ಕಂಡೆತ್ತೋಡಿ ಶ್ರೀ ನಾರಾಯಣ ಕೇಕುಣ್ಣಾಯರು ಆ ಕಾಲದ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ. ಇವರೇ ಯಕ್ಷಗಾನ ಕಲಾವಿದನಾಗಲು ವಿಷ್ಣು ಭಟ್ಟರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ಪ್ರಿಯ ಶಿಷ್ಯನಾಗಿಯೇ ವಿಷ್ಣು ಭಟ್ಟರು ಕಲಾವಿದನಾಗಿ ಕಾಣಿಸಿಕೊಂಡಿದ್ದರು. ಮದರಾಸು ಸರಕಾರದ ಆಡಳಿತ. ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಆಗ ಪ್ರಾಥಮಿಕ ಶಾಲಾ ಶಿಕ್ಷಕನಾಗಲು ವಿದ್ಯಾರ್ಹತೆಯ ನಿಬಂಧನೆಗಳು ಇರಲಿಲ್ಲ.
ಅದೇ ಕಾಲಕ್ಕೆ ಊರ ಮಕ್ಕಳೆಲ್ಲಾ ವಿದ್ಯಾವಂತರಾಗಬೇಕೆಂಬ ಸದುದ್ದೇಶದಿಂದ ಸಮಾನಮನಸ್ಕರೆಲ್ಲ ಕೀರಿಕ್ಕಾಡಿನಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. (ಕೀರಿಕ್ಕಾಡು ಕೇಶವ ಭಟ್, ವಿಷ್ಣು ಭಟ್ಟರ ದೊಡ್ಡಪ್ಪಂದಿರು, ಕಂಡೆತ್ತೋಡಿ ರಾಮಚಂದ್ರ ಕೇಕುಣ್ಣಾಯರು, ವರಂಬುಡಿ ಶಂಕರ ಭಟ್ಟರು ಸೇರಿ ಪ್ರಯತ್ನಿಸಿ ತೆರೆದ ಶಾಲೆ). ಸುಮಾರು 1927ರಲ್ಲಿ ಇರಬೇಕು. 5ನೇ ಕ್ಲಾಸಿನ ವರೆಗೆ ಓದಿದ 14 ವರ್ಷ ಪ್ರಾಯದ ವಿಷ್ಣು ಭಟ್ಟರು ಶ್ರೀ ವಿದ್ಯಾದಾಯಿನೀ ಕಿರಿಯ ಪ್ರಾಥಮಿಕ ಶಾಲೆಯ ಮೊದಲ ಏಕೋಪಾಧ್ಯಾಯರಾಗಿ ನೇಮಕಗೊಂಡಿದ್ದರು.
ಪ್ರತ್ಯೇಕ ಕಟ್ಟಡ ಇರಲಿಲ್ಲ. ಕೀರಿಕ್ಕಾಡು ಕೇಶವ ಭಟ್ಟರ ಮನೆಯ ಉಪಕಟ್ಟಡದಲ್ಲಿ ವಿದ್ಯಾಲಯವು ಕಾರ್ಯಾರಂಭ ಮಾಡಿತ್ತು. ಗೋಮಯ ಸರಿಸಿದ ನೆಲ. ವಿದ್ಯಾರ್ಥಿಗಳು ಕುಳಿತಿದ್ದರೆ ವಿಷ್ಣು ಎಂಬ ಎಳೆಯ ವಯಸ್ಸಿನ, ಟೀನೇಜಿನ ಅಧ್ಯಾಪಕ ನಿಂತೇ ಪಾಠ ಮಾಡಲು ಆರಂಭಿಸಿದ್ದ! ಆಗ ಶಾಲಾ ಅಧ್ಯಾಪಕರನ್ನು ಮಾಸ್ತರ್ ಎಂದು ಕರೆಯುವುದು ರೂಢಿಯಲ್ಲಿತ್ತು. ವಿಷ್ಣು ಭಟ್ಟರು ಮಾಸ್ತರ್ ವಿಷ್ಣು ಭಟ್ಟರೆಂದು ಕರೆಸಿಕೊಂಡರು. ಶಾಲೆಯಲ್ಲಿ ಮಾಸ್ತರರಾಗಿ ಪಾಠ.
ಮುಂದಿನ ದಿನಗಳಲ್ಲಿ ಕೀರಿಕ್ಕಾಡು ಮಣ್ಣಿನಲ್ಲಿ ಯಕ್ಷಗಾನ ಕಲಾಸಕ್ತರಿಗೂ ಮಾಸ್ತರರಾಗಿ ಪಾಠ ಹೇಳಲಾರಂಭಿಸಿದರು. 1928ನೇ ಇಸವಿ. ಕೀರಿಕ್ಕಾಡು ಶಾಲೆಯಲ್ಲಿ ನಡೆದ ತಾಳಮದ್ದಳೆ. ‘ರಾಜಸೂಯಾಧ್ವರ, ಪ್ರಸಂಗ. ಗುರುಗಳಾದ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ಸೂಚನೆಯಂತೆ ಅರ್ಜುನನಾಗಿ ರಂಗಪ್ರವೇಶ. ವಿಷ್ಣು ಭಟ್ಟರು ಯಶಸ್ವಿಯಾಗಿ ಪ್ರೇಕ್ಷಕರಿಂದ ಹೊಗಳಿಸಿಕೊಂಡಿದ್ದರು. ಅಂದಿನಿಂದ ಯಕ್ಷಗಾನ ಕ್ಷೇತ್ರದಲ್ಲೂ ಕೀರಿಕ್ಕಾಡು ಮಾಸ್ತರರೆಂದೇ ಕರೆಸಿಕೊಂಡರು.
ಸಾಹಿತ್ಯದತ್ತ ಆಕರ್ಷಿತರಾದ ಇವರು ಲೇಖನಿಯಿಂದ ಸರಸ್ವತಿ ದೇವಿಯ ಸೇವೆಯನ್ನು ಮಾಡುವಲ್ಲಿ ತೊಡಗಿಸಿಕೊಂಡರು. ಸ್ವಯಂ ಪ್ರತಿಭಾವಂತರಾಗಿ ಕಾವ್ಯ, ಪುರಾಣಗಳನ್ನು ಓದಿ ಪಡೆದ ಅನುಭವಗಳು ಪದ್ಯ ರಚನೆಗೆ ಅನುಕೂಲವೂ ಆಗಿತ್ತು. ತನ್ನ 16ನೆಯ ವಯಸ್ಸಿನಲ್ಲಿ ‘ಶಿವ ಪಂಚಾಕ್ಷರೀ ಮಹಿಮೆ’ (ಶ್ವೇತಕುಮಾರ ಚರಿತ್ರೆ) ಎಂಬ ಪ್ರಸಂಗವನ್ನು ರಚಿಸಿದರು. 16ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ ಹೆಗ್ಗಳಿಕೆ ಶ್ರೀಯುತರದು.
ಯಕ್ಷಗಾನ ಕ್ಷೇತ್ರದಲ್ಲಿ ಈಗಲೂ ವಿಜೃಂಭಿಸುತ್ತಿರುವ ಪ್ರಸಂಗವದು. ಏಳಕ್ಕಿಂತಲೂ ಹೆಚ್ಚು ಬಾರಿ ಮುದ್ರಿತವಾಗಿತ್ತು. ಈ ವರೆಗೂ ಎಷ್ಟೋ ಸಾವಿರ ಬಾರಿ ಪ್ರದರ್ಶನಗೊಂಡಿರಬಹುದು. ಶೃಂಗಾರ, ಹಾಸ್ಯ, ಭಕ್ತಿ, ಕರುಣ ರಸಗಳಿಂದ ಈ ಪ್ರಸಂಗವು ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸುತ್ತದೆ. ಯಕ್ಷಗಾನಕ್ಕೆ ಇದೊಂದು ಅಪೂರ್ವ ಕೊಡುಗೆ. ಕೂಡ್ಲು ಮನೆತನದ ಎರೆಯಪ್ಪಾಡಿ ಕೇಶವ ಶಾನುಭೋಗರ ಆದೇಶದಂತೆ ಈ ಪ್ರಸಂಗವನ್ನು ಮಾಸ್ತರರು ರಚಿಸಿದ್ದರಂತೆ. ಬಂಧುಗಳಾದ ಸರ್ಪ೦ಗಳ ವೆಂಕಪ್ಪ ಶಾಸ್ತ್ರಿಗಳಿಂದ ಸಂಸ್ಕೃತ ಕಲಿತುದೂ ಅನುಕೂಲವಾಗಿತ್ತು.
1927ರಿಂದ 1942ರ ವರೆಗೆ ಕೀರಿಕ್ಕಾಡು ವಿದ್ಯಾದಾಯಿನೀ ಶಾಲೆಯಲ್ಲಿ ಅಧ್ಯಾಪನ. ಜತೆಗೆ ತಾಳಮದ್ದಳೆ ಅರ್ಥಗಾರಿಕೆ, ಕೃಷಿ ವ್ಯವಹಾರ , ಸಂಸಾರ ನಿರ್ವಹಣೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದರು. ದೇಹ ಮತ್ತು ಮನಸ್ಸುಗಳೆರಡೂ ಬಲಿಷ್ಠವಾಗಿದ್ದುದರಿಂದ ಮಾತ್ರ ಈ ಸಾಹಸವನ್ನು ನಿರೀಕ್ಸಿಸಬಹುದು. 1935ರಲ್ಲಿ ತೀರ್ಥರೂಪರು (ಕೀರಿಕ್ಕಾಡು ಕೇಶವ ಭಟ್ಟರು) ನಿಧನರಾದಾಗ ಸಂಸಾರದ ಹೊಣೆಯೂ ಹೆಚ್ಚಿತ್ತು. 1930ರಲ್ಲಿ ಅಂದರೆ ಹದಿನೇಳನೇ ವಯಸ್ಸಿಗೆ ಮರಕ್ಕಿಣಿ ಗೋವಿಂದ ಭಟ್ಟ , ಶಂಕರಿ ಅಮ್ಮ ದಂಪತಿಗಳ ಪುತ್ರಿ ಪರಮೇಶ್ವರಿ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು.
ಯಕ್ಷಗಾನಾಸಕ್ತಿ ತೀವ್ರವಾಗಿದ್ದರೂ ಮನೆಯನ್ನು ನಿರ್ಲಕ್ಸಿಸದೆ ನೋಡಿಕೊಳ್ಳುತ್ತಿದ್ದರು. ಕಾಸರಗೋಡು ಪ್ರದೇಶದೆಲ್ಲೆಡೆ ನಡೆಯುವ ಕೂಟಗಳಿಗೆ ನಡೆದೇ ಸಾಗುತ್ತಿದ್ದರು. ಪೊಳಲಿ ಶಾಸ್ತ್ರಿಗಳು, ಕವಿಭೂಷಣ ವೆಂಕಪ್ಪ ಶೆಟ್ಟರು, ಪಡ್ರೆ ಶ್ರೀಪತಿ ಶಾಸ್ತ್ರಿಗಳು(ಪೆರ್ಲ ಕೃಷ್ಣ ಭಟ್ಟರ ತೀರ್ಥರೂಪರು), ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರು, ಪುಂಡೂರು ಗೋಪಾಲಕೃಷ್ಣ ಪುಣಿಚಿತ್ತಾಯರು, ಏನ್. ಎಸ್. ಕಿಲ್ಲೆ , ದೊಡ್ಡ ಸಾಮಗರು, ಅರ್ಕುಳ ಸುಬ್ರಾಯ ಆಚಾರ್ಯರು, ಕುಬಣೂರು ಬಾಲಕೃಷ್ಣ ರಾಯರು, ಕೊಳಂಬೆ ಪುಟ್ಟಣ್ಣ ಗೌಡರು ಮೊದಲಾದವರು ಆಗ ಕೂಟಗಳಲ್ಲಿ ದಿಗ್ಗಜರು. ಅವರೊಂದಿಗೆ ಅರ್ಥ ಹೇಳುತ್ತಾ ಅನುಭವಗಳಿಂದ ಸಮದಂಡಿಯಾಗಿ ಮೆರೆದರು.
ಕುರಿಯ ವಿಠಲ ಶಾಸ್ತ್ರಿಗಳೂ, ಮಾಸ್ತರರೂ ಸಾಧಾರಣ ಸಮಾನವಯಸ್ಕರು. ಜತೆಯಾಗಿಯೇ ಆಟ ಕೂಟಗಳಲ್ಲಿ ಭಾಗವಹಿಸಿದ್ದರು. ಕೀರಿಕ್ಕಾಡು ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗ ಶಿಕ್ಷಣಾಧಿಕಾರಿಯವರ ಪ್ರಸಂಶೆಗೂ ಪಾತ್ರರಾಗಿದ್ದರು. ಶಾಲೆಯಲ್ಲಿ ನವರಾತ್ರಿ ಪೂಜಾ ಸಂದರ್ಭವಲ್ಲದೆ ಅವಕಾಶಗಳಿದ್ದಾಗ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ನೇತೃತ್ವದಲ್ಲಿ ಕೂಟಗಳು ನಡೆಯುತ್ತಿತ್ತು. ಪಂಬೆತಡ್ಕ ಶ್ರೀನಿವಾಸ ಕಡಂಬಳಿತ್ತಾಯರೂ ಕೂಟಗಳಲ್ಲಿ ಮಾಸ್ತರರ ಒಡನಾಡಿಯಾಗಿದ್ದರು. ಕೀರಿಕ್ಕಾಡಿನಲ್ಲಿರುವಾಗಲೇ ಶಿಷ್ಯಂದಿರನ್ನು ಸಿದ್ಧಗೊಳಿಸುವ ಕಾಯಕಕ್ಕೆ ತೊಡಗಿದ್ದರು.
ಶೇಣಿಯವರು ಬಾಲಕನಾಗಿದ್ದಾಗ ಅವರನ್ನೂ ತಾಳಮದ್ದಳೆ ಕ್ಷೇತ್ರಕ್ಕೆ ಸೆಳೆದು ಪ್ರೋತ್ಸಾಹಿಸಿದ್ದರು. ಉಕ್ಕಿನಡ್ಕ ಶ್ರೀ ವಸಿಷ್ಠಾಶ್ರಮ ಸಂಸ್ಕೃತ ಪಾಠಶಾಲೆಯಲ್ಲಿ ನಡೆದ ಕೂಟದಲ್ಲಿ ರತಿ ಕಲ್ಯಾಣ ಪ್ರಸಂಗದಲ್ಲಿ ಮಾಸ್ತರರಿಂದ ಪ್ರಚೋದಿಸಲ್ಪಟ್ಟ ಶೇಣಿಯವರು ಮೊತ್ತ ಮೊದಲ ಬಾರಿ ತಾಳಮದ್ದಳೆ ಅರ್ಥಧಾರಿಯಾಗಿ ಕಾಣಿಸಿಕೊಂಡರು. ನಿರಂತರ ಯಕ್ಷಗಾನ ಪಾಠವನ್ನೂ ಕೂಟಗಳನ್ನೂ ನಡೆಸಿ ಕೀರಿಕ್ಕಾಡಿನಲ್ಲಿರುವಾಗಲೇ ‘ಯಕ್ಷಗಾನ ಗುರು’ ಎನಿಸಿಕೊಂಡರು.
ಇವರ ಶಿಷ್ಯರಲ್ಲಿ ಶೇಣಿ ಮತ್ತು ಕಡಾರು ನಾರಾಯಣ ಭಟ್ ಪ್ರಮುಖರು. ‘ಕೀರಿಕ್ಕಾಡು ಮಾಸ್ತರರಿಂದಾಗಿಯೇ ನಾನು ಯಕ್ಷಗಾನ ಕ್ಷೇತ್ರಕ್ಕೆ ಬಂದೆ. ಅವರೇ ನನ್ನನ್ನು ಕೂಟಗಳಿಗೆ ಎಳೆತಂದವರು. ವಿವೇಕಾನಂದರಿಗೆ ಪರಮಹಂಸರಿದ್ದಂತೆ ನನಗೆ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು’ ಎಂದು ಶೇಣಿಯವರು ಹೇಳುತ್ತಿದ್ದರು. ಕಡಾರು ನಾರಾಯಣ ಭಟ್ಟರು ನಾಟ್ಯ ಕಲಿತು ಒಳ್ಳೆಯ ಕಿರೀಟ ವೇಷಧಾರಿಯಾಗಿ ಮೇಳದ ತಿರುಗಾಟವನ್ನು ಮಾಡಿದವರು. ಅತಿಕಾಯನ ಪಾತ್ರವು ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತ್ತು. ಅವರನ್ನು ಎಲ್ಲರೂ ಅತಿಕಾಯ ನಾರಾಯಣಣ್ಣ ಎಂದು ಕರೆಯುತ್ತಿದ್ದರಂತೆ.
ಈ ಎಲ್ಲಾ ವಿಚಾರಗಳನ್ನು ನನ್ನ ತೀರ್ಥರೂಪರು ನನಗೆ ಹೇಳಿದ್ದರು. ಮೊಟ್ಟಮೊದಲು ಕೀರಿಕ್ಕಾಡು ಪ್ರಶಸ್ತಿಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರಿಗೇ ನೀಡಿ ಗೌರವಿಸಲಾಗಿತ್ತು. ಇದು ಅಭಿನಂದನೀಯವೂ ಗುರು ಶಿಷ್ಯ ಪರಂಪರೆಗೆ ಸಂದ ಗೌರವವೂ ಆಗಿದೆ. ಮಾಸ್ತರರು ಎಳವೆಯಲ್ಲೇ ಅಧ್ಯಯನಾಸಕ್ತರಾಗಿ ಉಳಿದವರಿಗೆ ಬೋಧಿಸುವ ಕ್ರಮವನ್ನು ಪಾಲಿಸಿಕೊಂಡು ಬಂದವರು.
– (ಮುಂದುವರಿಯುವುದು)