ಯಕ್ಷಗಾನ ಕಲೆಯ ಹಿಮ್ಮೇಳ ಎಂಬ ವಿಭಾಗದಲ್ಲಿ ‘ಮದ್ದಳೆಗಾರ’ ಎಂಬ ಸ್ಥಾನವು ಶ್ರೇಷ್ಠವಾದುದು. ಭಾಗವತರ ಜತೆಗೂಡಿ ಪ್ರದರ್ಶನ ಗೆಲುವಿಗೆ ಮದ್ದಳೆಗಾರರು ಕಾರಣರಾಗುತ್ತಾರೆ. ಭಾಗವತನು ಅನನುಭವಿಯಾಗಿದ್ದರೂ ಮದ್ದಳೆಗಾರನು ಅನುಭವಿಯಾಗಿದ್ದರೆ ಪ್ರದರ್ಶನವು ಸೋಲದೆ ಯಶಸ್ವಿಯಾಗುವುದನ್ನು ನಾವು ಕಾಣುತ್ತೇವೆ.
ತನ್ನ ವಾದನದಲ್ಲಿ ಭಾಗವತರ ಹಾಡುಗಳನ್ನು ಅನುಸರಿಸುತ್ತಾ ಜತೆಗೆ ವೇಷಧಾರಿಗಳಿಗೆ ಉತ್ಸಾಹ ತುಂಬುತ್ತಾ ಮದ್ದಳೆಗಾರರು ಪ್ರದರ್ಶನದ ಗೆಲುವಿಗೆ ಕಾರಣರಾಗುತ್ತಾರೆ. ಪ್ರಸಂಗ ಮಾಹಿತಿ, ನಡೆ, ವೇಷಗಳ ಸ್ವಭಾವ, ಅದನ್ನರಿತು ವಾದ್ಯಗಳನ್ನು ನುಡಿಸುವ ಕಲೆಗಳನ್ನು ತಿಳಿದ ಮದ್ದಳೆಗಾರರು ಯಶಸ್ವೀ ಪ್ರದರ್ಶನಗಳಿಗೆ ತಮ್ಮ ಕೊಡುಗೆಗಳನ್ನು ನೀಡುತ್ತಾರೆ. ಖಂಡಿತವಾಗಿಯೂ ಕಲಾಭಿಮಾನಿಗಳು ಈ ಮದ್ದಳೆಗಾರ ಎಂಬ ಸ್ಥಾನವನ್ನು ಗುರುತಿಸುತ್ತಾರೆ. ಗೌರವಿಸುತ್ತಾರೆ.
ಯಕ್ಷಗಾನದಲ್ಲಿ ಚೆಂಡೆ ಮದ್ದಲೆಗಳನ್ನು ನುಡಿಸುವ ಕಲಾವಿದರನ್ನು ‘ಮದ್ದಳೆಗಾರರು’ ಎಂದು ಕರೆಯುತ್ತಾರೆ. ಸ್ಥಾನಕ್ಕೆ ಸಂಬಂಧಿಸಿ ಗೌರವದ ಸಂಭೋದನೆ ಇದು. ಎಲ್ಲಾ ಹಾಡುಗಳಿಗೂ ಮದ್ದಳೆ ಎಂಬ ವಾದ್ಯೋಪಕರಣವು ಬೇಕೇ ಬೇಕು. ಆದರೆ ಚೆಂಡೆಯು ಹಾಗಲ್ಲ. “ಒಡ್ಡೋಲಗದ ಪದ್ಯಗಳಲ್ಲಿ, ಯುದ್ಧದ ಸಂದರ್ಭಗಳಲ್ಲಿ, ಭಾಗವತರು ಏರು ಪದ್ಯಗಳನ್ನು ಎತ್ತಿಕೊಂಡಾಗ ಬಾರಿಸಬೇಕು. ಸಂದರ್ಭಗಳಲ್ಲಿ ಚೆಂಡೆಯನ್ನು ಬದಿಗೆ ಇರಿಸಲಾಗುತ್ತದೆ”. ಇದು ಖ್ಯಾತ ಮದ್ದಳೆಗಾರ, ಗುರು ಶ್ರೀ ಬಿ. ಗೋಪಾಲಕೃಷ್ಣ ಕುರುಪ್ ಅವರ ಮಾತುಗಳು. (ಚೆಂಡೆ ಮದ್ದಲೆಗಳ ನಡುವೆ ಎಂಬ ತನ್ನ ಆತ್ಮಕಥನದಲ್ಲಿ) ಎಲ್ಲೆಂದರಲ್ಲಿ ಚೆಂಡೆ ಬಾರಿಸಬಾರದು ಎಂಬ ಧ್ವನಿಯು ಶ್ರೀ ಗೋಪಾಲಕೃಷ್ಣ ಕುರುಪ್ ಅವರ ಮಾತುಗಳಲ್ಲಿ ಅಡಗಿದೆ.
ಮದ್ದಳೆ ಎಂಬ ವಾದ್ಯವು ಹಾಗಲ್ಲ. ಅದು ಪ್ರದರ್ಶನದುದ್ದಕ್ಕೂ, ಆರಂಭದಿಂದ ಮಂಗಲದ ತನಕ ಇರುತ್ತದೆ. ಹೀಗೆ ಯಕ್ಷಗಾನ ಕ್ಷೇತ್ರದಲ್ಲಿ ಮದ್ದಳೆಗಾರರಾಗಿ ಕಲಾಸೇವೆಯನ್ನು ಮಾಡಿ ಖ್ಯಾತರಾದವರು ಅನೇಕ ಕಲಾವಿದರು. ದಿ| ಎಂ. ಪ್ರಭಾಕರ ಗೋರೆ ಅವರಲ್ಲೊಬ್ಬರು. ತೆಂಕುತಿಟ್ಟಿನ ಪ್ರಸಿದ್ದ ಮೃದಂಗವಾದಕರಾಗಿದ್ದ ಶ್ರೀ ಎಂ. ಪ್ರಭಾಕರ ಗೋರೆ ಅವರದ್ದು ಸುಮಾರು ಮೂವತ್ತೆರಡು ವರ್ಷಗಳ ಕಲಾಸೇವೆ.
ಅವರ ಹುಟ್ಟೂರು ಕಾರ್ಕಳ ತಾಲೂಕಿನ ಬಜಗೋಳಿಯ ಸಮೀಪದ ಮಲೆಬೆಟ್ಟು ಎಂಬಲ್ಲಿ. ಶ್ರೀ ಶಂಕರ ಗೋರೆ ಮತ್ತು ಶ್ರೀಮತಿ ಉಮಾ ಗೋರೆ ದಂಪತಿಗಳ ಪುತ್ರನಾಗಿ 1959ನೇ ನವೆಂಬರ್ 4ರಂದು ಜನನ. ಬಾಲ್ಯದಲ್ಲಿ ಯಕ್ಷಗಾನಾಸಕ್ತರಾಗಿದ್ದರು. ಪರಿಸರಿದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ಇವರ ಮನೆತನದ ಹಿರಿಯರಾಗಿದ್ದ ಶ್ರೀ ಅಗಳಿ ಕೃಷ್ಣ ಹೆಬ್ಬಾರರು ಭಾಗವತರಾಗಿದ್ದರು. ಮನೆಯವರೆಲ್ಲರೂ ಕಲಾಸಕ್ತರಾಗಿದ್ದರು. ಹಾಗಾಗಿ ಪ್ರಭಾಕರ ಗೋರೆ ಅವರಿಗೆ ಕಲಾಸಕ್ತಿಯು ರಕ್ತಗತವಾಗಿತ್ತು.
ಓದಿದ್ದು ಪಿಯುಸಿ ವರೆಗೆ. ಹತ್ತನೇ ತರಗತಿ ವರೆಗೆ ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಶಾಲೆಯಲ್ಲಿ. ಪಿಯುಸಿ ವಿದ್ಯಾರ್ಜನೆ ಉಜಿರೆ ಕಾಲೇಜಿನಲ್ಲಿ. ಉಜಿರೆ ಕಾಲೇಜಿನ ವಿದ್ಯಾರ್ಥಿಯಾಗಿರುವಾಗ ತಬಲಾ ವಾದನ ಕ್ರಮವನ್ನು ಕಲಿತಿದ್ದರು. ಅಲ್ಲದೆ ರಜಾದಿನಗಳಲ್ಲಿ ಶ್ರೀ ನಾರಾಯಣ ಭಿಡೆ ಅವರಿಂದ ಯಕ್ಷಗಾನ ಮದ್ದಳೆ ವಾದನವನ್ನು ಕಲಿಯುತ್ತಿದ್ದರು. ಊರ, ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಅನುಭವಗಳನ್ನು ಪಡೆದುಕೊಂಡರು.
ಮೃದಂಗ ಮತ್ತು ತಬಲಾ ಎರಡರಲ್ಲೂ ನುರಿತವರಾಗಿ ಶಾಸ್ತ್ರೀಯ ಸಂಗೀತಗಾರಿಕೆಗೂ ಮೃದಂಗ ನುಡಿಸಬಲ್ಲವರಾಗಿದ್ದರು. ಈ ಎಲ್ಲಾ ವಿಚಾರಗಳೂ ಮುಂದೆ ಮೇಳದ ತಿರುಗಾಟಕ್ಕೆ ಅನುಕೂಲವಾಗಿ ಪರಿಣಮಿಸಿತ್ತು. ಇವರು ಮೊದಲು ತಿರುಗಾಟ ನಡೆಸಿದ್ದು ಕರ್ನಾಟಕ ಮೇಳದಲ್ಲಿ. ಆಗ ಮದ್ದಳೆಗಾರರಾಗಿದ್ದವರು ಕಾಂಚನ ನಾರಾಯಣ ಭಟ್ಟರು. ದಾಮೋದರ ಮಂಡೆಚ್ಚರ ಮತ್ತು ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಈ ಎಲ್ಲರ ಗರಡಿಯಲ್ಲಿ ಶ್ರೀ ಪ್ರಭಾಕರ ಗೋರೆ ಅವರು ಪಕ್ವರಾದವರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ದಾಮೋದರ ಮಂಡೆಚ್ಚರಿಗೆ ಅನೇಕ ವರ್ಷಗಳ ಕಾಲ ಮೃದಂಗವಾದನದಲ್ಲಿ ಸಾಥಿಯಾಗಿ ತಿರುಗಾಟ ನಡೆಸಿದ್ದರು. ಬಳಿಕ ಅನೇಕ ವರ್ಷಗಳ ಕಾಲ ಶ್ರೀ ದಿನೇಶ ಅಮ್ಮಣ್ಣಾಯರ ಜತೆ ವ್ಯವಸಾಯ. ಕರ್ನಾಟಕ ಮೇಳ ತಿರುಗಾಟ ನಿಲ್ಲಿಸಿದ ಬಳಿಕ ಎಡನೀರು, ಕಾಟಿಪಳ್ಳ ಮತ್ತು ಮಂಗಳಾದೇವಿ ಮೇಳದಲ್ಲೂ ವ್ಯವಸಾಯ ನಡೆಸಿದ್ದರು. ಕರ್ನಾಟಕ ಮೇಳದಲ್ಲಿ ಇವರು ಮೃದಂಗವಾದಕರಾಗಿ ಹೊಳೆದು ಕಾಣಿಸಿಕೊಂಡಿದ್ದರು.
ಶ್ರೀ ದಾಮೋದರ ಮಂಡೆಚ್ಚರು ಮತ್ತು ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಳನ್ನು ಅನುಸರಿಸಿ ನುಡಿಸಾಣಿಕೆಯಲ್ಲಿ ತನ್ನ ಕೈಚಳಕವನ್ನು ತೋರುತ್ತಾ ಪ್ರದರ್ಶನಗಳ ಗೆಲುವಿಗೆ ಸಹಕಾರಿಯಾಗಿದ್ದರು. 1986ರಲ್ಲಿ ವಿವಾಹ. ಶ್ರೀ ಎಂ. ಪ್ರಭಾಕರ ಗೋರೆ ಅವರ ಪತ್ನಿ ಪ್ರತಿಭಾ ಗೋರೆ. ಶ್ರೀ ಎಂ. ಪ್ರಭಾಕರ ಗೋರೆ ಅವರು 1978ರಿಂದ ತೊಡಗಿ 2011ರ ವರೆಗೆ ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದರು. ಇವರು ಉತ್ತಮ ಕೃಷಿಕರೂ ಆಗಿದ್ದರು.
2011, ಮೇ 9ರಂದು ಉಡುಪಿಯ ಇಂದ್ರಾಳಿ ಎಂಬಲ್ಲಿ ನಡೆದ ರಸ್ತೆ ಅಫಘಾತದಲ್ಲಿ ಶ್ರೀ ಎಂ.ಪ್ರಭಾಕರ ಗೋರೆ ಅವರು ಕಲಾಭಿಮಾನಿಗಳನ್ನಗಲಿ ಕಲಾಮಾತೆಯ ಪಾದವನ್ನು ಸೇರಿಕೊಂಡಿದ್ದರು. ಸರಳ, ಸಜ್ಜನ, ಮೃದು ಮನಸಿನ ಮೃದಂಗವಾದಕರಾಗಿದ್ದ ಶ್ರೀಯುತರು ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶ್ರೀ ಎಂ.ಪ್ರಭಾಕರ ಗೋರೆ ಮತ್ತು ಶ್ರೀಮತಿ ಪ್ರತಿಭಾ ಗೋರೆ ದಂಪತಿಗಳಿಗೆ ಈರ್ವರು ಪುತ್ರರು.
ಹಿರಿಯ ಪುತ್ರ ಶ್ರೀ ನಾಗರಾಜ್ ಗೋರೆ ಅವರು ಕೊಳಲು ವಾದನ, ತಬಲಾ ಕಲಿತು ನುಡಿಸುತ್ತಿದ್ದಾರೆ. ಕೇರಳದಲ್ಲಿ ಪೂಜಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರಿಯ ಪುತ್ರ ಶ್ರೀ ಪೃಥ್ವಿರಾಜ್ ಗೋರೆ ಕೃಷಿ ಮತ್ತು ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ. ಯಕ್ಷಗಾನ ಮದ್ದಳೆ ವಾದನವನ್ನು ಕಲಿತಿರುತ್ತಾರೆ. ಶ್ರೀಮತಿ ಪ್ರತಿಭಾ ಪ್ರಭಾಕರ ಗೋರೆ ಅವರು ಕಿರಿಯ ಪುತ್ರನೊಂದಿಗೆ ಕಾರ್ಕಳದ ಮಲೆಬೆಟ್ಟು ಮನೆಯಲ್ಲಿ ವಾಸಿಸುತ್ತಿದ್ದಾರೆ.