ಇತ್ತೀಚೆಗೆ ಯಕ್ಷಗಾನ ಪಾತ್ರಧಾರಿಯೊಬ್ಬರು ಮಹಿಷಾಸುರನ ಪಾತ್ರ ಧರಿಸಿ ತನಗೆ ಅಪಾಯ ಸಂಭವಿಸಬಹುದೋ ಏನೋ ಎಂದು ಇತರರು ಭಾವಿಸುವಂತೆ ಮಾಡಿದ ಪ್ರದರ್ಶನದ ಬಗ್ಗೆ ಬಹಳಷ್ಟು ಚರ್ಚೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಂತೂ ಒಂದು ವಾರದ ಕಾಲ ಇದರ ಬಗ್ಗೆಯೇ ಚರ್ಚೆ, ವಾದ ವಿವಾದಗಳು ನಡೆದಿತ್ತು.
ವಾಟ್ಸಾಪ್ ಗುಂಪುಗಳಲ್ಲಂತೂ ಕೇಳುವುದೇ ಬೇಡ. ಬಡಗುತಿಟ್ಟಿನ ಮೇಳವೊಂದರ ಆ ಮಹಿಷಾಸುರ ಪಾತ್ರಧಾರಿ ಹಾಗೆ ಮಾಡಿದ್ದೂ ಸರಿಯಲ್ಲ ಎಂದು ಕೆಲವು ಜನರು ವಾದಿಸಿದರೆ ಇನ್ನು ಕೆಲವರು ಪಾತ್ರಧಾರಿಯ ಪರವಾಗಿ ವಾದಿಸಿದರು. ಇನ್ನು ಕೆಲವು ಜನರು ಪಾತ್ರಧಾರಿಯ ಆರೋಗ್ಯದ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿದರು.
ಕೆಲವರು ವೈದ್ಯರಿಗೆ ದೂರವಾಣಿ ಕರೆ ಮಾಡಿ ವೈದ್ಯರ ಸಲಹೆಯನ್ನೂ ಕೇಳತೊಡಗಿದರು! ಇಂದಿನ ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆಗಳನ್ನು ನೋಡುತ್ತಿರುವಾಗ ಕೆಲವು ವ್ಯಕ್ತಿಗಳು ಎಷ್ಟು ಮುಗ್ಧರಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ಮಹಿಷಾಸುರ ಪಾತ್ರಧಾರಿ ಕಂಬಕ್ಕೆ ತಲೆಯನ್ನು ಬಡಿದ ಎಂಬುದೇ ಅವರ ಕಾಳಜಿ,ಆಕ್ಷೇಪಗಳಿಗೆ ಕಾರಣವಾಗಿತ್ತು.
ಕೋಣನಂತೆ ವರ್ತಿಸುತ್ತಾ ವೇಗವಾಗಿ ಓಡುತ್ತಾ ಬಂದು ಕಂಬಕ್ಕೆ ತಲೆಯನ್ನು ಹೊಡೆದುಕೊಳ್ಳುವ ನಟನೆಯನ್ನು ಆ ಪಾತ್ರಧಾರಿ ಮಾಡಿದ್ದರು. ಮರುದಿನ ಪತ್ರಿಕೆಗಳಲ್ಲಿ ಇದೇ ಸುದ್ದಿ ದಪ್ಪ ಅಕ್ಷರಗಳಲ್ಲಿ ರಾರಾಜಿಸುತ್ತಿತ್ತು. ವಾಟ್ಸಾಪ್ ಅಂತೂ ಮಹಿಷಾಸುರನ ಈ ಕ್ರಿಯೆಯ ವರ್ಣನೆಯಿಂದ ತುಂಬಿ ಹೋಗಿತ್ತು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಆದರೆ ಎಲ್ಲರೂ ತಿಳಿದುಕೊಂಡಿರಬಹುದಾದಂತೆ ಈ ರೀತಿಯ ಕಂಬಕ್ಕೆ ಗುದ್ದುವಿಕೆ ಇದೇ ಮೊದಲ ಬಾರಿಯೇ? ಎಂದು ಪ್ರಶ್ನಿಸಿದರೆ ಅಲ್ಲ ಎಂದೇ ಹೇಳಬೇಕಾಗುತ್ತದೆ. ಬಡಗುತಿಟ್ಟಿನ ಮಹಿಷಾಸುರ ಪಾತ್ರಗಳ ಪ್ರದರ್ಶನಗಳ ಬಗ್ಗೆ ನನಗೆ ಅಷ್ಟಾಗಿ ತಿಳಿದಿಲ್ಲದಿದ್ದರೂ ತೆಂಕು ತಿಟ್ಟಿನಲ್ಲಿ ಈ ರೀತಿ ಸುಮಾರು ಹತ್ತು ವರ್ಷಗಳ ಹಿಂದೆಯೇ ಮಾಡುತ್ತಿದ್ದರು.
ಆಗೆಲ್ಲಾ ಇದೊಂದು ಸುದ್ದಿಯಾಗಿರಲೇ ಇಲ್ಲ. ಯಾಕೆಂದರೆ ಸಾಮಾಜಿಕ ಜಾಲತಾಣ ಆಗ ಈಗಿನಷ್ಟು ಸಶಕ್ತವಾಗಿರಲಿಲ್ಲ. ನನಗೆ ನೆನಪಿರುವ ಹಾಗೆ 2012ರಲ್ಲಿ ಅಂದರೆ ಸುಮಾರು ಒಂಭತ್ತು ವರ್ಷಗಳ ಹಿಂದೆ ನಾನು ನೋಡಿದ ಒಂದು ಪ್ರದರ್ಶನದಲ್ಲಿ ಮಹಿಷಾಸುರ ಪಾತ್ರಧಾರಿ ಈರೀತಿ ಹಲವಾರು ಬಾರಿ ಕಂಬಕ್ಕೆ ತನ್ನ ತಲೆಯನ್ನು ಗುದ್ದಿ ಅಭಿನಯಿಸಿದ್ದರು.
ಆಗ ಚೌಕಿಯ ಸಹಾಯಕರು ಬಂದು ಕಂಬವನ್ನು ಅಲ್ಲಾಡದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. (ಚಿತ್ರ ನೋಡಿ). ಆದುದರಿಂದ ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ತಪ್ಪು ಎಂದು ಕೆಲವರು ಹೇಳಬಹುದು. ಆದರೆ ಪಾತ್ರಧಾರಿಗೆ ಇದರ ಅರಿವಿರುತ್ತದೆ. ಅವರು ಅದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡು ಬಂದೇ ಆ ರೀತಿ ಕಂಬಕ್ಕೆ ತಲೆಯಿಂದ ಗುದ್ದುತ್ತಾರೆ.
ಆದರೂ ಅಪಾಯ ಇಲ್ಲವೇ ಇಲ್ಲ ಎಂದು ನೂರು ಪ್ರತಿಶತ ಹೇಳಲಾಗದು. ಅತಿಯಾದರೆ ಅಮೃತವೂ ವಿಷ ಎಂಬಂತೆ ಜಾಗರೂಕತೆ ಎಲ್ಲಕ್ಕಿಂತಲೂ ಮುಖ್ಯ. ಆದರೆ ಒಂಭತ್ತು ವರ್ಷಗಳ ಹಿಂದೆ ನಡೆದದ್ದು ಆ ಆಟ ನೋಡಿದವರನ್ನು ಬಿಟ್ಟು ಉಳಿದವರ ಗಮನಕ್ಕೂ ಬಂದಿರಲಿಲ್ಲ. ನನ್ನ ಒಂದು ಅಂದಾಜಿನ ಪ್ರಕಾರ ಹತ್ತು ವರ್ಷದ ಹಿಂದೆಯೇ ತೆಂಕುತಿಟ್ಟು ಯಕ್ಷಗಾನದಲ್ಲಿ ಕೆಲವು ಮಹಿಷಾಸುರ ಪಾತ್ರಧಾರಿಗಳು ಈ ರೀತಿ ಮಾಡುತ್ತಿದ್ದರು.
“ಯಕ್ಷಪ್ರಿಯ’ ಮಂಗಳೂರು