯಣ ಕಲ್ಲೂರಾಯ, ಕೇದಗಡಿ ಗುಡ್ಡಪ್ಪ ಗೌಡ, ಅಣ್ಣಯ್ಯ ಭಂಡಾರಿ, ಕಂಪನಾರಾಯಣ ರೈ, ಗುತ್ತು ನಾರಾಯಣ ರೈ, ಕೆ.ವಿ. ನಾರಾಯಣ ರೈ, ಯಂ. ಬಿ.ಗೋವಿಂದಯ್ಯ, ಮುದಿಯಾರು ರಾಮಪ್ಪ ಗೌಡ, ಕೃಷ್ಣ ಮನೋಳಿತ್ತಾಯ, ಮೈಯಾಳಮೇಘನಾಥ ರೈ, ಬಂದಿಯಡ್ಕ ಮಹಾಲಿಂಗ ಗೌಡ, ಬೆಳ್ಳಿಪ್ಪಾಡಿ ಕುಂಞಣ್ಣ ರೈ, ಬನದಮೂಲೆ ಸೇಸಪ್ಪ ಗೌಡ, ಮೊದಲ ವರ್ಷದ ಶಿಷ್ಯಂದಿರಾಗಿ ಮಾಸ್ತರರ ಕೈಯಿಂದ ಯಕ್ಷಗಾನವನ್ನು ಕಲಿತವರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions