Saturday, January 18, 2025
Homeಯಕ್ಷಗಾನಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 63ನೇ ವಾರ್ಷಿಕೋತ್ಸವ - ಪ್ರಶಸ್ತಿ ಸ್ವೀಕರಿಸಲಿರುವ ಸಂಸ್ಥೆ ಮತ್ತು...

ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 63ನೇ ವಾರ್ಷಿಕೋತ್ಸವ – ಪ್ರಶಸ್ತಿ ಸ್ವೀಕರಿಸಲಿರುವ ಸಂಸ್ಥೆ ಮತ್ತು ಕಲಾವಿದರ ಪರಿಚಯ

ಗುರುರಾಜ ಮಾರ್ಪಳ್ಳಿ– ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ
ಯಕ್ಷಗಾನ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ, ಕೃಷಿ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿರಂತರ ಕ್ರಿಯಾಶೀಲರಾಗಿರುವ ಶ್ರೀ ಗುರುರಾಜ ಮಾರ್ಪಳ್ಳಿ ನಮ್ಮ ನಡುವೆ ಇರುವ ವಿಶಿಷ್ಟ ಕಲಾ ಸಾಧಕ. 70ರ ಅಂಚಿನಲ್ಲಿರುವ ಗುರುರಾಜರು ಉಡುಪಿ ಸಮೀಪದ ಮಾರ್ಪಳ್ಳಿಯವರು. ಇಂಗ್ಲೀಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಯುತರು ಕನ್ನಡ, ಇಂಗ್ಲೀಷ್ ಸಾಹಿತ್ಯಾಭ್ಯಾಸಿ.

ಎಂ.ಜಿ.ಎಂ. ಮತ್ತು ಹಂಗಾರಕಟ್ಟೆ ಯಕ್ಷಗಾನ ಕೇಂದ್ರಗಳಲ್ಲಿ ಯಕ್ಷಗಾನ ನೃತ್ಯ, ಭಾಗವತಿಕೆ, ಮದ್ದಲೆ ಅಭ್ಯಾಸ ಮಾಡಿದರು. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಧ್ಯಯನ ಮಾಡಿದರು. ಇಡಗುಂಜಿ, ಪೆರ್ಡೂರು, ಅಮೃತೇಶ್ವರೀ ಮೇಳಗಳಲ್ಲಿ ವೃತ್ತಿಕಲಾವಿದರಾಗಿ ತಿರುಗಾಟ ನಡೆಸಿದರು. ಹಾಸ್ಯ, ಮುಖ್ಯವೇಷ, ಸ್ತ್ರೀವೇಷಗಳಲ್ಲಿ ತಮ್ಮ ಕಲಾ ಪ್ರತಿಭೆ ಮೆರೆದವರು. ಡಾ. ಕೆ. ಶಿವರಾಮ ಕಾರಂತರ ಯಕ್ಷರಂಗದ ಬ್ಯಾಲೆಯ ಮೂಲಕ ಅನ್ಯಾನ್ಯ ರಾಜ್ಯಗಳಲ್ಲಿ ಐವತ್ತಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಯಕ್ಷಗಾನದ ಹಾಡುಗಳನ್ನು ಬಾನ್ಸುರಿಯಲ್ಲಿ ನುಡಿಸಿದ್ದಾರೆ.

1982ರ ನಂತರ ನೀನಾಸಂ ನಾಟಕ ತರಬೇತಿ ಕೇಂದ್ರದಲ್ಲಿ ನೃತ್ಯಕಲಾವಿದರಾಗಿ ಪೌರಾತ್ಯ, ಪಾಶ್ಚಾತ್ಯ ರಂಗಭೂಮಿ ಪ್ರಯೋಗಗಳ ಅಧ್ಯಯನ ನಡೆಸಿ ಸಂಗೀತ ಮತ್ತು ನೃತ್ಯದಲ್ಲಿ ಹೊಸ ಸಾಧ್ಯತೆಗಳನ್ನು ಗುರುತಿಸಿದರು. ಅಲ್ಲಿ ಕೊರಿಯೋಗ್ರಾಫರ್ ಆಗಿ, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಖ್ಯಾತ ನಿರ್ದೇಶಕ ಸಿ.ಆರ್.ಜಂಬೆಯವರ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ ಹೆಗ್ಗಳಿಕೆ ಇವರದು.

ಭಾರತೀಯ ರಂಗಭೂಮಿಯ ಮಾಂತ್ರಿಕ ಬಿ. ವಿ.ಕಾರಂತರ ಒಡನಾಟ ಮತ್ತು ಅವರ ‘ಬಿರುಗಾಳಿ’ ನಾಟಕಕ್ಕೆ ಸಂಗೀತ ಒದಗಿಸಿದವರು. ಇದಲ್ಲದೆ ಹಲವು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರೇ ನಿರ್ದೇಶಿಸಿದ ಹಲವು ನಾಟಕಗಳು ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವುದು ಸಾಧನೆಯ ಕಿರೀಟಕ್ಕೆ ಸಂದ ಹೊನ್ನ ತುರಾಯಿಗಳಾಗಿವೆ.

ಬೇಂದ್ರೆ, ಸು.ರಂ. ಎಕ್ಕುಂಡಿ, ಕೆ. ವಿ. ತಿರುಮಲೇಶ್ ಮೊದಲಾದವರ ಕವನಗಳಿಗೆ, ಅಲ್ಲಮ್ಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ ಇವರ ವಚನಗಳಿಗೆ ಹೊಸ ರೀತಿಯ ಸಂಗೀತದ ಸ್ಪರ್ಶನೀಡಿ ಕಲಾರಸಿಕರ ಮನ ಗೆದ್ದಿದ್ದಾರೆ.

ಹಲವು ಪತ್ರಿಕೆಗಳಲ್ಲಿ, ವಿಶೇಷ ಅಂಕಣಗಳಲ್ಲಿ ಕಥೆ-ಕವನಗಳು ಪ್ರಕಟಗೊಂಡಿವೆ. ‘ಏಕಾಂತದ ಆಲಾಪಗಳು ’‘ಕಾಲಪಾತ್ರ’, ‘ಮಾರ್ಪಳ್ಳಿಯ ಖ್ಯಾಲು ಖಯಾಲುಗಳು’ ಕವನ ಸಂಕಲನಗಳು. ‘ಬಂಡೆ ಮತ್ತು ಮನುಷ್ಯ’, ‘ಸಾಂತ್ಯಾಯಣ’ ಕಥಾಸಂಕಲನಗಳು. ‘ಅತಂತ್ರ’, ‘ತಲ್ಲಣ’ ಮತ್ತು ‘ಕಲಾಯಾನ’ ಕಾದಂಬರಿಗಳು. ‘ಪಂಚರಂಗಿ’ ಐದು ನಾಟಕಗಳ ಸಂಕಲನ.

ತೈಲ ವರ್ಣಗಳ ಚಿತ್ರ, ಆಕ್ರಲಿಕ್ ವರ್ಣಚಿತ್ರ, ರೇಖಾಚಿತ್ರ, ವ್ಯಂಗ್ಯಚಿತ್ರ ರಚನೆ ಮತ್ತು ಪ್ರದರ್ಶನ ಮಾಡಿದ್ದಾರೆ. ಮರದ ಮತ್ತು ಕಲ್ಲುಗಳ ಶಿಲ್ಪ ರಚನೆಯನ್ನೂ ಬಲ್ಲವರು. ಆಕಾಶವಾಣಿ, ದೂರದರ್ಶನಗಳಲ್ಲಿ ಅವರ ಕಲಾ ಕಾರ್ಯಕ್ರಮ ಬಿತ್ತರಗೊಂಡಿವೆ. ಪತ್ನಿ ರಾಜೇಶ್ವರಿ, ಮಕ್ಕಳು ಪ್ರಜ್ಞಾ, ಪ್ರಕೃತಿ. ಮಾರ್ಪಳ್ಳಿಯ ಸ್ವಂತ ಕೃಷಿ ಭೂಮಿಯಲ್ಲಿ ಸದಾ ಹೊಸ ಹೊಸ ಪ್ರಯೋಗಗಳೊಂದಿಗೆ ಕೃಷಿಯಲ್ಲೂ ನಿರತರು.

ಮಂಜುನಾಥ ಭಂಡಾರಿ ಕರ್ಕಿ– ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ
ಮಂಜುನಾಥ ಭಂಡಾರಿಯವರು ಸುಪ್ರಸಿದ್ಧ ಮದ್ದಲೆಗಾರರಾದ ಕರ್ಕಿ ಪ್ರಭಾಕರ ಭಂಡಾರಿ-ಶಾರದಾ ದಂಪತಿಯ ಸುಪುತ್ರರು. 55ರ ಹರೆಯದ ಇವರು ಕಲಾ ಬದುಕು ಆರಂಭಿಸಿದ್ದು 15ರ ಹರೆಯದಲ್ಲಿ. ಯಕ್ಷಗಾನ ಹಿಮ್ಮೇಳನ ವಾದನ ಕಲೆ ಇವರಿಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿ.

ಅಜ್ಜ, ತಂದೆ, ದೊಡ್ಡತಂದೆ, ಅಣ್ಣ ಎಲ್ಲರೂ ಪ್ರಸಿದ್ಧ ಹಿಮ್ಮೇಳ ವಾದಕರು. ಇವರಿಗೆ ಹಿಮ್ಮೇಳವಾದನ ಕಲಿಕೆಗೆ ತಂದೆಯೇ ಮೊದಲ ಗುರು. ದೊಡ್ಡತಂದೆ ಸತ್ಯನಾರಾಯಣ ಭಂಡಾರಿಯವರಿಂದ ಪ್ರಭಾವಿತರಾದರು. ಆಮೇಲೆ ಸತತ ಅಭ್ಯಾಸದಿಂದ ಅದನ್ನು ಕರಗತ ಮಾಡಿಕೊಂಡವರು. ಇಡಗುಂಜಿ, ಪೆರ್ಡೂರು, ಸಾಲಿಗ್ರಾಮ, ಹಾಲಾಡಿ ಮೊದಲಾದ ಮೇಳಗಳಲ್ಲಿ ಇಪ್ಪತ್ತಕ್ಕೂ ಹೆಚ್ಚುವರ್ಷ ಕಲಾಸೇವೆ ಗೈದಿದ್ದಾರೆ.

ಮದ್ದಲೆವಾದನ ತಯಾರಿಕೆಯಲ್ಲಿಯೂ ಸಿದ್ಧಹಸ್ತರು. ಮೃಣ್ಮಯಗಣಪತಿ ಮೂರ್ತಿ ರಚನೆ ಇವರ ಇನ್ನೊಂದು ಹವ್ಯಾಸ. ಅನಾರೋಗ್ಯದ ಕಾರಣ ವೃತ್ತಿರಂಗದಿಂದ ಸ್ವಲ್ಪ ಬೇಗನೆ ನಿವೃತ್ತರಾದ ಇವರು ಹವ್ಯಾಸಿ ಕಲಾವಿದರಾಗಿ ಅನೇಕ ಸಂಘದ ಆಟಗಳಲ್ಲಿ, ತಾಳಮದ್ದಲೆ ಕೂಟಗಳಲ್ಲಿ, ಮದ್ದಲೆವಾದನದಲ್ಲಿ ಭಾಗಿಯಾಗಿದ್ದಾರೆ. ಸ್ಪಷ್ಟವಾದ ಹೊರಳಿಕೆ, ಸ್ಫುಟವಾದ ಬೆರಳುಗಾರಿಕೆ ನಾದವನ್ನು ಹಸ್ತ ತಾಡನದಲ್ಲಿ ನವಿರಾಗಿ ಹೊರಹೊಮ್ಮಿಸುವ ವಾದನಾಪಟುತ್ವ ಇವರದು. ಸಾಂಪ್ರದಾಯಿಕ, ಸೃಜನಾತ್ಮಕ ಮಟ್ಟು ಪೆಟ್ಟುಗಳನ್ನು ಬಲ್ಲ ಚತುರ ಮದ್ದಲೆ ವಾದಕರು.
ಮಡದಿ ಮಂಗಳ, ಮಕ್ಕಳು ಮಧುರಾ ಮತ್ತು ಮಾನಸರಿಂದ ಕೂಡಿದ ಚಿಕ್ಕ-ಚೊಕ್ಕ ಸಂಸಾರದ ಯಜಮಾನ.


ಟಿ. ಬೋಜಪ್ಪ ಸಾಲಿಯಾನ್, ತೋನ್ಸೆ– ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ
ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಬೋಜಪ್ಪ ಸಾಲ್ಯಾನರು ಯಕ್ಷಗಾನದ ಎಲ್ಲಾ ಅಂಗಗಳನ್ನು ಬಲ್ಲವರು. 82ರ ಹರೆಯದ ಶ್ರೀಯುತರು ಸುಬ್ಬಪ್ಪ ಬೆಲ್ಚಾಡ-ಸೀತಾ ದಂಪತಿ ಸುಪುತ್ರರು. 5ನೇ ತರಗತಿ ವರೆಗೆ ಓದಿದ ಇವರು ಮೂರ್ತೆದಾರಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿ ನಿಷ್ಠೆಯಿಂದ ಮಾಡಿದವರು. ಯಕ್ಷಗಾನದ ಪರಿಸರದಲ್ಲಿ ಬೆಳೆದ ಇವರು ಚಿಕ್ಕಂದಿನಲ್ಲೇ ಈ ಕಲೆಯಿಂದ ಆಕರ್ಷಿತರಾದರು.

ವೆಂಕಟಯ್ಯ ಭಾಗವತರಿಂದ ಯಕ್ಷಗಾನದ ಶಿಕ್ಷಣವನ್ನು ಪಡೆದು ಸ್ವಂತ ಪರಿಶ್ರಮದಿಂದ ಅದನ್ನು ಬೆಳೆಸಿಕೊಂಡು ಬಂದರು.
ತೊಟ್ಟಂನ ಶ್ರೀ ಗಜಾನನ ಯಕ್ಷಗಾನ ಕಲಾ ಮಂಡಳಿಯಲ್ಲಿ ಸದಸ್ಯರಾಗಿ, ಕಲಾವಿದರಾಗಿ, ಗುರುಗಳಾಗಿ ಸಂಘದೊಂದಿಗೆ ಬೆಳೆಯುತ್ತಾ ಸಂಘವನ್ನೂ ಬೆಳೆಸಿದರು. ಸಂಸ್ಥೆಯ ಪದಾಧಿಕಾರಿಗಳಾಗಿ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅದರ ಗೌರವಾಧ್ಯಕ್ಷರಾಗಿದ್ದಾರೆ.

ಯಕ್ಷಗಾನದ ವೇಷಧಾರಿಯಾಗಿ ಅನೇಕ ಪೌರಾಣಿಕ, ಐತಿಹಾಸಿಕ ಪ್ರಸಂಗಗಳಲ್ಲಿ ಹಲವಾರು ಪಾತ್ರಗಳನ್ನು ಸುಂದರವಾಗಿ ನಿರ್ವಹಿಸಿದ್ದಾರೆ. ಕರ್ಣಾರ್ಜುನದ ಅರ್ಜುನ, ವೀರಮಣಿ ಕಾಳಗದ ಶತ್ರುಘ್ನ, ಕೋಟಿ ಚೆನ್ನಯ್ಯ ಪ್ರಸಂಗದ ವಿವಿಧ ಪಾತ್ರಗಳು ಜನಮನ್ನಣೆಗಳಿಸಿವೆ. ತಾಳಮದ್ದಲೆ ಅರ್ಥಧಾರಿಯಾಗಿ ಸಂದರ್ಭೋಚಿತ ಮಾತುಗಾರಿಕೆಯಿಂದಕೂಟ ಕಳೆಗಟ್ಟುವಂತೆ ಮಾಡಿದ್ದಾರೆ.
ತಮ್ಮ ಸಂಘದಲ್ಲಷ್ಟೇ ಅಲ್ಲದೆ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ತರಬೇತಿ ನೀಡಿದ್ದಾರೆ.

ಯಕ್ಷಗಾನಾಸಕ್ತರು ಕಲಿಕೆಗೆ ಅಪೇಕ್ಷಿಸಿದಾಗ ತಮ್ಮ ಮನೆಯಲ್ಲೇ ತರಬೇತಿಯನ್ನು ನೀಡಿದ್ದಾರೆ. ಪತ್ನಿ ವನಜಾಕ್ಷಿ, ಮೂವರು ಗಂಡು, ಮೂವರು ಹೆಣ್ಣುಮಕ್ಕಳಿಂದ ಕೂಡಿದ ಸಂಸಾರದ ಯಜಮಾನರಾಗಿ ಮಕ್ಕಳಿಗೆಲ್ಲಾ ಒಳ್ಳೆಯ ಶಿಕ್ಷಣ ಕೊಡಿಸಿ ಒಳ್ಳೆಯ ಉದ್ಯೋಗ ಪಡೆಯುವುದಕ್ಕೆ ಕಾರಣರು.ಅಲ್ಲದೆ ಚಿಕ್ಕಂದಿನಲ್ಲಿ ಯಕ್ಷಗಾನವನ್ನು ಕಲಿಯಲು ಪ್ರೋತ್ಸಾಹಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಟ್ಲ ಗೋಪಾಲಕೃಷ್ಣ ಜೋಷಿ ಪ್ರತಿಷ್ಠಾನ ಪ್ರಶಸ್ತಿ ನೀಡಿ ಗೌರವಿಸಿವೆ. ಯಕ್ಷಗಾನದ ಹಿರಿಯ ಭಾಗವತ ಗೋರ್ಪಾಡಿ ವಿಠಲ ಪಾಟೀಲ ಸ್ಮಾರಕ ಯಕ್ಷಕಲಾಶ್ರೀ ಪ್ರಶಸ್ತಿ, ಸುಮನಸ ಕೊಡವೂರು ಇವರ ಆಶ್ರಯದಲ್ಲಿ ರಂಗ ಸಾಧಕ ಪ್ರಶಸ್ತಿ ಮೊದಲಾದ ಗೌರವಗಳು ಸಂದಿವೆ.

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ (ರಿ.), ಪರ್ಕಳ, ಉಡುಪಿ.
ಎಂಟು ದಶಕಗಳಿಂದ ಯಕ್ಷಗಾನ ಮತ್ತು ಜಾನಪದ ನೃತ್ಯ ಪ್ರಕಾರಗಳಲ್ಲಿ ಕಲಾ ಸೇವೆಗೈಯುತ್ತಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿಯ ಕೊಡುಗೆ ಅನನ್ಯ. ಕೊಗ್ಗು ನಾಯಕ್, ಸದಾಶಿವ ಶೆಟ್ಟಿ, ಮುದ್ದು ಯಾನೆ ಕೃಷ್ಣ ಶೆಟ್ಟಿಗಾರ್, ಜೀವಾನ್ ಫೆರ್ನಾಂಡಿಸ್, ಕಬಿಯಾಡಿ ಪುತ್ತು ಸಾಹೇಬ್, ಪರಾರಿ ಅಪ್ಪಿ ಭಾಗವತ ಮೊದಲಾದ ಹಿರಿಯಕಲಾವಿದರನ್ನು ನೀಡಿದ ಹಿರಿಮೆ ಈ ಸಂಸ್ಥೆಗಿದೆ.

ಸಮಾನಾಸಕ್ತರಿಂದ 1937ರಲ್ಲಿ ಸ್ಥಾಪನೆಗೊಂಡ ಈ ಕಲಾ ಮಂಡಳಿ ಉಡುಪಿಯ ಹಿರಿಯ ಕಲಾ ಸಂಸ್ಥೆಗಳಲ್ಲೊಂದಾಗಿದೆ. 1957ರಲ್ಲಿ ಪರ್ಕಳ ಯಕ್ಷಗಾನ ಮಂಡಳಿಯು ಶ್ರೀ ಶಾರದಾ ಕಲಾ ಮಂಡಳಿ ಎಂಬ ಹೆಸರಿನಲ್ಲಿ ಪರ್ಕಳ ಪೇಟೆಯಕಟ್ಟಡದಲ್ಲಿ ಯಕ್ಷಗಾನ ತರಬೇತಿ ನಡೆಸುತ್ತಾ ಮುಂದುವರಿಯಿತು. ಯಕ್ಷಗಾನ, ತಾಳಮದ್ದಲೆ, ಚೌಪದಿ, ಜಾನಪದ ನೃತ್ಯಗಳನ್ನು ಕಲಾರಸಿಕರಿಗೆ ನೀಡುತ್ತಾ ಬಂದಿದೆ. 1982ರಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ ಎಂದು ಮರು ನಾಮಕರಣಗೊಂಡು ನೊಂದಾಯಿತ ಸಂಸ್ಥೆಯಾಯಿತು.

ಈಗ ಪರ್ಕಳ ಬಡಗುಬೆಟ್ಟು ರಸ್ತೆಯ‘ಕಲಾಭೂಮಿ’ಯಲ್ಲಿ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ತರಬೇತಿ ಭವನ, ಕಛೇರಿ ಕೊಠಡಿ, ಅಡುಗೆ ಕೊಠಡಿ, ಸ್ವಚ್ಚತಾ ಕೋಣೆ, ಬಯಲು ರಂಗಮಂದಿರದೊಂದಿಗೆ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಹೊಂದಿದೆ. ಮಂಡಳಿಯಲ್ಲಿ ಯುವ ಕಲಾವಿದರ ತಂಡ, ಬಾಲಕಿಯರ ತಂಡ, ಮಹಿಳಾ ಯಕ್ಷಗಾನ ತಂಡ ಹೀಗೆ ಎಲ್ಲಾ ವಿಭಾಗದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಕೇವಲ ಯಕ್ಷಗಾನಕ್ಕೆ ಸೀಮಿತವಾಗದೆ ಇಲ್ಲಿ ಭರತನಾಟ್ಯ, ಹುಲಿವೇಷ, ಬೇಡರ ನೃತ್ಯವೇ ಮೊದಲಾದ ವೈವಿಧ್ಯಪೂರ್ಣ ಜಾನಪದ ನೃತ್ಯಗಳನ್ನು ಕಲಿಸಲಾಗುತ್ತಿದೆ.

ರಾಜಸ್ಥಾನದ ಜೈಪುರ ನೃತ್ಯೋತ್ಸವ, ರಾಜಸ್ಥಾನಿ ದೀಪಾವಳಿ ಉತ್ಸವ, ಮಧ್ಯಪ್ರದೇಶದ ಕಜರಾಹೋ ನೃತ್ಯೋತ್ಸವ, ನಾಗಪುರ ಕಲಾ ಸಮ್ಮೇಳನ, ಭೋಪಾಲ್‍ನ ಲೋಕ ರಂಗ್‍ ಉತ್ಸವ, ಮುಂಬೈನ ಕಲಾರಂಗ್‍ ಉತ್ಸವ, ಕೇರಳದ ಪಾಲಕ್ಕಾಡ್‍ ಉತ್ಸವ, ಝಾನ್ಸಿ ಉತ್ಸವ, ಒಡಿಸ್ಸಿ ನೃತ್ಯೋತ್ಸವ ಹೀಗೆ ಅನ್ಯಾನ್ಯ ರಾಜ್ಯದ ಪ್ರತಿಷ್ಠಿತ ಉತ್ಸವಗಳಲ್ಲಿ ಮಂಡಳಿ ಭಾಗವಹಿಸಿದೆ.

ಯಕ್ಷಗಾನ, ಗುಮ್ಮಟೆ ವಾದನ, ಡೋಲು ನೃತ್ಯ, ಭೂತದ ಕೋಲ, ಹುಲಿವೇಷ ಇತ್ಯಾದಿಗಳನ್ನು ಪ್ರದರ್ಶಿಸಿದೆ. ಮೈಸೂರು ದಸರಾ ಮೆರವಣಿಗೆಯಲ್ಲಿ ಉಡುಪಿ ವಿಟ್ಲ ಪಿಂಡಿಯಲ್ಲಿ ಇವರ ಹುಲಿವೇಷದ ತಂಡವು ಪ್ರಥಮ ಬಹುಮಾನ ಗಳಿಸಿದೆ. ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಇಲ್ಲಿಯ ಕಲಾವಿದರು ಇಂಗ್ಲೀಷ್/ಹಿಂದಿ ಭಾಷಾ ಯಕ್ಷಗಾನ ನೀಡಿರುತ್ತಾರೆ. ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ಪರಿಣತ ಗುರುಗಳಿಂದ ತರಬೇತಿಗೊಳಪಟ್ಟ ಯಕ್ಷಗಾನವನ್ನು ಪ್ರದರ್ಶಿಸುತ್ತಾ ಕಲಾಭಿಮಾನಿಗಳ ಮೆಚ್ಚುಗೆ ಗಳಿಸುತ್ತಾ ಬಂದಿದೆ.

ಪ್ರಸ್ತುತ ಅಂಬಲಪಾಡಿ ಸಂಘದಲ್ಲೇ ತರಬೇತಿ ಪಡೆದ ಕಡೆಕಾರು ಅನಂತ ಪದ್ಮನಾಭ ಭಟ್‍ ಯಕ್ಷಗಾನ ಗುರುಗಳಾಗಿದ್ದಾರೆ. ಹಲವಾರು ಹಿರಿಯ ಕಲಾವಿದರಿಂದ ಮುನ್ನಡೆಸಿಕೊಂಡು ಬಂದ ಈ ಸಂಸ್ಥೆಯ ಸಂಚಾಲಕರಾಗಿ ಈಗ ಮುರಳೀಧರ ನಕ್ಷತ್ರಿಕಾರ್ಯ ನಿರ್ವಹಿಸುತ್ತಿದ್ದಾರೆ.


ಪ್ರೊ.ನಾರಾಯಣ ಎಂ. ಹೆಗಡೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments