Friday, November 22, 2024
Homeಯಕ್ಷಗಾನವರುಷವೈದು ಸಂದಾಯ್ತು 'ಕಣ್ಣಿ' ನೀ ನಮ್ಮ ಹೃದಯ ಬರಿದು ಮಾಡಿ... 

ವರುಷವೈದು ಸಂದಾಯ್ತು ‘ಕಣ್ಣಿ’ ನೀ ನಮ್ಮ ಹೃದಯ ಬರಿದು ಮಾಡಿ… 

ಬಡಗು ತಿಟ್ಟು ರಂಗವನ್ನು ಮಾತ್ರವಲ್ಲದೆ ಪೂರ್ತಿ ಯಕ್ಷಗಾನ ರಂಗವನ್ನೆ ತನ್ನ ನಾವೀನ್ಯತೆಯ ಶೈಲಿಯಿಂದ ಆಕ್ರಮಿಸಿಕೊಂಡಿದ್ದ ಯಕ್ಷಗಾನ ಕಲಾವಿದ ಕಣ್ಣಿಮನೆ ಗಣಪತಿ ಭಟ್ ನಮನ್ನಗಲಿ ಮೊನ್ನೆ ಫೆಬ್ರವರಿ 18ಕ್ಕೆ ವರುಷ ಐದಾಯ್ತು.

ಹೌದು. 2016ನೇ ಇಸವಿಯ ಇದೇ ತಿಂಗಳಿನ ದಿನಾಂಕ 18ಕ್ಕೆ ಕಣ್ಣಿಮನೆ ಎಂಬ ಯಕ್ಷಲೋಕದ ಬೆರಗು ಇಡೀ ಯಕ್ಷಗಾನ ರಂಗವನ್ನು ದುಃಖಸಾಗರದಲ್ಲಿ ತೇಲಾಡಿಸಿ ಕಾಲನ ಕರೆಗೆ ಓಗೊಟ್ಟು ಅಸ್ತಂಗತರಾದರು. 

ಮೊದಲಿಗೆ ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿದ ಅವರು ಮಂದಾರ್ತಿ, ಕೋಟ ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ವೃತ್ತಿ ಕಲಾವಿದನಾಗಿ ತನ್ನ ಪ್ರತಿಭೆಯಿಂದ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾರೆ. ಕಣ್ಣಿಮನೆ ಗಣಪತಿ ಭಟ್ಟರಿದ್ದರೆ ಶ್ರೀಕೃಷ್ಣನ ಪಾತ್ರ ಅವರಿಗೆ ಕಟ್ಟಿಟ್ಟದ್ದು ಎನ್ನುವಷ್ಟು ಪ್ರಬುದ್ಧ ಪಾತ್ರಾಭಿನಯವನ್ನು ಶ್ರೀಕೃಷ್ಣನಾಗಿ ಅವರು ನಿರ್ವಹಿಸುತ್ತಿದ್ದವರು. 

ತನ್ನದೇ ಆದ ಶೈಲಿಯಿಂದ ತನ್ನ ಕೇದಗೆ ಮುಂದಲೆಯನ್ನು ತಿರುಗಿಸುತ್ತಾ ನಾಟ್ಯ ಮಾಡುವ ಅವರ ಶೈಲಿ ಬಹಳ ಆಕರ್ಷಕ. ಕೇದಗೆ ಮುಂದಲೆಯನ್ನು ಪಕ್ಕಕ್ಕೆ ಮತ್ತು ಹಿಂದಕ್ಕೆ ಬಾಗಿಸುವ ಆ ಶೈಲಿ ‘ಕಣ್ಣಿ ಶೈಲಿ’ ಎಂದೇ ಪ್ರಸಿದ್ಧವಾಗಿದೆ. 

ಶ್ರೀಕೃಷ್ಣ, ನಾಗಶ್ರೀ ಪ್ರಸಂಗದ ಶಿಥಿಲ, ದೇವವೃತ, ಸಾಲ್ವ, ಕೀಚಕ, ಸುಧನ್ವ ಹೀಗೆ ಪುಂಡು ವೇಷ, ಪುರುಷ ವೇಷಗಳಲ್ಲಿ ಮಿಂಚಿ ಯಕ್ಷಗಾನ ಲೋಕದ ಅನಭಿಷಿಕ್ತ ದೊರೆಯಾಗಿದ್ದ ಅವರು ಅಕಾಲದಲ್ಲಿ ಮರೆಯಾದದ್ದು ಮಾತ್ರ ವಿಪರ್ಯಾಸವೆಂದೇ ಹೇಳಬೇಕು.

ಕೇವಲ ತನ್ನ 47ನೆಯ ವಯಸ್ಸಿನಲ್ಲಿಯೇ ಅಸ್ತಂಗತರಾದ ಅವರ ಬದುಕು ತನ್ನ ಯಕ್ಷಗಾನದ ಕುಣಿತದಂತೆ ವಿಶಿಷ್ಟತೆಯಿಂದ ಕೂಡಿದ್ದರೂ ಅಂತ್ಯ ಮಾತ್ರ ದುರಂತವಾಗಿತ್ತು. ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಗಂಭೀರ ಕಾಯಿಲೆಗಳಿಗೆ ತುತ್ತಾದದ್ದು ಯಕ್ಷಗಾನಕ್ಕೊಂದು ತುಂಬಲಾರದ ನಷ್ಟ. 

ತನ್ನ ವಿಶಿಷ್ಟ ಶೈಲಿಯಿಂದ ಹಲವಾರು ಸಂಖ್ಯೆಯಲ್ಲಿ ಅಭಿಮಾನಿಗಳನ್ನು  ಪಡೆದುಕೊಂಡರೂ ಮತ್ತದೇ ವಿಶಿಷ್ಟ ಶೈಲಿಯು ಕೆಲವು ವಿಮರ್ಶಕರ ಟೀಕೆ ಟಿಪ್ಪಣಿಗಳಿಗೂ ಆಹಾರವಾಗಿತ್ತು. ಸಣ್ಣ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಆಯಸ್ಸು ಕಡಿಮೆ ಎಂದು ಹೇಳುತ್ತಾರೆ.

ಇದಕ್ಕೆ ಉದಾಹರಣೆಯಾಗಿ ಹಲವಾರು ಪ್ರಸಿದ್ಧ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತಾರೆ. ಕಣ್ಣಿಮನೆ ಗಣಪತಿ ಭಟ್ಟರೂ ಈ ಪಟ್ಟಿಗೆ ಸೇರುತ್ತಾರೆ. ಅವರಿಂದ ಇನ್ನೂ ಎಷ್ಟೆಷ್ಟೋ ಸಾಧನೆಗಳನ್ನು ಈ ಯಕ್ಷರಂಗ ನಿರೀಕ್ಷಿಸಿತ್ತು.

ಆದರೆ ಆ ನಿರೀಕ್ಷೆಗೆ ಸೊಪ್ಪು ಹಾಕದೆ ಅವರು ಹೋಗಿಯೇ ಬಿಟ್ಟರು. ಆದರೆ ಹೋಗುವ ಮುನ್ನ ಬಹಳಷ್ಟನ್ನು ಸಾಧಿಸಿದ್ದರು. ಮುಂದೆ ಇನ್ನೊಬ್ಬರು ಏರಲು ಅತಿಯಾದ ಶ್ರಮ ಪಡುವಷ್ಟು ಎತ್ತರವನ್ನು ಅವರು ತನ್ನ ಸಣ್ಣ ವಯಸ್ಸಿನಲ್ಲಿಯೇ ಏರಿದ್ದರು. 

ಪ್ರತಿದಿನವೂ ಅವರ ನೆನಪು ಕಲಾಪ್ರೇಮಿಗಳಿಗೆ ಆಗದೆ ಇರಲಾರದಾದರೂ ಫೆಬ್ರವರಿ 18 ಬಂದಾಗ ಯಾಕೋ ಮತ್ತೆ ಮತ್ತೆ ‘ಕಣ್ಣಿಮನೆ’ ಎಂಬ ಶಬ್ದ ಕಿವಿಗಳಲ್ಲಿ ಮಾರ್ದನಿಸುತ್ತದೆ. “ಕಣ್ಣಿ ನೀ ಯಾಕೆ ನಮ್ಮ ಹೃದಯ ಬರಿದು ಮಾಡಿ ಹೋಗಿಬಿಟ್ಟೆ” ಎಂದು ಮನಸ್ಸು ಚೀರಿ ಹೇಳುತ್ತದೆ. 

ಬರಹ: ಮನಮೋಹನ್ ವಿ.ಎಸ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments