Saturday, January 18, 2025
Homeಯಕ್ಷಗಾನಬಣ್ಣದ ವೇಷಗಳೊಂದಿಗೆ ಎದುರು ವೇಷಗಳಲ್ಲೂ ಪ್ರಾವೀಣ್ಯತೆ - ಜಗದಾಭಿರಾಮ ಸ್ವಾಮಿ ಪಡುಬಿದ್ರಿ 

ಬಣ್ಣದ ವೇಷಗಳೊಂದಿಗೆ ಎದುರು ವೇಷಗಳಲ್ಲೂ ಪ್ರಾವೀಣ್ಯತೆ – ಜಗದಾಭಿರಾಮ ಸ್ವಾಮಿ ಪಡುಬಿದ್ರಿ 

ಇವರು ಸ್ತ್ರೀವೇಷ, ಪುಂಡುವೇಷ, ರಾಜವೇಷ, ಬಣ್ಣದ ವೇಷ ಹೀಗೆ ಯಾವ ವೇಷಗಳನ್ನಾದರೂ ಮಾಡಬಲ್ಲ ಸಮರ್ಥರು. ಕಲಾಭಿಮಾನಿಗಳಿಂದ, ಸಹಕಲಾವಿದರಿಂದ, ಮಿತ್ರರಿಂದ ಜಗತ್, ಜಗದಾಭಿ, ಹಿರಿಯ ಕಲಾವಿದರಿಂದ ‘ಮಾಣಿ’ ಎಂದೇ ಕರೆಸಿಕೊಳ್ಳುತ್ತಿದ್ದ ಇವರ ಪೂರ್ಣ ಹೆಸರು ಜಗದಾಭಿರಾಮಸ್ವಾಮಿ ಪಡುಬಿದ್ರೆ.

ಹುಟ್ಟೂರು ಪಡುಬಿದ್ರೆ ಉದಯಾದ್ರಿ ಮಠ. 11-11-1973 ರಂದು ಜನನ. ಜ್ಯೋತಿಷಿಯೂ, ಪಡುಬಿದಿರೆ ಬಾಲಗಣಪತಿ, ಪ್ರಸನ್ನ ಪಾರ್ವತೀ ದೇವಸ್ಥಾನದ ಅರ್ಚಕರೂ ಆಗಿದ್ದ ಶ್ರೀ ಪಟ್ಟಾಭಿರಾಮ ಸ್ವಾಮಿ, ವಸಂತಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಹಿರಿಯವರೇ ಜಗದಾಭಿರಾಮಸ್ವಾಮಿ.

ಪ್ರಾಥಮಿಕ ವಿದ್ಯಾಭ್ಯಾಸ ಪಡುಬಿದಿರೆಯಲ್ಲಿ ಪೂರೈಸಿ (7ನೇ ತರಗತಿ) ಮನೆಯಲ್ಲಿ ತಂದೆಗೆ ಸಹಾಯಕನಾಗಿ ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. 1986ರಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು.

ಅದೇ ವರುಷವೇ ಜಗದಾಭಿ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾಗಿದ್ದರು. ಮೇಳಕ್ಕೆ ಆಯ್ಕೆಯಾಗುವೆ, ಸೇರುವೆ ಎಂಬ ಕಲ್ಪನೆಯೂ ಮೊದಲು ಅವರಿಗಿರಲಿಲ್ಲವಂತೆ. ಅಯೋಚಿತವಾಗಿ ಅನಿರೀಕ್ಷಿತವಾಗಿ ಅವಕಾಶ ಒದಗಿ ಬಂತು. ಹಿರಿಯ, ಶ್ರೇಷ್ಠ ಕಲಾವಿದರುಗಳಿರುವ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾದುದು ಜಗದಾಭಿಯವರಿಗೂ, ಮನೆಯವರಿಗೂ, ಓರಗೆಯವರಿಗೂ ಸಂತೋಷವನ್ನೇ ತಂದು ಕೊಟ್ಟಿತಂತೆ.

ಫೋಟೋ ಕೃಪೆ: ರಾಮ್ ನರೇಶ್ ಮಂಚಿ 

ಶ್ರೀ ಧರ್ಮಸ್ಥಳ ಮೇಳದಲ್ಲಿ ಸತತ 7 ವರ್ಷ ಕಲಾಸೇವೆಯನ್ನು ಮಾಡಿ ನಂತರ ಒಂದು ವರ್ಷ ಬಪ್ಪನಾಡು ಮೇಳದಲ್ಲಿ ತಿರುಗಾಟ ನಡೆಸಿದರು ಜಗದಾಭಿ. ನಂತರ ಮಧೂರು ಮೇಳದಲ್ಲಿ ರಾಮಕೃಷ್ಣ ಮಯ್ಯ, ನಾವಡರು, ಹೊಳ್ಳರ ಒಡನಾಟ ನಾನು ಕಲಾವಿದನಾಗಿ ಕಾಣಿಸಿಕೊಳ್ಳಲು ಸಹಕಾರಿಯಾಯಿತು ಎಂದು ಜಗದಾಭಿಯವರು ಹೇಳುತ್ತಾರೆ.

ನಂತರ ಕಟೀಲು ಮೇಳದಲ್ಲಿ 6 ವರ್ಷಗಳ ಕಾಲ ತಿರುಗಾಟ. ಕುರಿಯ ಗಣಪತಿ ಶಾಸ್ತ್ರಿಗಳು, ಪದ್ಯಾಣ ಶಂಕರನಾರಾಯಣ ಭಟ್ಟರು, ಗುಡ್ಡಪ್ಪ ಗೌಡ, ಗೇರುಕಟ್ಟೆ ಇವರ ಒಡನಾಟ ಸಿಕ್ಕಿದ್ದು ಭಾಗ್ಯ. ನನ್ನನ್ನು ತಿದ್ದಿತೀಡಿದರು, ಪ್ರೋತ್ಸಾಹಿಸಿದರು. ಗುಂಡಿಮಜಲು ಮತ್ತು ಮಂಜುನಾಥ ಭಟ್ಟರ ಒಡನಾಟವೂ ಸಿಕ್ಕಿತು. ಹಾಗಾಗಿಯೇ ನಾನು ಕಲಾವಿದನಾಗಿ ರೂಪುಗೊಂಡೆ ಎಂದು ವಿನೀತರಾಗಿ, ಕೃತಜ್ಞತಾಪೂರ್ವಕ ಅಂದಿನ ದಿನಗಳನ್ನು ನೆನಪಿಸುತ್ತಾರೆ ಶ್ರೀ ಜಗದಾಭಿಯವರು.

ಗೇರುಕಟ್ಟೆಯವರ ಎಲ್ಲಾ ವೇಷಗಳನ್ನೂ, ಕುರಿಯ ಭಾಗವತರು ಪ್ರಸಂಗಗಳನ್ನು ನಿರ್ದೇಶಿಸುವ ರೀತಿಯನ್ನೂ ನೋಡುತ್ತಾ ಬೆಳೆದ ಕಲಾವಿದ ಜಗದಾಭಿ. ಗೇರುಕಟ್ಟೆ ಗಂಗಯ್ಯ ಶೆಟ್ಟರು ಮಹಿಷಾಸುರನಾಗಿ ವಿಜೃಂಭಿಸುತ್ತಿದ್ದ ಕಾಲವದು. ಅನಿವಾರ್ಯವಾಗಿ ಮಹಿಷಾಸುರ ಪಾತ್ರವನ್ನು ಮಾಡುವ ಅನಿವಾರ್ಯತೆ ಬಂದಾಗ ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ಜಗದಾಭಿಯವರು ಮಹಿಷಾಸುರನಾಗಿ ಯಶಸ್ವಿಯಾದುದು ಇತಿಹಾಸ. ಕುರಿಯ ಮತ್ತು ಪದ್ಯಾಣರ, ಸಹಕಲಾವಿದರ ಸಹಾಯದಿಂದ ಆಗ ಎಲ್ಲಾ ವೇಷಗಳನ್ನೂ ಮಾಡುವಂತಾಯಿತು.
                         

ಯಕ್ಷಗಾನ ಕಲಾವಿದನಾಗಿ ನಾನು ಅತ್ಯಂತ ತೃಪ್ತ. ಮಹಿಷಾಸುರ ಮತ್ತು ಪುರಾಣ ಪ್ರಸಂಗದ ಅನೇಕ ಬಣ್ಣದ ವೇಷಗಳು ನನಗೆ ಪ್ರಸಿದ್ಧಿಯನ್ನು ನೀಡಿದವು. ಪ್ರೇಕ್ಷಕರು ಮೆಚ್ಚುವಂತಾಯಿತು ಎಂದು ಹೇಳುವ ಜಗದಾಭಿಯವರು 1999ರಲ್ಲಿ ತೀರ್ಥರೂಪರನ್ನು ಕಳೆದುಕೊಂಡು ಮೇಳ ಬಿಡುವ ಅನಿವಾರ್ಯತೆಗೆ ಸಿಲುಕಿದರು.

ಮತ್ತೆ ಐದು ವರ್ಷಗಳ ಕಾಲ ದೇವಳದ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅತಿಥಿ ಕಲಾವಿದನಾಗಿ ಕಾಣಿಸಿಕೊಂಡ ಶ್ರೀ ಜಗದಾಭಿರಾಮಸ್ವಾಮಿ ಪಡುಬಿದ್ರಿ ಪ್ರಸ್ತುತ ಎರಡು ವರ್ಷಗಳಿಂದ ಎಡನೀರು ಮೇಳ(2) ದಲ್ಲಿ, ಈಗ ಹನುಮಗಿರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಗದಾಭಿರಾಮಸ್ವಾಮಿಯವರ ಮಡದಿ ನಾಗರತ್ನ ಮತ್ತು ಅವರಿಗೆ ಮೂರು ಮಂದಿ ಮಕ್ಕಳು (ಅಮರಾಭಿರಾಮಸ್ವಾಮಿ, ಅಪರ್ಣಾ, ಅಮೃತ). ಸಹೋದರನಾದ ನಯನಾಭಿರಾಮಸ್ವಾಮಿ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದಾರೆ. (Catering and Sweet)

ಜಗದಾಭಿಯವರು ‘ಯಕ್ಷಮಂಜೂಷ’ ಕುಳಾಯಿ ತಂಡದ ಸದಸ್ಯನಾಗಿ ದೇಶದ ವಿವಿಧೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಅಲ್ಲದೆ ನಿಟ್ಟೆ ಕಾಲೇಜಿನಲ್ಲಿ ನಾಟ್ಯ ತರಗತಿಯನ್ನೂ, ಕಾಲೇಜು ಮಕ್ಕಳ ಯಕ್ಷಗಾನ ಸ್ಪರ್ಧೆಗೆ ತರಬೇತಿ ಮತ್ತು ನಿರ್ದೇಶನವನ್ನೂ ನೀಡಿರುತ್ತಾರೆ.

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments